ಆನೆ ಬಂತಾನೆ ಬಂತಾನೆ ಬಂತಮ್ಮಮ್ಮಾ!!!

ಕಾಡುದಾರಿಯಲ್ಲಿ ಆನೆ ದಾಳಿ

ProfileImg
09 Apr '24
7 min read


image

                ಪರಿಚಿತರ ಮನೆಗೆ ಅವರ ಮಗುವಿನ ಬರ್ತ್‌ಡೇ ಪಾರ್ಟಿಗೆಂದು ಹೋಗಿದ್ದೆವು. ನಾವು ಎಂದರೆ ನಾನು ಮತ್ತು ನನ್ನ ತಮ್ಮ ಇಬ್ಬರೇ. ಊಟ ಮುಗಿಯುವಾಗ ರಾತ್ರಿ ಆಗಲೇ ಒಂಬತ್ತಾಗಿತ್ತು. ಅವರ ಮನೆ ಇದ್ದಿದ್ದು ತರಿಕೆರೆಯಲ್ಲಿ. ನಮ್ಮ ಮನೆ ಇದ್ದಿದ್ದು ಶೃಂಗೇರಿಯಲ್ಲಿ. ಸುಮಾರು ನೂರಿಪ್ಪತ್ತೈದು ಕಿಲೋಮೀಟರ್‌ ದೂರ. ಆ ರಾತ್ರಿಯಲ್ಲಿ ಮನೆಗೆ ಹೋಗುವುದೆಂದು ನಾವು ಹೊರಟಾಗ ಅಲ್ಲಿ ಬಂದಿದ್ದವರಿಗೆಲ್ಲ ಇವರಿಬ್ಬರಿಗೂ ತಲೆಕೆಟ್ಟಿದೆ ಎನ್ನಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. 125 ಕಿಲೋಮೀಟರ್‌ ಹೋಗಲು ಏನಿಲ್ಲವೆಂದರೂ ಎರಡೂವರೆ ಗಂಟೆ ಬೇಕು. ಜೊತೆಗೆ ನಾವು ಹೊರಟಿದ್ದು ಬೈಕ್‌ನಲ್ಲಿ. ಅಲ್ಲದೇ ನಾವು ಭದ್ರಾ ಅಭಯಾರಣ್ಯದ ದಾರಿಯಲ್ಲಿ ಹೋಗಬೇಕಿತ್ತು. ನಾವು ಹೊರಡುತ್ತೇವೆಂದು ತಿಳಿಸಿದಕೂಡಲೇ ಸ್ನೇಹಿತನಾದಿಯಾಗಿ ಹಿಡಿದು ಆ ಪಾರ್ಟಿಗೆ ಬಂದವರೆಲ್ಲ ಉಗ್ರವಾಗಿ ಪ್ರತಿಭಟಿಸಿದರು. ಬಹುಶಃ ತಮ್ಮ ಪಾರ್ಟಿ ಬಿಟ್ಟು ಬೇರೆ ಪಾರ್ಟಿಯಿಂದ ಎಲೆಕ್ಷನ್ನಿಗೆ ನಿಲ್ಲುವವರೂ ಅಷ್ಟೊಂದು ಪ್ರತಿರೋಧ ಎದುರಿಸಿಲ್ಲವೇನೋ? ಆದರೆ ಹಿತನುಡಿಗಳಿಗೆ ಕಿವಿಗೊಡುವ ಸ್ವಭಾವ ಎಂದೂ ನಮ್ಮದಾಗಿರಲಿಲ್ಲ. ಎಲ್ಲರ ಉಗ್ರವಿರೋಧದ ನಡುವೆಯೂ ಬೈಕ್‌ ಏರಿ ಹೊರಟೇಬಿಟ್ಟೆವು. 

       ನಿಜ ಹೇಳಬೇಕೆಂದರೆ ನಮಗೆ ಅಂದೇ ಮನೆ ತಲುಪಿ ಮಾಡಬೇಕಾದ ಘನಂದಾರಿ ಕಾರ್ಯ ಏನೂ ಇರಲಿಲ್ಲ. ಇದ್ದರೂ ಅಷ್ಟೊಂದು ತರಾತುರಿಯಲ್ಲಿ ಬಂದು ಅದನ್ನೆಲ್ಲ ಮಾಡುವಷ್ಟು ಶ್ರಮಜೀವಿಗಳೂ ನಾವಾಗಿರಲಿಲ್ಲ. ಆದರೆ ರಾತ್ರಿ ಕಾಡುದಾರಿಯಲ್ಲಿ ಹೋಗುವ ಮಜಾ ಇದೆಯಲ್ಲ, ಅದನ್ನು ವಿವರಿಸಲು ಆಗುವುದಿಲ್ಲ. ಅದಕ್ಕಾಗಿಯೇ ನಾವು ರಾತ್ರಿ ಹೊರಟಿದ್ದು. ದಾರಿಯಲ್ಲಿ ಒಂದೆಡೆ ದಟ್ಟವಾದ ಕಾಡಿನ ನಡುವೆ ಹಾದುಹೋಗುವ ದಾರಿಯಲ್ಲಿ ಸಾಗಬೇಕಾಗಿತ್ತು. ಅದನ್ನು ಬಿಟ್ಟು ಮುಖ್ಯರಸ್ತೆಯ ದಾರಿ ಇದ್ದರೂ ನಾವು ಆ ದಟ್ಟಕಾಡಿನ ದಾರಿಯನ್ನೇ ಆಯ್ದುಕೊಳ್ಳುತ್ತಿದ್ದೆವು. ಯಾವುದಾದರೂ ಪ್ರಾಣಿ ಕಣ್ಣಿಗೆ ಬೀಳಬಹುದೇ ಎಂಬ ಆಸೆಯೇ ಇದಕ್ಕೆಲ್ಲ ಕಾರಣ.

       ಆ ದಿನ ಅಮಾವಾಸ್ಯೆಯಾಗಿತ್ತು. ಹಾಗಾಗಿ ನಮಗೆ ದಾರಿದೀಪವಾಗಿ ಇದ್ದಿದ್ದೆಂದರೆ ನಮ್ಮ ಬೈಕಿನ ಹೆಟ್‌ಲೈಟಿನ ಬೆಳಕಷ್ಟೇ. ಊರದಾರಿಯಲ್ಲಿ ಸಾಗುವಾಗ ಬೀದಿದೀಪಗಳಿರುತ್ತವೆ. ಆದರೆ ಕಾಡಿನ ಹಾದಿಗೆ ಸೇರಿದಕೂಡಲೇ ಸುತ್ತೆಲ್ಲ ಕಗ್ಗತ್ತಲು ಕವಿಯಿತು. ಮೋಡ ಆವರಿಸಿಕೊಂಡಿದ್ದರಿಂದ ನಕ್ಷತ್ರಗಳು ಸಹ ಬಹಳ ವಿರಳವಾಗಿದ್ದವು. ನಾವು ನಿಧಾನವಾಗಿ ಮುಂದುವರೆಯತಡಗಿದೆವು. ನಮಗೆ ಬೇಗ ಮನೆ ಸೇರಬೇಕಾದ ಅವಸರ ಏನೂ ಇರಲಿಲ್ಲ. 

       ಕಾಡುದಾರಿಯಲ್ಲಿ ಹೋಗುವ ಮಜವೇ ಬೇರೆ. ಅದು ಮಳೆಗಾಲದ ಆರಂಭದ ದಿನಗಳಾಗಿದ್ದರಿಂದ ಎಲ್ಲೆಲ್ಲೂ ಯಾವ್ಯಾವುದೋ ಹುಳಹುಪ್ಪಟೆಗಳು ಗಾನಸುಧೆ ಹರಿಸುತ್ತಿದ್ದವು. ಅದನ್ನೆಲ್ಲ ಕೇಳುತ್ತ ರಸ್ತೆಯಲ್ಲಿ ಮುಂದುವರೆಯುತ್ತಿದ್ದ ನಾವು ಅಲ್ಲಿನ ತಿರುವೊಂದನ್ನು ದಾಟಬೇಕಾಗಿತ್ತು. ಆ ತಿರುವಿನಲ್ಲಿ ಬೈಕ್‌ ತಿರುಗಿಸುತ್ತಿದ್ದಂತೆ ತಮ್ಮ ಗಕ್ಕನೆ ಬ್ರೇಕ್‌ ಹಾಕಿ ನಿಲ್ಲಿಸಿದ. ಏನಾಯಿತೆಂದು ಬೆಚ್ಚಿ ನಾನು ಮುಂದಕ್ಕೆ ನೋಡಿದೆ. ಅದುವರೆಗೂ ರಸ್ತೆ ಚೆನ್ನಾಗಿ ಕಾಣುತ್ತಿತ್ತು. ಇದ್ದಕ್ಕಿದ್ದಂತೆ ರಸ್ತೆಯ ನೋಟ ಬದಲಾದಂತೆ ಅನ್ನಿಸಿತು. ಹೊಂಡಗುಂಡಿಗಳಿಂದ ಕೂಡಿದ್ದ ರಸ್ತೆ ಇದ್ದಕ್ಕಿದ್ದಂತೆ ಮಳೆನೀರಿಗೆ ಮಿಂಚುವ ಕಪ್ಪು ಟಾರು ಹೊದ್ದುಕೊಂಡು ನೆಲದಿಂದ ಮೇಲಕ್ಕೆದ್ದು ನೆಟ್ಟಗೆ ನಿಂತಂತೆ ಕಂಡಿತು! ಇದೇನಿದು ರಸ್ತೆ ಸೀದಾ ನಮ್ಮನ್ನು ಸ್ವರ್ಗಕ್ಕೇ ಕಳಿಸಲೆಂದು ಮೇಲೆದ್ದಿದೆಯೇ? ಗೆಳೆಯನ ಮನೆಯ ಪಾರ್ಟಿಯಲ್ಲಿ ನಾವು ಕುಡಿದಿದ್ದು ಕಲ್ಲಂಗಡಿ ಜ್ಯೂಸ್‌ ಮಾತ್ರ. ಅಲ್ಲಿ ಇದ್ದಿದ್ದು ಕೂಡ ಮೂರ್ನಾಲ್ಕು ಬಗೆಯ ಹಣ್ಣಿನ ಜ್ಯೂಸ್‌ಗಳು ಮಾತ್ರ. ಹೀಗಿರುವಾಗ ನಮಗೇಕೆ ರಸ್ತೆ ಹೀಗೆ ವಿಚಿತ್ರವಾಗಿ ಕಾಣುತ್ತಿದೆ? ಇದೆಲ್ಲ ಯೋಚಿಸುತ್ತಿರಬೇಕಾದರೆ ಬೃಹದಾಕಾರದ ರಸ್ತೆಯದೇ ಬಣ್ಣ ಹೊಂದಿದ್ದ ಚಿಟ್ಟೆಯೊಂದು ತನ್ನೆರಡೂ ರೆಕ್ಕೆಗಳನ್ನು ಬಡಿಯುತ್ತ ನಮ್ಮತ್ತ ತಿರುಗಿತು. ಅದರಿಂದ ಕೊಂಚ ಕೆಳಕ್ಕೆ ಆ ಕಡುಗತ್ತಲನ್ನೇ ಎರಕ ಹೊಯ್ದಿದ್ದಂಥ ರಸ್ತೆಯ ನಡುವೆ ಎರಡು ಅಮೃತಶಿಲೆಯಲ್ಲಿ ಕೆತ್ತಿದಂಥ ನುಣುಪಾದ ಕಠಾರಿಗಳು ನಮ್ಮತ್ತಲೇ ಗುರಿಯಿಟ್ಟು ನಿಂತಿದ್ದವು. ನಮಗೆ ಪರಿಸ್ಥಿತಿ ಅರ್ಥವಾಗುವಷ್ಟರಲ್ಲಿ ಕಿವಿಗಡಚ್ಚಿಕ್ಕುವ ಸಿಡಿಲಿನಂಥ ಘೀಳಿಡುವ ಧ್ವನಿ ಕೇಳಿಸಿತು. ನಮ್ಮ ಬೈಕನ್ನು ಮುಂದಕ್ಕೆ ಓಡಿಸಲು ಆಸ್ಪದವೇ ಇರಲಿಲ್ಲ. ತಮ್ಮ ಆತುರಾತುರವಾಗಿ ಹಿಂದಕ್ಕೆ ತಿರುಗಿಸಲು ಪ್ರಯತ್ನಿಸಿದ. ಆ ಗಡಿಬಿಡಿಯಲ್ಲಿ ಪಕ್ಕದಲ್ಲಿದ್ದ ಚಿಕ್ಕ ಹೊಂಡವೊಂದಕ್ಕೆ ಬೈಕಿನ ಚಕ್ರ ಬಿತ್ತು. ಅದನ್ನು ಎತ್ತಿಕೊಳ್ಳಲು ಸಾಧ್ಯವಾಗದೆ ಅಡ್ಡಬಿದ್ದ ಬೈಕಿನ ಜೊತೆಗೆ ನಾವೂ ಬಿದ್ದೆವು. ಅದು ಹೇಗೋ ಆ ಕತ್ತಲಲ್ಲೂ ನಮ್ಮ ಕಾಲುಗಳನ್ನು ಬೈಕಿನಡಿಯಿಂದ ಎಳೆದುಕೊಳ್ಳಲು ಸಮರ್ಥರಾದೆವು. ಕಣ್ಣುಕಾಣದೆ ತೆವಳುತ್ತ ಬೈಕಿನಿಂದ ಕೊಂಚ ದೂರ ಸರಿದೆವು. ಅಷ್ಟರಲ್ಲಿ ನಮ್ಮ ಕಣ್ಣಿಗೆ ಸಾಕ್ಷಾತ್‌ ಯಮನಂತೆ ಕಾಣುತ್ತಿದ್ದ ಆ ಆನೆ ತನ್ನೆದುರು ಬಿದ್ದು ಇನ್ನೂ ಶಬ್ದಮಾಡುತ್ತ, ಬೆಳಕನ್ನೂ ಹೊರಬಿಡುತ್ತಿದ್ದ ಬೈಕಿನ ಮೇಲೆ ಕೆಂಡಾಮಂಡಲವಾಗಿ ಅದನ್ನು ಕಾಲಿನಲ್ಲಿ ತುಳಿದು ಅಪ್ಪಚ್ಚಿ ಮಾಡತೊಡಗಿತು. ಅದರ ಕೋಪ ಬೈಕಿನ ಮೇಲೆ ಇದ್ದಿದ್ದರಿಂದ ನಾವು ಬಚಾವಾದೆವು. ಹಾಗೂ ಹೀಗೂ ಕಷ್ಟಪಟ್ಟು ಕಾಡಿನಂಚಿಗೆ ಸರಿದೆವು. ಮೈಕೈಯ ಯಾವ ಮೂಳೆಗಳು ಪುಡಿಯಾಗಿವೆಯೋ, ಯಾವ ಮೂಳೆಗಳು ಉಳಿದುಕೊಂಡಿವೆಯೋ ಒಂದೂ ಗೊತ್ತಾಗದೆ ಅಸಹನೀಯ ನೋವನ್ನು ಹಲ್ಲುಕಚ್ಚಿ ಸಹಿಸುತ್ತ ಮರವೊಂದರ ಬುಡದಲ್ಲಿ ಬಿದ್ದುಕೊಂಡೆವು. 

       ನಮ್ಮ ಕಣ್ಣೆದುರೇ ಬೈಕನ್ನು ತುಳಿದು ನುಜ್ಜುಗುಜ್ಜು ಮಾಡಿದ ಆನೆ ಮತ್ತಷ್ಟು ವಿಜಯೋತ್ಸಾಹದಿಂದ ಘೀಳಿಡುತ್ತ ಮುಂದಕ್ಕೆ ಹೋಯಿತು. ನಾವು ಪ್ರಾಣ ಉಳಿದಿದ್ದಕ್ಕೆ ಸಂತೋಷಪಡಬೇಕೋ ಅಥವಾ ಬೈಕ್‌ ನಾಶವಾಗಿದ್ದಕ್ಕೆ ಅಳಬೇಕೋ ಎಂದು ಗೊತ್ತಾಗದೆ ಮಂಕರಂತೆ ಕುಳಿತಿದ್ದೆವು. ಸ್ವಲ್ಪ ಹೊತ್ತಿನ ನಂತರ ಧೈರ್ಯಮಾಡಿ ನಿಧಾನಕ್ಕೆ ಬೈಕಿನತ್ತ ತೆವಳಿದೆವು. ಅದನ್ನು ಒಂದು ಬೈಕ್‌ ಎಂದು ಗುರುತಿಸುವುದೇ ಕಷ್ಟ ಎನ್ನುವಷ್ಟು ಪುಡಿಪುಡಿಯಾಗಿ ಬಿದ್ದಿತ್ತು. ಮೊಬೈಲ್‌ ಟಾರ್ಚ್‌ ಆನ್‌ ಮಾಡಿ ಒಮ್ಮೆ ಅದರತ್ತ ಬೆಳಕು ಬೀರಿದಾಗ ನಮ್ಮ ಕಣ್ಣಿಗೆ ಕಂಡಿದ್ದು ಬೈಕಲ್ಲ, ಹಳೇ ಕಬ್ಬಿಣದ ಗುಜರಿ ಸಾಮಾನುಗಳ ಅಂಗಡಿಯೊಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ವಸ್ತುಗಳು. ಯಾವ ರೀತಿಯಲ್ಲೂ ಆ ಬೈಕು ಮುಂದೆ ಉಪಯೋಗಕ್ಕೆ ಬರುವಂತೆಯೇ ಇರಲಿಲ್ಲ. ಆಗ ನಮಗೆ ಇದ್ದಿದ್ದು ಎರಡೇ ಆಯ್ಕೆಗಳು. ಒಂದೋ ಆ ಇಡೀ ರಾತ್ರಿಯನ್ನು ಕತ್ತಲಲ್ಲೇ ಕಳೆದು, ಬೆಳಕಾಗುತ್ತಿದ್ದಂತೆ ಸಮೀಪದ ಊರಿನತ್ತ ನಡೆದುಹೋಗುವುದು. ಇಲ್ಲವಾದರೆ ಆ ದಾರಿಯಲ್ಲಿ ಬರುವ ಯಾವುದಾದರೂ ವಾಹನಗಳಿಗಾಗಿ ಕಾಯುವುದು. ಒಂದುವೇಳೆ ಮುಖ್ಯರಸ್ತೆಯಲ್ಲೇ ಆಗಿದ್ದರೆ ಯಾವುದಾದರೂ ಬಸ್‌ ಅಥವಾ ಇನ್ಯಾವುದೋ ವಾಹನ ಬರುತ್ತದೆ ಎಂಬ ಧೈರ್ಯ ಇರುತ್ತಿತ್ತು. ಆದರೆ ನಾವು ಆಯ್ದುಕೊಂಡ ಆ ಕಾಡುದಾರಿಯಲ್ಲಿ ಹಗಲಾಗುವವರೆಗೂ ಬೇರೆ ಯಾವ ವಾಹನವೂ ಬರುತ್ತದೆ ಎನ್ನುವ ಖಾತ್ರಿ ಇರಲಿಲ್ಲ. ಹಾಗಾಗಿ ಬೇರೆ ಏನೂ ಮಾಡಲು ತೋಚದೆ ಸುಮ್ಮನೆ ಮರದ ಬುಡದಲ್ಲಿ ಕುಳಿತೆವು. ಆ ರಾತ್ರಿಯಲ್ಲಿ ನಡೆದುಹೋಗುವುದಕ್ಕಿಂತ ಸುಮ್ಮನೆ ಕೂರುವುದೇ ಹೆಚ್ಚು ಕ್ಷೇಮ ಎನ್ನಿಸಿತು. ಏಕೆಂದರೆ ನಮ್ಮೆದುರು ಘೀಳಿಟ್ಟು ಹೋಗಿದ್ದ ಕಾಡಾನೆ ಸ್ವಲ್ಪ ಮುಂದೆಯೇ ಇರಬಹುದು ಅಥವಾ ನಾವು ಹೋಗುವ ದಾರಿಯಲ್ಲಿ ಎಲ್ಲಿ ಬೇಕಾದರೂ ಇರಬಹುದು! ಸದ್ಯಕ್ಕೆ ಇದ್ದಲ್ಲೇ ಇರುವುದು ಕ್ಷೇಮವೆಂದು ಭಾವಿಸಿದೆವು. ಪುಣ್ಯಕ್ಕೆ ಮಳೆ ಸಹ ಬೀಳುತ್ತಿರಲಿಲ್ಲ.

       ಮರದ ಬುಡದಲ್ಲಿ ಕುಳಿತಿದ್ದ ನಮಗೆ ಯಾವಾಗ ನಿದ್ರೆಯ ಜೋಂಪು ಹತ್ತಿತೋ ತಿಳಿಯಲಿಲ್ಲ. ಕೈಕಾಲುಗಳೆಲ್ಲ ನೋಯುತ್ತಿದ್ದರೂ ಅದ್ಯಾವ ಮಾಯದಲ್ಲೋ ನಿದ್ರೆ ಬಂದು ಆವರಿಸಿಕೊಂಡುಬಿಟ್ಟಿತ್ತು. ನಿದ್ರೆ ಬಂದು ಸುಮಾರು ಎರಡು ತಾಸು ಕಳೆದಿರಬೇಕು. ಅಷ್ಟರಲ್ಲಿ ಹಠಾತ್ತನೆ ಎಚ್ಚರವಾಯಿತು. ನನಗಷ್ಟೇ ಅಲ್ಲ, ತಮ್ಮನಿಗೂ ಎಚ್ಚರವಾಗಿದೆ ಎನ್ನುವುದು ನನಗೆ ಗೊತ್ತಾಗುವಂತೆ ಮೊಳಕೈಯಿಂದ ನನ್ನನ್ನು ತಿವಿಯುತ್ತಿದ್ದ. ನನಗೆ ಹಾಗೆ ಎಚ್ಚರವಾಗಿದ್ದೇಕೆಂದು ನಿಖರವಾಗಿ ಗೊತ್ತಾಗದಿದ್ದರೂ ಸಮೀಪದಲ್ಲೇ ಏನೋ ಒಂದು ಪ್ರಾಣಿ ಬಂದಿದೆ ಎಂದು ಅರ್ಥವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಮರದ ಬುಡಕ್ಕೆ ಒರಗಿ ಕುಳಿತಿದ್ದ ನಾನು ಹಾಗೇ ಎದ್ದುನಿಂತೆ. ತಮ್ಮನೂ ಎದ್ದುನಿಂತ. ಕತ್ತಲು ಮೈಕೈಗೆ ಅಂಟಿಕೊಳ್ಳುವಷ್ಟು ಸ್ನಿಗ್ಧವಾಗಿತ್ತು. ಟಾರ್ಚ್‌ ಬೆಳಕು ಹತ್ತಿಸಿದರೆ ಆ ಪ್ರಾಣಿ ಓಡಿಹೋದೀತೆಂದು ಬೆಳಕು ಹತ್ತಿಸಲಿಲ್ಲ. ಆ ಕಡುಗತ್ತಲಲ್ಲೇ ಕಣ್ಣು ನೋಯುವಂತೆ ಎಲ್ಲ ಕಡೆಗಳಲ್ಲೂ ದಿಟ್ಟಿಸಿನೋಡಿದೆವು. ಏನೊಂದೂ ಕಾಣಲಿಲ್ಲ. ಅಷ್ಟರಲ್ಲಿ ನಮ್ಮ ಹಿಂಭಾಗದಲ್ಲೆಲ್ಲೋ ಜಿಂಕೆಗಳ ಹಿಂಡೊಂದು ಗಾಬರಿಯಿಂದ ಆವ್…‌ ಆವ್…‌ ಎಂದು ಕೂಗಿಕೊಳ್ಳುತ್ತಿರುವುದು ಕೇಳಿಸಿತು. ಜಿಂಕೆಗಳು ಗಾಬರಿಗೊಂಡಿವೆ ಎಂದರೆ ಅದು ಯಾವುದೋ ಮಾಂಸಾಹಾರಿ ಪ್ರಾಣಿಯ ಓಡಾಟವನ್ನು ಸೂಚಿಸುತ್ತದೆ ಎನ್ನುವುದು ನಮಗೆ ಖಾತರಿಯಾಗಿ ಗೊತ್ತಿತ್ತು. ಹಾಗಾಗಿ ಅದು ನಾವು ಹೆದರಿದ್ದ ಆನೆಯಂತೂ ಅಲ್ಲವೆಂದು ಕೊಂಚ ನೆಮ್ಮದಿಯಿಂದ ಉಸಿರುಬಿಟ್ಟೆವು. 

       ನಮ್ಮ ಹಿಂದೆ ಕೇಳಿದ ಆ ಶಬ್ದದ ಬೆನ್ನತ್ತಿ ನಿಧಾನವಾಗಿ ಕಾಡಿನೊಳಗೆ ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ ಮುಂದುವರೆದೆವು. ಆ ಜಾಗ ಜಿಂಕೆಗಳ ಓಡಾಟಕ್ಕೆ ಹೆಸರಾಗಿತ್ತು ಎನ್ನುವುದು ನಮಗೆ ಗೊತ್ತಿತ್ತು. ಏಕೆಂದರೆ ಅಲ್ಲಿಗೆ ಸಮೀಪದಲ್ಲೇ ಅನೇಕ ಬಾರಿ ಜಿಂಕೆಗಳ ಹಿಂಡನ್ನೇ ನಾವು ಕಂಡಿದ್ದೆವು. ನಿಧಾನವಾಗಿ ಕಾಡಿನೊಳಗೆ ನಾವು ಮುಂದುವರೆಯುತ್ತ ಟಾರ್ಚ್‌ ಹೊತ್ತಿಸಿ ಧ್ವನಿ ಬಂದ ದಿಕ್ಕಿನತ್ತ ಹಿಡಿದೆವು. ನಮ್ಮ ಕಣ್ಣಿಗೆ ಯಾವ ಜಿಂಕೆಯೂ ಕಾಣಿಸಲಿಲ್ಲ. ಆದರೆ ಎರಡು ಕಣ್ಣುಗಳು ಟಾರ್ಚ್‌ ಬೆಳಕಿನಲ್ಲಿ ನಮ್ಮತ್ತ ಹೊಳೆದವು. ಆ ಕಣ್ಣುಗಳ ಹಿಂದೆ ಇದ್ದ ಆಕೃತಿಯೇ ಜಿಂಕೆಗಳ ಭಯಕ್ಕೆ ಕಾರಣವಾಗಿದ್ದು! ಅದು ನಾವು ಈ ಹಿಂದೆ ಅದೇ ಜಾಗದಲ್ಲಿ ಎರಡು ಮೂರು ಸಲ ಕಂಡಿದ್ದ ಒಂದು ಭಾರೀ ಚಿರತೆ!

       ಅದು ಇದೇ ಚಿರತೆ ಎಂದು ಹೇಗೆ ಖಾತರಿಯಾಗಿ ಹೇಳುತ್ತಿದ್ದೇನೆ ಎಂದು ಕೇಳಬೇಡಿ. ಪ್ರಾಣಿಗಳನ್ನು ಮನುಷ್ಯರಂತೆ ಅವುಗಳ ಮುಖ ನೋಡಿ ಬೇರೆಬೇರೆಯಾಗಿ ಗುರುತಿಸಲು ಸಾಧ್ಯವಾಗದಿದ್ದರೂ ಅವುಗಳ ದೈಹಿಕ ಲಕ್ಷಣಗಳ ಆಧಾರದ ಮೇಲೆ ಅವುಗಳನ್ನು ಬೇರೆಬೇರೆಯಾಗಿ ಗುರುತಿಸುವುದು ಸಾಧ್ಯ. ಹಾಗಾಗಿ ಈ ಚಿರತೆಯನ್ನು ಕಂಡಕೂಡಲೇ ನಾವು ಈಗಾಗಲೇ ಎರಡುಮೂರು ಸಲ ನೋಡಿದ್ದ ಅದೇ ಚಿರತೆ ಎನ್ನುವುದು ನಮಗೆ ಅರಿವಾಯಿತು. ಟಾರ್ಚ್‌ ಬೆಳಕಿನಿಂದ ಅದಕ್ಕೆ ಕಿರಿಕಿರಿಯಾಯಿತೆಂದು ತೋರುತ್ತದೆ. ಸಣ್ಣಗೆ ಗುರುಗುಟ್ಟುತ್ತ ತನ್ನ ಅಸಹನೆಯನ್ನು ಪ್ರಕಟಿಸಿ ಪಕ್ಕದಲ್ಲಿದ್ದ ತಗ್ಗೊಂದಕ್ಕೆ ಹಾರಿ ಅಲ್ಲಿಂದ ಮಾಯವಾಯಿತು. ಜಿಂಕೆಗಳ ಹಿಂಡು ಆಗಲೇ ಸಾಕಷ್ಟು ದೂರವಾಗಿತ್ತೆಂದು ತೋರುತ್ತದೆ. ನಮ್ಮ ಕಣ್ಣಿಗೆ ಒಂದು ಜಿಂಕೆಯೂ ಬೀಳಲಿಲ್ಲ. 

       ಹಾಗೇ ಬಂದ ದಾರಿಯಲ್ಲೇ ಎಚ್ಚರಿಕೆಯಿಂದ ನಡೆಯುತ್ತ ರಸ್ತೆಯತ್ತ ಬಂದೆವು. ರಸ್ತೆಯ ಹತ್ತಿರ ಬರುತ್ತಿದ್ದಂತೆ ಚಿರತೆಗಳೆರಡು ರೋಷಾವೇಷದಿಂದ ಘರ್ಜಿಸುತ್ತಿರುವ ಶಬ್ದ ಕೇಳಿಸಿತು. ನಮ್ಮ ನಡಿಗೆಯನ್ನು ಚುರುಕುಗೊಳಿಸಿ ರಸ್ತೆಯ ಸಮೀಪಕ್ಕೆ ಬಂದೆವು. ಅಲ್ಲಿದ್ದ ದೊಡ್ಡ ಮರವೊಂದರ ಹಿಂದೆ ಮರೆಯಾಗಿ ನಿಂತು ಟಾರ್ಚ್‌ ಹೊತ್ತಿಸಿ ರಸ್ತೆಯತ್ತ ಬೆಳಕು ಬಿಟ್ಟೆವು. ಅಲ್ಲಿ ಕಂಡಿತು ನಮ್ಮ ಗೆಳೆಯ ಆ ಭಾರೀ ಚಿರತೆ! ನಮ್ಮ ಸಾನಿಧ್ಯದಿಂದ ಕಿರಿಕಿರಿಯಾಗಿ ತಗ್ಗಿಗೆ ಹಾರಿ ಇನ್ನೊಂದು ದಾರಿಯ ಮೂಲಕ ರಸ್ತೆಯತ್ತ ಬಂದಿದ್ದ ಆ ಚಿರತೆಗೆ ಅದೇ ದಾರಿಯಾಗಿ ಹೊರಟಿದ್ದ ಇನ್ನೊಂದು ಚಿರತೆ ಎದುರಾಗಿತ್ತು! ಚಿರತೆಗಳಾಗಲೀ ಹುಲಿಗಳಾಗಲೀ ಒಂದರ ಸರಹದ್ದಿನೊಳಗೆ ಇನ್ನೊಂದು ಬಂದರೆ ಸಹಿಸುವುದಿಲ್ಲ. ಹಾಗಾಗಿ ಇವುಗಳ ನಡುವೆ ಕಾದಾಟ ಆರಂಭವಾಗಿತ್ತು. ಅದಿನ್ನೂ ಬೈದಾಟದಲ್ಲೇ ಇತ್ತು. ಹೊಡೆದಾಟದ ಹಂತಕ್ಕೆ ಹೋಗಿರಲಿಲ್ಲ. ಅಷ್ಟರಲ್ಲಿ ನಾವು ಟಾರ್ಚ್‌ ಬೆಳಕು ಬೀರಿದ್ದು ಎರಡೂ ಚಿರತೆಗಳಿಗೆ ಸರಿಬರಲಿಲ್ಲ. ಬೆಳಕು ಬಂದ ದಿಕ್ಕಿನತ್ತ ತಿರುಗಿ ಭೀಕರವಾಗಿ ಘರ್ಜಿಸತೊಡಗಿದವು. ಅವೇನೂ ನಮ್ಮತ್ತ ಓಡಿಬರುತ್ತವೆ ಎಂಬ ಭಯ ನಮಗಿರಲಿಲ್ಲ. ಏಕೆಂದರೆ ಕಾಡಿನಲ್ಲಿ ರಾತ್ರಿಯ ವೇಳೆ ಕಂಡ ಅಪರಿಚಿತ ಬೆಳಕಿನ ಮೂಲದತ್ತ ಯಾವ ಪ್ರಾಣಿಯೂ ಮುನ್ನುಗ್ಗುವುದಿಲ್ಲ. ಅವು ನಮ್ಮನ್ನು ಹೆದರಿಸಲೆಂದೇ ಅಷ್ಟು ಜೋರಾಗಿ ಘರ್ಜನೆ ಮಾಡುತ್ತಿರುವುದು ಎನ್ನುವುದು ನಮಗೆ ಸ್ಪಷ್ಟವಾಗಿ ಗೊತ್ತಿತ್ತು. ಹಾಗಾಗಿ ನಾವು ಹಿಂಜರಿಯದೇ ಅದೇ ಮರದ ಮರೆಯಲ್ಲಿ ನಿಂತೆವು. ಅವಕ್ಕೆ ನಮ್ಮ ಟಾರ್ಚಿನ ಬೆಳಕು ಕಾಣುತ್ತಿತ್ತೇ ವಿನಃ ನಾವು ಕಾಣುತ್ತಿರಲಿಲ್ಲ. ಹಾಗಾಗಿ ಅವಕ್ಕೆ ಒಂದಿಷ್ಟು ಗಲಿಬಿಲಿಯಾಗಿದ್ದಂತೂ ನಿಜ. 

       ಟಾರ್ಚ್‌ ಆರಿಸಿ ಅವುಗಳ ರುದ್ರನಾಟಕವನ್ನು ನೋಡುತ್ತ ನಿಲ್ಲುವುದೇ ಒಂದು ಮಜಾ ಎನ್ನುವುದೇನೋ ನಿಜ, ಆದರೆ ಕತ್ತಲು ಎಷ್ಟೊಂದು ದಟ್ಟವಾಗಿತ್ತೆಂದರೆ ಟಾರ್ಚ್‌ ಆರಿಸಿದರೆ ನಮಗೆ ಏನೂ ಕಾಣುವ ಸಂಭವವಿರಲಿಲ್ಲ. ಹಾಗಾಗಿ ಟಾರ್ಚ್‌ ಹೊತ್ತಿಸಿಕೊಂಡೇ ನಿಂತಿದ್ದೆವು. ಅಷ್ಟರಲ್ಲಿ ರಸ್ತೆಯ ಆಚೆಬದಿಯಿಂದ ಆನೆಗಳ ಘೀಳಿಡುವಿಕೆ ಕೇಳತೊಡಗಿತು. ಈ ಸಲ ಅದು ನಮ್ಮ ಬೈಕನ್ನು ಪುಡಿಮಾಡಿದ್ದ ಆನೆ ಅಲ್ಲ ಎಂದು ನಮಗೆ ಕೂಡಲೇ ಗೊತ್ತಾಯಿತು. ಏಕೆಂದರೆ ಅದು ಅನೇಕ ಆನೆಗಳು ಒಟ್ಟಾಗಿ ಮಾಡುತ್ತಿದ್ದ ಗಲಭೆ. ಬಹುಶಃ ಮರಿಗಳಿಂದ ಕೂಡಿದ ಹಿಂಡೊಂದು ರಸ್ತೆ ದಾಟಲು ಬರುತ್ತಿದೆ ಎಂದು ಊಹಿಸಿದೆವು. ಅವು ರಸ್ತೆ ದಾಟಿದರೆ ನೇರವಾಗಿ ನಾವಿರುವಲ್ಲಿಗೇ ಬರುತ್ತಿದ್ದವು. ಹಿಂಡಿನಲ್ಲಿ ಮರಿಗಳೊಂದಿಗಿರುವ ತಾಯಿಯೂ ಇರಬಹುದಾದ್ದರಿಂದ ನಮ್ಮನ್ನು ಕಂಡು ಅವು ಏನು ಮಾಡುತ್ತವೋ ಹೇಳಬರುವುದಿಲ್ಲ. ಆದ್ದರಿಂದ ನಾವು ಆದಷ್ಟು ಬೇಗ ಅಲ್ಲಿಂದ ಜಾಗ ಖಾಲಿ ಮಾಡಿದರೆ ಒಳ್ಳೆಯದೆಂದು ಪಿಸುಮಾತಿನಲ್ಲೇ ಮಾತಾಡಿಕೊಂಡೆವು. ಅಷ್ಟರಲ್ಲಿ ಆನೆಗಳ ಆಗಮನದಿಂದ ಬೇಸತ್ತ ಚಿರತೆಗಳು ದಿಕ್ಕು ಬದಲಿಸಿ ಇನ್ನೊಂದು ಕಡೆಗೆ ಓಡಿಹೋದವು. ಅವು ದೂರವಾದರೂ ಅವುಗಳ ಗುರುಗುಟ್ಟುವಿಕೆ ಕೇಳುತ್ತಲೇ ಇತ್ತು. ತಮ್ಮ ಜಗಳಾಟದ ಎರಡನೇ ಇನ್ನಿಂಗ್ಸ್‌ನ್ನು ಅವು ಬೇರೆ ಮೈದಾನದಲ್ಲಿ ಆರಂಭಿಸಿದವೆಂದು ತೋರುತ್ತದೆ!

       ನಾವು ಅಲ್ಲಿಂದ ಇನ್ನೊಂದು ಕಡೆಗೆ ಓಡಿ, ಕಾಡಿನೊಳಗೆ ಸುಮಾರು ಐವತ್ತು ಮೀಟರ್‌ ಮುಂದಕ್ಕೆ ಬಂದು, ಅಲ್ಲಿಂದ ಆನೆಗಳು ರಸ್ತೆಗೆ ಇಳಿಯುವ ಜಾಗಕ್ಕಿಂತ ಸುಮಾರು ಐವತ್ತು ಮೀಟರ್‌ ಮುಂದೆ ರಸ್ತೆಗೆ ಬಂದೆವು. ಕಗ್ಗತ್ತಲಿನಲ್ಲಿ ನಮಗೆ ಆನೆಗಳು ಕಾಣದಿದ್ದರೂ ಅವು ಎಬ್ಬಿಸುತ್ತಿದ್ದ ಗಲಭೆಯಿಂದ ಅವು ರಸ್ತೆ ದಾಟುತ್ತಿದ್ದವು ಎನ್ನುವುದು ಗೊತ್ತಾಗುತ್ತಿತ್ತು. ಒಂದು ಕ್ಷಣ ಟಾರ್ಚ್‌ ಹತ್ತಿಸಿ ಆ ನೋಟವನ್ನು ಕಣ್ತುಂಬಿಕೊಳ್ಳಬೇಕೆಂಬ ಚಪಲವನ್ನು ಬಲವಂತವಾಗಿ ಹತ್ತಿಕ್ಕಿಕೊಂಡೆವು. ಏಕೆಂದರೆ ಟಾರ್ಚ್‌ ಬೆಳಕನ್ನು ಕಂಡು ಆನೆಗಳು ರೊಚ್ಚಿಗೆದ್ದು ದಾಳಿ ಮಾಡಿದ್ದರೆ ನಾವು ಅಸಹಾಯಕರಾಗಿ ಅವುಗಳ ಕೈಗೆ ಸಿಕ್ಕಿಕೊಳ್ಳುತ್ತಿದ್ದೆವು. ಹಾಗಾಗಿ ಆ ಯೋಚನೆ ಕೈಬಿಟ್ಟೆವು.

       ಅವೆಲ್ಲ ರಸ್ತೆ ದಾಟಿಹೋದವು ಎಂದು ಖಚಿತವಾದಮೇಲೆ ನಾವು ರಸ್ತೆ ದಾಟಿ ಅವು ಇದಕ್ಕೆ ಮೊದಲು ಇದ್ದ ಕಡೆಗೆ ಹೋದೆವು. ಅಲ್ಲಿ ಮರದ ಕೊಂಬೆಗಳನ್ನೆಲ್ಲ ಮುರಿದು, ಕೆಲವು ಕೊಂಬೆಗಳನ್ನು ಸಿಗಿದು, ಸೊಪ್ಪುಗಳನ್ನೆಲ್ಲ ತರಿದು ನೆಲದ ಮೇಲೆ ಚೆಲ್ಲಾಡಿ ರಂಪ ಮಾಡಿದ್ದವು. ಕದಳಿಯೊಳು ಮದದಾನೆ ಹೊಕ್ಕಂತೆ ಎನ್ನುವ ನಾಣ್ಣುಡಿಯ ಅರ್ಥವನ್ನು ಅಲ್ಲಿ ಚೆನ್ನಾಗಿ ತಿಳಿದೆವು. 

       ಸಮಯ ಕಳೆಯುತ್ತ ಮುಂಜಾನೆಯಾಯಿತೆಂದು ನೆನಪಿಸುವಂತೆ ಪೂರ್ವದಲ್ಲಿ ಬೆಳ್ಳಿಚುಕ್ಕಿ ಶುಕ್ರಗ್ರಹ ಮೂಡಿತು. ಮೋಡಗಳು ಚದುರಿದ್ದರಿಂದ ದಿಗಂತದಂಚಿನಲ್ಲಿ ಪ್ರಖರವಾದ ದೀಪ ಹೊತ್ತಿಸಿದಂತೆ ಶುಕ್ರ ಮೇಲಕ್ಕೆ ಬಂತು. ಅದನ್ನು ನೋಡಿ ನಾವು ರಸ್ತೆಯ ಕಡೆಗೆ ಬಂದೆವು. ಸೂರ್ಯೋದಯಕ್ಕೆ ಇನ್ನು ಕೆಲವೇ ಕ್ಷಣಗಳಿದ್ದವು. ಮಸುಕಾದ ಬೆಳಕಿನಲ್ಲಿ ನಿನ್ನೆ ರಾತ್ರಿ ಆನೆ ಮಾಡಿದ್ದ ಅವಾಂತರಗಳನ್ನು ಅಂದಾಜಿಸಲು ಆರಂಭಿಸಿದೆವು. ಬೈಕು ಇನ್ನು ಗುಜರಿಗೆ ಹಾಕುವುದು ಬಿಟ್ಟು ಬೇರೆ ಯಾವುದಕ್ಕೂ ಉಪಯೋಗಕ್ಕೆ ಬರದಷ್ಟು ಪುಡಿಪುಡಿಯಾಗಿತ್ತು. ನಮಗೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಬಿಟ್ಟರೆ ಇನ್ನೇನೂ ಗಂಭೀರ ಸಮಸ್ಯೆ ಆಗಿದ್ದಂತೆ ಕಾಣಲಿಲ್ಲ. ಬೆಳಿಗ್ಗೆ ತರಿಕೆರೆಯಿಂದ ಶೃಂಗೇರಿಯತ್ತ ಹೋಗುತ್ತಿದ್ದ ಬಸ್ಸಿನ ಚಾಲಕ ಗುಜರಿ ರಾಶಿಯೊಂದರ ಪಕ್ಕ ನಿಂತಿದ್ದ ಇಬ್ಬರು ಮನುಷ್ಯರನ್ನು ಕಂಡು ಏನೆಂದು ಭಾವಿಸಿದನೋ ಗೊತ್ತಿಲ್ಲ, ನಾವು ಕೈ ಅಡ್ಡ ಹಿಡಿದರೂ ಬಸ್‌ ನಿಲ್ಲಿಸಲೇ ಇಲ್ಲ! ಸೀದಾ ಮುಂದಕ್ಕೆ ಹೋಯಿತು. ಅದಾಗಿ ಅರ್ಧಗಂಟೆಯ ಬಳಿಕ ಅದೇ ದಾರಿಯಾಗಿ ಹೋಗುತ್ತಿದ್ದ ಆಟೋದವನೊಬ್ಬ ನಮ್ಮ ಅವಸ್ಥೆ ನೋಡಿ ಸಮೀಪದ ಹಳ್ಳಿಯವರೆಗೆ ನಮ್ಮನ್ನು ಕರೆದೊಯ್ದ. ಹೀಗೆ ಗೆಳೆಯನ ಮಗುವಿನ ಬರ್ತ್‌ಡೇ ಪಾರ್ಟಿಯ ರಾತ್ರಿ ನಮ್ಮ ತಿಥಿ ಆಗುವುದು ಸ್ವಲ್ಪದರಲ್ಲಿ ತಪ್ಪಿಹೋಯಿತು!

Category:Personal Experience



ProfileImg

Written by Srinivasa Murthy

Verified