ಹುಟ್ಟಿನಿಂದ ಅಥವಾ ಆಕಸ್ಮಿಕವಾಗಿ ಅಂಧತ್ವ ಹೊಂದಿದವರು ತಮ್ಮ ದೈನಂದಿನ ಕೆಲಸಕ್ಕಾಗಿ ಇನ್ನೊಬ್ಬರನ್ನು ಅವಲಂಬಿಸುವುದು ಅನಿವಾರ್ಯ. ಆದರೆ ಅಮೆರಿಕಾದಲ್ಲಿರುವ ಸಂಸ್ಥೆಯೊoದು ಅಂಧರಿಗೆ ತರಬೇತಿ ಹೊಂದಿದ ಶ್ವಾನಗಳನ್ನು ಜೋಡಿಯಾಗಿ ಹೊಂದಿಸುವ ಮೂಲಕ ಅವರ ಜೀವನದಲ್ಲಿ ಸ್ವಾತಂತ್ರ, ಸಂತಸ ಮೂಡಲು ಶ್ರಮಿಸುತ್ತಿದೆ.
1942ರಿಂದ ಅಮೆರಿಕಾದ ಗೈಡ್ ಡಾಗ್ಸ್ ಫರ್ ದ ಬ್ಲೈಂಡ್ (ಜಿಡಿಬಿ) ಅಂಧರಿಗೆ ತನ್ನ ಸೇವೆಯನ್ನು ನೀಡುತ್ತಾ ಬಂದಿದೆ. ಸ್ವಯಂ ಸೇವಾ ಸಂಸ್ಥೆಯಾಗಿರುವ ಇದು ಅಂಧರಿಗೆ ಉಚಿತವಾಗಿ ತರಬೇತಿ ಹೊಂದಿದ ಶ್ವಾನಗಳನ್ನು ನೀಡುವ ಮೂಲಕ ಅವರು ದೈನಂದಿನ ಚಟುವಟಿಕೆಯನ್ನು ಯಾರ ಸಹಾಯವೂ ಇಲ್ಲದೆ ಮಾಡುವಂತೆ ಮಾಡಿದೆ. ಇದಲ್ಲದೆ ಶ್ವಾನಕ್ಕೆ ಅಗತ್ಯವಾದ ಔಷಧೋಪಚಾರ, ತರಬೇತಿಯನ್ನು ದಾನಿಗಳಿಂದ ಸಂಗ್ರಹಿಸಿದ ಹಣದಿಂದ ನೀಡುತ್ತಾ ಬಂದಿದೆ.
ಕೆನಡಾದಲ್ಲೂ ಇದರ ಅಂಗ ಸಂಸ್ಥೆ ಗೈಡ್ ಡಾಗ್ಸ್ ಫರ್ ದ ಬ್ಲೈಂಡ್ ಇಂಟರ್‌ನ್ಯಾಷನಲ್ (ಜಿಡಿಬಿಐ) ಕೆಲಸ ಮಾಡುತ್ತಿದೆ. ಇಲ್ಲೂ ಅಂಧ ಅಥವಾ ದೃಷ್ಟಿ ಸಮಸ್ಯೆಯಿಂದ ನರಳುತ್ತಿರುವವರಿಗೆ ತರಬೇತಿ ನೀಡಿದ ಶ್ವಾನದ ನೆರವನ್ನು ನೀಡಲಾಗುತ್ತದೆ. ಈ ಸಂಸ್ಥೆಯೂ ದೇಣಿಗೆ ಸಂಗ್ರಹಿಸಿ ಶ್ವಾನಗಳಿಗೆ ತರಬೇತಿಯನ್ನು ನೀಡುತ್ತದೆ. ಇದಕ್ಕೆ ಸರಕಾರ ಯಾವುದೇ ಅರ್ಥಿಕ ನೆರವು ನೀಡುತ್ತಿಲ್ಲ್ಲ.
ರೋಚಕ ಇತಿಹಾಸ: ಜಗತ್ತು ಕಂಡ ಭೀಕರ 2ನೇ ವಿಶ್ವ ಮಹಾಯುದ್ಧದ ಸಂದರ್ಭ ಅಪಾರ ಸಾವು-ನೋವು ಸಂಭವಿಸಿದವು. ಯುದ್ಧದ ಭೀಕರತೆ ಕಂಡು ಲೂಯಿಸ್ ಮೇರಿಹ್ಯೂ ಮತ್ತು ಡಾನ್ ಡೊನಾಲ್ಡ್ಸನ್ ಎನ್ನುವವರು ಯುದ್ಧದಲ್ಲಿ ದೃಷ್ಟಿ ಕಳೆದುಕೊಂಡವರಿಗೆ ನೆರವಾಗುವ ದೃಷ್ಟಿಯಿಂದ ಸೇವಾ ಶ್ವಾನ ತರಬೇತಿ ಶಾಲೆಯನ್ನು ಆರಂಭ ಮಾಡಲು ಮುಂದಾದರು. ಕ್ಯಾಲಿಫೋರ್ನಿಯಾದಲ್ಲಿ ಆರಂಭಗೊoಡ ಈ ಶಾಲೆಯಲ್ಲಿ ಮೊದಲಿಗೆ ಬ್ಲೊಂಡಿ ಎನ್ನುವ ಜರ್ಮನ್ ಶೆಫರ್ಡ್ ನಾಯಿಯನ್ನು ತರಬೇತುಗೊಳಿಸಿ ಲಿಯನಾರ್ಡ್ ಫುಲ್ಕ್ ಎನ್ನುವ ಸೈನಿಕನಿಗೆ ಸೇವೆಗೆ ಒದಗಿಸಲಾಯಿತು. ಅಲ್ಲಿಂದ ಈ ಸಂಸ್ಥೆ ನಿರಂತರವಾಗಿ ಅಗತ್ಯವಿರುವ ಅಂಧರಿಗೆ ಶ್ವಾನಗಳ ಸೇವೆಯನ್ನು ಒದಗಿಸುತ್ತಾ ಬಂದಿದೆ.
ಅoಧರಿಗೆ ಶ್ವಾನಗಳು ಜೊತೆ ನೀಡುವುದರಿಂದ ಅವರಿಗೆ ಸಹಾಯವಾಗುವ ಜೊತೆಗೆ ಆತ್ಮವಿಶ್ವಾಸ, ಸ್ವತಂತ್ರವಾಗಿ ಬದುಕಲು ಅವಕಾಶ ಸಿಗತ್ತಿದೆ. ಶ್ವಾನಗಳ ನೆರವು ಪಡೆಯಲು ಬಯಸುವವರು ತಮಗೆ ಸೂಕ್ತವೆನಿಸಿದ ಶ್ವಾನಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಈ ರೀತಿ ಶ್ವಾನಗಳ ನೆರವನ್ನು ಬಯಸುವವರಿಗೆ ಅವರ ವೃತ್ತಿ, ದಿನಚರಿಗೆ ತೊಂದರೆ ಆಗದಂತೆ ಎರಡು ವಾರಗಳ ಕಾಲ ತರಬೇತಿ ನೀಡಲಾಗುವುದು. ಈ ಸಂಸ್ಥೆ ಶ್ವಾನಗಳ ವೈದ್ಯಕೀಯ ತಪಾಸಣೆಯ ಜವಾಬ್ದಾರಿ ವಹಿಸಿಕೊಳ್ಳುವ ಜೊತೆಗೆ ಸೇವಾ ಶ್ವಾನದ ನಿವೃತ್ತಿಯ ಬಳಿಕ ಇನ್ನೊಂದು ಶ್ವಾನವನ್ನು ಅದರ ಉತ್ತರಾಧಿಕಾರಿಯಾಗಿ ನೇಮಕ ಮಾಡಲು ನೆರವಾಗುತ್ತದೆ.
ನೆರವು ಹೇಗೆ ನೀಡಲಾಗುತ್ತದೆ?: ಶ್ವಾನದ ನೆರವು ಪಡೆಯುವವರು ಮೊದಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ವ್ಯಕ್ತಿ ನೇತ್ರತಜ್ಞರಿಂದ ಅಂಧ ಎನ್ನುವ ಪ್ರಮಾಣ ಪತ್ರ ಹೊಂದಿರಬೇಕಾಗುತ್ತದೆ. ಅರ್ಜಿ ಸಲ್ಲಿಸುವವರು ಆತ್ಮವಿಶ್ವಾಸದಿಂದ ನಡೆದುಕೊಂಡು ಹೋಗಲು, ಸಂಚಾರದ ಧ್ವನಿ ಅಧರಿಸಿ ರಸ್ತೆ ದಾಟುವ ಪರಿಜ್ಞಾನ ಹೊಂದಿರಬೇಕು. ಕನಿಷ್ಠ ಒಂದು ಮೈಲು ನಡೆಯುವ ಸಾಮರ್ಥ್ಯ ಹೊಂದಿರಬೇಕು. ನಾಯಿಗೆ ಉತ್ತಮ ಆಹಾರ, ಅದರ ಜೊತೆ ಆಡುವ, ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುವ ಆಸಕ್ತಿ ಇರಬೇಕು.
ಅರ್ಜಿ ಸಲ್ಲಿಸಿದ ಬಳಿಕ ಈ ಸಂಸ್ಥೆಯ ಸಿಬ್ಬಂದಿ ದೂರವಾಣಿ ಮೂಲಕ ಅಂಧರ ವೃತ್ತಿ, ಓಡಾಟ ಮಾಡುವ ದೂರ, ಆರೋಗ್ಯದ ಬಗ್ಗೆ ವಿಚಾರಿಸುತ್ತಾರೆ. ವ್ಯಕ್ತಿಯ ಮಾನಸಿಕ ಆರೋಗ್ಯದ ಬಗ್ಗೆಯೂ ವಿಚಾರಿಸುತ್ತಾರೆ.
ಅಂತೆಯೇ ಸಂಸ್ಥೆಯ ಸಿಬ್ಬಂದಿ ಅಂಧ ವ್ಯಕ್ತಿಯ ಮನೆಗೆ ಭೇಟಿ ನೀಡಿ ಸಮಾಲೋಚನೆ ನಡೆಸುತ್ತಾರೆ. ಅಲ್ಲಿನ ವಾತಾವರಣವನ್ನು ಪರಾಮರ್ಶೆ ಮಾಡುತ್ತಾರೆ. ಮಾರ್ಗದರ್ಶಿ ಶ್ವಾನವನ್ನು ನಿಯಂತ್ರಿಸುವ ದೈಹಿಕ ಸಾಮರ್ಥ್ಯ, ಕೆಲಸದ ವಾತಾವರಣ ಮೊದಲಾದ ಬಗ್ಗೆ ಅವಲೋಕನ ಮಾಡುತ್ತಾರೆ. ಅರ್ಜಿ ಸಲ್ಲಿಸಿದ ಅಂಧರಿಗೆ ಶ್ವಾನದಿಂದ ಮಾರ್ಗದರ್ಶನ ನೀಡಲು ಸಾಧ್ಯ ಎನ್ನುವುದು ಮನದಟ್ಟಾದ ಬಳಿಕವಷ್ಟೇ ಅರ್ಜಿಯನ್ನು ಪುರಸ್ಕರಿಸಿ ಈ ಬಗ್ಗೆ ತರಗತಿಯನ್ನು ಆರಂಭಿಸಲಾಗುವುದು.
ಸಾಮಾನ್ಯವಾಗಿ ಲ್ಯಾಬ್ರಡಾರ್ ರಿಟ್ರೀವರ್, ಗೋಲ್ಡನ್ ರಿಟ್ರೀವರ್ ನಾಯಿಗಳನ್ನು ಸೇವಾ ನಾಯಿಗಳಾಗಿ ತರಬೇತಿ ನೀಡಿ ಬಳಸಿಕೊಳ್ಳಲಾಗುತ್ತಿದೆ. ಈ ಹಿಂದೆ ಜರ್ಮನ್ ಶಫರ್ಡ್ಗಳನ್ನು ಸೇವಾ ನಾಯಿಗಳಾಗಿ ಬಳಕೆ ಮಾಡಲಾಗಿತ್ತಾದರೂ, ಅವುಗಳನ್ನು ನಿಯಂತ್ರಣ ಮಾಡುವುದು ಕಷ್ಟವಾಗುವ ಕಾರಣ ಇತ್ತೀಚೆಗೆ ಇವುಗಳನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಲಾಗಿದೆ.
ಹಾಫ್ ಮ್ಯಾರಥಾನ್ ಜಯಿಸಲೂ ಸಹಾಯ:
ಅಮೆರಿಕಾದ ದೃಷಿ ವಿಕಲಚೇತನ ಥಾಮಸ್ ಪನೀಕ್ ಎನ್ನುವವರು ಹಾಫ್ ಮ್ಯಾರಥಾನ್ ಪೂರ್ಣಗೊಳಿಸಿದ ವಿಶ್ವದ ಮೊದಲಿಗ ಎನ್ನುವ ಹೆಗ್ಗಳಿಕೆ ಪಡೆದರು. ಆದರೆ ಈ ೨೧ ಕಿ.ಮೀ.ದೂರದ ಓಟದ ಸ್ಪರ್ಧೆಯಲ್ಲಿ ಅವರಿಗೆ ವಾಫ್ಲೆ, ಗುಸ್ ಎನ್ನುವ ನಾಯಿಗಳು ಮಾರ್ಗದರ್ಶಕವಾಗಿ ಕೆಲಸ ಮಾಡಿದ್ದವು ಎನ್ನುವುದು ವಿಶೇಷವಾಗಿದೆ.
ಸೇವಾ ನಾಯಿಯೊಂದು ತೊಂದರೆಗೆ ಒಳಗಾದಾಗ ಇನ್ನೊಂದು ಸೇವಾ ನಾಯಿ ಅದಕ್ಕೆ ಮಾರ್ಗದರ್ಶನ ಮಾಡುವುದೂ ಇದೆ. ದಕ್ಷಿಣ ಕರೋಲಿನಾದಲ್ಲಿ ಮಾರ್ಗದರ್ಶಕ ನಾಯಿಯಾಗಿದ್ದ ಗೋಲ್ಡನ್ ರಿಟ್ರೀವರ್ ಚಾರ್ಲಿ ದೃಷ್ಟಿ ಕಳೆದುಕೊಂಡಾಗ ಇನ್ನೊಂದು ಮಾರ್ಗದರ್ಶಕ ನಾಯಿ ಮೆವೆರಿಕ್ ಅದಕ್ಕೆ ಜೊತೆಯಾಗಿ ಅದನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿತು.
ಇoದು ಅಮೆರಿಕಾದಲ್ಲಿ ದೃಷ್ಟಿ ಚೇತನರು, ದೈಹಿಕವಾಗಿ ಊನಗೊಂಡವರು ಇಂಥ ಸೇವಾ ನಾಯಿಗಳ ಮೊರೆ ಹೋಗುತ್ತಿರುವುದರಿಂದ ತರಬೇತಿ ಪಡೆದ ಸೇವಾ ನಾಯಿಗಳ ಸಂಖ್ಯೆ ಹೆಚ್ಚಾಗತೊಡಗಿದೆ. ಇಂದು ಹಲವು ಬಗೆಯ ತಂತ್ರಜ್ಞಾನದಿoದ ದೃಷ್ಟಿ ದೋಷ ಉಳ್ಳವರಿಗೆ ಪ್ರಯೋಜನ ಆಗುತ್ತಿದ್ದರೂ ಸೇವಾ ನಾಯಿಗಳು 24 ಗಂಟೆಯೂ ಸೇವೆ, ಸ್ನೇಹ ತೋರುವುದರಿಂದ ಇದಕ್ಕೆ ಮಹತ್ವ ಹೆಚ್ಚುತ್ತಿದೆ. ನಾಯಿಯನ್ನು ಸಾಕುವ, ಅದರ ಜೊತೆ ಹೊಂದಿಕೊoಡು ಹೋಗುವೆ ಎನ್ನುವ ಧೈರ್ಯ ಉಳ್ಳ ಅಂಧರು ಸೇವಾ ಶ್ವಾನಗಳ ನೆರವಿನಿಂದ ಹಾಯಾಗಿ ಜೀವನ ಸಾಗಿಸುತ್ತಿದ್ದಾರೆ. ಅಮೆರಿಕಾದಲ್ಲಿ ಸೇವಾ ಶ್ವಾನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ತರಬೇತಿ ನೀಡಿ ಶ್ವಾನ ಒದಗಿಸುವ ಸಂಸ್ಥೆಗಳ ಸಂಖ್ಯೆ ಹೆಚ್ಚತೊಡಗಿದೆ.
-ಅರುಣ್ ಕಿಲ್ಲೂರು
(ತರಂಗ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ)
Author,Journalist,Photographer