ನಂಬಿಕೆ - ಹೇರಿಕೆ

ಮಕ್ಕಳನ್ನು ಪ್ರಾಯೋಗಿಕವಾಗಿ ಬೆಳಸಬೇಡಿ

ProfileImg
09 Jan '24
4 min read


image

ಆ ದಿನ ಆಸ್ಪತ್ರೆಯ
ಹೆರಿಗೆ ಕೊಠಡಿಯ
ಒಳಗೆ ನಾನು ಅಂದರೆ
ನಿನ್ನಮ್ಮ ಹಾಸಿಗೆಯಲ್ಲಿ
ಒಂದೇ ಸಮನೇ 
ಅಮ್ಮ ಅಮ್ಮ ಅಮ್ಮ
ಎಂದು ಕೊರಗುತ್ತಾ
ನನ್ನಮ್ಮನ ಕೈ ಬೆರಳ 
ಹಿಡಿದು ಹೊಸಕಿ
ಕಚ್ಚಿ ರಕ್ತ ಹೀರುವ 
ಹೊತ್ತಿಗೆ ...

ನನ್ನವ,
ಅಂದರೆ ನಿನ್ನಪ್ಪ
ಹೊರಗೆ ಅವನೊಲವ
ಜೀವದ ನರಳಿಕೆಯ
ನೋವನು ಕಳೆದ
ಮೂರು ದಿನಗಳಿಂದ
ನಿದ್ದೆ ನೆಮ್ಮದಿ ಕಾಣದ 
ಕಣ್ಣುಗಳಿಂದೆ ಇಣುಕುವ
ಕಣ್ಣೀರಲೇ ಬಚ್ಚಿಡುತ್ತಿದ್ದ...

ಎಲ್ಲದರ 
ನಡುವೆ ಅಕ್ಕ ಪಕ್ಕದ
ಒಲುಮೆಯ ಕುಡಿಗಳು
ತಮ್ಮ ತಮ್ಮ ಕಂದಮ್ಮಗಳ
ಗರ್ಭದಿಂದ ಎದೆಗೆ 
ಒತ್ತಿಕೊಳ್ಳುತ್ತಿದ್ದರೆ...

ಇತ್ತ 
ನನ್ನೊಳಗೆ ಕಾಡುವ
ಅನಿರೀಕ್ಷಿತ ಭೀತಿ
ಎಲ್ಲಿ ಈ ನೋವು
ನನ್ನನ್ನು ನನ್ನವರಿಂದ
ಇನ್ನೂ ಚರ್ಮ ಮುಟ್ಟದ
ಎಳೆ ಕೈಗಳ ದೂರಾಗಿಸುತದೋ
ಎಂದು....

ಆಗ
ಪಠಿಸದ ಪಾಠಗಳ
ಲೆಕ್ಕವಿಲ್ಲ ನನಗಿದು
ಹೊಸತಿರಬಹುದು
ಆದರೆ ಪ್ರತಿದಿನವೂ
ಸಾಮಾನ್ಯವಾದ ಇಂತಹ
ಅನೇಕ ಪ್ರಕರಣಗಳ 
ಕಂಡಿದ್ದ ದಾದಿಯರು....

ಸಾಕು
ನೀ ಪಟ್ಟ ಪಾಡು
ಇನ್ನು ಕಾಯುವುದು ಬೇಡ
ಎಂದು ಬಿರುಸಿನಿಂದ
ಧೈರ್ಯ ತುಂಬಿ ನಿನ್ನನ್ನು
ಇಕ್ಕಟ್ಟಿನ ನನ್ನ ಗರ್ಭದಿಂದ
ವಿಶಾಲವಾದ ಈ ಜಗತ್ತಿಗೆ
ಕರೆತಂದರು....

ಅವನು 
ಅಪ್ಪನಾದ 
ನಾನು 
ಅಮ್ಮಳಾದೆ 
ಉಳಿದವರು......
ನಿನಗೆ ಎಲ್ಲವೂ ಆದರು.

ನ್ರೀ ನಿಮ್ಮ ಮಗೂಗೆ ಹಣೆಗೆ ಕಪ್ ಇಟ್ಟಿಲ್ಲ , ದೃಷ್ಟಿ ಆದ್ರೆ ಏನ್ ಮಾಡ್ತೀರಾ‌‌…ರಾತ್ರಿ ಮಲಗುವಾಗ ಸ್ವಲ್ಪ ದೀಪ ನಿವ್ಳಸಿ .. ಮುಟ್ಟಾದ್ವರ್ತ ಮಗು ಕೊಡ್ಬೇಡಿ…ಅಂಗಾಲಿಗಾದ್ರೂ ಬೊಟ್ಟು ಇಡ್ರಿ .. ಏನು? ಫಾರ್ಮುಲ ಹಾಲು ಕೊಡ್ತೀರಾ ? ಈಗಿನ್ ಕಾಲದ್ ಅಮ್ಮಂದಿರ್ಗೆ ಇದೇ  ಫ್ಯಾಷನ್ ಆಗ್ಬಿಟಿದೆ...!  ಮಗು ನಾ ಯಾವಾಗ್ಲೂ ಡೈಪರ್ ನಲ್ಲೇ ಇರ್ಸಬೇಡಿ ತೂಕ ಕಡ್ಮೆ ಆಗುತ್ತೆ "

 ಈ‌ ರೀತಿಯ ಸಲಹೆ ಮತ್ತು ವ್ಯಂಗ್ಯಗಳಿಗೆ ಕೆಲವೊಮ್ಮೆ ತೀರಾ ಚಿಂತೆ ಮಾಡುವ ತಾಯಂದಿರೂ ತಮ್ಮ ಮಕ್ಕಳ ಮೇಲೆ ಪ್ರಯೋಗ ಮಾಡುತ್ತಾರೆ. ಬನ್ನಿ ಇದನ್ನು ಪ್ರಮಾಣಿಸಿದ ಫಲಿತಾಂಶವನ್ನು ತಿಳಿಸುತ್ತೇನೆ. 

  ಕಪ್ಪು ಇಡುವುದು

ಜನಪದರ ಕಾಲದಿಂದಲೂ ಮಕ್ಕಳಿಗೆ ಕಪ್ಪು ಇಡುವ ವಾಡಿಕೆ ಇದೆ. ಇದಕ್ಕೆ ನಮ್ಮ ವಿರೋಧವಿಲ್ಲ ಆದರೆ ಅವರ ನಂಬಿಕೆಯ ಹಿಂದೆ ವೈಜ್ಞಾನಿಕ ಹಿನ್ನೆಲೆ ಇದೆ. ಹಾಗೂ ಅವರು ಬಳಸುತ್ತಿದದ್ದು ಯಾವುದೇ ಕೆಮಿಕಲ್ ಬೇಸ್ಡ್ ಕಪ್ಪು ಅಲ್ಲ .ಅವರ ಬಳಕೆಯಲ್ಲಿದ್ದದ್ದು ಇದ್ದಲು - ವೀಳ್ಯದ ಎಲೆ ಯಂತಹ ಚರ್ಮಕ್ಕೆ ಹಿತವಾದ ಬೆರಕೆಯ ಕಪ್ಪು . ಇದನ್ನು ವೈದ್ಯರೂ ವಿರೋಧಿಸುವುದಿಲ್ಲ. 

   ಆದರೆ ಜನಪದ ಮತ್ತು ಆಧುನಿಕ ಕಾಲಕ್ಕೆ ಬಹಳ ಕಾಲದ ವ್ಯತ್ಯಾಸವಿದೆ. ಜನಪದರ ಈ ಕಾಳಜಿಯ ರೂಢಿಯನ್ನು ನಂಬಿಕೆ ಮತ್ತು ಅಲಂಕಾರಿಕ ಪರಿಕಲ್ಪನೆಯಾಗಿ - ಬದಲಾಯಿಸಿದಹಲವು  ⁠⁠⁠⁠⁠ಜನರಿಗೆ ಈಗಲೂ ಇದರ ಬಳಕೆಯ ಹಿಂದಿನ ನಿಜವಾದ ಅರ್ಥ ತಿಳಿದಿಲ್ಲ. ಎಷ್ಟೋ ಎಳೆಯ ಕಂದಮ್ಮಗಳು ಹೇಳಲೂ ಆಗದೆ ಚರ್ಮ ಉರಿ ಬಂದಾಗ ಅಳುವ ಪರಿ ಕಪ್ಪು ಇಡಿ ಎಂದು ಹೇಳಿದವರಿಗೂ ತಿಳಿದು ಬರುವುದಿಲ್ಲ. 
 

ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ
ಕೂಸು ಕಂದಯ್ಯ ಒಳ ಹೊರಗ| ಆಡಿದರೆ
ಬೀಸಣಿಗೆ ಗಾಳಿ ಸುಳಿದಾವ|| 

ದೀಪ ನೀವಳಿಸುವುದು
    
        ದೀಪದ ಬೆಳಕಿಗೂ- ಕಣ್ಣುಗಳಿಗೂ ಹಾಗು ಮನಸ್ಸು ಈ ಮೂರಕ್ಕೂ ಒಂದಕ್ಕೊಂದು ಕೊಂಡಿಗಳು ಇದೆ. ಧ್ಯಾನ ಸೂತ್ರದಲ್ಲಿ ದೀಪದ ಬೆಳಕು ನೋಡುವುದರಿಂದ ಕಣ್ಣುಗಳಿಗೆ ಒಂದು ರೀತಿಯ ಚುರುಕು ಮೂಡುತ್ತದೆ ಅದರಿಂದ ಮನಸ್ಸು ಹಗುರಾಗುತ್ತದೆ. ದೀಪ ನೀವಳಿಸುವುದರ ಹಿಂದಿನ ಅರ್ಥವಿದು. 
    

ಕವಿತೆಯ ಹೆರುವಾಗ 
ಎದೆಯಾಳದಲಿ ಸಂಕಟ
ನರನರಗಳಲೂ ಅದರದೇ
ನೋವು- ಹರಿವು
ಹೆತ್ತವರಿಗಷ್ಟೇ ಗೊತ್ತು
ಅದರಿಂದಿನ ಸೂತ್ರ
ಅದು ಹುಟ್ಟಿದ ಮರುಗಳಿಗೆ
ತಾ ಮುಂದು ನಾ ಮುಂದು
ಎನ್ನುವ ನಾಮಕರಣಕಾರರು
ಮುದ್ದಾದ ಕವಿತೆಯ ಹಡೆದಾಗ
ಹೇಳದೆ- ಕೇಳದೆ ತೊಟ್ಟಿಲಿಂದಲೇ
ಸದ್ದಿಲ್ಲದೇ ಕದ್ದು ಸಂಭ್ರಮಿಸುವವರು
ಕೂಸು ಕಳೆದುಕೊಂಡ ಕವಿ ಮಾತ್ರ
ಎಂದಿನಂತೆ ಮತ್ತೊಂದು
ಭ್ರೂಣವ ಪಡೆವ ಯೋಚನೆಯಲಿ
ಎಲೆಮರೆಯಲೇ 
ನವಜಾತ ಕವಿತೆಗೆ 
ಜನ್ಮ ನೀಡುತ್ತಾ
ತಾಯ್ತತನವ ಅನುಭವಿಸುವನು...

                      

ಮುಟ್ಟು ಮತ್ತು ಮಗು

    ಹುಟ್ಟಿನಂತೆ , ಮುಟ್ಟು ಕೂಡ ಒಂದು ನೈಸರ್ಗಿಕ ಪ್ರಕ್ರಿಯೆ. ಮುಟ್ಟಾದವರು ಮಗು ಮುಟ್ಟಬಾರದು ಎನ್ನುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ಹಳೆಯ ಕಾಲದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಸ್ ಇಲ್ಲದ ಕಾರಣ ಹೆಣ್ಣು ಮಕ್ಕಳು ಬಟ್ಟೆಗಳನ್ನು ಬಳಸುತ್ತಿದ್ದರು. ಅದರಿಂದ ರೋಗಾಣುಗಳ ಹರಡುವಿಕೆಯ ಸಾಧ್ಯತೆಗಳು ಹೆಚ್ಚಿತ್ತು. ಮಗುವಿಗೂ ಮುಟ್ಟಿನ ಮುಟ್ಟುವಿಕೆಗೂ ಯಾವುದೇ ಸಂಬಂಧವಿಲ್ಲ.

ಅಳುವ ಕಂದನ ತುಟಿಯು ಹವಳದ ಕುಡಿಹಂಗೆ
ಕುಡಿಹುಬ್ಬು ಬೇವಿನೆಸಳಂಗೆ| ಕಣ್ಣೋಟ
ಶಿವನ ಕೈಯಲಗು ಹೊಳೆದಂತೆ||
 

ಫಾರ್ಮುಲಾ ಹಾಲು
    
       ಈಗಿನ ಆಹಾರ ಪದ್ದತಿಯಿಂದಾಗಿ ಮತ್ತು ಕೆಲವು ಮೆಡಿಕೇಷನ್ ಗಳ ಕಾರಣದಿಂದಾಗಿ ತಾಯಂದಿರಲ್ಲಿ ಹಾಲಿನ ಉತ್ಪಾದನೆ ಆಗುವುದಿಲ್ಲ. ಫಾರ್ಮುಲಾ ಅದಕ್ಕೆ  ವೈಜ್ಞಾನಿಕ ಪರಿಹಾರ.ತಾಯಂದಿರು ಎದೆ ಹಾಲಿಗಾಗಿ  ಪ್ರಯತ್ನಿಸಿದ ನಂತರವೂ ವಿಫಲವಾದಾಗ ಯಾವ ತಾಯಿಯಾದ  ನೀವು ನಿಮ್ಮ ಮಗುವನ್ನು ಹಸಿವಿನಿಂದ ನರಳನ್ನು ಬಿಡುವಿರಾ ?

ಜೋಗೂಳ ಹಾಡಿದರೆ ಆಗಲೇ ಕೇಳ್ಯಾನು
ಹಾಲ ಹಂಬಲವ ಮರೆತಾನು| ಕಂದಂಗೆ
ಜೋಗೂಳದಾಗೆ ಅತಿಮುದ್ದು||

ಡೈಪರ್ ಬಳಕೆ

    ಮೊದಲೇ ಹೇಳಿದಂತೆ ಅನುಕೂಲ ವಿದ್ದರೆ ಡೈಪರ್ ಬಳಸುವುದು ತಪ್ಪಲ್ಲ. ಕೆಲವು ಮಕ್ಕಳಿಗೆ ಬಟ್ಟೆ ಒದ್ದೆಯಾಗಿಯೇ ಇನ್ಫೆಕ್ಷನ್ ಆಗುತ್ತದೆ. ಆದರಿಂದ ಕಿರಿಕಿರಿಯನ್ನು ಅನುಭವಿಸುವ ಮಕ್ಕಳೇ ಹೆಚ್ಚು. ಡೈಪರ್ ಪ್ಯಾಕ್ ಗಳ ಮೇಲೆ ಕನಿಷ್ಠ 12 ಗಂಟೆಗಳ ಕಾಲ ಬಳಸಬಹುದು ಎಂದು ನಮೂದಿಸಿರುತ್ತದೆ. ಆದರೂ ಗಮನಿಸಿ ಅದನ್ನು ಬದಲಿಸಬೇಕು. ಡೈಪರ್ ಇಲ್ಲದಿದ್ದರೂ ಬಟ್ಟೆಗಳನ್ನು ಬಳಸುವಾಗ ತೀರಾ ಜಾಗರೂಕತೆಯಿಂದ ಇರಬೇಕು. ಸಣ್ಣ ಪುಟ್ಟ ಕೀಟ , ಧೂಳು ಇಲ್ಲದಂತೆ ಬಿಸಿಲಿನಲ್ಲಿ ಒಣಗಿಸಿ . 

 

ಊಟದ ಡಬ್ಬಿಗೆ ,
ರುಚಿಯಾದ ತಿಂಡಿ
ಹಾಕಿಲ್ಲವೆಂದು‌‌ ದೂರಿದ‌
ದಿನಗಳಿಗೆ ಲೆಕ್ಕವಿಲ್ಲ.

ಇಸ್ತ್ರಿ ಇಲ್ಲದ ಯ್ಯುನಿಫಾಮ್೯,
ಪಾಲಿಶ್ ಇಲ್ಲದ ಶೂ,
ಹೆಣೆಯದ‌ ಕೂದಲು,
ತಪ್ಪುಗಳ ಸರಮಾಲೆಗೆ-
ಹೊಣೆಯಲ್ಲದ ನೀನು.

ಕೈ ಚೀಲದ ಪುಸ್ತಕಗಳಿಗೆ,
ತಪ್ಪಿದ ವೇಳಾಪಟ್ಟಿಗೂ,
ನಿನ್ನದೇ ನೆಪ ಹೇಳಿದಾಗಲೂ-
ಏನೂ ಶಪಿಸದೆ‌,ತರಗತಿಯ
ಬೆಲ್ ಬಾರಿಸುವ ಹೊತ್ತಿಗೆ 
ಹಾಜರಾತಿಯ ಸಮಯಕ್ಕೆ 
ಸರಿಯಾಗಿ ಶಾಲೆ ಸೇರಿಸುತ್ತಿದೆ.

ಈ ಬಾಳ ದಾರಿಯಲಿ, ನಿನ್ನ
ನೋಡಿ‌ ಅನುಸರಿಸಿದ್ದು- 
ಕಲಿತದ್ದು ಕಡಿಮೆಯಾದರು,
ಈಗ ಅರಿತದ್ದು - ಏಣಿಕೆಗೆ 
ಸಿಗುತ್ತಿದೆ 'ನನ್ನದೇ' ಕೂಸಿನಿಂದ.

ತಾಯಾಗುವುದೆಂದರೆ ಇದೆ
ಇರಬಹುದು.

ನಿಮ್ಮ ನಂಬಿಕೆಗೆ ಮಕ್ಕಳ ಮೇಲೆ ಪ್ರಾಯೋಗಿಕವಾಗಿ ಹೇರಬೇಡಿ.

  ಬರಹ- ಸಂಘಮಿತ್ರೆ ರಾಜೇಶ್

 

ಮೂಲತಃ ತಿಪಟೂರಿನ ನಾಗರಘಟ್ಟ ಗ್ರಾಮದ ‌ಕವಿ ಎನ್ .ಕೆ ಹನುಮಂತಯ್ಯ ಮತ್ತು ಬರಹಗಾರ್ತಿ ಶೈಲಜ ನಾಗರಘಟ್ಟ ಇವರ ಮಗಳು.
ಪ್ರಾಥಮಿಕ ಶಿಕ್ಷಣವನ್ನು ತಿಪಟೂರಿನ ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ , ಪ್ರೌಢ ಶಾಲ ಶಿಕ್ಷಣ ವನ್ನು ಹಾಸನದ ಬಿ‌.ಜಿ.ಎಸ್ ಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣ ವನ್ನು
ನಗರದ ಸಂತ ಜೋಸೆಫರ ಪದವಿ ಪೂರ್ವ ಕಾಲೇಜು, ಪದವಿ ಯನ್ನು ಆಂಗ್ಲಾ ಭಾಷೆ , ಪತ್ರಿಕೋದ್ಯಮ ಹಾಗೂ ಸಮಾಜಶಾಸ್ತ್ರ ವಿಷಯದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದ ನಂತರ, ಮೈಸೂರಿನ ಟೆರೆಷಿಯನ್ ಕಾಲೇಜಿನಲ್ಲಿ ಆಂಗ್ಲಾ ಸಾಹಿತ್ಯ ಐಚ್ಛಿಕ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಓದಿನ ಜೊತೆಗೆ ರೇಖಾಚಿತ್ರ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕನ್ನಡ ಸಾಹಿತ್ಯ ದಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರ ರೇಖಾಚಿತ್ರಗಳು ಆಂದೋಲನ, ಸಂಗಾತ, ಬೆವರ ಹನಿ, ಪ್ರಜಾವಾಣಿ ಹಲವು ಮಾಸಿಕ ಪತ್ರಿಕೆಗಳಲ್ಲಿ ಮತ್ತು ಶೈಲಜ ನಾಗರಘಟ್ಟ ಅವರ ಕಿಚ್ಚಿಲ್ಲದ ಬೇಗೆ, ನಾಗರಾಜ್ ಹೆತ್ತೂರ್ ಅವರ ಜಲದ ಮಂಟಪ, ಪ್ರಮೋದ್ ಬೆಳಗೋಡ್ ಅವರ ಬೇಟೆ, ಕವನ ಸಂಕಲನಗಳಲ್ಲಿ ಪ್ರಕಟವಾಗಿವೆ.ತುಮಕೂರಿನ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮತ್ತು ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಮಹಿಳಾ ದಿನದಂದು ಪ್ರದರ್ಶನಗೊಂಡಿವೆ.

ವೃತ್ತಿಯಲ್ಲಿ ಆಂಗ್ಲ ಭಾಷ ಉಪನ್ಯಾಸಕಿ ಆಗಿ ಕಾರ್ಯನಿರ್ವಹಿಸಿದ್ದಾರೆ. ಹಿಮಪಕ್ಷಿ ಎಂಬ ಮುಖಪುಟ ಮ್ಯಾಗಜೀನ್ ಸಂಪಾದಿಸುತ್ತಿದ್ದಾರೆ.

ಇವರ ಚೊಚ್ಚಲ ಕವನ ಸಂಕಲನ ಬೆನ್ನಿಗೆಲ್ಲಿಯ ಕಣ್ಣು 2021  ರಲ್ಲಿ ಬಿಡುಗಡೆಯಾಯಿತು. ಇತರ ಕವಿತೆಗಳು ಅವಧಿ , round table India, ಸುದ್ದಿ ದಿನ ಪೋರ್ಟಲ್ ಗಳಲ್ಲಿ ಪ್ರಕಟಗೊಂಡಿವೆ. ಮೈಸೂರಿನ ಯುವ ದಸರಾ ಕವಿಗೋಷ್ಠಿ, ಕನ್ನಡ ಸಾಹಿತ್ಯ ಅಕಾಡೆಮಿಯ ಯುವ  ಬರಹಗಾರ ಸಮಾವೇಶದಲ್ಲಿ, ಬಳ್ಳಾರಿಯ ವಿಶ್ವ ಕವಿ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ‌.

 

    

Disclaimer: The views expressed in this article are solely those of the author and do not represent the views of Ayra or Ayra Technologies. The information provided has not been independently verified. It is not intended as medical advice. Readers should consult a healthcare professional or doctor before making any health or wellness decisions.
Category:Health and Wellness



ProfileImg

Written by Sanghamithre Rajesh

Poet, Freelance illustrator, artist