Do you have a passion for writing?Join Ayra as a Writertoday and start earning.

ಖಾಸಗೀಕರಣದ ಮಾಯಾಜಾಲದಲಿ ಮುಚ್ಚಿದ ಭದ್ರಾವತಿಯ ಎರಡು ಕಣ್ಣುಗಳು:

ProfileImg
22 Feb '24
3 min read


image

 

ಖಾಸಗೀಕರಣದ ಮಾಯಾಜಾಲದಲಿ ಮುಚ್ಚಿದ ಭದ್ರಾವತಿಯ ಎರಡು ಕಣ್ಣುಗಳು: 

ಸುಮಾರು ಎರಡು ಮೂರು ದಶಕಗಳ ಹಿಂದಿನ ಕಾಲ. ಭದ್ರಾವತಿ ತನ್ನ ನೈಜ ವೈಭವದಲ್ಲಿ ವಿಜೃಂಭಿಸುತ್ತಿದ್ದ ದಿನಮಾನವದು. ಈ ನಗರದ ಪ್ರತಿ ಮನೆ ಮನೆಗಳಲ್ಲಿಯೂ ಕಾರ್ಮಿಕರು ನೆಲಸಿದ್ದರು. ತಮ್ಮ ಕಾರ್ಮಿಕ ಬದುಕಿಗೆ ಸ್ಪೂರ್ತಿಯಾಗಿದ್ದ ಸರ್‌ ಎಂ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ನಮಿಸಿ ತಮ್ಮ ತಮ್ಮ ಕೆಲಸಗಳಿಗೆ ತೆರಳುವುದು ಜನಮಾನಸದಲ್ಲಿ ನೆಲಸಿತ್ತು. ಭದ್ರಾವತಿಯ ಭದ್ರ ಜೀವನಾಡಿಯಂತಿದ್ದ ವಿಐಎಸ್‌ಎಲ್‌ ಸ್ಟೀಲ್‌ ಪ್ಲಾಂಟ್‌ ಮತ್ತು ಎಮ್‌ ಪಿ ಎಮ್‌ ಪೇಪರ್‌ ಮಿಲ್ ಕಾರ್ಖಾನೆಗಳಲ್ಲಿ ಮಧ್ಯಮವರ್ಗದ ಕುಟುಂಬದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಇವರ ಜೀವನವೇ ಆ ಕಾರ್ಖಾನೆಗಳಿಗೆ ಮುಡಿಪಾಗಿಟ್ಟಿದ್ದರು , ಭಾವನಾತ್ಮಕವಾಗಿ ಬೆಸೆದುಕೊಂಡಿದ್ದರು.  

ವಿಐಎಸ್‌ಎಲ್‌ ಕಂಪನಿಯ ಕೂಗಿನಿಂದಲೇ ಇಡೀ ಭದ್ರಾವತಿ ನಗರದಲ್ಲಿ ಬೆಳಗಿನ ಆಹ್ಲಾದಕಾರಿ ಭಾವ ಶುರು ಆಗುತಿತ್ತು. ಚುಮು ಚುಮು ಚಳಿಯಲ್ಲಿ ಸೈಕಲ್‌ ದ್ವಿಚಕ್ರವಾಹನಗಳ ರಿಂಗಣದ ಸದ್ದಿನೊಂದಿಗೆ ರಸ್ತೆಗಳ ವಾತಾವರಣ ಚುರುಕಾಗುತ್ತಿತ್ತು. ಪ್ರತಿದಿನವೂ ಹೊಸತನದೊಂದಿಗೆ ಹೊಸ ಉತ್ಸಾಹದೊಂದಿಗೆ ಬದುಕು ಸಾಗುತ್ತಿತ್ತು. ಇಲ್ಲಿ ದಿನ ದಿನವೂ ಹಬ್ಬದ ಸಂತಸ, ಅದರಲ್ಲೂ ದೀಪಾವಳಿಯ ದಿನ ನಗರದ ಬೀದಿ ಬೀದಿಗಳಲ್ಲಿ ದೀಪಗಳ ಸಾಲು . ವಿಐಎಸ್‌ಎಲ್‌  ಕ್ವಾಟರ್ಸ್‌ಗಳು ಗೋಲ್ಡನ್‌ ಜುಬಿಲಿ ಬಿಲ್ಡಿಂಗ್‌ ಗಳಿಗೆ ಸೇರಿದ ಬಹುಮಹಡಿ ಕಟ್ಟಡ ನಿವಾಸಗಳಲ್ಲಿ ಎಮ್‌ ಪಿ ಎಮ್‌ ಕಾರ್ಮಿಕರ ಮನೆಯ ಅಂಗಳದಲ್ಲಿ ಜನರ ಉತ್ಸಾಹದಂತೆ ಪ್ರೀತಿಯ ಸಹಬಾಳ್ವೆಯ ಸಂಕೇತದಂತೆ ಹಚ್ಚಿಟ್ಟ ದೀಪಗಳು ಬೆಳಗುತ್ತಿದ್ದವು. ಆ ದಿನ ಸಂಜೆ ಪ್ರತಿಯೊಬ್ಬರ ಮನೆ ಮುಂದೆ ಬೆಳಗುವ ದೀಪಗಳ ನೋಡುತ್ತಾ ಮುಖ್ಯ ಬೀದಿಗಳಲ್ಲಿ  ಓಡಾಡುತ್ತಿದ್ದರೆ  ಆ ಸಂಭ್ರಮ ಸಂತಸ ವೈಭೋಗವನ್ನು ಕಂಗಳಲಿ ತುಂಬಿಕೊಂಡ ಜನ ಭದ್ರಾವತಿಯಲ್ಲಿ ನೆಲಸಿರುವುದೇ ಸಾರ್ಥಕ ಎಂಬತೆ ಭಾವಿಸುತ್ತಿದ್ದರು. ಭಾವಜೀವಿಗಳು ಶ್ರಮಜೀವಿಗಳೂ ಆದ ಇಲ್ಲಿನ ಸಾವಿರಾರು ಕಾರ್ಮಿಕರು ನೆಮ್ಮದಿಯ ನಗುಮುಖದೊಂದಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾ ನಗರದ ಕಾರ್ಖಾನೆಗಳಿಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು. 

ಆಧುನಿಕ ಮೈಸೂರು ಶಿಲ್ಪಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಒತ್ತಾಸೆ ಮತ್ತು ಭಾರತದ ಕೈಗಾರಿಕಾ ಪಿತಾಮಹ ಸರ್‌ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಪರಿಣಾಮವಾಗಿ ಭದ್ರಾವತಿಯಲ್ಲಿ 1923ನೇ ಜನವರಿಯಲ್ಲಿ ಮೈಸೂರು ಐರನ್‌ ವರ್ಕ್ಸ್‌ಬಳಿಕ ಎಂಐಎಸ್‌ಎಲ್‌, 1973ರಲ್ಲಿವಿಐಎಸ್‌ಎಲ್‌ ಆರಂಭವಾಗಿತ್ತು. ಹಳೇ ಮೈಸೂರು ಭಾಗದ ಮಂಡ್ಯ, ತುಮಕೂರು, ಮೈಸೂರು ಮತ್ತು ಹಾಸನ ಜಿಲ್ಲೆಗಳ ಬಯಲು ಪ್ರದೇಶದ ಸಾವಿರಾರು ಜನರು ಭದ್ರಾವತಿಗೆ ಆಗಮಿಸಿ ಬದುಕು ಕಟ್ಟಿಕೊಂಡಿದ್ದರು. ಶತಮಾನದ ಅವಧಿಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರ್ಖಾನೆಯು ಲಕ್ಷಕ್ಕೂ ಅಧಿಕ ಕುಟುಂಬಗಳ ಬಾಳನ್ನು ಬಂಗಾರವಾಗಿಸಿತ್ತು. 

ಸ್ವಾತಂತ್ರ್ಯಪೂರ್ವದಿಂದಲೂ ದೇಶಕ್ಕೆ ಅಪಾರವಾದ ವಿದೇಶಿ ವಿನಿಮಯ ತಂದು ಕೊಡುತ್ತಿದ್ದ, ಭಾರತೀಯ ವಾಯುಸೇನೆ, ಭೂಸೇನೆ, ನೌಕಾದಳ, ರೈಲ್ವೆ, ಕಾರ್ಖಾನೆಗಳು ಮತ್ತು ವಿದೇಶಗಳ ಬೇಡಿಕೆಯ ಕಬ್ಬಿಣ ಮತ್ತು ಉಕ್ಕಿನ 900ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತಿದ್ದ, ಭಾರೀ ಲಾಭದೊಂದಿಗೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋದ ಕಾರ್ಖಾನೆ ಇಂದು ತನ್ನ ಕೆಲಸ ನಿರ್ವಹಿಸಲಾಗದೆ ಆರ್ಥಿಕ ಲಾಭವಿಲ್ಲದೆ ನಿಂತು ಹೋಗಿದೆ ಎಂದರೆ ನಂಬಲಾಗುತ್ತಿಲ್ಲ. 

ಯಾವುದೇ ಪ್ರದೇಶ ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಹಾಕಿದರೆ ಅದರ ಜೊತೆಜೊತೆಗೆ ಕೆಲವು ಸವಾಲುಗಳನ್ನು ಕೂಡಾ ಎದುರಿಸಬೇಕಾಗುತ್ತದೆ. ಭದ್ರಾವತಿಯ ಮಟ್ಟಿಗೆ ಈ ಮಾತು ಅಕ್ಷರಶಃ ನಿಜವೆನಿಸುತ್ತದೆ. ಒಂದು ಸಮುದಾಯ ಜೀವನ ಶೈಲಿಯ ಕ್ಷಿಪ್ರಗತಿಯ ವೃದ್ಧಿಯಲ್ಲಿ ಉಂಟಾಗುವ ಸಂತಸಕ್ಕಿಂತ ಜಾಸ್ತಿ ಆ ಸಮುದಾಯವು ಜೀವನ ಸಂಘರ್ಷದಲ್ಲಿ ಅನುಭವಿಸಿದ ಕುಸಿತದಲ್ಲಿ ಇಂದು ನಾವು ನೋವನ್ನು ಕಾಣುತ್ತಿದ್ದೇವೆ. ಸಮಕಾಲೀನ ಸವಾಲುಗಳಲ್ಲಿ, ಆಧುನೀಕರಣ, ಜಾಗತೀಕರಣ, ಖಾಸಗೀಕರಣದ ಮಾಯಾಜಾಲದಲ್ಲಿ ಸಿಲುಕಿ ಭದ್ರಾವತಿಯ ಎರಡು ಕಣ್ಣು ಎಂದೇ ಬಿಂಬಿಸಿಕೊಂಡಿದ್ದಎಂಪಿಎಂ ಮತ್ತು ವಿಐಎಸ್‌ಎಲ್‌ ಕಾರ್ಖಾನೆಗಳು ಈಗ ಮುಚ್ಚಿ ಹೋಗಿ ಖಾಲಿ ಖಾಲಿ ಹೊಡೆಯುತ್ತಿವೆ. 

ವಿಐಎಸ್‌ಎಲ್‌ ಇತಿಹಾಸವನ್ನು ನೆನಪಿಸಲು ಹಲವು ಸ್ಮಾರಕಗಳಿವೆ. 1998ರಲ್ಲಿಬಂದ ಪ್ಲಾಟಿನಮ್‌ ಜುಬಿಲಿಯಲ್ಲಿ ಬಯಲು ರಂಗಮಂದಿರವನ್ನು ನಿರ್ಮಿಸಲಾಗಿತ್ತು. ಆದರೆ, ಅಂತಹ ಪ್ರತಿಷ್ಟಿತ ಕಾರ್ಖಾನೆಯ ಶತಮಾನೋತ್ಸವವನ್ನು ನಿವೃತ್ತ ನೌಕರರೇ ನಡೆಸಬೇಕಾದ ಅನಿವಾರ್ಯತೆ ಉಂಟಾಯಿತು. ಭಾರತೀಯ ಉಕ್ಕು ಪ್ರಾಧಿಕಾರವು ಸಹ ಶತಮಾನೋತ್ಸವಕ್ಕಾಗಿ ನೆನಪಿನ ಸಂಭ್ರಮೋತ್ಸವಕ್ಕಾಗಿ ಬಿಡಿಗಾಸು ನೀಡಲಿಲ್ಲ.  1973ರಲ್ಲಿಸುವರ್ಣ ಮಹೋತ್ಸವದ ನೆನಪಿಗಾಗಿ ಕಾರ್ಮಿಕರಿಗಾಗಿ ನೂರಕ್ಕೂ ಹೆಚ್ಚು ಮನೆಗಳ ಗೋಲ್ಡನ್‌ ಜುಬಿಲಿ ಬಡಾವಣೆಯನ್ನು ನಿರ್ಮಿಸಲಾಗಿತ್ತು. ಆದರೆ ಇಂದು ಆ ಬಡಾವಣೆ ಅಕ್ಷರಶಃ ಹಾಳು ಕೊಂಪೆಯಾಗಿದೆ. ಮುರಿದು ಬಿದ್ದ ಹಳೆಯ ಕಟ್ಟಡಗಳ ಮುಂದೆ ನಿಂತರೆ ವಿಷಾದವೆನಿಸುತ್ತದೆ. ಈಗ ಆ ಮನೆಗಳ ಮುಂದೆ ಬೆಳಗಿನ ಬಣ್ಣಬಣ್ಣದ ರಂಗೋಲಿಗಳಿಲ್ಲ. ಆ ಮನೆಗಳಲ್ಲಿ ಯಾವ ಕಾರ್ಮಿಕರೂ ನೆಲಸಿಲ್ಲ. ಆ ಬೀದಿಗಳಲ್ಲಿ ಹರುಷದ ಕೇಕೆ ಹಾಕುತ್ತಾ ಆಟವಾಡುವ ಚಿಕ್ಕ ಮಕ್ಕಳಿಲ್ಲ. ಕೂಗುತ್ತಾ ತರಕಾರಿ ಸೊಪ್ಪು ಐಸ್‌ ಕ್ಯಾಂಡಿಗಳನು ಮಾರುವವರಿಲ್ಲ, ದೀಪಾವಳಿಯ ದಿನದಂದು ದೀಪ ಹಚ್ಚುವವರು ಅಲ್ಲಿ ಯಾರೂ ಇಲ್ಲ, ಅಂದಿನ ದಿನಗಳಲ್ಲಿ ಆ ಮನೆಗಳಲ್ಲಿ ಬಾಳಿ ಬದುಕಿದವರು ಇಂದಿನ ದಿನಗಳಲ್ಲಿ ಈಗ ನೋಡುತ್ತಾ ನಿಂತರೆ ಮನಸಿನ ತುಂಬಾ ತುಂಬಿದ ನೋವಿನ ನಿಟ್ಟುಸಿರು ನಮಗೆ ಗೊತ್ತಿಲ್ಲದೆ ಹೊರ ಬರುತ್ತದೆ. 

ಭದ್ರಾವತಿಯ ಜೀವ ನಾಡಿಯಾಗಿದ್ದ ಆ ಎರಡು ಕಾರ್ಖಾನೆಗಳು , ಜನರ ಜೀವದೊಂದಿಗೆ ಬೆರೆತು ಹೋಗಿ ಉಳಿದ ಈ ನೆನಪುಗಳು ಇಂದು ಗತ ವೈಭವದ ಸಾಕ್ಷಿಗಳಂತೆ ಭಾಸವಾಗುತ್ತದೆ.   

.. .. .. ..  .. .. .. .. ..  .. .. .. .. ..  .. .. .. .. ..  .. .. .. .. ..  .. .. .. .. ..  .. .. .. .. ..  .. .. .. .. ..  .. 

.. .. .. ..  .. .. .. .. ..  .. .. .. .. ..  .. .. .. .. ..  .. .. .. .. ..  .. .. .. .. ..  .. .. .. .. ..  .. .. .. .. ..  .. 

.. .. .. ..  .. .. .. .. ..  .. .. .. .. ..  .. .. .. .. ..  .. .. .. .. ..  .. .. .. .. ..  .. .. .. .. ..  .. .. .. .. ..  .. 

.. .. .. ..  .. .. .. .. ..  .. .. .. .. ..  .. .. .. .. ..  .. .. .. .. ..  .. .. .. .. ..  .. .. .. .. ..  .. .. .. .. ..  .. 

 ProfileImg

Written by Kalinga Hegade D N