ಸ್ವಪ್ನ❤️

ProfileImg
12 Feb '24
10 min read


image

ಪ್ರೀತಿ ಅನ್ನುವುದು ಎರಡು ಮನಸ್ಸಿನ ಒಪ್ಪಿಗೆ, ಏನೇ ಆಗಲಿ ನಾನಿರುವೆ ಅನ್ನುವ ಧೈರ್ಯದ ಮುನ್ನುಡಿ. ಎರಡು ಕೈ ಸೇರಿದರೆ ಚಪ್ಪಾಳೆ ಅನ್ನುವ ಮಾತಿನಂತೆ ಎರಡು ಜೀವಗಳು ಒಪ್ಪಿದರೆ ಮಾತ್ರ ಆ ಪ್ರೀತಿಗೆ ಒಂದು ಅರ್ಥ ಸಿಕ್ಕಂತೆ.  "ಪ್ರತಿಯೊಬ್ಬರಿಗೂ ಅವರಿಷ್ಟದ ಜಾಗಕ್ಕೆ ಹೋಗುವ ಅಧಿಕಾರವಿದೆ, ಅವನ ಅನಿಸಿಕೆಯನ್ನು ವ್ಯಕ್ತ ಪಡಿಸುವ ಅಧಿಕಾರವೂ ನಮ್ಮ ಸಂವಿಧಾನಲ್ಲಿದೆ." ಇದೆ ರೀತಿ ಪ್ರತಿ ಜೀವಿಗೂ ಪ್ರೀತಿಸುವ ಅಧಿಕಾರವು ಇದೆ, ಪ್ರೀತಿ ಬಲವಂತ ಆಗಬಾರದು , ನಮಗೆ ಕಾಲಜಿ ತೋರುವ ಎಲ್ಲ ಜೀವಿಗೂ ನಾವು ಪ್ರೀತಿಯನ್ನು ಧಾರೆ ಎರೆಯುತ್ತೇವೆ. ಇನ್ನು ಹದಿಹರೆಯದ ಪ್ರೀತಿ ಒಂದು ರೀತಿ ನೀರಸ ಭಾವವೇ ಸರಿ.

ಅವಳು ಸ್ವಪ್ನ, ಇಂಜಿನಿಯರಿಂಗ್ ವಿದ್ಯಾರ್ಥಿನಿ.  ಧೀರೆ! ಎಂದರೆ ತಪ್ಪಿಲ್ಲ, ಅವಳೊಂದಿಗೆ ಮಾತಾಡುವವರಿಗೆಲ್ಲ , ಅವಳನ್ನ ಹತ್ತಿರದಿಂದ ನೋಡಿ ಬಲ್ಲವರಿಗೆಲ್ಲ ಅವಳ ಮಗು ಮನಸ್ಸು ಅರಿವಾಗಿರುತ್ತೆ. ಆದರೆ ದೂರದಲ್ಲಿ ನಿಂತು ಅವಳನ್ನ ಅಳೆಯುವವರಿಗೆ ಅವಳೊಂದು ನಿಲುಕದ ನಕ್ಷತ್ರ. ಮನಸ್ಸಲ್ಲಿ ಅವಳನ್ನ ಆರಾಧಿಸಿದವರೆಷ್ಟೋ ಜನ, ಅವಳೆದುರು ನಿಂತು ಮಾತಾಡಲು ಧೈರ್ಯ ಮಾಡದೇ ಹಿಂದೆ ಸರಿದವರೆಷ್ಟೋ ಜನ. ಇದರ ಅರ್ಥ ಸ್ವಪ್ನ ಭಾವನೆಗಳೇ ಇಲ್ಲದೆ ಹುಡುಗಿ ಎಂದಲ್ಲ, ಅವಳಿಗೂ ಎಲ್ಲರೊಂದಿಗೆ ಬೆರೆಯುವ ಮನಸ್ಸಿದೆ , ಆದ್ರೆ ಎಲ್ಲದಕ್ಕೂ ಅವಳೇ ಅಡ್ಡ ಗೋಡೆ ನಿರ್ಮಿಸಿಕೊಂಡಿದ್ದಾಳೆ. ಅವಳ ಸುತ್ತ ಅವಳೇ ಒಂದು ವೃತ್ತ ಹಾಕಿದ್ದಾಳೆ ತೀರಾ ಹತ್ತಿರದವರಿಗೂ ಆ ವೃತ್ತ ದಾಟಿ ಪ್ರವೇಶಿಸುವ ಹಕ್ಕಿಲ್ಲ, ಅನುಮತಿಯೂ ಇಲ್ಲ.

"ಮೊದಲಿನಿಂದ ಹೀಗೆನಾ?" ಅಂದರೆ "ಇಲ್ಲ" ,  ಸ್ವಪ್ನ ಉತ್ಸಾಹದ ಚಿಲುಮೆ, ಸದಾ ಎಲ್ಲರ ಕಾಲೆಳೆದು ತಮಾಷೆ ಮಾಡುತಿದ್ದ ಹುಡುಗಿ. ಎಲ್ಲರೊಂದಿಗೆ ಲವಲವಿಕೆಯಿಂದ ಬೆರೆಯುತ್ತಾ ಇದ್ದವಳು. ಇಂದಿನ ಅವಳ ಈ ಕಟು ನಿರ್ಧಾರಕ್ಕೆ ಕಾರಣ "ಪ್ರೀತಿ" ಎಂಬ ದುಃಸ್ವಪ್ನ.

*****

"ಕೃತಿ , ಅವರಿಗೆಲ್ಲ ಕುಡಿಯೋಕೆ ಜ್ಯೂಸು ಕೊಟ್ಟು ಬಾ" ಎಂದು ಅವಳಮ್ಮ ಟ್ರೇ ನೀಡಿದಾಗ ತಲೆ ಆಡಿಸಿ ಅವರಿದ್ದಲ್ಲಿಗೆ ಹೋಗ್ತಾಳೆ ಕೃತಿ.

ಕೃತಿ , ತುಂಬು ಕುಟುಂಬದ ಚೆಲುವೆ. ಅಕ್ಕನ ಮಾತನ್ನು ಶಿರಸಾವಹಿಸಿ ಪಾಲಿಸುವವಳಿಗೆ ಅಮ್ಮನ ಮಾತಿಗಿಂತ ಅಕ್ಕನ ಮಾತೆ ಸರಿ. ಅಂದು ಅವರ ಮನೆಗೆ ಅವಳಪ್ಪನ ದೂರದ ಸಂಬಂಧಿಯ ಮಗ ಬಂದಿದ್ದಾನೆ ಅವನ ಜೊತೆ ಅವನ ನಾಲ್ಕು ಮಂದಿ ಗೆಳೆಯರು ಬಂದಿದ್ದಾರೆ. "ಶ್ರೀ... ಅಣ್ಣ ನಿನ್ನ ಫ್ರೆಂಡ್ಸ್ ಪರಿಚಯ ಮಾಡಿಕೊಡೋ" ಎಂದವಳಿಗೆ ಎಲ್ಲರ ಪರಿಚಯ ಕೂಡ ಮಾಡಿಸಿದ್ದ ಶ್ರೀ. ಎಲ್ಲರೂ ಜ್ಯೂಸು ಕಡೆ ಗಮನ ಇಟ್ಟರೆ ಅಲ್ಲಿದ್ದ ಅಭಿಯ ಗಮನ ಮಾತ್ರ ಗೋಡೆ ಮೇಲೆ ನೇತು ಹಾಕಿದ್ದ ದೊಡ್ಡ ಪಟದತ್ತ. "ಅಭಿ ಬ್ರೋ.." ಎಂದು ಕೃತಿ ಎಚ್ಚರಿಸಿದಾಗ. "ಇದು?" ಎಂದಿದ್ದ ಆ ಫೋಟೋ ತೋರಿಸಿ.  "ಇವಳು....'' ಮುಂದೆ  ಹೇಳುತ್ತಿದ್ದಳೇನೋ ಆದರೆ ಮನೆಯ ಬಾಗಿಲಲ್ಲಿ ನಿಂತವಳ ಕಂಡು ಜಿಂಕೆಯಂತೆ ಹಾರಿ ಅತ್ತ ನಡೆದಿದ್ದಳು.

"ಏನೇ ಅಕ್ಕ, ಇಷ್ಟು ದಿನ ಪತ್ತೇನೆ ಇಲ್ಲ. ನಮ್ಮ ಮನೆ ನಿನಗೆ ಅಷ್ಟು ದೂರ ಆಗಿದ್ದು ಯಾವಾಗ?" ಎನ್ನುತ ಅವಳ ಕೈಯಲ್ಲಿದ್ದ ತಿಂಡಿ ಬಾಕ್ಸ್ ಹಿಡಿದು ಅಡುಗೆ ಮನೆಗೆ ಹೋಗ್ತಾಳೆ. "ಮನೆ ದೂರ ಆದರೇನು ಕೃತಿ ಮನಸ್ಸು ಇಲ್ಲೇ ಇದೆ" ಎನ್ನುತ್ತಾ ಮನೆಯೊಳಗೆ ನಗುತ್ತ ಬಂದವಳ ನಗು ಅಲ್ಲಿದ್ದವರನ್ನೆಲ್ಲ ಕಂಡು ಮಾಯಾ ಆಗಿತ್ತು. "ಶ್ರೀ ಅಣ್ಣ, ಶಿಶಿರ್ ಅಣ್ಣ" ಎಂದು ನಕ್ಕಳಾದರು ಅವಳ ಮನಸ್ಸಲ್ಲಿ ಗೊಂದಲ ಸ್ಪಷ್ಟ.

"ಅಭಿ ಅಣ್ಣ ಕೇಳಿದ್ರಿ ಅಲ್ವ ''ಇದು" ... ಅಂತ ಇವಳೇ ಅವಳು ನನ್ನ ಅಕ್ಕ ಸ್ವಪ್ನ" ಎಂದು ಪರಿಚಯಿಸಿ ಸ್ವಪ್ನಾಳನ್ನ ಅಪ್ಪಿಕೊಳ್ತಾಳೆ ಕೃತಿ. "ನನಗೆ ಅತ್ತೆ ಹತ್ತಿರ ಸ್ವಲ್ಪ ಕೆಲಸ ಇದೆ ಕೃತಿ" ಎಂದು ಅಲ್ಲಿಂದ ಎದ್ದು ಅಡುಗೆ ಮನೆಗೆ ಹೋಗುವವಳ ಮನಸ್ಸಲ್ಲಿ ಅದೇನಿದೆಯೋ.

"ಅಭಿ , ಈಗಲಾದರೂ ನಿನ್ನ ಮನಸ್ಸಲ್ಲಿ ಸ್ವಪ್ನ ಬಗ್ಗೆ ಏನಿದೆ ಅಂತ ಹೇಳೋ...?" ಎಂದು ಶ್ರೀ ಹೇಳಿದಾಗ "ಒಂದೇ ಮನೆಯಲ್ಲಿದ್ದೇವೆ ಅಲ್ಲದೆ ನನ್ನ ಸಂಬಂಧಿ ಅವಳು ಅಂದಮೇಲೆ ಮನೆಯಲ್ಲಿ ಖಂಡಿತ ನಮ್ಮ ಮದುವೆಗೆ ಒಪ್ಪಿಗೆ ಕೊಡ್ತಾರೆ ಈಗ ಹೇಳ್ತಿನಿ ಅವಳಿಗೆ ನಾನು ಅವಳನ್ನ ಪ್ರೀತಿಸುತ್ತಿದ್ದೀನಿ ಅಂತ" ಎಂದು ಖುಷಿಯಲ್ಲಿ ಎದ್ದವನ ಕೈ ಹಿಡಿದು  ನಿಲ್ಲಿಸ್ತಾನೆ ಶಿಶಿರ್. “ಅವಳಿಗೂ ಒಪ್ಪಿಗೆ ಇರಬೇಕಲ್ಲ. ಪ್ರೀತಿ ಅನ್ನುವ ವಿಷಯ ಖುಷಿ ಕೊಡಬೇಕೇ ವಿನಹ ನೋವನ್ನಲ್ಲ , ಸಾಕಷ್ಟು ನೋವು ಕೊಟ್ಟಿದ್ದೀಯ ಅಭಿ ನೀನು.”

*****

ಜೀವನದಲ್ಲಿ ಯಾರನ್ನ ಮತ್ತೆ ನೋಡಬಾರದು ಅಂತ ನಿರ್ಧಾರ ಮಾಡಿರ್ತಿವೋ ಅವರೇ ಪದೇ ಪದೇ ನಮ್ಮ ಜೀವನದ ಪುಟಗಳಲ್ಲಿ ಕಾಣುತ್ತಾರೆ. ಎಂದುಕೊಂಡವಳ ಮನಸ್ಸು ವರ್ಷಗಳ ಹಿಂದೆ ಸಾಗಿತ್ತು.

ಕಾಲೇಜಿನಲ್ಲಿದ್ದವಳಿಗೆ ಅಪರಿಚಿತ ಅಕೌಂಟ್ ಇಂದ ಫ್ರೆಂಡ್ ರಿಕ್ವೆಸ್ಟ್ ಬಂದಿರುತ್ತೆ ಇನ್ಸ್ಟಾಗ್ರಾಮ್ ಅಲ್ಲಿ, ಅವನೋ ನೋಡಲು ಮನ್ಮತ ಸಾಲದಕ್ಕೆ ಅವಳಣ್ಣ ಮತ್ತೆ  ತಂಗಿ  ಕೂಡ ಫಾಲೋ ಮಾಡ್ತಾ ಇದ್ರೆ ಇದೆ ಸಾಗಿತ್ತುಅವಳ  ರಿಲೇಶನ್ ಅಂತ ತಿಳಿಯಲು.

ಪರಿಚಯದ ಹತ್ತು ದಿನದಲ್ಲಿ ಒಮ್ಮೆಯೂ ಅವನು ಮೆಸೇಜ್ ಮಾಡಿಲ್ಲ ಇವಳು ಕೂಡ. ಅವತ್ತು ಅವಳ ಹುಟ್ಟಿದ ಹಬ್ಬ. ದಿಡೀರ್ ಅವನ ಸಂದೇಶ ಅವಳ ಮೆಸ್ಸೆಂಜರ್ ಅಲ್ಲಿ ಬಿದ್ದಾಗಿತ್ತು. "ಹುಟ್ಟು ಹಬ್ಬದ ಶುಭಾಶಯಗಳು ಗೊಂಬೆ" ಓದಿದವಳ ಮನಸ್ಸಲ್ಲಿ ಸಣ್ಣ ಅನುಮಾನ "ಗೊಂಬೆ" ಅದನ್ನ ಮನೆಯರು ಕರೆಯುತ್ತಾರೆ ಇವರಿಗೆ ಹೇಗೆ? ಎಂಬ ಪ್ರಶ್ನೆಗೆ ಉತ್ತರ ಹುಡುಕದೆ "ಥಾಂಕ್ ಯು " ಎಂದು ಉತ್ತರಿಸಿ ಮಲಗುತ್ತಾಳೆ.

ಮುಂಜಾನೆ ಎದ್ದಾಗ ಕೂಡ ಅವನ ಶುಭೋದಯ ಇವಳ ಶುಭರಾತ್ರಿ ಇಂತಹ ಸಣ್ಣ ಪುಟ್ಟ ಸಂದೇಶಗಳ ರವಾನೆ ಆಗುತ್ತಲೇ ಒಂದು ತಿಂಗಳು ಕಳೆದಿತ್ತು ಅವಳ ಕೊನೆಯ ಸೇಮ್ ಕೂಡ ಪ್ರಾರಂಭ ಆಗಿತ್ತು. ಈ ಒಂದು ತಿಂಗಳ ಅವಧಿಯಲ್ಲಿ ಅವಳ  ಕಾಲೇಜು  ಟೈಮ್, ಬಿಡುವಿನ ಸಮಯ ಅವನ ಆಫೀಸ್ ಟೈಮ್ ಅವನಿಗೆ ಬ್ರೇಕ್ ಯಾವಾಗ ಎಲ್ಲವನ್ನು ಅರಿತಿದ್ದರು. ಅವನೇನು ಇವಳನ್ನು ನಿರಾಕರಿಸುತ್ತಿರಲಿಲ್ಲ. ಯಾವಾಗ ಮೆಸೇಜ್ ಮಾಡಿದ್ರು ಉತ್ತರಿಸುತ್ತಿದ್ದ ನಿಮಿಷಗಳಲ್ಲಿ. ಒಂದೆರಡು ತಿಂಗಳ ನಂತರ ಮೊಬೈಲ್ ನಂಬರ್ ಕೂಡ ಬದಲಿಸಿಕೊಂಡಿದ್ದರು ಈಗಂತೂ ಅವಳ ಬಿಡುವಿನ ಸಮಯವೆಲ್ಲ ಮಾತಿನಲ್ಲೇ ಕಳೆಯುತ್ತಿದ್ದಳು. ಸ್ವಂತ ಊರು ಬಿಟ್ಟು ಮಾಯಾನಗರಿ ಸೇರಿದ್ದರಿಂದ ಊರಿನ ಸುದ್ದಿ, ಅವರು ಗೊತ್ತ? ಇವರು ಗೊತ್ತ ? ಅನ್ನುವ ಪ್ರಶ್ನೆಗಳು. ನಿಲ್ಲದ ಮಾತುಗಳು , ಸಣ್ಣ ಮುನಿಸು-ಅವನ ರಮಿಸುವಿಕೆ ಎಲ್ಲವು ಜೋರಾಗೆ ಇತ್ತು. ಈ ಒಡನಾಟ ಸಾಕಿತ್ತಲ್ಲ ಪ್ರೀತಿ ಅನ್ನುವ ಮೊಳಕೆಯೊಡೆಯುವುದಕ್ಕೆ. ಇದೆ ನಮ್ಮ ಈಗಿನ ಪೀಳಿಗೆ ಇಡುವ ಮೊದಲ ತಪ್ಪು ಹೆಜ್ಜೆ. "ಮಾತು ಶುರುವಾಗಿ ಸಣ್ಣ ಕಂಫರ್ಟ್ ಜೋನ್ ಸೃಷ್ಟಿ  ಆಗುತ್ತಲೇ ಪ್ರೀತಿ ಎಂಬ ಹೆಸರಿಟ್ಟು ಬಿಡುತ್ತಾರೆ" ಸ್ವಪ್ನ ಕೂಡ ಇದಕ್ಕೆ ಹೊರತಲ್ಲ. ಅವಳಿಗೆ ಅವನ ಮೇಲೆ ನಂಬಿಕೆ ಇದೆ, ಅಲ್ಲದೆ  ಹುಚ್ಚು ಕುದುರೆಯಂತ ಮನಸ್ಸು ಅವಳದ್ದಲ್ಲ. ಎಲ್ಲವನ್ನು ಅಳೆದು ತೂಗಿ  ಯೋಚಿಸುವ ಹುಡುಗಿ. ಇನ್ನು ಪ್ರೀತಿ ಅನ್ನುವ ವಿಷಯದಲ್ಲಿ ಎಡವಿರಲಿಲ್ಲ. ಮನಸ್ಸು ಬೇರೆ ಯೋಚನೆ ಮಾಡುತ್ತಿದೆ ಎಂದು ಅರಿವಾದಾಗಲೇ ಕೂತು ಯೋಚಿಸಿದ್ದಳು ಅಭಿ ಅವಳ ಜೀವನಕ್ಕೆ ಎಷ್ಟು ಸರಿ ಹೊಂದುತ್ತಾನೆ ಎಂದು ಕೂಡ ಅರಿವು ಮಾಡಿಕೊಂಡಿದ್ದಳು ಮನಸ್ಸಲ್ಲಿ ದಿಟ್ಟ ನಿರ್ಧಾರ ಮಾಡಿದ ಮೇಲೆಯೇ ಅವಳ ಮನಸ್ಸಲ್ಲಿದ್ದದ್ದನ್ನು ಅವನಲ್ಲಿ ವ್ಯಕ್ತ ಪಡಿಸಿದ್ದು.

"ಸ್ವಪ್ನ, ನಾನು ನಿನ್ನ ಗೆಳೆಯ ಅಷ್ಟೇ ಇನಿಯನಾಗುವ ಯೋಚನೆ ನಾನು ಯಾವತ್ತೂ ಮಾಡಿಲ್ಲ. ನನಗೆ ಅಪ್ಪ-ಅಮ್ಮನ ಒಪ್ಪಿಗೆ ಪಡೆಯದೇ ಇದೆಲ್ಲ ಇಷ್ಟ ಇಲ್ಲ. ನಿನ್ನನ್ನ ಒಬ್ಬಳು ಬೆಸ್ಟ್ ಫ್ರೆಂಡ್ ಅಂತ ನೋಡೋದಕ್ಕೆ ಇಷ್ಟ ಪಡ್ತೀನಿ" ಎಂದು ಉತ್ತರಿಸಿದ್ದ. ಆದರದು ಅವನ ಮನಸ್ಸಿನ ಮಾತಲ್ಲ ಅನ್ನುವುದು ಅವಳಿಗೂ ಗೊತ್ತಿತ್ತು. "ಸರಿ ಅಭಿ" ಎಂದು ಸುಮ್ಮನಾಗಿದ್ದಳು ಆದರೆ ಮತ್ತೆಂದೂ ಅವನಲ್ಲಿ ಇದರ ಬಗ್ಗೆ  ಮಾತಾಡಿರಲಿಲ್ಲ.  ಅವನೂ ಕೂಡ , ಆದರೆ ಇಬರ ನಡುವಿನ ಬಂಧ  ಇನ್ನಷ್ಟು ಗಟ್ಟಿಯಾಗುತ್ತಲೇ ಇತ್ತು. ಅದು ಸ್ವಪ್ನಳ ಅರಿವಿಗೂ ಬಂದಿದೆ. ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗೆ ಬಲ್ಲರು, ಒಬ್ಬರ ಬೇಕು ಬೇಡಗಳನ್ನ ಅರಿತಿದ್ದರು . ಅವಳ ಓದು , ಓದು ಮುಗಿದ ಮೇಲೆ ಜಾಬ್ , ಕಾಲೇಜಿನಲ್ಲಿ ಏನಾದರು ಸಮಸ್ಯೆ ಇದೆಯಾ? ಎಲ್ಲವನ್ನೂ ಕಾಳಜಿ ವಹಿಸುತ್ತಿದ್ದ ಅಭಿ.

ದಿನಗಳು ಉರುಳಿ ಅವಳ ಓದು ಮುಗಿದಿತ್ತು. ಅವಳೀಗ ಸಾಫ್ಟ್ವೇರ್ ಇಂಜಿನಿಯರ್. ಅವನು ಕೂಡ ಆಫೀಸ್ ಕೆಲಸದಲ್ಲಿ ಬ್ಯುಸಿ , ಸ್ವಪ್ನ ಕೂಡ ವೃತ್ತಿ ಜೀವನದ ಮೊದಲ ಅನುಭವ ಪಡೆಯುತ್ತಿದ್ದಳು . ಕೆಲಸ , ಟೆನ್ಶನ್ , ಎಲ್ಲವನ್ನು ನಿಬಾಯಿಸುತ್ತಿದ್ದಳು . ಅವನ ಮೇಲೆ ಅವಳಿಗಿದ್ದ ಭಾವನೆ ಸ್ಪಷ್ಟ , ಪ್ರೀತಿ ಅನ್ನುವ ಪದಕ್ಕೆ ಅವಳ ಮನಸ್ಸು ಅಭಿಯನ್ನು ಪಟ್ಟಕ್ಕೇರಿಸಿ ಆಗಿತ್ತು. ಸಮಯ ಸಾಗಿದಾಗೆಲ್ಲ ಇಬ್ಬರ ನಡುವಿನ ಒಡನಾಟ ಹಾಗೆಯೇ ಇತ್ತು . ಅದೊಂದು ದಿನ ಅವನ ಇನ್ಸ್ಟಾಗ್ರಾಮ್ ಅಕೌಂಟ್ ಲಾಗಿನ್ ಆಗಿದ್ದಳು ಸ್ವಪ್ನ. ಅಂದೇಕೋ ಅವನ ಅಕೌಂಟ್ ನೋಡುವ ಮನಸ್ಸು ಮಾಡಿದ್ದಳು  ಆಗಲೇ ತಿಳಿದದ್ದು  ಅವನಿಗೆ ಮೊದಲ ಪ್ರೀತಿ ಇದೆ, ಆದರೀಗ ಇಬ್ಬರು ಜೊತೆ ಇಲ್ಲ ಅಂತ. ಅದೆಷ್ಟು ನೊಂದುಕೊಂಡಳೋ ಅವಳೇ ಬಲ್ಲಳು. ಅವನ ಅನುಮತಿ ಇಲ್ಲದೆ ಅವನ ಅಕೌಂಟ್ ನೋಡಿದ್ದು ತಪ್ಪೇ ಆದರೆ ಇಬ್ಬರ ನಡುವೆ ನಂಬಿಕೆ ಇತ್ತು ಅದೇ ಕಾರಣಕ್ಕೆ ಒಬ್ಬರ ಅಕೌಂಟ್ ಲಾಗಿನ್ ವಿವರ ಮತ್ತೊಬ್ಬರಿಗೆ ತಿಳಿಸಿದ್ದರು.

ಅಂದಿನಿಂದ ಮೌನಿಯಾದಳು ಸ್ವಪ್ನ , "ತಾನು ಪ್ರೀತಿಸಿದ ವ್ಯಕ್ತಿಯ ಜೀವನದಲ್ಲಿ ಮೊದಲೇ ಒಬ್ಬಳ ಆಗಮನ ಆಗಿದೆ, ಮತ್ತವನಿಗೂ ಅವಳ ಮೇಲೆ ಮನಸ್ಸಿದೆ ಅಂತ ಅರಿತಿದ್ದಳು" ವಾರಗಳು ಕಳೆದರು ಅವನಿಗೆ ಕರೆ ಮಾಡಲಿಲ್ಲ. ಅವನ ಕರೆ ಬಂದಾಗ ಉತ್ತರಿಸುತ್ತಾ ಇದ್ದವಳು ಎರಡು ನಿಮಿಷ ಮಾತಾಡಿದ್ದೆ ಹೆಚ್ಚು . "ಏನಾಗಿದೆ ನಿನಗೆ?" ಎಂದು ಪ್ರಶ್ನಿಸಿದಾಗ "ಅಶ್ವಿನಿ ಯಾರು?" ಎಂದು ನೇರವಾಗಿ ಪ್ರಶ್ನೆ ಮಾಡಿದ್ದಳು.

"ನಿನಗೆ ಹೇಗೆ ಗೊತ್ತಾಯ್ತು?" ಎಂದವನ  ಪ್ರಶ್ನೆಗೆ "ನಿನ್ನ ಇನ್ಸ್ಟಾಗ್ರಾಮ್ ಅಕೌಂಟ್ ಲಾಗಿನ್ ಆಗಿ ನೋಡಿದೆ, ನನಗೆ ಗೊತ್ತು ನಾನು ಮಾಡಿದ್ದೂ ತಪ್ಪು ಅಂತ ನಿನಗೆ ಅನ್ಸುತ್ತೆ ಆದರೆ ನನಗೆ ನಾನು ತಪ್ಪು ಮಾಡಿಲ್ಲ ಅಂತ ಅನ್ನಿಸುತ್ತಿದೆ" ಎಂದವಳ ದಿಟ್ಟ ಉತ್ತರ ಅವನಿಗೆ ಹಿಡಿಸಿತ್ತು. "ಅವಳ ಹೆಸರು ಗೊತ್ತಾಗಿದೆ ಅಂದಮೇಲೆ ಎಲ್ಲವು ನೋಡಿದ್ದೀಯಾ ಅಂತಾಯ್ತು, ಹೌದು ನನ್ನ ಮೊದಲ ಪ್ರೀತಿ ಇಬ್ಬರು ಒಪ್ಪಿ ಪ್ರೀತಿ ಮಾಡಿದ್ವಿ ಆದರೆ ಮನೆಯಲ್ಲಿ ಇದಕ್ಕೆಲ್ಲ ಒಪ್ಪಿಗೆ ಕೊಡಲ್ಲ, ಅದೇ ಕಾರಣಕ್ಕೆ ಮತ್ತಷ್ಟು ಮುಂದುವರೆಯುವ ಮುನ್ನ ನಾನೆ ದೂರ ಆದೆ. ಈಗ ಫ್ರೆಂಡ್ಸ್ ಆಗಿದ್ದಿವಿ" ಎಂದು ಉತ್ತರಿಸಿದ್ದ. ಅವನು ಅವಳಲ್ಲಿ ಏನನ್ನು ಮುಚ್ಚಿಡಲಿಲ್ಲ. ಅವಳಿಗೆ ಯಾವ ವಿಷಯ ತಿಳಿದಿತ್ತೋ ಅದನ್ನೇ ಅವನು ಹೇಳಿದಾಗ ಅಭಿ ಮೇಲಿನ ಗೌರವ ಹೆಚ್ಚಾಗಿತ್ತು ವಿಷಯ ಮುಚ್ಚಿಟ್ಟು ಆಟ ಆಡುವ ಜನರ ಮಧ್ಯೆ ಇವನು ಬೇರೆಯೇ.

"ಒಂದು ಪ್ರಶ್ನೆ ನನ್ನ ಮೇಲೆ ಯಾವತ್ತೂ ಯಾವ ಭಾವನೆಯು ಮೂಡಿಲ್ವಾ? " ಎಂದಾಗ "ಇತ್ತು, ನನಗೂ ನಿನ್ನ ಮೇಲೆ ಫೀಲಿಂಗ್ಸ್ ಇತ್ತು ಆದರೆ ಈಗಿಲ್ಲ" ಎಂದಿದ್ದ "ಯಾಕೆ?" ಎಂದವಳಿಗೆ "ಮನೆಯಲ್ಲಿ ಒಪ್ಪುತ್ತಾರಾ? ಇಲ್ಲವಾ? ನನಗೆ ಗೊತ್ತಿಲ್ಲ  ಅಂದಮೇಲೆ ನಿನಗೆ ಸುಳ್ಳು ಭರವಸೆ ಕೊಡುವ ಅಧಿಕಾರ ನನಗಿಲ್ಲ" ಎಂದವನ ಮಾತಿನ ರೀತಿ ಬದಲಾಗಿತ್ತು ಅದನ್ನ ಸ್ವಪ್ನ ಕೂಡ ಗಮನಿಸಿದ್ದಳು.

ಅಂದಿನಿಂದ ಇಬ್ಬರ ಮಾತು ಕಥೆ ಅಷ್ಟಕ್ಕೇ ಅಷ್ಟೇ. ಸ್ವಪ್ನ ಇಬ್ಬರ ನಡುವಿನ ಸುಂದರ ದಿನಗಳನ್ನ ಮೆಲುಕು ಹಾಕುತ್ತ ಅತ್ತು ಕಳೆದ ರಾತ್ರಿಗಳೆಷ್ಟೋ... ಒಂದರ್ಥದಲ್ಲಿ ಖಿನ್ನತೆ ಅವಳನ್ನ ಕಾಡೋಕೆ ಶುರು ಆಗಿತ್ತು. ಮತ್ತೊಮ್ಮೆ ಕೇಳಿದಾಗ ಅಭಿ ಅವಳ ಜೊತೆ ಕಟುವಾಗಿ ವರ್ತಿಸಿದ ಅದಾದಮೇಲೆ ಅವಳು ಪೂರ್ಣ ಮೌನಿ. ಎಷ್ಟು ಬೇಕೋ ಅಷ್ಟೇ ಅವಳ ಮಾತು ಮುಂದೆ ಏನು ಅನ್ನುವುದನ್ನ ಸರಿಯಾಗಿ ನಿರ್ಧಾರ ಮಾಡಿದ್ದಳು. ಅವಳ ತೀರ್ಮಾನಗಳ ಮೇಲೆ ಅವಳಿಗೆ ಸ್ಪಷ್ಟತೇ ಇತ್ತು.

"ಅಕ್ಕ , ಏನೇ ಮಾಡ್ತಾ ಇದ್ದೀಯ?" ಎನ್ನುತ್ತಾ ಕೃತಿ ಕೇಳಿದಾಗ ನೆನಪಿನಿಂದ ಹೊರಬಂದವಳು ಕಣ್ಣಂಚನ್ನು  ಒರೆಸಿಕೊಂಡು ನಗುತ್ತ ಅವಳೆಡೆಗೆ ನೋಡುತ್ತಾಳೆ. ಅಭಿ , ಮತ್ತವನ ಗೆಳೆಯರೆಲ್ಲರನ್ನ ಅಲ್ಲಿ ಕಂಡು ಕಸಿವಿಸಿ ಆಗಿದ್ದಂತೂ ನಿಜ. ಅವರೆಲ್ಲರಿಗೂ ಇವಳು ಅಭಿಗೆ ಪ್ರೊಪೋಸ್ ಮಾಡಿದ್ದೂ ತಿಳಿದಿದೆ.

*****

“ಶ್ರೀ ಮತ್ತವನ ಗೆಳೆಯರು ವಾರದ ಮಟ್ಟಿಗೆ ಕೃತಿ ಮನೆಯಲ್ಲೇ ಉಳಿಯಲು ಬಂದಿದ್ದರು. ಈ ನಡುವೆ ಅಭಿಗೆ ಅವನ ಮನಸ್ಸಲ್ಲಿ ಸ್ವಪ್ನ ಎಷ್ಟು ಆಳವಾಗಿ ಬೇರೂರಿದ್ದಾಳೆ ಅನ್ನೋದು ಅರಿವಾಗಿತ್ತು ಆದರೆ ಸ್ವಪ್ನ ಮೊದಲಿನಂತೆ ಇದ್ದಾಳ?”

ಅಡುಗೆ ಮನೆಯಲ್ಲಿ , ಕೆಲಸ ಮಾಡುತ್ತ ಇದ್ದ ಸ್ವಪ್ನ ಹಿಂದೆ ಬಂದು ನಿಂತಿದ್ದಳು ಕೃತಿ ಅವಳ ಮುಖ ಕಳೆಗುಂದಿದೆ. ಏನನ್ನೋ ದೀರ್ಘವಾಗಿ ಯೋಚಿಸುತ್ತ ಇದ್ದಾಳೆ ಅನ್ನೋದು ಅರಿವಾಗಿತ್ತು. "ಏನಾಯ್ತು ನನ್ನ ತಂಗಿಗೆ, ಮೇಕ್ಅಪ್ ಕೂಡ ಮಾಡದೇ ಮನೆಯಲ್ಲಿ ಹಾಗೆ ಇದ್ದಾಳೆ ಅಂದ್ರೆ ಏನೋ ಆಗಿದೆ?" ಎಂದು ನಕ್ಕವಳ ನಗು ನಿಂತಿತ್ತು ಕೃತಿ ಕಣ್ಣೀರು ಕಂಡು.

ಅಡುಗೆ ಮನೆಯಲ್ಲಿಯೇ ಇದ್ದ ಡಿನ್ನಿಂಗ್ ಟೇಬಲ್ ಮೇಲೆ ಕುಳಿತಿದ್ದ ಶ್ರೀ , ಅಭಿ , ಶಿಶಿರ್ ಕೂಡ ಒಮ್ಮೆ ಶಾಕ್ ಆಗಿದ್ದರು ಕೃತಿ ಅಳು ನೋಡಿ. "ಏನಾಯ್ತು ಕೃತಿ?" ಎಂದು ಕೇಳಿದವಳ ಮುಂದೆ ಒಂದು ಫೋಟೋ ಹಿಡಿದಿದ್ದಳು. "ದೇವ್!!!" ಎಂದು ಸ್ವಪ್ನ ಕೇಳಿದಾಗ , "ಅಕ್ಕ , ಐ ಲವ್ ಹಿಮ್ , ಆದರೆ ಇವನಿಗೆ ನನ್ನ ಮೇಲೆ ಯಾವ ಫೀಲಿಂಗ್ಸ್ ಇಲ್ಲ,  ಅಕ್ಕ ಇದೆಲ್ಲ ಹೇಗೆ  ಸಾಧ್ಯ ನನ್ನ ಜೊತೆ ಅಷ್ಟು ಕ್ಲೋಸ್ ಇದ್ದವನಿಗೆ ಆ ಗಮ್ಯ ಅಂದ್ರೆ ಇಷ್ಟ ಅಂತ ಮತ್ತೆ ನನ್ನ ಜೊತೆ ಯಾಕೆ ಇಷ್ಟೆಲ್ಲಾ ಕ್ಲೋಸ್ ಇರಬೇಕಿತ್ತು" ಎಂದು ರಾಗ ತೆಗೆದವಳಿಗೆ ಅವನ ಮೇಲೆ  ಕೋಪ , ಅವಳ ನಿರ್ಧಾರದ ಮೇಲೆ ಅಸಹಾಯಕತೆ.

ಇದೆಲ್ಲ ಮಾತು ಅಭಿಯನ್ನ ಚುಚ್ಚಿದ್ದಂತೂ  ನಿಜ ಅದು ಸ್ವಪ್ನ  ಕೂಡ ಗಮನಿಸಿದ್ದಳು. "ಈಗ ಏನು ಮಾಡಬೇಕು?" ಎಂದು ಸ್ವಪ್ನ ಕೇಳಿದಾಗ  "ನನಗೆ ಅವನೇ ಬೇಕು ಅಷ್ಟೇ ಅದೇನಾದ್ರು ಸರಿ , ಎಂದು ಮತ್ತೊಮ್ಮೆ ಅವನಿಗೆ ಕಾಲ್ ಮಾಡಿದಾಗ ಮಾತಲ್ಲಿದ್ದ ನಿರಾಕರಣೆ ಕೃತಿ ಇನ್ನಷ್ಟು ಕುಗ್ಗುವಂತೆ ಮಾಡಿತ್ತು". ಅಡುಗೆ ಮನೆಯಲ್ಲಿದ್ದ ಎಲ್ಲಾ ವಸ್ತು ಒಂದೇ ಸಲ ಚೆಲ್ಲಾಪಿಲ್ಲಿ ಮಾಡಿದ್ದಳು ಆದರೆ ಯಾವುದಕ್ಕೂ ಪ್ರತಿಕ್ರಿಯಿಸಲಿಲ್ಲ ಸ್ವಪ್ನ. "ಅಕ್ಕ , ನಾನಿಲ್ಲಿ ರಂಪ ಮಾಡ್ತಾ ಇದ್ರೂ ಆರಾಮ್ ಇದ್ದೀಯ?" ಎಂದು ಮತ್ತೊಮ್ಮೆ ಪ್ರಶ್ನಿಸಿದಾಗ ಬೇಯಿಸಿದ್ದ ಹತ್ತು ಆಲೂಗಡ್ಡೆ ಬೇಯಿಸದೆ ಹಾಗೆ ತೊಳೆದಿದ್ದ ಇಪ್ಪತ್ತು ಆಲೂಗಡ್ಡೆ ತಂದು ಅವಳ ಮುಂದಿಟ್ಟಿದ್ದಳು ಸ್ವಪ್ನ. ಅವಳನ್ನೇ ವಿಚಿತ್ರವಾಗಿ ನೋಡಿದ್ದಳು ಕೃತಿ ಕ್ಷಣ ಕ್ಷಣಕ್ಕೂ ಅವಳ ಕೋಪ ಹೆಚ್ಚಾಗುತ್ತಲೇ ಇತ್ತು. "ಅಕ್ಕ..." ಎಂದು ಏನೋ ಹೇಳುವ ಮೊದಲೇ. "ಇದೆಲ್ಲ ಕಟ್ ಮಾಡು" ಎಂದವಳು ಬೇರೆ ಕೆಲಸದ ಕಡೆ ಗಮನ ಹರಿಸಿದ್ದಳು. "ನಾನಿಲ್ಲಿ ನನಗೆ ಆಗಿರೋ ಬೇಜಾರ್ ಬಗ್ಗೆ ಹೇಳ್ತಾ ಇದ್ರೆ ನೀನು ಆಲೂಗಡ್ಡೆ ಕಟ್ ಮಾಡು ಅಂತ ಇದ್ದೀಯ ಫೈನ್ ಹೇಗೆ ಕಟ್ ಮಾಡ್ಲಿ?" ಎಂದು ಕೂಗಿದಾಗ "ಹೇಗಾದ್ರು   ಮಾಡು ನಿನ್ನಿಷ್ಟ" ಎಂದು ಅಡುಗೆ ಮನೆ ಇಂದ ಆಚೆ ಹೋಗ್ತಾಳೆ ಸ್ವಪ್ನ.

 

ಅರ್ಧ ಗಂಟೆ ಆಗಿತ್ತೇನೋ ಬೇಯಿಸಿದ ಅಷ್ಟು ಆಲೂಗಡ್ಡೇನ ಹೇಗಂದರೆ ಹಾಗೆ ಕಟ್ ಮಾಡಿದ್ದಳು ಕೃತಿ. ಅವಳ ಕೋಪ ದೇವ್ ಮೇಲೆ ಕರಗಿದಂತಿಲ್ಲ. "ಇನ್ನು ಎಷ್ಟು ಕಟ್ ಮಾಡಬೇಕು ನಾನು ಆಗ್ಲೇ ಪ್ಲೇಟ್ ಫುಲ್ ಆಗಿದೆ" ಎಂದು ಮತ್ತೊಮ್ಮೆ ಕಿರುಚಿದ್ದಳು. "ಎಷ್ಟಾದ್ರೂ ಕಟ್ ಮಾಡು ನಿನ್ನಿಷ್ಟ" ಎಂದು ಮತ್ತೆ ಸುಮ್ಮನಾಗ್ತಾಳೆ ಸ್ವಪ್ನ. ಇದೆಲ್ಲವನ್ನು ಅದ್ಭುತದಂತೆ ನೋಡುತ್ತಾ ಉಳಿದುಬಿಟ್ಟ ಅಭಿ "ಯಾವಾಗ ಇಷ್ಟು ತಾಳ್ಮೆ ವಹಿಸೋದು ಕಲಿತದ್ದು ಇವಳು?" ಮೊದಲೆಲ್ಲ ಸಣ್ಣ ಸಣ್ಣದಕ್ಕೂ ಮುನಿಸಿಕೊಳ್ಳುತ್ತಿದ್ದಳಲ್ಲ. ಅವಳ ಈ ಬದಲಾವಣೆಗೆ. ತಾನೇ ಕಾರಣ ಅನ್ನೋದನ್ನ ಅರಿಯುವಲ್ಲಿ ಮತ್ತೆ ಸೋತಿದ್ದ.

ಒಂದಷ್ಟು ಸಮಯದ ನಂತರ ಕೃತಿ ಸ್ವಲ್ಪ ಶಾಂತವಾಗಿದ್ದಳು. ಅವಳ ಮನಸ್ಸು ಈಗ ಒಂದು ನಿರ್ಧಾರಕ್ಕೆ ಸಿದ್ದವಾಗಿತ್ತು. "ಅಕ್ಕ ಆಯಿತು" ಅದೆಷ್ಟು ಶಾಂತ ಧ್ವನಿ ಅವಳದ್ದಿಗ.

"ಇಷ್ಟೆಲ್ಲಾ ಕಟ್ ಮಾಡಿದ್ದಿಯ ಅಲ್ವ ಹೇಗೆ ಅನ್ಸ್ತು?" ಎಂದು ಸ್ವಪ್ನ ಕೇಳಿದಾಗ "ಇದೆಲ್ಲ ಯಾಕೆ ಮಾಡಿಸಿದ್ದು, ನೋಡು ಅರ್ಧಕ್ಕೆ ಅರ್ಧ ಹಾಳು ಮಾಡಿದ್ದೀನಿ" ಎಂದವಳ ಕೆನ್ನೆ ಸವರಿ. "ನಿನಗೆ ಇದರಲ್ಲಿ ಏನೋ ತಿಳಿಸೋದು ಇದೆ ಅದಕ್ಕೆ ಎಂದವಳು ಕಟ್ ಮಾಡಿದ್ದ ಅಷ್ಟು ರಾಶಿ ಆಲೂಗಡ್ಡೆಯನ್ನ ತಂದು ಟೇಬಲ್ ಮೇಲೆ ಇಡ್ತಾಳೆ. ಇಲ್ಲಿ ನೋಡು ನಾನು ನಿನಗೆ ಕಟ್ ಮಾಡೋಕೆ ಹೇಳಿದ್ದೆ ಅಂತ ಕೋಪದಲ್ಲಿ ಒಂದಷ್ಟು ಆಲೂಗಡ್ಡೇನ ಹೇಗಂದರೆ ಹಾಗೆ ಕಟ್ ಮಾಡಿದ್ದಿಯ , ಒಂದರ್ಥದಲ್ಲಿ ಆ ಸಮಯಕ್ಕೆ ಏನಾದ್ರು ದೇವ್ ನಿನ್ನ ಎದುರಿದ್ರೆ ಹೀಗೆ ಮಾಡ್ತಿದ್ದೆ ಅನ್ಸುತ್ತೆ. ಮತ್ತೆ ನಿನ್ನ ಮಾತಿಗೆ ನಾನು ಪ್ರತಿಕ್ರಿಯೆ ಕೊಟ್ಟಿಲ್ಲ ಅನ್ನೋ ಕೋಪ ಎರಡು ಸೇರಿ "ಆಲೂಗಡ್ಡೆ ಮರ್ಡರ್" ಮಾಡಿದ್ದಿಯ ಕೃತಿ ನೀನು.. ಆಮೇಲೆ ಮತ್ತೆ ನೀನು ಕೇಳಿದಾಗ ಎಷ್ಟಾದ್ರೂ ಕಟ್ ಮಾಡು ಅಂತ ನಾನು ಹೇಳಿ ಹೊರಗೆ ಹೋದೆ ಅಲ್ವ? ಆ ಕೋಪಕ್ಕೆ ಆಲೂಗಡ್ದೆನಾ  ಉದ್ದುದ್ದ ಕಟ್ ಮಾಡಿದ್ದಿಯ ಈಗಲೂ ನಿನ್ನ ಹತಾಶೆ ಎದ್ದು ಕಾಣುತ್ತ ಇದೆ.. ಆಮೇಲೆ ನಿನ್ನ ಮನಸ್ಸು ಒಂದು  ತಹಬದಿಗೆ ಬಂದಿದೆ. ಅದಕ್ಕೆ ಇಲ್ಲಿ ನೋಡು ಕಟ್ ಮಾಡುವ ರೀತಿ ಬದಲಾಗಿದೆ. ಸಣ್ಣ ಸಣ್ಣ ಆಲೂಗಡ್ಡೇನ ಒಂದು ಶೇಪ್ ಕೊಟ್ಟು ಕಟ್ ಮಾಡಿದ್ದಿಯ. ಆಮೇಲೆ ನಿನಗೆ ಫ್ರೆಂಚ್ ಫ್ರೈ ಯೋಚನೆ ಬಂದಿದೆ ಅದಕ್ಕೆ ತೆಳುವಾಗಿ ಕಟ್ ಮಾಡಿದ್ದಿಯ ಮತ್ತೆ ನಿನ್ನ ಮನಸ್ಸು ನೀನು ಅರ್ಧ ಗಂಟೆ ಮುಂಚೆ ನಡೆದುಕೊಂಡ ರೀತಿ, ದೇವ್ ನಿನಗೆ ಬೈದಿದ್ದು , ನಿನ್ನ ಪ್ರೀತಿ ನಿರಾಕರಿಸಿದ್ದು, ನಾನು ನಿನ್ನ ನೆಗ್ಲೆಕ್ಟ್ ಮಾಡಿದ್ದೂ, ಆಲೂಗಡ್ಡೆ ಕಟ್ ಮಾಡೋಕೆ ಹೇಳಿದ್ದು ಎಲ್ಲವನ್ನೂ ಯೋಚನೆ ಮಾಡಿದ್ದಿಯ ಅದಕ್ಕೆ ನಿನ್ನ ಮನಸ್ಸಲ್ಲಿ ಒಂದು ತೀರ್ಮಾನ ಮಾಡುವ ಹಂತಕ್ಕೆ ಶಾಂತವಾಗಿದ್ದೆ ನೀನು ಅದಕ್ಕೆ ಇದೆಲ್ಲ ಆಲೂಗಡ್ದೆನಾ ಸಣ್ಣ ಸಣ್ಣಗೆ ಕಟ್ ಮಾಡುತ್ತ ಯೋಚಿಸಿದ್ದಿಯ, ಆಮೇಲೆ ನಿನ್ನ ಮನಸ್ಸು ಪೂರ್ತಿ ತಿಳಿ ಆದಮೇಲೆ ಕಟ್ ಮಾಡೋದು ನಿಲ್ಲಿಸಿದ್ದೀಯಾ ಕರೆಕ್ಟ್?" ಎಂದು ಕೇಳಿದಾಗ ಅವಳನ್ನ ತಬ್ಬಿ "ಥ್ಯಾಂಕ್ಸ್ ಅಕ್ಕ, ನಾನು ಅದೇ ಆತುರದಲ್ಲಿ ನನಗೆ  ಏನೋ ಮಾಡಿಕೊಳ್ಳುತ್ತಿದ್ದೆ ಅನ್ಸುತ್ತೆ, ಆದರೆ ನನಗೆ ನನ್ನ ಮುಂದಿನ ನಿರ್ಧಾರ ಅರ್ಥ ಆಗಿದೆ, ಸಿಗದ ಪ್ರೀತಿಗೆ ಅರಸಿ ಮುಂದೆ ಸಾಗೋಕೆ ನನಗೆ ಬರಲ್ಲ, ನನ್ನ ನಿರ್ಧಾರದ ಬಗ್ಗೆ ಸ್ಪಷ್ಟತೆ ಇದೆ" ಎಂದು ಹೇಳಿದವಳ ಕೆನ್ನೆ ತಟ್ಟುತ್ತ "ಗುಡ್ ಗರ್ಲ್ , ಈಗ ಇಷ್ಟೆಲ್ಲಾ ಆಲೂಗಡ್ಡೆ ವೇಸ್ಟ್ ಮಾಡಿದ್ದಿಯ ಸಣ್ಣಗೆ ಹೆಚ್ಚಿದ್ದನ್ನ ಏನೋ ಮಾಡಿ ಮಸಾಲಾ ಹಾಕ್ತಿನಿ , ತೆಳುವಾಗಿದ್ದು ಫ್ರೆಂಚ್ ಫ್ರೈ ಉಳಿದದ್ದು ಏನು ಮಾಡೋದು?" ಎಂದು ಸ್ವಪ್ನ ಕೇಳಿದಾಗಾ "ವೇಸ್ಟ್ ಅಕ್ಕ,   ಈ ಉಳಿದದ್ದು ದೇವ್ ನೆನಪುಗಳು , ಅದನ್ನ ಇಟ್ಟುಕೊಂಡರೆ ನನಗೆ ತೊಂದ್ರೆ ಲೆಟ್ ಇಟ್ ಗೋ " ಎಂದವಳು ಹೊರ ಹೋಗುವ ಮುಂಚೆ. "ಅಕ್ಕ , ನೀನು ಕೂಡ ಪ್ರೀತಿಲಿ ಸೋತಿದ್ದೀಯಾ ಅಲ್ವಾ? ಅದಕ್ಕೆ ಈಗ ನಮ್ಮನ್ನೆಲ್ಲ ಬಿಟ್ಟು ಜರ್ಮನ್ ಹೋಗುವ ಪ್ಲಾನ್ ನನಗೆ ಎಲ್ಲ ಅರ್ಥ ಆಯಿತು ಆದರೆ ನೀನು ನಿನ್ನ ಮುಂದಿನ ಭವಿಷ್ಯದ ತೀರ್ಮಾನ ಮಾಡಿ ಆಗಿದೆ ಅಲ್ವ ಐ ಸಪೋರ್ಟ್ ಯು" ಎಂದು ಹೇಳಿ ಹೊರ ಹೋಗಿದ್ದಳು.

"ಪ್ರೀತಿ ಸಿಕ್ಕಿಲ್ಲ ಅಂತ ನರಳುವವರ ನಡುವೆ ಅದೇ ಪ್ರೀತಿಯ ನೆನಪಿನಲ್ಲಿ ಜೀವನದುದ್ದಕ್ಕೂ ಕಳೆಯುವ ದಿಟ್ಟ ನಿರ್ಧಾರ ಮಾಡಿದ್ದಳು ಸ್ವಪ್ನ, ಆ ನೆನಪುಗಳ ಜೊತೆಗೆ ಅವಳ ಪಯಣ ಸಾಗಿದ್ದು ಜರ್ಮನಿ ಕಡೆಗೆ." ನಿಜವಾದ ಪ್ರೀತಿ ಸಿಗದಿದ್ದರೂ ಅದನ್ನ ಬಲವಂತದಿಂದ ಪಡೆಯುವ ಯೋಚನೆ ಅವಳಿಗಿರಲಿಲ್ಲ. ಆದರೆ ಆ ಪ್ರೀತಿಯನ್ನು ಮರೆತು ಸಾಗುವ ಗಟ್ಟಿ ಮನಸ್ಸು ಅವಳದ್ದಲ್ಲ. ಖಿನ್ನತೆ ಅನ್ನುವುದನ್ನು ಮೆಟ್ಟಿ ನಿಂತವಳು ಕೊನೆಗೆ ಸ್ಪಷ್ಟವಾಗಿ ನಿರ್ಧರಿಸಿದ್ದು ಅದೇ ಪ್ರೀತಿಯ ನೆನಪಿನಲ್ಲಿ ಜೀವನ ಸಾಗಿಸುವುದು."

ಎಲ್ಲವನ್ನು ಆಲಿಸುತ್ತಿದ್ದವನ ಮನಸ್ಸಲ್ಲಿ ಯುದ್ಧವೇ ಆಗುತ್ತಿತ್ತು,  ಮನಸ್ಸಲ್ಲಿದ್ದದ್ದು ಹೇಳುವ ಬಯಕೆ ಅಭಿಯಲ್ಲಿತ್ತು, ಮಾತಾಡಲು ಮುಂದೆ ಬಂದವನನ್ನು ಕೈ ಸನ್ನೆಯಲ್ಲೇ ತಡೆದವಳು "ನಿನ್ನ ಮನಸ್ಸಲ್ಲಿ ನಾನು ಇದ್ದೀನಿ ಅನ್ನುವುದು ನನಗೆ ಗೊತ್ತಿದೆ ಅಭಿ, ನನಗೆ ಎಲ್ಲವನ್ನು ಮರೆತು ಹೊಸದಾಗಿ ನಿನ್ನೊಂದಿಗೆ ಜೀವನ ಮಾಡುವ ಆಸೆ, ಹಾಗಾಗಿ ಈ ಬ್ರೇಕ್ ಖಂಡಿತ ಅವಶ್ಯಕ. ಎರಡು ವರ್ಷ ನಾನು ನಾನಾಗಿ ಇರೋಕೆ ಅವಕಾಶ ಸಿಗುತ್ತಾ?" ಎಂದು ಅವನನ್ನೇ ನೋಡುತ್ತಾ ಕೇಳಿದವಳಿಗೆ ಅಪ್ಪುಗೆಯಲ್ಲಿ ಒಪ್ಪಿಗೆ ಕೊಟ್ಟಿದ್ದ. 

“ಮನಸ್ಸಿನ ಮಾತಿಗೆ ಒಪ್ಪಿಗೆ ನೀಡಿ ಪ್ರೀತಿಯ ಪಯಣಕ್ಕೆ ಹೊಸ ಮುನ್ನುಡಿ ಬರೆಯಲು ಸಜ್ಜಾಗಿದ್ದರು ಸ್ವಪ್ನ, ಅಭಿ”.

ಧನ್ಯವಾದಗಳು

Category:Fiction



ProfileImg

Written by Prajna

An accidental writer !!

0 Followers

0 Following