Do you have a passion for writing?Join Ayra as a Writertoday and start earning.

ಮೂಕವಾದ ವಾಣಿ

ProfileImg
04 Feb '24
5 min read


image

ಮೂಕವಾದ ವಾಣಿ

"ಮೂಡಣದಾ ರವಿ ಮೂಡಲು ಮಮತೆಯಲಿ ಕೂಗಿದೆ ತಾ ಕೋಳಿ  ಹೇಳಿದೆ ಬೆಳಗಾಯಿತು ಏಳಿ" ಎಂದು "ಛಲಗಾರ" ಚಿತ್ರದ ಹಾಡಿನ ಮೂಲಕ  ವಾಣಿಜಯರಾಂ ರವರು  ಕನ್ನಡಿಗರಿಗೆ ಹೊಸ ಮುಂಜಾವಿನ ಅನುಭವ ತಂದುಕೊಟ್ಟವರು. "ಉಪಾಸನೆ" ಚಿತ್ರದ ಭಾವವೆಂಬ ಹೂವು ಅರಳಿ ಹಾಡಂತೂ ಆಗ ಚಿಕ್ಕವರಾಗಿದ್ದ ನಮಗೆ ಕಂಠಪಾಠ ಹೃದ್ಯಸ್ಥ.  "ದಾರಿ ಕಾಣದಾಗಿದೆ ರಾಘವೇಂದ್ರನೇ" ದೀಪಾ ಚಿತ್ರದ ಹಾಡು ಹೇಳಿಕೊಳ್ಳದವರುಂಟೆ? ಅಲ್ಲದೆ ಪಾಶ್ಚಾತ್ಯ ಶೈಲಿಯ "ಲೈಫ್ ಈಸ್ ಎ ಮೆರ್ರಿ ಮೇಲೋಡಿ" ಬೆಸುಗೆ ಚಿತ್ರದ  ಹಾಗೂ "ಹಾಪಿಎಸ್ಟ್ ಮೂಮೆಂಟ್ಸ್"  ಬಿಳಿ ಹೆಂಡ್ತಿ ಚಿತ್ರದ ಈ ಹಾಡುಗಳು ನಮಗೆಲ್ಲ ಆಗ ಅಚ್ಚರಿ ಮೂಡಿಸಿದ್ದವು .ಹಾಡಲು ತೊಡಗಿಸಿದ್ದವು. 
ಮೊದಲು ೧೯೭೪  ರಲ್ಲಿ ಹಾಡಿದ ಚಿತ್ರ  ಛಲಗಾರ ಬಿಡುಗಡೆಯಾಗದಿದ್ದರೂ ಕನ್ನಡ ಚಿತ್ರೋದ್ಯಮದಲ್ಲಿ ಛಾಪು ಮೂಡಿಸಿ ಒಂದಾದ ನಂತರ ಒಂದರಂತೆ ಹಾಡತೊಡಗಿದ ವಾಣಿ ಜಯರಾಮ್ ಅವರು ಇದುವರೆಗೂ ಕನ್ನಡದಲ್ಲಿ ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ ಎನ್ನುವುದು ವಿಶೇಷ . ಅನೇಕ ಭಕ್ತಿಗೀತೆಗಳ ಆಲ್ಬಂಗಳು ಸೇರಿದೆ. "ಶಾಂತ ರಸ ಹರಿದಿಹುದು ತುಂಗೆಯಾಗಿ ಶಾರದೆಯು ನೆಲೆಸಿಹಳು ಮಾತೆಯಾಗಿ" ಮರೆಯಲು ಸಾಧ್ಯವೇ?

ವಾಣಿ ಜಯರಾಮ್ 1945ರ ನವೆಂಬರ್ 30ರಂದು ವೆಲ್ಲೂರಿನ ಇಡಂಗು ಗ್ರಾಮದಲ್ಲಿ ಜನಿಸಿದರು .ವಾಣಿಯವರ ತಾಯಿ ಸುಪ್ರಸಿದ್ಧ ಸಂಗೀತ ವಿದ್ವಾಂಸರಾದ ರಂಗಾರಾಮನುಜ ಅಯ್ಯಂಗಾರ್ ಅವರ ಶಿಷ್ಯೆ.  ಹೀಗಾಗಿ ಬಾಲ್ಯದಿಂದಲೇ ವಾಣಿ ಜಯ ರಾಮ್ ಅವರಿಗೆ ಸಂಗೀತ ಒಲಿದಿತ್ತು ಐದನೇ ವಯಸ್ಸಿನಲ್ಲಿ ಕಡಲೂರು ಶ್ರೀನಿವಾಸ ಅಯ್ಯಂಗಾರ್ ಅವರ ಬಳಿ ಸಂಗೀತ ಅಭ್ಯಾಸ ಆರಂಭಿಸಿ 7ನೇ ವಯಸ್ಸಿಗಾಗಲೇ ದೇಶಿಕಾಚಾರ ಅವರ ಕೃತಿಗಳನ್ನು ಸರಾಗವಾಗಿ ಹಾಡುತ್ತಿದ್ದರು. ತಿರುವನಂತಪುರದಲ್ಲಿ 3 ಗಂಟೆಗಳ ಕಾಲ ಸುಧೀರ್ಘ ಸಂಗೀತ ಕಚೇರಿ ನೀಡಿದಾಗ ವಾಣಿ ಅವರ ವಯಸ್ಸು 10 ಕೇವಲ ಹತ್ತು ವರ್ಷ ಎನ್ನುವುದು ಗಮನಾರ್ಹ. ಮುಂದೆ ಅವರು ಆರ್ ಬಾಲಸುಬ್ರಹ್ಮಣ್ಯಂ ಮತ್ತು ಆರ್ ಎಸ್ ಮಣಿ ಅಂತಹ ಹಿರಿಯರಲ್ಲಿ ಹೆಚ್ಚಿನ ಸಂಗೀತ ಅಭ್ಯಾಸ ನಡೆಸಿದವರು ಗಾಯನದಲ್ಲಷ್ಟೇ ಅಲ್ಲದೆ ಚಿತ್ರರಚನೆಯಲ್ಲೂ ಅವರು ನಿಸ್ಸೀಮೆ .ಓದಿನಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದಂತಹವರು ಮುಂದೆ ಉನ್ನತ ಹುದ್ದೆಯಲ್ಲಿದ ಜಯರಾಮ ಎರಡನೆ ವಿವಾಹವಾಗಿ ಮುಂಬೈಯಲ್ಲಿ ನೆಲೆಸಿದ ಮೇಲೆ ಪಟಿಯಾಲ ಘರಾಣದ ಅಬ್ದುಲ್ ರೆಹಮಾನ್ ಅವರ ಬಳಿ ಹಿಂದುಸ್ತಾನಿ ಸಂಗೀತ ಕಲಿತರು. ಮೊಟ್ಟಮೊದಲಿಗೆ ಮರಾಠಿ ಆಲ್ಬಮ್ ನಲ್ಲಿ ಕುಮಾರ ಗಂಧರ್ವ ಅವರೊಡನೆ ಹಾಡಿದ ಗಾಯನವನ್ನು ಮೆಚ್ಚಿಕೊಂಡ ಹೃಷಿಕೇಶ್ ಮುಖರ್ಜಿಯವರು ತಮ್ಮ ಗುಡ್ಡಿ ಚಿತ್ರದಲ್ಲಿ ವಾಣಿ ಅವರಿಂದ "ಬೋಲರೇ  ಪಪೀ ಹರ" ಹಾಡನ್ನು ಹಾಡಿಸಿದರು ಇದು ಅವರಿಗೆ ಅಪಾರ ಜನಪ್ರಿಯತೆ ಜೊತೆಗೆ ತಾನ್ಸೇನ್ ಸಮಾನ್ ಗೌರವವನ್ನು ತಂದುಕೊಟ್ಟಿತು.

ವಾಣಿ ಜಯರಾಮ್ ಅವರು ಕನ್ನಡದಲ್ಲಿ ಹಾಡಿದ ಜನಪ್ರಿಯ ಗೀತೆಗಳು ಪಟ್ಟಿ, ಸಾಕಷ್ಟು ದೊಡ್ಡದಿದೆ 
*ಈ ಶತಮಾನದ ಮಾದರಿ ಹೆಣ್ಣು 
*ಸವಿ ನೆನಪುಗಳು ಬೇಕು ಸವಿಯಲಿ ಬದುಕು 
*ದಿವ್ಯಗಗನ ವನವಾಸಿನಿ 
*ಆ ದೇವರೇ ನುಡಿದ ಮೊದಲ ನುಡಿ
*ಜೀವನ ಸಂಜೀವನ 
*ಹಾಡು ಹಳೆಯದಾದರೇನು, 
*ಸದಾ ಕಣ್ಣಲ್ಲಿ ಒಲವಿನ ಕವಿತೆ ಹಾಡುವೆ
*ಪ್ರಿಯತಮ ಕರುಣೆಯ ತೋರೆಯ
*ಏನೇನೋ ಆಸೆ ನೀ ತಂದ ಭಾಷೆ 
*ರಾಗ ಜೀವನ ರಾಗ 
*ಬೆಸುಗೆ ಬೆಸುಗೆ ಜೀವನವೆಲ್ಲ ಸುಂದರ ಬೆಸುಗೆ 
*ಶ್ರಾವಣ ಮಾಸ ಬಂದಾಗ 
*ತೆರೆದಿದೆ ಮನೆ ಓ ಬಾ ಅತಿಥಿ 
*ಕನಸಲೂ ನೀನೆ ಮನಸಲೂ ನೀನೆ 
*ವಸಂತ ಬರೆದನು ಒಲವಿನ ಓಲೆ 
*ನೀಲ ಮೇಘ ಶಾಮ ನಿತ್ಯಾನಂದ ಧಾಮ 
*ಈ ಜೀವ ನಿನ್ನದೇ ಈ ಭಾವ ನಿನ್ನದೇ
*ಅದರ ಮಧುರಂ ವದನಂ ಮಧುರಂ
*ನನ್ನೆದೆ ವೀಣೆಯು ಮಿಡಿಯುವುದು 
*ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ

ಗಜಲ್, ಭಜನ್ ಹಾಗೂ ಭಕ್ತಿ ಗೀತೆಗಳ ಗಾಯನದಲ್ಲೂ ವಾಣಿಯವರದು ಹೆಚ್ಚಿನ ಸಾಧನೆ ಇದೆ .ಮಲಯಾಳಂ ತಮಿಳು ಹಿಂದಿ ಭಾಷೆಗಳಲ್ಲಿ ಅವರ ಕವನ ಸಂಕಲನಗಳು ಪ್ರಕಟವಾಗಿದೆ .ಪಂಡಿತ್ ಬಿರ್ಜು ಮಹಾರಾಜ್ರೊಂದಿಗೆ ಗೀತ ಗೋವಿಂದವನ್ನು  ಕಥಕ್ ಗೆ ಅಳವಡಿಸಿದ್ದಾರೆ .ಚೆನ್ನೈನಲ್ಲಿ ಇವರು ಸ್ಥಾಪಿಸಿರುವ ಸಂಗೀತ ಸಂಶೋಧನಾ ಕೇಂದ್ರ ವರ್ಷವಿಡೀ ರಸಗ್ರಹಣ ಶಿಬಿರ ಹಾಗೂ ವಿಚಾರ ಸಂಕಿರಣಗಳನ್ನು ಏರ್ಪಡಿಸುತ್ತಿರುತ್ತದೆ. ಸಂಗೀತದಿಂದ ಕ್ಯಾನ್ಸರ್ ರೋಗವನ್ನು ನಿವಾರಿಸುವ ಕುರಿತು ಸಹ ಶಿಬಿರಗಳನ್ನು ನಡೆಸಿ ಆಯೋಜಿಸಿದ್ದಾರೆ .ಸಂಗೀತದ ಮೌಲ್ಯಗಳ ಕುರಿತ ವಿದ್ವತ್ಪೂರ್ಣ ಉಪನ್ಯಾಸಗಳನ್ನು ಸಹ ನೀಡಿದ್ದಾರೆ.

ವಿವಿಧ ಭಾಷೆಗಳಲ್ಲಿನ ಇವರ ಗಾಯನಕ್ಕಾಗಿ ಬೇರೆ ಬೇರೆ ರಾಜ್ಯಗಳಲ್ಲಿ 27 ಬಾರಿ ಶ್ರೇಷ್ಠ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ .ತಮಿಳು ಭಾಷೆಯ ಅಪೂರ್ವ ರಾಗಂಗಳ್ ಮತ್ತು ತೆಲುಗು ಭಾಷೆಯ ಶಂಕರಾಭರಣಂ ಹಾಗೂ ಸ್ವಾತಿ ಕಿರಣಂ ಚಿತ್ರಗಳ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇತ್ತೀಚೆಗೆ ದಕ್ಷಿಣ ಭಾರತದ ಖ್ಯಾತ ಟಿವಿ ಮ್ಯೂಸಿಕ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗಾನಸುಧೆಯ 40ನೇ ವರ್ಷದ ಸೇವೆಗಾಗಿ ಚೆನ್ನೈ ಹಾಗೂ ಹೈದರಾಬಾದ್ ನಗರಗಳಲ್ಲಿ ಸನ್ಮಾನಿತರಾಗಿದ್ದಾರೆ.

ಇವರ ಶಾಸ್ತ್ರೀಯ ಸಂಗೀತದ ಹಿನ್ನೆಲೆಯ ರಾಗಾಧಾರಿತ ಹಾಡುಗಳದು ಒಂದು ಸ್ತರವಾದರೆ  ಸಂಧರ್ಭಕ್ಕೆ ತಕ್ಕ ಭಾವ ತುಂಬಿ ಹಾಡುತ್ತಿದ್ದ ಹಾಡುಗಳ ಶೈಲಿಯೇ ಒಂದು ಅದ್ಭುತ ಅನುಭವ. ಪ್ರಿಯತಮ ಪ್ರಿಯತಮ, ಏನೇನೋ ಆಸೆ ಹಾಡುಗಳಲ್ಲಿ ಪ್ರಣಯ ಭಾವವನ್ನು ತೋರಿಸುತ್ತಿದ್ದ ಇವರ ಧ್ವನಿ ನಗು ನೀ ನಗು ಕಿರುನಗೆ ನಗು ಚಿತ್ರದಲ್ಲಿ ತಾಯಿ ಪ್ರೀತಿಯ ಔನ್ನತ್ತ್ಯವನ್ನು ವಾತ್ಸಲ್ಯವನ್ನು ಪ್ರತಿಬಿಂಬಿಸುತ್ತದೆ, ಬಂದಿದೆ ಬದುಕಿನ ಬಂಗಾರದ ದಿನದಲ್ಲಿ ವಧುವೊಬ್ಬಳ ಸಹಜ ನಾಚಿಕೆ ಕನಸುಗಳು ಇವರ ಮಧುರ ಧ್ವನಿಯಲ್ಲಿ ತುಂಬಿ ತುಳುಕುತ್ತವೆ.  ಭಾವಯ್ಯಾ ಭಾವಯ್ಯಾ ದಲ್ಲಿ ನಾದಿನಿಯ ತುಂಟತನ ಕಾಣುತ್ತದೆ . ಹೋದೆಯ ದೂರ ಓ ಜೊತೆಗಾರ ಹಾಡಿನಲ್ಲಿನ ದುಃಖ ಕರುಳು ಮಿಡಿಸುತ್ತದೆ . ಅದ್ಭುತ ಕಂಠಸಿರಿಯಲ್ಲಿ ತಮ್ಮ ಗಾನ ಮಾಧುರ್ಯದ ಮೂಲಕ ಅನೇಕ ಸೋಲೋ ಗೀತೆಗಳು ಸಹ ಗಾಯಕರೊಂದಿಗೆ ಸುಮಧುರ ಗೀತೆಗಳನ್ನು ನೀಡಿದ್ದಾರೆ ವಾಣಿ ಅಮ್ಮ.

ಇಂತಹ ತುಂಬು ಪ್ರತಿಭೆಯ ಗಾನಕೋಗಿಲೆ  ಫೆಬ್ರವರಿ ೪ ೨೦೨೩ ರಂದು ತನ್ನ ಗಾನವನ್ನು ನಿಲ್ಲಿಸಿ ಮೂಕವಾಗಿದೆ.  ದಕ್ಷಿಣ ಭಾರತದ ಚಿತ್ರರಂಗ ಮಾತ್ರವಲ್ಲದೇ ಇಡಿ ಗಾನ ಲೋಕ ಇವರ ಈ ಮೌನವನ್ನು ತುಂಬಲಾರದ ನಷ್ಟವನ್ನಾಗಿ ಪರಿಗಣಿಸುತ್ತದೆ. ಭೌತಿಕವಾಗಿ ನಮ್ಮಿಂದ ನೀವು ದೂರವಾದರೂ ನೀವು ಹಾಡಿದ 10 ಸಹಸ್ರಕ್ಕೂ ಹೆಚ್ಚಿನ ಹಾಡುಗಳು ನಮ್ಮೆಲ್ಲರ ಮನೆ ಮನ ಕರ್ಣಗಳಲ್ಲಿ ಸದಾ ಕಾಲ ಅನುರಣಿತವಾಗುತ್ತಿರುತ್ತದೆ.  ಹೋಗಿ ಬನ್ನಿ ಅಮ್ಮಾ… ನಿಮಗೆ ಭಾವಪೂರ್ಣ ಶ್ರದ್ಧಾಭಿಮಾನಗಳ ಬಾಷ್ಪಾಂಜಲಿ.

#ಸದಾ_ಕಾಡುವ_ಹಾಡು 
#ಮುಂಜಾನೆ_ಬೆಳಗು

ಮೂಡಣದ ರವಿ ಮೂಡಲು ಮಮತೆಯಲ್ಲಿ
ಕೂಗಿದೆ ತಾ ಕೋಳಿ ಹೇಳಿದೆ ಬೆಳಗಾಯಿತು ಏಳಿ 
ಉದಯದ ಸೂರ್ಯನು ಏರಿದ ರಥ ತಾನು 
ಚೆಲ್ಲಿದೆ ಕೆಂಧೂಳಿ ಬಾನಿಗೆ ಬಣ್ಣದ ಓಕುಳಿ

ತರುಲತೆ ಹೂ ಎಲೆ ಮೇಲೆಲ್ಲೆಲ್ಲೂ
ಮಂಜಿನ ಹನಿ ಮುಸುಕು ಮರೆಯಾಗಿದೆ ನಸುಕು
ತಿಮಿರವ ಓಡಿಸಿ ಸೇರಿಸಿ ಭೂತಳ 
ಏರಿದ ಸಡಗರದಿ ಭಾನು ಬಾನ ಏಣಿ

ಗಿರಿಗಳ ದೇಗುಲ ಶಿಖರಕ್ಕೆ ತೊಡಿಸಿದ 
ಬಂಗಾರದ ತೊಡುಗೆ ಮಂಜಿನ ತೆರೆ ಮರೆಗೆ
ಹೊಂಗಿರಣದ ನಸು ಸಂಧಿಯೊಳುಸಿರಿದೆ
ನಗು ನಗುತ್ತಲೇ ಬಾಳಿ ಬೆಳಗಾಯಿತು ಏಳಿ

ಬೆಳಗು ವರ್ಣಿಸುವ ಹಾಡುಗಳೆಂದರೆ ಕಣ್ಮುಂದೆ ಮೊದಲು ಬರುವ ಹಾಡು ಬೆಳ್ಳಿಮೋಡ ಚಿತ್ರದ "ಮೂಡಲ ಮನೆಯ ಮುತ್ತಿನ ನೀರಿನ." ಒಂದು ತರಹದ ಸಿಗ್ನೇಚರ್ ಹಾಡು ಆಗಿಬಿಟ್ಟಿದೆ.ನಂತರದಲ್ಲಿ ಮೂಡಣದಾ ರವಿ ಮೂಡಲು ಮಮತೆಯಲ್ಲಿ (ಛಲಗಾರ) ಅರುಣೋದಯ ಕಾಲ ಸುಂದರ ಚಿರ ಶಾಂತಿಯ ಮೂಲ (ಸತಿ ಸುಕನ್ಯಾ) ನೇಸರಾ ನೋಡು ನೇಸರ ನೋಡು (ಕಾಕನ ಕೋಟೆ )ಹಾಗೂ ಇತ್ತೀಚಿನ ಓ ಸೂರ್ಯ ನಿನಗೆ ನಮನ   ಓ ದಿನಕರ ಶುಭಕರ ಧರೆಗೆ ಬಾ  ಮೊದಲಾದುವುಗಳು.

ಇಂದು ನಾನು ನಿಮ್ಮ ಜೊತೆ ಛಲಗಾರ ಚಿತ್ರದ ವಾಣಿ ಜೈರಾಮ್ ಅವರು ಹಾಡಿರುವ "ಮೂಡಣದ ರವಿ" ಹಾಡಿನ ಬಗ್ಗೆ ಮಾತಾಡೋಣ ಎಂದುಕೊಂಡಿದ್ದೇನೆ. ಏನಂತೀರಾ? ನನ್ನ ಮತ್ತು ನನ್ನ ಕಾಡುವ ಹಾಡುಗಳ ಬಹುತೇಕ ಪರಿಚಯ ಒಡನಾಟ ಆಕಾಶವಾಣಿ ಮೂಲಕವೇ. ಹೀಗೆ ರೇಡಿಯೊದಲ್ಲಿ ಕೇಳಿ ಬಾಂಧವ್ಯ ಬೆಳೆಸಿಕೊಂಡ ಹಾಡು ಇದು .ಸಾಹಿತ್ಯದ ಕೃಪೆಯೂ ೧೯೭೬ ರ ಹಳೆಯ ಡೈರಿಯದು.  ಲಿಂಕ್ ಹುಡುಕಲು ಪ್ರಯತ್ನಿಸಿ ಸಾಕಾಯ್ತು .ಸಿಗಲಿಲ್ಲ. ಈಗಿನ ತಲೆಮಾರಿನವರಿಗೆ ಸ್ವಲ್ಪ ಅಪರಿಚಿತವೇ ಈ ಹಾಡು.

ಮೊದಲೇ ಹೇಳಿದಂತೆ ವಾಣಿ ಜಯರಾಮ್ ಅವರ ಸಿರಿಕಂಠ ದಲ್ಲಿರುವ ಈ ಹಾಡಿನ ರಚನೆ ಶ್ಯಾಮಸುಂದರ ಕುಲಕರ್ಣಿ ಅವರದು. ಸಂಗೀತ ವಿಜಯ ಭಾಸ್ಕರ್ ಅವರು.

ರವಿ ಮೂಡಣದಲ್ಲಿ ಮಮತೆಯಿಂದ ಉದಯವಾಗಲು ಇಲ್ಲಿ ಭೂಮಿಯಲ್ಲಿ ನಮ್ಮನ್ನೆಲ್ಲಾ ಎಚ್ಚರಿಸಲು ಕೋಳಿ ಕೂಗುತ್ತದೆ ಎಂದು ಕವಿ ಹೇಳುತ್ತಾರೆ. ತನ್ನ ಓಡಾಟಕ್ಕೆಂದು ಸೂರ್ಯ ರಥ ಏರಿರಲು ಬಾನ ತುಂಬಾ ಕೆಂಧೂಳಿ ತುಂಬಿಕೊಂಡು ಓಕುಳಿ ಚೆಲ್ಲಿದಂತೆ ಕಾಣುತ್ತದೆ ಎನ್ನುತ್ತಾರೆ. ದಿನನಿತ್ಯದ ದೃಶ್ಯವನ್ನು ಕವಿ ಕಣ್ಣು ಕಾಣುವ ಬಗೆ ಇದು .

ಬೆಳಗಿನ ಜಾವದಲ್ಲಿ ಗಿಡ ಬಳ್ಳಿಗಳ ಮೇಲೆ ಮಂಜಿನ ಹನಿ ಮುಸುಕಿನಂತೆ ಕೂತಿರುತ್ತದೆ .ನಸುಕಿನ ಮಬ್ಬು ಕತ್ತಲೆ ಮರೆಯಾಗುತ್ತಿದೆ ಎನ್ನುತ್ತಾರೆ. ಇದುವರೆಗೂ ಇದ್ದ ತಿಮಿರವನ್ನು ಪಾತಾಳಕ್ಕೆ ಓಡಿಸಿ ಬಾನಿನ ಮೇಲೆ ಭಾನು ಏಣಿ ಏರಿ ಹೊರಡುತ್ತಾನೆ ಅನ್ನುತ್ತಾರೆ .

ಬೆಟ್ಟದ ಮೇಲಿನ ದೇವಾಲಯಗಳಿಗೆ ಬಂಗಾರದ ತಗಡಿನ ಮುಸುಕು ತೊಡಿಸಿರುತ್ತಾರೆ ಅಲ್ಲವೇ ?ಬೆಳಗಿನ ಮಂಜಿನ ತೆರೆಯಲ್ಲಿ ಅವು ಕಾಣದೆ ಮರೆಯಾಗಿ ಹೋಗಿರುತ್ತವೆ. ಸೂರ್ಯ ರಶ್ಮಿ ಬಿದ್ದಾಗ ಆ ಕಿರಣಗಳ ಹೊಂಬೆಳಕಿನ ಸಂದಿಯಲ್ಲಿ ಅವು ನುಸುಳಿ ಹೊಳೆಯುತ್ತವೆ ಮತ್ತು ಬೆಳಗಾಯಿತು ಏಳಿ ಹಾಗೂ ಸದಾ ನಗು ನಗುತ್ತಾ ಬಾಳಿ ಎಂಬ ಸಂದೇಶ  ಸಾರುತ್ತವೆ.

ಸೂರ್ಯೋದಯದ ವರ್ಣನೆ ಅದೆಷ್ಟು ಸೊಗಸಾಗಿದೆ ಅಲ್ಲವೇ. ಬೆಳಗಿನ ಹೊಂಬೆಳಕಿನಲ್ಲಿ ಹಿತ ಬಿಸಿಲಿನಲ್ಲಿ ಮಿಂದ ಅನುಭವ ತರುತ್ತದೆ ಈ ಹಾಡು .ಮೇಲೇರುವ ಸೂರ್ಯನನ್ನು ಕಂಡಾಗಲೆಲ್ಲಾ ನನ್ನ ಮನದಲ್ಲಿ ಮೂಡುವ, ಸದಾ ಕಾಡುವ ಅರುಣೋದಯದ ಹಾಡು ಇದು .ProfileImg

Written by Sujatha NARAHARI RAO