ಡ್ರ್ಯಾಗನ್‌ಫ್ಲೈ

ಕೀಟಲೋಕದ ಯುದ್ಧವಿಮಾನ

ProfileImg
19 Mar '24
7 min read


image

ನಾವು ಚಿಕ್ಕವರಿದ್ದಾಗ ಒಂದು ಆಟ ಆಡುತ್ತಿದ್ದೆವು. ಏರೋಪ್ಲೇನ್ ಚಿಟ್ಟೆಯನ್ನು ಹಿಡಿದು ಅದರ ಉದ್ದವಾದ ಬಾಲಕ್ಕೆ ಒಂದು ದಾರ ಕಟ್ಟಿ ಅದನ್ನು ಆಡಿಸುವುದು. ಆ ವಯಸ್ಸಿನಲ್ಲಿ ನಮ್ಮ ಆ ದುಷ್ಕೃತ್ಯದಿಂದ ಆ ಪುಟ್ಟ ಜೀವಿಗೆ ಹಿಂಸೆಯಾಗುತ್ತಿತ್ತೆಂದು ನಮಗೆ ಅರಿವಾಗುತ್ತಿರಲಿಲ್ಲ. ಇದೀಗ ಅದನ್ನು ನೆನೆದರೆ ಪಶ್ಚಾತ್ತಾಪವಾಗುತ್ತದೆ. ಆದರೆ ನಮ್ಮ ಮನಸ್ಸಿನಲ್ಲಿ ಏರೋಪ್ಲೇನ್ ಚಿಟ್ಟೆಗಳ ಬಗೆಗೆ ಕುತೂಹಲ ಆರಂಭವಾಗಿದ್ದು ಈ ಮೂಲಕವೇ ಎನ್ನುವುದು ಮಾತ್ರ ನಿಜ. ಕೀಟಜಗತ್ತಿನಲ್ಲಿ ಗಾಳಿಯಲ್ಲಿ ದೊಂಬರಾಟ ಆಡುವುದರಲ್ಲಿ ಏರೋಪ್ಲೇನ್ ಚಿಟ್ಟೆಗಳನ್ನು ಮೀರಿಸುವ ಕೀಟ ಬೇರೊಂದಿಲ್ಲ. ಬಲಿಷ್ಠವಾದ ರೆಕ್ಕೆಗಳ ನೆರವಿನಿಂದ ಇವು ಗಾಳಿಯಲ್ಲಿ ಹಾರುವುದು, ಹಾರುತ್ತಲೇ ಚಿಕ್ಕಪುಟ್ಟ ಕೀಟಗಳನ್ನು ಹಿಡಿದು ತಿನ್ನುವುದು, ಒಮ್ಮೊಮ್ಮೆ ಗಾಳಿಯಲ್ಲೇ ನಿಶ್ಚಲವಾಗಿ ನಿಲ್ಲುವುದು, ಚಕ್ಕನೆ ಸಾಗುತ್ತಿರುವ ದಿಕ್ಕು ಬದಲಿಸಿ ಹಾರುವುದು ಈ ಎಲ್ಲ ದೊಂಬರಾಟಗಳಲ್ಲಿ ಈ ಕೀಟಗಳು ಅದ್ವಿತೀಯ. ಅಲ್ಲದೆ ಅವು ನಮಗೆ ಇದುವರೆಗೆ ಸಿಕ್ಕಿರುವ ಪಳೆಯುಳಿಕೆಗಳ ಪ್ರಕಾರ ಭೂಮಿಯ ಮೇಲೆ ಮೊಟ್ಟಮೊದಲು ಹಾರಾಟವನ್ನು ಕಲಿತ ಜೀವಿಗಳು ಏರೋಪ್ಲೇನ್ ಚಿಟ್ಟೆಗಳೇ. ಅಷ್ಟೇ ಅಲ್ಲ, ಭೂಮಿಯ ಮೇಲೆ ಬದುಕಿದ್ದ ಅತಿ ದೊಡ್ಡ ಹಾರುವ ಕೀಟವೂ ಒಂದು ಜಾತಿಯ ಏರೋಪ್ಲೇನ್ ಚಿಟ್ಟೆಯೇ. ಹಾಗಾಗಿ ಕೀಟ ಜಗತ್ತಿನಲ್ಲಿ ಇವುಗಳಿಗೆ ವಿಶೇಷ ಸ್ಥಾನಮಾನವಿದೆ. 

ಪ್ರಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರು ಏರೋಪ್ಲೇನ್ ಚಿಟ್ಟೆಗಳ ಬಗೆಗೆ ಒಂದು ಪದ್ಯವನ್ನು ಬರೆದಿದ್ದಾರೆ. ಈ ಪದ್ಯದಲ್ಲಿ ಏರೋಪ್ಲೇನ್ ಚಿಟ್ಟೆಗಳೇ ಧರೆಯ ಮೇಲೆ ಹಾರಾಟವನ್ನು ಕಲಿತ ಮೊದಲ ಜೀವಿಗಳು ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ.

“ಚತುರ್ ಮೀನ್ಸ್ ಕ್ಲೆವರ್

ಆಲ್ಸೋ ಎ ಡ್ರಾಗನ್ ಫ್ಲೈ

ಸ್ಟ್ರಾಂಗ್ ಬೈ ವಿಂಗ್ಸ್ ಅಂಡ್ ಗಾಡ್ ಡ್ಯಾಮ್ ಸ್ಲೈ

ಬಾರ್ನ್ ಆಫ್ ವಾಟರ್, ಇಟ್ ಟೇಕ್ಸ್ ಟು ಸ್ಕೈ

ಫೋರ್ ಮೋಸ್ಟ್ ಆಫ್ ಅನಿಮಲ್ಸ್

ದಟ್ ಲರ್ನ್ಟ್ ಟು ಫ್ಲೈ”

ಎಂಬ ಈ ಪದ್ಯದ ಅರ್ಥ “ಚತುರ ಎಂದರೆ ಜಾಣ, ಜೊತೆಗೆ ಡ್ರಾಗನ್ ಫ್ಲೈ ಎಂಬ ಅರ್ಥವೂ ಇದೆ. ಬಲಿಷ್ಠವಾದ ರೆಕ್ಕೆಗಳನ್ನು ಹೊಂದಿದ ಇದು ಮಹಾನ್ ತಂತ್ರಶಾಲಿ, ನೀರಿನಲ್ಲೇ ಹುಟ್ಟಿ ಆಕಾಶಕ್ಕೆ ನೆಗೆಯುತ್ತದೆ, ಜೊತೆಗೆ ಇದು ಹಾರಾಟವನ್ನು ಕಲಿತ ಮೊದಲ ಪ್ರಾಣಿ” ಎಂದು. 

ಏರೋಪ್ಲೇನ್ ಚಿಟ್ಟೆ ಎಂದು ನಾವು ಸಾಮಾನ್ಯವಾಗಿ ಕರೆಯುವ ಈ ಕೀಟಗಳು “ಓಡೋನೇಟಾ” ಎಂಬ ವರ್ಗಕ್ಕೆ ಸೇರಿವೆ. ಇವುಗಳಲ್ಲಿ ಡ್ರಾಗನ್ ಫ್ಲೈ ಮತ್ತು ಡ್ಯಾಮ್ಸೆಲ್ ಫ್ಲೈ ಎಂಬ ಎರಡು ವಿಧಗಳಿವೆ. ನಾವು ಈಗ ಇವುಗಳನ್ನು ಸಂಕ್ಷಿಪ್ತವಾಗಿ ಡ್ರಾಗನ್ ಮತ್ತು ಡ್ಯಾಮ್ಸೆಲ್ ಗಳೆಂದು ಕರೆಯೋಣ. ಇವುಗಳ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಗೋಚರವಾಗುತ್ತದೆ. ಡ್ರಾಗನ್ ಗಳು ಡ್ಯಾಮ್ಸೆಲ್ ಗಳಿಗಿಂತ ಸಾಧಾರಣವಾಗಿ ದೊಡ್ಡದಾಗಿದ್ದು ಬಲಿಷ್ಠವಾಗಿರುತ್ತವೆ. ಅವುಗಳ ರೆಕ್ಕೆಗಳು ಸಹ ಡ್ಯಾಮ್ಸೆಲ್ ಗಳ ರೆಕ್ಕೆಗಳಿಗಿಂತ ಬಲವಾಗಿರುತ್ತವೆ. ಜೊತೆಗೆ ಡ್ರಾಗನ್ ಗಳು ಕುಳಿತಾಗ ರೆಕ್ಕೆಗಳನ್ನು ಅಗಲಿಸಿ ಹಿಡಿದಿರುತ್ತವೆ. ಆದರೆ ಡ್ಯಾಮ್ಸೆಲ್‌ಗಳು ರೆಕ್ಕೆಗಳನ್ನು ದೇಹಕ್ಕೆ ಸಮಾನಾಂತರವಾಗಿ ಜೋಡಿಸಿ ಹಿಡಿದಿರುತ್ತವೆ. ಡ್ರ್ಯಾಗನ್‌ಗಳ ಹಿಂದಿನ ರೆಕ್ಕೆಗಳು ಬುಡದಲ್ಲಿ ಮುಂದಿನ ರೆಕ್ಕೆಗಳಿಗಿಂತ ಹೆಚ್ಚು ಅಗಲವಾಗಿರುತ್ತವೆ, ಆದರೆ ಡ್ಯಾಮ್ಸೆಲ್ಗಳ ಎಲ್ಲ ರೆಕ್ಕೆಗಳು ಒಂದೇ ತೆರನಾಗಿರುತ್ತವೆ. ಡ್ರ್ಯಾಗನ್‌ಗಳ ಕಣ್ಣುಗಳು ಒಂದಕ್ಕೊಂದು ತಾಗಿರುತ್ತವೆ, ಆದರೆ ಡ್ಯಾಮ್ಸೆಲ್‌ಗಳ ಕಣ್ಣುಗಳು ಸ್ಪಷ್ಟವಾಗಿ ಒಂದರಿಂದ ಇನ್ನೊಂದು ಪ್ರತ್ಯೇಕಿಸಲ್ಪಟ್ಟಿರುತ್ತವೆ. ಹಾರಾಟದಲ್ಲಿ ಸಹ ಡ್ರ್ಯಾಗನ್‌ಗಳು ಅದ್ವಿತೀಯ ಹಾರಾಟಗಾರರಾದರೆ ಡ್ಯಾಮ್ಸೆಲ್‌ಗಳು ಅಷ್ಟೊಂದು ಪರಿಣತ ಹಾರಾಟಗಾರರಲ್ಲ. ತಮ್ಮ ದುರ್ಬಲವಾದ ರೆಕ್ಕೆಗಳ ನೆರವಿನಿಂದ ತಡವರಿಸುತ್ತ ಹಾರಾಡುವ ಇವು ಡ್ರಾಗನ್‌ಗಳಂತೆ ಗಾಳಿಯಲ್ಲಿ ಲಾಗ ಹಾಕಲಾರವು. ಸ್ವಲ್ಪ ಅನುಭವವಿರುವ ವ್ಯಕ್ತಿಯು ಕೂಡ ಇವುಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸಬಲ್ಲ.

ಭೂಮಿಯ ಜೀವಜಗತ್ತಿನ ಇತಿಹಾಸದಲ್ಲಿ ಮೊದಲು ಹಾರತೊಡಗಿದ್ದು ಕೀಟಗಳು. ಪಕ್ಷಿ ಮತ್ತು ಬಾವಲಿಯಂಥ ಸಸ್ತನಿಗಳ ಉಗಮವಾಗುವುದಕ್ಕೆ ಅನೇಕ ಕೋಟಿ ವರ್ಷಗಳ ಮೊದಲೇ ಕೀಟಗಳು ಹಾರಾಟ ಆರಂಭಿಸಿದವು. ಅದರಲ್ಲೂ ಮೊದಲಿಗರೆಂದರೆ ಡ್ರಾಗನ್ ಫ್ಲೈಗಳು. ಸುಮಾರು ಮೂವತ್ತೆರಡು ಕೋಟಿ ವರ್ಷಗಳ ಹಿಂದಿನ ಕೆಲವು ಪಳೆಯುಳಿಕೆಗಳು ನಮಗೆ ಇಂದು ಲಭ್ಯವಾಗಿವೆ. ಕಾರ್ಬಾನಿಫೆರಸ್ ಯುಗಕ್ಕೆ ಸೇರಿದ ಈ ಪಳೆಯುಳಿಕೆಗಳಲ್ಲಿ ಎರಡೂವರೆ ಅಡಿ ಅಗಲದ ರೆಕ್ಕೆಗಳನ್ನು ಹೊಂದಿದ್ದ ಬೃಹದಾಕಾರದ ಡ್ರಾಗನ್ ಫ್ಲೈ ಒಂದರ ಪಳೆಯುಳಿಕೆ ಪತ್ತೆಯಾಗಿದೆ. ಇದುವರೆಗೆ ನಾವು ಕಂಡುಹಿಡಿದಿರುವ ಹಾರುವ ಕೀಟಗಳಲ್ಲೆಲ್ಲ ಇದರದ್ದೇ ದೈತ್ಯಗಾತ್ರ. ಇಂದು ಒಂದೆರಡು ಇಂಚು ಮೀರದ ಡ್ರಾಗನ್ ಗಳೇ ಕೀಟಜಗತ್ತಿನಲ್ಲಿ ಭಯಾನಕ ಬೇಟೆಗಾರರಾಗಿರಬೇಕಾದರೆ ಅಂದಿನ ಆ ಡ್ರಾಗನ್ ಫ್ಲೈ‌ಗಳು ಅಂದು ಅಸ್ತಿತ್ವದಲ್ಲಿದ್ದ ಕೀಟಗಳಿಗೆ ಅದೆಂಥ ಭಯಾನಕ ಬೇಟೆಗಾರರಾಗಿದ್ದಿರಬಹುದೆಂದು ನಾವು ಊಹಿಸಬಹುದಾಗಿದೆ.

ಕೀಟಸಾಮ್ರಾಜ್ಯದಲ್ಲಿ ರೂಪಪರಿವರ್ತನೆ (ಮೆಟಾಮಾರ್ಫಾಸಿಸ್) ಎಂಬುದು ಬಹಳ ಸಾಮಾನ್ಯ ಪ್ರಕ್ರಿಯೆ, ಬೆರಳೆಣಿಕೆಯಷ್ಟು ತೀರಾ ಪ್ರಾಚೀನ ಪ್ರಭೇದಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕೀಟಗಳಲ್ಲಿ ಸಂಪೂರ್ಣ ರೂಪಪರಿವರ್ತನೆ ಅಥವಾ ಅರೆ ರೂಪಪರಿವರ್ತನೆಯನ್ನು ಕಾಣಬಹುದು. ಸಂಪೂರ್ಣ ರೂಪಪರಿವರ್ತನೆ ಎಂದರೆ ಅದರಲ್ಲಿ ಮೊಟ್ಟೆ, ಲಾರ್ವಾ, ಪ್ಯೂಪಾ ಮತ್ತು ಪ್ರೌಢಕೀಟ ಎಂಬ ನಾಲ್ಕು ಹಂತಗಳನ್ನು ಕಾಣಬಹುದು. ಆದರೆ ಕೆಲವು ಕೀಟಗಳಲ್ಲಿ ಪ್ಯೂಪಾ ಸ್ಥಿತಿ ಇರುವುದಿಲ್ಲ. ಅದನ್ನು ಅರೆ ರೂಪಪರಿವರ್ತನೆ ಎನ್ನುತ್ತಾರೆ. ನೊಣ, ಸೊಳ್ಳೆ ಮತ್ತು ಚಿಟ್ಟೆಗಳಲ್ಲಿ ಸಂಪೂರ್ಣ ರೂಪಪರಿವರ್ತನೆಯನ್ನು ಕಾಣಬಹುದು. ಆದರೆ ಡ್ರಾಗನ್ ಮತ್ತು ಡ್ಯಾಮ್ಸೆಲ್ ಫ್ಲೈಗಳದ್ದು ಅರೆರೂಪಪರಿವರ್ತನೆ. ಅವು ಪ್ಯೂಪಾ ಸ್ಥಿತಿಗೆ ಹೋಗುವುದೇ ಇಲ್ಲ. ಪ್ರೌಢ ಹೆಣ್ಣು ನೀರಿನಲ್ಲಿ ಯಾವುದಾದರೂ ಜಲಸಸ್ಯದ ಕಾಂಡದಲ್ಲಿ ಮೊಟ್ಟೆಯಿಡುತ್ತದೆ. ಮೊಟ್ಟೆಯೊಡೆದು ಹೊರಬರುವ ಲಾರ್ವಾಗಳನ್ನು ನಯಾಡ್ಸ್ ಎನ್ನುತ್ತಾರೆ. ಅವು ಸಹ ಪ್ರೌಢ ಕೀಟಗಳಂತೆಯೇ ಬೇಟೆಗಾರರು. ಅವು ಸೊಳ್ಳೆಗಳ ಲಾರ್ವಾಗಳು ಮತ್ತು ಚಿಕ್ಕಚಿಕ್ಕ ಮೀನುಗಳನ್ನು ಹಿಡಿದು ತಿನ್ನುತ್ತವೆ. ಆದ್ದರಿಂದ ಅವು ನಮಗೆ ಮಿತ್ರರೆಂದೇ ಹೇಳಬಹುದು. ಪ್ರೌಢ ಕೀಟಗಳು ಸಾಮಾನ್ಯವಾಗಿ ತಮಗಿಂತ ಚಿಕ್ಕಗಾತ್ರದ ಕೀಟಗಳನ್ನೆಲ್ಲ ಹಿಡಿದು ತಿನ್ನುತ್ತವೆ. ಮಳೆಗಾಲದಲ್ಲಿ ಕೆಲವೊಮ್ಮೆ ಗೆದ್ದಲುಹುಳಗಳು ನೆಲದಿಂದ ಗುಂಪುಗುಂಪಾಗಿ ಹೊರಬರುವುದನ್ನು ನೋಡಬಹುದು. ಆ ಸಂದರ್ಭದಲ್ಲಿ ಅವುಗಳನ್ನು ಹಿಡಿಯಲು ಕಾಗೆ, ಮೈನಾ ಇತ್ಯಾದಿ ಹಕ್ಕಿಗಳು ಗುಂಪುಗುಂಪಾಗಿ ಅವು ಹೊರಬರುವ ತೂತಿನ ಬಳಿಯೇ ಕುಳಿತು ಕಾಯುತ್ತಿರುವುದನ್ನು ಕಾಣಬಹುದು. ಆದರೆ ಡ್ರಾಗನ್ ಫ್ಲೈಗಳು ಆ ರೀತಿ ಕಾಯುವುದಿಲ್ಲ. ಅವು ಗಾಳಿಯಲ್ಲೇ ಹಾರುತ್ತ ಬರುವ ಗೆದ್ದಲುಗಳನ್ನು ಹಿಡಿದು ತಿನ್ನುತ್ತವೆ. ಜೊತೆಗೆ ಕೆಲವು ದೊಡ್ಡ ಜಾತಿಯ ಡ್ರಾಗನ್ ಫ್ಲೈಗಳು ಚಿಕ್ಕ ಜಾತಿಯ ಡ್ರಾಗನ್ ಫ್ಲೈಗಳನ್ನೇ ಹಿಡಿದು ತಿನ್ನುವುದು ಸಹ ಅಪರೂಪವಲ್ಲ.

ತಮ್ಮ ಪ್ರದೇಶವನ್ನು ಕಾಯ್ದುಕೊಳ್ಳುವ ವಿಷಯದಲ್ಲಿ ಗಂಡುಕೀಟಗಳು ಆಕ್ರಮಣಕಾರಿಯಾಗಿ ವರ್ತಿಸುತ್ತವೆ. ಬಲಿಷ್ಠ ಗಂಡುಗಳು ತಮ್ಮ ಪ್ರದೇಶದ ಬಳಿ ಬರುವ ಇತರೆ ಗಂಡುಗಳನ್ನು ಓಡಿಸುತ್ತವೆ. ಏಕೆಂದರೆ ಕೆಲವು ಸ್ಥಳಗಳಲ್ಲಿ ಕುಳಿತರೆ ತಮಗೆ ಆಹಾರವಾಗುವ ಕೀಟಗಳನ್ನು ಹೆಚ್ಚು ವಿವರವಾಗಿ ಗಮನಿಸಲು ಸಾಧ್ಯ. ಜೊತೆಗೆ ತಾವು ಕೂಡಿದ ಹೆಣ್ಣನ್ನು ಬೇರೆ ಗಂಡುಗಳು ಕೂಡಬಾರದೆಂದು ಎಲ್ಲ ಗಂಡುಗಳೂ ಬಯಸುತ್ತವೆ. ಹಾಗಾಗಿ ಹೆಣ್ಣು ಮೊಟ್ಟೆ ಇಡುವಾಗ ಗಂಡು ಸಮೀಪದಲ್ಲೇ ಕುಳಿತು ಕಾವಲು ಕಾಯುತ್ತಿರುವುದನ್ನು ಕಾಣಬಹುದು. 

ಪ್ರಪಂಚದಾದ್ಯಂತ ಇಂದು ಸುಮಾರು ಮೂರು ಸಾವಿರ ಜಾತಿಯ ಡ್ರಾಗನ್ ಮತ್ತು ಡ್ಯಾಮ್ಸೆಲ್ ಫ್ಲೈಗಳನ್ನು ಗುರುತಿಸಲಾಗಿದೆ. ಈ ಜಾತಿಗಳು ಹನ್ನೊಂದು ಕುಟುಂಬಗಳ ಮುನ್ನೂರ ನಲವತ್ತೆಂಟು ಜೀನಸ್‌ಗಳಲ್ಲಿ ಹಂಚಿಹೋಗಿವೆ. ಅಂಟಾರ್ಕ್ಟಿಕಾ ಒಂದನ್ನು ಹೊರತುಪಡಿಸಿ ಬೇರೆಲ್ಲ ಖಂಡಗಳಲ್ಲಿ ಈ ಜೀವಿಗಳು ಅಸ್ತಿತ್ವದಲ್ಲಿವೆ. ಆದರೆ ಸಮುದ್ರಮಟ್ಟಕ್ಕಿಂತ ಹೆಚ್ಚು ಎತ್ತರ ಹೋದಂತೆಲ್ಲ ಅವುಗಳ ಅಸ್ತಿತ್ವ ವಿರಳವಾಗುತ್ತ ಹೋಗುತ್ತದೆ. ತೀರಾ ಶೀತಪ್ರದೇಶಗಳಲ್ಲಿ ಅವು ಕಂಡುಬರುವುದಿಲ್ಲ. ಜೊತೆಗೆ ಡ್ರಾಗನ್ ಫ್ಲೈಗಳು ಡ್ಯಾಮ್ಸೆಲ್ ಫ್ಲೈಗಳಿಗಿಂತ ಹೆಚ್ಚು ವಿಸ್ತಾರವಾಗಿ ಹರಡಿವೆ ಮತ್ತು ಹೆಚ್ಚಿನ ಕಡೆಗಳಲ್ಲಿ ಕಂಡುಬರುತ್ತವೆ. 

ಇವುಗಳ ಬಗೆಗೆ ಹೆಚ್ಚಿನ ಮಾಹಿತಿಯನ್ನು ನೀಡುವ ಪುಸ್ತಕಗಳೆಂದರೆ ಫ್ರೇಸರ್ ಅವರು ಬರೆದಿರುವ “ಫೌನಾ ಆಫ್ ಬ್ರಿಟಿಷ್ ಇಂಡಿಯಾ” ಸರಣಿಯ ಎರಡು ಆವೃತ್ತಿಗಳು ಹಾಗೂ ಡಾ. ಕೆ.ಎ. ಸುಬ್ರಮಣ್ಯನ್ ಅವರು ಬರೆದಿರುವ “ಡ್ರಾಗನ್ ಫ್ಲೈಸ್ ಆಫ್ ಇಂಡಿಯಾ”. ಈ ಪುಸ್ತಕವಂತೂ ಹವ್ಯಾಸಿಗಳಿಗೆ ಅತ್ಯುಪಯುಕ್ತವಾದ ಕೈಪಿಡಿ. ತಮ್ಮ ಸುತ್ತಮುತ್ತಲ ಪರಿಸರದಲ್ಲಿ ಕಾಣುವ ಏರೋಪ್ಲೇನ್ ಚಿಟ್ಟೆಗಳನ್ನು ಗುರುತಿಸಲು ಈ ಪುಸ್ತಕ ಬಹಳ ಉಪಯುಕ್ತ. ಪ್ರತಿಯೊಂದು ಪ್ರಭೇದವನ್ನು ಗುರುತಿಸಲು ಇರುವ ಮುಖ್ಯವಾದ ಲಕ್ಷಣಗಳನ್ನು ಇದರಲ್ಲಿ ಸ್ಪಷ್ಟವಾಗಿ ಕೊಟ್ಟಿದ್ದಾರೆ. ಹೀಗಾಗಿ ಇದೊಂದು ಅತ್ಯಂತ ಉಪಯುಕ್ತವಾದ ಪುಸ್ತಕ ಎಂಬುದರಲ್ಲಿ ಅನುಮಾನವೇ ಇಲ್ಲ. ಪಕ್ಷಿಗಳ ಬಗೆಗೆ ಸಲೀಂ ಅಲಿಯವರ ಪುಸ್ತಕ ಹೇಗೋ ಡ್ರಾಗನ್ ಫ್ಲೈಗಳ ಬಗೆಗೆ ಸುಬ್ರಮಣ್ಯನ್ ಪುಸ್ತಕ ಹಾಗೆ. 

ಸಾಮಾನ್ಯವಾಗಿ ಕೀಟಗಳ ವಿಷಯಕ್ಕೆ ಬಂದರೆ ಸೌಂದರ್ಯಾರಾಧಕರು ಬಹುಮುಖ್ಯವಾಗಿ ಗಮನಿಸುವುದು ಚಿಟ್ಟೆ ಮತ್ತು ಪತಂಗಗಳತ್ತ ಮಾತ್ರ. ಆದರೆ ಏರೋಪ್ಲೇನ್ ಚಿಟ್ಟೆಗಳಲ್ಲಿ ಸಹ ವರ್ಣರಂಜಿತವಾದ ಪ್ರಭೇದಗಳು ಬಹಳಷ್ಟಿವೆ. ಒಂದೇ ವ್ಯತ್ಯಾಸವೆಂದರೆ ಅವುಗಳ ರೆಕ್ಕೆಗಳು ಚಿಟ್ಟೆ, ಪತಂಗಗಳ ರೆಕ್ಕೆಗಳಂತೆ ಅಪಾರದರ್ಶಕವಲ್ಲ. ಹೆಚ್ಚಿನವು ಪಾರದರ್ಶಕ ಮತ್ತು ಇನ್ನೂ ಕೆಲವು ಅರೆಪಾರದರ್ಶಕ ರೆಕ್ಕೆಗಳನ್ನು ಹೊಂದಿವೆ. ಕೆಲವು ಪ್ರಭೇದಗಳಂತೂ ಬಣ್ಣಬಣ್ಣದ ರೆಕ್ಕೆಗಳನ್ನು ಹೊಂದಿವೆ. ಮತ್ತೆ ಕೆಲವು ಜಾತಿಗಳ ರೆಕ್ಕೆಗಳು ಪಾರದರ್ಶಕವಾಗಿದ್ದರೂ ಉದ್ದನೆಯ ಬಾಲ ವರ್ಣರಂಜಿತವಾಗಿದೆ. ಮುಂಜಾನೆಯ ವೇಳೆ ಕೆಲವು ಏರೋಪ್ಲೇನ್ ಚಿಟ್ಟೆಗಳು ನೀರಿನ ಮೂಲಗಳ ಬಳಿ ಗಾಳಿಯಲ್ಲಿ ದೊಂಬರಾಟ ನಡೆಸುತ್ತಿದ್ದರೆ ಅವುಗಳ ವರ್ಣರಂಜಿತವಾದ ದೇಹ ಸೂರ್ಯನ ಎಳೆಬಿಸಿಲಿನಲ್ಲಿ ಮಿರಮಿರನೆ ಮಿಂಚುತ್ತದೆ. ಆಗ ಅವುಗಳನ್ನು ನೋಡಲು ಎರಡು ಕಣ್ಣುಗಳು ಸಾಲವು.

ವರ್ಣರಂಜಿತ ಏರೋಪ್ಲೇನ್ ಚಿಟ್ಟೆಗಳಲ್ಲಿ “ಕ್ರಿಮ್ಸನ್ ಟೇಲ್ಡ್ ಮಾರ್ಷ್ ಹಾಕ್” ಎಂಬುದು ಅತ್ಯಂತ ಪ್ರಮುಖವಾದ ಜಾತಿ. ಇದರಲ್ಲಿ ಗಂಡಿನ ಬಾಲ ಕೆಂಬಣ್ಣದಿಂದ ಹೊಳೆಯುತ್ತದೆ. ಪಶ್ಚಿಮ ಭಾರತ, ಜಪಾನ್ ಮತ್ತು ಜಾವಾಗಳಲ್ಲಿ ಯಥೇಚ್ಛವಾಗಿ ಕಂಡುಬರುವ ಈ ಜಾತಿ ನೀರಿನ ಮೂಲಗಳ ಬಳಿ ಹಾರಾಡುತ್ತ ಚಿಕ್ಕಪುಟ್ಟ ಕೀಟಗಳಿಗಾಗಿ ಹೊಂಚುಹಾಕುತ್ತಿರುತ್ತದೆ. ಇದರ ಒಂದು ವಿಶೇಷವೆಂದರೆ ಕೆಂಬಣ್ಣದ ಬಾಲ ಗಂಡಿಗೆ ಮಾತ್ರ ಸೀಮಿತ. ಹೆಣ್ಣುಕೀಟವು ತೀರಾ ಸಾಧಾರಣ ಬೂದುಬಣ್ಣ ಹೊಂದಿದ್ದು ಗಂಡಿನಂತೆ ಎದ್ದುಕಾಣುವುದಿಲ್ಲ. ಇದೇ ರೀತಿಯ ಬಣ್ಣ ವ್ಯತ್ಯಾಸವನ್ನು ನಾವು ಅನೇಕ ಜಾತಿಯ ಪಕ್ಷಿಗಳಲ್ಲಿ ಪ್ರಧಾನವಾಗಿ ಗುರುತಿಸಬಹುದು. 

ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಕಂಡುಬರುವ ಇನ್ನೊಂದು ಡ್ರಾಗನ್ ಫ್ಲೈ ಎಂದರೆ ಪೈಡ್ ಪ್ಯಾಡಿ ಸ್ಕಿಮ್ಮರ್. ಇದರ ರೆಕ್ಕೆ ಅರ್ಧದವರೆಗೆ ಕಪ್ಪುಬಣ್ಣ. ಆಮೇಲೆ ಒಂದು ಬಿಳಿಪಟ್ಟೆ, ನಂತರ ಪಾರದರ್ಶಕ ವಿನ್ಯಾಸ. ಒಟ್ಟಾರೆ ನೋಡಲು ಇದೊಂದು ಸುಂದರವಾದ ಕೀಟ ಎನ್ನಲು ಯಾವುದೇ ಅಡ್ಡಿ ಇಲ್ಲ. ಆದರೆ ಯಥಾಪ್ರಕಾರ ಹೆಣ್ಣುಕೀಟಕ್ಕೆ ಈ ಅಲಂಕಾರಿಕ ಬಣ್ಣ ಇಲ್ಲ. ಅದು ತೀರಾ ಸಾಧಾರಣ ಬಣ್ಣ ಹೊಂದಿರುತ್ತದೆ. ಭಾರತ, ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ ಮತ್ತು ಚೀನಾ ದೇಶಗಳಲ್ಲಿ ವ್ಯಾಪಕವಾಗಿ ಕಂಡುಬರುವ ಜಾತಿ ಇದು. 

ಏರೋಪ್ಲೇನ್ ಚಿಟ್ಟೆಗಳು ಎಷ್ಟೇ ಭಯಂಕರ ಬೇಟೆಗಾರರಾಗಿದ್ದರೂ ಸಹ ಪ್ರಕೃತಿಯಲ್ಲಿ ಅವುಗಳಿಗೂ ಸಹ ಬೇಕಾದಷ್ಟು ಶತ್ರುಗಳಿವೆ. ಹೆಣ್ಣು ಕೀಟವೊಂದರ ಜೀವನದ ಅತ್ಯಂತ ಕಷ್ಟದ ಕಾಲವೆಂದರೆ ನೀರಿನಲ್ಲಿ ಮೊಟ್ಟೆಯಿಡುವ ಕಾಲ. ನೀರಿನಲ್ಲಿ ಮೊಟ್ಟೆ ಇಡಲು ಕೆಲವು ಜಾತಿಯ ಏರೋಪ್ಲೇನ್ ಚಿಟ್ಟೆಗಳ ಹೆಣ್ಣುಗಳು ನೀರಿನಲ್ಲಿ ಮುಳುಗಿ ಅಲ್ಲಿನ ಜಲಸಸ್ಯಗಳ ಕಾಂಡವನ್ನು ಕೊರೆದು ಅದರೊಳಗೆ ಮೊಟ್ಟೆಯಿಡುತ್ತವೆ. ಹುಟ್ಟಿದ ಲಾರ್ವಾಗಳು ನೇರವಾಗಿ ನೀರಿಗೆ ಹೋಗಲಿ ಎಂಬ ಉದ್ದೇಶ ಇವುಗಳದ್ದು. ಆದರೆ ಈ ತ್ಯಾಗವೇ ಅವುಗಳ ಪಾಲಿಗೆ ಮರಣ ಶಾಸನವಾಗಿ ಬದಲಾಗುವ ಸಾಧ್ಯತೆಯೂ ಇಲ್ಲದಿಲ್ಲ. ಕೆಲವು ಕೀಟಗಳು ನೀರಿನೊಳಗೇ ಮೀನು, ಕಪ್ಪೆ ಮತ್ತಿತರ ಜೀವಿಗಳಿಗೆ ಆಹಾರವಾಗುತ್ತವೆ. ಮತ್ತೆ ಕೆಲವಕ್ಕೆ ನೀರಿನಲ್ಲಿ ಒಮ್ಮೆ ಮುಳುಗಿದ ನಂತರ ನೀರಿನ ಮೇಲ್ಮೈಯನ್ನು ಭೇದಿಸಿಕೊಂಡು ಹೊರಬರಲು ಕೆಲವಕ್ಕೆ ಸಾಧ್ಯವಾಗುವುದಿಲ್ಲ. ಅವು ನೀರಿನಲ್ಲೇ ಮುಳುಗಿ ಸಾಯುತ್ತವೆ. ಮತ್ತೆ ಕೆಲವು ಮೇಲಕ್ಕೆ ಬಂದರೂ ಜೇಡ, ಹಲ್ಲಿ, ಹಕ್ಕಿ ಇತ್ಯಾದಿಗಳಿಗೆ ಊಟವಾಗುತ್ತವೆ. ಈ ಎಲ್ಲ ಶತ್ರುಗಳಿಂದ ತಪ್ಪಿಸಿಕೊಂಡರೂ ವಂಶಾಭಿವೃದ್ಧಿ ಮಾಡಿದ ಮೇಲೆ ಈ ಕೀಟಗಳು ಹೆಚ್ಚುಕಾಲ ಬದುಕುವುದಿಲ್ಲ. ಏಕೆಂದರೆ ಅವುಗಳ ಆಯುಷ್ಯವೇ ಅಷ್ಟು. ಸಂತಾನಾಭಿವೃದ್ಧಿಯೊಂದೇ ಅವುಗಳ ಅಂತಿಮ ಗುರಿ. 

ಏರೋಪ್ಲೇನ್ ಚಿಟ್ಟೆಗಳು ಸಹ ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ತಮ್ಮದೇ ಆದ ಪಾತ್ರ ವಹಿಸುತ್ತವೆ. ಆದರೆ ಅವುಗಳನ್ನು ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲದಿರುವುದು ದುರದೃಷ್ಟಕರ. ಹೇರಳ ಬಗೆಯ ಉಪದ್ರವಕಾರಿ ಕೀಟಗಳನ್ನು ನಿಯಂತ್ರಿಸುವ ಜೊತೆಗೆ ಅನೇಕ ಬಗೆಯ ಜೀವಿಗಳಿಗೆ ಆಹಾರವೂ ಆಗಿರುವ ಈ ಪುರಾತನ ಕೀಟಗಳು ಇತ್ತೀಚೆಗೆ ಗಂಭೀರವಾದ ಅಪಾಯವನ್ನು ಎದುರಿದುತ್ತಿವೆ. ಅದಕ್ಕೆ ಮನುಷ್ಯರೇ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆವಾಸಸ್ಥಾನಗಳ ನಾಶ ಮತ್ತು ಕೀಟನಾಶಕಗಳ ಮಿತಿಮೀರಿದ ಬಳಕೆ ಇದಕ್ಕೆ ಬಹುಮುಖ್ಯ ಕಾರಣ. ಸಾಮಾನ್ಯವಾಗಿ ಜೌಗುಪ್ರದೇಶಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವರ ಅತಿಕ್ರಮಣದಿಂದ ಜೌಗು ಪ್ರದೇಶಗಳೇ ಅಪರೂಪವಾಗುತ್ತಿವೆ. ಜೊತೆಗೆ ಜಿರಲೆ, ಸೊಳ್ಳೆಯಂಥ ಉಪದ್ರವಕಾರಿ ಕೀಟಗಳಿಗೆ ಹೋಲಿಸಿದರೆ ಯಾವುದೇ ಪರಿಸರಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಏರೋಪ್ಲೇನ್ ಚಿಟ್ಟೆಗಳಿಗೆ ಕಡಿಮೆಯಿದೆ. ಜಿರಲೆಯಂತೆ ಮನುಷ್ಯರ ವಾಸಸ್ಥಾನಗಳಲ್ಲೇ ಸಂದುಗೊಂದುಗಳಲ್ಲಿ ಸೇರಿಕೊಂಡು ಅವು ಬದುಕಲಾರವು. ಜೊತೆಗೆ ಸೊಳ್ಳೆಗಳಂತೆ ಪ್ರಾಣಿಗಳ ರಕ್ತ ಅಥವಾ ಸಸ್ಯಗಳ ರಸ ಹೀರಿಯೂ ಬದುಕಲಾರವು. ಸೊಳ್ಳೆಗಳಂತೆ ಮನುಷ್ಯವಾಸದ ಸಮೀಪದಲ್ಲೇ ತೆಂಗಿನ ಚಿಪ್ಪು, ಹೂಕುಂಡಗಳಲ್ಲಿ ನಿಂತ ನೀರಿನಲ್ಲಿಯೂ ಮೊಟ್ಟೆಯಿಡಲಾರವು. ಆದ್ದರಿಂದ ಆವಾಸಸ್ಥಾನದ ನಾಶಕ್ಕೆ ಈ ಜೀವಿಗಳು ಬಹಳ ಕ್ಷಿಪ್ರವಾಗಿ ಪ್ರತಿಕ್ರಿಯಿಸುತ್ತವೆ. ಮೇಲಾಗಿ ಇವುಗಳ ಮಹತ್ವವೇನೆಂಬುದು ಸಹ ಇನ್ನೂ ಮನುಷ್ಯರಿಗೆ ಸಂಪೂರ್ಣವಾಗಿ ಅರಿವಾದಂತಿಲ್ಲ. ಹಾಗಾಗಿ ಅವುಗಳ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರಲಿಲ್ಲ. ಆದರೆ ಕಳೆದ ಕೆಲವು ವರ್ಷಗಳಿಂದ ಪರಿಸರ ಕಾಳಜಿ ಹೊಂದಿರುವ ಕೆಲವು ನಿಸರ್ಗಾಸಕ್ತರು ಜನರಲ್ಲಿ ಈ ಪುಟ್ಟ ಕೀಟಗಳ ಬಗೆಗೆ ಅರಿವು ಮೂಡಿಸಲು, ಅವುಗಳ ಮಹತ್ವದ ಬಗೆಗೆ ಮನದಟ್ಟು ಮಾಡಿಸಲು “ಡ್ರಾಗನ್ ಫ್ಲೈ ಇಂಡಿಯಾ ಮೀಟ್” ಎಂಬ ಕಾರ್ಯಕ್ರಮವನ್ನು ಪ್ರತಿವರ್ಷ ಹಮ್ಮಿಕೊಳ್ಳುತ್ತಿದ್ದಾರೆ. 2015ರಲ್ಲಿ ಸೆಪ್ಟೆಂಬರ್ 11ರಿಂದ 14ರವರೆಗೆ ಕೇರಳದ ತಟ್ಟೆಕ್ಕಾಡ್ ಪಕ್ಷಿಧಾಮದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಇದರಿಂದಾಗಿ ತಡವಾಗಿಯಾದರೂ ಜನರಲ್ಲಿ ಇವುಗಳ ಬಗ್ಗೆ ಅರಿವು ಮೂಡಲಾರಂಭಿಸಿದೆ. 

ಡ್ರಾಗನ್ ಫ್ಲೈಗಳು ಅತ್ಯಂತ ಪ್ರಾಚೀನ ಕೀಟಗಳಾದ್ದರಿಂದ ಅವುಗಳು ವೈಜ್ಞಾನಿಕವಾಗಿಯೂ ಬಹಳ ಪ್ರಾಮುಖ್ಯತೆ ಪಡೆದಿವೆ. ಜೊತೆಗೆ ಅವುಗಳಲ್ಲಿ ಮೂರುಸಾವಿರ ಪ್ರಭೇದಗಳಿರುವುದರಿಂದ “ಅಬ್ಬಾ, ಇಷ್ಟೊಂದು ವೈವಿಧ್ಯವೇ?” ಎಂದು ನಮಗೆ ಅಚ್ಚರಿಯಾಗಬಹುದಾದರೂ ಬೇರೆ ವರ್ಗದ ಕೀಟಗಳಿಗೆ ಹೋಲಿಸಿದರೆ ಅವುಗಳ ವೈವಿಧ್ಯ ಬಹಳ ಕಡಿಮೆ. ಏಕೆಂದರೆ ಚಿಪ್ಪಿನ ರೆಕ್ಕೆಗಳುಳ್ಳ “ಕೋಲಿಯಾಪ್ಟೆರ” (ಓಡುಹುಳ)ಗಳ ವರ್ಗದಲ್ಲಿ ನಾಲ್ಕು ಲಕ್ಷ, “ಡಿಪ್ಟೆರಾ” (ನೊಣ, ಸೊಳ್ಳೆ ಇತ್ಯಾದಿಗಳ ವರ್ಗ)ದಲ್ಲಿ ಎರಡು ಲಕ್ಷ ನಲವತ್ತು ಸಾವಿರ, “ಲೆಪಿಡಾಪ್ಟೆರಾ” (ಪಾತರಗಿತ್ತಿ ಮತ್ತು ಪತಂಗಗಳ ವರ್ಗ)ದಲ್ಲಿ ಒಂದು ಲಕ್ಷದ ಎಪ್ಪತ್ತೈದು ಸಾವಿರ, “ಹೈಮೆನೋಪ್ಟೆರಾ” (ಜೇನ್ನೊಣ, ಕಣಜ ಮತ್ತು ಇರುವೆಗಳ ವರ್ಗ)ದಲ್ಲಿ ಒಂದು ಲಕ್ಷದ ಐವತ್ತು ಸಾವಿರ, “ಹೆಮಿಪ್ಟೆರಾ” (ಸಿಕಾಡಾ ಮತ್ತು ಏಫಿಡ್ ಗಳ ವರ್ಗ)ದಲ್ಲಿ ಎಂಬತ್ತು ಸಾವಿರ ಜಾತಿಗಳಿವೆ. ಇವಕ್ಕೆ ಹೋಲಿಸಿದರೆ ಓಡೋನೇಟಾ ವರ್ಗ ಎಷ್ಟೊಂದು ಬಡವಾದದ್ದು ಎಂಬುದು ಅರ್ಥವಾಗುತ್ತದೆ. ಆದ್ದರಿಂದ ಅವು ಬೇರೆ ವರ್ಗಗಳಿಗಿಂತ ಮನುಷ್ಯರ ಆಕ್ರಮಣದಿಂದ ಹೆಚ್ಚು ಅಪಾಯಕ್ಕೀಡಾಗುವುದು ಸಹಜವಾಗಿಯೇ ಇದೆ. ಆದರೆ ಅವುಗಳ ಮಹತ್ವವನ್ನು ಅರಿತ ನಾವು ಅವುಗಳನ್ನು ಉಳಿಸಲು ಪ್ರಯತ್ನಿಸಲೇಬೇಕಾಗಿದೆ. ಇಲ್ಲವಾದರೆ ಪ್ರಕೃತಿ ನಮ್ಮನ್ನು ಎಂದೆಂದಿಗೂ ಕ್ಷಮಿಸುವುದಿಲ್ಲ!

Category:Nature



ProfileImg

Written by Srinivasa Murthy

Verified