ಅಂತ್ಯ

ನಿಗೂಢ ಲೋಕವಿದು

ProfileImg
18 Mar '24
6 min read


image

 

ಅದು ಅಮವಾಸ್ಯೆಯ ಕಾರ್ಗತ್ತಲ ರಾತ್ರಿ .ಜನರೆಲ್ಲರೂ ಮಲಗಿರುವ ಸಮಯ. ಮಧ್ಯರಾತ್ರಿ ನಾಯಿಗಳು ಊಳಿಡುತ್ತಿದ್ದರೆ ಗೂಬೆಗಳು ವಿಕಾರವಾಗಿ ಕೂಗುತ್ತಿದ್ದವು . ಹೊಸೂರಿನ ಸ್ಮಶಾನದ ಬಳಿ ಪದ್ಮಾಸನದಲ್ಲಿ ಕುಳಿತು ಮೌನೇಶ ಮಾಂತ್ರಿಕ ವಾಮಾಚಾರದ ದೇವಿಯ ಮಂತ್ರಗಳನ್ನು ಜಪಿಸುತ್ತಿದ್ದರೆ ಮನೆಯಲ್ಲಿ ಮಲಗಿದ್ದ ಅನಘಾ ಸಣ್ಣಗೆ ನರಳಿದ್ದಳು . ರಕ್ತವನ್ನು ತರ್ಪಣ ಕೊಟ್ಟಿದ್ದ ಮೌನೇಶ ಮಾಂತ್ರಿಕ ಗಹಗಹಿಸಿ ನಗುತ್ತಿದ್ದ . ಇನ್ನೂ ಕೆಲವೇ ದಿನ ನಾನು ಮಾಂತ್ರಿಕ ಲೋಕದ ಅಧಿಪತಿಯಾಗುತ್ತೇನೆ. "ಅಹೋಬಾ " ನನ್ನ ಕೈವಶವಾಗುತ್ತಾಳೆ. ಅವಳು ಒಲಿದರೆ ಇಡೀ ಜಗತ್ತೇ ನನ್ನ ಕಿರುಬೆರಳಿನಲ್ಲಿ ಹ..ಹ..ಹ...ಹದಿನೈದು ವರ್ಷಗಳ ಪ್ರಯತ್ನಕ್ಕೆ ಫಲ ದೊರೆಯುವ ಸಮಯ ಬಂದಿದೆ. ಮುಂದಿನ ಅಮವಾಸ್ಯೆಗೆ ನನ್ನನ್ನು ಹಿಡಿಯುವರು ಯಾರು? ನಾನೇ ಸರ್ವಾಧಿಪತಿ ಎಂದು ಹೇಳುತ್ತಾ ಅನಘಾಳ ಮೇಲೆ ವಿವಿಧ ಪ್ರಯೋಗಗಳನ್ನು ಮಾಡಿ ಮುಗಿಸಿದ್ದ .

ಮಾಂತ್ರಿಕನ ಯಾವ ವಿಷಯದ ಅರಿವಿಲ್ಲದ ಅನಘಾ ಸಣ್ಣಗೆ ನರಳುತ್ತಿದ್ದಳು. ಅವಳ ಹೊಟ್ಟೆಯಲ್ಲಿ ತಳಮಳ ಪ್ರಾರಂಭವಾಗಿತ್ತು . 
ಅನಘಾ ರಾಮಚಂದ್ರಶಾಸ್ತ್ರಿಗಳ ಏಕ ಮಾತ್ರ ಪುತ್ರಿ . ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡಳು. ಅನಘಾ ಸ್ವಲ್ಪ ದೊಡ್ಡವಳಾಗುತ್ತಿದ್ದ ಹಾಗೆಯೇ ರಾಮಚಂದ್ರಶಾಸ್ತ್ರಿಗಳು ಇಹಲೋಕವನ್ನು ತ್ಯಜಿಸಿದ್ದರು. ಊರಿನ ಜನರೆಲ್ಲಾ ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಅನಘಾಳಿಂದಲೇ ಅವರ ತಂದೆ ತಾಯಿ ಸತ್ತಿದ್ದು ಅಂತ ಆಗಾಗ್ಗೆ ಹೇಳಿ ಅನಘಾಳ ಕಣ್ಣೀರಿಗೆ ಕಾರಣರಾದ್ರೆ, ಮೊಮ್ಮಗಳನ್ನು  ಸಾವಿತ್ರಮ್ಮ ಜೋಪಾನ ಮಾಡಿದ್ದರು . ಕ್ರಮೇಣ ಅಜ್ಜಿ ಮೊಮ್ಮಗಳು ಊರಿನವರ ಸಹವಾಸವೇ ಬೇಡ ಎಂದು ಊರನ್ನು ತೊರೆದು ಬೆಂಗಳೂರಿನಲ್ಲಿ ಪುಟ್ಟ ಮನೆ ಮಾಡಿಕೊಂಡಿದ್ದರು . ಅನಘಾ ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರುವ ವೇಳೆಗೆ ಸಾವಿತ್ರಮ್ಮ ಕೂಡಾ ವಿಧಿವಶರಾದಾಗ ಅನಘಾಳ ಬದುಕಿನ ಭರವಸೆಯೊಂದು ಕಮರಿ ಹೋಗಿತ್ತು .ಅಜ್ಜಿಯ ನೆನಪಿನಲ್ಲಿ ಅದೇಷ್ಟೋ ರಾತ್ರಿ ಕಣ್ಣೀರು ಹಾಕಿ ಹಾಕಿ ಅವಳ ಕಣ್ಣ ಜಲವೇ ಬತ್ತಿ ಹೋಗಿತ್ತು . ಅದೇ ಮನೆಯಲ್ಲಿದ್ದರೆ ಅಜ್ಜಿಯ ನೆನಪು ಬರುತ್ತೆಂದು ರಾಮಮೂರ್ತಿ ನಗರದಲ್ಲಿ ಹೊಸ ಮನೆ ಮಾಡಿ ವಾಸ ಮಾಡತೊಡಗಿದ್ದಳು. ಹೀಗೆ ದಿನಗಳುರುಳುವ ಸಮಯದಲ್ಲಿ ಅವಳಿಗೆ ಪರಿಚಯವಾದವನೇ ಅನ್ವಿತ್ .

ಅನಘಾಳ ಆಫಿಸ್ ಗೆ ಹೊಸದಾಗಿ ಸೇರಿಕೊಂಡಿದ್ದ ಅನ್ವಿತ್ ತುಂಬಾ ಪ್ರತಿಭಾವಂತ  ಹುಡುಗ. ಅವನ ಆಕರ್ಷಕ ಮೈಕಟ್ಟು, ನಕ್ಕರೆ ಗುಳಿ ಬೀಳುವ ಕೆನ್ನೆ ,ಹಾಲು ಬಿಳುಪಿನ ಮುಖ, ಸದಾ ಹಸನ್ಮುಖಿಯಾಗಿರುವ ಅವನ ವ್ಯಕ್ತಿತ್ವಕ್ಕೆ ಆಫೀಸಿನ ಹುಡಿಗಿಯರೆಲ್ಲಾ ಬಿದ್ದಾಗಿತ್ತು. ಆದರೆ ಹುಡುಗಿಯರ ಸಹವಾಸಕ್ಕೆ ಅನ್ವಿತ್ ಮುಂದಾಗಲಿಲ್ಲಾ. ನೀಡಿದ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದ. ಇತ್ತ ತಾನಾಯಿತು ತನ್ನ ಕೆಲಸವಾಯಿತು ಎಂದು ಕುಳಿತುಕೊಳ್ಳುತ್ತಿದ್ದ ಅನಘಾ ಹೊಸಾ ಪ್ರಾಜೆಕ್ಟ್ ಒಂದರಲ್ಲಿ ಅನ್ವಿತ್ ತಂಡವನ್ನು ಸೇರಬೇಕಾಗಿ ಬಂತು .

ಅನ್ವಿತ್ ಕೂಡಾ ಅನಾಥ ಹುಡುಗ. ತಬ್ಬಲಿಯಾಗಿದ್ದ ಅನ್ವಿತ್ ನನ್ನು ರಾಮಕೃಷ್ಣ ಆಶ್ರಮ ಸಲಹಿ ಅವನಿಗೆ  ಒಳ್ಳೆಯ ಸಂಸ್ಕಾರವನ್ನು ನೀಡಿತ್ತು . ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಓದನ್ನು ಮುಂದುವರೆಸಿದ್ದ ಅನ್ವಿತ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ. ಮೊದಲು ಮಾಡಿದ ಕೆಲಸದ ಅನುಭವಗಳು, ಅವನ ನಡೆ ನುಡಿಗಳಿಂದಾಗಿ ಬಹುಬೇಗನೆ ಮ್ಯಾನೇಜರ್ ಹುದ್ದೆಯನ್ನು ಗಿಟ್ಟಿಸಿಕೊಂಡ. ಕಷ್ಟಗಳ ಅರಿವಿದ್ದ ಅನ್ವಿತ್ ಟೀಮ್ ಗೆ ಅನಘಾ ತುಸು ಸಂಕೋಚದಿಂದಲೇ ಬಂದಿದ್ದಳು ಆದರೆ  ಆರು ತಿಂಗಳು ಕಳೆಯುವಷ್ಟರಲ್ಲಿ ಅನ್ವಿತ್ ಅನಘಾ ಮಧ್ಯದಲ್ಲಿ ಸದ್ದಿಲ್ಲದೆ ಪ್ರೀತಿ ಉಂಟಾಗಿತ್ತು . ಅನ್ವಿತ್ ಅನಘಾಳ ಜೀವನದ ಬಗ್ಗೆ ತಿಳಿದ ಮೇಲಂತು ಅವಳನ್ನು ಕಣ್ರೆಪ್ಪೆಯ ರೀತಿ ಕಾಯುತ್ತಿದ್ದ . ಇಬ್ಬರೂ ಹಸೆಮಣೆಯೇರಿ ಹೊಸ ಜೀವನ ಪ್ರಾರಂಭಿಸಬೇಕು ಎಂಬ ನಿರ್ಧಾರ ಕೂಡಾ ಮಾಡಿದ್ದರು. ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹವಾಗಬೇಕು ಎಂದು  ಇಬ್ಬರು ನಿರ್ಧರಿಸಿ ಮುಂದಿನ ಜೀವನದ ಕನಸು ಕಾಣುವ ಸಮಯದಲ್ಲಿಯೇ ಅನಘಾ ಮೇಲೆ ಮೌನೇಶ ಮಾಂತ್ರಿಕನ ನೆರಳು ಬಿದ್ದಿದ್ದು.

ಮೌನೇಶ ಮಾಂತ್ರಿಕ ಚಿಕ್ಕವಯಸ್ಸಿನಲ್ಲಿಯೇ ಕ್ಷುದ್ರ ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಮನೆ ಬಿಟ್ಟು ಕೊಳ್ಳೆಗಾಲಕ್ಕೆ ಓಡಿಹೋಗಿದ್ದ . ಕಣ್ಣಿನಲ್ಲಿ ವಾಮಾಚಾರದ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಸೆಯಿದ್ದ ಮೌನೇಶನಿಗೆ   ಒಂದೊಂದೆ ವಾಮಾಚಾರದ ಪ್ರಯೋಗವನ್ನು ಕಲಿಸಿಕೊಟ್ಟವಳು ಜಟ್ಟಮ್ಮಾ. ಕೊಳ್ಳೆಗಾಲದ ಆ ಮಾಂತ್ರಕಿಯ ಬಳಿ ವಶವಿದ್ದ ಕ್ಷುದ್ರ ಶಕ್ತಿಗಳು ಬಹುಬೇಗನೇ ಮೌನೇಶನಿಗೂ ವಶವಾಗಿದ್ದವು. ಆದರೆ ತನಗೆ ವಿದ್ಯೆ ಕಲಿಸಿದ ಜಟ್ಟಮ್ಮನನ್ನೇ ಮೌನೇಶ ಬಲಿ ಕೊಟ್ಟಿದ್ದ . ಮೌನೇಶ ಮಾಂತ್ರಿಕ ಅದೇಷ್ಟು  ಶಕ್ತಿಶಾಲಿಯಾಗಿದ್ದನೆಂದರೆ ಅವನನ್ನು ಸೋಲಿಸಲು ಪ್ರಯತ್ನಿಸಿದವರೆಲ್ಲಾ ಮಾಂತ್ರಿಕನ  ಕ್ಷುಧ್ರ ಶಕ್ತಿಗೆ ಬಲಿಯಾಗಿ ಇಹಲೋಕ ತ್ಯಜಿಸಿದ್ದರು . ಮಾಂತ್ರಿಕ ಲೋಕದಲ್ಲಿ ಹಲವಾರು ಸಾಧನೆ ಮಾಡಿ 
ನೂರಾರು ವಿದ್ಯೆ ಒಲಿಸಿಕೊಂಡಿದ್ದ ಮೌನೇಶನಿಗೆ "ಅಹೋಬಾ" ಶಕ್ತಿಯನ್ನು ವಶಮಾಡಿಕೊಳ್ಳುವ ಬಯಕೆ ಉಂಟಾಯ್ತು . ಅಷ್ಟು ಸುಲಭಕ್ಕೆ ಅಹೋಬಾ ಒಲಿಯುವವಳಲ್ಲಾ, ಅದಕ್ಕಾಗಿ ಕಠಿಣವಾದ ಹಾದಿಯನ್ನೇ ಮೌನೇಶ ಮಾಂತ್ರಿಕ ತುಳಿದ. ಅವನ ಆಸೆ ಕೊನೆಗೂ ನೇರವೇರುವ ಸಮಯ ಬಂದಿತ್ತು. ಬಲಿ ಕೊಡಲು ಬೇಕಾದ ಕನ್ಯೆಯಾಗೆ ಉಳಿದಿರುವ ಮೂಲಾ ನಕ್ಷತ್ರದ ಹುಡುಗಿಗಾಗಿ ಹುಡುಕಿ ಹುಡುಕಿ ಸಾಕಾಗಿದ್ದವನಿಗೆ ಅನಘಾ ವಜ್ರದಂತೆ ತೊರೆತಿದ್ದಳು. ಅವಳನ್ನು ಯಾವುದೇ ಕಾರಣಕ್ಕೂ ಮದುವೆಯಾಗಲು ಬಿಡಬಾರದು ಎಂಬ ಕಾರಣಕ್ಕೆ ಅವಳ ಮೇಲೆ ಕ್ಷುದ್ತಶಕ್ತಿ ಪ್ರಯೋಗ ಮಾಡಿದ್ದ .

ಅನ್ವಿತ್ ನನಗೆ ತುಂಬಾ ಹೆದರಿಕೆ ಆಗ್ತಿದೆ ಕಣೋ . ನಿನ್ನೆ ರಾತ್ರಿಯಿಂದ ಹೊಟ್ಟೆಯಲ್ಲಿ ಒಂಥರಾ ಹಿಂಸೆಯಾಗ್ತಿದೆ. ಕೈಕಾಲಲ್ಲಿ ಶಕ್ತಿನೇ ಇಲ್ಲಾ . ತಲೆ ತಿರುಗಿದ ಹಾಗೆ ಆಗುತ್ತೆ . ನನಗೆ ಯಾವ್ದೊ ದೊಡ್ಡ ರೋಗ ಬಂದಿದೆ ಅನಿಸ್ತಿದೆ ಅಂತ ಅನಘಾ ಅನ್ವಿತ್ ಭುಜಕ್ಕೊರಗಿ ಮಾತನಾಡುತ್ತಿದ್ರೆ ಅನಘಾಳನ್ನು ಮೆಲ್ಲನೆ ಹಿಡಿದೆತ್ತಿ ನೀನು ನನ್ನ ಬಂಗಾರಿ ಅಲ್ವಾ , ನಿನಗೇನು ಆಗಲ್ಲಾ . ಡಾಕ್ಟರ್ ಹತ್ರಾ ತೋರಿಸೋಣ. ಎಂದು ಅವಳನ್ನು ಸಮಾಧಾನ ಪಡಿಸಿ ಡಾಕ್ಟರ್ ಬಳಿ ಕರೆದುಕೊಂಡು ಹೋದ . ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಹೀಗೆ ಎಲ್ಲಾ ಥರಹದ ಪರೀಕ್ಷೆಗಳಾದ್ವು .ಆದ್ರೆ ಯಾವ ರಿಪೋರ್ಟ್ ಅಲ್ಲೂ ಕೂಡಾ ಅನಘಾಗೆ ಏನು ಆಗಿಲ್ಲಾ, ಎಲ್ಲಾ ನಾರ್ಮಲ್ ಎಂದು ಬಂದಿತ್ತು. ರಿಪೋರ್ಟ್ ನೋಡಿ ಅನಘಾ , ಅನ್ವಿತ್ ಇಬ್ಬರೂ ಅಚ್ಚರಿಗೊಳಗಾದ್ರೆ ಅಲ್ಲಿ ಮೌನೇಶ ಮಾಂತ್ರಿಕ ಮತ್ತೊಮ್ಮೆ  ನಗುತ್ತಿದ್ದ .

ದೇವರ ಮುಂದೆ ಮಂದವಾದ ದೀಪ ಉರಿಯುತ್ತಿತ್ತು . ಜ್ವಾಲಮಾಲಿನಿ ದೇವಿಯ ಉಪಾಸನೆಯನ್ನು ಮಾಡುತ್ತಿದ್ದ ಗಣಪತಿಶಾಸ್ತ್ರಿಗಳು ಮೆಲ್ಲನೆ ಕಣ್ಣು ತೆರೆಯುತ್ತಾ ಅಮ್ಮಾ , ಜ್ವಾಲಮಾಲಿನಿ ಯಾಕೆ ಇಷ್ಟು  ಕಾಡುತ್ತಿರುವೆ ? ಯಾರದೋ ಕ್ಷುದ್ರ ಸಾಧನೆಗಾಗಿ ಆ ಮುಗ್ಧ ಹುಡುಗಿಯನ್ನು  ಯಾಕೆ  ನರಳಿಸುತ್ತಿರುವೆ. ಅವನನ್ನು ಮಟ್ಟ ಹಾಕಲು ನನ್ನ ಶಕ್ತಿ ಸಾಲದು . ಆ ಮಾಂತ್ರಿಕನಿಂದ ಅನಘಾಳನ್ನು ರಕ್ಷಿಸುವ ದಾರಿ ತೋರಿಸು. ಕಳೆದ ನಲವತ್ತು ವರ್ಷಗಳಿಂದ ನಿನ್ನನ್ನು ಪೂಜಿಸುತ್ತಿರುವೆ.‌ಅಮ್ಮಾ ಕಾಪಾಡಮ್ಮಾ ಎಂದು ದೇವಿಯಲ್ಲಿ‌ ಮೊರೆಯಿಡುತ್ತಿದ್ದರು . ಗಣಪತಿ ಶಾಸ್ತ್ರಿಗಳು ಸಾತ್ವಿಕ ಲೋಕದ ಆರಾಧಕರು . ಸಣ್ಣ ಪುಟ್ಟ ಮಾಂತ್ರಿಕರನ್ನು ಮಟ್ಟಹಾಕಿ ದೇವಿಯ ಸ್ಮರಣೆಯಲ್ಲಿ ಜೀವನ ನಡೆಸುತ್ತಿದ್ದರು .ಆದರೆ ಮೌನೇಶ ಮಾಂತ್ರಿಕ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದ್ದ . ಧ್ಯಾನದಲ್ಲಿ ಕುಳಿತಿದ್ದ ಶಾಸ್ತ್ರಿಗಳಿಗೆ ಅನಘಾಳ ಚಿತ್ರಣವೆಲ್ಲಾ ಕಂಡಿತ್ತು. ಮೌನೇಶ ಮಾಂತ್ರಿಕ‌ ಮಾಡುತ್ತಿರುವ ದುಷ್ಟ ಕೆಲಸವು ಕಾಣಿಸಿತು. ಅದನ್ನು ಕಂಡ ದಿನದಿಂದಲೇ ಶಾಸ್ತ್ರಿಗಳ ಮನಸ್ಸು ಉದ್ವೇಗಗೊಂಡಿತ್ತು.

ಇತ್ತ ಅನಘಾ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿತ್ತು .‌ಯಾವ ಆಸ್ಪತ್ರೆಗೆ ಕರೆದುಕೊಂಡು ಹೋದರು ಆರೋಗ್ಯ ಮಾತ್ರ ಸುಧಾರಿಸಲಿಲ್ಲಾ.‌ಅನ್ವಿತ್ ಗಂತು ಅನಘಾಳ ಸೊರಗಿದ ದೇಹವನ್ನು ನೋಡಿ ದುಃಖ ಉಮ್ಮಳಿಸಿ ಬರುತ್ತಿತ್ತು . ಅವಳು ಸರಿಯಾಗಿ ಊಟ ಮಾಡದೆ ಹದಿನೈದು ದಿನಗಳಾಗಿತ್ತು .

ಭಂ ಭಂ ಭೋಲೆನಾಥ್ . ಮಗೂ ಅಘೋರನಾಥ, ನೀನು ಈ ಕೂಡಲೇ ತೆರಳಬೇಕಾದೆ. ಜಗತ್ತಿನ ಸರ್ವನಾಶಕ್ಕೆ ಕಾರಣನಾಗುವವನ್ನು ಸಂಹರಿಸಿ ಬಾ. ಶಿವನ ಕೃಪೆ ನಿನ್ನ ಮೇಲಿರಲಿ. ಶಂಭೋ ಶಂಕರಾ ಎಂದು ಗುರು ಕಪಾಲನಾಥರು ತಲೆಯ ಮೇಲೆ ಕೈ ಇಟ್ಟು ಹೇಳಿದ ಕ್ಷಣ ಅಘೋರನಾಥ ಆಗಲಿ ಗುರುದೇವ. ದುಷ್ಟಸಂಹಾರ ಮಾಡಲು ನನ್ನನ್ನೇ ಆಯ್ದುಕೊಂಡಿದ್ದೀರಿ.‌ ಈ‌ ಕೆಲಸದಲ್ಲಿ ಯಶಸ್ವಿಯಾಗುವಂತೆ ಅನುಗ್ರಹಿಸಿ. ಅಘೋರಿಗಳು ಜಗತ್ತಿನ ರಕ್ಷಣೆಗಾಗಿ ಸರ್ವವನ್ನು ತ್ಯಾಗ ಮಾಡಿದರು ಎಂಬ ಮಾತು ಮತ್ತೊಮ್ಮೆ ಸತ್ಯವಾಗಲಿ. ಹೋಗಿ ಬರುತ್ತೇನೆ ಗುರುದೇವಾ . ಭಂ ಭಂ ಭೋಲೆನಾಥ್.

ಅಘೋರನಾಥ ಇಪ್ಪತ್ತು ವರ್ಷಗಳಿಂದ  ಶಿವನನ್ನೇ ಆರಾಧಿಸುತ್ತ, ಕಷ್ಟಪಟ್ಟು ಅಘೋರಿಯಾಗಿದ್ದ . ತಿಂಗಳುಗಟ್ಟಲೆ ಒಂದು ಹಿಡಿ ಅನ್ನವನ್ನು ಊಟ ಮಾಡಿ ಬದುಕಿದ್ದ. ಮಧ್ಯರಾತ್ರಿ ಸ್ಮಶಾನದಲ್ಲಿ  ಪದ್ಮಾಸನ ಹಾಕಿ ಕುಳಿತು ಶಿವಧ್ಯಾನವನ್ನು ಮಾಡಿದ್ದ .‌ಒಂಟಿ ಕಾಲಿನಲ್ಲಿ ಹಿಮದ ರಾಶಿಯ ಮೇಲೆ ನಿಂತು ತಪಸ್ಸನ್ನಾಚರಿಸಿದ್ದ . ಅವನ ಶ್ರದ್ಧೆ , ಭಕ್ತಿಗೆ ಒಲಿದು ಅಘೋರ ಪಂಥದ ಗುರುಗಳಾದ ಕಾಪಾಲಿಕ ಗುರು ವಿಶೇಷ ವಿದ್ಯೆಯನ್ನು ಕಲಿಸಿಕೊಟ್ಟಿದ್ದರು.  ಕಾಮಾಕ್ಯ ಮಂದಿರದಿಂದ ಹೊರಟ ಅಘೋರನಾಥ ಎಲ್ಲಿಯೂ ವಿಶ್ರಮಿಸದೆ ಗಣಪತಿ ಶಾಸ್ತ್ರಿಗಳ ಮನೆ ಮುಂದೆ ಬಂದು ನಿಂತಿದ್ದ .

ದುಷ್ಟ ಮಾಂತ್ರಿಕನನ್ನು ಸದೆಬಡಿಯಲು ಯೋಚಿಸುತ್ತಾ ಮನೆಯೊಳಗಡೆ  ಕುಳಿತಿದ್ದ ಶಾಸ್ತ್ರಿಗಳಿಗೆ ಕತ್ತಲೆಯಲ್ಲಿ ನೆರಳೂ‌ ಕೂಡಾ ಜೊತೆ ನಿಲ್ಲುವುದಿಲ್ಲವೆನೋ ಎಂಬಂತೆ ಭಾಸವಾಗಿತ್ತು. ಕ್ಷುದ್ರ ಶಕ್ತಿಗಳೆಲ್ಲವನ್ನು ಒಲಿಸಿಕೊಂಡಿದ್ದ ಮಾಂತ್ರಿಕನನ್ನು ಸೋಲಿಸುವ ದಾರಿ ಕಾಣದೆ ಕುಳಿತಿದ್ದ ಸಮಯದಲ್ಲಿ ಕಿವಿಗೆ ಬಿದ್ದಿದ್ದು ಭಂ ಭಂ ಭೋಲೆನಾಥ್ ಎಂಬ ಸ್ವರ. ಗಣಪತಿ ಶಾಸ್ತ್ರಿಗಳು‌ ಮನೆಗೆ ಬಂದ ಅಘೋರನಾಥನನ್ನು ಕಂಡು ಖುಷಿ ಪಟ್ಟರು. ಜ್ವಾಲಮಾಲಿನಿಗೆ  ಕೊನೆಗೂ ತನ್ನ ಪ್ರಾರ್ಥನೆ ಕೇಳಿಸಿತೆಂದು ಅವರ ಕಣ್ಣುಗಳಲ್ಲಿ ನೀರು ಜಿನಗಿದವು. ಇಬ್ಬರೂ ಇನ್ನೇನು ಭಯವಿಲ್ಲ ಎಂಬಂತೆ ಒಬ್ಬರಿಗೊಬ್ಬರು ಕೈ ಮುಗಿದು ಕುಳಿತುಕೊಂಡರು.

ಇತ್ತ ಅನಘಾ ,ಅನ್ವಿತ್ ನಾನಿನ್ನು ಬದುಕೊದಿಲ್ಲ . ನೀನು ಬೇರೆ ಯಾವುದಾದ್ರು ಹುಡುಗಿಯನ್ನು ನೋಡಿ ಮದುವೆಯಾಗು.‌ಮುಂದಿನ ಜನ್ಮದಲ್ಲಾದ್ರು ನಿನ್ನನ್ನಾ ಮದುವೆಯಾಗ್ತಿನಿ ಅಂತ ಅನ್ವಿತ್ ನ ಬಿಗಿದಪ್ಪಿ ಕಣ್ಣಿರು ಸುರಿಸ್ತಿದ್ರೆ, ನಿನಗೇನು ಆಗಲ್ಲಾ ಅನಘಾ . ನಾನು  ಅಮೇರಿಕಾದಲ್ಲಿರೊ  ನನ್ನ ಗೆಳೆಯನ ಹತ್ತಿರ ಮಾತಾಡಿದ್ದಿನಿ. ಮುಂದಿನ ವಾರ ಅವನು ಇಲ್ಲಿಗೆ ಬರ್ತಿದ್ದಾನಂತೆ . ಅವನು ಬಂದು ನಿನ್ನನ್ನಾ ಮತ್ತೆ ಮೊದಲಿನ ಹಾಗೆ ಮಾಡ್ತಾನೆ ಹೆದ್ರಬೇಡಾ . ಎಂದು ಸಂತೈಸುತ್ತಿದ್ದ . ಅನ್ವಿತ್ ಗಂತು ತನ್ನ ಜೀವನವೇ ಕತ್ತಲೆಯಾದಂತೆ ಅನಿಸ್ತಿತ್ತು . ರಾತ್ರಿ ಗೋಡೆಯನ್ನು ನೋಡಿದರೆ ಕತ್ತಲಲ್ಲಿ ನೆರಳೂ ಕೂಡಾ ತನ್ನ ಜೊತೆ ನಿಲ್ಲದ ಹಾಗೆ ಕಾಣಿಸ್ತಿತ್ತು. ಹೀಗೆ  ಯಾರ ಸಮಯವನ್ನು ಲೆಕ್ಕಿಸದೆ ದಿನಗಳು ಉರುಳುತ್ತಿದ್ದವು.

ಮತ್ತೆ  ಅಮವಾಸ್ಯೆ ಬಂತು . ತನ್ನ ಸುತ್ತಲೂ ಅಷ್ಟದಿಗ್ಭಂಧನ ಹಾಕಿ ಅಗ್ನಿಕುಂಡದ ಮುಂದೆ ಮಂತ್ರ ಪಠಿಸುತ್ತಾ ಮೌನೇಶ ‌ಮಾಂತ್ರಿಕ ಕುಳಿತಿದ್ದ . ಅವನ ಮಂತ್ರಶಕ್ತಿಯಿಂದಾಗಿ  ಮನೆಯಲ್ಲಿ ಮಲಗಿದ್ದ ಅನಘಾ ಎದ್ದು ಬಂದು ಮಂಡಲದ ಮಧ್ಯದಲ್ಲಿ ಕುಳಿತಿದ್ದಳು . ಅವಳ ಕೈಕಾಲುಗಳಿಂದ ರಕ್ತವನ್ನು ಹೀರಿ ತರ್ಪಣವನ್ನು ನೀಡಿದ್ದ. ಅಗ್ನಿ ಇನ್ನಷ್ಟು ವೇಗವಾಗಿ ಉರಿಯುತ್ತಿತ್ತು. ಅದೇ ಸಮಯದಲ್ಲಿ ಮನೆಯಲ್ಲಿ ಗಣಪತಿ ಶಾಸ್ತ್ರಿಗಳು ಜ್ವಾಲಮಾಲಿನಿ ಆರಾಧನೆಯಲ್ಲಿ ತೊಡಗಿದ್ದರೆ ಅಘೋರನಾಥ ತನ್ನ ವಿದ್ಯಾ ಪ್ರಯೋಗ ನಡೆಸಿದ್ದ . ಅನಘಾಳ ಕುತ್ತಿಗೆಗೆ ಕೈ ಹಾಕಿದ ಮೌನೇಶ ಮಾಂತ್ರಿಕನ ಕೈ ಸ್ತಬ್ಧವಾಗಿದ್ದವು. ಅಹೋಬಾ ಒಲಿಸಿಕೊಳ್ಳಲು ಮಂತ್ರ   ಪಠಿಸುತ್ತಿದ್ದ ಮೌನೇಶನ ಮುಂದೆ ಅಘೋರನಾಥ ನಿಂತಿದ್ದ . ಆ ಕಾರ್ಗತ್ತಲೆಯಲ್ಲಿಯೂ ಅಘೋರನಾಥನ ಕಣ್ಣುಗಳು ಪ್ರಳಯರುದ್ರನಂತೆ ಮಿನುಗುತ್ತಿದ್ದವು. ಅಘೋರನಾಥನ ಶಕ್ತಿ ನೋಡಿ ಸಣ್ಣಗೆ ಕದಲಿದ ಮಾಂತ್ರಿಕ ಬಲಿತರ್ಪಣಾ ವಿದ್ಯೆಯ ಮಂತ್ರ ಪಠಿಸ ತೊಡಗಿದ. ಅದನ್ನು ‌ಕೇಳಿ ಅಘೋರನಾಥ ಇನ್ನು ನಿನ್ನಾಟ ನಡೆಯದು ಎಂದು ಭಂ ಭಂ ಭೋಲೆನಾಥ್ ಎನ್ನುತ್ತಾ ಅಲ್ಲಿಯೆ ಇದ್ದ ಕತ್ತಿಯಿಂದ ಮಾಂತ್ರಿಕನ ಶಿರಚ್ಛೇಧನ ಮಾಡಿದ. ಆದರೆ ಆಶ್ಚರ್ಯವೆಂಬಂತೆ ಮಾಂತ್ರಿಕನ ತಲೆ ಮತ್ತೆ ದೇಹವನ್ನು ಸೇರಿತ್ತು . ನಾನಾ ಪ್ರಯೋಗವನ್ನು ಮಾಡಿದರು ಮಾಂತ್ರಿಕನ ಶಕ್ತಿ ಕಡಿಮೆಯಾಗಲಿಲ್ಲಾ . ಇನ್ನೇನು ಆತ ಅನಘಾಳನ್ನು ಬಲಿ ಕೊಡುತ್ತಾನೆ ಎಂಬ ಸಮಯದಲ್ಲಿ ಅಘೋರನಾಥ ಶೀತಲ ಸ್ತಂಭನ ವಿದ್ಯೆಯನ್ನು ಮಾಂತ್ರಿಕನ ಮೇಲೆ ಪ್ರಯೋಗ ಮಾಡಿದ. ಅಷ್ಟೇ ಸದಾ ಉರಿಯುವ ಅಗ್ನಿಯಂತಿದ್ದ ಮಾಂತ್ರಿಕನ ದೇಹ ಶೀತದಿಂದ ಹೆಪ್ಪುಗಟ್ಟಿ ನಿಶ್ಚಲವಾಗಿತ್ತು. ಕಣ್ಣುಗುಡ್ಡೆಗಳು ಮೇಲಕ್ಕೆ ಹೋಗಿದ್ದವು. ಎದುರಿಗೆ ಉರಿಯುತ್ತಿದ್ದ ಅಗ್ನಿ ಆರಿ ಹೋಗಿತ್ತು . ಮಾಂತ್ರಿಕನಿಗೊಲಿಯಬೇಕಾಗಿದ್ದ ಅಹೋಬಾ  ನರಳಿದ್ದಳು. ಸರ್ವವನ್ನು ವಶಪಡಿಸಿಕೊಂಡು ಜಗತ್ತನ್ನೇ ಆಳಬೇಕೆಂದುಕೊಂಡಿದ್ದ ಮೌನೇಶ ಮಾಂತ್ರಿಕನ ಆಸೆ ಮಣ್ಣು ಪಾಲಾಗಿತ್ತು. ಅಘೋರನಾಥನ ಕೃಪೆಯಿಂದ ಅನಘಾ ಮೇಲೆ ಆಗಿದ್ದ ದುಷ್ಟ ಪ್ರಯೋಗಗಳು ದೂರವಾಗಿ ಅನಘಾ ಮತ್ತೆ ಮೊದಲಿನ ಹಾಗೆ ಆಗಿದ್ದಳು. ಗಣಪತಿ ಶಾಸ್ತ್ರಿಗಳು ದೊಡ್ಡ ವಿನಾಶವನ್ನು ತಪ್ಪಿಸಿದ್ದಕ್ಕಾಗಿ ಜ್ವಾಲಮಾಲಿನಿಗೆ ಕೈ ಮುಗಿದು ಕುಳಿತರು. ಕತ್ತಲ ರಾತ್ರಿ ಮುಗಿದು ದುಷ್ಟ ಸಂಹಾರವಾಗಿ ಬೆಳ್ಳನೆಯ ಬೆಳಕು ಮೂಡಿತ್ತು.

ಇದ್ಯಾವುದ ಅರಿವಿಲ್ಲದ ಅನ್ವಿತ್ ,ಅನಘಾ ನೀನು ಮತ್ತೆ ಮೊದಲಿನ ಹಾಗೆ ಆಗಿದ್ದಿಯಾ ಅಂದ್ರೆ  ನನಗೆ ನಂಬೋದಿಕ್ಕಾಗ್ತಿಲ್ಲ. ನೀನು ಹೇಗೆ ಗುಣ ಆದೆ ಅಂತ ತಿಳಿತನೇ ಇಲ್ಲಾ , ಆದ್ರೆ ಮತ್ತೆ  ಮೊದಲಿನ ಹಾಗೆ ಆಗಿದ್ದಿಯಲ್ಲಾ ಅಷ್ಟೇ ಸಾಕು. ಇನ್ನು ತಡ ಮಾಡೋದು ಬೇಡ . ನಾಳೆಯೇ ಮದುವೆಯಾಗೋಣ. ಬ್ರಹ್ಮಚಾರಿ ಜೀವನಕ್ಕೊಂದು ಅಂತ್ಯ ಹಾಕೋಣ ಅಲ್ವಾ ? ಅಂತಿದ್ರೆ ಅನಘಾ ಕೆನ್ನೆಗಳು ಕೆಂಪಾಗಿದ್ದವು. ಎಲ್ಲ ಸಂಕಷ್ಟಗಳು ದೂರವಾದವು ಎಂದು ಅಘೋರನಾಥ ಮತ್ತೆ ಸಾಧನೆಯ ಹಾದಿಯಲ್ಲಿ ನಡೆದರೆ  ರಾತ್ರಿ ಹೊಳೆಯುತ್ತಿದ್ದ ಚಂದಿರ ಕೂಡಾ ಮೆಲ್ಲನೆ ನಗುತ್ತಿದ್ದ .

- ಮೇಘಾ ಸಂತೋಷ್

Category:Stories



ProfileImg

Written by megha hegde