ಫ್ಯಾಮಿಲಿ ಡಾಕ್ಟರ

ProfileImg
18 May '24
4 min read


image

         "ವೈದ್ಯೋ ನಾರಾಯಣ  ಹರಿಯೇ."...ಎನ್ನುವ  ಉಕ್ತಿಯಂತೆ  ವೈದ್ಯರು ನಮ್ಮ  ಪಾಲಿಗೆ ದೇವರೇ ಎಂದರೆ  ತಪ್ಪಾಗಲಿಕ್ಕಿಲ್ಲ!!
    ವೈದ್ಯ  ವೃತ್ತಿ ಯೆನ್ನುವದು ಬಹಳ ಉದಾತ್ತವಾದ ಮತ್ತು  ಘನವಾದ ವೃತ್ತಿಯಾಗಿದೆ. ಅದಕ್ಕೆ  ಅದರದೇ  ಆದ ಘನತೆಯಿದೆ. ದೇವರು  ತಾನು ಎಲ್ಲ  ಕಡೆಯಿರುವದು ಸಾಧ್ಯವಿಲ್ಲವೆಂದು ತಾಯಿಯನ್ನು  ಸೃಷ್ಟಿಸಿದಂತೆ , ಅದೇ ತರಹ ವೈದ್ಯರನ್ನು  ಸೃಷ್ಟಿಸಿರಬೇಕು ಎಂದು ಅನಿಸುತ್ತದೆ. !!
   "ವೈದ್ಯ ವೃತ್ತಿ ಒಂದು ತಪಸ್ಸು ಇದ್ದಂತೆ " !! 
ಗುರುಕುಲದಲ್ಲಿ  ಋಷಿಗಳ ವರ್ಷ ಗಟ್ಟಲೇ  ತಪಸ್ಸು  ಮಾಡಿ ಸಿದ್ಧಿ ಪಡೆಯುವ ತರಹ ಈ ವೈದ್ಯರ  ಜೀವನವೂ  ಹಾಗೆಯೇ ಎಂದರೆ ಅತಿಶಯೋಕ್ತಿ ಯಾಗಲಾರದು. 
     ಹತ್ತಾರು  ವರ್ಷ ಮನಸ್ಸು  ಗೊಟ್ಟು  ಓದಿ ಪದವಿ ಪಡೆದುಕೊಂಡು  ತಮ್ಮ  ಜೀವಮಾನವೀಡಿ ರೋಗಿಗಳ ಸೇವೆ ಮಾಡುವದು  ಸಾಮಾನ್ಯ ಮಾತಲ್ಲ.  
     ತಮ್ಮ  ವೈಯಕ್ತಿಕ  ಸಮಸ್ಯೆಗಳು  ಎಷ್ಟೇ  ಇದ್ದರೂ  ಅವುಗಳ ನಡುವೆಯೇ  ತಮ್ಮ  ಮನಸ್ಥಿತಿಯನ್ನು  ಹಿಡಿತದಲ್ಲಿಟ್ಟುಕೊಂಡು  ರೋಗಿಗಳಿಗೆ  ಸೂಕ್ತವಾದ ಚಿಕಿತ್ಸೆಯನ್ನು  ನೀಡುವುದರಲ್ಲಿ  ಅವರ ಹಿರಿಮೆ ದೊಡ್ಡದು.  
   ಜೀವನ್ಮರಣದ  ನಡುವೆ ಹೋರಾಡುವ  ರೋಗಿಗಳನ್ನು  ಪ್ರಾಣಾಪಾಯದಿಂದ  ಪಾರುಮಾಡಲು  ವೈದ್ಯರು ಹರಸಾಹಸ  ಪಡುವದನ್ನು  ಯಾರೂ ಅಲ್ಲಗಳೆಯುವಂತಿಲ್ಲ. ಅದಕ್ಕಾಗಿ  ನಾವು ವೈದ್ಯರಿಗೆ ಚಿರರುಣಿಯಾಗಿರಲೇಬೇಕು. 
    ಎಲ್ಲಾ  ವೈದ್ಯರು ಸಾಕಷ್ಟು  ಓದಿರುತ್ತಾರೆ , ರೋಗಿಗಳನ್ನು ಗುಣಪಡಿಸುವಲ್ಲಿ ಯಶಸ್ವಿ ಯಾಗಿರುತ್ತಾರೆ  . ಹೀಗೆ ಎಷ್ಟೋ  ಜನ ವೈದ್ಯರು ನಮ್ಮ  ಜೀವನದಲ್ಲಿ  ಬಂದು ಹೋಗುತ್ತಾರೆ  . ಅದರಲ್ಲಿ ನೆನಪಿನಲ್ಲಿ  ಉಳಿಯುವವರು  ಕೆಲವರು ಮಾತ್ರ. 
       ಅದರಲ್ಲೂ   ಮೊದಲೆಲ್ಲ  ಒಂದು ಕುಟುಂಬದವರೆಲ್ಲಾ  ಮೊದಲಿನಿಂದಲೂ  ಒಬ್ಬರೇ  ವೈದ್ಯರ  ಹತ್ತಿರ  ತಪಾಸಣೆ  ಮಾಡಿಸಿಕೊಳ್ಳುತ್ತಿದ್ದರು  . ಅವರೊಂದು  ತರಹ ನಮ್ಮ  ಕುಟುಂಬಕ್ಕೆ  ಆಪ್ತರಾಗಿ ಬಿಡುತ್ತಿದ್ದರು  . ಹೀಗೆ  ನಮ್ಮ  ಕುಟುಂಬಕ್ಕೆ  ಒಬ್ಬ ವೈದ್ಯರು ಆಪ್ತರಾಗಿ  ಬಿಟ್ಟಿದ್ದರು.   ಅವರು ಎಮ್. ಬಿ .ಬಿ ಎಸ್. ಓದಿದ್ದರು .  ಅವರು ಹೆಚ್ಚಿನ ಡಿಗ್ರಿಗಳನ್ನು ಮಾಡದಿದ್ದರೂ ನಮ್ಮ ರೋಗಗಳನ್ನು ಸರಿಯಾಗಿ ಕಂಡು ಹಿಡಿಯುವದಲ್ಲದೇ  ಅವುಗಳಿಗೆ ಸೂಕ್ತ ವಾದ ಚಿಕಿತ್ಸೆಯನ್ನು  ನೀಡುತ್ತಿದ್ದರು.  
       ಅವರು ಕೇವಲ ನಮ್ಮ  ಆರೋಗ್ಯವನ್ನು  ವಿಚಾರಿಸಿ ಔಷಧವನ್ನು ಕೊಡುವದಷ್ಟೇ ತಮ್ಮ  ಕೆಲಸವೆಂದು  ತಿಳಿಯುತ್ತಿರಲಿಲ್ಲ . ನಮ್ಮ  ಕಷ್ಟ  ಸುಖದಲ್ಲಿ ಭಾಗಿಯಾಗುತ್ತಿದ್ದರು . ಏನಾದರೂ ಸಮಸ್ಯೆಗಳಿದ್ದಲ್ಲಿ  , ಅದಕ್ಕೆ  ಸ್ಪಂದಿಸಿ  ಏನಾದರೂ ಸಲಹೆ ಸೂಚನೆ ಕೊಡುತ್ತಿದ್ದರು . 
          ನಾವು ತಪಾಸಣೆಗೆಂದು ಅವರ ಹತ್ತಿರ  ಹೋದಾಗ  ಅವರು ನಗುಮುಖದಿಂದ  ನಮ್ಮನ್ನು   ಮಾತನಾಡಿಸುತ್ತಿದ್ದರು . ಅವರ ನಗುಮುಖ  , ಮೃದುವಾದ ಮಾತುಗಳು ನಮ್ಮ  ನೋವನ್ನು  ಅರ್ಧ  ಕಡಿಮೆ ಮಾಡುತ್ತಿದ್ದವು ಎಂದು ನಮಗೆಲ್ಲ  ಅನಿಸುತ್ತಿತ್ತು  . 
        ಈಗೆಲ್ಲ   ಸಾಕಷ್ಟು  ವೈದ್ಯರು ದೇಹದ ಪ್ರತಿಯೊಂದು ಅಂಗಾಂಗಕ್ಕೆ  ಒಬ್ಬೊಬ್ಬರಂತೆ ಹೆಚ್ಚಿನ  ಡಿಗ್ರಿ ಪಡೆದು ಬಂದಿರುವರು . ಅವರ ಹೆಸರಿನ  ಮುಂದೆ ಡಿಗ್ರಿಗಳ ಸಾಲೇ ಇರುತ್ತದೆ  . ಮೊದಲೆಲ್ಲ  ಕೇವಲ ಎಂ .ಬಿ. ಬಿ .ಎಸ್  ಕಲಿತ ವೈದ್ಯರೇ ಎಲ್ಲ  ಬಗೆಯ   ರೋಗಗಳನ್ನು  ತಪಾಸಣೆ ಮಾಡಿ ಔಷದ ಕೊಟ್ಟು  ಗುಣಪಡಿಸುತ್ತಿದ್ದರು .
ಈಗೀಗ ಕೆಲವು ವೈದ್ಯರು ರೋಗಿಗಳನ್ನು ಐದು , ಹತ್ತು  ನಿಮಿಷದಲ್ಲಿ ತಪಾಸಣೆ ಮಾಡಿ ಔಷಧ  ಬರೆದು ಕಳಿಸಿಬಿಡುತ್ತಾರೆ ..ನಗುಮುಖವಂತೂ ಇರುವುದೇ ಇಲ್ಲ  . " ಮುಖದ ಮೇಲೆ ನಗು ಇಲ್ಲದವನು  ವೈದ್ಯನಾಗಲು  ಸೂಕ್ತನಲ್ಲ ", ಎಂಬ ಗಾದೆಯೊಂದಿರುವದು ಇಂತಹವರ ಸಲುವಾಗಿಯೇ  ಇರಬಹುದು . ವೈದ್ಯ ಮತ್ತು  ರೋಗಿಯ  ನಡುವೆ ಆಪ್ತತೆಯೇ ಬರುವುದಿಲ್ಲ     
         ನಮ್ಮ  ಕುಟುಂಬದ ಆಪ್ತ  ವೈದ್ಯರ   ಹತ್ತಿರ  ನಾವು  ಆರೋಗ್ಯ  ತಪಾಸಣೆಗೆ ಹೋದಾಗ , ಹೋದ  ತಕ್ಷಣ ಅವರು  ನಮ್ಮ  ರಕ್ತ ದೊತ್ತಡ   ನೋಡುತ್ತಿರಲಿಲ್ಲ. ಮೊದಲು ಅವರು ನಗುಮುಖದಿಂದ  ಮಾತನಾಡುತ್ತಾ , ಏನಾದರೂ ಸಂತೋಷದ ವಿಷಯಗಳನ್ನು  ಹೇಳುತ್ತಾ  ರಕ್ತದೊತ್ತಡದ   ತಪಾಸಣೆ ಮಾಡುತ್ತಿದ್ದರು....ಈಗೆಲ್ಲ  ಯಾರು  ಇಷ್ಟೊಂದು ಯೋಚನೆ ಮಾಡುತ್ತಾರೆ ....ರೋಗಿಯ  ಮನಸ್ಥಿತಿ ಸಂತೋಷದಿಂದ ಇದ್ದರೆ  ರಕ್ತದೊತ್ತಡದ ಏರಿಳಿತ ಒಂದು ಹಂತಕ್ಕೆ  ಬರುತ್ತದೆ  ಎಂದು ,  ಅವರು ಮನಗಂಡಿದ್ದರು ಅನಿಸುತ್ತದೆ . 
              ನಮ್ಮ  ಮಗಳು ಎರಡನೇ ಪಿ.ಯು.ಸಿ. ಪರೀಕ್ಷೆ  ಮುಗಿಸಿದ  ನಂತರ  ಯಾವ  ಡಿಗ್ರಿ  ಓದಿಸಬೇಕೆಂಬ  ಯೋಚನೆಯಲ್ಲಿ  ನಾವು ಇದ್ದೆವು..ದಂತ ವೈದ್ಯೆ  ಆಗಬೇಕೆಂಬುದು ನಮ್ಮ  ಮಗಳ ಕನಸಾಗಿತ್ತು . 
        ನಮ್ಮ ಕುಟುಂಬದ ವೈದ್ಯರ  ಹತ್ತಿರ  ತಪಾಸಣೆಗೆ ಹೋದಾಗ   ನಮ್ಮ  ಮಗಳು  ದಂತ ವೈದ್ಯೆ ಆಗಬೇಕೆನ್ನುವ  ಇಚ್ಛೆಯನ್ನು ಅವರ ಮುಂದೆ ಪ್ರಸ್ತಾಪಿಸಿದೆವು. 
      ಆಗ ಅವರು ನಮ್ಮ  ಜಾತಿ ಯಾವುದೆಂದು ಕೇಳಿ ತಿಳಿದುಕೊಂಡು  , ನಮ್ಮ  ಜಾತಿ  ಯಾವ  ಕೆಟಗೆರೆಯಲ್ಲಿ   ಬರುತ್ತದೆ  ಎಂಬುದನ್ನು  ನಮಗೆ ತಿಳಿಸಿದರು. ಅದಕ್ಕೆ  ನಾವು ಜಾತಿ ಮತ್ತು  ಆದಾಯ ಪ್ರಮಾಣಪತ್ರ  ಮಾಡಲು ಸಲಹೆ ನೀಡಿದರು.. ಅದರಲ್ಲಿ  ನಮ್ಮ  ಮಗಳಿಗೆ  ಸೀಟು ಸಿಗುವ ಅವಕಾಶ ಇರುತ್ತದೆ  ಎಂದು  ನಮ್ಮಲ್ಲಿ  ಭರವಸೆ ಹುಟ್ಟಿಸಿದರು. ನಮಗೆ  ಇದರ ಬಗ್ಗೆ ಯಾವುದೂ ಮಾಹಿತಿ ಇದ್ದಿರಲಿಲ್ಲ.
      ಅವರ ಸಲಹೆಯ  ಮೇರೆಗೆ  ಜಾತಿ ಮತ್ತು  ಆದಾಯ  ಪ್ರಮಾಣಪತ್ರ  ಮಾಡಿಸಿದೆವು. ನಮ್ಮ  ಮಗಳು ಸಿ.ಇ.ಟಿ . ಪ್ರವೇಶ  ಪರೀಕ್ಷೆಯಲ್ಲಿ    ಉತ್ತಮ  ಶ್ರೇಣಿಯಲ್ಲಿ   ಪಾಸಾಗಿ  ದಂತ ವೈದ್ಯಕೀಯ  ಸೀಟನ್ನು  ಗಿಟ್ಟಿಸಿ ಕೊಳ್ಳುವಲ್ಲಿ  ಯಶಸ್ವಿಯಾದಳು.
            ಅದೇ ರೀತಿ ನಮ್ಮ  ಮಗಳು ಡಿಗ್ರಿ  ಪೂರ್ತಿ  ಮುಗಿಸಿ ಈಗ ವಿದೇಶದಲ್ಲಿ  ದಂತ ವೈದ್ಯೆ  ಯೆಂದು ಸೇವೆ ಸಲ್ಲಿಸುತ್ತಿದ್ದಾಳೆ. 
              ನಮ್ಮ  ಕುಟುಂಬದ  ವೈದ್ಯರು ಮಾಡಿದ ಉಪಕಾರವನ್ನು  ನಾವೆಂದೂ  ಮರೆಯಲು ಸಾಧ್ಯವಿಲ್ಲ. 
     ನಮ್ಮ  ಕುಟುಂಬದ  ಆ ವೈದ್ಯ ರು  ನಮ್ಮಂತಹವರು ತಪಾಸಣೆಗೆ ಹೋದಾಗ  ಅವರವರ  ಮಕ್ಕಳ  ಮದುವೆಯ  ಬಗ್ಗೆ  ವಿಚಾರಣೆ ಮಾಡಿ , ತಮ್ಮ ತಮ್ಮ  ಹತ್ತಿರ  ಬರುವ  ಕುಟುಂಬದವರಲ್ಲಿ  ವಧು ವರ  ಹೊಂದಿಕೆ ಯಾಗುವ  ಬಗ್ಗೆ  ಪ್ರಸ್ತಾಪ ಮಾಡುತ್ತಿದ್ದರು.  ಇದರಿಂದ  ಯಾರಿಗಾದರೂ ಸಹಾಯವಾಗುತ್ತದೆ  ಎನ್ನುವ  ಸದುದ್ದೇಶ ಅವರದಾಗಿತ್ತು.  ಅದರ ಹೊರತಾಗಿ  ಅವರೇನೂ ಮದುವೆ ಮಾಡಿಸುವ  ಏಜಂಟರಾಗಿರಲಿಲ್ಲ.
      ಹಾಗಂತ ಅವರ ಕ್ಲಿನಿಕ್ ಗೆ ಬರುವ ರೋಗಿಗಳೇನೂ  ಕಡಿಮೆ  ಇರುತ್ತಿರಲಿಲ್ಲ, ಕ್ಲಿನಿಕ್  ಯಾವಾಗಲೂ  ಜನರಿಂದ  ತುಂಬಿರುತ್ತಿತ್ತು.  ಅದರಲ್ಲೇ  ಸಮಯ  ಸರಿದೂಗಿಸಿ ಕೊಂಡು ಇತರರಿಗೆ  ಒಳ್ಳೆಯದು  ಮಾಡಬೇಕೆನ್ನುವದು ಅವರ ಉದ್ದೇಶ ವಾಗಿತ್ತು.  ಹೀಗಾಗಿ  ಕೆಲವರಿಗೆ ಸಲಹೆ ,ಸೂಚನೆ  ಕೊಡುತ್ತಿದ್ದರು. 
 ಅವರಿಗೆ  ಇತ್ತೀಚೆಗೆ  ಕಿಡ್ನಿ  ಸಮಸ್ಯೆಯಾಗಿ  ಆರೋಗ್ಯದಲ್ಲಿ  ಏರುಪೇರಾಯಿತು. ವಾರಕ್ಕೆರಡು  ಬಾರಿ ಬೇರೆ ಹಾಸ್ಪಿಟಲ್ ಗೆ ಹೋಗಿ ಡಯಾಲಿಸಿಸ್  ಮಾಡಿಕೊಂಡು ಬರುತ್ತಿದ್ದರು.  ಆದರೂ ತಮ್ಮ  ಕ್ಲಿನಿಕ್ ಗೆ  ಬರುವ ರೋಗಿಗಳನ್ನು  ತಪಾಸಣೆ ಮಾಡುತ್ತಿದ್ದರು.   ಅವರಿಗೆ ಆರೋಗ್ಯ ದಲ್ಲಿ  ಸಮಸ್ಯೆಯಾಗಿದ್ದು  ಕೇಳಿ  ನಮಗಂತೂ ಅತೀವ ದುಃಖ  ವಾಯಿತು.  ಈ ರೋಗವೆಂಬುದು ಯಾರನ್ನೂ  ಬಿಡುವುದಿಲ್ಲವಲ್ಲ  ಎಂದು ಮನಸ್ಸಿಗೆ  ಬೇಸರವೂ ಆಯಿತು.  ಅವರು ಮಾತ್ರ  ಬಂದ ರೋಗಿಗಳನ್ನು  ನಗುಮುಖದಿಂದ ದಿಂದಲೇ ಎಲ್ಲರನ್ನು  ಮಾತನಾಡಿಸಿ ತಪಾಸಣೆ  ಮಾಡಿ  ಕಳುಹಿಸುತ್ತಿದ್ದರು.   ತಾವೇ ತಮ್ಮ ಡಯಾಲಿಸಿಸ್   ಮಾಡಿಸಿಕೊಂಡ  ಬಗ್ಗೆ ಹೇಳಿ ಕೊಳ್ಳುತ್ತಿದ್ದರು . ಧೈರ್ಯ ದಿಂದ ಬಂದದ್ದನ್ನು  ಎದುರಿಸಬೇಕು ಎಂದು  ಕೂಡಾ ಹೇಳುತ್ತಿದ್ದರು.  
             ಸ್ವಲ್ಪ  ದಿನಗಳ ಹಿಂದೆ ನಮ್ಮ ಕುಟುಂಬದ  ಆ  ವೈದ್ಯರು ಇಹಲೋಕ  ಯಾತ್ರೆ  ಮುಗಿಸಿದರೆಂದು  ತಿಳಿದಾಗ  ಆಪ್ತರೊಬ್ಬರನ್ನು ಕಳೆದುಕೊಂಡಷ್ಟು  ಅತೀವ ದುಃಖವಾಯಿತು 

Category:Personal Experience



ProfileImg

Written by Shobha Siddannavar