ಹೇಳುವರು ಹೆಣ್ಣು ಸಂಸಾರದ ಕಣ್ಣು ಎಂದು
ಕಂಡರೂ ಕಾಣದಂತಿಹರು ಅವಳ ಕಣ್ಣಿನಲ್ಲಿನ ಧೂಳು
ಒತ್ತಿ ಚುಚ್ಚುತಿಹವು ಬಿದ್ದ ಸಣ್ಣ ಸಣ್ಣ ಕಣಗಳು
ಕಣ್ಮುಚ್ಚಲಾರದ ಬಿಡಲಾರದ ಪರಿಸ್ಥಿತಿ ಅವಳದು
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ನಿಂತು
ತಂಪೆರೆಯಲು ಹರಿವಳು ಶಾಂತವಾಗಿ ನದಿಯಂತೆ
ಸಹಿಸುವಳು ಹಾದಿಯಲಿ ಬಂದ ಏರಿಳಿತಗಳನು
ಕಣ್ಣಲ್ಲಿ ಹರಿಯುತಿಹುದು ಕಣ್ಣೀರು ಕೋಡಿಯಾಗಿ
ಮಾಯೆಯೆಂದು ಅಣಕಿಸುವರು ಅವಳನ್ನು
ಅವಳೆಂದೂ ಮಾಯೆಯಲ್ಲ ಛಾಯೆಯಾಗಿಹಳು
ಅವಳ ನೆರಳಿನಲ್ಲಿ ಬದುಕು ಸದಾ ಕಾಲಕೂ ತಂಪು
ಅವಳಿಲ್ಲದೆ ಬೇರೆ ನೆರಳಿಹುದೇ ಈ ಬಾಳಲ್ಲಿ...!?
ಹೆತ್ತವರಿಗೆ ಹೆಣ್ಣಾಗಿ ಕೊಟ್ಟ ಮನೆಗೆ ಕಣ್ಣಾಗಿ
ನಗುನಗುತ್ತಾ ಬಾಳಿ ಬದುಕುವ ಹೆಣ್ಣು ಇವಳು
ಹೊತ್ತು ಸಂಸಾರದ ನೊಗ ಬಾಗಿಹಳು ಬಳಲಿಹಳು,
ಭಾರವೆಂದವಳು ಇಳಿಸಿದರೆ ಸಾಗೀತೆ ಬಾಳಿನ ಬಂಡಿ ?
✍️ಧನು