ವಿಸ್ತರವಾದ ಅಂಗಳ

ಬಾಲ್ಯದ ನೆನಪುಗಳು ♥️

ProfileImg
10 Jun '24
2 min read


image

ವಿಸ್ತಾರವಾದ ಅಂಗಳ ಜಿನುಗುವ ತುಂತುರು.
ಬಾಲ್ಯದ ನೆಂಪಿನ0ಗಳದಲ್ಲಿ.

ವಾಹ್ ,ಇಂತಹ ಸಾಲು ಬಾಲ್ಯ ನೆನಪಿಗೆ ಬರುತ್ತಿದೆ.
ನನ್ನ ಮನೆ ಬಾಲ್ಯದಲ್ಲಿ ಆಡಿ ಬೆಳೆದ ಅಜ್ಜ ಕಟ್ಟಿದ ಅಪ್ಪ ದೊಡ್ಡಪ್ಪ ಬಾಳಿ ಬದುಕಿದ ಮನೆ .ಇದರ ಅಂಗಳದ ವಿಸ್ತಾರ ಓಹ್,ಹೇಳಲು ನಿಲುಕದ್ದು.
ವಿಸ್ತಾರವಾದ ಅಂಗಳದಲ್ಲಿ ದೊಡ್ಡದೊಂದು ತುಳಸಿ ಕಟ್ಟೆ
ಬಲ ಭಾಗದಲ್ಲಿ ದನದ ಕೊಟ್ಟಿಗೆ .
ಅಂಗಳದ ತುಂಬಾ ದನ ಕಟ್ಟಲು ನೆಲಕ್ಕೆ ಹೊಡೆದ ಗೂಟಗಳು. ಕೊಟ್ಟಿಗೆ ಹಿಂದೆ ನಾಗ ಸಂಪಿಗೆ ಮರ .
  ಮದುವೆ ಮುಂಜಿ ನಾಮಕರಣ ,ಏನೇ ಇರಲಿ ನಮ್ಮ ಮನೆಯ ಅಂಗಳದಲ್ಲಿ ದೊಡ್ಡದೊಂದು ಚಪ್ಪರ .
ನಮ್ಮೂರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹೊನ್ನವಳ್ಳಿ ಎಂಬ ನಾಲ್ಕು ಮನೆಗಳ ಕುಗ್ರಾಮ.
.ಹಾಲವಾಣ ದ ಕಂಬಗಳು
,ಹಲಸು ಮಾವಿನ ಕೊನೆಗಳು, ಮಾವಿನ ಸೊಪ್ಪಿನ ಮುಚ್ಚಿಗೆ ಯಿಂದ ಮಾಡಿದ ಚಪ್ಪರದಲ್ಲಿಯೇ ಊಟ ತಿಂಡಿ ನಿದ್ದೆ ಎಲ್ಲವೂ.

   ಈ ದೊಡ್ಡ ಅಂಗಳ ನಂಗೆ ಆಡಲು ಕುಶಿ ಕೊಟ್ಟ ಜಾಗ
ಕಲ್ಲಾಟ ,ಕುಂಟೆಪಿಲ್ಲೆ ,ಲಗೋರಿ ,ಬುಗುರಿ ,ಗಿಲ್ಲಿ ದಾಂಡು
ಆಟ ಗಳಿಗೆ ಹೇಳಿ ಮಾಡಿದ ವಿಸ್ತಾರವಾದ ಅಂಗಳವಾಗಿತ್ತು.

   ನಮ್ಮದು ಮಲೆನಾಡಿನ ಭಾಗ,ಸದಾ ಜಿಟಿ ಜಿಟಿ ಮಳೆಯೇ ,ಮಾಘ ,ಪಾಲ್ಗುಣ,ಚೈತ್ರ ಮಾಸದ ಲ್ಲಿ ಬಿಟ್ಟರೆ ಉಳಿದಂತೆ ಜಿನುಗುವ ತುಂತುರು ಮಳೆಯೇ .❤️❤️❤️.

    ವಿಸ್ತಾರವಾದ ಅಂಗಳದಲ್ಲಿ ,ಜಿನುಗುವ ತುಂತುರು ಮಳೆಯಲ್ಲಿ ನೆನೆಯುತ್ತ ಕುಣಿಯುವುದೆಂದರೆ ,ಓಹ್ ಮತ್ತೊಮ್ಮೆ ಮರಳಿ ಬರಬಾರದೆ ನನ್ನ ಬಾಲ್ಯ.
      ಜಿನುಗುವ ಮಳೆಯಲ್ಲಿ ,ಗೋಧೂಳಿ ಸಂಜೆಯ ಲ್ಲಿ
ಓಡುತ್ತ ಬರುವ ನಮ್ಮ ಮನೆಯ ಹಸುಗಳು ,ಕೆಂದಿ ,ಗೌರಿ ,ಗಂಗೆ ,ದೊಡ್ಡ ಹಸು ,ಭೀಮ ,
ಇವರೆಲ್ಲ ನನ್ನ ಸಂಗಾತಿಗಳಾಗಿದ್ದರು.ಮತ್ತೆ ಮತ್ತೆ ಕಣ್ಣು ಮುಂದೆ ಬರುತ್ತಾರೆ.

    ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವರೆಗೂ ಇದೆ ಜಿನುಗುವ ಮಳೆಯಲ್ಲಿ ನೆನೆದು ,ದೂರದ ಶಾಲೆ ಯಿಂದ ನೆಡೆದು ಬರುತ್ತಿದ್ದ ನೆನಪು ಮಾಸಿಲ್ಲ.

     ಜಿನುಗುವ ತುಂತುರು ಹನಿಗಳು ,ಅಂಗಳವನ್ನೆಲ್ಲ ತೋಯಿಸಿದರೆ ,ಅದೇ ಗೊಜ್ಜೆಯ ಲ್ಲಿ ಕುಣಿದು ಕುಪ್ಪಳಿಸಿ ಬಟ್ಟೆಯೆಲ್ಲ ಒದ್ದೆಯಾಗಿ ,ಚಳಿ ಕಾಯಿಸಲು ಬಚ್ಚಲು ಮನೆಯ ಹಂಡೆ ಒಲೆ ಆಶ್ರಯಿಸುತ್ತಿದ್ದೆವು.

    ಅಂಗಳದಲ್ಲಿ ಕೈಗೆ ಸಿಗದೆ ತುಂತುರು ಮಳೆಯುಲ್ಲಿ ಓಡುತ್ತಿದ್ದ ಕರುಗಳನ್ನು ಹಿಡಿದು ಕಟ್ಟಿ ಹಾಕಲು ಅಪ್ಪ ದೊಡ್ಡಪ್ಪನಿಗೆ ಸಾಕು ಬೇಕಾಗುತ್ತಿತ್ತು.

ತಮ್ಮ ತಂಗಿ ,ಊರಿನ ಮಕ್ಕಳು ,ಬೇಸಿಗೆಯಲ್ಲಿ ಬರುತ್ತಿದ್ದ ಸೋದರತ್ತೆಯರ ಮಕ್ಕಳ ಜೊತೆ ಆಡಿದ ನೆನಪಿದೆ.
    ಎಡಭಾಗದಲ್ಲಿ ,ಅಮಟೆ ,ಹೊಂಗೆ ಮರದ ನೆರಳಿನಲ್ಲಿ ಇದ್ದ ದೊಡ್ಡ ಬಾವಿ ಎಲ್ಲರ ಮನೆಯ ಸಿಹಿ ನೀರಿನ ಜೀವವಾಗಿತ್ತು.
  ಅಮ್ಮನ ಬಟ್ಟೆ ,ಬೇಳೆ ಕಾಳು ಒಣಗಿಸುವ ,ಕಾಪಿ ಕೊಯಿಲಿನಲ್ಲಿ ,ಕಾಫಿ ಬೀಜ ಅಳೆಯುವ ಒಣಗಿಸುವ,
ಹುಣಸೆಹಣ್ಣು ಚೆಚ್ಚುವ ,ತಾಣವಾಗಿತ್ತು.
  ಊರಿನವರ ಮಾತಿಗೆ ಸಾಕ್ಷಿಯಾಗಿತ್ತು ಎಮ್ಮ ಮನೆಯ ಅಂಗಳದ ಬಾವಿ ಕಟ್ಟೆ.
ಕಾಫಿ ಬೀಜ ಒಣ ಹಾಕಿದಾಗ ,ಬೇಸಿಗೆಯ ತುಂತುರು ಆರಂಭವಾದರೆ ಸಾಕು ,ಆ ಜಿನುಗುವ ಹನಿಯಲ್ಲಿ ನೆನೆಯುತ್ತಲೇ ,ಬೀಜ ಎತ್ತಿಡುವ ಸಾಹಸ .
   ಅಂಗಳದ ತುಳಸಿ ಕಟ್ಟೆಯಲ್ಲಿ ,ಸಣ್ಣ ಜಿನಿಯುವ ತುಂತುರು ಇದ್ದರು ನನ್ನ ಅಜ್ಜ ಬಿಡದೆ ಸಂಧ್ಯಾವಂದನೆ
ಮಾಡಿ ಬರುತ್ತಿದ್ದರು.

    ಅಮ್ಮ  ಜಿನಿಯುವ ಹನಿಯಲ್ಲಿ ,ಬಾವಿ ನೀರು ಸೇದುತ್ತಿದ್ದಳು , ವಿಸ್ತಾರವಾದ ಅಂಗಳ ಜಿನುಗುವ ತುಂತುರುವಲ್ಲಿ ಸದಾ ಹಸಿರು ನೆನಪು.

ಎಚ್ ಎಸ್ ಭವಾನಿ ಉಪಾಧ್ಯ.   
ಬೆಂಗಳೂರು.
 


 

Category:Personal Experience



ProfileImg

Written by H. S.Bhavani Upadhya

ನಾನು ಲೇಖಕಿ.ಬರೆಯುವುದು ನನಗೆ ಅತ್ಯಂತ ಇಷ್ಟ. ಓದು ಬರಹ ನನ್ನ ಬದುಕಿನ ಭಾಗ.6363008419