ಮೈಕೆಲ್ ಫ್ಯಾರಡೆ ವಿದ್ಯುಚ್ಛಕ್ತಿಯ ಜನಕ ಎಂದು ಹೆಸರುವಾಸಿಯಾದ ವಿಜ್ಞಾನಿ. ಥಾಮಸ್ ಆಲ್ವಾ ಎಡಿಸನ್ ವಿದ್ಯುದ್ದೀಪವನ್ನು ಮೊದಲಬಾರಿಗೆ ಕಂಡುಹಿಡಿದ ವಿಜ್ಞಾನಿ ಎಂದು ನಾವೆಲ್ಲ ಓದಿದ್ದೇವೆ. ಇದೆಲ್ಲ ಹದಿನೆಂಟು-ಹತ್ತೊಂಬತ್ತನೇ ಶತಮಾನದ ಸಂಶೋಧನೆಗಳು. ಅಂದರೆ ಮಾನವನಿಗೆ ವಿದುಚ್ಛಕ್ತಿಯ ಅರಿವು ಮೂಡಿದ್ದು ತೀರಾ ಇತ್ತೀಚೆಗೆ. ಆದರೆ ಭೂಮಿಯ ಮೇಲೆ ಎಷ್ಟೋ ಜೀವಿಗಳು ಮನುಷ್ಯನಿಗಿಂತ ಎಷ್ಟೋ ಮೊದಲೇ ವಿದ್ಯುಚ್ಛಕ್ತಿಯನ್ನು ಬೆಳಕು ಮತ್ತು ಆತ್ಮರಕ್ಷಣೆಯ ಸಾಧನವಾಗಿ ಬಳಸುತ್ತಿವೆ ಗೊತ್ತೇ?
ಬೆಳಕು ಬಿಡುವ ಜೀವಿಗಳು ಎಂದಕೂಡಲೇ ಎಲ್ಲರಿಗೂ ಮೊದಲು ನೆನಪಾಗುವುದು ಚಿರಪರಿಚಿತವಾದ ಮಿಂಚುಹುಳಗಳು. ರಾತ್ರಿಯ ಆಗಸದಲ್ಲಿ ಸುತ್ತಲೂ ಕತ್ತಲು ಕವಿದ ಗಾಢಾಂಧಕಾರದ ನಡುವೆ ಅಲ್ಲಲ್ಲಿ ಹಾರುವ ನಕ್ಷತ್ರಗಳಂತೆ ತಮ್ಮ ಬಾಲದ ತುದಿಯಿಂದ ಬೆಳಕು ಬೀರುತ್ತ ಹಾರಾಡುವ ಮಿಂಚುಹುಳಗಳು ಎಲ್ಲರಿಗೂ ಗೊತ್ತಿರುವ ಜೀವಿಗಳು. ನಾನಂತೂ ಇವುಗಳನ್ನು ಮರೆಯಲು ಸಾಧ್ಯವೇ ಇಲ್ಲ. ನಮ್ಮ ಮಳೆಗಾಲದ ರಾತ್ರಿಗಳಿಗೆ ರೋಚಕತೆಯನ್ನು ತಂದುಕೊಡುತ್ತಿದ್ದ ಇವು ಎಷ್ಟೊಂದು ಅಸಂಖ್ಯಾತವಾಗಿರುತ್ತಿದ್ದವೆಂದರೆ ನೋಡಿದಲ್ಲೆಲ್ಲ ಮಿನುಗುವ ನಕ್ಷತ್ರಗಳೇ ಕಾಣುತ್ತ ಆಗಸದಲ್ಲಿರುವ ನಕ್ಷತ್ರಗಳನ್ನೂ ಮೀರಿಸುವ ಸಂಖ್ಯೆಯಲ್ಲಿ ಭೂಮಿಯ ವಾತಾವರಣದಲ್ಲಿ ಈ ಹುಳುಗಳು ಹಾರುತ್ತಿವೆಯೇನೋ ಎಂದು ಭಾಸವಾಗುತ್ತಿತ್ತು. ಕೆಲವೊಮ್ಮೆ ಕೆಲವು ಹುಳುಗಳು ದಾರಿತಪ್ಪಿ ಮನೆಯೊಳಗೆ ಬರುತ್ತಿದ್ದವು. ಆಗೆಲ್ಲ ನಾವು ಅವುಗಳನ್ನು ಹಿಡಿದು ಆಡುತ್ತಿದ್ದೆವು. ಅವುಗಳ ದೇಹದಲ್ಲಿ ಬೆಳಕು ಹೇಗೆ ಬರುತ್ತದೆ ಎಂಬುದು ನಮಗೆ ತೀರದ ಕುತೂಹಲದ ಸರಕಾಗಿತ್ತು.
ಮೊದಲಬಾರಿಗೆ ಥಾಮಸ್ ಆಲ್ವಾ ಎಡಿಸನ್ ಕಂಡುಹಿಡಿದ ಬಲ್ಬ್ ತಾಪದೀಪ್ತ ಬಲ್ಬ್ ಆಗಿತ್ತು. ಈಗ ಸಾಮಾನ್ಯವಾಗಿ ಈ ಬಲ್ಬ್ಗಳನ್ನು ನಾವು ಕಾಣುವುದು ಬಹಳ ಕಡಿಮೆ. ಏಕೆಂದರೆ ತಮಗೆ ಒದಗಿದ ಶಕ್ತಿಯ ಶೇಕಡ ೮೦ರಷ್ಟನ್ನು ಶಾಖದ ರೂಪದಲ್ಲಿ ವ್ಯರ್ಥಗೊಳಿಸುತ್ತವೆ. ಹಾಗಾಗಿ ಅವುಗಳಿಂದ ಬರುವ ಬೆಳಕು ಕೂಡ ಅತ್ಯಲ್ಪ. ಬುರುಡೆ ಬಲ್ಬ್ ಎಂದು ಕರೆಯಲ್ಪಡುವ ಈ ಬಲ್ಬ್‌ಗಳನ್ನು ಈಗ ಯಾರೂ ಬಳಸುವುದಿಲ್ಲ. ಅದರ ಬದಲು ಟ್ಯೂಬ್‌ಲೈಟ್, ಸಿಎಫ್‌ಎಲ್ ದೀಪ ಹಾಗೂ ಎಲ್‌ಇಡಿ ದೀಪಗಳು ಬಂದಿವೆ. ಅತಿ ಕಡಿಮೆ ವಿದ್ಯುಚ್ಛಕ್ತಿಯನ್ನು ಬಳಸಿ ಹೆಚ್ಚಿನ ಬೆಳಕು ಮತ್ತು ಅತಿಕಡಿಮೆ ಶಾಖವನ್ನು ಕೊಡುವ ಈ ದೀಪಗಳನ್ನು ಬಳಸುವುದರಿಂದ ಖರ್ಚೂ ಕಡಿಮೆ ಹಾಗೂ ಪರಿಸರಕ್ಕೂ ಇವುಗಳ ಬಳಕೆಯಿಂದ ಹಾನಿ ಕಡಿಮೆ. ಆದರೆ ಇಂಥ ಶಾಖರಹಿತ ಬೆಳಕನ್ನೇ ಮಿಂಚುಹುಳಗಳು ಲಕ್ಷಾಂತರ ವರ್ಷಗಳಿಂದ ಬಿಡುತ್ತಿವೆ!
ಮಿಂಚುಹುಳಗಳಲ್ಲಿ ಬೆಳಕು ಹೇಗೆ ಉತ್ಪತ್ತಿಯಾಗುತ್ತದೆ ಎಂದು ನೋಡೋಣ. ಇವುಗಳ ದೇಹದಲ್ಲಿ ಲ್ಯೂಸಿಫೆರೇಸ್ ಮತ್ತು ಲ್ಯೂಸಿಫೆರಿನ್ ಎಂಬ ಎರಡು ಕಿಣ್ವಗಳು ಮೆಗ್ನೀಸಿಯಂ ಅಯಾನುಗಳ ಜೊತೆ ವರ್ತಿಸಿ ಬೆಳಕನ್ನು ಬಿಡುಗಡೆ ಮಾಡುತ್ತವೆ. ಈ ಬೆಳಕು ಸಂಪೂರ್ಣವಾಗಿ ಶಾಖರಹಿತವಾದದ್ದು. ಬೇಕಿದ್ದರೆ ಬೆಳಕು ಬಿಡುತ್ತಿರುವ ಹುಳುವೊಂದನ್ನು ಮುಟ್ಟಿನೋಡಿ, ಅದರ ಮೈ ಒಂದಿಷ್ಟೂ ಬಿಸಿಯಾಗಿರುವುದಿಲ್ಲ! ಇವುಗಳ ಬೆಳಕಿಗೆ ಕಾರಣಗಳೇನೆಂದು ಹುಡುಕಹೊರಟ ವಿಜ್ಞಾನಿಗಳಿಗೆ ಅನೇಕ ವಿಸ್ಮಯಕಾರಿ ವಿಷಯಗಳು ಪತ್ತೆಯದವು. ಈ ಹುಳುಗಳ ಲಾರ್ವಾಗಳು ಸಹ ಬೆಳಕನ್ನು ಬೀರುತ್ತವೆ. ಆದರೆ ಅವು ಬೆಳಕು ಬಿಡುವುದು ಶತ್ರುಗಳನ್ನು ಬೆದರಿಸುವುದಕ್ಕಾಗಿ ಹಾಗೂ ಪ್ರೌಢಕೀಟಗಳು ಬೆಳಕು ಬೀರುವುದು ತಮ್ಮ ಸ್ವಪ್ರಭೇದವನ್ನು ಗುರುತಿಸಿ, ಗಂಡು-ಹೆಣ್ಣುಗಳು ಕೂಡಿಕೊಳ್ಳುವುದಕ್ಕಾಗಿ. ಒಂದೊಂದು ಪ್ರಭೇದದ ಬೆಳಕು ಬೀರುವ ಕಾಲಾವಧಿಯೂ ಬೇರೆ ಪ್ರಭೇದಕ್ಕಿಂತ ವಿಭಿನ್ನವಾಗಿರುತ್ತದೆ.
ಅಣಬೆಗಳು ಸಹ ಎಲ್ಲರಿಗೂ ಚಿರಪರಿಚಿತವಾದ ಜೀವಿಗಳು. ಅತ್ತ ಪ್ರಾಣಿಗಳೂ ಅಲ್ಲದ ಇತ್ತ ಸಸ್ಯಗಳೂ ಅಲ್ಲದ, ಫಂಗೈ ಎಂಬ ಬೇರೆಯೇ ಸಾಮ್ರಾಜ್ಯಕ್ಕೆ ಸೇರಿದ ಶಿಲೀಂಧ್ರಗಳು ಇವು. ಇವುಗಳಲ್ಲಿ ಅನೇಕ ಪ್ರಭೇದಗಳು ಬೆಳಕನ್ನು ಬೀರುತ್ತವೆ. ಇವುಗಳಲ್ಲಿ ಸಹ ಬೆಳಕು ಉತ್ಪತ್ತಿಯಾಗುವುದು ಲ್ಯೂಸಿಫೆರಿನ್ ಮತ್ತು ಲ್ಯೂಸಿಫೆರೇಸ್ ಕಿಣ್ವಗಳ ನಡುವಿನ ರಾಸಾಯನಿಕ ಪ್ರಕ್ರಿಯೆಯಿಂದ ಬೆಳಕು ಬಿಡುಗಡೆಯಾಗುತ್ತದೆ. ಇದರಿಂದ ಇವಕ್ಕೆ ಏನು ಉಪಯೋಗ ಎಂಬ ಪ್ರಶ್ನೆಗೆ ನಿಖರವಾದ ಉತ್ತರ ಸಿಕ್ಕಿಲ್ಲ. ಆದರೆ ಅವು ಸಾಮಾನ್ಯವಾಗಿ ದಟ್ಟಡವಿಗಳಲ್ಲಿ ಕತ್ತಲು ಮುಸುಕಿದ ಪ್ರದೇಶಗಳಲ್ಲಿ ಇರುವುದರಿಂದ ಬೀಜಪ್ರಸಾರಕ್ಕೆ ಕಾರಣವಾಗುವ ಪ್ರಾಣಿಗಳನ್ನು ಆಕರ್ಷಿಸಲು ಇವು ಬೆಳಕು ಬೀರುತ್ತವೆ ಎಂದು ನಂಬಲಾಗಿದೆ. ಹಗಲಿನ ವೇಳೆ ಇವು ಬೆಳಕು ಬೀರುವುದಿಲ್ಲ. ಆದರೆ ಕತ್ತಲಾಗುತ್ತಿದ್ದಂತೆ ಬೆಳಕನ್ನು ಹೊಮ್ಮಿಸಲು ಆರಂಭಿಸುತ್ತವೆ. ಇವು ಸಾಮಾನ್ಯವಾಗಿ ಹಸಿರು ಬಣ್ಣದ ಬೆಳಕನ್ನು ಹೊಮ್ಮಿಸುತ್ತವೆ. ಈ ಬೆಳಕಿಗೆ ಆಕರ್ಷಿತಗೊಂಡು ಇವುಗಳನ್ನು ತಿನ್ನುವ ಪ್ರಾಣಿಗಳು ಬಂದು ಇವನ್ನು ಮುಟ್ಟಿದೊಡನೆ ಇದರ ಛತ್ರಿ ಒಡೆದು ಬೀಜಕಣಗಳು (ಸ್ಪೋರ್ಸ್) ಗಾಳಿಯಲ್ಲಿ ಪ್ರಸಾರವಾಗುತ್ತವೆ. ಆದರೆ ಇದಕ್ಕೆ ವಿರುದ್ಧವಾಗಿ ಈ ಬೆಳಕು ಅಣಬೆಗಳನ್ನು ತಿನ್ನುವ ಪ್ರಾಣಿಗಳನ್ನು ಹಿಮ್ಮೆಟ್ಟಿಸಿ ಅವುಗಳನ್ನು ರಕ್ಷಿಸುತ್ತವೆ ಎಂಬ ವಾದವೂ ಇದೆ. ಇವೆರಡರಲ್ಲಿ ಯಾವುದು ಸತ್ಯ ಎಂಬುದು ಇನ್ನೂ ಗೊತ್ತಿಲ್ಲ.
ಸಮುದ್ರದಲ್ಲಿ ವಾಸಿಸುವ, ಬೃಹದಾಕಾರದ ಸ್ಕ್ವಿಡ್ ಎಂಬ ಜೀವಿಯೊಂದಿದೆ. ಕಲೋಸ್ಸಲ್ ಸ್ಕ್ವಿಡ್ ಎಂಬ ಒಂದು ಬಗೆಯ ಸ್ಕ್ವಿಡ್ ಅಂತೂ ಭೂಮಿಯ ಮೇಲೆ ಇಂದು ಬದುಕಿರುವ ಅತಿದೊಡ್ಡ ಅಕಶೇರುಕ ಎಂದು ಹೆಸರಾಗಿದೆ. ಆದರೆ ಇಂಥ ಜೀವಿಗಳ ಕುಟುಂಬದಲ್ಲೇ ಮೂರು ಇಂಚುಗಳಷ್ಟೇ ಉದ್ದವಾದ ಪುಟಾಣಿ ಸದಸ್ಯ ಒಂದಿದೆ. ಈ ಸ್ಕ್ವಿಡ್‌ಗೆ ಫೈರ್‌ಫ್ಲೈ ಸ್ಕ್ವಿಡ್ ಅಥವಾ ಮಿಂಚುಹುಳ ಸ್ಕ್ವಿಡ್ ಎಂದೇ ಹೆಸರಿದೆ. ಈ ಜೀವಿ ಪೆಸಿಫಿಕ್ ಸಾಗರದಲ್ಲಿ ೬೦೦ರಿಂದ ೧೨೦೦ ಅಡಿ ಆಳದಲ್ಲಿ ವಾಸಿಸುತ್ತದೆ. ಈ ಜೀವಿ ತನ್ನ ದೇಹದಲ್ಲಿ ಸಣ್ಣಸಣ್ಣ ಬೆಳಕನ್ನು ಹೊಮ್ಮಿಸುವ ಚುಕ್ಕಿಗಳಂಥ ರಚನೆಯನ್ನು ಹೊಂದಿದ್ದು ಇವುಗಳು ಬೆಳಗಿದಾಗ ಅವು ಚಿಕ್ಕಚಿಕ್ಕ ಮೀನುಗಳನ್ನು ಆಕರ್ಷಿಸುತ್ತವೆ. ಆಗ ಸಮೀಪಕ್ಕೆ ಬರುವ ಮೀನುಗಳನ್ನು ಈ ಸ್ಕ್ವಿಡ್‌ಗಳು ಹಿಡಿದು ತಿನ್ನುತ್ತವೆ. ಇನ್ನು ಈ ಬೆಳಕಿನ ಕೋಶಗಳ ಇನ್ನೊಂದು ಲಾಭವೆಂದರೆ ಕೆಳಗಿನಿಂದ ನೋಡಿದಾಗ ಈ ಬೆಳಕಿನ ಚಿತ್ತಾರಗಳು ಕೆಳಗಿನಿಂದ ನೋಡುವ ಬೇಟೆಗಾರರಿಗೆ ಸ್ಕ್ವಿಡ್‌ಗಳು ಕಾಣದಂತೆ ಮಾಡುತ್ತವೆ. ಹೀಗಾಗಿ ಅವು ಬೇಟೆಗಾರರಿಂದ ಸುಲಭದಲ್ಲಿ ತಪ್ಪಿಸಿಕೊಳ್ಳುತ್ತವೆ. ಜೊತೆಗೆ ಇವು ತಮ್ಮ ಜೊತೆಗಾರರನ್ನು ಆಕರ್ಷಿಸಲು ಸಹ ಬೆಳಕನ್ನು ಹೊಮ್ಮಿಸುತ್ತವೆ.
ಮೀನಲ್ಲದಿದ್ದರೂ ತಮ್ಮ ಹೆಸರಿನಲ್ಲಿ ಮೀನು ಎಂಬ ಅಭಿದಾನ ಹೊಂದಿರುವ ಅಂಬಲಿಮೀನನ್ನು (ಜೆಲ್ಲಿಫಿಶ್) ಸಾಮಾನ್ಯವಾಗಿ ಹೆಚ್ಚಿನವರು ನೋಡಿರದಿದ್ದರೂ ಸಾಮಾನ್ಯವಾಗಿ ಹೆಸರನ್ನಂತೂ ಕೇಳಿರುತ್ತಾರೆ. ಸಾಗರದಲ್ಲಿ ಅಣಬೆಗಳಂತೆ, ಛತ್ರಿಗಳಂತೆ ತೇಲುತ್ತಿರುವ, ಮೇಲ್ನೋಟಕ್ಕೆ ಜೀವಿಗಳೆಂದೇ ಅನ್ನಿಸದ ತೇಲುವ ಪ್ಲಾಸ್ಟಿಕ್‌ಗಳಂತೆ ಕಾಣುವ ಈ ಅಂಬಲಿಮೀನುಗಳಲ್ಲಿ ಸಹ ಬೆಳಕನ್ನು ಹೊರಹೊಮ್ಮಿಸುವ ಪ್ರಭೇದಗಳಿವೆ. ಬಹುತೇಕ ಪಾರದರ್ಶಕವಾದ ದೇಹವನ್ನು ಹೊಂದಿರುವ ಈ ಜೆಲ್ಲಿಮೀನುಗಳು ತಮ್ಮ ಛತ್ರಿಯ ಅಂಚುಗಳಲ್ಲಿ ಬೆಳಕನ್ನು ಹೊಮ್ಮಿಸುತ್ತ ಹಾರುವ ತಟ್ಟೆ (ಫ್ಲೈಯಿಂಗ್ ಸಾಸರ್)ಗಳಂತೆ ಕಾಣುತ್ತವೆ. ಇವುಗಳ ದೇಹದಲ್ಲಿರುವ ಒಂದು ಬಗೆಯ ಹಸಿರು ಪ್ರೋಟೀನ್‌ನಿಂದ ಇವು ಬೆಳಕನ್ನು ಉತ್ಪಾದಿಸುತ್ತವೆ. ಈ ಪ್ರೋಟಿನ್ ಅನ್ನು ಕಂಡುಹಿಡಿದ ಜಪಾನಿನ ವಿಜ್ಞಾನಿ ಒಸಮು ಶಿಮೊಮುರಾ ಅವರು ಇನ್ನಿಬ್ಬರು ವಿಜ್ಞಾನಿಗಳಾದ ಮಾರ್ಟಿನ್ ಶಾಲ್ಪಿ ಮತ್ತು ರೋಜರ್ ವೈ ಸೀನ್ ಎಂಬುವವರ ಜೊತೆಗೆ ೨೦೦೮ರ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡರು.
ಆಂಗ್ಲರ್ ಫಿಶ್ ಎಂಬ ಒಂದು ಜಾತಿಯ ಮಾಂಸಾಹಾರಿ ಮೀನಿದೆ. ಇದರ ವಿಶೇಷತೆಯೆಂದರೆ ಈ ಮೀನಿನ ತಲೆಯ ಭಾಗದಿಂದ ಒಂದು ಗಾಳ ಇಳಿಬಿದ್ದಿರುತ್ತದೆ. ಈ ಗಾಳದ ತುದಿಯಲ್ಲಿ ಬ್ಯಾಕ್ಟೀರಿಯಾಗಳ ಚಟುವಟಿಕೆಯಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದರಿಂದ ಆ ಗಾಳ ಮಿನುಗುತ್ತದೆ. ಅದರತ್ತ ಆಕರ್ಷಿತವಾಗಿ ಸಮೀಪಕ್ಕೆ ಬರುವ ಮೀನುಗಳನ್ನು ಈ ಮೀನು ಗಬಕ್ಕನೆ ಹಿಡಿದು ನುಂಗುತ್ತದೆ. ಹೀಗೆ ಇದು ಬೇಟೆಯಾಡಲು ತನ್ನ ಬೆಳಕನ್ನು ಉಪಯೋಗಿಸುತ್ತದೆ.
ಹೀಗೆ ಬೇರೆಬೇರೆ ಕಾರಣಗಳಿಗಾಗಿ ಬೆಳಕನ್ನು ಬೀರುವ ಜೀವಿಗಳ ಬಗ್ಗೆ ತಿಳಿದುಕೊಂಡೆವು. ಇನ್ನು ಆತ್ಮರಕ್ಷಣೆಗಾಗಿ ಮುಟ್ಟಿದವರು ಬೆಚ್ಚಿಬೀಳುವಂತೆ ವಿದ್ಯುದಾಘಾತ ನೀಡಬಲ್ಲ ಮೀನಿನ ಬಗ್ಗೆ ಕೇಳಿದ್ದೀರಾ? ಎಲೆಕ್ಟ್ರಿಕ್ ಈಲ್ ಎಂದೇ ಹೆಸರಾಗಿರುವ ಈ ಮೀನು ನೋಡಲು ಹಾವುಮೀನಿನಂತೆ ಉದ್ದವಾಗಿರುವುದರಿಂದ ಎಲೆಕ್ಟ್ರಿಕ್ ಈಲ್ ಎಂಬ ಹೆಸರಿದೆಯಾದರೂ ಇದು ಹಾವುಮೀನುಗಳ ಗುಂಪಿಗೆ ಸೇರಿಲ್ಲ. ಆರೂವರೆ ಅಡಿ ಉದ್ದಕ್ಕೆ ಬೆಳೆಯುವ ಈ ಮೀನು ಇಪ್ಪತ್ತು ಕೆಜಿ ತೂಗುತ್ತದೆ. ಇದರ ದೇಹದಲ್ಲಿ ಐದರಿಂದ ಆರು ಸಾವಿರ ವಿದ್ಯುತ್ ಉತ್ಪಾದನಾ ಕೋಶಗಳನ್ನು ಹೊಂದಿದೆ. ಇದು ೮೬೦ ವೋಲ್ಟ್‌ಗಳಷ್ಟು ವಿದ್ಯುತ್ತನ್ನು ಉತ್ಪಾದಿಸುತ್ತವೆ. ಆದರೆ ಈ ಆಘಾತವನ್ನು ಅದು ಕೇವಲ ಎರಡು ಮಿಲಿಸೆಕೆಂಡ್‌ಗಳ ಕಾಲ ನೀಡುವುದರಿಂದ ಮನುಷ್ಯರಿಗೆ ಇದರಿಂದ ಪ್ರಾಣಾಪಾಯವಾಗುವ ಸಾಧ್ಯತೆಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಆದರೆ ಈ ಆಘಾತ ತೀವ್ರ ನೋವನ್ನುಂಟುಮಾಡಲು ಸಮರ್ಥವಾಗಿದೆ. ಹಾಗಾಗಿ ಎಲೆಕ್ಟ್ರಿಕ್ ಈಲ್‌ಗಳು ಇರುವ ಪ್ರದೇಶದಲ್ಲಿ ಈಜುವ ಈಜುಗಾರರಿಗೆ ಹಾಗೂ ಅಕ್ವೇರಿಯಂಗಳಲ್ಲಿ ಇವುಗಳನ್ನು ಸಾಕುವವರಿಗೆ ಶಾಕ್ ಹೊಡೆಯುವ ಅಪಾಯ ಇದ್ದೇ ಇದೆ. ಇವು ಬೇಟೆಯಾಡುವಾಗ ಕಡಿಮೆ ಪ್ರಮಾಣದ ವಿದ್ಯುತ್ತನ್ನು ಹಾಗೂ ತನ್ನನ್ನು ಬೇಟೆಯಾಡಲು ಬರುವ ಶತ್ರುಗಳನ್ನು ಹೆದರಿಸಲು ಹೆಚ್ಚಿನ ಪ್ರಮಾಣದ ವಿದ್ಯುತ್ತನ್ನು ಬಿಡುಗಡೆ ಮಾಡುವುದು ಕಂಡುಬಂದಿದೆ.
ಎಲೆಕ್ಟ್ರಿಕ್ ರೇ ಎಂಬ ಇನ್ನೊಂದು ಬಗೆಯ ಮೀನುಗಳು ಸಹ ವಿದ್ಯುತ್ತನ್ನು ಉತ್ಪತ್ತಿ ಮಾಡುತ್ತವೆ. ವಿಶ್ವವಿಖ್ಯಾತ ವನ್ಯಜೀವಿ ತಜ್ಞ, ಕ್ರೊಕೊಡೈಲ್ ಹಂಟರ್ ಎಂದೇ ಹೆಸರಾಗಿದ್ದ ಸ್ಟೀವ್ ಇರ್ವಿನ್ ಗೊತ್ತಲ್ಲ? ಅವನ ಸಾವಿಗೆ ಕಾರಣವಾಗಿದ್ದು ಒಂದು ಸ್ಟಿಂಗ್‌ರೇ. ಅದರ ಗುಂಪಿಗೇ ಸೇರಿದ ಎಲೆಕ್ಟ್ರಿಕ್ ರೇಗಳಲ್ಲಿ ಸುಮಾರು ಅರವತ್ತೊಂಬತ್ತು ಪ್ರಭೇದಗಳನ್ನು ಗುರ್ತಿಸಲಾಗಿದೆ. ಈಲ್‌ಗಳಿಗೆ ಹೋಲಿಸಿದರೆ ಇವು ಬಿಡುಗಡೆ ಮಾಡುವ ವಿದ್ಯುಚ್ಛಕ್ತಿ ಕಡಿಮೆ. ಇವು ೫೦ರಿಂದ ೨೦೦ ವೋಲ್ಟ್‌ಗಳಷ್ಟು ವಿದ್ಯುತ್ತನ್ನು ಬಿಡುಗಡೆ ಮಾಡುತ್ತವೆ. ಆದರೆ ತಮ್ಮ ಬಲಿಯನ್ನು ವಿದ್ಯುದಾಘಾತಕ್ಕೊಳಪಡಿಸಿ ಬೇಟೆಯಾಡಲು ಇವುಗಳಿಗೆ ಸಾಧ್ಯ.
ಬಾಳೆಮೀನು (ಕ್ಯಾಟ್‌ಫಿಶ್) ಎಂಬ ಮೀನುಗಳು ಸಹ ಮತ್ಸö್ಯಸಾಮ್ರಾಜ್ಯದಲ್ಲಿ ಸುಪ್ರಸಿದ್ಧ. ಸಿಕ್ಕಿದ್ದನ್ನೆಲ್ಲ ತಿನ್ನುವ ಕಾರಣ ಈ ಮೀನುಗಳನ್ನು ಅಕ್ವೇರಿಯಂಗಳಲ್ಲಿ ಅಥವಾ ಕೆರೆಗಳಲ್ಲಿ ಸಾಕಲಾಗುವುದಿಲ್ಲ. ಇವುಗಳಲ್ಲಿ ಸಹ ವಿದ್ಯುತ್ ಉತ್ಪಾದನೆ ಮಾಡುವ ಪ್ರಭೇದಗಳಿವೆ. ಸುಮಾರು ಇಪ್ಪತ್ತೊಂದು ಪ್ರಭೇದಗಳಿಗೆ ಈ ಶಕ್ತಿ ಇದ್ದು, ಅದರಲ್ಲಿ ಅತ್ಯಂತ ದೊಡ್ಡ ಪ್ರಭೇದ ನಾಲ್ಕು ಅಡಿ ಉದ್ದಕ್ಕೆ ಬೆಳೆಯುತ್ತದೆ ಹಾಗೂ ಇಪ್ಪತ್ತು ಕೆಜಿ ತೂಗಬಲ್ಲದು. ಇದು ೩೦೦ರಿಂದ ೪೦೦ ವೋಲ್ಟ್‌ಗಳಷ್ಟು ವಿದ್ಯುತ್ ಉತ್ಪಾದಿಸಬಲ್ಲದು. ತನ್ನ ಬಲಿಯನ್ನು ಹಿಡಿಯಲು ಈ ವಿದ್ಯುತ್ತನ್ನು ಅದು ಬಳಸಿಕೊಳ್ಳುತ್ತದೆ. ಚಿಕ್ಕ ಪ್ರಭೇದಗಳು ಸಾಮಾನ್ಯವಾಗಿ ಒಂದಡಿ ಇದ್ದು, ಅವು ಉತ್ಪಾದಿಸುವ ವಿದ್ಯುತ್ ಕೂಡ ಕಡಿಮೆ ಇರುತ್ತದೆ. ಅವುಗಳನ್ನು ಸಂಧಿವಾತ (ಆರ್ಥರೈಟಿಸ್) ಚಿಕಿತ್ಸೆಯಲ್ಲಿ ಬಳಸುತ್ತಾರೆ.
ಈ ಮೀನುಗಳನ್ನೆಲ್ಲ ಸ್ಟ್ರಾಂಗ್‌ಲಿ ಎಲೆಕ್ಟ್ರಿಕ್ ಫಿಶ್ ಅಂದರೆ ಪ್ರಬಲವಾದ ವಿದ್ಯುತ್ತನ್ನು ಉತ್ಪಾದಿಸುವ ಮೀನುಗಳೆನ್ನುತ್ತಾರೆ. ಎಲೆಕ್ಟ್ರಿಕ್‌ಫಿಶ್‌ಗಳಲ್ಲೇ ಇನ್ನೊಂದು ಬಗೆಯ ಮೀನುಗಳಿವೆ. ಅವುಗಳನ್ನು ವೀಕ್ಲಿ ಎಲೆಕ್ಟ್ರಿಕ್ ಫಿಶ್ ಅಥವಾ ದುರ್ಬಲವಾದ ವಿದ್ಯುತ್ತನ್ನು ಉತ್ಪಾದಿಸುವ ಎಲೆಕ್ಟ್ರಿಕ್ ಮೀನುಗಳೆನ್ನುತ್ತಾರೆ. ಸಹಜವಾಗಿಯೇ ಈ ದುರ್ಬಲವಾದ ವಿದ್ಯುತ್ತನ್ನು ಬೇಟೆಯಾಡುವುದಕ್ಕಾಗಲೀ ಅಥವಾ ಶತ್ರುಗಳನ್ನು ಹಿಮ್ಮೆಟ್ಟಿಸುವುದಕ್ಕಾಗಲೀ ಬಳಸಲು ಸಾಧ್ಯವಿಲ್ಲ. ಹಾಗಾದರೆ ಈ ಮೀನುಗಳು ವಿದ್ಯುಚ್ಛಕ್ತಿಯನ್ನು ಬಳಸುವುದೇಕೆ ಎಮಬ ಪ್ರಶ್ನೆ ಉದ್ಭವವಾಗುತ್ತದೆ. ಇದಕ್ಕೆ ಸರಳವಾದ ಉತ್ತರವಿಷ್ಟೇ- ಒಂದರೊಡನೆ ಒಂದು ಸಂಪರ್ಕ ಸಾಧಿಸಲು. ಒಂದೇ ಜಾತಿಯ ಎರಡು ಮೀನುಗಳು ಪರಸ್ಪರ ಸಂಭಾಷಿಸಲು ಕಂಡುಕೊಂಡಿರುವ ಸುಲಭ ಮತ್ತು ಪರಿಣಾಮಕಾರಿ ವಿಧಾನವಿದು. ಏಕೆಂದರೆ ಇದರಿಂದ ಅವು ಬೇರೆ ಜಾತಿಯ ಮೀನುಗಳಿಗೆ ತಿಳಿಯದಂತೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಇವುಗಳಲ್ಲಿ ಅತ್ಯಂತ ಮುಖ್ಯವಾದದ್ದೆಂದರೆ ಆನೆಯ ಸೊಂಡಿಲಿನಂತೆ ಉದ್ದವಾದ ಮೂಗು ಇರುವಂಥ ಎಲಿಫೆಂಟ್ ನೋಸ್ಡ್ ಫಿಶ್ ಎಂಬ ಒಂದು ಜಾತಿಯ ಮೀನು. ಈ ಮೀನಿನ ಮೂಗು ಆನೆಯ ಸೊಂಡಿಲಿನಂತೆ ಉದ್ದವಾಗಿರುವುದರಿಂದ ಈ ಹೆಸರು ಬಂದಿದೆ. ಇವುಗಳು ಎಲೆಕ್ಟ್ರೋಸೈಟ್ಸ್ ಎಂಬ ಕೋಶಗಳ ಮೂಲಕ ವಿದ್ಯುತ್ತನ್ನು ಉತ್ಪಾದಿಸುತ್ತವೆ. ಜೊತೆಗೆ ಬೇರೆ ಮೀನುಗಳು ಬಿಟ್ಟ ವಿದ್ಯುತ್ ಸಂಜ್ಞೆಗಳನ್ನು ಸ್ವೀಕರಿಸುವ ಕೋಶಗಳೂ ಇವುಗಳಲ್ಲಿವೆ. ಈ ವಿದ್ಯುತ್ತಿನ ನೆರವಿನಿಂದ ಈ ಮೀನುಗಳು ರಾಡಿಯಾದ ನೀರಿನಲ್ಲಿ ಸಹ ಆರಾಮವಾಗಿ ದಾರಿ ಕಂಡುಕೊಂಡು ಈಜಬಲ್ಲವು, ಅಷ್ಟೇ ಅಲ್ಲದೆ ತಮ್ಮ ಜೊತೆಗಾರರನ್ನು ಕೂಡ ಹುಡುಕಿಕೊಳ್ಳಲು ಈ ವಿದ್ಯುತ್ತಿನ ನೆರವು ಪಡೆಯುತ್ತವೆ. ಈ ಮೀನುಗಳು ಸಿಹಿನೀರಿನಲ್ಲಿ ಮಾತ್ರ ವಾಸಿಸುತ್ತವೆ.
ಇನ್ನು ಒಂದು ಬಗೆಯ ಮೀನುಗಳಿವೆ. ಅವು ಬೇರೆ ಮೀನುಗಳು ಉತ್ಪಾದಿಸಿದ ವಿದ್ಯುತ್ ಅಲೆಗಳನ್ನು ಗುರುತಿಸಬಲ್ಲವೇ ಹೊರತು ಸ್ವಂತವಾಗಿ ವಿದ್ಯುತ್ ಅಲೆಗಳನ್ನು ಉತ್ಪಾದಿಸಲಾರವು. ಶಾರ್ಕ್ ಮೀನುಗಳು, ಕೆಲವು ಬರೆಯ ರೇಗಳು ಇಂಥ ಸಾಮರ್ಥ್ಯ ಹೊಂದಿವೆ. ಇದರಿಂದ ಇವಕ್ಕಿರುವ ಉಪಯೋಗವೇನೆಂದು ನಿಖರವಾಗಿ ತಿಳಿಯಲು ಸಾಧ್ಯವಾಗಿಲ್ಲ. ಬಹುಶಃ ಇವು ಸಹ ಬೇರೆ ಮೀನುಗಳ ಸಂಜ್ಞೆಗಳನ್ನು ಗ್ರಹಿಸಿ ಅವುಗಳನ್ನು ಬೇಟೆಯಾಡಲು ಇದರಿಂದ ಅನುಕೂಲವಾಗಬಹುದೆಂದು ನಂಬಲಾಗಿದೆ.
ಒಟ್ಟಿನಲ್ಲಿ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಮೀನುಗಳು ಒಂದು ಅಂಶವನ್ನಂತೂ ಖಚಿತಪಡಿಸಿವೆ. ಅದೆಂದರೆ ಭೂಮಿಯ ಮೇಲೆ ವಿದ್ಯುತ್ತನ್ನು ಉತ್ಪಾದಿಸಿದ ಮೊದಲಿಗರು ಮನುಷ್ಯರಂತೂ ಅಲ್ಲವೇ ಅಲ್ಲ! ಮೀನುಗಳು ಪ್ರಜ್ಞಾಪೂರ್ವಕವಾಗಿ ಅಲ್ಲದಿದ್ದರೂ ಕೋಟ್ಯಂತರ ವರ್ಷಗಳಿಂದ ವಿದ್ಯುತ್ತನ್ನು ಉತ್ಪಾದಿಸುವುದನ್ನು ಹಾಗೂ ಅದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದನ್ನು ಚೆನ್ನಾಗಿ ಕಲಿತುಕೊಂಡಿವೆ. ಜೊತೆಗೆ ಶೀತಲ ವಿದ್ಯುತ್ತನ್ನು ಉತ್ಪಾದಿಸಿ ಅದನ್ನು ಬೆಳಕಿನ ಮೂಲವನ್ನಾಗಿ ಬಳಸುವುದನ್ನು ಸಹ ಚೆನ್ನಾಗಿ ಅರಿತಿರುವ ಜೀವಿಗಳಿವೆ. ಒಟ್ಟಿನಲ್ಲಿ ಈ ಜೀವಿಗಳದ್ದೊಂದು ಅದ್ಭುತ ಲೋಕವೇ ಸರಿ.
0 Followers
0 Following