ಪರೀಕ್ಷಾ ಭಯ

ProfileImg
31 Mar '24
5 min read


image


  "ಪರೀಕ್ಷಾ ಭಯ''

 

ಈಗ ಪರೀಕ್ಷಾ‌ ಸಮಯ. ಈ‌ ಸಮಯದಲ್ಲಿ  ಪರೀಕ್ಷಾರ್ಥಿಗಳಿಗೆ  ತಳಮಳ ಭಯ ಇರುವುದು ಸಹಜ. ಅವರ ಜೊತೆಗೇ ಮನೆಯವರಿಗೂ ಆತಂಕ ಇರುತ್ತದೆ.ಹಾಗಾದರೆ ಪರೀಕ್ಷೆ ಎಂದರೆ ಭಯವೇಕೇ?

ನಮ್ಮ ಪರೀಕ್ಷಾ ಪದ್ಧತಿಯಿಂದಾಗಿ  ವಿದ್ಯಾರ್ಥಿಯ ಭವಿಷ್ಯ ಆತ ಬರೆಯುವ ಮೂರು ಗಂಟೆಯ ಉತ್ತರ ಪತ್ರಿಕೆಯಲ್ಲಿದೆ.ಅಷ್ಟೇ ಅಲ್ಲ ಕೆಲವೊಮ್ಮೆ ಅದನ್ನು ಮೂಲ್ಯಾಂಕನ ಮಾಡುವವರನ್ನೂ ಅವಲಂಬಿಸಿದೆ. 
ಹಿಂದಿನ ಕಾಲದಲ್ಲಿ ಪರೀಕ್ಷೆ ಎಂದರೆ  ವಿದ್ಯಾರ್ಥಿಗಳಿಗೆ  ಮಾತ್ರ ಹೆದರಿಕೆ ಇತ್ತು. ಅಂಕಗಳು ಬಾರದಿದ್ದರೆ ಹೆತ್ತವರು ಮಕ್ಕಳನ್ನೇ ಬಯ್ಯುತ್ತಿದ್ದರೇ ವಿನಹ ಶಾಲೆಯನ್ನಾಗಲೀ ಶಿಕ್ಷಕರನ್ನಾಗಲೀ ದೂರುತ್ತಿರಲಿಲ್ಲ. ಶಿಕ್ಷಕರಿಗೂ ಮಕ್ಕಳಿಗೆ ಬಯ್ಯುವಷ್ಟು ಅಥವಾ ಅವರನ್ನು ಶಿಕ್ಷಿಸುವಷ್ಟು ಸ್ವಾತಂತ್ರ್ಯ ಇತ್ತು.ಈಗ ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೂ ಆತಂಕ.
ಪರೀಕ್ಷೆ ಎಂದರೆ ಮಕ್ಕಳಿಗೆ ಭಯವಾಗಲು ಮುಖ್ಯ ಕಾರಣ ಉತ್ತೀರ್ಣ ನಾಗದಿದ್ದರೆ ಅಥವಾ ಉತ್ತಮ ಅಂಕ ಬಾರದಿದ್ದರೆ ಅವಮಾನ ಎಂಬ ಸಾರ್ವತ್ರಿಕ ಅಭಿಪ್ರಾಯ.
ಹೆತ್ತವರು ತಮ್ಮ ಆತಂಕವನ್ನು ಮಕ್ಕಳಿಗೆ ವರ್ಗಾಯಿಸುತ್ತಾರೆ.ಅಷ್ಟೇ ಅಲ್ಲ ಶಿಕ್ಷಕರಿಗೂ ಈಗ ಆತಂಕ. ಅವರಿಗೆ ಗುರಿ ಕೊಟ್ಟಿರುತ್ತಾರೆ. (ಟಾರ್ಗೆಟ್) ಎಂತಹ ಧಡ್ಡ ಮಕ್ಕಳನ್ನಾದರೂ ಉತ್ತೀರ್ಣ ಗೊಳಿಸುವುದು ಶಿಕ್ಷಕರ ಹೊಣೆ. ಹಾಗಾಗಿ ಶತಾಯ ಗತಾಯ ತಮ್ಮ ವಿದ್ಯಾರ್ಥಿಯನ್ನು  ತೇರ್ಗಡೆಯಾಗುನಂತೆ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ. ಉತ್ತಮ ಅಂಕ ಪಡೆದವರಿಗೆ ಅತ್ಯುತ್ತಮ ಅಂಕ ಗಳಿಸುವಂತೆ ಮಾಡಬೇಕು.! 
ಬುದ್ಧಿವಂತಿಕೆಗೆ ಕೇವಲ ಅಂಕಗಳು ಎಂಬ ತಪ್ಪು ತಿಳುವಳಿಕೆ ಇತ್ತು. ಈಗಲೂ ಇದೆ.. ಬುದ್ಧಿವಂತಿಕೆಗೆ ಎಂಟು ಆಯಾಮಗಳಿವೆ ಎಂಬುದನ್ನು ತಿಳಿಯದ ಸಾರ್ವಜನಿಕರು.
ಯಾಕೆಂದರೆ ಬುದ್ಧಿವಂತಿಕೆ  ಆಟೋಟ,ಕಲೆ ,ಸಂಗೀತ ಮುಂತಾದ ವಿವಿಧ ಕ್ಷೇತ್ರಗಳಲ್ಲಿರಬಹುದು. ಆ ಕ್ಷೇತ್ರಗಳಲ್ಲಿ ಪ್ರತಿಭೆ ಅನಾವರಣಗೊಳ್ಳಲು ಅವಕಾಶ  ನಮ್ಮ ಪರೀಕ್ಷಾ ಪದ್ಧತಿಯಲ್ಲಿ ಇನ್ನೂ ಬಂದಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಬರುವ ತನಕ ಈ ಪರೀಕ್ಷೆ ಎಕಬ ಭಯಾಸುರನ ಆತಂಕ ಇದ್ದೇ ಇದುತ್ತದೆ.
ಹಾಗಾದರೆ ಈ ಪರೀಕ್ಷಾ ಭಯವನ್ನು ಹೋಗಲಾಡಿಸುವುದು ಹೇಗೆ? 
ಈ ಭಯ ಎಂಬುದು ಹೆತ್ತವರು, ವಿದ್ಯಾರ್ಥಿಗಳು, ಶಿಕ್ಷಕರು ,ಶಿಕ್ಷಣ ಪದ್ಧತಿ ಮತ್ತು ಪರೀಕ್ಷಾ ಪದ್ಧತಿಗಳ ಒಟ್ಟು ಪರಿಣಾಮ.
ವರ್ಷವಿಡೀ ಓದಿದವರಿಗೆ  ,ಮೊದಲೇ ತಯಾರಿ ಮಾಡಿಕೊಂಡವರಿಗೆ ಪರೀಕ್ಷೆ ಯನ್ನು ಎದುರಿಸಲು ಕಷ್ಟವಾಗದು.
ಪರೀಕ್ಷೆಗೆ ಚೆನ್ನಾಗಿ ತಯಾರಾಗಿದ್ದರೆ ಪರೀಕ್ಷೆ ಬರೆಯುವುದೂ ಸಂಭ್ರಮವೇ.ಇದರಲ್ಲಿ ಶಿಕ್ಷಕರ ಶ್ರಮವೂ ಅಷ್ಟೇ ಇದೆ. ಉತ್ತಮ ಶಿಕ್ಷಕರಿದ್ದರೆ ಮಕ್ಕಳಿಗೆ ಪರೀಕ್ಷಾ ಭಯವಿರದು. ಪಾಠದಲ್ಲಿ ಅಭಿರುಚಿ ಬರಲು ಶಿಕ್ಷಕರ ಪಾತ್ರವೂ ಮಹತ್ತರವಾದುದು.
ಈ ಸಂದರ್ಭದಲ್ಲಿ ಯಾವತ್ತೋ ಓದಿದ ಒಂದು ಕಾರ್ಟೂನು
ನೆನಪಾಗುತ್ತಿದೆ.. ಅದರಲ್ಲಿ ಒಬ್ಬ ಹುಡುಗ ತನ್ನ ಸುಟ್ಟು ಹೋದ ಶಾಲೆಯ ಮುಂದೆ ನಿಂತು ಅಳುತ್ತಾ ಇದ್ದ. ಆಗ ಪಕ್ಕದಲ್ಲಿದ್ದವರೊಬ್ಬರು 'ಅಳಬೇಡ ಮಗು ,ಇನ್ನೊಂದು ಶಾಲೆ ಕಟ್ಟಿಸೋಣ " ಅಂತ ಹೇಳುತ್ತಾರೆ ,ಆಗ ಮಗು '' ನಾನು ಅದಕ್ಕಲ್ಲ‌ ಅಳುವುದು " ಅಂತ ಹೇಳ್ತಾನೆ.
'ಮತ್ತೆ?'
"ಶಾಲೆಯೊಂದಿಗೆ ಟೀಚರೂ ಯಾಕೆ ಸುಟ್ಟು ಹೋಗಲಿಲ್ಲಾ ಅಂತ ಅಳುತ್ತಿದ್ದೇನೆ" ಎಂದು ಉತ್ತರಿಸಿದ.‌
ಇದು ಕಾರ್ಟೂನು ಇರಬಹುದು ಆದರೆ ವಾಸ್ತವಕ್ಕೆ ತುಂಬಾ ಹತ್ತಿರವಾದ ಕಾರ್ಟೂನ್.ಯಾಕೆಂದರೆ ಕೆಲವು ಮಕ್ಕಳಿಗೆ
ಶಾಲೆ ಎಂದರೆ ಭಯ! ಟೀಚರ್ ಎಂದರೆ ಭಯ!! ಪರೀಕ್ಷೆ ಎಂದರೆ ಇನ್ನೂ ಭಯ!!!ಹಾಗಾದರೆ ಈ ಭಯ ಯಾಕೆ ಅಂತ ವಿಶ್ಲೇಷಿಸೋಣ.
* ಹೆತ್ತವರಿಗೆ ಅಕ್ಷರಸ್ಥರಿರಲಿ,ಇಲ್ಲದಿರಲಿ ತಮ್ಮ ಮಕ್ಕಳು ಓದಿ ಅಂಕ ಗಳಿಸಿ ಒಳ್ಳೆಯ ಹುದ್ದೆ ಅಲಂಕರಿಸಬೇಕು ಎಂಬ ಆಸೆ‌ .ಅದು ತಪ್ಪಲ್ಲ.ಆದರೆ ತಮ್ಮ ಆಸೆ ಪೂರೈಸಲು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ.ಮಕ್ಕಳ ಸಾಮರ್ಥ್ಯದ ಅರಿವು ಅವರಿಗಿರುವುದಿಲ್ಲ.ಹಾಗಾಗಿ ಕೆಲವರು ಶಿಕ್ಷಕರ ಹತ್ತಿರ ಬಂದು ಅಲವತ್ತುಕೊಳ್ಳುತ್ತಾರೆ.."ಬಡಿಯಿರಿ , ಬಯ್ಯಿರಿ. ನಾನೇನೂ ಕೇಳಲ್ಲ ,ಆದರೆ ಅವನನ್ನು ಓದಿಸಿ" ಅಂತ ಹೇಳುವಾಗ ಶಿಕ್ಷಕರಿಗೂ ಹೊಡೆಯಲು ,ಶಿಕ್ಷಿಸಲು ಪರವಾನಿಗಿ ಸಿಕ್ಕಂತಾಗುತ್ತದೆ. ಶಿಕ್ಷಕರಲ್ಲು ಕೆಲವರು ದೈಹಿಕ ಶಿಕ್ಷೆ ಕೊಟ್ಟರೆ ಓದುತ್ತಾರೆ ಎಂಬ ಅಭಿಪ್ರಾಯ ಉಳ್ಳವರು. ಮಕ್ಕಳ ಕಲಿಕಾ ಮಟ್ಟದ ಅರಿವಿಲ್ಲದೆ ಶಿಕ್ಷೆ ಕೊಟ್ಟು ಮಕ್ಕಳಲ್ಲಿ ಶಾಲೆ,ಶಿಕ್ಷಕರು ಎಂದರೆ ಭಯ ಹುಟ್ಟಿಸುತ್ತಾರೆ.ಅದೂ ಅಲ್ಲದೆ ಹೆತ್ತವರು ಸಹ " ತಡಿ ನಿನಗೆ ಟೀಚರ ಹತ್ತಿರ ಹೇಳುತ್ತೇನೆ" ಅಂತ ಹೆದರಿಸುತ್ತಾರೆ.ಹೆತ್ತವರೆ ಮಕ್ಕಳ ಮನಸರಿಯದಿದ್ದರೆ ಅವರನ್ನು ಕಾಪಾಡುವವರಾರು? ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶಾಲೆ ,ಟೀಚರು ಎಂದರೆ ಭಯೋತ್ಪಾದಕರಂತೆ. ಇದಕ್ಕೆ ಅಪವಾದವೂ ಇದೆ. ಮಗುವಿನ ಕಲಿಯುವ ಸಾಮರ್ಥ್ಯ ಕಡಿಮೆ ಇದ್ದಾಗ ಹೊಡೆದು ಅವಮಾನ ಮಾಡಿದರೆ ಮಗು ಶಾಲೆಗೆ ಹೋಗುವುದೇ? ಜೀವನ ಪರ್ಯಂತ ಆ ಮಗು ತನಗಾದ ಅವಮಾನ ಮರೆಯಲ್ಲ. ಇದು ಕೀಳರಿಮೆ ಬೆಳೆಯಲು ಕಾರಣವಾಗುತ್ತದೆ.
ಶಾಲೆಯೆಂದರೇ ಭಯವಿರುವಾಗ ಪರೀಕ್ಷೆ ಎಂದರೆ ಇನ್ನೂ ಭಯ. ಅನುತ್ತೀರ್ಣ ಆದರೆ ಮನೆಯಲ್ಲಿ ಬೈಗುಳ ,ಶಾಲೆಯಲ್ಲೂ ಅವಮಾನ. ,ಮಗುವಿನ ವ್ಯಕ್ತಿತ್ವಕ್ಕೆ ಧಕ್ಕೆ.! ಯಾಕೆಂದರೆ ಎಲ್ಲರ ಚಿತ್ತ ಅಂಕಗಳತ್ತ!
ತಾರೇ ಜಮೀನ್ ಪರ್ ನ ಶಿಕ್ಷಕನಂತೆ ಮಕ್ಕಳನ್ನು ಉದ್ಧರಿಸುವವರೂ ಇದ್ದಾರೆ. ರಾಕ್ಷಸರಂತೆ ಹಿಂಸಿಸುವವರೂ ಇದ್ದಾರೆ. ಒಂದು ವಸತಿ ಶಾಲೆಯ ಮಗುವಿನ ಕಣ್ಣಿನ ಹತ್ತಿರ ತೂತಾಗಿತ್ತು. ಯಾಕೆಂದು ಕೇಳಿದಾಗ ಆ ಮಗು ಹೇಳಿದ್ದು ಶಿಕ್ಷಕರು ಪೆನ್ಸಿಲ್ನ ಚೂಪಾದ ತುದಿಯಿಂದ ಚುಚ್ಚಿದ್ದು ಅಂತ!
ಇನ್ನು ಕೆಲವರು ತಮ್ಮ ಮಕ್ಕಳ ಓದನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾರೆ. ಒಂದು ಅಂಕ ಕಡಿಮೆ ಬಿದ್ದರೆ ಮಕ್ಕಳಿಗೆ ಶಿಕ್ಷೆ ಕೊಡುವವರೂ ಇದ್ದಾರೆ. ಶಿಕ್ಷಕರೊಂದಿಗೆ ಜಗಳಾಡುವವರೂ ಇದ್ದಾರೆ.ಒಟ್ಟಿನಲ್ಲಿ ಮಕ್ಕಳು ಬಲಿಪಶುಗಳಾಗುತ್ತಾರೆ.
* ವಿದ್ಯಾರ್ಥಿಗಳಲ್ಲಿ ಕೆಲವರ ಪ್ರತಿಭೆ ತಡವಾಗಿ ಹೊರಬರುತ್ತದೆ. ಪ್ರಾಥಮಿಕ ಶಾಲೆಯಲ್ಲಿ ದಡ್ಡ ಎನ್ನಿಸಿಕೊಂಡವರು ಮುಂದೆ ಪ್ರತಿಭಾವಂತರ ಸಾಲಿಗೆ ಸೇರಬಹುದು. ಅವರು 'ಲೇಟ್ ಬ್ಲೂಮರ್ಸ್! ' ಹಾಗಾಗಿ ಬಾಲ್ಯದಲ್ಲೇ ದಡ್ಡ ಅಂತ ಹಣೆಪಟ್ಟಿ ಕಟ್ಟುವುದು ಅಪರಾಧ ,ಅದು ಮಗುವಿಗೆ ಅನ್ಯಾಯ ಮಾಡಿದಂತೆ.
ಪ್ರತಿಯೊಬ್ಬರ ಬುದ್ಧಿಮಟ್ಟ ಒಂದೇ ಇರುವುದಿಲ್ಲ.ಮತ್ತೆ ಅವರಿಗೆ ಸಿಗುವ ಅವಕಾಶವೂ ಒಂದೆ ತರ ಇರುವುದಿಲ್ಲ. ಹಳ್ಳಿಯ ಸರಕಾರಿ ಶಾಲೆಗೆ ಹೋಗುವ ಮಗುವಿಗೂ ಪೇಟೆಯ ಹೈಟೆಕ್ ಶಾಲೆಯ ಮಗುವಿನ ಬುದ್ದಿಮಟ್ಟ ಒಂದೆ ಇದ್ದರೂ ತಮಗೆ ಸಿಗುವ ಸವಲತ್ತುಗಳಿಂದಾಗಿ ಅವರ ಪರೀಕ್ಷೆಯ ಫಲಿತಾಂಶ ಬೇರೆ ಇರಬಹುದು.ಅಷ್ಟೇ ಅಲ್ಲ ಹಳ್ಳಿಯ ಹುಡುಗನಲ್ಲಿ ಪೇಟೆಯ ಹುಡುಗನಷ್ಟು ಪರೀಕ್ಷಾ ಭಯ ಇರದು. ಯಾಕೆಂದರೆ ಹಳ್ಳಿಯ ಹುಡುಗನ ಮೇಲೆ ಅಂಕಗಳ ಒತ್ತಡ ಇರದು. ವಿದ್ಯಾವಂತ ಹೆತ್ತವರು ಮಕ್ಕಳ ಮೇಲೆ ಒತ್ತಡ ಹೇರಿ ಇಡೀ ಮನೆಯೇ ಪರೀಕ್ಷಾ ಕುಲುಮೆಯಲ್ಲಿ ಬೇಯಬಹುದು. ಅದರಲ್ಲೂ ಮಕ್ಕಳಿಗೆ ಬೋರ್ಡ್ ಪರೀಕ್ಷೆ ಇದ್ದರೆ‌ ವರ್ಷವಿಡೀ ಅವರ ಮನೆಗೆ ಅತಿಥಿಗಳು ಬರುವಂತಿಲ್ಲ. ಮನೆಯಲ್ಲಿ ಟಿವಿ ಇಲ್ಲ ಮನೋರಂಜನೆ ಇಲ್ಲ!ಪರೀಕ್ಷಾ ಎಂಬ ಗುಮ್ಮನ ಹತ್ತಿರ ಎಲ್ಲರ ಚಿತ್ತ!
* ಶಿಕ್ಷಕರು: ಮೇಲೆ ಹೇಳಿದಂತೆ ಭಯೋತ್ಪಾದಕರೂ ಆಗಿರಬಹುದು ,ಹೆತ್ತವರಂತೆ ಪ್ರೀತಿ ಮಾಡುವವರೂ ಇರಬಹುದು. ಶಿಕ್ಷಕರು ಮಕ್ಕಳ ಪ್ರೇಮಿಗಳಾದರೆ ಮಕ್ಕಳಿಗೆ ಶಾಲೆಯೆ ಮನೆಯಾಗುತ್ತದೆ. ಪರೀಕ್ಷೆ ಹಬ್ಬವಾಗುತ್ತದೆ.ಶಿಕ್ಷಕರು ಹೆತ್ತವರಂತಾಗುತ್ತಾರೆ.
*ಶಿಕ್ಷಣ ಪದ್ಧತಿ.: ಇಲ್ಲಿಯ ವರೆಗೆ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಅಂಕಗಳಿಗೆ ಮಹತ್ವವಿತ್ತು. ಶಿಕ್ಷಣದ ನಿಜವಾದ ಉದ್ದೇಶ , ಮುಖ್ಯವಾಗಿ ವ್ಯಕ್ತಿತ್ವದ ಬೆಳವಣಿಗೆ ಹಿಂದೆ ಸರಿಯಿತು.
ಬುದ್ಧಿವಂತ ದಡ್ಡ ಎಂಬುದು ಅಂಕಗಳನ್ನು ಅವಲಂಬಿಸಿತ್ತು. ಮಕ್ಕಳಲ್ಲೂ,ಹೆತ್ತವರಲ್ಲೂ ಪೈಪೋಟಿಯನ್ನು ಏರ್ಪಡಿಸಿತ್ತು.ಹಾಗಾಗಿ ತೊಂಬತ್ತರ ದಶಕದಲ್ಲಿ‌ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಸಮಿತಿ ಅಂಕಗಳ ಬದಲು ಗ್ರೇಡ್ಗಳನ್ನು ABCDE ಕೊಡಲು ಕೆಂದ್ರೀಯ ಸಿಲೆಬಸ್ ಇರುವ ಶಾಲೆಗಳಿಗೆ ನಿರ್ದೆಶಿಸಿತು.ಆಮೇಲೆ E ಗ್ರೇಡನ್ನು ತೆಗೆದರು. ಕ್ರಮೇಣ ರಾಜ್ಯ ಸರಕಾರದ ಶಾಲೆಗಳಲ್ಲೂ ಗ್ರೇಡ್ ಕೊಡಲು ಆರಂಭಿಸಿದರು.. ಪರೀಕ್ಷಾ ಪದ್ಧತಿಯಲ್ಲೂ ಬದಲಾವಣೆಗಳನ್ನು ತಂದರು‌ .ಮೊದಲು ಪ್ರಾಥಮಿಕ ಶಾಲೆಗೆ ಸೀಮಿತವಾಗಿದ್ದ ಗ್ರೇಡ್ ಪದ್ಧತಿ ಆಮೇಲೆ‌ ಫ್ರೌಡಶಾಲೆಯಲ್ಲೂ ಜಾರಿಗೆ ಬಂತು. ಹೆತ್ತವರೂ ಈ ಪದ್ಧತಿಗೆ ಹೊಂದಿಕೊಂಡರು.ಆದರೂ ಅಂಕಗಳಿದ್ದರೆ ಹೆತ್ತವರಿಗೆ ಅಸಮಾಧಾನವೂ ಆಯಿತು.ಅಂಕಗಳು ಇಲ್ಲ ಅಂದರೆ ಮಕ್ಕಳಿಗೆ ಗ್ರೇಡ್ ಮಾತ್ರ ತೋರಿಸುವುದು. ಅಂಕಗಳ ಆಧಾರದ ಮೇಲೆಯೇ ಗ್ರೇಡುಗಳನ್ನೂ ಕೊಡುವುದು.ಅಂಕಗಳ ಒತ್ತಡವನ್ನು ಮಕ್ಕಳಲ್ಲಿ ಕಡಿಮೆ ಮಾಡಲು ಈ ಕ್ರಮವನ್ನು ಜಾರಿಗೊಳಿಸಲಾಯಿತು.
ಆದರೂ ಪರೀಕ್ಷಾ ಒತ್ತಡ ಇದ್ದೇ ಇದೆ.ಅದು ಸಾರ್ವಕಾಲಿಕ. ಉದ್ಯೋಗಕ್ಕೆ ಸಂಬಂಧಪಟ್ಟ ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಈ ಭಯ ವ್ಯಕ್ತಿಗತವಾಗಿರುತ್ತದೆ. ಯಾಕೆಂದರೆ ಅಂಕ ಗಳಿಸುವುದು ಅಭ್ಯರ್ಥಿಯ ಜವಾಬ್ದಾರಿ.ಕೆಲಸ ಸಿಗಬೇಕಾಗುವುದು ಅನಿವಾರ್ಯವಾದುದರಿಂದ ಪರೀಕ್ಷಾಭಯ ಕೆಲವರಲ್ಲಿ ಮನೋದೈಹಿಕ ಖಾಯಿಲೆಗಳನ್ನೂ. ಪ್ರಕಟಪಡಿಸಬಹುದು. ಉದಾಹರಣೆಗೆ ವಾಂತಿ, ಹೊಟ್ಟೆ ನೋವು ,
ಅತಿಸಾರ ,ಚಡಪಡಿಕೆ ಮುಂತಾದವು ಪರೀಕ್ಷಾ ಭಯದ ಸೂಚನೆಗಳು. ಇಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ಬೇಕೇ ಬೇಕು. ನಿಶ್ಚಿಂತೆಯಿಂದ ಬರೆಯುವಾಗ ತಪ್ಪಾಗುವುದು ಕಡಿಮೆ.
ಪರೀಕ್ಷೆ ಗಿಂತಲೂ ಹೆಚ್ಚಾಗಿ ಕೆಲವು ಹೈಫೈ ಶಾಲೆಗಳಲ್ಲಿ ದೈನಂದಿನ ಶಾಲಾಕಾರ್ಯಗಳೂ ತ್ರಾಸದಾಯಕವಾಗಿವೆ. ಅ ವೈಜ್ಞಾನಿಕ ಮನೆಕೆಲಸ , ಅನಗತ್ಯ ಬರವಣಿಗೆಗಳು, ತರಗತಿಗೆ ಮೀರಿದ ಪಾಠಗಳು ಮಕ್ಕಳನ್ನೂ , ಹೆತ್ತವರನ್ನೂ ಹೈರಾಣಾಗಿಸಿವೆ. ಇತ್ತೀಚೆಗೆ ಒಬ್ಬರು ಸಿಕ್ಕಿದ್ದರು. ಅವರ ಮಗನಿಗೆ ವರ್ಷಕ್ಕೆ ಒಂದು ಲಕ್ಷ‌ರೂಪಾಯಿಗಿಂತಲೂ ಹೆಚ್ಚು ಫೀಸು ಕೋಡುತ್ತಿದ್ದಾರಂತೆ . ಮಗು ಇನ್ನೂ ನಾಲ್ಕನೇ ತರಗತಿ. ಮುಂದಿನ ವರ್ಷ ಬೇರೆ ಶಾಲೆಗೆ ಹಾಕುತ್ತಾರಂತೆ ಕಾರಣ. ಈ ಶಾಲೆಯಲ್ಲಿ ಕೊಡುವ ' ಪ್ರೋಜೆಕ್ಟ್, ಹೋಂವರ್ಕ್ ' ಮುಂತಾದವುಗಳ ಚಿತ್ರ ಹಿಂಸೆ. ಅವರು ಕೊಡುವ ಕೆಲಸಗಳು ಹೆತ್ತವರಿಗೂ ಕಷ್ಟ ಎನಿಸುವಂತಾದ್ದು. ಮಗುವಿಗೆ ಕಲಿಕೆ ಸಂತೋಷದಾಯಕವಾಗಿಲ್ಲದಿದ್ದರೆ ಕೀಳರಿಮೆ ಬಂದು ಕಲಿಕೆಯಲ್ಲಿ ಹಿಂದೆ ಬೀಳಬಹುದು‌. ಇಂತಹ ಶಿಕ್ಷಣ ಮಕ್ಕಳ ಮಾನಸಿಕ ಬೆಳವಣಿಗೆಗೆ ಮಾರಕ.
ಈಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ನನ್ನ ಪ್ರಕಾರ ಉತ್ತಮವಾಗಿದೆ.
ವಿದ್ಯಾರ್ಥಿಗಳ ಪ್ರತಿಭೆ, ಆಸಕ್ತಿ ಗೆ ಅನುಗುಣವಾಗಿ ಕಲಿಯುವ ಅನುಕೂಲತೆಯಿದೆ. ತನ್ನ ಕಾಲ ಮೇಲೆ ತಾನು ನಿಲ್ಲುವ ಧೈರ್ಯ ವನ್ನು ಈ ಶಿಕ್ಷಣ ಕೊಡಬಹುದು ಎಂಬ ನಂಬಿಕೆಯಿದೆ. ಈಗ ಇರುವ ಶಿಕ್ಷಣದಲ್ಲಿ ಪದವಿ ಪಡೆದರೂ ಕೆಲಸಕ್ಕಾಗಿ ಅಲೆಯುವ ಪ್ರಸಂಗ ,ತನ್ನ ವಿದ್ಯೆಯಿಂದ ಸ್ವ ಉದ್ಯೋಗ ಮಾಡಲಾರದ ಪರಿಸ್ಥಿತಿ.ಹೊಸ ಶಿಕ್ಷಣ ನೀತಿ ಅದಕ್ಕೆಲ್ಲಾ ಮಂಗಳ ಹಾಡಬಹುದೆಂದು ಭಾವಿಸುವೆ. ಇದರಿಂದ ಮಕ್ಕಳಿಗೆ ಧೈರ್ಯ ವೂ ಬರಬಹುದು. ಹೆತ್ತವರ ಒತ್ತಡವೂ ಕಡಿಮೆಯಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಈ ಶಿಕ್ಷಣ ಸ್ವಾವಲಂಬಿಯನ್ನಾಗಿ ಮಾಡಬಹುದು. ಅದನ್ನು ಎಲ್ಲರೂ ಸ್ವಾಗತಿಸುವ ತನಕ , ಎಲ್ಲರಿಗೂ ಆ ರೀತಿಯ ಶಿಕ್ಷಣ ಅರ್ಥವಾಗುವವರೆಗೆ ಆತಂಕ ಇದ್ದೇ ಇದೆ.
ಯಾವುದೇ ಶಿಕ್ಷಣ ಪದ್ಧತಿಯಿರಲಿ ಪರೀಕ್ಷೆ ಭಯವನ್ನುಂಟು ಮಾಡದಿರಲಿ. ಪರೀಕ್ಷೆ ಎಂದರೆ ಸಂಭ್ರಮವಾಗಲಿ, ಯಾವ ಮುಗುವಿನ ಮುಖವೂ ಮುದುಡಿ ಹೋಗದಿರಲಿ. ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡದಿರಲಿ. ಶಿಕ್ಷಣವು ಕೆಟ್ಟ ಪೈಪೋಟಿಯ ಬದಲು ಪ್ರತಿಭೆಯನ್ನು ಹೊರತೆಗೆಯುವ ಸವಾಲಾಗಲಿ, ಸಾಧನವಾಗಲಿ.
ಪರೀಕ್ಷಾ ಭಯ ಹೋಗಲಾಡಿಸುವುದು ಹೇಗೆ?
ಪರೀಕ್ಷೆ ಬರೆಯುವ ಮಕ್ಕಳಿಗೆ 
*ಹೆಚ್ಚು ಒತ್ತಡ ಹಾಕದೆ ಓದಲು ಅನುವು ಮಾಡಿಕೊಡಬೇಕು.ಪರೀಕ್ಷೆ ಅಂತ ಭಯ ಹುಟ್ಟಿಸುವುದು ಬೇಡವೇ ಬೇಡ.
*ಪರೀಕ್ಷೆ ಬರೆಯುವ ಹಿಂದಿನ ದಿನ ನಿದ್ದೆ ಕೆಡಬಾರದು
*ಸಾತ್ವಿಕ ಆಹಾರ ,ಶುದ್ಧ ಕುಡಿಯುವ ನೀರು ಕೊಡುಬೇಕು.
*  ಪರೀಕ್ಷೆ ಎದುರಿಸುವಂತಾಗಿದೆ ನೆಂಬ ಆತ್ಮ ವಿಶ್ವಾಸ ಬೆಳೆಸಿಕೊಳ್ಳುವುದು ಅಗತ್ಯ.
* ಪರೀಕ್ಷೆ ಬರೆಯುವವರನ್ನು ಋಣಾತ್ಮಕ ಟೀಕೆಗಳಿಂದ ಹೆಧರಿಕೆಯನ್ನುಂಟು ಮಾಡಬಾರದು‌
* ಪರೀಕ್ಷೆಬರೆಯುವಾಗ ಸಂತೋಷದಿಂದ  ಬರೆಯುವಂತಾಗಬೇಕು‌
* ಕಠಿಣ ಪ್ರಶ್ನೆಗಳಿಗೆ ತಲೆಕೆಡಿಸಿ ಸಮಯ ನಷ್ಟಮಾಡಬಾರದು ಮಾಡಬಾರದು. 
* ಧೈರ್ಯಂ ಸರ್ವತ್ರ ಸಾಧನಂ ಎಂಬುದು ಪರೀಕ್ಷಾರ್ಥಿಗಳ ಮಂತ್ರವಾಗಬೇಕು.

✍️ ಪರಮೇಶ್ವರಿ ಭಟ್

Category:Education



ProfileImg

Written by Parameshwari Bhat