ನಮ್ಮೂರಿನ ಹರಳಿ ಕಟ್ಟೆಯ ಮೇಲೆ ಇಬ್ಬರು ಯುವಕರ ಕುಳಿತಿರುತ್ತಾರೆ. ಅದರಲ್ಲಿ ಒಬ್ಬ ಅಲ್ಪಸ್ವಲ್ಪ ವಿದ್ಯಾವಂತನಾದರೆ ಮತೊಬ್ಬ ಮುಗ್ಧ. ಆ ಅಲ್ಪ ವಿದ್ಯಾವಂತನ ಹೆಸರು ಶಾಮ ಮತ್ತು ಮುಗ್ಧನ ಹೆಸರು ತಿಮ್ಮ ಇಬ್ಬರ ಹರಟುತ್ತಿರುವಾಗ ಶಾಮ ತನ್ನ ಸ್ಮಾರ್ಟ್ ಫೋನ್ ನಲ್ಲಿ Instagram ಮತ್ತು Facebook ನೋಡುತ್ತ, ಆ ಹಳ್ಳಿಯ ಚನ್ನೇಗೌಡರ ಮಗ ರಂಗೇಗೌಡ ಸಾಫ್ಟ್ ವೇರ್ ಉದ್ಯೋಗಿಯಾಗಿ ಪಟ್ಟಣದಲ್ಲಿ ವಾಸವಾಗಿದ್ದು, ಅವನು ತನ್ನ ಸಾಮಾಜಿಕ ಜಾಲತಾಣದಲ್ಲಿನ ಯಾವಾಗಲೂ ರಂಗುರಂಗಿನ Postಗಳನ್ನ upload ಮಾಡಿರುವುದನ್ನು ತೋರಿಸುತ್ತ ಹೀಗೆ ಹೇಳುತ್ತಾನೆ.…
ಶಾಮ:- ನೋಡ್ದಾ ತಿಮ್ಮ...ನಮ್ ಚನ್ನೇಗೌಡರ ಮಗ ರಂಗನ್ ದರ್ಬಾರ್ನ ನಮ್ ಜೊತೆಯವ್ನೆ ಹೇಗೋ ಓದಿ Software Engineer ಆಗಿ ಬೆಂಗಳೂರಿನಲ್ಲಿ ನೆಲೆ ಮಾಡಿಕೊಂಡ, ಎಂತಹ Photos ಹಾಕ್ತಾನೆ ಅಂತಿಯ facebook ಮತ್ತೆ Instaನಲ್ಲಿ.…
ತಿಮ್ಮ: ಹಾಕ್ಲಿ ಬಿಡು ಶಾಮಣ್ಣೊ... ಅದಕ್ಕೆ ಅಲ್ವೆ ದೊಡ್ಡೋರ್ ಹೇಳೋದು ಓದ್ಬೇಕು ಅಂತ, ಹ್ಯಂಗೊ ಈಗ ಸುಖವಾಗಿ ಇರ್ಲಿ ಬುಡು
ಶಾಮ: ನೀನೇಳೋದು ಸರಿನೆ ಬಿಡು... ಆದರೆ ಇವ್ನು ಬರೀ ಮಜಾ ಮಾಡ್ಕೊಂಡೂ ಸಿನೆಮಾ, ರೆಸ್ಟೋರೆಂಟ್, ಟ್ರಿಪ್ ಮಾಡಿಕೊಂಡಿರ್ತಾನೆ... ಜೊತೆಗೆ ತುಂಡು ಬಟ್ಟೆ ತೊಟ್ಟಿರೊ ಹುಡ್ಗೀರ್ ಜೊತೆ ಸೆಲ್ಫಿ ಪೋಟೋಸ್ ಬೇರೆ…
ತಿಮ್ಮ: ... ಹಂಗ್ ಬೇರೆ ಇದ್ಯಾ ... , ಹಿಂಗೆ ತುಂಡ್ ಉಡುಗೆ ತೊಟ್ಟು ಸುತ್ತೋದು ಸಾಮಾನ್ಯ ಆಗಿದ್ಯಂತಲ್ಲ ಬೆಂಗಳೂರ್‌ನಲ್ಲಿ ನಿಜಾನ??!!.. (ಆಶ್ಚರ್ಯದಿಂದ)
ಶಾಮ: ಇದೇನ್ ಹೀಗೆ ಕೇಳ್ತಿಯಾ... ಈಗ ಅದೆಲ್ಲ ಕಾಮನ್ ಆಗೋಗಿದೆ ಸಿಟಿಗಳಲ್ಲಿ.. ಇನ್ ಸ್ವಲ್ಪ ದಿನ ತಡಿ ನಮ್ ಹಳ್ಳಿಗಳಲ್ಲೂ ಬರುತ್ತೇನೊ ಈ ಸಂಸ್ಕೃತಿ…
ತಿಮ್ಮ: ಎನ್ ಸಂಸ್ಕೃತಿನೊ ಸಂಪ್ರದಾಯನೊ ಬಿಡಣ್ಣಾ ಈ ಜನ ಎಲ್ಲ ಮರೆತಿದಾರೆ ಈಗ.. ಅದನ್ ಬಿಡು ನಮ್ ರಂಗನ್ ವಿಷಯ ಹೇಳು.
ಶಾರು: ಅವನಿಗೇನ್ ಬಿಡೊ ಅದೃಷ್ಟವಂತ ಹೇಗ್ ಮಜಾ ಮಾಡಿಕೊಂಡ್ ಇದಾನೆ ನೋಡು ಅದಕ್ಕೂ ಹಣೆಯಲ್ ಬರೆದಿರ್ಬೇಕು ಬಿಡು... ನಮ್ ಜೀವನ ಬರೀ ಇಲ್ಲೇ ಕಳೆದು ಹೋಗುತ್ತೆ..
ತಿಮ್ಮ: ನೀನ್ ಹೇಳೋದು ನಿಜ ಬಿಡು ಊರಲ್ಲೇ ಮುಗಿಯುತ್ತೆ ನಮ್ ಜೀವ್ನ...…ಎನ್ನುತ್ತಾ ದೂರಕ್ಕೆ ದೃಷ್ಟಿ ಹಾಯಿಸುತ್ತಾ- ಅಣ್ಣಾ.. ಯಾವುದೋ ಬುಲೆಟ್ ಗಾಡಿ ಬರ್ತಿದೆ ಯಾರೋ ಒಳ್ಳೆ Hero ತರ ಬರ್ತಾವ್ನೆ…
ಶಾಮ: (ದೃಷ್ಟಿ ಹಾಯಿಸುತ್ತಾ.....) ಹೂನೊ... ಹೇ... ನಮ್ ರಂಗನೇ ಇದ್ದಂಗೆ ಇದಾನೆ ನೋಡೋ. 100ವರ್ಷ ಆಯಸ್ಸು ಬಿಡು...
ತಿಮ್ಮ: ಹೂನಣ್ಣೊ.. ಗೌಡ್ರು ಮಗನೆ, ಗುರುತೇ ಸಿಗ್ಲಿಲ್ಲ..…ಬೈಕ್ ಹತ್ತಿರ ಬಂದು ನಿಲ್ಲುತ್ತದ, ಬೈಕ್ ನಿಂದ ಇಳಿದ ರಂಗೇಗೌಡ ಇವರತ್ತ ನೋಡುತ್ತ, ಏನೋ ಶಾಮ ಹೇಗಿದ್ಯಾ? ... ತಿಮ್ಮ....? ಎನ್ನುತ್ತ ಬಳಿ ಬರುತ್ತಾನೆ.
ಶಾಮ: ಅಯ್ಯೋ ನಮ್ಮದೇನಿದೆ ಬಿಡಪ್ಪ ಊರಲ್ ಇರೋರ್ದು. ನಿಮ್ಮಂತ ಅದೃಷ್ಟ ಮಾಡಿಲ್ಲ.
ತಿಮ್ಮ: ಹೂಂ ರಂಗಣ್ಣೊ ಇಷ್ಟೋತ್ತು ನಿಂದೆ ಮಾತಾಡ್ತಾ ಇದ್ವಿ facebook ನಲ್ಲಿ ನಿಮ್ Photos ತೋರಿಸ್ತಿದ್ರು ಶಾಮಣ್ಣ..
ರಂಗೇಗೌಡ: ಹೋ... ಅದಾ.. ಹೋದ ವಾರ ಲಡಾಖ್ ಹೋಗಿದ್ವಿ, ನಮ್ ಕಂಪನಿ ಹುಡುಗ್ರು ಹುಡ್ಗೀರೆಲ್ಲ…
ಶಾಮ: ಸುಖ ಪುರುಷ ನೀನ್ ಬಿಡಪ್ಪ…
ರಂಗೇಗೌಡ: ಲೈಫ್ನಲ್ಲಿ ಏನಿದ್ಯೋ?.. ಎಂಜಾಯ್ ಮಾಡುವಾಗ ಮಾಡಬೇಕು.. ಒಳ್ಳೆ ಕಂಪನಿ, ಒಳ್ಳೆ ಸಂಬಳ, ಮತ್ತೇನ್ ಬೇಕು ಜೀವ್ನದಲ್ಲಿ ಹೆಂಗೊ ನಡಿತಿದೆ..
ತಿಮ್ಮ: ನೀನ್ ಹೇಳೋದು ನಿಜ ಬಿಡಣ್ಣ, ಆದರೆ ನೀನು ಮಾತ್ರ ಎಂಜಾಯ್ ಮಾಡ್ತೀಯ, ಎಷ್ಟೊಂದ್ ದಿನ ಆದಮೇಲೆ ಊರಿಗೆ ಬಂದಿದ್ಯ ನಮಗೇನ್ ಇಲ್ವಾ ಹಾಗಾದ್ರೆ ?…
ರಂಗೇಗೌಡ: ಅದಕ್ಕೇನ್ ಬರ್ರೋ , ನಿಮಗೂ ಎಂಜಾಯ್ ಮಾಡಿಸೋಣ, ಸಾಯಂಕಾಲ ಬರ್ರಿ - ಮಧುಗಿರಿಗೊ ಇಲ್ಲ ತುಮಕೂರಿಗೋ ಹೋಗಿ ಒಳ್ಳೆ ನಾನ್ವೆಜ್ ಊಟ ಮಾಡ್ಕೋಂಡ್ ಬರೋಣ...
ಶಾಮ: ಹಾಗದ್ರೆ ಹೋಗಣಪ್ಪ ಮಿಸ್ ಮಾಡಬೇಡ ನಿಂದೆ ಎಲ್ಲಾ... ಸಂಜೆ ಸಿಗಣ. ಎನ್ನುತ್ತಾ ಎಲ್ಲರೂ ಹೊರಡುವರು.
ಸಂಜೆ:-
ಮೂವರು ಒಂದು ರೆಸ್ಟೋರೆಂಟ್ ನಲ್ಲಿ ಕುಳಿತು ತಿನ್ನುತ್ತಾ ... ಹರಟುತ್ತಾ...
ಶಾಮ: ತುಂಬಾ ದಿನ ಆಗಿತ್ತು ರಂಗ ಈ ಕಡೆ ಬಂದು. ಹಿಂದಿನ ತಿಂಗಳು ಗುಂಡೇಗೌಡ್ರ ಮಗಳ ಮದ್ವೆಗೆ ಬಂದಾಗ ಬಂದಿದ್ದೇ... ಅದು ಬಿಡು ಮತ್ತೆ ಹೇಳು ಹೇಗಿದೆ ರಂಗ ಬೆಂಗ್ಳೂರಿನ ಜೀವನ?.. ಎಷ್ಟೋಂದ್ ದಿನ.. ಅಲ್ಲಾ ವರ್ಷನೇ ಆಗಿತ್ತು ನೀನ್ ಸಿಕ್ಕಿ..
ರಂಗೇಗೌಡ: ಎಲ್ಲಾ ಚೆನ್ನಾಗಿದೆ, ಆದರೆ ಆ ಜೀವನಾನೆ ಒಂಥರಾ.. ಈ ಜೀವನಾನೇ ಒಂಥರಾ.... ನೀವು ಅಂದುಕೊಂಡ ಹಾಗೆ ಅಲ್ಲಿ ಇಲ್ಲ ಕಣ್ರೋ.. ಜೀವನದಲ್ಲಿ ಸುಖ ನೆಮ್ಮದಿ ಯಾವುದು ಇರಲ್ಲ ಒಂಥರಾ ಯಾಂತ್ರಿಕ ಬದುಕು.
ತಿಮ್ಮ: ಇದೇನಣ್ಣಾ ಹೀಗ್ ಅಂದುಬಿಟ್ಟೆ!! ನೀನು ಇಂಜನಿಯರ್ ಆಗಿ ಸಿಟಿನಲ್ಲದ್ದೂ ಸುಖ ನೆಮ್ಮದಿ ಇಲ್ಲ ಅಂತೀಯಾ.... ಎಷ್ಟೊಂದು ಗೌರವ ಇರುತ್ತೆ ನಿಮಗೆಲ್ಲಾ.. ರಂಗೇಗೌಡ: ಲೋ... ನಿಮ್ಮ ಪ್ರಕಾರ ಮರ್ಯಾದೆ, ಗೌರವ ಅಂದ್ರೆ ಎನು..?
ಶಾಮ: ಏನ್ ರಂಗಾ.. ಹೀಗೆ ಕೇಳ್ತಿಯ ನಿನಗೇನ್ ಗೊತ್ತಿಲ್ವ? ಒಳ್ಳೆ ಗುಣ, ಕಷ್ಟಕ್ಕೆ ಆಗೋದು, ಪೊಗರು ಅಹಂಕಾರ ಇಲ್ಲದೆ ಬದುಕೋದು, ಅನುಕೂಲ ವಾಗಿರೋದು... ಹೀಗೆ ಇದ್ರೆ ಗೌರವ, ಮರ್ಯಾದೆ ಕೊಡುತ್ತಾರಪ್ಪ ಜನ.
ರಂಗೇಗೌಡ: ಸ್ವಲ್ಪ ಎಮೋಷನಲ್ ಆಗುತ್ತಾ... ಆ ಕಾಲ ಹೊರಟೋಗಿದೆ ಕಣ್ರೋ.. ಈಗ ನಮ್ಮ ಜೀವನ ಹೇಗೆ ಗೊತ್ತಾ: Week end ನಲ್ಲಿ Trip ಇಲ್ಲಾಂದ್ರೆ ಮಾಲ್ಗಳಿಗೆ ಹೋಗೋದು, ಎಲ್ಲರಿಗೂ ಗೊತ್ತಾಗೊ ಹಾಗೆ Photos ತೆಗೆದು face book, Insta, WhatsApp status ಗಳಿಗೆ ಹಾಕೋದು, ಆಮೇಲೆ ಎಷ್ಟು ,Likes, comments ಮತ್ತೆ Compliments ಬಂದಿವೆ ಅಂತ Mobile ತೆಗೆದು ಮತ್ತೆ ಮತ್ತೆ ನೋಡೋದು... ಜಾಸ್ತಿ ಲೈಕ್ಸ್ ಅಥವಾ ಕಾಮೆಂಟ್ಸ್ ಬಂದ್ರೆ ನಮಗೆ ಗೌರವ... Showoff ಅಂದ್ರೆ ತೋರ್ಪಡಿಕೆಗೆ ಅಷ್ಟೇ ಮರ್ಯಾದೆ.
ತಿಮ್ಮ: ಏನಣ್ಣ ಪ್ರಪಂಚ ಹೀಗಾಗಿದೆ... (ಆಶ್ವರ್ಯ ದಿಂದ)…
ಶಾಮ: ನೀನ್ ಹೇಳೋದೆಲ್ಲ ನಿಜಾನೆ, ಆದ್ರೆ ಗೌರವ ಇರೋದಕ್ಕೆ ತಾನೆ ಅಷ್ಟೊಂದು ಜನ ಜೊತೆಗೆ Trip ಬಂದಿರೋದು ? ಹುಡ್ಗೀರೆಲ್ಲ ಇದಾರಲ್ಲ... ನೀವೆಲ್ಲಾ ಒಳ್ಳೆ Friends ಅಲ್ವಾ..?
ರಂಗೇಗೌಡ: ಒಳ್ಳೆ ಫ್ರೆಂಡ್ಸ್ ಅಲ್ಲ ಕಣ್ರೋ, ಬರೀ ಫ್ರೆಂಡ್ಸ್ ಅಷ್ಟೆ.. ಅಲ್ಲಿ ಭಾಂದವ್ಯಕ್ಕಿಂತ Showoff ಮಾತ್ರಾನೆ ಮುಖ್ಯ, ಹುಡುಗರಿಗೆ ಗರ್ಲ್ಫ್ ಫ್ರೆಂಡ್ಸ್ ಇರಲೇಬೇಕು.. ಹಾಗೆ ಹುಡುಗಿಯರಿಗೆ ಬಾಯ್ ಫ್ರೆಂಡ್ಸ್ ಕೂಡ ಇರಲೇಬೇಕು, ಹಾಗೆ ಇದ್ದರೇನೆ ಗೌರವ... ಇಲ್ಲ ಅಂದ್ರೆ ಅವನೊಬ್ಬ waste ಅಂತಾರೆ.
ತಿಮ್ಮ: ಕಾಲ ತುಂಬಾ ಬದಲಾಗಿದೆ ಬಿಡಣ್ಣ ನೀ ಹೇಳೋದು ನೋಡಿದರೆ...
ಶಾಮ: ಕಾಲದ ಬಗ್ಗೆ ಯಾರ್ ತಲೆ ಕೆಡಿಸ್ಕೋತಾರೆ ಬಿಡಪ್ಪ... ನೀನ್ ಹೇಗೊ ಸುಖವಾಗಿ ಇದ್ಯ ಅಲ್ವ ಅಷ್ಟ್ ಸಾಕು ಬಿಡು ರಂಗ..
ರಂಗೇಗೌಡ :: ಏನ್ ಸುಖನೋ ಏನೋ.ಬಡಪ್ಪಾ .. ನೆಮ್ಮದಿಯ ಜೀವನ ಇಲ್ಲ ನಿಮ್ ಹಾಗೆ... ನಾವು ಒಂಥರಾ ಹೋಡೋ ಕುದುರೆಹಂಗೆ ಓಡ್ತಾನೆ ಇರಬೇಕು.. ನಮ್ ಕೆಲಸದಲ್ಲಿ Target ಅಂತ ಇರುತ್ತೆ, ಅಂದ್ರೆ ಇಷ್ಟ್ time ನಲ್ಲಿ ಇಷ್ಟ್ ಕೆಲಸ ಮುಗಿಲೇಬೇಕು ಅಂತ ಮುಗಿಸಲಿಲ್ಲ ಇಂದ್ರೆ Team Leader ನಮ್ ತಲೆ ಮೇಲೆ ಕೂತು ಕೆಲಸ ಮಾಡಿಸ್ತಾನೆ ಮುಗಿಸಲಿಲ್ಲ ಅಂದ್ರೆ ರಾತ್ರಿಯಲ್ಲಾ ಕೆಲಸ ಮಾಡಬೇಕಾಗುತ್ತೆ ನಿದ್ದೆ ಊಟ ಬಿಟ್ಟು ಅಷ್ಟು ಒತ್ತಡ ಇರುತ್ತೆ.. ಇನ್ನೂ Work from home ಅಂತ ಹೇಳಿ ಮನೇಲೂ ಕೂತ್ರೂ ಕೆಲಸ ಮಾಡಬೇಕಾಗುತ್ತೆ ಮನೆಲಿ ಇದ್ದರೂ ನೆಮ್ಮದಿ ಇಲ್ಲದ ಹಾಗೆ.. ಇನ್ನು ಕೆಲಸ ಬಿಟ್ಟು ಬೇರೆ ಯೋಚನೆ ಸಮೇತ ಮಾಡೋಕಾಗಲ್ಲ. ಸದ್ಯ Week End ಬಂದ್ರೆ ಸಾಕಪ್ಪಾ ಅಂತ ಕಾಯ್ತಿರ್ತಿವಿ... ಈಗಂತೂ Work from home ಇರೋದ್ರಿಂದ ಯಾವ ದಿನ ಅಂತಾನೂ ಗೊತ್ತಾಗೊಲ್ಲ.…
ತಿಮ್ಮ: (ನಿಟ್ಟುಸಿರು ಬಿಡುತ್ತ...) Engineer ಕೆಲಸ ಅಂದ್ರೆ ಆರಾಮಾಗಿ ಇರುತ್ತೆ ಅಂದುಕೊಂಡಿದ್ದ ಕಣಣ್ಣೋ... ನಿಮ್ಮದೂ ಕಷ್ಟಾನೆ ಬಿಡು…
ಶಾಮ: ಕಷ್ಟ ಇಲ್ಲದೆ ಯಾವುದು ಇಲ್ಲಾ ಬಿಡು ರಂಗ .. ಅದರೆ ನೀವು ತಿಂಗಳ ತಿಂಗಳ ಸಂಬಳ ನೋಡ್ತೀರ, ಆದರೆ ನಾವು ನೋಡು ಬಿತ್ತಿದ ಬೆಳೆ ಕೈಗೆ ಬರೋವರೆಗೂ ಬರುತ್ತೆ ಅಂತ ಗ್ಯಾರಂಟಿ ಇಲ್ಲ.
ರಂಗೇಗೌಡ: ಅಯ್ಯೋ ಈಗ ನಮ್ಮದೂ ಹಂಗೆ ಆಗಿದೆ ಶಾಮ... Recession ಅಂತ ಹೇಳಿ ಯಾವಾಗ ಕೆಲಸದಿಂದ ತೆಗಿತಾರೋ ಅಂತ ನಮ್ಮದೂ ಸಹ ಗ್ಯಾರಂಟಿ ಇಲ್ಲ ಹಾಗಾಗಿದೆ.. ಇರೋವರೆಗೂ ಅಷ್ಟೇ ಗಟ್ಟಿ...ಆಮೇಲೆ ಬೇರೆ ಕಂಪನಿಯಲ್ಲಿ ಕೆಲಸ ಕೊಡಿ ಅಂತ ಹೋಗಬೇಕು.. ಅಲ್ಲಿ ಇಲ್ಲ ಇನ್ನೊಂದು.. ಇಲ್ಲ ಎಲ್ಲ ಬಿಟ್ಟು ಊರಿಗೆ ಬಂದು ವ್ಯವಸಾಯನೋ ಬೇರೆ ಏನಾದ್ರೂ ಮಾಡಬೇಕು ಅಷ್ಟೆ.. ಹಾಗೆ ಮಾಡಿದರೂ ಕಷ್ಟ, ಇದ್ದಕ್ಕೆ ಇಷ್ಟೆಲ್ಲಾ ಓದಬೇಕಿತ್ತಾ ಅಂತಾರೆ ಜನ.. ಜೀವನ ಹೇಗಾಗಿದೆ ಅಂದ್ರೆ ಬಿಡೋಕು ಆಗ್ತಿಲ್ಲ, ಕಟ್ಟಿಕೊಳ್ಳೋಕು ಆಗ್ತಿಲ್ಲ…
ತಿಮ್ಮ: ಒಟ್ಟಿಗೆ ಅವರ ಜೀವನ ಚೆನ್ನಾಗಿದೆ ಅಂತ ನಾವ್ ಅಂದುಕೋತೀವಿ…ನಮ್ ಜೀವನ ಚೆನ್ನಾಗಿದೆ ಅಂತ ಅವರು ಅಂದುಕೋತಾರೆ ಅಲ್ವ ಶಾಮಣ್ಣ?..
ಶಾಮ: ಅದಕ್ಕೆ ಅಲ್ವೇನೋ ಗಾದೆ ಇರೋದು "ದೂರದ ಬೆಟ್ಟ ನುಣ್ಣಗೆ" ಅಂತ.
ರಂಗೇಗೌಡ: ಆದರೆ ಒಂದಂತೂ ನಿಜ, ಕಷ್ಟ ಪಡದೆ ಯಾವುದು ಸುಲಭವಾಗಿ ಬರೊಲ್ಲ. "ಕೈ ಕೆಸರಾದರೆ ಬಾಯಿ ಮೊಸರು".…
ಮೂವರ ಮೊಗದಲ್ಲೂ ಮಂದಹಾಸದ ಅಲೆ ಸಾಗಿ ಗಾದೆಗಳು ಮತ್ತು ನುಡಿಮುತ್ತುಗಳು ಎಲ್ಲಾ ಕಾಲಗಟ್ಟಕ್ಕೂ ಎಷ್ಟರ ಮಟ್ಟಿಗೆ ಅನ್ವಯಿಸುತ್ತವಲ್ಲವೇ? ಎಂದು ಹರಟ್ಟುತ್ತಾ ತಮ್ಮೂರಿನ ಕಡೆಗೆ ಹೆಜ್ಜೆ ಹಾಕಿದರು....…
ಹವ್ಯಾಸಿ ಬರಹಗಾರನಾಗಿ ಕನ್ನಡ ಸಾಹಿತ್ಯಕ್ಕೆ ಅಳಿಲು ಸೇವೆ ಸಲ್ಲಿಸುವ ಆಶಯದೊಂದಿಗೆ.....
0 Followers
0 Following