ಬಸ್ ಪ್ರಯಾಣದ ವೇಳೆ ಆದ ಅನುಭವ !!!

ಪ್ರಯಾಣಿಕರಿಂದ ತುಂಬಿ ತುಳುಕುವ ಬಸ್ಸಿನಲ್ಲಿ ಒಮ್ಮೊಮ್ಮೆ ನಿಂತು ಪ್ರಯಾಣಿಸಿದಾಗ...



image

ಸುಮಾರು ನಾಲ್ಕೈದು ತಿಂಗಳು ಕೆಲಸಕ್ಕಾಗಿ ನಿತ್ಯ ಊರಿನಿಂದ ಮೈಸೂರಿಗೆ ಬಸ್‌ನಲ್ಲಿ ಪ್ರಯಾಣ. ಅಪ್ ಅಂಡ್ ಡೌನ್ ಮಾಡುವುದು ಅನಿವಾರ್ಯವಾಗಿತ್ತು. ಬಸ್ಸಿನಲ್ಲಿ ಎರೆಡೆರಡು ಆಸನಗಳ ಸಾಲಿನಲ್ಲಿ ಮೊದಲನೇ ಕಿಟಕಿ ಪಕ್ಕದ ಆಸನವೇ ನನ್ನ ನೆಚ್ಚಿನ ಸ್ಥಳ. ಅದೆಷ್ಟೋ ಬಾರಿ ಈ ಆಸನ‌ ಸಿಗದಿದ್ದಕ್ಕೆ ಆ ಬಸ್ಸನ್ನೇ ಹತ್ತುತ್ತಿರಲಿಲ್ಲ. ಮುಂದಿನ ಬಸ್‌ನಲ್ಲಿ ಹೋಗುತ್ತಿದ್ದೆ. ಪ್ರಾರಂಭದ ಒಂದಷ್ಟು ದಿನಗಳು ನಿತ್ಯ ಪ್ರಯಾಣ ತ್ರಾಸ ಎಂದೆನಿಸಿತ್ತು.‌ ನಂತರ ಅಭ್ಯಾಸವಾಗಿಬಿಟ್ಟಿತು. ನಿತ್ಯ‌ ಹೊಸ ಹೊಸ ಜನರು ಬಸ್ಸುಗಳಲ್ಲಿ ಪ್ರಯಾಣ ‌ಮಾಡುತ್ತಾರೆ. ಅಪ್‌ ಅಂಡ್ ಡೌನ್ ಮಾಡುವವರ ಸಂಖ್ಯೆ ಕಡಿಮೆ. ನಿತ್ಯ ಓಡಾಡುವವರಿಗೆ ಸಾಕಷ್ಟು‌ ರೀತಿಯ ಅನುಭವಗಳು ಸಿಗುತ್ತವೆ. ಇವರು ಎಂತಹ ಪರಿಸ್ಥಿತಿಯಲ್ಲೂ ಪ್ರಯಾಣ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ.

ಹೀಗೆ ಕಳೆದ ಸುಮಾರು ನಾಲ್ಕೈದು ತಿಂಗಳುಗಳ ಪ್ರಯಾಣವು ನಿತ್ಯ ಒಂದಿಲ್ಲೊಂದು ಹೊಸ ಅನುಭವ ಕೊಟ್ಟಿದೆ. ಆ ಪೈಕಿ‌ ಒಂದಷ್ಟು ನಿಮ್ಮ ಮುಂದೆ ಇಡುತ್ತಿದ್ದೇನೆ.

ಇದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ  ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ ನಂತರದ ದಿನಗಳಲ್ಲಿ ನಾನು ಪಡೆದ ಅನುಭವ. 

ಆಧಾರ್ ಕಾರ್ಡ್ ಮರೆತು ಬಂದ ಮಹಿಳೆ ಮತ್ತು ಕಂಡಕ್ಟರ್ ನಡುವಿನ ವಾಗ್ವಾದ

ರಾಜ್ಯದಲ್ಲಿ ಶಕ್ತಿ ಯೋಜನೆಯಡಿಯಲ್ಲಿ ಸಾರಿಗೆ ನಿಗಮದ ಕೆಂಪು ಬಸ್‌ನಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತವಿದ್ದು ಇದಕ್ಕೆ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಅಥವಾ ಯಾವುದಾದರೂ ಒಂದು ಗುರುತಿನ ದಾಖಲೆ ಕೊಂಡೊಯ್ಯುವುದು ಕಡ್ಡಾಯವಾಗಿದೆ. ಹೀಗಿದ್ದು ಎಲ್ಲರೂ ಮರೆಯದೆ ಏನಾದರೊಂದು‌‌ ದಾಖಲೆ ತೋರಿಸಿ ಉಚಿತ ಚೀಟಿ ಪಡೆದು ಪ್ರಯಾಣಿಸುತ್ತಾರೆ. ಅಕಸ್ಮಾತ್ ಆಧಾರ್ ತರುವುದನ್ನು ಮರೆತ ಮಹಿಳೆಯೊಬ್ಬರು ತಾನು ಸ್ಥಳೀಯ ಮಹಿಳೆಯಾಗಿದ್ದು ಉಚಿತ‌ ಪ್ರಯಾಣಕ್ಕೆ ಅವಕಾಶ ಕೊಡುವಂತೆ ಒತ್ತಾಯ ಪಡಿಸುವ ಸನ್ನಿವೇಶ ಒಮ್ಮೆ ಕಂಡು ಬಂತು. ನಿಯಮದ ಪ್ರಕಾರ ದಾಖಲೆ ತೋರಿಸುವಂತೆ ಕಂಡಕ್ಟರ್ ಕೇಳುತ್ತಿದ್ದಾರೆ. ಆದರೆ ಯಾವುದೇ ದಾಖಲೆ ಇಲ್ಲದೇ ಮಹಿಳೆ ಕಂಡಕ್ಟರ್ ಮೇಲೆಯ ಜೋರು ಮಾಡಿ ಉಚಿತ‌ ಚೀಟಿಗೆ ಆಗ್ರಹಿಸುತ್ತಿದ್ದರೆ ಸಹ ಪ್ರಯಾಣಿಕರೆಲ್ಲರೂ ಅಸಹಾಯಕರಾಗಿ ಈ ಪ್ರಸಂಗ ನೋಡುತ್ತಿದ್ದರು. ಕೊನೆಗೆ ಮಹಿಳೆ ಅನಿವಾರ್ಯವಾಗಿ ಹಣ ಕೊಟ್ಟು ಟಿಕೆಟ್ ಪಡೆದು ಪ್ರಯಾಣ ಮಾಡಬೇಕಾಯಿತು. ಕಂಡಕ್ಟರ್ ತನ್ನ ಕರ್ತವ್ಯ ಪಾಲನೆ ಮಾಡಿದ್ದು ಮಹಿಳೆಯ ಬೇಸರಕ್ಕೆ ಕಾರಣವಾಯಿತು. ಅಷ್ಟು ಸುಲಭವಾಗಿ ಮಹಿಳೆಯರು ಉಚಿತ ಪ್ರಯಾಣಕ್ಕೆ ಬೇಕಾದ ಅಗತ್ಯ ದಾಖಲೆ ಮರೆಯುವುದಿಲ್ಲ. ಪುರುಷರಾಗಿದ್ದಿದ್ದರೆ ಇಂತಹ ಸನ್ನಿವೇಶಗಳು ನಿತ್ಯ ಕಾಣ ಸಿಗುತ್ತಿದ್ದವೇನೋ ಗೊತ್ತಿಲ್ಲ. 

 

ಸೀಟಿಗಾಗಿ ಪ್ರಯಾಣಿಕರ ನಡುವೆ ಏರ್ಪಡುವ ವಾದ ವಿವಾದ

ಸರ್ಕಾರಿ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಸಹಜವಾಗಿ ಹೆಚ್ಚಾಗಿದ್ದು ಸೀಟಿನ ವಿಷಯಕ್ಕೆ ಏರ್ಪಡುವ ಕಲಹಗಳು ಈಗೀಗ ಸಾಮಾನ್ಯವಾಗಿವೆ. ಹಿಂದೆಯೂ ಈ ಸಮಸ್ಯೆ ಇತ್ತು. ಆದರೆ ಈಗ ಪ್ರಮಾಣದಲ್ಲಿ ಕೊಂಚ ಹೆಚ್ಚು ಎನ್ನಬಹುದು. ಸಾಮಾನ್ಯವಾಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಕಾರಣ ಬಸ್ ನ ಕಿಟಕಿಗಳಿಂದ ಬ್ಯಾಗು, ಚೀಲ‌ ಸೇರಿದಂತೆ ಇನ್ನಿತರ ವಸ್ತುಗಳನ್ನು ಇಟ್ಟು ಸೀಟ್ ಹಿಡಿದುಕೊಳ್ಳುವುದು ಸರ್ವೇ ಸಾಮಾನ್ಯ. ಹೀಗೆ ಸ್ವಯಂ ರಿಸರ್ವ್ ಮಾಡಿಕೊಂಡ ಸೀಟುಗಳಲ್ಲಿ‌ ಬೇರೆಯವರು ಕುಳಿತುಬಿಟ್ಟರೆ ಕಿರಿಕಿರಿ ತಪ್ಪಿದ್ದಲ್ಲ. ಕೆಲವೆಡೆ ಜಡೆ ಹಿಡಿದು ಕಿತ್ತಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದನ್ನು ನಾವು ನೋಡಿದ್ದೇವೆ. ಸೀಟಿಗಾಗಿ ಸಾಕಷ್ಟು ವಾದ ವಿವಾದಗಳು ನಡೆದು ಕೊನೆಗೆ ಅವರವರೇ ಸರಿಪಡಿಸಿಕೊಂಡು ಸಮಾಧಾನ ಮಾಡಿಕೊಳ್ಳುವುದು ಸೋಜಿಗ. ಇದನ್ನು ಗಮನಿಸುವ ಇತರ ಪ್ರಯಾಣಿಕರು ಕೇವಲ ಮೂಕ‌ ಪ್ರೇಕ್ಷಕರಾಗಿ ಉಳಿಯುವುದು ಮಾಮೂಲಿ.

ಚಿಲ್ಲರೆಗಾಗಿ ಪ್ರಯಾಣಿಕರ ಮತ್ತು ಕಂಡಕ್ಟರ್ ಮಧ್ಯೆ ಕಿರಿಕ್

ಹಿಂದೆಯೆಲ್ಲಾ ಎಲ್ಲಾ ಪ್ರಯಾಣಿಕರಿಗೂ ಟಿಕೆಟ್ ಗೆ ಹಣ ಪಡೆಯಲಾಗುತ್ತಿತ್ತು. ಶಕ್ತಿ ಯೋಜನೆ ಬಂದ ನಂತರ ಬಸ್ಸುಗಳಲ್ಲಿ ಮಹಿಳೆಯರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ. ಮಹಿಳೆಯರು ಟಿಕೆಟ್ ಗೆ ಯಾವುದೇ ಹಣ ನೀಡದಿರುವುದರಿಂದ ಕೇವಲ ಪುರುಷ ಪ್ರಯಾಣಿಕರಿಂದ‌ ಸಂಗ್ರಹವಾಗುವ ಮೊತ್ತದಲ್ಲಿ ಸಹಜವಾಗಿ ಕಂಡಕ್ಟರ್‌ಗೆ ಚಿಲ್ಲರೆ ಅಭಾವ ಮುಂಚೆಗಿಂತಲೂ ಕೊಂಚ ಹೆಚ್ಚು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ಕಂಡಕ್ಟರ್ ನಡುವೆ ಸಣ್ಣ ಪುಟ್ಟ ಕಿರಿಕಿರಿಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಆದರೆ ಅವುಗಳನ್ನು ಹಾಗೋ ಹೀಗೋ ಸಂಭಾಳಿಸಿ ಅಲ್ಲಲ್ಲೇ ಬಗೆಹರಿಸುವ ಕಂಡಕ್ಟರ್ ಗೆ ಒಂದು ಸಲಾಂ ಹೇಳಲೇಬೇಕು.  

ಒಮ್ಮೊಮ್ಮೆ ಸೀಟಿಲ್ಲದೆ ನಿಂತು ಪ್ರಯಾಣಿಸಿದಾಗ

ಒಮ್ಮೊಮ್ಮೆ ಸೂಕ್ತ ಬಸ್ಸುಗಳಿಲ್ಲದೇ ಪ್ರಯಾಣಿಕರಿಂದ ತುಂಬಿ ತುಳುಕುವ ಬಸ್ಸಿನಲ್ಲಿ ಹೋಗುವುದು ಅನಿವಾರ್ಯ. ಕುಳಿತುಕೊಳ್ಳಲು ಸೀಟಿಲ್ಲದೇ‌ ಇಕ್ಕಟ್ಟಿನಲ್ಲಿ ನಿಂತು ಪ್ರಯಾಣಿಸುವಾಗ‌ ಈ ಕೆಲಸವೇ ಬೇಡ, ಪ್ರಯಾಣವೇ ಬೇಡ ಅನಿಸಿದ್ದಿದೆ. ಮತ್ತೆ ಮಾರನೇ ದಿನ ಆಸನ ಸಿಕ್ಕಿ ಆರಾಮವಾಗಿ ಕುಳಿತು ಪ್ರಯಾಣಿಸಿದಾಗ ಬದುಕಿನಲ್ಲಿ ಎಲ್ಲಾ ರೀತಿಯ ಮಜಲುಗಳನ್ನು ಕಾಣಲೇಬೇಕು ಎಂಬುದು ಅರ್ಥವಾಗುತ್ತದೆ.

ಅಪರೂಪಕ್ಕೊಂದು ಬಸ್ಸಿನಲ್ಲಿ ಸುಖಕರ ಪ್ರಯಾಣದ ಅನುಭವ

ಕೊಳ್ಳೇಗಾಲದಿಂದ ಮೈಸೂರು ಬಸ್ ಪ್ರಯಾಣ ಸಾಮಾನ್ಯವಾಗಿ ಒಂದೂವರೆ ಗಂಟೆ ಸಮಯ ಹಿಡಿಯುತ್ತದೆ. ಕೆಲವೊಮ್ಮೆ ಅತಿಯಾದ ಪ್ರಯಾಣಿಕರಿಂದ ಬಸ್‌ನ ಪಿಕ್ ಅಪ್ ಕಡಿಮೆಯಾದರೆ ಇನ್ನೂ ಸ್ವಲ್ಪ ನಿಧಾನವಾಗುತ್ತದೆ. ಅಲ್ಲದೇ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದಾಗ ನಿಲುಗಡೆಗಳಲ್ಲಿ ಸಮಯ ಹೆಚ್ಚು ಹಿಡಿದು ಸಾಮಾನ್ಯ ಸಮಯಕ್ಕಿಂತ ಐದು ಹತ್ತು ನಿಮಿಷ ಹೆಚ್ಚಾಗಬಹುದು. ಈ ಮಧ್ಯೆ‌ ಅಪರೂಪಕ್ಕೊಮ್ಮೆ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದು ನಿಲುಗಡೆ ಸಂಖ್ಯೆ ಕಡಿಮೆಯಾದಾಗ ಬಸ್‌ನ ವೇಗ ಖುಷಿ ಕೊಡುತ್ತಿತ್ತು. ಆ ವೇಳೆ ಒಂದೂವರೆ ಗಂಟೆ ಬದಲಾಗಿ 1 ಗಂಟೆ ಹದಿನೈದು ನಿಮಿಷದಲ್ಲೆಲ್ಲಾ ಪ್ರಯಾಣ ಮುಗಿಯುತ್ತಿತ್ತು. ಖಾಲಿ ಖಾಲಿ ಬಸ್ಸಿನ ಪ್ರಯಾಣ ನಿಜಕ್ಕೂ ಸುಖಕರ. ಸೀಟಿನಲ್ಲಿ ಅಕ್ಕಪಕ್ಕ ಯಾರೂ ಇಲ್ಲದೇ ನಾವೊಬ್ಬರೇ ಇದ್ದರೆ ಏನೋ ಒಂದು ಉಲ್ಲಾಸದ ಅನುಭವ. ಅದರಲ್ಲೂ ಊರಿಗೆ ಬೇಗ ತಲುಪುವುದರಿಂದ ಪ್ರಯಾಣದ ಆಯಾಸವೂ ಕಡಿಮೆ. ಸಮಯವೂ ಉಳಿತಾಯ.

ಜಾತ್ರೆಗಳ ಸಮಯ ಬಸ್‌ಗಾಗಿ ಪರದಾಟ

ಮೈಸೂರು, ಚಾಮರಾಜನಗರ ಭಾಗದಲ್ಲಿ ಅಮಾವಾಸ್ಯೆಗಳಿಗೆ ಜಾತ್ರೆಗಳು ಜಾಸ್ತಿ. ಹಾಗಾಗಿ ಈ ಭಾಗದಲ್ಲಿ ಆಗಾಗ ನಡೆಯುವ ಜಾತ್ರೆಗಳ ಅಂಗವಾಗಿ ಬಸ್ ನಿಲ್ದಾಣಗಳು ಸಹ ಜಾತ್ರೆಗಳಂತೆ  ಜನರಿಂದ ತುಂಬಿ ತುಳುಕುತ್ತವೆ. ಹಾಗಾಗಿ ಹೆಚ್ಚಿನ ರೂಟ್ ಬಸ್ಸುಗಳನ್ನು ತೆಗೆದು ಜಾತ್ರೆಗಳಿಗೆ ನಿಯೋಜಿಸುವುದರಿಂದ ಇತರ ನಗರ ಪ್ರದೇಶಗಳಿಗೆ ಹೋಗುವ ಪ್ರಯಾಣಿಕರ ಯಾತನೆ ಹೇಳತೀರದು. ಸೂಕ್ತ ಸಮಯಕ್ಕೆ ಬಸ್ಸು ಸಿಗುವುದಿಲ್ಲ. ಬಸ್ಸು ಸಿಕ್ಕರೂ ಸೀಟು ಇರುವುದಿಲ್ಲ. ನಿತ್ಯ ಓಡಾಡುವವರು ಹೇಗೋ ಅಡ್ಜಸ್ಟ್ ಮಾಡಿಕೊಳ್ಳುತ್ತಾರೆ. ಆದರೆ ನಿರ್ದಿಷ್ಟವಾಗಿ ಓಡಾಡುವವರ ಪರಿಪಾಟಲು ಹೇಳತೀರದು.

ತುಂಬಿ ತುಳುಕುವ ಬಸ್‌ನಲ್ಲಿ ಕಂಡಕ್ಟರ್ ನುಸುಳಾಟ

ಕೆಲವೊಮ್ಮೆ ಬಸ್ಸು ತೀರಾ ಹೆಚ್ಚಾ ಜನರಿಂದ ತುಂಬಿದ ವೇಳೆ ಟಿಕೆಟ್‌ ವಿತರಿಸಲು ಕಂಡಕ್ಟರ್ ಪಡುವ ಯಾತನೆ ದೇವರಿಗೆ ಪ್ರೀತಿಯಾಗಬೇಕಷ್ಟೆ. ವಿಪರೀತ ನೂಕುನುಗ್ಗಲಲ್ಲಿ ಎಲ್ಲರಿಗೂ ಟಿಕೆಟ್ ನೀಡಬೇಕು. ಉಚಿತ ಚೀಟಿಯಾಗಲಿ, ನಗದು ಚೀಟಿಯಾಗಲಿ ಕಡ್ಡಾಯವಾಗಿ ಪ್ರತಿಯೊಬ್ಬರಿಗೂ ಟಿಕೆಟ್ ನೀಡಿವುದು ಕಂಡಕ್ಟರ್ ಜವಾಬ್ದಾರಿ. ಹೀಗಾಗಿ ಟಿಕೆಟ್ ವಿತರಿಸಲು ಪ್ರಯಾಣಿಕರ ಮಧ್ಯೆ ನುಸುಳಿಕೊಂಡು ಹಿಂದೆಯಿಂದ ಮುಂದೆ ಮುಂದೆಯಿಂದ ಹಿಂದೆ ಓಡಾಡಲು ಕಂಡಕ್ಟರ್ ಪಡುವ ಪಾಡು ನೋಡಿ ಏನೆನ್ನಬೇಕು ಎಂಬುದು ಅರ್ಥವಾಗುವುದಿಲ್ಲ‌. ಎಲ್ಲರಿಗೂ ಚೀಟಿ ಕೊಟ್ಟ ಬಳಿಕ ಒಮ್ಮೆ ಪ್ರಯಾಣಿಕರ ಸಂಖ್ಯೆ ಹಾಗೂ ವಿತರಿಸಿರುವ ಟಿಕೆಟ್ ಲೆಕ್ಕ ಸರಿಯಾಗಿದೆಯೇ ಎಂಬುದನ್ನು ದೃಢಪಡಿಸುವುದು ಕಂಡಕ್ಟರ್ ನ ಕರ್ತವ್ಯದ ಭಾಗ. ಎಲ್ಲವೂ ಸರಿಯಿದೆ ಎಂಬುದು ದೃಢವಾದಾಗ ನಿಟ್ಟುಸಿರು ಬಿಟ್ಟು ಕೊನೇ ಸೀಟಿಗೆ ಹೋಗಿ ಕುಳಿತುಕೊಳ್ಳುವುದು.

ಹೇಳಲು ಇನ್ನೂ ಸಾಕಷ್ಟಿದೆ. ಇಷ್ಟೇ ಅಲ್ಲದೇ ಇನ್ನೂ ಹಲವು ಸನ್ನಿವೇಶಗಳಿವೆ. ಕೆಲವೊಂದು ಮನಸ್ಸಿಗೆ ಮುದ ನೀಡಿದರೆ ಇನ್ನು ಕೆಲವು ಕಿರಿಕಿರಿ ಅನ್ನಿಸಿದ್ದುಂಟು. ನಿಮಗೂ ಬಸ್ ಪ್ರಯಾಣದಲ್ಲಿ ಈ ರೀತಿಯ ಅನುಭವಗಳಾಗಿದ್ದಲ್ಲಿ ತಪ್ಪದೇ ಕಾಮೆಂಟ್ ಬಾಕ್ಸ್ ‌ನಲ್ಲಿ ತಿಳಿಸಿ.

Category:Personal Experience



ProfileImg

Written by ಎಂ.ಡಿ.ಯುನುಸ್

Verified

ಪತ್ರಕರ್ತ, ಲೇಖಕ ಹಾಗೂ ಸಂದರ್ಶಕ