ಡಾಲ್ಫಿನ್

ಮುದ್ದುಮುಖದ ಸಾಗರವಾಸಿ ಸ್ತನಿ

ProfileImg
27 Mar '24
7 min read


image

“ಡಾಲ್ಫಿನ್”

ಈ ಹೆಸರನ್ನು ಕೇಳಿದರೇ ಪ್ರಾಣಿಪ್ರಿಯರಿಗೆ ಮೈಯೆಲ್ಲ ಏನೋ ಪುಳಕ. ಮುದ್ದುಮುಖದ, ಸದಾ ಚಟುವಟಿಕೆಯಿಂದ ಜಿಗಿದಾಡುವ ಈ ಸಾಗರಜೀವಿಗಳು ಮನುಷ್ಯರೊಂದಿಗೆ ಆತ್ಮೀಯ ಸಂಬಂಧ ಹೊಂದಿ ಎಲ್ಲರ ಪ್ರೀತಿಗೆ ಪಾತ್ರವಾಗಿವೆ. ಅನೇಕ ಅಕ್ವೇರಿಯಂಗಳಲ್ಲಿ ಇವುಗಳನ್ನು ಮೋಜಿಗಾಗಿ ಸಾಕಿ ಅವುಗಳಿಂದ ನಾನಾ ರೀತಿಯ ಚಮತ್ಕಾರಗಳನ್ನು ಮಾಡಿಸುತ್ತಾರೆ. ಡಾಲ್ಫಿನ್‌ಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳೆಂದು ಹೆಸರಾಗಿವೆ. ಮನುಷ್ಯರಂತೆಯೇ ಡಾಲ್ಫಿನ್‌ಗಳಲ್ಲಿ ಸಹ ಒಂದರ ನಡುವೆ ಮತ್ತೊಂದು ಆತ್ಮೀಯ ಸಂಬಂಧ ಹೊಂದಿರುತ್ತವೆ. ಬೇಟೆಯಾಡುವಾಗ ಅನೇಕ ಡಾಲ್ಫಿನ್‌ಗಳು ಸೇರಿ ಸಮಾಲೋಚನೆ ನಡೆಸಿ ಬೇಟೆಯಾಡುವುದು ಕಂಡುಬಂದಿದೆ. ಆದ್ದರಿಂದ ಅವುಗಳನ್ನು ಮನುಷ್ಯ ಮತ್ತು ಇತರ ವಾನರರನ್ನು ಹೊರತುಪಡಿಸಿದರೆ ಅತ್ಯಂತ ಬುದ್ಧಿವಂತ ಸಸ್ತನಿಗಳೆಂದು ಕರೆಯಲಡ್ಡಿಯಿಲ್ಲ.

ಡಾಲ್ಫಿನ್‌ಗಳನ್ನು ಸ್ಥೂಲವಾಗಿ ಸಾಗರವಾಸಿ ಡಾಲ್ಫಿನ್‌ಗಳು ಮತ್ತು ನದಿವಾಸಿ ಡಾಲ್ಫಿನ್‌ಗಳು ಎಂದು ವಿಂಗಡಿಸಬಹುದು. ಸಾಗರವಾಸಿ ಡಾಲ್ಫಿನ್‌ಗಳದ್ದೇ ಅತ್ಯಂತ ಹೆಚ್ಚಿನ ವೈವಿಧ್ಯ. ಸುಮಾರು ಮೂವತ್ತೆಂಟು ಪ್ರಭೇದಗಳನ್ನು ಇದುವರೆಗೆ ಗುರುತಿಸಲಾಗಿದೆ. ಆದರೆ ನದಿವಾಸಿಗಳಲ್ಲಿ ಇರುವುದು ನಾಲ್ಕೇ ಪ್ರಭೇದಗಳು. ಸಾಗರವಾಸಿ ಡಾಲ್ಫಿನ್‌ಗಳು ಸಾಮಾನ್ಯವಾಗಿ ನೂರಾರು ಗುಂಪುಗುಂಪಾಗಿ ಸಂಚರಿಸುತ್ತಿರುತ್ತವೆ. ಗುಂಪಿನಲ್ಲಿರುವುದರಿಂದ ಬೇಟೆಯಾಡುವುದಕ್ಕೆ ಮತ್ತು ಶತ್ರುಗಳಿಂದ ಪಾರಾಗುವುದಕ್ಕೆ ಎರಡಕ್ಕೂ ಸುಲಭ. ಆದ್ದರಿಂದ ಅವು ಸದಾಕಾಲ ಹತ್ತಾರು, ಕೆಲವೊಮ್ಮೆ ನೂರಾರು ಮತ್ತು ಒಮ್ಮೊಮ್ಮೆ ಸಾವಿರಾರು ಡಾಲ್ಫಿನ್‌ಗಳು ಸಹ ಗುಂಪಾಗಿ ಸಂಚರಿಸುವುದಿದೆ. 

ಸಾಮಾನ್ಯವಾಗಿ ಎಲ್ಲರೂ ನೋಡಿರುವುದು ಒಂದೇ ಜಾತಿಯ ಡಾಲ್ಫಿನ್‌ಗಳನ್ನು. ಅಕ್ವೇರಿಯಂಗಳಲ್ಲಿ ಸಾಕುವುದು ಕೇವಲ ಬಾಟಲ್ ನೋಸ್ಡ್ ಡಾಲ್ಫಿನ್‌ಗಳನ್ನು. ಏಕೆಂದರೆ ಅವು ಡಾಲ್ಫಿನ್‌ಗಳಲ್ಲೆಲ್ಲ ಅತ್ಯಂತ ಕುಶಾಗ್ರಮತಿಯವು ಮತ್ತು ಅತ್ಯಂತ ಚಟುವಟಿಕೆಯಿಂದ ಇರುವಂಥವು. ಆದ್ದರಿಂದ ಅವುಗಳ ಒಡನಾಟವನ್ನು ಎಲ್ಲರೂ ಇಷ್ಟಪಡುತ್ತಾರೆ. ಸ್ನೇಹಪರವಾದ ಮುಗ್ಧಜೀವಿಗಳಾದ ಅವುಗಳ ಈ ಸ್ವಭಾವವನ್ನು ಒಮ್ಮೊಮ್ಮೆ ಕೆಲವರು ದುರುಪಯೋಗಪಡಿಸಿಕೊಳ್ಳುವುದು ಮಾತ್ರ ವಿಪರ್ಯಾಸ. ಒಮ್ಮೆ ಒಂದು ಅಕ್ವೇರಿಯಂನಲ್ಲಿ ಒಂದು ಡಾಲ್ಫಿನ್ ಮನುಷ್ಯನೊಬ್ಬನ ಮೇಲೆ ದಾಳಿ ನಡೆಸಿ ಕೊಂದುಹಾಕಿತು. ಅದಕ್ಕೆ ನರಹಂತಕನೆಂದು ಹಣೆಪಟ್ಟಿ ಕಟ್ಟಿ ಅದನ್ನು ಕೊಂದುಹಾಕಿದರು. ಆದರೆ ಆಮೇಲೆ ಗೊತ್ತಾಗಿದ್ದೇನೆಂದರೆ ಅದರ ಮೂಗಿನ ಹೊಳ್ಳೆಗಳೊಳಕ್ಕೆ ಐಸ್ ಕ್ರೀಂ ಕಡ್ಡಿಗಳನ್ನೆಲ್ಲ ಚುಚ್ಚಿ ಏನೇನೋ ಚಿತ್ರಹಿಂಸೆ ನೀಡಿದ್ದರು. ಆದ್ದರಿಂದಲೇ ಅದು ತಾಳ್ಮೆ ಕಳೆದುಕೊಂಡು ದಾಳಿ ನಡೆಸಿತ್ತು. 

ಡಾಲ್ಫಿನ್‌ಗಳು ಸಿಟೇಶನ್ಸ್ ವರ್ಗಕ್ಕೆ ಸೇರಿದ ಜೀವಿಗಳು. ಈ ವರ್ಗದಲ್ಲಿ ಹಲ್ಲಿನ ತಿಮಿಂಗಿಲಗಳು ಮತ್ತು ಬಲೀನ್ ತಿಮಿಂಗಿಲಗಳು ಎಂಬ ಎರಡು ಬೇರೆಬೇರೆ ಉಪವರ್ಗಗಳಿವೆ. ಬಲೀನ್ ತಿಮಿಂಗಿಲಗಳ ಗುಂಪಿನಲ್ಲೇ ಜಗತ್ತಿನಲ್ಲಿ ಯಾವುದೇ ಕಾಲಘಟ್ಟದಲ್ಲಿ ಬದುಕಿದ್ದ ಅತಿದೊಡ್ಡ ಪ್ರಾಣಿಯಾದ ನೀಲಿ ತಿಮಿಂಗಿಲ ಬರುತ್ತದೆ. ಹಲ್ಲಿನ ತಿಮಿಂಗಿಲಗಳ ಉಪವರ್ಗದ ಅತಿದೊಡ್ಡ ಕುಟುಂಬವಾದ “ಡೆಲ್ಫಿನಿಡೇ” ಕುಟುಂಬದಲ್ಲಿ ಎಲ್ಲ ಡಾಲ್ಫಿನ್‌ಗಳೂ ಬರುತ್ತವೆ. ಹೆಚ್ಚಿನೆಲ್ಲ ಡಾಲ್ಫಿನ್‌ಗಳದ್ದೂ ಹೆಚ್ಚುಕಡಿಮೆ ಒಂದೇ ರೂಪ. ಸ್ಥೂಲವಾಗಿ ಮೀನನ್ನು ಹೋಲುವ ದೇಹ, ಉದ್ದನೆಯ ಮೂತಿ, ಸಾಮಾನ್ಯವಾಗಿ ನೀಲಿ ಅಥವಾ ಬೂದುಬಣ್ಣ ಇದೇ ಡಾಲ್ಫಿನ್‌ಗಳ ಸಾಮಾನ್ಯ ವಿವರಣೆ. 

ಡಾಲ್ಫಿನ್‌ಗಳ ಜೊತೆಗೆ ಅವುಗಳ ಸಮೀಪದ ಸಂಬಂಧಿಗಳಾದ ಪಾರ್ಪಾಯ್ಸ್‌ಗಳು ಸಹ ಪ್ರಮುಖ ಸಾಗರವಾಸಿ ಸಸ್ತನಿಗಳಾಗಿವೆ. ಸಾಗರವಾಸಿ ಸಸ್ತನಿಗಳಲ್ಲೇ ಅವು ಅತಿ ಚಿಕ್ಕವು. ಅವು ಗಾತ್ರದಲ್ಲಿ ಡಾಲ್ಫಿನ್‌ಗಳಿಗಿಂತ ಚಿಕ್ಕವು ಮತ್ತು ಅವುಗಳ ವೈವಿಧ್ಯವೂ ಕಡಿಮೆಯೇ. ಕೇವಲ ಆರು ಪ್ರಭೇದದ ಪಾರ್ಪಾಯ್ಸ್ ಗಳು ಮಾತ್ರ ಅಸ್ತಿತ್ವದಲ್ಲಿವೆ. ಅವುಗಳ ಮೂತಿ ಸಹ ಡಾಲ್ಫಿನ್ ಮೂತಿಯಂತೆ ಉದ್ದಕ್ಕಿರದೆ ಸಾಮಾನ್ಯವಾಗಿರುತ್ತದೆ. ಈ ವ್ಯತ್ಯಾಸಗಳಿಂದ ಪಾರ್ಪಾಯ್ಸ್‌ಗಳನ್ನು ಸುಲಭವಾಗಿ ಗುರುತಿಸಬಹುದು. 

ಡಾಲ್ಫಿನ್‌ಗಳ ಕುಟುಂಬದಲ್ಲೇ ಅತಿದೊಡ್ಡ ಮತ್ತು ಅತ್ಯಂತ ಭಯಾನಕ ಬೇಟೆಗಾರ ಪ್ರಾಣಿಗಳೆಂದರೆ “ಕಿಲ್ಲರ್ ವ್ಹೇಲ್” ಅಥವಾ ಓರ್ಕಾಗಳು. ಕೊಲೆಗಡುಕ ತಿಮಿಂಗಿಲ ಎಂದೇ ಹೆಸರಾಗಿರುವ ಈ ಬೃಹತ್ ಡಾಲ್ಫಿನ್‌ಗಳು ಮೂವತ್ತು ಅಡಿ ಉದ್ದ ಬೆಳೆಯುತ್ತವೆ ಮತ್ತು ಹತ್ತು ಟನ್ ತನಕ ತೂಗುತ್ತವೆ. ಸಣ್ಣಪುಟ್ಟ ಡಾಲ್ಫಿನ್‌ಗಳಿಂದ ಹಿಡಿದು ಬೃಹತ್ ನೀಲಿ ತಿಮಿಂಗಿಲದ ತನಕ ಇವು ಸಿಕ್ಕಿದ್ದನ್ನೆಲ್ಲ ಬೇಟೆಯಾಡುತ್ತವೆ. ಸೀಲ್‌ಗಳು ಮತ್ತು ಸೀಲಯನ್‌ಗಳು ಇವುಗಳ ಅತಿಮುಖ್ಯ ಆಹಾರ. ಗುಂಪುಗುಂಪಾಗಿ ಚಲಿಸುವ ಇವುಗಳ ಬಗೆಗೆ ತಿಳಿದಿರುವ ಸೀಲ್ ಮತ್ತು ಸೀ ಲಯನ್‌ಗಳು ಸಾಮಾನ್ಯವಾಗಿ ಸಮುದ್ರದ ಅಂಚಿನಿಂದ ಸಾಕಷ್ಟು ದೂರದಲ್ಲೇ ಇರುತ್ತವೆ. ಆದರೆ ಎಷ್ಟೇ ದೂರದಲ್ಲಿದ್ದರೂ ಆಹಾರಕ್ಕಾಗಿ ಕೊನೆಗೊಮ್ಮೆ ಸಮುದ್ರಕ್ಕೆ ಅವು ಮರಳಲೇಬೇಕು. ಅದೇ ಕ್ಷಣಕ್ಕಾಗಿ ಕಾದುಕುಳಿತಿರುವ ಓರ್ಕಾಗಳು ಎಲ್ಲ ಕಡೆಗಳಿಂದ ಅವುಗಳ ಮೇಲೆ ದಾಳಿ ನಡೆಸಿ ಕೊಂದುಹಾಕುತ್ತವೆ. ಒಮ್ಮೊಮ್ಮೆ ದಡಕ್ಕೆ ತೀರಾ ಸಮೀಪ ಬಂದು ಓರ್ಕಾಗಳು ದಾಳಿ ನಡೆಸುತ್ತವೆ. ಬೇರೆ ಯಾವುದೇ ತಿಮಿಂಗಿಲ ಅಷ್ಟೊಂದು ಧೈರ್ಯವಾಗಿ ಮತ್ತು ರಾಜಾರೋಷವಾಗಿ ದಂಡೆಯ ಸಮೀಪಕ್ಕೆ ಬಂದು ದಾಳಿ ನಡೆಸುವುದಿಲ್ಲ. ಜೊತೆಗೆ ಬೂದು ತಿಮಿಂಗಿಲ, ಚೌದಲೆ ತಿಮಿಂಗಿಲ, ಮಿಂಕ್ ತಿಮಿಂಗಿಲ, ಹೀಗೆ ಎಲ್ಲ ಜಾತಿಯ ತಿಮಿಂಗಿಲಗಳೂ ಓರ್ಕಾಗಳ ಆಕ್ರಮಣಕ್ಕೆ ತುತ್ತಾಗುತ್ತವೆ. ಪ್ರೌಢ ತಿಮಿಂಗಿಲಗಳ ಮೇಲೆ ಅವು ಸಾಮಾನ್ಯವಾಗಿ ದಾಳಿ ಮಾಡುವುದಿಲ್ಲ. ಆದರೆ ಒಮ್ಮೊಮ್ಮೆ ಸಮುದ್ರದಲ್ಲಿ ಕೆಲವು ತಾಯಿ ತಿಮಿಂಗಿಲಗಳು ತಮ್ಮ ಈಗಷ್ಟೇ ಹುಟ್ಟಿದ ಮರಿಯ ಜೊತೆ ಸಹಸ್ರಾರು ಮೈಲುಗಳ ಪ್ರಯಾಣ ಕೈಗೊಳ್ಳುತ್ತವೆ. ಅದು ಓರ್ಕಾಗಳಿಗೆ ಸುವರ್ಣಾವಕಾಶವನ್ನೊದಗಿಸುತ್ತದೆ. ತಾಯಿ ಎಷ್ಟೇ ಎಚ್ಚರಿಕೆ ವಹಿಸಿದರೂ ಗುಂಪಾಗಿ ಬಂದು ದಾಳಿಯಿಡುವ ಓರ್ಕಾಗಳ ಎದುರು ಅದು ಅಸಹಾಯಕವಾಗಿ ತನ್ನ ಮರಿಯ ಸಾವನ್ನು ಕಣ್ಣಾರೆ ನೋಡುವಂತಾಗುತ್ತದೆ.

ಡಾಲ್ಫಿನ್‌ಗಳ ಕುಟುಂಬದಲ್ಲೇ ದೊಡ್ಡದಾದ ಆರು ಪ್ರಭೇದಗಳಿಗೆ ತಿಮಿಂಗಿಲ ಎಂಬ ನಾಮಧೇಯವನ್ನು ಸೇರಿಸಿ ಹೇಳುತ್ತಾರೆ. ಅವುಗಳಲ್ಲಿ ಓರ್ಕಾ ಕೂಡ ಒಂದು. ಉಳಿದಂತೆ ಫಾಲ್ಸ್ ಕಿಲ್ಲರ್ ವ್ಹೇಲ್, ಪಿಗ್ಮಿ ಕಿಲ್ಲರ್ ವ್ಹೇಲ್, ಮೆಲನ್ ಹೆಡೆಡ್ ವ್ಹೇಲ್, ಲಾಂಗ್ ಫಿನ್ಡ್ ಪೈಲಟ್ ವ್ಹೇಲ್ ಮತ್ತು ಶಾರ್ಟ್ ಫಿನ್ಡ್ ಪೈಲಟ್ ವ್ಹೇಲ್ ಇತರೆ ಐದು ಪ್ರಭೇದಗಳು. ಈ ಡಾಲ್ಫಿನ್‌ಗಳೆಲ್ಲ ಬೇರೆ ಪ್ರಭೇದದ ಡಾಲ್ಫಿನ್‌ಗಳಿಗಿಂತ ದೊಡ್ಡದಾಗಿರುವ ಕಾರಣ ತಿಮಿಂಗಿಲ ಎಂದು ಕರೆಯುತ್ತಾರೆ. ವಾಸ್ತವವಾಗಿ ಎಲ್ಲ ಡಾಲ್ಫಿನ್ ಮತ್ತು ತಿಮಿಂಗಿಲಗಳೂ ಒಂದೇ ವರ್ಗಕ್ಕೆ ಸೇರಿದ ಸಸ್ತನಿಗಳು. ಈ ಪೈಕಿ ಓರ್ಕಾ ಒಂದನ್ನು ಹೊರತುಪಡಿಸಿದರೆ ಇನ್ನೆಲ್ಲ ಸಾಮಾನ್ಯವಾಗಿ ಮೀನುಗಳನ್ನೇ ತಿಂದು ಬದುಕುವಂಥವು.

ಡಾಲ್ಫಿನ್‌ಗಳ ಬುದ್ಧಿವಂತಿಕೆಯನ್ನು ಅಭ್ಯಸಿಸಲು ವಿಜ್ಞಾನಿಗಳು ಅನೇಕ ಪ್ರಯತ್ನಗಳನ್ನು ಕೈಗೊಂಡರು. ಮೊದಲು ಭೂಮಿಯ ಮೇಲೆ ಮನುಷ್ಯ, ವಾನರಗಳು ಮತ್ತು ಆನೆಗಳಿಗೆ ಮಾತ್ರ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬಗಳನ್ನು ಗುರುತಿಸುವ ಸಾಮರ್ಥ್ಯವಿದೆಯೆಂದು ಭಾವಿಸಲಾಗಿತ್ತು. ಆದರೆ ನಂತರ ಅಂಥ ಸಾಮರ್ಥ್ಯ ಡಾಲ್ಫಿನ್‌ಗಳಿಗೂ ಇದೆಯೆಂದು ತಿಳಿದುಬಂತು. ಅವುಗಳಲ್ಲೂ ಮರಿಗಳಲ್ಲಿ ಕಲಿಯುವ ಉತ್ಸಾಹ, ಕುತೂಹಲ ಹೆಚ್ಚಾಗಿರುವುದನ್ನು ವಿಜ್ಞಾನಿಗಳು ಗಮನಿಸಿದರು. ನೀರಿನಲ್ಲಿ ಗುಳ್ಳೆಗಳನ್ನು ಮೂಡಿಸುವುದು, ನೀರಿನಲ್ಲಿ ಗಾಳಿಗುಳ್ಳೆಗಳ ವೃತ್ತಗಳನ್ನು ಏರ್ಪಡಿಸಿದರೆ ಕುತೂಹಲದಿಂದ ಅವುಗಳನ್ನು ಒಡೆಯುವುದು, ಸುತ್ತಮುತ್ತ ನೆರೆದ ಮನುಷ್ಯರ ಬಳಿಗೆ ಕುತೂಹಲದಿಂದ ಧಾವಿಸುವುದು ಹೀಗೆ ಎಲ್ಲ ರೀತಿಯಿಂದಲೂ ಅವು ಅದ್ವಿತೀಯ ನಡವಳಿಕೆಯನ್ನು ತೋರುತ್ತಿರುತ್ತವೆ. ಆದ್ದರಿಂದಲೇ ಅಕ್ವೇರಿಯಂಗಳಲ್ಲಿ ಸಾಮಾನ್ಯವಾಗಿ ಡಾಲ್ಫಿನ್‌ಗಳನ್ನು ಸಾಕಿಯೇ ಇರುತ್ತಾರೆ. 

ಡಾಲ್ಫಿನ್‌ಗಳು ಮಾನವಸ್ನೇಹಿ ನಡವಳಿಕೆಯಿಂದಲೂ ಹೆಸರಾಗಿವೆ. ಅನೇಕ ಸಂದರ್ಭಗಳಲ್ಲಿ ಡಾಲ್ಫಿನ್‌ಗಳು ಶಾರ್ಕ್ ಗಳ ದಾಳಿಗೆ ತುತ್ತಾಗಿದ್ದ ಮನುಷ್ಯರನ್ನು ರಕ್ಷಿಸಿದ್ದ ಉದಾಹರಣೆಗಳಿವೆ. ಹತ್ತಾರು ಡಾಲ್ಫಿನ್‌ಗಳು ಮನುಷ್ಯನನ್ನು ಸುತ್ತುವರೆದು ಶಾರ್ಕ್ ಗಳಿಗೆ ಅವನನ್ನು ಮುಟ್ಟಲು ಸಾಧ್ಯವಾಗದಂತೆ ಗೋಡೆ ನಿರ್ಮಿಸಿ ರಕ್ಷಿಸಿದ ಉದಾಹರಣೆಗಳಿವೆ. ಇನ್ನೂ ಅನೇಕ ಸಂದರ್ಭಗಳಲ್ಲಿ ಈಜುಬಾರದೆ ಮುಳುಗುತ್ತಿದ್ದವರನ್ನು ಸಹ ಅವು ಮೇಲೆತ್ತಿ ತಂದು ರಕ್ಷಿಸಿದ ಉದಾಹರಣೆಗಳಿವೆ. ಇವನ್ನೆಲ್ಲ ಗಮನಿಸಿದಾಗ ಮನುಷ್ಯನೊಬ್ಬನ ಮೇಲೆ ದಾಳಿ ನಡೆಸಿ ಕೊಂದುಹಾಕಿದ ಡಾಲ್ಫಿನ್ ಕೂಡ ಸ್ವಭಾವತಃ ನರಹಂತಕನಲ್ಲ ಮತ್ತು ಅದು ಸಂಯಮ ಕಳೆದುಕೊಂಡು ದಾಳಿ ನಡೆಸಲು ಮನುಷ್ಯನೇ ನೇರ ಕಾರಣ ಎಂಬುದರಲ್ಲಿ ಯಾವುದೇ ಅನುಮಾನವೂ ಉಳಿಯುವುದಿಲ್ಲ. 

ಡಾಲ್ಫಿನ್‌ಗಳು ಬೇಟೆಯಾಡುವುದನ್ನು ಕೂಡ ನೋಡುವುದೇ ಒಂದು ಸೊಗಸು. ಅನೇಕ ಡಾಲ್ಫಿನ್‌ಗಳು ಒಟ್ಟಾಗಿ ಸಾಮಾನ್ಯವಾಗಿ ಹೆರ್ರಿಂಗ್ ಮತ್ತು ಸಾರ್ಡೀನ್ ಮೀನುಗಳನ್ನು ಬೇಟೆಯಾಡುತ್ತವೆ. ಈ ಮೀನುಗಳು ಒಮ್ಮೊಮ್ಮೆ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಒಂದೆಡೆ ನೆರೆದಿರುತ್ತವೆ. ಆಗ ಒಟ್ಟಾಗಿ ಅವುಗಳನ್ನು ಸುತ್ತುವರೆದು ಒಂದೆಡೆ ಕೂಡಿಹಾಕಿ ನಂತರ ಸುತ್ತಲಿಂದ ದಾಳಿನಡೆಸಿ ಹಿಡಿಯುತ್ತವೆ. ಮೀನುಗಳ ಈ ರಾಶಿಯಲ್ಲಿ ಯಾವುದೇ ಒಂದು ಮೀನನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿ ಹಿಡಿಯುವುದು ಅಸಾಧ್ಯ, ಏಕೆಂದರೆ ಸದಾ ಕ್ಷಿಪ್ರಗತಿಯಲ್ಲಿ ಚಲಿಸುತ್ತಿರುವ ಇವುಗಳನ್ನು ಹಿಡಿಯುವುದು ಬಹಳ ಕಷ್ಟ. ಒಂಟೊಂಟಿಯಾಗಿದ್ದರೆ ಇವುಗಳನ್ನು ಹಿಡಿಯುವುದು ಡಾಲ್ಫಿನ್‌ಗಳಿಗೆ ಅಸಾಧ್ಯವೇ ಸರಿ. 

ಸಾಮಾನ್ಯವಾಗಿ ಅವು ಬೆಚ್ಚಗಿನ ವಾತಾವರಣವಿರುವ ಸಾಗರಗಳಲ್ಲಿಯೇ ವಾಸಿಸುತ್ತವೆ. ಅತ್ಯಂತ ಶೀತಲವಾದ ಸಾಗರಗಳಲ್ಲಿ ಅವುಗಳ ಅಸ್ತಿತ್ವ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಕೆಲವು ಜಾತಿಯ ಡಾಲ್ಫಿನ್‌ಗಳು ಶಿತಲ ಸಾಗರಗಳಿಂದ ಬೆಚ್ಚಗಿನ ಸಾಗರಗಳಿಗೆ ವಲಸೆ ಹೋಗುತ್ತವೆ. ಆದರೆ ಓರ್ಕಾಗಳು ಮಾತ್ರ ಶೀತಲವಾದ ಆರ್ಕ್ ಟಿಕ್ ಮತ್ತು ಅಂಟಾರ್ಕ್ಟಿಕ್ ಸಾಗರಗಳಲ್ಲೂ ಕಾಣಿಸಿಕೊಳ್ಳುತ್ತವೆ. ಅದಕ್ಕೆ ಕಾರಣ ಅವುಗಳ ಮುಖ್ಯ ಆಹಾರವಾದ ಸೀಲ್ ಮತ್ತು ಸೀಲಯನ್ ಗಳು ಇರುವುದೇ ಈ ಚಳಿ ಕೊರೆಯುವ ಪ್ರದೇಶಗಳಲ್ಲಿ. 

ನದಿವಾಸಿ ಡಾಲ್ಫಿನ್‌ಗಳಲ್ಲಿ ಇರುವುದು ಕೇವಲ ನಾಲ್ಕೇ ನಾಲ್ಕು ಪ್ರಭೇದಗಳು. ಈ ನಾಲ್ಕು ಪ್ರಭೇದಗಳೂ ಸಾಗರವಾಸಿ ಡಾಲ್ಫಿನ್‌ಗಳಿಗಿಂತ ಸಂಪೂರ್ಣ ವಿಭಿನ್ನವಾಗಿರುವುದಲ್ಲದೆ ತಮ್ಮತಮ್ಮಲ್ಲೇ ವ್ಯತ್ಯಾಸವನ್ನು ಹೊಂದಿವೆ. ಆದ್ದರಿಂದ ಅವೆಲ್ಲವನ್ನೂ ಪ್ರತ್ಯೇಕವಾಗಿ ಬೇರೆಬೇರೆ ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಗಂಗಾ ನದಿಯ ಡಾಲ್ಫಿನ್, ಅಮೆಜಾನ್ ನದಿಯ ಡಾಲ್ಫಿನ್, ಚೈನೀಸ್ ರಿವರ್ ಡಾಲ್ಫಿನ್ ಮತ್ತು ಲಾಪ್ಲೇಟಾ ಡಾಲ್ಫಿನ್ ಇವೇ ಈ ನಾಲ್ಕು ಡಾಲ್ಫಿನ್ ಪ್ರಭೇದಗಳು. ಈ ಪೈಕಿ ಚೈನೀಸ್ ರಿವರ್ ಡಾಲ್ಫಿನ್ ಸಂಪೂರ್ಣವಾಗಿ ನಾಮಾವಶೇಷವಾಗಿದೆ ಎಂದೇ ನಂಬಲಾಗಿದೆ. ಏಕೆಂದರೆ 2006ರ ನಂತರ ಇದನ್ನು ಕಂಡವರಿಲ್ಲ. ಆಧುನಿಕ ಮಾನವನ ಐಷಾರಾಮಕ್ಕೆ ಬಲಿಯಾದ ಜೀವಿಗಳ ಸಾಲಿಗೆ ಇದೂ ಸೇರಿದೆ. ಇದಕ್ಕೆ ಬೈಜಿ ಎಂಬ ಹೆಸರೂ ಇದೆ. ಅಮೆಜಾನ್ ನದಿಯ ಡಾಲ್ಫಿನ್‌ಗೆ ಬೋಟೋ ಎಂಬ ಹೆಸರಿದೆ. ಇದು ನದಿವಾಸಿ ಡಾಲ್ಫಿನ್‌ಗಳಲ್ಲೇ ಅತಿದೊಡ್ಡ ಡಾಲ್ಫಿನ್ ಎಂದೇ ಹೆಸರಾಗಿದೆ. ಸುಮಾರು ಎಂಟು ಅಡಿ ಉದ್ದವಿರುವ ಇವು ಇನ್ನೂರು ಕಿಲೋಗ್ರಾಂ ತೂಗುತ್ತವೆ. ಗುಲಾಬಿ ಬಣ್ಣದ ಇವು ನದಿವಾಸಿ ಡಾಲ್ಫಿನ್‌ಗಳ ಪೈಕಿ ಅತ್ಯಂತ ವೈವಿಧ್ಯಮಯವಾದ ಆಹಾರವನ್ನು ಸೇವಿಸುತ್ತವೆ. ಇವುಗಳ ಆಹಾರವು ಐವತ್ತಕ್ಕೂ ಹೆಚ್ಚು ಬೇರೆಬೇರೆ ಜಾತಿಯ ಮೀನುಗಳನ್ನು ಒಳಗೊಂಡಿದೆ. ಐದು ಸೆಂಟಿಮೀಟರ್ ನಿಂದ ಹಿಡಿದು ಎಂಬತ್ತು ಸೆಂಟಿಮೀಟರ್ ತನಕ ಬೇರೆಬೇರೆ ಗಾತ್ರದ ಮೀನುಗಳನ್ನು ಹಿಡಿದು ತಿನ್ನುತ್ತವೆ. ಬಹುಮುಖ್ಯವಾಗಿ ಸಿಕ್ಲಿಡ್ ಮತ್ತು ಪಿರಾನ್ಹಾಗಳನ್ನು ತಿನ್ನುತ್ತವೆ. 

ನದಿವಾಸಿ ಡಾಲ್ಫಿನ್‌ಗಳಿಗೂ ಸಾಗರವಾಸಿ ಡಾಲ್ಫಿನ್‌ಗಳಿಗೂ ಅನೇಕ ವ್ಯತ್ಯಾಸಗಳಿವೆ. ಬಹುಮುಖ್ಯ ವ್ಯತ್ಯಾಸವೆಂದರೆ ಅವುಗಳ ದೃಷ್ಟಿ. ನದಿಗಳಲ್ಲಿ ಸಾಮಾನ್ಯವಾಗಿ ನೀರು ತಿಳಿಯಾಗಿರುವುದಿಲ್ಲ. ಗಂಗಾ, ಅಮೆಜಾನ್ ಗಳಂಥ ಬೃಹತ್ ನದಿಗಳಲ್ಲಿ ಕೆಸರುಮಿಶ್ರಿತ ನೀರೇ ಸಾಮಾನ್ಯ. ಇಡೀ ನದಿಯೆಲ್ಲ ರಾಡಿಯಾದಂತೆ ಇರುವುದೂ ಇದೆ. ಹಾಗಾಗಿ ಕಣ್ಣುಗಳ ಉಪಯೋಗ ಅಲ್ಲಿ ಏನೂ ಇಲ್ಲ. ಆದ್ದರಿಂದಲೇ ನದಿವಾಸಿ ಡಾಲ್ಫಿನ್‌ಗಳೆಲ್ಲ ಬಹುಪಾಲು ಕುರುಡಾಗಿರುತ್ತವೆ. ಅವು ಸೋನಾರ್ ತಂತ್ರಜ್ಞಾನದಿಂದಲೇ ತಮ್ಮ ದಾರಿ ಕಂಡುಕೊಳ್ಳುತ್ತವೆ. ಜೊತೆಗೆ ತಮ್ಮ ಬೇಟೆಯನ್ನು ಕಂಡುಹಿಡಿಯುವುದೂ ಸಹ ಹೀಗೆಯೇ. ತಮ್ಮ ಬಾಯಿಯಿಂದಲೇ ಅವು ಹೊರಬಿಟ್ಟ ಸಂಜ್ಞೆಗಳು ಎದುರಿನ ವಸ್ತುವಿಗೆ ಬಡಿದು ಪ್ರತಿಫಲಿಸಿದಾಗ ಅದನ್ನು ಗ್ರಹಿಸಿ ಅವು ವಸ್ತುವಿನ ಗಾತ್ರ, ದೂರ ಎಲ್ಲವನ್ನೂ ಕರಾರುವಾಕ್ಕಾಗಿ ಗ್ರಹಿಸಿ ಹಿಡಿಯುತ್ತವೆ. ಸಾಗರವಾಸಿ ಡಾಲ್ಫಿನ್‌ಗಳೂ ಇದನ್ನು ಬಳಸುತ್ತವೆಯಾದರೂ ಅವುಗಳ ದೃಷ್ಟಿ ಚೆನ್ನಾಗಿಯೇ ಇರುತ್ತದೆ.

ಸಾಗರವಾಸಿ ಡಾಲ್ಫಿನ್‌ಗಳಲ್ಲಿ ಮೊದಲೇ ತಿಳಿಸಿದಂತೆ ವೈವಿಧ್ಯಗಳೂ ಜಾಸ್ತಿ, ಜೊತೆಗೆ ಅವುಗಳ ನಡವಳಿಕೆಗಳಲ್ಲೂ ಅನೇಕ ವಿಧದ ವ್ಯತ್ಯಾಸಗಳನ್ನು ಕಾಣಬಹುದು. ಎಲ್ಲ ಡಾಲ್ಫಿನ್‌ಗಳ ಪೈಕಿ ಸ್ಪಿನ್ನರ್ ಡಾಲ್ಫಿನ್ ಎಂಬ ಒಂದು ವಿಧ ತುಂಬಾ ವಿಶೇಷವಾದದ್ದು, ಏಕೆಂದರೆ ಅದು  ನೀರಿನಿಂದ ಮೇಲಕ್ಕೆ ಹಾರಿ ಗಾಳಿಯಲ್ಲಿ ಗಿರಿಗಿರಿ ತಿರುಗುತ್ತ ಮತ್ತೆ ನೀರಿಗೆ ಧುಮುಕುತ್ತದೆ. ಆದ್ದರಿಂದಲೇ ಇದಕ್ಕೆ ಈ ಹೆಸರು ಬಂದಿದೆ. ಇದರ ಚಿನ್ನಾಟವನ್ನು ನೋಡಲು ತುಂಬಾ ಚೆನ್ನಾಗಿರುತ್ತದೆ. ಜೊತೆಗೆ ಬೆನ್ನಿನ ಮೇಲೆ ಈಜುರೆಕ್ಕೆಗಳು (ಡಾರ್ಸಲ್ ಫಿನ್) ಇಲ್ಲದ ಇನ್ನೆರಡು ಜಾತಿಯ ಡಾಲ್ಫಿನ್‌ಗಳಿವೆ. ಇವುಗಳನ್ನು ಉತ್ತರದ ರೈಟ್ ತಿಮಿಂಗಿಲ ಡಾಲ್ಫಿನ್ ಮತ್ತು ದಕ್ಷಿಣದ ರೈಟ್ ತಿಮಿಂಗಿಲ ಡಾಲ್ಫಿನ್ ಎಂದು ಕರೆಯುತ್ತಾರೆ. ರೈಟ್ ತಿಮಿಂಗಿಲಗಳಿಗೂ ಡಾರ್ಸಲ್ ಫಿನ್ ಇರುವುದಿಲ್ಲ, ಆದ್ದರಿಂದ ಈ ಡಾಲ್ಫಿನ್‌ಗಳನ್ನು ಅವುಗಳ ಹೆಸರಿನ ಆಧಾರದ ಮೇಲೆ ಹೆಸರಿಸಲಾಗಿದೆ.

ಡಾಲ್ಫಿನ್‌ಗಳು ಮನುಷ್ಯನ ಸ್ನೇಹಿತರಾಗಿಯೂ ಪ್ರಸಿದ್ಧವಾಗಿವೆ. ಸಂಕಷ್ಟದ ಸಮಯದಲ್ಲಿ ಮನುಷ್ಯರನ್ನು ರಕ್ಷಿಸುವುದೂ ಅಲ್ಲದೆ ಮಾನಸಿಕ ಖಿನ್ನತೆಗೆ ಒಳಗಾದ ಮನುಷ್ಯರ ಚಿಕಿತ್ಸೆಯಲ್ಲಿ ಡಾಲ್ಫಿನ್ ಥೆರಪಿ ತುಂಬಾ ಹೆಸರುವಾಸಿಯಾಗಿದೆ. ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಡಾಲ್ಫಿನ್‌ಗಳ ಜೊತೆಗಿನ ಒಡನಾಟ ಅವರ ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಎಂಬುದು ಕೆಲವು ವಿಜ್ಞಾನಿಗಳ ಸಂಶೋಧನೆಯ ಸಾರಾಂಶ. ನಾಯಿ, ಬೆಕ್ಕು ಮುಂತಾದ ಸಾಕುಪ್ರಾಣಿಗಳ ಜೊತೆಗಿನ ಒಡನಾಟವೂ ಇದೇ ಫಲಿತಾಂಶವನ್ನು ನೀಡುತ್ತದೆ. ಆದರೆ ಇದರ ಬಗ್ಗೆ ವಿಜ್ಞಾನಿಗಳಲ್ಲಿ ಸಹಮತವಿಲ್ಲ. ಅನೇಕ ವಿಜ್ಞಾನಿಗಳು ಡಾಲ್ಫಿನ್‌ಗಳ ಜೊತೆಗಿನ ಒಡನಾಟದಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎನ್ನುತ್ತಾರೆ. ಅದೇನೇ ಆಗಿದ್ದರೂ ಡಾಲ್ಫಿನ್ ಮನುಷ್ಯನ ಆತ್ಮೀಯ ಸ್ನೇಹಿತನಾಗಿರಬಲ್ಲದು ಎಂಬುದು ಮಾತ್ರ ಸತ್ಯ. 

ಸಾಗರದಲ್ಲಿ ಚಿನ್ನಾಟವಾಡುವುದು ಡಾಲ್ಫಿನ್‌ಗಳಿಗೆ ಬಹಳ ಪ್ರಿಯವಾದದ್ದು. ಬಹುತೇಕ ಎಲ್ಲ ಜಾತಿಯ ಡಾಲ್ಫಿನ್‌ಗಳೂ ನೀರಿನ ಮೇಲೆ ನೆಗೆದು ಮತ್ತೆ ಮರಳಿ ನೀರಿಗೆ ಧುಮುಕುವ ಆಟವನ್ನು ಆಡುತ್ತವೆ. ಅವು ತಿಮಿಂಗಿಲಗಳಂತೆ ಸಸ್ತನಿಗಳಾದ್ದರಿಂದ ಉಸಿರೆಳೆದುಕೊಳ್ಳಲು ನೀರಿನಿಂದ ಮೇಲಕ್ಕೆ ಬರಲೇಬೇಕು. ಹಾಗೆ ಉಸಿರೆಳೆದುಕೊಳ್ಳುವಾಗ ನೀರಿನಿಂದ ಮೇಲಕ್ಕೆ ಚಿಮ್ಮಿ ಹಾರುತ್ತವೆ. ಹಾರುವಾಗಲೂ ಒಂದೊಂದು ಡಾಲ್ಫಿನ್ ಒಂದೊಂದು ರೀತಿ ಹಾರುತ್ತದೆ. ಕೆಲವು ಡಾಲ್ಫಿನ್‌ಗಳು ಗುಂಪಾಗಿ ಚಿನ್ನಾಟವಾಡುವುದಂತೂ ನೋಡಲು ಕಣ್ಣಿಗೆ ಹಬ್ಬವೇ ಸರಿ. 

ಡಾಲ್ಫಿನ್‌ಗಳ ಮತ್ತೊಂದು ವಿಶೇಷವೆಂದರೆ ಅವು ನಿದ್ರಿಸುವಾಗ ಮೆದುಳಿನ ಅರ್ಧಭಾಗ ಮಾತ್ರ ನಿದ್ರಿಸುತ್ತಿರುತ್ತದೆ ಹಾಗೂ ಇನ್ನರ್ಧ ಭಾಗ ಎಚ್ಚರವಾಗಿಯೇ ಇರುತ್ತದೆ. ಆದ್ದರಿಂದ ಉಸಿರಾಡಲು ಮತ್ತು ಶತ್ರುಗಳಿಂದ ಪಾರಾಗಲು ಅವು ಸದಾ ಸನ್ನದ್ಧವಾಗಿಯೇ ಇರುತ್ತವೆ. ಈ ವಿಶಿಷ್ಠ ನಿದ್ರಾಕ್ರಮ ಯಾವುದೇ ನೆಲವಾಸಿ ಸಸ್ತನಿಗೂ ಸಿದ್ಧಿಸಿಲ್ಲ ಎಂಬುದನ್ನು ನೆನಪಿಸಿಕೊಂಡರೆ ಅವುಗಳ ವಿಶೇಷತೆ ನಮಗೆ ಅರ್ಥವಾಗುತ್ತದೆ. ಆದರೆ ಅಕ್ವೇರಿಯಂಗಳಲ್ಲಿರುವ ಡಾಲ್ಫಿನ್‌ಗಳ ಮೆದುಳಿನ ಎರಡೂ ಭಾಗಗಳು ಏಕಕಾಲಕ್ಕೆ ನಿದ್ರಿಸಿ ಅವು ಸಂಪೂರ್ಣ ನಿದ್ರೆಗೆ ಶರಣಾಗುವುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಬಹುಶಃ ಶತ್ರುಗಳಿಂದ ಅಲ್ಲಿ ಸಂಪೂರ್ಣ ರಕ್ಷಣೆಯಿದೆ ಎಂಬ ಸುರಕ್ಷತಾಭಾವ ಅವುಗಳ ಸಂಪೂರ್ಣನಿದ್ರೆಗೆ ಕಾರಣವಿರಬಹುದು. 

ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿದ ಡಾಲ್ಫಿನ್‌ಗಳ ಪ್ರಸ್ತುತ ಸ್ಥಿತಿಗತಿ ಹೇಗಿದೆಯೆಂದು ನೋಡಲು ಹೋದರೆ ನಮಗೆ ನಿರಾಸೆ ಕಾಡುತ್ತದೆ. ಏಕೆಂದರೆ ಎಲ್ಲ ಜಾತಿಯ ಡಾಲ್ಫಿನ್‌ಗಳೂ ಒಂದಲ್ಲ ಒಂದು ರೀತಿಯಲ್ಲಿ ಮನುಷ್ಯರಿಂದಲೇ ಶೋಷಣೆಗೊಳಗಾಗಿ ಅಪಾಯದಂಚಿನಲ್ಲಿವೆ. ವಿಕೃತ ಜಿಹ್ವಾಚಾಪಲ್ಯದ ಕೆಲವರು ಈ ಮುಗ್ಧಜೀವಿಗಳನ್ನು ಮಾಂಸಕ್ಕಾಗಿ ಕೊಲ್ಲುತ್ತಿದ್ದಾರೆ. ಇನ್ನುಳಿದಂತೆ ಕೆಲವರು ಮೋಜಿಗಾಗಿ ಬೇಟೆಯಾಡುತ್ತಾರೆ, ಇನ್ನು ಕೆಲವರು ಮೀನುಗಾರಿಕೆಗೆಂದು ಉಪಯೋಗಿಸುವ ಆಧುನಿಕ ಉಪಕರಣಗಳು ಇವುಗಳಿಗೆ ಮುಳುವಾಗುತ್ತಿದೆ. ಮೀನುಗಾರಿಕೆಯ ಉಪಕರಣಗಳಿಗೆ ಸಿಕ್ಕು ಪ್ರತಿವರ್ಷ ಲಕ್ಷಾಂತರ ಡಾಲ್ಫಿನ್‌ಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಜೊತೆಗೆ ಮನುಷ್ಯರು ಸಮುದ್ರಕ್ಕೆ ಎಸೆಯುವ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳು, ದೊಡ್ಡ ದೊಡ್ಡ ತೈಲಸಾಗಾಣಿಕಾ ಹಡಗುಗಳಿಂದ ಒಮ್ಮೊಮ್ಮೆ ಸೋರುವ ಭಾರೀ ಪ್ರಮಾಣದ ತೈಲ ಇವೆಲ್ಲವೂ ಡಾಲ್ಫಿನ್‌ಗಳಿಗೆ ಮೃತ್ಯುಪಾಶವಾಗಿ ಪರಿಣಮಿಸುತ್ತಿದೆ. ಜೊತೆಗೆ ಕೆಲವು ಜಾತಿಯ ಡಾಲ್ಫಿನ್‌ಗಳನ್ನು ಒಂದು ಜಾತಿಯ ಶಿಲೀಂಧ್ರದ ಸೋಂಕು ಕೂಡ ಕಾಡುವುದು ಕಂಡುಬಂದಿದೆ. ಇನ್ನು ನಮ್ಮ ಗಂಗಾನದಿಯಂತೂ ಯಾವರೀತಿ ಕಲುಷಿತಗೊಂಡಿದೆಯೆಂಬುದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ನದಿವಾಸಿ ಡಾಲ್ಫಿನ್‌ಗಳು ಈ ಮಾಲಿನ್ಯದಿಂದಾಗಿಯೇ ಅಪಾಯವನ್ನೆದುರಿಸುತ್ತಿವೆ. ಚೈನೀಸ್ ರಿವರ್ ಡಾಲ್ಫಿನ್ ನಮ್ಮ ಕಣ್ಣೆದುರಿಗೇ ಈಗಾಗಲೇ ನಾಮಾವಶೇಷವಾಗಿ ಹೋಗಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ನೂರಾರು ಪೈಲಟ್ ತಿಮಿಂಗಿಲಗಳು ದಡಕ್ಕೆ ಬಂದು ಸತ್ತುಬಿದ್ದಿದ್ದನ್ನು ಸಹ ಕಣ್ಣಾರೆ ಕಂಡಿದ್ದೇವೆ. ಉಳಿದಿರುವ ಡಾಲ್ಫಿನ್‌ಗಳಿಗೂ ಇದೇ ಗತಿ ಬಾರದಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದು. ನಮ್ಮ ಜಿಹ್ವಾಚಾಪಲ್ಯವನ್ನು ನಿಯಂತ್ರಿಸುವುದು, ಮೀನುಗಾರಿಕೆಯಲ್ಲಿ ಬಳಸುವ ಪ್ರಳಯಾಂತಕ ಯಂತ್ರಗಳ ಬಳಕೆಯಲ್ಲಿ ಒಂದಿಷ್ಟು ವಿವೇಚನೆಯನ್ನು ತೋರುವುದು ಮತ್ತು ನದಿ, ಸಾಗರಗಳಿಗೆ ಯಾವುದೇ ಮಾಲಿನ್ಯಕಾರಕಗಳನ್ನು ಎಸೆಯದಿರುವುದು ಈ ಮೂರು ಸರಳವಾದ ಕೆಲಸಗಳ ಮೂಲಕ ನಾವು ಇಂದು ಸಾಯುತ್ತಿರುವ ಶೇಕಡಾ ತೊಂಬತ್ತರಷ್ಟು ಡಾಲ್ಫಿನ್‌ಗಳನ್ನು ಉಳಿಸಬಹುದು. ಆ ಇಚ್ಛಾಶಕ್ತಿ, ಸಹೃದಯತೆ ನಮ್ಮಲ್ಲಿದೆಯೇ?

Category:Nature



ProfileImg

Written by Srinivasa Murthy

Verified