ಹೌದು.ನಾನು ಪಿಯುಸಿಯಲ್ಲಿ ಫೇಲ್ ಆಗಿದ್ದೆ
.ನಾನು ಪಿಯು ಓದಿದ ಮಂಗಳೂರು ಸರ್ಕಾರಿ ಪಿಯು ಕಾಲೇಜಿನಲ್ಲಿ ( ಈಗಿನ ವಿಶ್ವ ವಿದ್ಯಾಲಯ ಕಾಲೇಜು) ನಮ್ಮ ತರಗತಿಯಲ್ಲಿನ ಎಲ್ಲರೂ ಹತ್ತನೆಯ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದವರೇ ಆಗಿದ್ದರು.ಎಲ್ಲರೂ ಕನ್ನಡ ಮಾಧ್ಯಮದಲ್ಲಿ ಓದಿದವರೇ ಆಗಿದ್ದೆವು
ಇಲ್ಲಿನ ಉಪನ್ಯಾಸಕರೋ ಸಾಕ್ಷಾತ್ ಇಂಗ್ಲೆಂಡಿನಿಂದ ಉದುರಿದವರ ಹಾಗೆ ಇದ್ದರು.ಒಂದಕ್ಷರ ಕನ್ನಡದಲ್ಲಿ ವಿವರಿಸುತ್ತಿರಲಿಲ್ಲ.ಕ್ಲಾಸ್ ಟೆಸ್ಟ್ ಬಿಡಿ.ಮಧ್ಯಾವದಿ ಪರೀಕ್ಷೆ ,ಪೂರ್ವ ಸಿದ್ಧತಾ ಪರೀಕ್ಷೆ ಕೂಡ ಮಾಡುತ್ತಿರಲಿಲ್ಲ.ನಾವು ನೇರವಾಗಿ ಅಂತಿಮ ಪರೀಕ್ಷೆಯನ್ನು ಎದುರಿಸಿದ್ದೆವು.ಪ್ರಥಮ ಪಿಯುಸಿಯಲ್ಲಿ ಬಹುಶಃ ಮಕ್ಕಳ ಸಂಖ್ಯೆ ಕಡಿಮೆಯಾದರೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಹೆಚ್ಚು ಕಡಿಮೆ ಎಲ್ಲರನ್ನು ಪಾಸ್ ಮಾಡ್ತಿದ್ದರು.ಸೆಕೆಂಡ್ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ 1% ಫಲಿತಾ ಂ ಶ ಕೂಡಾ ಇರುತ್ತಿರಲಿಲ್ಲ.ಇಷ್ಟು ಕಡಿಮೆ ಫಲಿತಾಂಶ ಬಂದರೂ ಈ ಉಪನ್ಯಾಸಕರನ್ನು ಹೇಳುವವರು ಕೇಳುವವರು ಯಾರೂ ಇರಲಿಲ್ವೆ? ನನಗೀಗಲೂ ಈ ವಿಚಾರ ಅರ್ಥ ಆಗುತ್ತಿಲ್ಲ
ಈಗ 40% ಕಡಿಮೆ ಫಲಿತಾಂಸ ಬಂದವರಿಗೆ ಭಡ್ತಿ ಕೊಡುವುದಿಲ್ಲ.ಅವರನ್ನು ಕರೆದು ವಿಚಾರಿಸುತ್ತಾರೆ.ಕಾರಣ ಕೇಳ್ತಾರೆ ಒಟ್ಟಿನಲ್ಲಿ ಉಪನ್ಯಾಸಕರು ಬೇಜವಾಬ್ದಾರಿ ಮಾಡುವಂತಿಲ್ಲ
ಆಗ ಇವ್ಯಾವುದೂ ಇರಲಿಲ್ವಾ? ಇರಲಿ ಇಲ್ಲದೇ ಇರಲಿ..ಇವರಿಗೆ ಆತ್ಮ ಸಾಕ್ಷಿ ಚುಚ್ಚುತ್ತಿರಲಲ್ವಾ? ಇಷ್ಟು ಸಂಬಳ ಪಡೆದು ಎಲ್ಲ ಮಕ್ಕಳೂ ಫೇಲಾದಾಗ ಇವರಿಗೆ ಏನೂ ಅನಿಸುತ್ತಿರಲಿಲ್ವಾ?
ಬಹುಶಃ ಇದೇ ಕಾರಣಕ್ಕೆ ನನ್ನ ಪಿಯು ಉಪನ್ಯಾಸಕರಲ್ಲಿ ಸಂಸ್ಕೃತ ಉಪನ್ಯಾಸಕರಾದ ಡಾ.ಲಕ್ಷ್ಮೀ ನಾರಾಯಣ ಭಟ್ಟರ ಹೊರತಾಗಿ ಇತರರ ಬಗ್ಗೆ ನನಗೆ ಒಂದಿನಿತೂ ಭಕ್ತಿ ಗೌರವ ಉಳಿದಿಲ್ಲ
ನಾನೇನೋ ಹೇಗೋ ಗೈಡ್ ಓದಿ ಮತ್ತೆ ಪರೀಕ್ಷೆ ಕಟ್ಟಿ ಪಾಸಾದೆ ನಂತರ ಮುಂದೆ ಓದಿದೆ
ಆದರೆ ಎಲ್ಲರ ಬದುಕಿನಲ್ಲಿಯೂ ಇದು ಸಾಧ್ಯವೇ ? ಹುಡುಗಿಯರು ಫೇಲಾದ ತಕ್ಷಣವೇ ಹೆತ್ತವರು ಮದುವೆ ಮಾಡಿ ಕೈತೊಳ್ಕೊಂಡು ಬಿಡ್ತಾರೆ.ಹುಡುಗರು ಯಾವುದಾದರೂ ಗ್ಯಾರೇಜಿನಲ್ಲೋ ಇನ್ನೆಲ್ಲೋ ಕೆಲಸಕ್ಕೆ ಸೇರ್ತಾರೆ.ನನ್ನ ಪಿಯು ಸಹಪಾಠಿಗಳಲ್ಲಿ ಒಬ್ಬ( ಹೆಸರು ಸರಿಯಾಗಿ ನೆನಪಿಲ್ಲ..ರಮೇಶ್ ಇರಬೇಕು) ಹತ್ತನೆಯ ತರಗತಿಯಲ್ಲಿ 92% ಅಂಕಗಳನ್ನು ಪಡೆದಿದ್ದ.ಪಿಯುನಲ್ಲಿ ಐದು ವಿಷಯಗಳಲ್ಲಿ ಫೇಲಾಗಿದ್ದ.ನಂತರ ಗ್ಯಾರೇಜ್ ಕೆಲಸಕ್ಕೆ ಸೇರಿದನಾದರೂ ಇದೇ ನೋವಿನಲ್ಲಿ ಆತ್ಮ ಹತ್ಯೆ ಮಾಡಿಕೊಂಡಿದ್ದ
ಆಗ ಫೇಲಾದರೆ ಆ ವಿಷಯ ಬಿಟ್ಟು ಅರ್ಟ್ಸ್ ತಗೊಂಡು ನೇರವಾಗಿ ಪರೀಕ್ಷೆ ಕಟ್ಟಿ ಪಾಸಾಗಬೇಕಿದ್ದರೆ 25 ವರ್ಷ ಆಗಬೇಕೆಂಬ ನಿಯಮವಿತ್ತು
ವಿಜ್ಞಾನ ತಗೊಂಡು ಫೇಲಾಗಿ ಮತ್ತೆ ಕಟ್ಟಿಯೂ ಪಾಸಾಗಲಾಗದಿದ್ದರೆ ಅವರ ಕಲಿಕೆ ಪೂರ್ಣ ನಿಂತು ಹೋದ ಹಾಗೆಯೇ..
ಕರ್ನಾಟಕದ ವಿದ್ಯಾರ್ಥಿಗಳಿಗಾಗಿದ್ದರೆ ಹತ್ತನೆಯ ತರಗತಿಯಲ್ಲಿ ಡಿಪ್ಲೋಮ ಮಾಡಿ ನಂತರ ಇಂಜನಿಯರಿಂಗ್ ಮಾಡಿ ಯಶಸ್ಸು ಪಡೆಯುವ ಅವಕಾಶವಿತ್ತು.ಆದರೆ ಇದನ್ನು ನಮಗೆ ಯಾವ ಉಪನ್ಯಾಸಕರೂ ಮಾಹಿತಿ ನೀಡಿರಲಿಲ್ಲ.
ಇನ್ನು ಕೇರಳದ ಗಡಿನಾಡು ಕಾಸರಗೋಡಿನ ಮಕ್ಕಳಾದ ನಮಗೆ ಡಿಪ್ಲೋಮ ಕೂಡ ಗಗನ ಕುಸುಮವೇ ಸರಿ
ಕೇವಲ ಹತ್ತು ಡಿಪ್ಲೋಮ ಸೀಟುಗಳು ಗಡಿನಾಡ ಕನ್ನಡಿಗರಿಗೆ ಇತ್ತು.ಮಂಗಳೂರಿನ ಕೆಪಿಸಿ ? ಡಿಪ್ಲೋಮಾ ಕಾಲೇಜಿನಲ್ಲಿ ಒಂದು ಸೀಟು ಗಡಿನಾಡ ಕನ್ನಡಿಗರಿಗೆ ಇದ್ದದ್ದು
ಅದು ಯಾರಿಗಾದರೂ ಒಬ್ಬರಿಗೆ ಸಿಕ್ತಿತ್ತು.ಉಳಿದ ಒಂಬತ್ತು ಹುಬ್ಬಳ್ಳಿ ದಾರವಾಡ ಮೊದಲಾದೆಡೆ ಇತ್ತು
ಅದೂ ಟೈಲರಿಂಗ್ ಮತ್ತು ಫ್ಯಾಶನಿಂಗ್ ಟೆಕ್ನಾಲಜಿ ಇತ್ಯಾದಿಗಳಲ್ಲಿ ಕೊಡುತ್ತಿದ್ದರು
ನಾನೂ ಡಿಪ್ಲೋಮಕ್ಕೆ ಟ್ರೈ ಮಾಡಿದ್ದೆ.ನನಗೂ ಸಿಕ್ಕಿರಲಿಲ್ಲ
ಫೇಲಾದ ಸುದ್ಧಿ ತಗೊಂಡು ಬಂದಾಗ ನನಗೆ ಮನೆಯಲ್ಲಿ ಬೈಗಳ ಸುರಿಮಳೆ.ಅದು ತನಕ ಜಾಣೆ ಎಂಬ ಕಾರಣಕ್ಕೆ ನನಗೆ ಹೊಗಳಿಕೆ ಸಿಗುತ್ತಿತ್ತು.
ಮನೆಯಲ್ಲಿ ಬೈದಾಗ ಹಠ ಬಂತು.ಇದೇ ಮೊದಲು ಮತ್ತು ಕೊನೆ..ಎಂದಿಗೂ ಫೇಲಾಗಲಾರೆ ಎಂದು ನಿರ್ಧರಿಸಿದೆ
ಬೇರೆಯವರೆಡೆ ಒಂದು ಬೆರಳು ತೋರುಿಸುವಾಗ ನಮ್ಮ ಕಡೆ ನಾಲ್ಕು ಬೆರಳುಗಳನ್ನು ತೋರಿಸುತ್ತಿದೆ
ಹಾಗಾಗಿ ಅವರಿವರನ್ನು ದೂಷಿಸುವ ಬದಲು ನಾನೇ ಓದಲು ನಿಶ್ಚಯ ಮಾಡಿದೆ..
ಅದೇ ಕ್ಷಣದಿಂದ ಹಗಲು ರಾತ್ರಿ ಓದಿದೆ.ಅರ್ಥ ಆಗದ್ದನ್ನು ಹಾಗೆಯೇ ಬಾಯಿಪಾಠ ಮಾಡಿದೆ.ಮರು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಪಾಸಾದೆ
ನಂತರ ವಿಜ್ಞಾನ ಬಿಟ್ಟು ಆರ್ಟ್ಸ್ ನಲ್ಲಿ ಪದವಿ ಮಾಡಬೇಕೆಂದುಕೊಂಡೆ
ಅದಕ್ಕಾಗಿ ಕೆನರಾ ಕಾಲೇಜಿಗೆ ತಂದೆ ಜೊತೆಗೆ ಹೋಗಿ ಸೀಟು ಕೇಳಿದೆ.ಆಗ ಎಷ್ಟೋ ಡೊನೇಷನ್ ಕೇಳಿದರು.ಆಗ ನನ್ನ ತಂದೆ ನಮಗೆ ಎರಡು ಖಂಡಿ ಅಡಿಕೆ ಆಗುದು.ಅಷ್ಟು ಡೊನೇಷನ್ ಸಾಧ್ಯವಿಲ್ಲ.ಕಡಿಮೆ ಮಾಡಿ ಎಂದು ಕೇಳಿದರು.ಆಗ ಅಲ್ಲಿನ ಪ್ರಿನ್ಸಿಪಾಲ್ ( ಉಪಾಧ್ಯಾಯ?) ಎರಡು ಖಂಡಿಯೋ ಇಪ್ಪತ್ತು ಖಂಡಿಯಾ ಎಂದು ಗದರಿ ಅವಹೇಳನ ಮಾಡಿ ಮಾತನಾಡಿದರು
ಬಸವನ ಕೋಪ ದವಡೆಗೆ ಮೂಲ ಅಲ್ವೇ.ನಾವೇನೂ ಹೇಳದೆಯೇ ಹಿಂತಿರುಗಿದೆವು.ಕಷ್ಟವಾದರೂ ಅವರು ಕೇಳಿದಷ್ಟು ದುಡ್ಡು ಹೊಂದಿಸಿ ಪದವಿಗೆ ಕೆನರಾ ಕಾಲೇಜಿನಲ್ಲಿ ಸೇರಿಸಲು ನನ್ನ ತಂದೆ ತಾಯಿ ಸಿದ್ದವಿದ್ದರು.ಆದರೆ ನನ್ನ ತಂದೆಯನ್ನು ಅಧಿಕಾರದ ಅಮಲಿನಿಂದ ವಿನಾಕಾರಣ ಗದರಿ ಅವಹೇಳನ ಮಾಡಿದ ಪ್ರಿನ್ಸಿಪಾಲ್ ಇರುವ ಆ ಕಾಲೇಜಿಗೆ ಹೋಗಲು ನನಗೆ ಇಷ್ಟವಿರಲಿಲ್ಲ
ಮುಂದೇನು ? ಎಂಬ ಯೋಚನೆಯಲ್ಲಿದ್ದಾಗ ದೊಡ್ಡ ತಮ್ಮ ಈಶ್ವರ ಭಟ್ ನ ಹತ್ತನೆಯ ತರಗತಿ ಫಲಿತಾಂಸ ಬಂತು.ಅವನಿಗೆ ಪಿಯುಸಿ ಸೀಟಿಗಾಗಿ ಉಜಿರೆಗೆ ಹೋಗಿ ನಮ್ಮ ಸಂಬಂಧಿಕರಾದ ಫಿಸಿಕ್ಸ್ ಉಪನ್ಯಸಾಕರಾಗಿದ್ದ ಗಣಪಯ್ಯರನ್ನು ನನ್ನ ಅಣ್ಣ ಕೃಷ್ಣ ಭಟ್ ವಾರಣಾಸಿ ಹೋಗಿ ಭೇಟಿಯಾದ
ಬಹಳ ಪ್ರೀತಿಯಿಂದ ಗಣಪಯ್ಯ ತಮ್ಮ ಈಶ್ವರನಿಗೆ ಸೀಟು ಕೊಡಿಸಿದರು
ನಂತರ ಮನೆ ಮಂದಿ ಬಗ್ಗೆ ವಿಚಾರಿಸಿದಾಗ ಅಣ್ಣ ನನ್ನ ಬಗ್ಗೆ ಹೇಳಿದ.ಆಗ ಗಣಪಯ್ಯನವರು ಅವರಾಗಿಯೇ ಅವಳನ್ನೂ ಇಲ್ಲಿಯೇ ಡಿಗ್ರಿಗೆ ಸೇರಿಸುವ ಕರಕೊಂಡು ಬಾ ಎಂದರು
ಹಾಗೆ ಮರು ದಿನ ನಾನು ತಂದೆಯ ಜೊತೆಗೆ ಹೋದೆ.ನಾನು Arts ಕೇಳಿದೆ.ಆಗ ಗಣಪಯ್ಯವನರು ಸಯನ್ಸ್ ಓದಿದರೆ ಕೆಲಸಕ್ಕೆಲ್ಲ ಒಳ್ಳೆಯದು.ಇಲ್ಲಿ ಒಳ್ಳೆಯ ಉಪನ್ಯಾಸಕರಿದ್ದಾರೆ ಸಮಸ್ಯೆ ಆಗಲಾರದು ಎಂದು ಹೇಳಿ ಬಿಎಸ್ಸಿಗೆ ಸೇರಿಸಿದರು.ಆರ್ಟ್ಸೇ ಬೇಕೆಂದು ಹಠ ಹಿಡಿಯುತ್ತಿದ್ದರೆ ಅದನ್ನೇ ಕೊಡಿಸುತ್ತಿದ್ದರೋ ಏನೋ..ನಾನು ಹಟ ಹಿಡಿಯದೆ ಬಿಎಸ್ಸಿಗೇ ಸೇರಿದೆ
ಪಿಯುಸಿಯಲ್ಲಿ ಸರಿಯಾಗಿ ಪಾಠವಿಲ್ಲದೆ ಅರ್ಥ ಆಗದೇ ಇದ್ದ ಕಾರಣ ಬಿಎಸ್ಸಿ ಯ ಕಲಿಕೆ ಕೂಡ ಕಷ್ಟ ಎನಿಸಿತು ನನಗೆ.ಜೊತೆಗೆ ಆರೋಗ್ಯ ಸಮಸ್ಯೆ ಕೂಡ ಬಂತು
ಮೊದಲ ವರ್ಷದ ಫಲಿತಾಂಸ ಬಂದಾಗ ವಿಪರೀತ ಆತಂಕ.ಫಲಿತಾಂಶ ಬೋರ್ಡ್ ನಲ್ಲಿ ಹಾಕಿದ್ದರು
ನಮ್ಮಮೆಸ್ ನ ಸಮೀಪದ ವಸಂತಿಅಮ್ಮನ ಮಗಳ ಹೇಮ ನಮಗಿಂತ ಒಂದು ವರ್ಷ ಸೀನಿಯರ್ ಆಗಿದ್ದು( ಇವರಬಗ್ಗೆ ದೊಡ್ಡವರ ದಾರಿಯಲ್ಲಿ ಬರೆಯಲಿಕ್ಕಿದೆ) ಒಂದೊಂದೇ ವಿಷಯ ನೋಡಬೇಕು.ಪಾಸಾದವರ ರಿಜಿಸ್ಟರ್ಡ್ ನಂಬರ್ ಇರುತ್ತದೆ ಎಂದಿದ್ದರು
ಹಾಗೆ ಮೊದಲಿಗೆ ನನಗೆ ಬಹಳ ಕಷ್ಟ ಎನಿಸಿದ್ದ ಫಿಸಿಕ್ಸ್ ನೋಡಿದೆ..ಅಯ್ಯೋ..ಅದರಲ್ಲಿ ನನ್ನ ರಿಜಿಸ್ಟ ರ್ ನಂಬರಿಲ್ಲ
ಕೆಮೆಷ್ಟ್ರಿ ನೋಡಿದೆ ಅದರಲ್ಲೂ ಇಲ್ಲ.ಗಣಿತ ನೋಡಿದೆ ಅದರಲ್ಲೂ ಇಲ್ಲ.ಅಳು ಉಕ್ಕಿ ಬಂದು ಕಣ್ಣನೀರು ತುಂಬಿ ಕಣ್ಷು ಮಸುಕಾಗಿತ್ತು.ಒರಸಿಕೊಂಡು ಇಂಗ್ಲಿಷ್ ನೋಡಿದೆ ಅದರಲ್ಲೂ ಇಲ್ಲ.ಕೊನೆಗೆ ಸಂಸ್ಕೃತ ನೋಡಿದೆ..ಹಾ..ಅದರಲ್ಲೂ ನನ್ನ ನಂಬರಿಲ್ಲ
ದೇವರೇ..ಬಿಎಸ್ಸಿ ಮೊದಲ ವರ್ಷದ ಎಲ್ಲ ಐದೂ ವಿಷಯಗಳಲ್ಲಿ ಫೇಲ್ ಆದೆ..ಮುಂದೆ ಇವನ್ನು ಪಾಸಾಗುದು ಹೇಗೆ..ಇನ್ನೂ ಎರಡು ವರ್ಷ ಇದೆಯಲ್ಲ..ಬಹುಶಃ ಆಗಿನ ನನ್ನ ಸ್ಥಿತಿ ದೇವರಿಗೇ ಪ್ರೀತಿ
ಇಡೀ ಜಗತ್ತು ಗರಗರನೆ ತಿರುಗಿದ ಅನುಭವ
ಹೇಳಲಿಕ್ಕಾದ ಸಂಕಟ..ಭಯ ಆತಂಕ..ಎಲ್ಲ ವಿಷಯಗಳಲ್ಲಿ ಫೇಲಾದದ್ದನ್ನು ತಂದೆ ತಾಯಿಗೆ ಹೇಳುದಾದರೂ ಹೇಗೆ ? ನನ್ನಮೇಲೆ ನಂಬಿಕೆ ಇರಿಸಿ ಸೀಟು ಕೊಡಿಸಿದ ಗಣಪಯ್ಯರ ಮುಖವನ್ನು ನೋಡುದಾದರೂ ಹೇಗೆ?
ಆ ಕ್ಷಣಕ್ಕೆ ಆ ಕಟ್ಟಡ ಕುಸಿದು ನಾನದರ ಅಡಿಗೆ ಬಿದ್ದು ಸತ್ತಿದ್ದರೆ ಎಷ್ಟು ಒಳ್ಳೆಯದೆನಿಸಿತ್ತು
ಭೂಕಂಪ ಆಗಿ ನಾನಿದ್ದ ಭೂಮಿ ಬಿರಿದು ಅದರಡಿಯಲ್ಲಿ ನಾನು ಹೂತು ಹೋಗಬೇಕೆನಿಸಿತು
ನಾವಂದುಕೊಂಡ ಹಾಗೆಲ್ಲ ಆಗಬೇಕಲ್ಲ..ಅಳಿಸಿ ನಗಿಸಿ ಚಂದ ನೋಡುವವ ಮೇಲೆ ಇದ್ದಾನಲ್ಲ..ಏನುಮಾಡುದು.
ಬಹಳ ಸೋತ ಹೆಜ್ಜೆ ಇಟ್ಟು ಕೊಂಡು ತರಗತಿಗೆ ಹೋಗದೆ ನಾವಾಗ ಇದ್ದ ಬಾಡಿಗೆ ಮನೆಗೆ ಹೊರಟೆ
ಮರುದಿನವೇ ಖಾಲಿ ಮಾಡಿ ಮನೆಗೆ ಹೋಗುವುದೆಂದು ನಿರ್ಧರಿಸಿದೆ.ನನಗೆ ಬಿಎಸ್ಸಿ ಪಾಸ್ ಮಾಡಲು ಅಸಾಧ್ಯ ಎನಿಸಿತ್ತು.ನಾನು ಶಕ್ತಿ ಮೀರಿ ಓದಿ ಬರೆದಿದ್ದೆ.ಆದರೂ ಪಾಸಾಗಿಲ್ಲ.ಹಾಗಾಗಿ ಅಪ್ಪ ಅಮ್ಮಕಷ್ಟ ಪಟ್ಟು ದುಡಿದ ದುಡ್ಡನ್ನು ಕಾಲೇಜು ಫೀಸಿಗೆ ಕಟ್ಟಿ ವ್ಯರ್ಥ ಮಾಡುದೇಕೆ ಎನಿಸಿತ್ತು.ಆ ಕ್ಷಣದಲ್ಲೂ ನಾನು arts ತಗೊಂಡಿದರೆ ಪಾಸಾಗಿರುತ್ತಿದ್ದೆನೋ ಏನೋ ಎಂದೆನಿಸಿತ್ತು
ಹೀಗೆ ಏನೋನೋ ಯೋಚಿಸುತ್ತಾ ತಲೆ ಕೆಟ್ಟು ಕಾಲೇಜು ಮೆಟ್ಟಲಿಳಯುತ್ತಿರುವಾಗ ಯಾರೋ ಎದುರು ಬಂದು ಢಿಕ್ಕಿಯಾದೆ..ಯಾರೆಂದೂ ಮುಖ ಎತ್ತಿ ನೋಡದೆ sorry ಹೇಳಿ ಮುಂದಡಿಯಿಟ್ಟೆ.
ಆಗ ಲಕ್ಷ್ಮೀ ಎಂತ..ಕ್ಲಾಸಿಂಗೆ ಹೋವುತ್ತಿಲ್ಲೆಯ? ಎಂಬ ಗಣಪಯ್ಯರ ಮಾತು ಕೇಳಿತು.ನೋಡಿದರೆ ನಾನು ಢಿಕ್ಕಿ ಹೊಡೆದದ್ದು ಅವರಿಗೇ
ಅಳುದು ಯಾಕೆ ? ಎಂತ ಆಯಿತು ಎಂದು ನನ್ನಮುಖ ನೋಡಿ ಕೇಳಿದರು.ನಾನು ಅಳುತ್ತಾ ಕಷ್ಟ ಪಟ್ಟು ಎಲ್ಲ ವಿಷಯಗಳಲ್ಲಿ ಫೇಲಾದ ವಿಚಾರ ಹೇಳಿದೆ..ಯಾರೇಳಿದ್ದು.ನೀನು ಎಲ್ಲ ವಿಷಯಗಳಲ್ಲೂ ಪಾಸ್..ನಾನು ಬೆಳಗ್ಗೆಯೇ ರಿಸಲ್ಟ್ ನೋಡಿದ್ದೇನೆ ಎಂದರು.ಆಗ ಇಲ್ಲ..ಫಿಸಿಕ್ಸ್ ,ಕೆಮೆಸ್ಟ್ರಿ ಮ್ಯಾತ್ಸ್ ಇಂಗ್ಲೀಷ್ ಸಂಸ್ಕೃತ ಗಳಫಲಿತಾಂಶ ಪಟ್ಟಿಯಲ್ಲಿ ನನ್ನ ರಿಜಿಸ್ಟರ್ ನಂಬರಿಲ್ಲ ಎಂದೆ
ಎಲ್ಲದರಲ್ಲಿ ಪಾಸಾದವರ ಪಟ್ಟಿ ಬೇರೆ ಇದೆ.ಎಲ್ಲದರಲ್ಲಿ ಪಾಸಾಗದೆ ಇರುವವರ ಫಲಿತಾಂಶ ಉಳಿದವುಗಳಲ್ಲಿ ಇರುತ್ತದೆ ಎಂದರು
ಓ.ನನಗದು ಗೊತ್ತಿರಲಿಲ್ಲ.ಅವರಲ್ಲಿ ಏನೂ ಹೇಳದೆ ಮತ್ತೆ ಫಲಿತಾಂಶ ಹಾಕಿದ ಬೋರ್ಡ್ ಬಳಿ ಹೋದೆ
ಹೌದು ಅಲ್ಲಿ ಎಲ್ಲ ಸಬ್ಜೆಕ್ಟ್ ಪಾಸಾದವರ ರಿಜಿಸ್ಟರ್ ಸಂಖ್ಯೆಗಳನ್ನು ಹಾಕಿದ್ದರು.ನನ್ನ ನಂಬರ್ ಅದರಲ್ಲಿ ಇತ್ತು
ಸಧ್ಯ..ನಾನು ಪಾಸ್ ಎಂಬುದೇ ನನಗೆ ಬೆಟ್ಟದಷ್ಟು ದೈರ್ಯ ಬಂತು.ನಂತರದ ಎರಡು ವರ್ಷ ಕೂಡ ಒಂದೇ ಒಂದು ವಿಷಯದಲ್ಲಿ ಫೇಲಾಗದೆ ಪಾಸ್ ಆದೆ
ಆದರೆ ಒಳ್ಳೆಯ ಅಂಕ ಗಳಿಸಲಾಗಲಿಲ್ಲ.ಮುಂದೆ ಸಂಸ್ಕೃತ ಎಂಎಗೆ ಸೇರಿದೆ .ಇಲ್ಲೂ ನನ್ನಕಲಿಕೆಯ ಹಾದಿ ಸುಲಭದ್ದಾಗಿರಲಿಲ್ಲ.ಪದವಿಯಲ್ಲಿ ಐಚ್ಛಿಕ ವಿಷಯವಾಗಿ ಸಂಸ್ಕೃತವನ್ನು ಕಲಿತು ರ‌್ಯಾಂಕ್ ಪಡೆದ ರಮಿತಾ ಶ್ರಿದೇವಿ ,ನನ್ನಂತೆಯೇ ಬಿಎಸ್ಸಿ ಓದಿದ್ದಲ್ಲದೆ ಉತ್ತಮ ಅಂಕ ಗಳಿಸಿದ್ದ ನೀತಾ ನಾಯಕ್ ,ಈಶ್ವರ ಪ್ರಸಾದ್ ಜಾಣರಾದ ವಿನ ತಾ ,ಅವಿನಾಶ್ ,ಗಜಾನನ ಮರಾಠೆ ಕಮಲಾಯಿನಿ ಮೊದಲಾದವರನ್ನು ಅಂಕ ಗಳಿಕೆಯಲ್ಲಿ ಹಿಂದಿಕ್ಕಿ ಮುಂದೆ ಹೋಗುದು ಸುಲಭದ ಮಾತಾಗಿರಲಿಲ್ಲ
ಹಾಗಾಗಿ ದಿನಕ್ಕೆ ಸುಮಾರು ಎಂಟು ಗಂಟೆ ಓದಿದೆ.ಎರಡು ವರ್ಷ ತಪಸ್ಸಿನಂತೆ ಕಲಿತೆ.ಪರಿಣಾಮವಾಗಿ ಮೊದಲ ರ‌್ಯಾಂಕ್ ಬಂತು
ಇಂತಹದ್ದೊಂದು ಯಶಸ್ಸಿಗಾಗಿ ಏಳು ವರ್ಷಗಳಿಂದ ಕಾದಿದ್ದೆ
ಹತ್ತನೆಯ ತರಗತಿಯ ನಂತರ ಮತ್ತೆ ಉತ್ತಮ ಅಂಕ ಗಳಿಸಿದ್ದು ನಾನು ಎಂಎ ಯಲ್ಲಿಯೇ..
ಮೊದಲ rank ಬಂದ ಗ ಸಂತಸ ತಡೆಯಲಾಗದೆ ಅತ್ತಿದ್ದೆ
ನಾನು ಎರಡು ಬಾರಿ ಕನ್ನಡ ಎಂಎ ಮಾಡಿದ್ದು ಎರಡನೆಯ ಕನ್ನಡ ಎಂಎಯಲ್ಲಿ 77% ಅಂಕ ಗಳಿಸಿದ್ದೆ ಮತ್ತು ನಾಲ್ಕನೆಯ ರ‌್ಯಾಂಕ್ ಕೂಡ ಬಂದಿತ್ತು. ಕನ್ನಡ ಶಾಸನ ಮತ್ತು ಲಿಪಿ ಶಾಸ್ತ್ರ ಡಿಪ್ಲೊಮಾದಲ್ಲಿ ಕೂಡ ಮೊದಲ ರ್ಯಾಂಕ್ ಪಡೆದಿದ್ದೆ
ಆದರೆ ಸಂಸ್ಕೃತ ಎಂಎಯಲ್ಲಿ ಸವೆಸಿದ ಹಾದಿ ಎದುರಿಸಿದ ಸವಾಲುಗಳು ಬಹಳ ಕಷ್ಟದ್ದಿತ್ತು
ಹಾಗಾಗಿಯೋ ಏನೋ ಆಗ ರ‌್ಯಾಂಕ್ ಬಂದಾಗಿನ ಸಂಭ್ರಮ ಮುಂದೆ ಕನ್ನಡದಲ್ಲಿ ರ‌್ಯಾಂಕ್ ಪಡೆದಾಗ ಆಗಲೀ ,ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದಾಗ ಆಗಲೀ ಉಂಟಾಗಲಿಲ್ಲ
ಈಗ ನಾನು ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವೆ.ಲೇಖಕಿಯಾಗಿಯೂ ಹೆಸರು ಗಳಿಸಿರುವೆ.ಆದರೆ ನಾನು ನನ್ನ ವೃತ್ತಿ ಬಗ್ಗೆ ಸದಾ ಎಚ್ಚರದಿಂದ ಇರುವೆ ನನ್ನ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸುತ್ತೇನೆ
ಡಾ.ಲಕ್ಷ್ಮೀ ಜಿ ಪ್ರಸಾದ್