"ಸಚಿನ್ ದೇವರಾದರೆ, ಚಿತ್ತಾರದ ಕಂಬದಂತೆ ದ್ರಾವಿಡ್"

ProfileImg
22 Aug '23
5 min read


image

ಟಿವಿ, ಮೈದಾನ ಮತ್ತು ಬಾಲ್ಯ

ಇವತ್ತು ಶಾಲೆಗಳಲ್ಲಿ ಆಟದ ಮೈದಾನಗಳು ಕಿರಿದಾಗುತ್ತಿವೆ. ಎಷ್ಟೋ ಶಾಲೆಗಳಲ್ಲಿ ಮೈದಾನಗಳೇ ಇಲ್ಲ. ಮಕ್ಕಳ ಬಾಲ್ಯಗಳು ಗೇಟುಗಳ ಆಚೆಗೆ ದಾಟುವುದೇ ಅಪರೂಪವಾಗಿದೆ. ಆಟ ಮತ್ತು ಊಟ, ಎರಡರ ಹಸಿವನ್ನೂ ಇಂಗಿಸುತ್ತಿದ್ದ ಗದ್ದೆಗಳ ಮೇಲೆ ಬಿಲ್ಡಿಂಗುಗಳು ಎದ್ದಿವೆ. ಕೆಲವು ನಗರಗಳಲ್ಲಂತು ದುಡ್ಡು ಕೊಟ್ಟು ಆಟದ ಮೈದಾನಗಳನ್ನು ಬುಕ್ಕ್ ಮಾಡಬೇಕಾದ ಪರಿಸ್ಥಿತಿಯಿದೆ. ನನ್ನ ಬಾಲ್ಯಕ್ಕೆ, ಎಷ್ಟು ಕೊಡವಿದರೂ ಮಾಯದ ಆಟದ ಮೈದಾನದ ದೂಳು-ಕೆಸರು ಅಂಟಿಕೊಂಡಿದೆ. ಬಿಸಿಲು-ಮಳೆಗಳ ಪರಿವೆಯಿಲ್ಲದೆ ಮೈದಾನದ ಮೈಮೇಲೆ ಓಡಾಡುತ್ತಾ ಆಡುತ್ತಿದ್ದೆವು. ಮೈ ಮರೆತು ಆಡುತ್ತಿದ್ದ ರೀತಿಯನ್ನು ನೆನೆವುದಷ್ಟೇ ಇವತ್ತಿನ ವೇಗದ ಬದುಕಿನ ನಡುವೆ ನಮಗೆ ನಾವೇ ಇಟ್ಟುಕೊಳ್ಳುವ ಕಚಗುಳಿಯಾಗಿ ಉಳಿದಿದೆ.

ನಮ್ಮಲ್ಲಿ ಹಲವರ ಬಾಲ್ಯವನ್ನು  ಕ್ರಿಕೆಟ್ ಆಟ ದಿನನಿತ್ಯದ ಆಹಾರದಂತೆ ಆವರಿಸಿದ್ದು ಕೆಲವರಿಗಾದರೂ ನೆನಪಿರಬಹುದು. ಭಾರತ ಕ್ರಿಕೆಟ್ ಹುಚ್ಚಿನಲ್ಲಿ ಮೀಯುತ್ತಿರುವ ದೇಶ. ಇಲ್ಲಿ, ಇವತ್ತಿನ ತರ 20-20 ಫಾರ್ಮ್ಯಾಟ್ ಇಲ್ಲದ, ಐಪಿಎಲ್ ಟೂರ್ನಮೆಂಟ್‌ಗಳು ಇಲ್ಲದ ಕಾಲವೊಂದಿತ್ತು. ಕೈ-ಕಾಲುಗಳು ಬ್ಯಾಟು-ಬಾಲುಗಳನ್ನು ಮುದ್ದು ಮಾಡುತ್ತಾ ಮೈದಾನದ ತುಂಬ ಓಡಾಡುತ್ತಿದ್ದ ಆ ಕಾಲವೇ, ಕಣ್ಣು ಮಿಟುಕಿಸದೆ ಟಿವಿ ಮುಂದೆ ಕೂತು ಕ್ರಿಕೆಟ್ ನೋಡುವ ಕಾಲವೂ ಆಗಿತ್ತು. ನಮ್ಮದು ಅತ್ತ ನಗರವೂ ಅಲ್ಲದ, ಇತ್ತ ಹಳ್ಳಿಯೂ ಅಲ್ಲದ ಊರು. ಕೆಳ ಮಧ್ಯಮ ವರ್ಗಕ್ಕೆ ಸೇರಿದ ಕುಟುಂಬ. ನಮ್ಮ ಮನೆಗೆ ಟಿವಿ ಬರುವುದಕ್ಕಿಂತ ಮುಂಚೆ, ಪಕ್ಕದ ಮನೆಯ ಕಿಟಕಿಯಲ್ಲಿ, ರಸ್ತೆ ಬದಿಯ ಅಂಗಡಿಗಳ ಮುಂದೆ - ಹೀಗೆ, ಸಿಕ್ಕಿದಲ್ಲೆಲ್ಲಾ ನಿಂತು ಇಣುಕುತ್ತಾ ಕ್ರಿಕೆಟ್ ನೋಡುತ್ತಿದ್ದೆವು. ಸಚಿನ್, ಗಂಗೂಲಿ, ದ್ರಾವಿಡ್, ರಾಬಿನ್‌ಸಿಂಗ್, ಜಹೀರ್‌ಖಾನ್ ರಂತಹ ಆಟಗಾರರು ನಮಗೆ ಬೇರೆ ಯಾವುದೋ ಜಗತ್ತಿನ ದೇವತೆಗಳಂತೆ ಅನಿಸುತಿದ್ದರು. ಆಟ ಸೋತಾಗ ಅದೇ ದೇವತೆಗಳ ಮೇಲೆ ಬೈಗುಳಗಳ ಸುರಿಮಳೆ ಸುರಿಸುತ್ತಿದ್ದುದು ಇದೆ. ಪ್ರತಿ ಪಂದ್ಯ ಮುಗಿದಾಗಲೂ, ಕ್ರಿಕೆಟ್ ರ್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಯಾವ ಆಟಗಾರರು ಮೊದಲ ಸ್ಥಾನಗಳಿಗೆ ಬಂದಿದ್ದಾರೆಂದು ತಿಳಿಯಲು ಹಾತೊರೆಯುತ್ತಿದ್ದೆವು. ಪಠ್ಯ ಪುಸ್ತಕದ ಬೈಂಡುಗಳಲ್ಲಿ, ನೋಟ್ ಪುಸ್ತಕದ ಪುಟಗಳ ನಡುವೆ, ಹೆಸರು ಬರೆಯುವ ಸ್ಟಿಕ್ಕರುಗಳಲ್ಲಿ ಕ್ರಿಕೆಟ್ ಆಟಗಾರರು ರಾರಾಜಿಸುತ್ತಿದ್ದರು.

ಮನೆಯಲ್ಲಿ ಅಮ್ಮಂಗೆ ಹೇಳಿ ಬಂದಿದ್ಯಾ?

1983 ರಲ್ಲಿ ಕಪಿಲ್‌ದೇವ್ ನಾಯಕತ್ವದಲ್ಲಿ  ವಿಶ್ವಕಪ್ ಗೆದ್ದ ನಂತರ, ಭಾರತದಲ್ಲಿ ಕ್ರಿಕೆಟ್ ಹವಾ ಶುರುವಾಯಿತು ಎನ್ನಬಹುದು. ಆದರೆ ಭಾರತದಲ್ಲಿ ಕ್ರಿಕೆಟ್ ಒಂದು ಹಬ್ಬವಾಗಿ, ಧರ್ಮವಾಗಿ ಬದಲಾಗಲು 'ಸಚಿನ್ ರಮೇಶ್ ತೆಂಡುಲ್ಕರ್' ಅನ್ನೋ ಪುಟ್ಟ ಮನುಷ್ಯನ ಪಾತ್ರ ಬಹು ದೊಡ್ಡದು. "ಕ್ರಿಕೆಟ್ ಒಂದು ಧರ್ಮವಾದರೇ, ಸಚಿನ್ ಅದರ ದೇವರು" ಎಂಬ ಮಾತು ಚಾಲ್ತಿಯಲ್ಲಿತ್ತು ಎಂದರೆ ಸಚಿನ್ ಅಲೆ ಎಷ್ಟಿತ್ತು ಎಂದು ಊಹಿಸಬಹುದು. ಭಾರತ ಮಾತ್ರವಲ್ಲದೇ, ಕ್ರಿಕೆಟ್ ಲೋಕದ ಚರಿತ್ರೆಯಲ್ಲೇ ಸಚಿನ್ ಗೆ ಮಹತ್ವದ ಸ್ಥಾನವಿದೆ. ಕ್ರಿಕೆಟ್ ಜಗತ್ತಿನ ಮುಖವಾಣಿಯಾಗಿರುವ ಸಚಿನ್ ಇಲ್ಲದೆ ಕ್ರಿಕೆಟ್ ಪುಸ್ತಕದ ಯಾವ ಪುಟವೂ ಸಂಪೂರ್ಣವಾಗಲಾರದು.

ಪಾಕಿಸ್ಥಾನದ ಎದುರು ಮೊದಲ ಟೆಸ್ಟ್ ಮ್ಯಾಚ್ ಆಡಲು ಮೈದಾನಕ್ಕಿಳಿದಾಗ ಸಚಿನ್ ವಯಸ್ಸು ಕೇವಲ ಹದಿನಾರು ವರ್ಷ(16 ವರ್ಷ 205 ದಿನಗಳು). 'ಮನೆಯಲ್ಲಿ ಅಮ್ಮಂಗೆ ಹೇಳಿ ಬಂದಿದ್ಯಾ?' ಅಂತ ಪಾಕಿಸ್ಥಾನದ ಬೌಲರ್‌ಗಳು ಪುಟ್ಟ ತೆಂಡುಲ್ಕರ್‌ನನ್ನು ರೇಗಿಸುತ್ತಿದ್ದರು. ಅಂದು ಅವರೆದುರು ಗಟ್ಟಿಯಾಗಿ ನಿಂತು ಆಡಿ, ಎರಡನೇ ಟೆಸ್ಟ್ ಮ್ಯಾಚಲ್ಲಿ ಅರ್ಧಶತಕ ಬಾರಿಸಿದ್ದ ಸಚಿನ್. ಅಲ್ಲಿಂದ ಮುಂದೆ ಸಚಿನ್ ಬೆಳೆದ ಪರಿ ಅನನ್ಯ. ಶೇನ್ ವಾರ್ನ್, ಗ್ಲೆನ್ ಮೆಗ್ರಾತ್, ವಾಸಿಮ್ ಅಕ್ರಮ್‌ರಂತಹ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಬೌಲರ್‌ಗಳಿಗೆ ಸಿಂಹಸ್ವಪ್ನವಾಗಿಬಿಟ್ಟ ಈ ಲಿಟಲ್ ಮಾಸ್ಟರ್.

1998 ರಲ್ಲಿ ಶಾರ್ಜಾ ಮೈದಾನದಲ್ಲಿ, ಆವಾಗಿನ ಏಕದಿನ ಕ್ರಿಕೆಟಿನ ನಂಬರ್ ಒನ್ ತಂಡ ಆಸ್ಟ್ರೇಲಿಯಾ ವಿರುದ್ಧ ಸಚಿನ್ ಮೇಲಿಂದ ಮೇಲೆ ಎರಡು ಶತಕಗಳನ್ನು ಬಾರಿಸಿದ್ದ. ಮೈದಾನದಲ್ಲಿ ಬೀಸಿದ ಬಿರುಗಾಳಿಯನ್ನು ಮೀರಿ ಸಚಿನ್ ಅಂದು ಆಟ ಗೆಲ್ಲಿಸಿಕೊಟ್ಟಿದ್ದ. ಅಂದಿನ ಆಟವನ್ನು ನೋಡಿ "ಮೈದಾನದಲ್ಲಿ ಬಿರುಗಾಳಿ, ಸಚಿನ್ ಸುಂಟರಗಾಳಿ" ಎಂದು ದಿನಪತ್ರಿಕೆಗಳು ಕೊಟ್ಟ ಹೆಡ್ಡಿಂಗ್‌ಗಳು ಮನದಲ್ಲಿನ್ನೂ ಹಸಿರಾಗಿದೆ.

ಸಚಿನ್ ನಿಂಗೆ ಊಟ ಹಾಕ್ತಾನ?

ಸಚಿನ್ 98-99 ರನ್ನು ಗಳಿಸಿ, ಶತಕದ ಆಸುಪಾಸಿನಲ್ಲಿದ್ದಾಗ ಎದೆ ಬಡಿತ ಜೋರಾಗುವುದನ್ನು ಅನುಭವಿಸಿದ ಭಾರತೀಯರು ಕೋಟಿಗಟ್ಟಲೇ ಮಂದಿ. ಆತ ಬ್ಯಾಟಿಂಗ್ ಮಾಡುವಾಗ ತಾವು ಮಾಡಬೇಕಾದ ಕೆಲಸವನ್ನೆಲ್ಲಾ ಮರೆತು ಕುಳಿತವರದೆಷ್ಟೋ ಜನ. ದೇಶದ ಬಜೆಟ್ ಘೋಷಣೆಯನ್ನು ಒಳಪುಟಗಳಿಗೆ ಸರಿಸಿ, ನ್ಯೂಸ್ ಪೇಪರ್‌ಗಳ ಮೊದಲ ಪುಟ ಪೂರ್ತಿ ಆವರಿಸಿದ ಖ್ಯಾತಿಯಿದೆ ಸಚಿನ್ ಆಟಕ್ಕೆ. 24 ಫೆಬ್ರವರಿ, 2010 ರಂದು ಕ್ರಿಕೆಟ್ ವಾರ್ತೆ ನೇರಪ್ರಸಾರ ಮಾಡುವ 'cricinfo' ವೆಬ್‌ಸೈಟ್ ಅತಿಯಾದ ಓದುಗರಿಂದಾಗಿ ಕ್ರಾಶ್ ಆಗಿತ್ತು. ಮುಖಪುಟದ ಸುದ್ದಿಯಾಗಬೇಕಿದ್ದ, ಭಾರತದ ರೈಲ್ವೇ ಮಂತ್ರಿ ಮಂಡಿಸಿದ ರೈಲ್ವೇ ಬಜೆಟ್ ದಿನಪತ್ರಿಕೆಗಳ ಒಳಪುಟಗಳಿಗೆ ತಳ್ಳಲ್ಪಟ್ಟಿತ್ತು. ಇವಕ್ಕೆಲ್ಲ ಕಾರಣ ಏಕದಿನ ಕ್ರಿಕೆಟ್ ಇತಿಹಾಸದಲ್ಲೆ ಮೊದಲ ಬಾರಿಗೆ ತೆಂಡುಲ್ಕರ್ ಡಬಲ್ ಸೆಂಚುರಿ ಬಾರಿಸಿದ್ದು. ಅಂದು ವೀಕ್ಷಕ ವಿವರಣೆಗಾರರಾದ ರವಿಶಾಸ್ತ್ರಿ ಹೇಳಿದ್ದು ಹೀಗೇ - "First man on the planet to score a Double century, and he is a Superman from India". 2011 ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಗೆದ್ದಾಗ 'ವಿರಾಟ್ ಕೊಯ್ಲಿ' ಸಚಿನ್‌ನನ್ನು ಬೆನ್ನ ಮೇಲೆ ಹೊತ್ತು ಮೈದಾನದ ತುಂಬಾ ಓಡಾಡಿದ್ದ. ಆಮೇಲೆ ಇದರ ಬಗ್ಗೆ ಕೇಳಿದಾಗ "ಇಷ್ಟು ಕಾಲ ಭಾರತ ತಂಡವನ್ನು ತನ್ನ ಹೆಗಲ ಮೇಲೆ ಹೊತ್ತಿದ್ದ ಮನುಷ್ಯನನ್ನು, ನಾನು ಸ್ವಲ್ಪ ಹೊತ್ತು ಬೆನ್ನ ಮೇಲೆ ಹೊತ್ತಿದ್ದೆ ಅಷ್ಟೇ" ಅಂತಂದು ಸಚಿನ್ ಮಹತ್ವವನ್ನು ಸಾರಿ ಹೇಳಿದ್ದ.

ಸಚಿನ್ ಬ್ಯಾಟಿನಿಂದಾಗಿ ಮಾತ್ರ MRF ಅನ್ನೋ ಟಯರ್ ಕಂಪೆನಿ ಗಳಿಸಿದ ಲಾಭ, ಪಡೆದುಕೊಂಡ ಖ್ಯಾತಿ ಕಡಿಮೆಯೇನಲ್ಲ. ಕೋಟ್ಯಾಂತರ ಕ್ರಿಕೆಟ್ ಬ್ಯಾಟುಗಳು MRF ಸ್ಟಿಕ್ಕರ್ ಹಚ್ಚಿಕೊಂಡು ಕ್ರಿಕೆಟ್ ಪ್ರೇಮಿಗಳ ಮನೆ, ಮನ, ಮೈದಾನಗಳಲ್ಲಿ ನಲಿದಾಡಿದವು. ಅಂತಹ ಸಚಿನ್ ತೆಂಡುಲ್ಕರ್‌ನಿಂದಾಗಿ ಕ್ರಿಕೆಟ್ ನೋಡಲು ಆರಂಭಿಸಿದ್ದೆವು. ಸಚಿನ್ ನಿವೃತ್ತಿ ಹೊಂದಿದ ಮೇಲೆ ಕ್ರಿಕೆಟ್ ನೋಡುವುದೂ ಕಡಿಮೆಯಾಯಿತು. 'ಸಚಿನ್ ನಿನಗೆ ಊಟ ಹಾಕ್ತಾನ' ಅಂತ ಅಪ್ಪ ಬಯ್ತಾ ಇದ್ದಿದ್ದು ನೆನಪಿದೆ. ಸಚಿನ್ ಉಣ ಬಡಿಸಿದ ಖುಷಿಯ ದಿನಗಳನ್ನು ಮರೆತೆನೆಂದರು ಮರೆಯಲಿ ಹೇಗೆ?

ದ್ರಾವಿಡ್ ಎಂಬ ನದಿ

ನಾವೆಲ್ಲಾ 'ಸಚಿನ್ ಸಚಿನ್' ಅಂತ ಬೊಬ್ಬೆ ಹೊಡೀತಾ ಇದ್ರೆ, ನನ್ನ  ಆಪ್ತ ಮಿತ್ರನೊಬ್ಬ ಸದ್ದಿಲ್ಲದೆ 'ರಾಹುಲ್ ದ್ರಾವಿಡ್'ನನ್ನು ಇಷ್ಟ ಪಡ್ತಿದ್ದ. ಇವತ್ತು ಕವಿತೆಯ ಲೋಕದಲ್ಲಿ ವಿಹರಿಸುವ ನನಗೆ, ದ್ರಾವಿಡ್‌ನನ್ನು ಇಷ್ಟ ಪಡ್ತಿದ್ದ ಆ ಗೆಳೆಯನ ಟೇಸ್ಟ್ ಇಂಟರೆಸ್ಟಿಂಗ್ ಆಗಿತ್ತು ಅನ್ನಿಸ್ತಿದೆ. ಸಚಿನ್ ಆಟವನ್ನು ಸಂಭ್ರಮಿಸುವ ಭರದಲ್ಲಿ ದ್ರಾವಿಡ್ ಎಂಬ ಸೂಕ್ಷ್ಮ ಚಿತ್ತಾರಗಳ ಕೆತ್ತನೆಯಿಂದ ತುಂಬಿದ ಕಂಬದ ಆಸರೆಯನ್ನು ಬದಿಗೆ ಸರಿಸಿದೆವು ಅನ್ನಿಸುತ್ತಿದೆ; ಸುಂಟರಗಾಳಿಯ ಬಿರುಸಿನೆದುರು, ತಂಗಾಳಿಯ ತಂಪನ್ನು ಮರೆಯುವಂತೆ. ಎಲ್ಲಾ ಬಾಗಿಲುಗಳು ಮುಚ್ಚಿ, ಕ್ರಿಕೆಟ್ ದೇವರು ಕೂಡ ಆ ಬಾಗಿಲುಗಳ ಹಿಂದೆ ಸರಿಯಲ್ಪಟ್ಟಾಗ, ಎದೆಯೊಡ್ಡಿ ನಿಲ್ಲುವುದು ಗೋಡೆ. ಆ ಮಹಾಗೋಡೆಯೇ ರಾಹುಲ್ ದ್ರಾವಿಡ್ ಎಂಬ ಕ್ರಿಕೆಟ್ ಜಗತ್ತಿನ ಜಂಟಲ್ ಮ್ಯಾನ್. ತಂಡಕ್ಕಾಗಿ ಯಾವ ಹೊರೆಯನ್ನು ಹೊರಲು ಸಿದ್ಧವಿದ್ದ ದ್ರಾವಿಡ್, ತನಗೆ ವಹಿಸಿದ್ದ ವಿಕೆಟ್ ಕೀಪರ್ ಪಾತ್ರವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ರಾಹುಲ್ ದ್ರಾವಿಡ್ ಕರ್ನಾಟಕದವರು ಎಂಬುದು ನಮ್ಮೆಲ್ಲರ ಹೆಮ್ಮೆಗೆ ಮತ್ತೊಂದು ಗರಿಯೂ ಹೌದು.

1983 ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡ, ಮುಂದಿನ ವಿಶ್ವಕಪ್‌ನಲ್ಲಿ ಸೋತು ಹಿಂತಿರುಗುತ್ತೆ. ಅದರ ಮರವರ್ಷ, ಅಂದ್ರೆ 1989 ರಲ್ಲಿ ಸಚಿನ್ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡ್ತಾನೆ. ಆತನ ಆಟದೊಂದಿಗೆ - ಆತನ ಸಣ್ಣ ವಯಸ್ಸು,  ಬದುಕಿನ ಕತೆಗಳು, ಆತ ಅಭಿನಯಿಸುತ್ತಿದ್ದ ಜಾಹಿರಾತುಗಳು ಕೂಡಾ ಸಚಿನ್‌ನನ್ನು ಕ್ರಿಕೆಟ್ ಜಗತ್ತಿನ ಮೋಹಕ ತಾರೆಯಾಗಿಸುವುದರಲ್ಲಿ ಪ್ರಧಾನ ಪಾತ್ರ ವಹಿಸಿತ್ತು. ಭಾರತಕ್ಕೆ ಆ ಕಾಲಘಟ್ಟಕ್ಕೆ ಬೇಕಾಗಿದ್ದ ಚರಿಶ್ಮಾ ಸಚಿನ್ ಮೂಲಕ ಸಿಕ್ಕಿತ್ತು. ಆದರೆ ರಾಹುಲ್ ದ್ರಾವಿಡ್ ಜನರ ಮನಸ್ಸಿನಲ್ಲಿ ಜಾಗ ಪಡೆದದ್ದು, ಸದ್ದಿಲ್ಲದೆ ನಿಧಾನವಾಗಿ ಹರಿಯುವ ನದಿಯ ಹಾಗೇ. ಅಗತ್ಯ ಬಂದಾಗ ರಭಸವಾಗಲು ಆತನ ಬ್ಯಾಟಿಗೆ ಗೊತ್ತಿತ್ತಾದರೂ, ಆತನ ಆಟದ ಸೌಂಧರ್ಯ ಪೈಂಟಿಂಗ್ ಒಂದರ ಆಳಕ್ಕಿಳಿಯುವಂತೆ; ಕಲಾತ್ಮಕತೆಯ ಪ್ರತಿಬಿಂಬ. ಸಾಧಾರಣವಾಗಿ ಬ್ಯಾಟ್ಸ್‌ಮೆನ್‌ಗಳು ಬೌಲರ್‌ಗಳನ್ನು ಎದುರಿಸಿದರೆ, ದ್ರಾವಿಡ್‌ಗೆ ಚೆಂಡೆಸೆಯುವ ಬೌಲರುಗಳು ಬೆಟ್ಟವನ್ನು ಎದುರಿಸುವಂತೆ ಆತನ ಬ್ಯಾಂಟಿಗನ್ನು ಭೇದಿಸಬೇಕಾಗಿತ್ತು. ಲಕ್ಷ್ಮಣ್ ಜೊತೆ ಸೇರಿ  ದ್ರಾವಿಡ್ ಗೆಲ್ಲಿಸಿಕೊಟ್ಟ ಮ್ಯಾಚ್‌ಗಳು ಅನೇಕ. ಟೆಸ್ಟ್ ಮ್ಯಾಚ್‌ಗಳಲ್ಲಿ ಅತೀ ಹೆಚ್ಚು ರನ್ನುಗಳ ಜೊತೆಗಾರಿಕೆಯ ದಾಖಲೆಯು ದ್ರಾವಿಡ್‌ನದ್ದೇ ಆಗಿದೆ. ದ್ರಾವಿಡ್ ತಾಳ್ಮೆಯ ಸಾಕಾರ ರೂಪ. ಭಾರತದ ಕಿರಿಯರ ಹಾಗು ಹಿರಿಯರ ತಂಡದ ತರಬೇತುದಾರನಾಗಿ ಆಟಗಾರರ ದೈಹಿಕ ಆರೋಗ್ಯದ ಜೊತೆಗೆ, ಮಾನಸಿಕ ಆರೋಗ್ಯದ ಬಗೆಗೆ ದ್ರಾವಿಡ್ ವಹಿಸಿದ ಕಾಳಜಿ ಮತ್ತು ಪಟ್ಟ ಶ್ರಮಗಳು ಶ್ಲಾಘನೀಯವಾದುದು.

ನೆನಪ ಬೋಗುಣಿಯ ಬಿಂಬಗಳು

ಮ್ಯಾಚ್ ಫಿಕ್ಸಿಂಗ್ ಎಂಬ ಕರಾಳ ಅಧ್ಯಾಯವನ್ನೂ ಮೀರಿ ಕ್ರಿಕೆಟ್ ಬೆಳೆದಿದೆ. ಕಾರ್ಪೋರೇಟ್ ಹಿಡಿತಕ್ಕೆ ಸಿಕ್ಕಿ, ಕ್ರಿಕೆಟ್ ಮೈದಾನದಲ್ಲಿ ದುಡ್ಡಿನ ಹೊಳೆ ಹರಿಯುತ್ತಿದೆ. ಸಮಾಜದ ಎಲ್ಲಾ ಸ್ತರಗಳಲ್ಲೂ ಇರುವಂತೆಯೇ, ಕ್ರಿಕೆಟ್‌ನಲ್ಲು ಪುರುಷರ ಕ್ರಿಕೆಟ್‌ನ್ನಷ್ಟೇ ಕ್ರಿಕೆಟ್‌ ಅನ್ನುವುದು ಇಲ್ಲೂ ನಡೆದಿದೆ. ಮಿಥಾಲಿರಾಜ್‌ರಿಂದ ಹಿಡಿದು ಸ್ಮೃತಿ ಮಂದಾನವರೆಗು ಸಾಧನೆಯ ಶಿಖರವೇರಿರುವ ನಮ್ಮ ಕ್ರಿಕೆಟ್‌ ಆಟಗಾರ್ತಿಯರನ್ನು ನೆನಪಿಸಿಕೊಳ್ಳದೆ ಇರಲಾಗುವುದಾದರೂ ಹೇಗೇ? ಇವೆಲ್ಲದರ ಆಚೆಗೂ, ನೆನಪುಗಳ ಬೋಗುಣಿಯಲ್ಲಿ ಇವರಿಬ್ಬರು ಬಿಂಬವಾಗಿ ಹೊಳೆಯುತ್ತಿದ್ದಾರೆ. ಸಚಿನ್ ಬಸದಿಯೊಳಗಿನ ದೇವರಾದರೆ, ದ್ರಾವಿಡ್ ಬಸದಿಯನ್ನು ಹೊತ್ತು ಬಸವಳಿಯದೆ ನಗುವ ಚಿತ್ತಾರದ ಕಂಬವಾಗಿದ್ದಾರೆ.

 

 

 

 

 

Category:Sports



ProfileImg

Written by Guru

Writer, Poet & Automotive Enthusiast