ಫಣಿ ರಾಮಚಂದ್ರ ಕನ್ನಡ ಚಿತ್ರರಂಗ ಕಂಡ ವಿಡಂಬನಾತ್ಮಕ ಚಿತ್ರಗಳ ನಿರ್ದೇಶಕರು ಆಗಿದ್ದಾರೆ. ತಮ್ಮ ಚಿತ್ರಗಳಲ್ಲಿ ಸಮಾಜದಲ್ಲಿನ ಬದುಕಿನ ದೈನಂದಿನ ಸಮಸ್ಯೆಗಳನ್ನು ತಮ್ಮದೇ ಆದ ಹಾಸ್ಯ ಶೈಲಿಯಲ್ಲಿ ರೂಪಿಸುವಲ್ಲಿ ಪರಿಣಿತರೂ ಆಗಿದ್ದು ನಿರ್ದೇಶಿಸಿದ ಚಿತ್ರಗಳ ಸಂಖ್ಯೆ ಅಲ್ಪವಾದರೂ ಗುಣಮಟ್ಟದಲ್ಲಿ ಯಾವುದೇ ದೋಷವಿಲ್ಲ. ಇವರ ನಿರ್ದೇಶನದಲ್ಲಿ ಮೂಡಿ ಬಂದ ಪ್ರತಿ ಚಿತ್ರವು ಹತ್ತು ಚಿತ್ರಗಳಿಗೆ ಸಮವಾಗಿದೆ. ಈ ಒಂದು ವಾಕ್ಯವು ನಿಮಗೆ ಗೊಂದಲ ಮೂಡಿಸಬಹುದು. ಇದಕ್ಕೆ ಉತ್ತರವು ನನ್ನ ಬಳಿಯಿದೆ. ಇದುವರೆಗೂ ಚಿತ್ರ ನಟರ ಮತ್ತು ಚಿತ್ರ ರಂಗಕ್ಕೆ ಸಂಬಂಧಿಸಿದ ಹಲವಾರು ಲೇಖನಗಳನ್ನು ರಚಿಸಿದ ನನಗೆ ನನ್ನ ಆಪ್ತರಾದ ಸುರೇಶ್ ಸರ್( ಮಲೇಶಿಯಾ ದೇಶದ ನಿವಾಸಿ, ಮೂಲತಃ ಕನ್ನಡಿಗರು) ಇವರ ಕುರಿತು ಒಂದು ಲೇಖನವನ್ನು ರಚಿಸಲು ಹೇಳಿದರು. ಆಗಲೇ ಹಲವಾರು ಲೇಖನಗಳನ್ನು ರಚಿಸಿದ್ದ ನನಗೆ ಇದು ಒಂದು ಸುವರ್ಣಾವಕಾಶ ಎಂದು ನಿರ್ಧರಿಸಿ ಒಪ್ಪಿ ಕೊಂಡೆ. ಆದರೆ ಇವರ ಕುರಿತು ರಚಿಸುವ ಲೇಖನದ ಕಾರ್ಯ ಅಷ್ಟು ಸುಲಭವಾಗಿರಲಿಲ್ಲ. ಅಲ್ಲದೇ ನನ್ನ ಕೆಲಸವನ್ನು ನಿರ್ವಹಿಸುವ ಒತ್ತಡ ಒಂದು ಕಡೆಯಾದರೆ ಮಾಹಿತಿ ಸಂಗ್ರಹಿಸಲು ಹಲವಾರು ದಿನಗಳು ಕಳೆದವು. ಎಷ್ಟು ಪ್ರಯತ್ನಿಸಿದರೂ ನನಗೆ ನಿರೀಕ್ಷಿತ ಮಟ್ಟದ ಮಾಹಿತಿಗಳು ಲಭ್ಯವಾಗಲಿಲ್ಲ. ಆದರೆ ಆ ಸಮಯದಲ್ಲಿ ಇವರ ನಿರ್ದೇಶನದ ಚಿತ್ರಗಳ ಮಾಹಿತಿಯು ಲಭ್ಯವಾಯಿತು. ಹೇಗಾದರೂ ಮಾಡಿ ಗುಣಮಟ್ಟದ ಲೇಖನವನ್ನು ರಚಿಸಬೇಕು ಎಂಬ ಉದ್ದೇಶದಿಂದ ಇವರ ಕೆಲವು ಚಿತ್ರಗಳನ್ನು ಯೂ ಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಿದಾಗ ಆರಂಭದಲ್ಲಿ ಅಷ್ಟಾಗಿ ಅರ್ಥವಾಗಲಿಲ್ಲ. ಪುನಃ ಎರಡು-ಮೂರು ಬಾರಿ ವೀಕ್ಷಿಸಿದಾಗಲೇ ಇವರ ನಿರ್ದೇಶನದ ಚಿತ್ರಗಳ ಮಹತ್ವ ತಿಳಿಯಿತು. ೧೯೯೧ ರಲ್ಲಿ ತೆರೆ ಕಂಡ ಇವರದೇ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ ಗೌರಿ ಗಣೇಶ ಒಂದು ಉತ್ತಮ ಉದಾಹರಣೆ ಕೂಡ ಆಗಿದೆ. ಈ ಚಿತ್ರದ ಕಥೆಯು ಸ್ವಾರಸ್ಯಕರವಾಗಿದ್ದು ಲಂಬೋದರ ಪಾತ್ರವೇ ಪ್ರಮುಖ ಆಕರ್ಷಣೆಯಾಗಿದೆ. ಲಂಬೋದರನ ಪಾತ್ರವನ್ನು ನಿರ್ವಹಿಸಿದ ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದಿರುವ ಸಪ್ತ ಭಾಷೆಗಳ ನಟ ಮೂಲತಃ ಕನ್ನಡಿಗರು ಆಗಿರುವ ಅನಂತನಾಗ್ ಕುರಿತು ತಿಳಿಯದವರು ಇದ್ದಾರೆಯೇ? ಇವರ ನಟನೆಯ ಕುರಿತು ವರ್ಣಿಸಲು ಪದಗಳು ಕೂಡ ಸಾಲುವುದಿಲ್ಲ. ನಿರ್ವಹಿಸಲು ಕೆಲಸವು ಇರದ, ಕೈಯಲ್ಲಿ ಹಣವೂ ಇರದ ಒಬ್ಬ ನಿರುದ್ಯೋಗಿಯು ತನ್ನ ಬುದ್ಧಿವಂತಿಕೆಯಿಂದ ಜನರ ದೌರ್ಬಲ್ಯವನ್ನು ಅಸ್ತ್ರವಾಗಿ ಬಳಸಿಕೊಂಡು ಹಣವನ್ನು ಗಳಿಸಿ ಶ್ರೀಮಂತನಾಗುತ್ತಾನೆ. ಇದೇ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಸಮಾಜದಲ್ಲಿ ಮೋಸ ಹೋಗುವವರು ಇರುವ ತನಕ, ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂದು ಹೇಳುವ ಸಂದೇಶವು ಪ್ರತಿಯೊಬ್ಬ ಪ್ರಜೆಗೂ ಎಚ್ಚರಿಕೆಯ ಗಂಟೆಯಾಗಿದೆ. ಮೇಲಾಗಿ ಇಂತಹ ಕಥೆಗಳನ್ನು ಚಿತ್ರ ಮಾಡುವುದು ಒಂದು ಸವಾಲಿನ ಕೆಲಸ ಕೂಡ. ಮುಖ್ಯವಾಗಿ ಚಿತ್ರದಲ್ಲಿ ಬರುವ ಪಾತ್ರಗಳಲ್ಲಿ, ಘಟನೆಗಳಲ್ಲಿ ಯಾವ ಅತಿರೇಕವು ಇಲ್ಲ, ತೀರ ನೈಜವಾಗಿ ಮೂಡಿಬಂದಿದೆ. ಇಂತಹ ಪಾತ್ರಗಳನ್ನು ಮೇಧಾವಿ ನಟರು ಮಾತ್ರ ನಿರ್ವಹಿಸಲು ಸಾಧ್ಯವಾಗುತ್ತದೆ.
೧೯೯೨ ರಲ್ಲಿ ತೆರೆ ಕಂಡ ಇವರದೇ ನಿರ್ದೇಶನದಲ್ಲಿ ಮೂಡಿ ಬಂದ ಒಂದು ಸಿನಿಮಾ ಕಥೆ ಚಿತ್ರವು ಅಷ್ಟೇ ವೈವಿಧ್ಯತೆಯನ್ನು ಹೊಂದಿದೆ. ಸಪ್ತ ಭಾಷೆ ನಟ ಅನಂತನಾಗ್ ಈ ಚಿತ್ರದಲ್ಲಿ ಕಥೆಗಾರನ ಪಾತ್ರವನ್ನು ನಿರ್ವಹಿಸಿದ್ದು ಒಬ್ಬ ಕಥೆಗಾರನ ಆಲೋಚನೆ ಯಾವ ಯಾವ ರೀತಿ ಇರುತ್ತದೆ ಎನ್ನುವುದನ್ನು ತುಂಬ ಅದ್ಭುತವಾಗಿ ತೋರಿಸಿದ್ದಾರೆ. ಈ ಚಿತ್ರದಲ್ಲಿ ನಾಯಕ (ಕಥೆಗಾರ) ಒಬ್ಬ ವೇಶ್ಯೆಯ ನೈಜ ಘಟನೆಯಾಧರಿತ ಕಥೆಯನ್ನು ಬರೆಯಲು ನಿರ್ಧರಿಸಿ ವೇಷಧಾರಿಯಾಗಿ ಒಬ್ಬ ವೇಶ್ಯೆಯ ಮನೆಗೆ ಹೋದಾಗ ಅಲ್ಲಿ ಕಾಣುವ ಅಸಹ್ಯ ವಾತಾವರಣ,ಆ ವೇಶ್ಯಾವಾಟಿಕೆಗೆ ಜಾಲದಲ್ಲಿ ಸಿಲುಕಿದ್ದ ಅಮಾಯಕ ಹೆಣ್ಣಿನ ಭೇಟಿ,ಅವಳ ದುಃಖದ ಕಥೆಯನ್ನು ತಿಳಿದುಕೊಂಡು ಬರೆಯಲು ಆರಂಭಿಸಿದಾಗ,ಆ ವೇಶ್ಯಾವಾಟಿಕೆಗೆ ಜಾಲದಿಂದ ತಪ್ಪಿಸಿಕೊಂಡು ಬಂದ ಆ ಅಮಾಯಕ ಹೆಣ್ಣಿಗೆ ತನ್ನ ಮನೆಯಲ್ಲಿ ಆಶ್ರಯವನ್ನು ನೀಡಿದ ಬಳಿಕ ಆ ಕಥೆಗಾರನ ಸಂಸಾರದಲ್ಲಿ ಬೀಸುವ ಬಿರುಗಾಳಿ, ಆಗುವ ಕಲಹ, ಅನುಮಾನ, ಇನ್ನೇನು ಸಂಸಾರವೇ ಛಿದ್ರಗೊಂಡಿತು ಎನ್ನುವಷ್ಟರಲ್ಲಿ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಯಾರೂ ಊಹಿಸಲಾಗದ ಅನಿರೀಕ್ಷಿತ ತಿರುವು ಆ ಅಮಾಯಕ ಹೆಣ್ಣಿನ ದುಸ್ಥಿತಿಗೆ ಕಾರಣನಾಗಿದ್ದವನು ತನ್ನ ಹೆಂಡತಿಯ ತಮ್ಮ ಎಂದು ತಿಳಿದಾಗ ಕಥಾ ನಾಯಕನಿಗೆ, ಹೆಂಡತಿಗೆ, ಆಕೆಯ ಕುಟುಂಬಕ್ಕೆ ಆಗುವ ಆಘಾತ, ಈ ರೀತಿಯಾಗಿ ಕಥೆಯಲ್ಲಿ ಅನಿರೀಕ್ಷಿತ ತಿರುವು ಕೊಡುವ ಚಾಣಾಕ್ಷತನ ಎಲ್ಲ ನಿರ್ದೇಶಕರಿಗೆ ಬರುವುದಿಲ್ಲ. ಮುಖ್ಯವಾಗಿ ಈ ಚಿತ್ರದಲ್ಲಿ ಅರ್ಥರಹಿತ ಅನುಮಾನ ಎಂದಿಗೂ ಒಳ್ಳೆಯದಲ್ಲ, ಎನ್ನುವ ಸಂದೇಶವಿದ್ದು ಅದರಿಂದ ಆಗುವ ಅನಾಹುತಗಳನ್ನು ಈ ಚಿತ್ರದಲ್ಲಿ ನೈಜವಾಗಿ ತೋರಿಸಲಾಗಿದೆ. ಅಲ್ಲದೇ ಇವರ ಮತ್ತು ಸಪ್ತ ಭಾಷೆ ನಟ ಅನಂತನಾಗ್ ಕಾಂಬಿನೇಷನಲ್ಲಿ ಮೂಡಿ ಬಂದ ಗಣೇಶನ ಮದುವೆ, ಗೌರಿ ಗಣೇಶ, ಗಣೇಶ ಸುಬ್ರಹ್ಮಣ್ಯ, ಗಣೇಶ ಐ ಲವ್ ಯು ಚಿತ್ರಗಳು ಕೂಡ ಜನಪ್ರಿಯತೆಯನ್ನು ಪಡೆದಿವೆ. ಇವರ ನಿರ್ದೇಶನದಲ್ಲಿ ಮೂಡಿ ಬಂದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ನಟನೆಯ ಡಾ.ಕೃಷ್ಣ, ನಾನೆಂದು ನಿಮ್ಮವನೇ, ಅಷ್ಟು ಮಾತ್ರವಲ್ಲ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ನಟಿಸಿದ ಅಮ್ಮಾವ್ರ ಗಂಡ ಎಂಬ ಹಾಸ್ಯ ಪ್ರಧಾನ ಚಿತ್ರ, ಮತ್ತು ತ್ರೀಪಾತ್ರದಲ್ಲಿ ನಟಿಸಿದ ಅಣ್ಣಾವ್ರ ಮಕ್ಕಳು ಎಂಬ ಸಾಹಸ ಪ್ರಧಾನ ಚಿತ್ರ ವನ್ನು ನಿರ್ದೇಶಿಸಿದ್ದಾರೆ. ಆದರೆ ಇವರ ಪ್ರತಿಭೆ ಕೇವಲ ಬೆಳ್ಳಿತೆರೆಗೆ ಸೀಮಿತವಾಗಿರಲಿಲ್ಲ, ಕಿರುತೆರೆಯವರೆಗೂ ವ್ಯಾಪಿಸಿತು. ಸಾಹಸ ಲಕ್ಷ್ಮಿಯರು, ಪ್ರೇಮ ಪಿಶಾಚಿಗಳು, ದಂಡ ಪಿಂಡಗಳು, ಟ್ರಿಣ್ ಟ್ರಿಣ್ ಟ್ರಿಣ್ , ಮದುವೆ ಮದುವೆ ಮದುವೆ, ದುಡ್ಡು ದುಡ್ಡು ದುಡ್ಡು ಎಂಬ ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಇಲ್ಲಿಯೂ ಕೂಡ ತಮ್ಮ ಮೂಲ ಕಂಟೆಂಟ್ ಹಾಸ್ಯವನ್ನು ಬಿಟ್ಟಿಲ್ಲ, ಇವರ ನಿರ್ದೇಶನದ ಧಾರಾವಾಹಿಗಳಲ್ಲಿ ಹಾಸ್ಯವೇ ಪ್ರಧಾನವಾಗಿದೆ. ಅದರಲ್ಲೂ ಇವರ ನಿರ್ದೇಶನದಲ್ಲಿ ಮೂಡಿ ಬಂದ ಟ್ರಿಣ್ ಟ್ರಿಣ್ ಟ್ರಿಣ್ ಧಾರಾವಾಹಿಯ ಕಥೆಯೇ ಕುತೂಹಲಕಾರಿಯಾಗಿದೆ. ಆ ಸಮಯದಲ್ಲಿ ಲ್ಯಾಂಡ್ ಪೋನ್ ಬಳಕೆ ಕೂಡ ಬಹಳಷ್ಟು ಇತ್ತು. ಈ ಧಾರಾವಾಹಿಯಲ್ಲಿ ಕೆಲವು ಚಿಕ್ಕ ಮಕ್ಕಳು ತಮ್ಮ ಮನೆಗೆ ಹೊಸದಾಗಿ ಬಂದ ಲ್ಯಾಂಡ್ ಪೋನ್ ನಿಂದ ಗೊತ್ತಿಲ್ಲದ ನಂಬರ್ ಗಳನ್ನು ಡಯಲ್ ಮಾಡಿ ಸುಳ್ಳು ಹೇಳುವುದು, ಹೆದರಿಸುವುದು, ಆದರೆ ಇವರು ಡಯಲ್ ಮಾಡಿದ ನಂಬರ್ ಒಬ್ಬ ಅಪರಾಧಿಗೆ ಕನೆಕ್ಟ್ ಆದಾಗ ಇವರ ಮಾತು ಕೇಳಿ ಭಯ ಪಡುವುದು, ಈ ಚಿಕ್ಕ ಮಕ್ಕಳ ಹುಡುಗಾಟಿಕೆ ತಮ್ಮಲ್ಲಿಯ ಒಬ್ಬ ಬಾಲಕನ ಸಾವಿಗೆ ಕಾರಣವಾಗುತ್ತದೆ. ಪೋಲೀಸರು ಚಿಕ್ಕ ಬಾಲಕನ ಸಾವಿನ ತನಿಖೆಯ ಜಾಡನ್ನು ಬೆನ್ನು ಹತ್ತಿದಾಗ ಮೊದಲೇ ಬೇಕಾಗಿದ್ದ ಪ್ರಮುಖ ಅಫರಾಧಿಯೇ ಈ ಬಾಲಕನ ಸಾವಿಗೆ ಕಾರಣ, ಈ ರೀತಿಯಾಗಿ ಕಥೆಯಲ್ಲಿ ವಿಚಿತ್ರ ತಿರುವುಗಳನ್ನು ಕೊಡುವುದರಲ್ಲಿ ನಿರ್ದೇಶಕ ಫಣಿ ರಾಮಚಂದ್ರರಿಗೆ ಯಾರೂ ಸಾಟಿಯಿಲ್ಲ. ಇವರ ನಿರ್ದೇಶನದಲ್ಲಿ ಮೂಡಿ ಬಂದ ಮತ್ತೊಂದು ಜನಪ್ರಿಯ ಧಾರಾವಾಹಿ ದಂಡ ಪಿಂಡಗಳು. ಡಿಗ್ರಿ ಪಡೆದ ಮೂವರು ನಿರುದ್ಯೋಗಿಗಳ ಕಥೆ, ಕೆಲಸವಿಲ್ಲದೆ ಪಡುವ ಕಷ್ಟ, ಎದುರಿಸುವ ಸಮಸ್ಯೆಗಳನ್ನು ಹಾಸ್ಯದ ರೂಪದಲ್ಲಿ ತೋರಿಸಿದ್ದಾರೆ. ಈ ಧಾರಾವಾಹಿಯ ಟೈಟಲ್ ಸಾಂಗ್ ದಂಡ ಪಿಂಡಗಳು ಈಗಲೂ ಸೆನ್ಸೇಷನಲ್ ಟ್ರೆಂಡ್ ನ್ನು ಸೃಷ್ಟಿಸಿದೆ. ಎರಡು ವರ್ಷಗಳ ಹಿಂದೆಯೇ ಯೂ ಟ್ಯೂಬ್ ಚಾನಲ್ ನಲ್ಲಿ ಈ ಟೈಟಲ್ ಸಾಂಗ್ ನ್ನು ಅಪ್ಲೋಡ್ ಮಾಡಿದ್ದು ಇದುವರೆಗೂ ೩.೨ K views ಕಂಡಿದೆ. ಇವರ ನಿರ್ದೇಶನದ ದುಡ್ಡು ದುಡ್ಡು ದುಡ್ಡು, ಮದುವೆ ಮದುವೆ ಮದುವೆ, ಪ್ರೇಮ ಪಿಶಾಚಿಗಳು ಧಾರಾವಾಹಿಗಳಲ್ಲಿ ರಸವತ್ತಾದ ಹಾಸ್ಯದ ಹೊಳೆಯನ್ನು ಹರಿಸಿದ್ದಾರೆ. ಅಸಾಧಾರಣ ಪ್ರತಿಭೆಯನ್ನು ಹೊಂದಿರುವ ಸದಭಿರುಚಿ ಚಿತ್ರಗಳ ನಿರ್ದೇಶಕರಾದ ಇವರು ೨೦೦೮ ರಲ್ಲಿ ವಿಜಯ ರಾಘವೇಂದ್ರ ನಟಿಸಿದ ಗಣೇಶ ಮತ್ತೆ ಬಂದ ಎಂಬ ಚಿತ್ರವನ್ನು ನಿರ್ದೇಶಿಸಿದರು. ಆದರೆ ಈ ಚಿತ್ರವು ತೆರೆ ಕಂಡು ಹತ್ತು ವರ್ಷಗಳಿಗೂ ಅಧಿಕ ಕಾಲವಾಗಿದ್ದು ನಂತರ ಇವರ ನಿರ್ದೇಶನದಲ್ಲಿ ಯಾವ ಚಿತ್ರವೂ ಬಂದಿಲ್ಲ. ಯಾಕೆ? ಎನ್ನುವುದೇ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಕಾರಣ ಇವರು ಪುನಃ ಕನ್ನಡ ಚಿತ್ರರಂಗದಲ್ಲಿ ಉತ್ತಮ ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಬೇಕೆಂಬುದು ಪ್ರತಿಯೊಬ್ಬ ಕನ್ನಡಿಗನ ಇಚ್ಚೆ ಕೂಡ ಆಗಿದೆ.
ಆದರೆ ಉತ್ತರ?
I am always king in my World.Writer, short movie producer and director.