Do you have a passion for writing?Join Ayra as a Writertoday and start earning.

ಮಹಿಳೆಯರ ಆರ್ಥಿಕ ಸಬಲೀಕರಣ

ProfileImg
23 Feb '24
2 min read


image

ಇಂದು ಜಗತ್ತು ಗಾಳಿಯಷ್ಟೇ ವೇಗವಾಗಿ ಓಡುತ್ತಿದೆ ಎಂದರೆ ತಪ್ಪಿಲ್ಲ. ಇಂದು ತಂತ್ರಜ್ಞಾನ ಭೂಮಿ ಬಿಟ್ಟು ಚಂದ್ರ ಮಂಗಳನಂಗಳಕ್ಕೆ ಹೋಗುವಷ್ಟು ಬೆಳೆದು ನಿಂತಿದೆ. ಜೊತೆಗೆ ತಂತ್ರಜ್ಞಾನ ಮುಂದುವರೆದಂತೆಲ್ಲ ಜಾಗತಿಕ ಮಟ್ಟದಲ್ಲಿ ಪೈಪೋಟಿ ಹೆಚ್ಚಾಗಿ ಪ್ರಪಂಚವೇ ಸಂಕುಚಿತ ಗೊಂಡು ಕುಳಿತಲ್ಲೇ ಜಗತ್ತಿನ ಆಗು ಹೋಗುಗಳನ್ನು ತಿಳಿಯಬಹುದಾಗಿದೆ. ತಂತ್ರಜ್ಞಾನದ ಫಲವಾಗಿ ಹೊಸ ಹೊಸ ಅವಿಷ್ಕಾರಗಳು ನಿತ್ಯವೂ ನೆಡೆಯುತ್ತಲೇ ಇವೆ.
ಈಗಿನ ಆಧುನಿಕ ಜೀವನ ರಂಗುರಂಗಿನ ಕುಲುಮೆಯಂತೆ ಯುವಜನಾಂಗವನ್ನು ಆಕರ್ಷಿಸುತ್ತ ದುಡಿಮೆ, ಹಣದ ಅತ್ಯವಶ್ಯಕತೆಯನ್ನು ನಿತ್ಯವೂ ತೆರೆದಿಡುತ್ತಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಇಂದಿನ ಜೀವನ ಹಿಂದಿನಂತಿಲ್ಲ. ಇತಿಹಾಸದ ಪುಟ ತೆರೆದು ನೋಡಿದಾಗ ಹಿಂದೆ ಜೀವನ ಯಾವುದೇ ಕೆಟ್ಟ ಪೈಪೋಟಿ, ಆಡಂಬರ ತೋರ್ಪಡಿಕೆಗಳಿಲ್ಲದೆ ನಿಧಾನವಾಗಿ ಸಾಗುತ್ತಿತ್ತು. ಆದರೆ ಇಂದಿನ ಜೀವನ ಕೆಟ್ಟ ಪೈಪೋಟಿಯ ನಡುವೆ ಶರವೇಗದಲ್ಲಿ ಓಡುತ್ತಿದೆ. ಜೀವನ ದುಬಾರಿಯಾಗಿದೆ ಮನೆಯಲ್ಲಿ ಹೆಣ್ಣು ಗಂಡು ಇಬ್ಬರೂ ದುಡಿಯಲೇ ಬೇಕಾದ ಅನಿವಾರ್ಯತೆ ಇದೆ. ತಂತ್ರಜ್ಞಾನದಿಂದ ಎಷ್ಟು ಒಳಿತಾಗಿದೆಯೋ ಅದರ ದುಪ್ಪಟ್ಟು ಕೆಡಕೂ ಆಗುತ್ತಿದ್ದು, ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹವಮಾನ ವ್ಯೆಪರಿತ್ಯದಿಂದ ಮಳೆ ಬೆಳೆಗಳು ನಾವು ಎಣಿಸಿದಂತೆ ಆಗುತ್ತಿಲ್ಲ. ಕೃಷಿಯನ್ನೇ ಅವಲಂಬಿಸಿದ್ದ ದೇಶಗಳು, ಇಂದು ವ್ಯಾಪಾರ ದತ್ತವೂ ಸಾಗಬೇಕಾದ ಅನಿವಾರ್ಯತೆ ಬಂದಿದೆ. 
ಈ ನಿಟ್ಟಿನಲ್ಲಿ ಅವರವರ ಜೀವನಕ್ಕೆ ಅವರೇ ದುಡಿಯಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಪ್ರತಿ ಮನೆಯಲ್ಲಿ ಮಹಿಳೆಯು ಆರ್ಥಿಕವಾಗಿ ಸ್ವಾವಲಂಬಿಗಬೇಕಾದ ಅವಶ್ಯಕತೆ ಇದೆ. ಇದು ಒಂದು ಕಾರಣವಾದರೆ, ಇನ್ನೊಂದು ಕಾರಣ ಇಂತಿದೆ. 
ಒಂದು ಸೃಷ್ಟಿಗೆ ಹೆಣ್ಣು ಗಂಡು ಇಬ್ಬರೂ ಸಮಾನರು, ಆದರೆ ವಾಸ್ತವತೆಯ ಸತ್ಯವನ್ನು ಕೆಲವು ಸೂಕ್ಷ್ಮತೆಗಳನ್ನು ಕಣ್ತೆರೆದು ನೋಡಿದಾಗಲೇ ಅರಿವಾಗುವುದು. ಹೇಳಿಕೇಳಿ ಇದು ಪುರುಷ ಪ್ರಧಾನ ಸಮಾಜ, ಈ ಸಮಾಜ ಇದ್ಯಾವುದನ್ನೂ ಒಪ್ಪಿಕೊಳ್ಳದೆ, ಹೆಣ್ಣನ್ನು ಅಬಲೆ , ಅಶಕ್ತಳೆಂದು ಬಿಂಬಿಸುತ್ತಿರುವುದು ವಿಪರ್ಯಾಸ. ಜೊತೆಗೆ ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ಶೋಷಣೆ, ಅವಮಾನ, ದೌರ್ಜನ್ಯ, ಹಿಂಸೆ, ಅತ್ಯಾಚಾರ, ಕಟ್ಟುಪಾಡುಗಳಿಗೆ ಒಳಗಾಗುತ್ತಿರುವುದನ್ನು ನೋಡಿದಾಗ ಪ್ರತಿ ಹೆಣ್ಣು ಆರ್ಥಿಕವಾಗಿ ಸಬಲವಾಗಲೇಬೇಕಾದ ಅನಿವಾರ್ಯತೆ ಇದೆ. ಪ್ರಪಂಚ ಎಷ್ಟೇ ಮುಂದುವರೆದಿದ್ದರು ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಮಾತ್ರ ಬದಲಾಗಲೇ ಇಲ್ಲ. ಇದಕ್ಕೆ ಇಂಬು ಕೊಡುವಂತೆ ವರದಕ್ಷಣೆ ಕಿರುಕುಳ, ಲೈಂಗಿಕ ಕಿರುಕುಳ ಸೇರಿ ಹತ್ತು ಹಲವು ನಿದರ್ಶನಗಳು ನಿತ್ಯವೂ ನಡೆಯುತ್ತಲೇ ಇರುತ್ತವೆ. ನಮ್ಮ ಭಾರತದಲ್ಲಿ ಹೆಣ್ಣೆಂದರೆ ಪೂಜ್ಯಳು, ಶ್ರೇಷ್ಠಳು ಎಂದೆಲ್ಲ ಪುರಾಣಗಳು, ಇತಿಹಾಸಗಳು ಬಿಂಬಿಸಿವೆ. ಆದರೆ ವಾಸ್ತವ ಬೇರೆಯೇ ಇದೆ! ಹೆಣ್ಣಿಗೆ ಇರುವ ಇತಿಮಿತಿ, ಕಟ್ಟುಪಾಡುಗಳು ಅವಳನ್ನು ಬಂಧಿಯನ್ನಾಗಿ ಮಾಡಿ ಅವಳು ತನ್ನ ಜೀವನದ ಎಲ್ಲಾ ಹಂತದಲ್ಲೂ ಪುರುಷನ ಅಡಿಯಾಳಗೇ ಬದುಕಬೇಕಿದೆ. ನಮ್ಮ ದೇಶದಲ್ಲಿ ಸರಿ ಸುಮಾರು ನೂರಕ್ಕೆ ಎಂಬತ್ತರಷ್ಟು ಕುಟುಂಬಗಳಲ್ಲಿ ಕಂಡುಬರುವ ದೃಶ್ಯವೆಂದರೆ ಒಂದು ಕುಟುಂಬ ನಿರ್ವಹಣೆಯಲ್ಲಿ ಮಹಿಳೆ ಪುರುಷನಿಗಿಂತ ಹೆಚ್ಚೇ ದುಡಿದರು ಪುರುಷನಿಗಿಂತ ಹೆಚ್ಚೇ ಓದಿದರೂ ತನ್ನ ಅವಶ್ಯಕತೆಗಳಿಗೆ ಪುರುಷನನ್ನೇ ಅವಲಂಬಿಸಬೇಕಾಗಿರುವುದು ವಿಪರ್ಯಾಸವೇ ಸರಿ. ಎಷ್ಟೇ ತಗ್ಗಿ ಬಗ್ಗಿ ನೆಡೆದರೂ ಅವಳಿಗೆ ಕಟ್ಟು ಪಾಡುಗಳು ತಪ್ಪಿದ್ದಲ್ಲ. ಜೀವನ ಯಾವ ಕ್ಷಣದಲ್ಲಿ ಏನಾಗುತ್ತದೋ ಎಂಬ ಆತಂಕದಲ್ಲೇ ಬದುಕಬೇಕಿದೆ. ಇವೆಲ್ಲವನ್ನೂ ನೋಡಿದಾಗ ಪ್ರತಿ ಮಹಿಳೆಯು ತನ್ನ ಜೀವನ ನಿರ್ವಹಣೆಗೆ ಯಾರನ್ನೂ ಅವಲಂಬಿಸದೆ ಆರ್ಥಿಕವಾಗಿ ಸ್ವಾವಲಂಬಿಯಾಗಲೇ ಬೇಕಿದೆ.
ಈ ನಿಟ್ಟಿನಲ್ಲಿ ಸರ್ಕಾರಗಳೂ ಕೂಡ ಕೆಲವೊಂದು ಮೀಸಲಾತಿ, ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಮಹಿಳಾ ಶಕ್ತಿಯ ಸದುಪಯೋಗಕ್ಕೆ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿವೆ. ಆದರೆ ಇದರ ಸದುಪಯೋಗ ಎಷ್ಟರಮಟ್ಟಿಗೆ ಮಹಿಳೆಯರಿಗೆ ತಲುಪುತ್ತಿದೆ ಎಂದು ನೋಡಿದಾಗಲೇ ಅರ್ಥವಾಗುವುದು. ಕಾರಣ ನಮ್ಮ ದೇಶದಲ್ಲಿ ಇನ್ನೂ ಅನಕ್ಷರತೆ, ಬಡತನ, ಸಂಪೂರ್ಣ ನಿರ್ಮೂಲನೆಯಾಗಿಲ್ಲ. ಹಾಗಾಗಿ ಎಷ್ಟೋ ಮಹಿಳೆಯರಿಗೆ ತಮಗೆ ಸಿಗುತ್ತಿರುವ, ಆರ್ಥಿಕ ಬೆಂಬಲ, ರಿಯಾಯತಿ,ಯೋಜನೆಗಳ ಬಗ್ಗೆ ಅರಿವೇ ಇಲ್ಲ. ಪ್ರದಾನ ಮಂತ್ರಿ, ಮುಖ್ಯಮಂತ್ರಿ, ಅನುದಾನದ ಅಡಿಯಲ್ಲಿ ಸ್ವಸಹಾಯ ಸಂಘ, ವ್ಯಾಪಾರ ಸಣ್ಣಕೈಗಾರಿಕೆ, ಕೃಷಿ, ಹೀಗೆ ಎಲ್ಲಾ ಕ್ಷೇತ್ರದಲ್ಲೂ ಪ್ರೋತ್ಸಾಹ, ರಿಯಾಯತಿಗಳು ಸಿಗುತ್ತವೆ. ಇದರ ಪ್ರಯೋಜನವನ್ನು ಪ್ರತೀ ಮಹಿಳೆಯರು ಅರಿತು ಸದುಪಯೋಗ ಪಡಿಸಿಕೊಳ್ಳಬೇಕು, ಸರ್ಕಾರಗಳೂ ಸಹ ತಾವು ಜಾರಿಗೊಳಿಸುತ್ತಿರುವ ಯೋಜನೆಗಳ ಬಗ್ಗೆ ಮಹಿಳೆಯರಿಗೆ ತಿಳಿಸುವ ನಿಟ್ಟಿನಲ್ಲಿ, ಪ್ರಚಾರದ ಕೊರತೆಯನ್ನು ನೀಗಿಸಬೇಕಿದೆ ...!!
ಗೀತಾಂಜಲಿ ಎನ್, ಎಮ್ 
ಲೇಖಕಿ
 

Category : Personal Development


ProfileImg

Written by Geethanjali NM

Helping hands are better than praying lips..!!