ನಾಟಕದ ಆರಂಭದಲ್ಲಿ ದುರ್ಯೋಧನನು ಕಿರೀಟ ಭಂಗನಾಗಿ, ತೊಡೆ ಮುರಿದುಕೊಂಡು ವೈಶಂಪಾಯನ ಸರೋವರದ ಬಳಿ ಅರ್ಧ ಸತ್ತಂತೆ ಬಿದ್ದಿರುತ್ತಾನೆ. ಆದರೆ ಅವನ ಕೋಪ ಛಲ ದ್ವೇಷ ಯಾವುದು ಕಡಿಮೆಯಾಗಿರುವುದಿಲ್ಲ. ಕುವೆಂಪು ಅವರ ಸಿದ್ಧಾಂತದಂತೆ 'ಯಾವ ಪಾತ್ರವೂ ಮುಖ್ಯವಲ್ಲ, ಯಾವುದೂ ಅಮುಖ್ಯವಲ್ಲ ' . ಅದನ್ನೇ ಈ ನಾಟಕದಲ್ಲಿ ತೋರಿಸಿದ್ದಾರೆ. ಇಲ್ಲಿ ಯುದ್ಧ, ಅದರಿಂದ ಆದ ವಿನಾಶ ಇದು ಮಾತ್ರ ಮುಖ್ಯ ಪಾತ್ರ ವಹಿಸುತ್ತದೆ.
ನಾಟಕದ ಮೊದಲನೆ ಅಂಕದಲ್ಲಿ ದ್ವಾಪರಯುಗ ದ್ವಾಪರ ದೇವನಾಗಿ ಕಾಣಿಸಿಕೊಳ್ಳುತ್ತಾನೆ. ಅವನು " ನನ್ನ ಆಡಳಿತ ಇಂದಿಗೆ ಮುಗಿದಿದೆ. ಕೌರವೇಶ್ವರನ ಅಪ್ಪಣೆ ಪಡೆದು ಹೋಗುತ್ತೇನೆ." ಎನ್ನುತ್ತಾನೆ. ದುರ್ಯೋಧನನು ಸೋತಿದ್ದರು ಅವನ ಬಳಿಗೆ ಬಂದ ದ್ವಾಪರ ದೇವನು "ಚಕ್ರವರ್ತಿ" ಎಂದು ಸಂಬೋಧಿಸುತ್ತಾನೆ. ಇದು ದುರ್ಯೋಧನನಿಗೆ ಸಿಗುವ ಗೌರವ. ದುರ್ಯೋಧನನು ನಾನೆಂತಹ ಚಕ್ರವರ್ತಿ ಎಂದಾಗ "ಮಣಿಯದೆ ಬಾಳುವ ನರನ ಎದೆಯೆ ಮಹಾ ಸ್ಥಾನ. ಸ್ವಾತಂತ್ರ್ಯವೇ ಸಾಮ್ರಾಜ್ಯ ಮಲ್ತೆ ! ಸ್ವಾತಂತ್ರಿಗಿಂ ಮಿಗಿಲಪ್ಪ ಚಕ್ರವರ್ತಿಗಳಿನ್ನೊಳರೆ ? ನೀನನಾವಗಂ ಚಕ್ರವರ್ತಿ" ಎನ್ನುತ್ತಾನೆ ದ್ವಾಪರದೇವ.
ಮುಂದಿನ ಅಂಕದಲ್ಲಿ ದುರ್ಯೋಧನನ ಒಳ್ಳೆಯ ಗುಣಗಳನ್ನು ಹಾಡಿಹೊಗಳುವ ಅವನ ಸೈನಿಕರು ಬರುತ್ತಾರೆ ಅವರು "ನಮ್ಮ ಒಡೆಯ ನಂತಿರುವ ಮತ್ತಾವ ದಾತಾರ ಈ ಭೂಮಿಯಲ್ಲಿ ಇದ್ದಾನೆ. ದಯೆಯಲ್ಲಿ ಅವನನ್ನು ಮೀರಿಸುವ ದೊರೆ ಯಾರಿದ್ದಾರೆ. ಸೇವಕರಿಗೆ ಈ ರೀತಿ ಸ್ನೇಹವನ್ನು ತೋರಿಸುವ ಚಕ್ರವರ್ತಿ ಯಾರಿದ್ದಾರೆ" ಎನ್ನುತ್ತಾರೆ. ಅದಕ್ಕೆ ಉದಾಹರಣೆಯಾಗಿ ಸೈನಿಕ ಅಸ್ವಸ್ಥ ನಾಗಿದ್ದಾಗ ರಾಜನೇ ತನ್ನ ಮನೆಯ ಬಾಗಿಲಿಗೆ ಬಂದು ವಿಚಾರಿಸಿ ಸಹಾಯ ಮಾಡಿದ ಎಂದು ವಿವರಿಸುತ್ತಾನೆ. ಇನ್ನೊಬ್ಬ ಸೈನಿಕ " ಸಮರ ಕಲಾಕೋವಿದರೆಂದು ಹೆಸರಾದ ವೀರರನ್ನು , ಬಿಲ್ಲೋಜರನ್ನು , ಇಚ್ಚಾಮರಣಿ ಗಳನ್ನು , ಚಿರಂಜೀವಿ ಗಳನ್ನು ತನ್ನ ದಳದಲ್ಲಿ ಹೊಂದಿದ್ದರೂ ನಮ್ಮ ರಾಜ ಸೋಲುವ ನೆಂದು ಯಾರು ತಿಳಿದಿದ್ದರು " ಎಂದು ಭೀಷ್ಮ , ದ್ರೋಣ, ಕೃಪ , ಅಶ್ವಥಾಮ ಎಲ್ಲರೂ ಇದ್ದೂ ದುರ್ಯೋಧನನಿಗೆ ಈ ಗತಿ ಬಂತೆಂದು ಮರುಗುತ್ತಾನೆ. ಕೊನೆಗೆ "ಸೋತೊಡೇನ್ ? ಗೆದ್ದೊ ಡೇನ್ ? ಎದ್ದೋಡೇನ್ ? ಬಿದ್ದೊಡೇನ್ ? ನರಕದೊಳಿರ್ದೊಡೇನ್ ? ಸಗ್ಗದೊಳಿರ್ದೊಡೇನ್ ? ಏನಾದರೂ ನಮ್ಮ ಒಡೆಯನೇ " ಎಂದು ಹೇಳಿ ಆತನನ್ನು ಆ ರಣರಂಗದಲ್ಲಿ ಹುಡುಕುತ್ತಾರೆ. ಇದು ದುರ್ಯೋಧನನ ಒಳ್ಳೆಯ ಆಳ್ವಿಕೆ ಅವನು ಪ್ರಜೆಗಳಿಗೆ ತೋರಿಸುತ್ತಿದ್ದ ಪ್ರೀತಿಯನ್ನು ಸಂಕೇತಿಸುತ್ತದೆ.
ಮುಂದಿನ ದೃಶ್ಯದಲ್ಲಿ ಕುವೆಂಪು ಅವರು ರನ್ನನ ಗದಾಯುದ್ಧದ ಭಾಗವನ್ನು ತೆಗೆದುಕೊಂಡು ಅದರ ಕತೆಯನ್ನು ಮುಂದುವರಿಸಿದ್ದಾರೆ. ಗದಾಯುದ್ಧದಲ್ಲಿ ದುರ್ಯೋಧನನು ವಿದುರನ ಜೊತೆಗೆ ರಣರಂಗದಲ್ಲಿ ಕೊನೆಯ ದಿನದಂದು ಭೀಷ್ಮರನ್ನು ಕಾಣಲು ಹೋಗುತ್ತಿರುತ್ತಾನೆ. ಆಗ ಮರುಳುಗಳು ಅಂದರೆ ಭೂತಗಳು ಅಲ್ಲಿ ಹಣವನ್ನು ತಿಂದು ರಕ್ತ ಕುಡಿಯಲು ಬಂದು ಸೇರುತ್ತವೆ. ಒಂದು ಸಣ್ಣ ಮರುಳು ದುರ್ಯೋಧನನನ್ನು ಕುರಿತು " ನಿನ್ನ ರಕ್ತವನ್ನು ಕುಡಿಯಲು ಕಾಯುತ್ತಿರುವೆ " ಎಂದು ಹೇಳುತ್ತದೆ. ಅವನು ಕೋಪದಿಂದ ಅದನ್ನು ಹೊಡೆಯಲು ಹೋಗುತ್ತಾನೆ. ಮುಂದೆ ರಕ್ತದ ಕೊಚ್ಚೆಯಲ್ಲಿ ದುರ್ಯೋಧನನ್ನು ಜಾರುತ್ತಾನೆ ಆಗ ವಿದುರ " ಊರುಭಂಗ ವಾಯಿತೇ ?" ಎಂದು ಕೇಳಿದಾಗ ಪಕ್ಕಕ್ಕೆ ಬಂದ ಮರುಳು " ಭೀಮನ ಕೋಪದಿಂದ ನಿನಗೆ ಊರು ಭಂಗವಾಗದೆ ಇರುವುದೆ?" ಎಂದು ರೇಗಿಸುತ್ತದೆ. ಅದರ ಮುಂದಿನ ಭಾಗದಂತೆ ರಣರಂಗದಲ್ಲಿ ಓಡಾಡುತ್ತಿದ್ದ ಎರಡು ಮರಳುಗಳ ಸಂಭಾಷಣೆಯನ್ನು ಹೇಳಿದ್ದಾರೆ. ಒಂದು ಮರುಳು " ಅಕ್ಕ , ನನಗೆ ದುರ್ಯೋಧನ ಎಲ್ಲಿ ಬಂದು ಗದೆಯನ್ನು ಬೀಸುವನೋ" ಎಂದು ಹೆದರಿಕೆ ಯಾಗಿದೆ ಎನ್ನುತ್ತದೆ. ಆಗ ಇನ್ನೊಂದು ಮರುಳು " ಇನ್ನೆಲ್ಲಿಯ ದುರ್ಯೋಧನ !! ಊರುಭಂಗವಾಗಿ ವೈಶಂಪಾಯನ ಸರೋವರದ ಹತ್ತಿರ ಬಿದ್ದಿದ್ದಾನೆ " ಎಂದು ದುರ್ಯೋಧನನ ಈಗಿನ ಸ್ಥಿತಿಯನ್ನು ಹೇಳುತ್ತದೆ.
ಕೌರವನು ಊರುಭಂಗವಾಗಿ ಬಿದ್ದಿರುವಾಗ ಅಶ್ವತ್ಥಾಮನು ಬರುತ್ತಾನೆ. ಅವನು ಮಹಾರಾಜ ಎಂದೇ ಸಂಭೋದಿಸಿ ಗೌರವವನ್ನು ಕೊಡುತ್ತಾನೆ.ಯಾವ ರೀತಿಯಾದರೂ ತನ್ನ ಮಹಾರಾಜನಿಗೆ ಸಂತೋಷ ಸಮಾಧಾನ ತರಬೇಕೆಂದು ಆಶಿಸುತ್ತಾನೆ. ಆಗ ದುರ್ಯೋಧನ ತನ್ನ ಆಪ್ತಮಿತ್ರನಾದ ಕರ್ಣನನ್ನು ನೆನೆಯುತ್ತಾನೆ.ನಾವಿಬ್ಬರೂ ಒಂದಾಗಿ ರಾಜ್ಯ ಆಳಿದೆವು, ಒಟ್ಟಿಗೆ ಊಟವನ್ನು ಮಾಡಿ ಸಂತೋಷಕೂಟಗಳನ್ನು ನೋಡಿದೆವು . ಈಗ ಒಟ್ಟಿಗೆ ಸಾಯದಿದ್ದರೂ ನಮ್ಮಿಬ್ಬರ ದೇಹವನ್ನು ಒಟ್ಟಿಗೆ ಬೆಂಕಿಗೆ ಅರ್ಪಿಸು ಎಂದು ಅಶ್ವತ್ಥಾಮ ನಲ್ಲಿ ಕೇಳಿಕೊಳ್ಳುತ್ತಾನೆ. ಇದರಲ್ಲಿ ದುರ್ಯೋಧನನ ಸ್ನೇಹ ಮತ್ತು ಪ್ರೀತಿಯನ್ನು ಕಾಣಬಹುದು.
ಕೌರವನಿಗೆ ಗುರುಹಿರಿಯರಲ್ಲಿ ಭಯ-ಭಕ್ತಿ ಇತ್ತಾದರೂ ಅವರೆಲ್ಲ ಪಾಂಡವ ಪಕ್ಷಪಾತಿಗಳು ಎಂಬ ಶಂಕೆಯೂ ಇತ್ತು .
"ನೀವೆಲ್ಲ ನನ್ನ ಕಡೆಯವರಲ್ಲವೇ , ತನುವನ್ನು ಎನಗಿತ್ತು ಮನವನ್ನು ಅವರಿಗಿತ್ತಿರಿ, ಜೋಳದ ಪಾಳಿ ಗೋಸ್ಕರವೇ , ಹೊರತು ಅಭಿಮಾನದಿಂದ ನನ್ನ ಪಕ್ಷ ವಹಿಸಲಿಲ್ಲ." ಎಂದು ಕುರುರಾಜ್ಯದ ಗುರು-ಹಿರಿಯರನ್ನು ದೂರುತ್ತಾನೆ. " ಎಲ್ಲರೂ ಮನವಿಟ್ಟು ಕಾದಿದ್ದರೆ ನನಗೆ ಪರಾಭವ ಆಗುತ್ತಿತ್ತೇ ? ಊರುಭಂಗ , ಕಿರೀಟ ಭಂಗ ಆಗುತ್ತಿತ್ತೇ? " ಎಂದು ಕೇಳುತ್ತಾನೆ.
ಕೌರವೇಶ್ವರ ನಿಗೆ ಕೃಷ್ಣನ ಮೇಲೆ ಬಹಳ ಕೋಪ ವಿರುತ್ತದೆ. ಧರ್ಮ ರಕ್ಷಣೆ ಎಂಬ ಹೆಸರಿನಲ್ಲಿ ತನ್ನ ಕಡೆಯವರನ್ನೆಲ್ಲ ಮೋಸದಿಂದ ಕೊಲ್ಲಿಸಿದ ಎಂದು ದೂಷಿಸುತ್ತಾನೆ. ಇದರಲ್ಲಿ ಯುದ್ಧದಲ್ಲಿ ನಡೆದ ಅನ್ಯಾಯ ವಿವೇಕ ಕ್ರೌರ್ಯ ಎಲ್ಲವನ್ನು ಅವನು ಒಪ್ಪಿಕೊಂಡು ತನ್ನಿಂದಲೇ ಇಷ್ಟೆಲ್ಲಾ ವಿನಾಶ ಎನ್ನುವುದನ್ನು ಹೇಳಿದೆ.
ಕುವೆಂಪು ಅವರ ಒಂದು ಅದ್ಭುತವಾದ ಕಲ್ಪನೆಯನ್ನು ನಾವು ಈ ನಾಟಕದಲ್ಲಿ ದುರ್ಯೋಧನನ ಪಾತ್ರದ ಮುಖಾಂತರ ಕಾಣಬಹುದು. ಜಗವೆಲ್ಲ ಕೃಷ್ಣನ ಮಾಯೆ!! ಎಲ್ಲರೂ ಪಾತ್ರಧಾರಿಗಳು , ಪಾತ್ರ ಮುಗಿದ ಮೇಲೆ ಎಲ್ಲರೂ ಒಂದೇ ಎನ್ನುವುದು ಕುವೆಂಪು ಅವರ ಚಿಂತನೆ. ಕೃಷ್ಣನೇ ಈ ನಾಟಕದಲ್ಲಿ ಹೇಳಿರುವಂತೆ " ಸಜ್ಜನರು , ದುರ್ಜನರು , ಪಾಪಿಗಳು ಎಂಬ ಭೇದವನ್ನು ಲೀಲೆಗೆಂದೆ ನಾನು ಮಾಡಿರುವೆ. ನಾಟಕದ ಕಳ್ಳನನ್ನು ಹಿಡಿದು ಸೆರೆಮನೆಗೆ ಹಾಕಿದರೆ ಏನು ಮಾಡಿದಂತಾಯ್ತು ? " . ಹೀಗೆ ಅವನು ಎಲ್ಲರಿಗೂ ಮುಕ್ತಿಯನ್ನು ಕೊಡುತ್ತಿರುತ್ತಾನೆ ಎಂದು ತೋರಿಸಿದ್ದಾರೆ.
ದುರ್ಯೋಧನನು ಕೋಪದಿಂದ ಕೃಷ್ಣನನ್ನು ಬೈಯುವಾಗ ಕೊನೆಯಲ್ಲಿ ಕೃಷ್ಣ! ಕೃಷ್ಣ ! ಎಂದು ಕೂಗುತ್ತಾನೆ, ಆಗ ಕೃಷ್ಣ ಇಗೋ ಬಂದೆ ಎಂದು ಪ್ರತ್ಯಕ್ಷನಾಗುತ್ತಾನೆ. ದುರ್ಯೋಧನ ಇನ್ನು ಕೋಪಗೊಂಡು "ಯಾಕೆ ಬಂದೆ? ಹೊರಟುಹೋಗು " ಎನ್ನುತ್ತಾನೆ. ಕೃಷ್ಣ ಅವನ ಮಾಯೆಯನ್ನು ಹರಿದು" ದುರ್ಯೋದನ ನಟನೆ ಸಾಕು. ಸಮಾಧಾನ ನಾಗು " ಎಂದಾಗ ದುರ್ಯೋಧನನು ಪಾತ್ರದಿಂದ ಹೊರಬಂದಂತೆ "ನನ್ನ ನಟನೆ ನೇರವಾಗಿತ್ತು ? ಸರಿಯಾಗಿ ಅಭಿನಯಿಸಿದನೇ ? " ಎಂದು ಕೇಳುತ್ತಾನೆ. ಕೃಷ್ಣ ನಟರೊಳು ಮಹಾನಟನಲ್ಲವೇ ನೀನು!!! ನಿನ್ನಂತಹ ಚುತುರ ನಟರು ಯಾರು ಇಲ್ಲ " ಎಂದು ಅಭಿನಂದಿಸುತ್ತೇನೆ. ಈ ಭಾವನೆಯಿಂದ ನೋಡಿದಾಗ ಪ್ರೇಕ್ಷಕನಿಗೆ ದುರ್ಯೋಧನನಲ್ಲಿ ಇದ್ದ ಕೋಪವು ಹೊರಟುಹೋಗಿ ಅವನು ನಮ್ಮೊಳಗೆ ಒಬ್ಬ ಎನ್ನುವ ಭಾವನೆ ಬರುತ್ತದೆ. ಮತ್ತೆ ಮಾಯೆ ಕವಿದು ಅವನು ಪಾತ್ರದಲ್ಲಿ ಲೀನವಾಗುತ್ತಾನೆ.
ಮುಂದಿನ ಅಂಕದಲ್ಲಿ ಕೃಷ್ಣನ ವಿದುರನಿಗೆ ದುರ್ಯೋಧನನ ಬಗ್ಗೆ ಹೇಳುವಾಗ " ಏನ್ ಪೌರುಷವಂತನ್ !! ಛಲದೊಳ್ ಅವನಿಗೆ ಎಣೆ ಯಾರ್ " ಎಂದು ಮೆಚ್ಚುಗೆಯ ಮಾತನ್ನು ಆಡುತ್ತಾನೆ. ಹೀಗೆ ದುರುಳ ನಾದರೂ ಕೆಟ್ಟ ಕೆಲಸಗಳನ್ನು ಮಾಡಿದರು ದುರ್ಯೋಧನನ ಪಾತ್ರಕ್ಕೆ ಕುವೆಂಪು ಅವರಿಂದ ಸಮಾನ ಪ್ರಾಮುಖ್ಯತೆ ಮತ್ತು ಮೆಚ್ಚುಗೆ ಸಿಗುತ್ತದೆ.