"ಬೆಣ್ಣೆ ಕದ್ದು ತಿಂದನು ಮೊಸರನೆಲ್ಲ ಸುರಿದನು " ಅಂತ ಬೆಣ್ಣೆ ಕಳ್ಳ ಕೃಷ್ಣನ ಮೇಲೆ
ಗೋಪಿಕೆಯರು ಯಶೋದೆಯಲ್ಲಿ ದೂರಿದಾಗ ....
"ಹೌದೇನೋ, ನಿಜವೇನೋ" ಅಂತ ಆಕೆ ಕೃಷ್ಣನಲ್ಲಿ ಕೇಳುವಾಗ “ನಾನು ಬೆಣ್ಣೆ ಕಳ್ಳಲಿಲ್ಲ, ಮೊಸರು ಚೆಲ್ಲಲಿಲ್ಲ, ಗೆಳೆಯರೇ ಮಾಡಿದ್ದು” ಅಂತ ಸುಳ್ಳು ಹೇಳುತ್ತಾನೆ ಬೆಣ್ಣೆ ಕಳ್ಳ ಕೃಷ್ಣ.
ಹಾಂ...ದೇವರೇ ಸುಳ್ಳು ಹೇಳುವಾಗ ಶಿಕ್ ೆ ಯಿಂದ ತಪ್ಪಿಸಿಕೊಳ್ಳಲು ಮಕ್ಕಳು ಸುಳ್ಳು ಹೇಳಿದರೆ ಏನು ತಪ್ಪು ಅಲ್ಲವೇ? ಅದೊಂದು ಕಥೆಯಾದರೆ ಸತ್ಯಕ್ಕಾಗಿ ಮಡದಿ ಮಗನನ್ನು ಮಾರಿ ಬವಣೆ ಪಟ್ಟ ರಾಜ ಸತ್ಯ ಹರಿಶ್ಚಂದ್ರನ ಕಥೆಯೂ ಸುಪ್ರಸಿದ್ಧ. ಗಾಂಧೀಜಿಯವರು ಸತ್ಯ ಹೇಳಲು ಪ್ರಭಾವಿತರಾದುದು ಸತ್ಯಹರಿಶ್ಚಂದ್ರ ನಾಟಕದಿಂದ!
"ತೋಳ ಬಂತು ತೋಳ" ಎಂದು ಸುಳ್ಳು ಹೇಳಿ ತಮಾಷೆ ಮಾಡಿದ ಹುಡುಗನಿಗೆ ನಿಜವಾದ ತೋಳ ಬಂದಾಗ ಯಾರೂ ಸಹಾಯಕ್ಕೆ ಬರಲಿಲ್ಲ.ಈ ಮೇಲಿನ ಮೂರೂ ಕಥೆಗಳು ಸತ್ಯ ಸುಳ್ಳುಗಳ ಪರಿಣಾಮದ ಬಗ್ಗೆ ತಿಳಿಸುತ್ತವೆ.
ನಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಎಷ್ಟೊಂದು ಸುಳ್ಳಿನ ವ್ಯವಹಾರಗಳು ನಡೆಯುತ್ತವೆ ಗೊತ್ತಾ.. ಜಾಹೀರಾತುಗಳನ್ನು ನೋಡಿದರೆ ಸಾಕು ಅವೆಲ್ಲಾ ಸುಳ್ಳು ಅಂತ ತಿಳಿಯುತ್ತದೆಯಲ್ಲವೇ. ಕೆಲವು ಔಷಧಿಗಳು ಸರ್ವ ರೋಗಕ್ಕೂ ಮದ್ದು, ಇನ್ನು ಕೆಲವು ಮಕ್ಕಳ ಆಹಾರ ಅವರನ್ನು ತರಗತಿಗೇ ಫಸ್ಟ್ ಮಾಡಿಬಿಡುತ್ತವೆ. ಇನ್ನು ಭವಿಷ್ಯಹೇಳುವವರು ಹೇಳಿದಂತೆ ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಕಾಲು ಮುರಿದು ಬಿದ್ದು ಕೊಂಡಿರುತ್ತಾಳೆ.ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ....ಇನ್ನು ಜಾಹೀರಾತಿನಲ್ಲಿ ತೋರಿಸ್ತೀನಿ ಎಣ್ಣೆ ಹಾಕಿದರೆ ತಲೆಯಲ್ಲಿ ಹುಲ್ಲಿನಂತೆ ಕೂದಲು ಹುಟ್ಟುತ್ತದೆ.ಆಹಾ...ಪ್ರಯೋಗ ಮಾಡಿ ನೋಡಿ!
'ಸತ್ಯಮೇವ ಜಯತೇ' ಎಂಬುದು ಎಷ್ಟು ಸತ್ಯ ಎಂಬುದು ನ್ಯಾಯಾಲಯಕ್ಕೆ ಹೋದಾಗ ತಿಳಿಯುತ್ತದೆ. ಸುಳ್ಳಿನ ಬಗ್ಗೆ ಬರೆಯಲು ವಕೀಲರಿಗೆ ಒಳ್ಳೆಯ ವಿಷಯ.ಯಾಕೆಂದರೆ ಸತ್ಯ ಹೇಳುವವರೂ , ಸುಳ್ಳು ಹೇಳುವವರೂ ಪ್ರತಿಜ್ಞೆ ಮಾಡುವುದು 'ಸತ್ಯವನ್ನೇ ಹೇಳುತ್ತೇನೆ' ಅಂತ ಅಲ್ಲವೇ. ಅದು ಹೇಗೆ ಅನ್ಯಾಯ ಮಾಡಿದವರದು ಮತ್ತು ಅನ್ಯಾಯಕ್ಕೆ ಒಳಗಾದವರದು ಎರಡೂ ಸತ್ಯ ವಾಗಿರಲು ಸಾಧ್ಯ?
ಇಬ್ಬರಲ್ಲಿ ಒಬ್ಬರು ಸುಳ್ಳು ಹೇಳಲೇ ಬೇಕಲ್ಲವೇ. ಎರಡೂ ಕಡೆಯವರು ಸತ್ಯ ಹೇಳಿದರೆ ನ್ಯಾಯಾಲಯಕ್ಕೆ ಕೇಸುಗಳು ಬರಲಿಕ್ಕಿಲ್ಲ! ತಮ್ಮ ಗಿರಾಕಿಗಳಿಗೆ ಸುಳ್ಳು ಹೇಳಲು ಕಲಿಸುವುದು ವಕೀಲರಿಗೆ ಅನಿವಾರ್ಯ! ಯಾಕೆಂದರೆ ತನ್ನ ಗಿರಾಕಿ ಗೆಲ್ಲುವಂತೆ ಮಾಡಬೇಕಲ್ಲಾ! (ವಕೀಲರ ಕ್ಷಮೆ ಕೋರಿ).
ಸುಳ್ಳು ಹೇಳಿ ಇನ್ನೊಬ್ಬರಿಗೆ ಅನ್ಯಾಯ ಮಾಡಬಾರದು.ಆದರೆ ಹಿಂದಿನ ಕಾಲದಲ್ಲಿ ಸುಳ್ಳು ಹೇಳುವುದು ತುಸು ಹೆಚ್ಚೇ ಇತ್ತೇನೋ. ಈಗಿನ ಕಾಲದಲ್ಲಿ ಸುಳ್ಳನ್ನು ಕಂಡು ಹಿಡಿಯುವುದು ಸುಲಭ! ಅಪರಾಧಗಳನ್ನು ಕಂಡು ಹಿಡಿಯಲು ರೈ ಡಿಟೆಕ್ಟರ್ ಗಳಿವೆ .
ಅಕ್ಬರ್ ಬೀರಬಲ್ನ ಕಥೆಯಲ್ಲಿರುವಂತೆ ನಾನು ಚಿಕ್ಕ ಮಕ್ಕಳು ಪೆನ್ನು ಪೆನ್ಸಿಲ್ , ಹಣ ಕಳ್ಳತನ ಮಾಡಿದರೆ ಕಳ್ಳತನ ಮಾಡಿದವರ ಕೈ, ಮೂಗು, ,ಕಿವಿ ಮರುದಿನ ಉದ್ದಕ್ಕೆ ಬೆಳೆಯುತ್ತದೆ ಅಂತ ಹೇಳಿ ಹೆದರಿಸುತ್ತಿದ್ದೆ. ಆಗ ಸದ್ದಿಲ್ಲದೆ ಕದ್ದ ಸಾಮಾನುಗಳು ವಾಪಾಸು ಸಿಗುತ್ತಿದ್ದವು.
ಪೋಲೀಸರ ಟ್ರಿಕ್ ಅದೇ... ಸುಳ್ಳನ್ನು ಸುಳ್ಳಿನಿಂದಲೇ ಕಂಡುಹಿಡಿಯುವುದು.ಒಬ್ಬ ಅಪರಾಧಿಯಲ್ಲಿ ನಿನ್ನ ಜೊತೆಯವನು ಎಲ್ಲಾ ಹೇಳಿದ್ದಾನೆ ಅಂತ ಅವನ ಹೇಳಿ ಅವನನ್ನು ನಂಬುವಂತೆ ಮಾಡಿ ಬಾಯಿ ಬಿಡಿಸುವುದ ಟ್ರಿಕ್.
ಇನ್ನೊಬ್ಬರಿಗೆ ಒಳ್ಳೆಯದಾಗುವುದಾದರೆ ಸುಳ್ಳು ಹೇಳಿದರೆ ಅಡ್ಡಿಯಿಲ್ಲ. ಆ ಸುಳ್ಳಿನಿಂದ ಒಂದು ಜೀವ ಉಳಿಯುವುದಾದರೆ ಸುಳ್ಳು ಪಾಪವಲ್ಲ.
ಇನ್ನು ಕೆಲವರಿಗೆ ಸುಳ್ಳು ಹೇಳುವುದು ನೀರು ಕುಡಿದಷ್ಟೇ ಸಹಜ.ಹೇಗೆ ಹಿಂದೆ ಹೇಳಿದ ಸುಳ್ಳನ್ನು ನೆನಪಿಟ್ಟುಕೊಳ್ಳುತ್ತಾರೋ ತಿಳಿಯದು.ಬೀಸುವ ದೊಣ್ಣೆ ತಪ್ಪಿಸಲು ಭಯಂಕರ ಸುಳ್ಳು ಹೇಳುವವರಿದ್ದಾರೆ.ವಿದ್ಯಾರ್ಥಿಗಳಿಗೆ ಹೊಟ್ಟೆನೋವು ಬೇಕಾದಾಗಲೆಲ್ಲಾ ಬಂದುಬಿಡುತ್ತದೆ.
ನನ್ನ ಸಹಪಾಠಿ ಯೊಬ್ಬಳು ಮೊದಲಬಾರಿಗೆ ಹಾಸ್ಟೆಲ್ ನಲ್ಲಿ ಇದ್ದುದು. ಮನೆಗೆ ಹೋಗಲು ತುಡಿತ.ಅದಕ್ಕೆ ಅವಳು ಮನೆಗೆ ಹೋಗಲು ವಾರ್ಡನ್ಗೆ ಸುಳ್ಳು ಹೇಳಿದ್ದೇನೆಂದರೆ ತಂದೆಗೆ ಹಾರ್ಟ್ ಅಟಾಕ್ ಆಗಿದೆ ಅಂತ . ಅಷ್ಟೇ ಅಲ್ಲ. ತಂದೆಗೆ ಹೇಗಿದೆಯೋ ಏನೋ ಅಂತ ಉದ್ದದ ಪತ್ರವನ್ನೂ ತನ್ನ ಗೆಳತಿಗೆ ಬರೆದು ಹಾಕಿದ್ದಳು.ಎಲ್ಲರೂ ಅಯ್ಯೋ ಪಾಪ ಅಂತ ಹೇಳಿದ್ದೇ ಹೇಳಿದ್ದು.
ಗಂಡ ಹೆಂಡತಿಗೆ ,ಹೆಂಡತಿ ಗಂಡನಿಗೆ ಹಣದ ವಿಚಾರದಲ್ಲಿ ಸುಳ್ಳು ಹೇಳುವ ಕಥೆಗಳೆಷ್ಟೋ. ಹಣಕ್ಕೆ ಕೊರತೆಯಾದಾಗ ಇಂತದ್ದೆಲ್ಲಾ ಸಾಮಾನ್ಯ.
ಇನ್ನು ಅತ್ತೆ ಸೊಸೆಯ ನಡುವೆಯೂ ಸುಳ್ಳಿನ ವ್ಯವಹಾರ ನಡೆಯುತ್ತಿದೆ. ಗಂಡನ ಹಣದಲ್ಲಿ ಚಿನ್ನದ ಸರ ಮಾಡಿಸಿ ಅತ್ತೆಯ ಹತ್ತಿರ ತವರು ಮನೆಯವರು ಕೊಟ್ಟದ್ದು ಅಂತ ಸುಳ್ಳು ಹೇಳುವ ಸೊಸೆಯಂದಿರಿದ್ದಾರೆ.
ಭಯ ಇದ್ದಾಗ ,ಸ್ವಾರ್ಥ ಇದ್ದಾಗ, ಲೋಭ ಇದ್ದಾಗ ತಮ್ಮ ಇಚ್ಛೆ ಪೂರೈಸಿಕೊಳ್ಳಲು ಬೇಕಾದ ಆಯುಧ ಸುಳ್ಳು!.
ಎಲೆಯಿಂದ ಪೆಟ್ರೋಲ್ ತೆಗೆಯುತ್ತೇನೆ ಎಂದು ಹೇಳಿ ಎಲ್ಲರನ್ನೂ ಮಂಗ ಮಾಡಿದ ರಾಮರ್ ಪಿಳ್ಳೆ, , ಡ್ರೋನ್ ಮಾಡಿದ್ದೇನೆಂದು ಕಾಗೆ ಹಾರಿಸಿದ ಮಂಡ್ಯದ ಹುಡುಗ ಪ್ರತಾಪ್ ಇವರಿಗೆಲ್ಲಾ ಕೀರ್ತಿ ಪಡೆಯುವ ಹಂಬಲ.ಆದರೆ ಜನರನ್ನು ಒಂದಷ್ಟು ದಿನವಾದರೂ ಮೂರ್ಖ ಮಾಡಿದ ಚಾಲಾಕುತನಕ್ಕೆ ಶಹಬ್ಬಾಸ್ ಹೇಳಲೇ ಬೇಕಲ್ಲಾ.
ಇನ್ನು ತಮಗೆ ಸಿಕ್ಕಿದ ಅಂಕಗಳ ಬಗ್ಗೆ ಸುಳ್ಳು ಹೇಳುವುದು ಸಾಮಾನ್ಯ.ಆದರೆ ಒಮ್ಮೆ ಸುಳ್ಳು ಹೇಳಿದರೆ ಬೆಲೆ ಕಳೆದುಕೊಳ್ಳಬೇಕಾಗುತ್ತದೆ. ಸಾವಿರ ಸುಳ್ಳು ಹೇಳಿ ಮದುವೆ ಮಾಡಿದ ಹಾಗೆ ವ್ಯವಹಾರಗಳಲ್ಲೂ ಸುಳ್ಳುಗಳಿರುತ್ತವೆ.ಸುಳ್ಳು ಹೇಳಿ ಆಸ್ತಿ ಮಾರಿ ಮೋಸ ಮಾಡಿದವರಿದ್ದಾರೆ.
ನನ್ನ ಯಜಮಾನರ ಸಹಪಾಠಿಗಳೊಬ್ಬರು ಟೈಮ್ ಟೇಬಲ್ ಗೆ ದುಡ್ಡು ಬೇಕು ಅಂತ ಊರಿಂದ ಹಣ ತರಿಸಿಕೊಳ್ಳುತ್ತಿದ್ದರಂತೆ.ತಂದೆ ಅನಕ್ಷರಸ್ಥ.ಆ ಹಣವನ್ನು ಸಿನೆಮಾ ನೋಡಲು ಖರ್ಚು ಮಾಡುತ್ತಿದ್ದರಂತೆ.
ತುಂಬಾ ಶಿಸ್ತಿನ ಹೆತ್ತವರಲ್ಲಿ ಮಕ್ಕಳು ಭಯಕ್ಕೆ ಸುಳ್ಳು ಹೇಳಬಹುದು.
ಇದೇನು ನಿಮ್ಮ ವಿಷಯ ಹೇಳುವುದು ಬಿಟ್ಟು ಊರ ಸುದ್ದಿ ಹೇಳುತ್ತಿದ್ದಾರೆ ಅಂತ ಅಂದುಕೊಂಡಿರಾ..ನನ್ನಲ್ಲಿ ಹೇಳಿಕೊಳ್ಳುವಂತ ಸುಳ್ಳು ಹೇಳಿದ ಪ್ರಸಂಗ ನೆನಪಾಗುತ್ತಿಲ್ಲ.
ಹೇಳಿದ್ದೆಲ್ಲಾ ಸಣ್ಣ ಸುಳ್ಳುಗಳು..
ಮಾತ್ರೆ ತಿಂದೆಯಾ ಅಂತ ನನ್ನ ಪತಿ ಕೇಳಿದಾಗ ತಿನ್ನಲು ಮರೆತಿದ್ದರೂ ಹ್ಞೂಂ ತಿಂದೆ ಅಂತ ಹೇಳಿ ಮರೆಯಲ್ಲಿ ಹೋಗಿ ತಿನ್ನುವುದು ಈಗ ಸದ್ಯ ಹೇಳುವ ಸುಳ್ಳು.
ಯಾವುದೋ ಸಮಾರಂಭಕ್ಕೆ ಹೋಗಲು ಮನಸಿಲ್ಲದಿದ್ದರೆ 'ಅಯ್ಯೋ ಆ ದಿನವೇ ನನ್ನ ಕಸಿನ್ ಮನೆಯಲ್ಲಿ ಗೃಹಪ್ರವೇಶವಿದೆ " ಅಂತ ಸುಳ್ಳು ಹೇಳಿದ್ದಿದೆ.😁.
ಇನ್ನು ಮಕ್ಕಳಿಗೆ ಖುಷಿ ಕೊಡಲು ಸುಳ್ಳು ಹೇಳಿದ್ದಿದೆ.ಅಂದರೆ ಹೊಸ ಅಂಗಿ ತಂದಿದ್ದರೂ ತಂದಿಲ್ಲ ಅಂತ ಸುಳ್ಳು ಹೇಳುವುದು..ತಂದುದು ಗೊತ್ತಾದಾಗ ಅವರಿಗೆ ಖುಷಿಯಾಗುತ್ತದೆ.. ಹೀಗೇ ಚಿಕ್ಕ ಪುಟ್ಟ ಸುಳ್ಳುಗಳು.
ಹೋಗ್ಲಿ ಬಿಡಿ ,ಈಗ ನನಗೆ ಯಾವ ಸುಳ್ಳು ನೆನಪಾಗ್ತಾ ಇಲ್ವಲ್ಲಾ. ಬಸವಣ್ಣನವರ "ವಚನ ಕಳಬೇಡ , ಕೊಲಬೇಡ ,ಹುಸಿಯ ನುಡಿಯಲು ಬೇಡ ,ಅನ್ಯರಿಗೆ ಅಸಹ್ಯ ಪಡಬೇಡ......"ವಚನ ತಲೆಯಲ್ಲಿ ಕೂತು ಬಿಟ್ಟಿದೆ.😊
✍️ಪರಮೇಶ್ವರಿ ಭಟ್
0 Followers
0 Following