ನನ್ನ ಧ್ವನಿ ಕೂಡಾ ಕ್ಷೀಣವಾಗಿದೆ ಯಾಕೆ ಗೊತ್ತೇ?

ಅನುಭವ ಕಥನ

ProfileImg
13 May '24
6 min read


image

ನನ್ನ ಧ್ವನಿ ಕ್ಷೀಣವಾಗಿದೆ ಯಾಕೆ ಗೊತ್ತೇ? 
ಸುತ್ತ ಮುತ್ತ ಎತ್ತ ನೋಡಿದರೂ ಭ್ರಷ್ಟಾಚಾರದ ಕಂಬಂಧ ಬಾಹುಗಳು ಎಲ್ಲೆಡೆ ಹರಡಿ ಅಟ್ಟಹಾಸ ಮಾಡುತ್ತಿವೆ.ಎಫಡಿಎ  ಹಿಡಿದು ಯೂನಿವರ್ಸಿಟಿ ತನಕದ ಎಲ್ಲ ಹುದ್ದೆಗಳು 30-80 ಲಕ್ಷಗಳಿಗೆ ಬಿಕರಿಯಾಗಿದೆ.
ನಮ್ಮ‌ಬಡಮಕ್ಕಳು ಊಟ ತಿಂಡಿಯ ಪರಿವೆಯಿಲ್ಲದೆ ಓದುತ್ತಿದ್ದಾರೆ.ಯಾಕೆಂದರೆ ಚೆನ್ನಾಗಿ ಓದಿ ಮಕ್ಕಳೇ..ಉತ್ತಮ‌ಅಂಕ ಪಡೆದರೆ ನಿಮಗೆ ಒಳ್ಳೆಯ ಕೆಲಸ ಸಿಗುತ್ತದೆ ,ಸರ್ಕಾರಿ ಉದ್ಯೋಗ ಭದ್ರತೆಯನ್ನು ಕೊಡುತ್ತದೆ ಎಂಬ ಭರವಸೆಯನ್ನುಬಣ್ಣ ಬಣ್ಣದ ಕನಸನ್ನು  ನಾವು ಸದಾ ತುಂಬುತ್ತಿರುತ್ತೇವೆ
ಮೊದ ಮೊದಲು ಈ ಮಾತು ಹೇಳುವಾಗ ನನಗೂ ಈ ಬಗ್ಗೆ ತುಂಬಾ ಭರವಸೆಯಿತ್ತು
ಯಾಕೆಂದರೆ 2009 ರಲ್ಲಿ ಲಿಖಿತ ಪರೀಕ್ಷೆಯ ಮೂಲಕ ಯಾವುದೇ ದುಡ್ಡು ವಶೀಲಿ ಇಲ್ಲದೆ ಕೇವಲ ಅರ್ಹತೆಯಿಂದಲೇ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಹುದ್ದೆಯನ್ನು ಪಡೆದವಳು ನಾನು.
ಈ ನನ್ನ ಮಕ್ಕಳಂತೆಯೇ ನಾನೂ ಕೆಲಸದ ಜೊತೆಗೆ ಹಗಲು ರಾತ್ರಿ ಅಧ್ಯಯನ ಮಾಡುತ್ತಿದ್ದೆ.ನನಗೊಂದು ಕನಸಿತ್ತು.ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಅವರು ದೊಡ್ಡದಾದ ಕನಸು ಕಾಣಿರಿ ಎಂದಿದ್ದರಲ್ಲ.ಅಂತೆಯೇ ನನ್ನ‌ ಮಂಗಳೂರು  ಯೂನಿವರ್ಸಿಟಿ ಪ್ರೊಫೆಸರಾಗುವ  ಕನಸೂ ಕೂಡ ನನ್ನ ಪಾಲಿಗೆ ದೊಡ್ಡದೇ ಇರಬೇಕು.ಹಾಗಾಗಿಯೇ ಡಾ.ಅಮೃತ ಸೋಮೇಶ್ವರರರಂತಹ ಹಿರಿಯರೂ ನನಗೆ ಮಹತ್ವಾಕಾಂಕ್ಷೆ ಒಳ್ಳೆಯದಲ್ಲ ಎಂದು ಹಿತ ನುಡಿದಿದ್ದರು.ಬಹುಶಃ ಅದಾಗಲೇ ಯೂನಿವರ್ಸಿಟಿಗಳಲ್ಲಿನ ಅವ್ಯವಹಾರಗಳ ಬಗ್ಗೆ ಅವರಿಗೆ ಅವರಿವಿದ್ದಿರಬಹುದೋ ಏನೋ.ಇರುವ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಹುದ್ದೆಯಲ್ಲಿಯೇ ತೃಪ್ತಿ ಪಡುವುದು ಒಳ್ಳೆಯದೆಂದು ಹೇಳಿರಬಹುದು.ಈ ಮಾತು ನಾನು ಮಾತ್ರವಲ್ಲ ನನ್ನ ಸ್ನೇಹಿತರಾದ ನನ್ನ ಜೊತೆಗೆ ಸರ್ಕಾರಿ ಪಿಯು ಕಾಲೇಜು ಕನ್ನಡ ಉಪನ್ಯಾಸಕ ಹುದ್ದೆಯನ್ನು ಪಡೆದ ಬಹುಮುಖೀ ಪ್ರತಿಭಾವಂತ ಡಾ.ಶ್ರೀಧರ ಹೆಗಡೆ ಭದ್ರನ್ ಅವರೂ ಕೇಳಿದ್ದರು‌.ಅವರ ಹಿತೈಷಿಗಳು ಯಾರೋ ಅವರಿಗೆಮಹತ್ವಾಕಾಂಕ್ಷೆ ಒಳ್ಳೆಯದಲ್ಲ ಎಂದಿದ್ದ ಬಗ್ಗೆ ಮಾತಿನ ನಡುವೆ ನನ್ನಲ್ಲಿ ಒಮ್ಮೆ ಅವರು ಹೇಳಿದ್ದರು
ಪ್ರಾಧ್ಯಾಪಕರಿಗೆ ಬೇಕಾದ ಎಲ್ಲ ಅರ್ಹತೆಯನ್ನು ಪಡೆದ ನಂತರ ಅದನ್ನು ಬಯಸುವುದು ಮಹತ್ವಾಕಾಂಕ್ಷೆ ಆಗುತ್ತದಾ ? ಏನೋ ನನಗೆ ಗೊತ್ತಿಲ್ಲ.ನನಗೆ ಅದು ಈಗಲೂ ತಪ್ಪೆನಿಸಿಲ್ಲ
2009 ರಲ್ಲಿ ಸರ್ಕಾರಿ ಉದ್ಯೋಗಕ್ಕೆ ನಾನು ಸೇರುವಾಗ ನನ್ನ‌ ಮೊದಲ ಡಾಕ್ಟರೇಟ್ ಅಧ್ಯಯನದ ಪಿಎಚ್ ಡಿ ಮಹಾ ಪ್ರಬಂಧ ಸಲ್ಲಿಸಿ ಆಗಿತ್ತು.ಮತ್ತೆ ಸ್ವಲ್ಪ ಸಮಯದ ಒಳಗೆ ಡಾಕ್ಟರೇಟ್ ಪದವಿಯನ್ನು ಪಡೆದೆ.
ನಾನು ಬೆಳ್ಳಾರೆ ಕಾಲೇಜಿಗೆ ಸೇರಿದಾಗ ಅದು ಸುವರ್ಣ ಮಹೋತ್ಸವವನ್ನು ಆಚರಿಸುತ್ತಾ ಇತ್ತು.ಆ ಐವತ್ತು ವರ್ಷಗಳಲ್ಲಿ ಆ ಕಾಲೇಜಿನ ಮೊದಲ ಡಾಕ್ಟರೇಟ್ ಪದವಿ ಪಡೆದ ಮೊದಲ ಉಪನ್ಯಾಸಕಿ ನಾನಾಗಿದ್ದೆ.
.ಪಿಯು ಇಲಾಖೆಯಲ್ಲಿ ಉನ್ನತ ಶಿಕ್ಷಣಕ್ಕೆ ಯಾವುದೇ ಮನ್ನಣೆ ಇಲ್ಲ.ಹೆಚ್ಚಾಗಿ ಪ್ರೌಢಶಾಲೆಯಿಂದ ಭಡ್ತಿ ಬಂದ ಉಪನ್ಯಾಸಕರೇ ಇರುತ್ತಾರೆ.ಹಾಗಾಗಿ ಆಗ ಡಾಕ್ಟರೇಟ್ ಪದವಿ ಪಡೆದ ಉಪನ್ಯಾಸಕರ ಸಂಖ್ಯೆ ತೀರ ಕಡಿಮೆ ಇತ್ತು.2009 ರ ಬ್ಯಾಚ್ ನಲ್ಲಿ ಆಯ್ಕೆ ಆದವರಲ್ಲಿ  ಅನೇಕರು ಪಿಎಚ್ ಡಿ ಪದವಿಧರರಿದ್ದರು
ಇರಲಿ
ಮೊದಲ ಡಾಕ್ಟರೇಟ್ ನ‌ ಕನಿಷ್ಟ ಅಧ್ಯಯನ ಅವಧಿ  ಎರಡೂವರೆ ವರ್ಷ ಮುಗಿದ ಕೂಡಲೇ ನಾನು ಎರಡನೆಯ ಡಾಕ್ಟರೇಟ್ ಅಧ್ಯಯನಕ್ಕಾಗಿ ಕುಪ್ಪಂ ನ ದ್ರಾವಿಡ ವಿಶ್ವ ವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಅದೂ ಪ್ರಬಂಧ ಸಿದ್ದವಾಗಿತ್ತು.2012 ರಲ್ಲಿಯೇ ಪ್ರಬಂಧ ಸಲ್ಲಿಸಿದ್ದರೂ ಮೌಲ್ಯ ಮಾಪಕರ ಹಾಗೂ ಮಾರ್ಗ ದರ್ಶಕರ  ನಿರ್ಲಕ್ಷ್ಯದಿಂದಾಗಿ  ಬಹಳ‌ ತಡವಾಗಿ 2015 ರಲ್ಲಿ ಎರಡನೆಯ ಡಾಕ್ಟರೇಟ್ ಪದವಿಯನ್ನೂ ಪಡೆದೆ
ಈ ನಡುವೆ 2013 ರಲ್ಲಿ ಮಂಗಳೂರು ಯೂನಿವರ್ಸಿಟಿ ವಿವಿಧ ಬೋಧಕ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದ್ದು ನಾನೂ ಅರ್ಜಿ ಸಲ್ಲಿಸಿದ್ದೆ
ಈ ಬಾರಿ ನಾನು ಖಂಡಿತಾ ಆಯ್ಕೆ ಆಗುವೆನೆಂಬ ಆತ್ಮ ವಿಶ್ವಾಸ ನನಗಿತ್ತು.ಯಾಕೆಂದರೆ ಅರ್ಜಿ ಸಲ್ಲಿಸಿದವರಲ್ಲಿ ಅತಿ ಹೆಚ್ಚು ಅಕಾಡೆಮಿಕ್ ಫರ್ಪಾಮೆನ್ಸ್ ಇಂಡಿಕೇಟರ್ ನನಗಿತ್ತು.ನನಗೆ 1157 accademi performance indication ಪಾಯಿಂಟುಗಳಿದ್ದವು
ನಾನು ಅದಾಗಲೇ ಎಂಎ( ಕನ್ನಡ)  73.7% - ನಾಲ್ಕನೆಯ ರ‌್ಯಾಂಕ್,ಎಂಎ( ಹಿಂದಿ) ಎಂಎ( ಸಂಸ್ಕೃತ)- ಮೊದಲ ರ‌್ಯಾಂಕ್ ,ಎಂಫಿಲ್ ಪಿಎಚ್ ಡಿ ಪದವಿ ಗಳಿಸಿದ್ದು ಎರಡನೆಯ ಪಿಎಚ್ ಡಿ ಪದವಿಗೆ ಪ್ರಬಂಧ ಸಲ್ಲಿಕೆ ಆಗಿತ್ತು.
ಅ ಸಮಯಕ್ಕಾಗುವಾಗಲೇ ನನ್ನ ಹದಿನೇಳು ಸಂಶೋಧಾನಾ ಕೃತಿಗಳು ನೂರರಷ್ಟು ಸಂಶೋಧನಾ ಬರಹಗಳು,ಮುನ್ನೂರರಷ್ಟು ಇತರ ವೈಚಾರಿಕ ಬರಹಗಳು ಪ್ರಕಟವಾಗಿದ್ದವು
ಸುಮಾರು ಇನ್ನೂರೈವತ್ತು ಅಂತರಾಷ್ಟ್ರೀಯ,ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮಾಡಿದ್ದೆ
ಯುಜಿಸಿ ನಿಯಮಾವಳಿಗಳಂತೆ ಅಂಕಗಳನ್ನು ನೀಡಿದರೆ ನನಗೆ ಸಹಾಯಕ ಪ್ರಾಧ್ಯಾಪಕ ಹುದ್ದೆ ಖಂಡಿತವಾಗಿಯೂ ಸಿಗುತ್ತಿತ್ತು.ಆದರೆ ದುಡ್ಡು ಇನ್ಪ್ಲೂಯೆನ್ಸ್ ಗೆ ಒಳಗಾದ ವೀಸಿ ಯನ್ನೊಳಗೊಂಡ ಆಯ್ಕೆ ಸಮಿತಿ ಯುಜಿಸಿ ನಿಯಮಗಳನ್ನು ಮೀರಿ ತಮಗೆ ಬೇಕಾದ ಅಭ್ಯರ್ಥಿಗಳು ಕಡಿಮೆ ಅರ್ಹತೆ ಹೊಂದಿದ್ದರೂ ಅವರನ್ನೇ ಆಯ್ಕೆ ಮಾಡಿದ್ದರು.
ಕನ್ನಡ ವಿಭಾಗದಲ್ಲಿ ಜೆನರಲ್ ಮೆರಿಟ್ ಗೆ ಒಂದು ಹುದ್ದೆ ಇತ್ತು.ಅದಕ್ಕೆ ಒಂದು ಕನ್ನಡ( ಎಂಎ)66% ಎರಡು ಸಂಶೋಧನಾ ಕೃತಿ( ಅದರಲ್ಲಿ ಒಂದು ಪಿಎಚ್ ಡಿ ಪ್ರಬಂಧ) ಗಳನ್ನು ಪ್ರಕಟಿಸಿದ ಧನಂಜಯ ಕುಂಬಳೆ ಆಯ್ಕೆ ಆದರು.
ಇಲ್ಲಿ ಒಟ್ಟು ನೂರು ಅಂಕಗಳ ಸಂದರ್ಶನದಲ್ಲಿ 20 ಅಂಕಗಳು ರಿಸರ್ಚ್ ಫರ್ಫಾರ್ಮೆನ್ಸ್ ಗೆ ಮೀಸಲಾಗಿವೆ.ಇಲ್ಲಿ ಒಂದು ಸಂಶೋಧನಾ ಕೃತಿಗೆ ಐದು ಅಂಕ ಮತ್ತು ಅಂತ ರಾಷ್ಟ್ರೀಯ ರಿಸರ್ಚ್ ಜರ್ನಲ್ ನಲ್ಲಿ ಪ್ರಕಟಿತ ಬರಹಕ್ಕೆ ಎರಡು ಅಂಕ,ರಾಷ್ಟ್ರೀಯ ರಿಸರ್ಚ್ ಜರ್ನಲ್ ನಲ್ಲಿ ಪ್ರಕಟಿತ ಬರಹಕ್ಕೆ ಒಂದು ಅಂಕ ಇದರ ಹೊರತಾಗಿ ಈ ವಿಭಾಗದಲ್ಲಿ ಅಂಕಗಳನ್ನು ಕೊಡುವಂತಿಲ್ಲ ಎಂದು ಯುಜಿಸಿ ಸ್ಪಷ್ಟವಾಗಿ ತಿಳಿಸಿದೆ.ಇಲ್ಲಿ ಗರಿಷ್ಠ ಅಂಕಗಳು 20
ನನ್ನದು 17 ಸಂಶೋಧನಾ ಕೃತಿಗಳು ಪ್ರಕಟವಾದ ಕಾರಣ ಗರಿಷ್ಠ 20 ಅಂಕಗಳು ಲಭಿಸಿದ್ದವು.
ಆದರೆ ಇಲ್ಲಿ ಆಯ್ಕೆಯಾದ ಧನಂಜಯ ಕುಂಬಳೆ ಅವರು ಅವರ ಅರ್ಜಿಯಲ್ಲಿ ಡಿಕ್ಲೇರ್ ಮಾಡಿರುವಂತೆ ಕೇವಲ ಎರಡು ಸಂಶೋಧನಾ ಕೃತಿಗಳು ಪ್ರಕಟವಾಗಿದ್ದು ಅದರಲ್ಲಿ ಒಂದು ಪಿಎಚ್ ಡಿ ಪ್ರಬಂಧವಾಗಿದ್ದು ಅದಕ್ಕೆ ಇನ್ನೊಂದು ಅಕಾಡೆಮಿಕ್ ವಿಭಾಗದಲ್ಲಿ ಅಂಕಗಳು ನೀಡಲ್ಪಟ್ಟಿದೆ
ಹಾಗಾಗಿ ಇಲ್ಲಿ ಅವರು ಅವರ ಒಂದು ಪುಸ್ತಕಕ್ಕೆ 5 ಅಂಕಗಳನ್ನು ಮಾತ್ರ ಪಡೆಯಲು‌ಅರ್ಹರಾಗಿದ್ದರು.ಇದನ್ನು ಪ್ರಾಥಮಿಕ ಶಾಲೆಯ ಬಾಲಕ ಕೂಡ ಲೆಕ್ಕ ಹಾಕಬಲ್ಲ. 
ಆದರೆ ಇಲ್ಲಿ ಆಯ್ಕೆ ಸಮಿತಿಯವರು ಹೆಚ್ಚಿನ ಅಂಕ ನೀಡಲು ಅವರಿಗೆ ಅರ್ಹತೆ ಇಲ್ಲದೆ ಇದ್ದಾಗಲೂ ಹೆಚ್ಚುವರಿಯಾಗಿ ಹದಿನೈದು ಅಂಕ ನೀಡಿ ಗರಿಷ್ಟ 20 ಅಂಕ ನೀಡಿದ್ದರು.
ಇಲ್ಲಿ ಅರ್ಹತೆ ಇಲ್ಲದೆ ಇದ್ದಾಗಲೂ ಅವರನ್ನು ಆಯ್ಕೆ ಮಾಡುವ ಸಲುವಾಗಿ ಹೆಚ್ಚುವರಿಯಾಗಿ ನೀಡಿದ 15 ಅಂಗಳನ್ಮು ಅವರು ಸಂದರ್ಶನದಲ್ಲಿ ಗಳಿಸಿದ ಒಟ್ಟು ಅಂಕ‌69.4 ರಿಂದ ಕಳೆದರೆ ಅವರಿಗೆ ಸಿಗಬೆಕಾಗಿದ್ದ ಅಂಕ‌54.4% 
ನನಗೆ ಸಿಕ್ಕ ಒಟ್ಟು ಅಂಕ 63.9 ಹಾಗೆಯೇ ಇರುತ್ತದೆ.ಹಾಗಾಗಿ ನಾನೇ ಹೆಚ್ಚು ಅರ್ಹಳು ಆದರೆ ದುಡ್ಡು ವಶೀಲೊಗೊಳಗಾಗಿ ಆಯ್ಕೆ ಸಮಿತಿ ಅಕ್ರಮವಾಗಿ ರಿಸೃಚ್ ಫರ್ಫಾರ್ಮೆನ್ಸ್ ವಿಭಾಗದಲ್ಲಿ ಅವರಿಗೆ ಹದಿನೈದು ಅಂಕ‌ ನೀಡಿದ ಕಾರಣ ನನಗೆ ಅನ್ಯಾಯ ಆಗಿದೆ
ಹಾಗೆ ಸುಪ್ರೀಂ ಕೋರ್ಟ್ ತನಕ ಹೋಗಿ ಹೋರಾಡಿದರೂ ಗೆಲ್ಲಾಗಲಿಲ್ಲ ಯಾಕೆಂದರೆ ನ್ಯಾಯಾಲಯ ನನಗೆ ಹೆಚ್ಚಿನ ಅರ್ಹತೆ  ಇಲ್ಲ ಎಂದಿಲ್ಲ‌ .ಬದಲಿಗೆ ಅರ್ಹತೆಯನ್ನು ನಿರ್ಧರಿಸುವುದು ಆಯ್ಕೆ ಸಮಿತಿ‌ ಅದರಲ್ಲಿ ತಲೆಹಾಕಲು ಕಾನೂನಿನಲ್ಲಿ ಅವಕಾಶ ಇಲ್ಲ ಎನ್ನುತ್ತದೆ
ಕಾನೂನಿನ ಈ ಪರಿಮಿತಿಯನ್ನು ತಿಳಿದೇ ಆಯ್ಕೆ ಸಮಿತಿಯವರು ಅಕ್ರಮ ಎಸಗಿ ತಮಗೆ ಬೇಕಾದವರನ್ನು ಬೇಕಾ ಬಿಟ್ಟಿ ಆಯ್ಕೆ ಮಾಡುತ್ತಾರೆ
ಆಯ್ಕೆ ಸಮಿತಿಯವರೇ ಯುಜಿಸಿ ಮಾರ್ಗದರ್ಶಕ ಸೂತ್ರಗಳನ್ನು ಉಲ್ಲಂಘಸಿ‌ ದುಡ್ಡು ವಶೀಲಿಗೆ ಒಳಗಾಗಿ ಅನರ್ಹರನ್ನು ಆಯ್ಕೆ ಮಾಡಿದರೆ ಈ ಅನ್ಯಾಯವನ್ನು ಪ್ರಶ್ನಿಸುವವರು ಯಾರು ? ಇದಕ್ಕೇನು ಪರಿಹಾರ? ಇದು ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿದೆ.
ಈ ಬಗ್ಗೆ ಸರ್ಕಾರ ಸಿಐಡಿ ಗೆ ವಹಿಸಿ ಸರಿಯಾದ ತನಿಖೆ ಮಾಡಿ ಅಕ್ರಮ ಎಸಗಿದವರ ಮೇಲೆ ಸೆಒಯಾದ ಕ್ರಮ‌ತೆಗೆದುಕೊಂಡರೆ ಸರಿ ಹೋಗಬಹುದು.
2013 ರಲ್ಲಿ ಮಂಗಳೂರು ಯೂನಿವರ್ಸಿಟಿಯಲ್ಲಿ ರಿಜಿಸ್್ಟ್ರಾರ್ ಆಗಿದ್ದು ಈಗ ಅದೇ ಯೂನಿವರ್ಸಿಟಿಯಲ್ಲಿ ವೀಸಿಗಳಾಗಿರುವ ಡಾ.ಪಿಎಸ್ ಎಡಪಡಿತ್ತಾಯರು 2013 ರಲ್ಲಿ ನಡೆದ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಅಕ್ರಮ ನಡೆದ ಬಗ್ಗೆ ಒಪ್ಪಿಕೊಳ್ಳುತ್ತಾರೆ.ಅದಕ್ಕಾಗಿಯೇ  ನೇಮಕಾತಿ ಪ್ರಕ್ರಿಯೆಯಿಂದ ಆಗಿನ ವೀಸಿಗಳಾದ ಶಿವಶಂಕರಮೂರ್ತಿಗಳು   ರಿಜಿಸ್ಟ್ರಾರ್ ಆಗಿದ್ದ ಡಾ.ಪಿಎಸ್ ಎಡಪಡಿತ್ತಾಯರನ್ನು ಹೊರಗಿರಿಸಿ ನಡೆಸಿದ ಬಗ್ಗೆಯೂ ಹೇಳಿದ್ದಾರೆ.ಆಗಿನ ವೀಸಿಗಳು ಕೆಲವು ಕ್ಲರ್ಕ್ ಹಾಗೂ ಒಬ್ಬಿಬ್ಬರು ಪ್ರಾಧ್ಯಾಪಕರನ್ನು ಇಟ್ಟುಕೊಂಡು ಅಕ್ರಮ‌ಎಸಗಿದ್ದರಂತೆ.ಅಂದಿನ ನೇಮಕಾತಿಗಳಲ್ಲಿ ಎರಡು ಕೋರ್ಟಿನಲ್ಲಿ ರದ್ದಾಗಿವೆ.ಇನ್ನೂ ಹಲವು ಪ್ರಕರಣಗಳು ನ್ಯಾಯಾಲಯದ ಮುಂದಿವೆ ಎಂದವರು ತಿಳಿಸಿದ್ದಾರೆ.
ಅಂದ ಹಾಗೆ ಅಂದಿನ ನೇಮಕಾತಿಯ ಆಯ್ಕೆ ಸಮಿತಿಯಲ್ಲಿ‌ಡಾ.ಚಿನ್ನಪ್ಪ ಗೌಡ ಮತ್ತು ಡಾ.ಸಬೀಹಾ ಭೂಮಿ ಗೌಡ ಮತ್ತಿತರರು ಇದ್ದರು

ನನ್ನ ವಿಷಯದಲ್ಲಿಯೇ ಇಷ್ಟು ಅನ್ಯಾಯವಾದಾಗ ಓದಿ ಕಲಿಯಿರಿ ಮಕ್ಕಳೇ ಒಳ್ಳೆಯ ಭವಿಷ್ಯ ಇದೆ ಎನ್ನುವಾಗ ನನ್ನ ಧ್ವನಿ ನಡುಗದೆ ಇರಲು ಸಾಧ್ಯವೇ ? ಆದರೂ ನಾನಿದನ್ನು ಮಕ್ಕಳ ಜೊತೆ ಹಂಚಿಕೊಳ್ಳುವುದಿಲ್ಲ.ಅವರ ಆತ್ಮ ವಿಶ್ವಾಸಕ್ಕೆ ಧಕ್ಕೆ ಬಂದು ನಿರಾಸೆ ಮೂಡೀತು ಎಂಬ ಆತಂಕ ನನಗೆ‌
ಇಷ್ಟರ ತನಕ ಸಂದರ್ಶನ ಇರುವಲ್ಲಿ ಮಾತ್ರ ದುಡ್ಡು ವಶೀಲಿ‌ ನಡೆಯುತ್ತದೆ ಎಂಬ ಭಾವ ಇತ್ತು.ಈಗ ಲಿಖಿತ ಪರೀಕ್ಷೆ ಇರುವಲ್ಲಿನಡೆದ ಅಕ್ರಮ ನೋಡಿ ಆಘಾತವಾಗಿದೆ.ನಮ್ಮ‌ಬಡ ಪ್ರತಿಭಾವಂತ ಮಕ್ಕಳ ಪಾಡೇನು ಎಂಬ ಆತಂಕ ಉಂಟಾಗಿದೆ

ನನಗೇನೋ ಬದುಕಲೊಂದು ಗೌರವದ ಉದ್ಯೋಗವಿದೆ.ಮಂಗಳೂರು ಯೂನಿವರ್ಸಿಟಿಗೆ ಅರ್ಜಿ ಅಲ್ಲಿಸುವ ಮೊದಲೇ ನಾನು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕಿಯಾಗಿದ್ದೆ.ಆದರೆ ಉದ್ಯೋಗವಿಲ್ಲದ ಬಡ ಪ್ರತಿಭಾವಂತರ ಬಗ್ಗೆಯೇ ನನ್ನ ಕಾಳಜಿ..
ಈಗ ಸರ್ಕಾರ ಎಲ್ಲ‌ ಅಕ್ರಮಗಳ ಬಗ್ಗೆ ಸರಿಯಾದ ತನಿಖೆ ನಡೆಸಿ ಅದಕ್ಕೆ ಕಾರಣರಾದವ ಮೇಲೆಬಲವಾದ ಕ್ರಮ ತೆಗೆದುಕೊಂಡರೆ ಸ್ವಲ್ಪ ಪ್ರಯೋಜನವಾಗಬಹುದು

ಇದರ ನಡುವೆ ಒಂದು ಗಮ್ಮತ್ತಿನ ವಿಚಾರ ಹೇಳಲು ಮರೆತು ಹೋಯಿತು.ಕಳೆದ ವಾರ ಮಂಗಳೂರು ಯೂನಿವರ್ಸಿಟಿಯ ಈಗಿನ ರಿಜಿಸ್ಟ್ರಾರ್( ಅವರ್ಯಾರೆಂದು ನನಗೆ ಗೊತ್ತಿಲ್ಲ) ಅವರಿಂದ ಲಾಯರ್ ಅರುಣ ಶ್ಯಾಮ್ ಅಸೋಸಿಯೇಟ್ ನ ಸುಯೋಗ ಹೇರಳೆ ಎಂಬವರ ಮೂಲಕ ಒಂದು ಲೀಗಲ್ ನೋಟೀಸ್ ಬಂದಿದೆ.ಮೇಲೆ ಹೇಳಿದ ಮಂಗಳೂರು ಯೂನಿವರ್ಸಿಯಲ್ಲಿ 2013 ರಲ್ಲಿನ ನೇಮಕಾತಿಯಲ್ಲಿ ನಡೆದ ಅಕ್ರಮದ ಬಗ್ಗೆ ,ನನಗೆ ಅನ್ಯಾಯವಾದ ಬಗ್ಗೆ ನನ್ನ ನೋವಿನ ಬಗ್ಗೆ ನನ್ನ ಕರಾವಳಿಯ ಸಾವಿರದೊಂದು ದೈವಗಳು ಕೃತಿಯ ಮನದಾಳದ ಮಾತಿನಲ್ಲಿ ಹಂಚಿಕೊಂಡಿದ್ದೆ.ಇದು ಅವರಿಗೆ ಅವಮಾನ ಆಗಿದೆಯಂತೆ.2013 ರಲ್ಲಿ ರಿಜಿಸ್ಟ್ರಾರ್ ಆಗಿದ್ದು ಈಗ ಅದೇ ಯೂನಿವರ್ಸಿಟಿಯ ವೀಸಿಗಳಾದ ಡಾ.ಸುಬ್ರಹ್ಮಣ್ಯ ಎಡಪಡಿತ್ತಾಯರು ಆಗ ನಡೆದ ಅಕ್ರಮ ಅನ್ಯಾಯಗಳನ್ನು ಮುಕ್ತವಾಗಿ ಹೇಳಿದ್ದಾರೆ.ಆದರೆ ಈಗಿನ ರಿಜಿಸ್ಟ್ರಾರಿಗೆ ಆಗ ನಡೆದದ್ದನ್ನು ಹೇಳಿದ್ದು ಅವಮಾನ ಎನಿಸಿದೆಯಂತೆ.ಬಹುಶಃ ಅವರು ಇತ್ತೀಚೆಗೆ ರಿಜಿಸ್ಟ್ರಾರ್ ಆಗಿದ್ದು ಆಗ 2013 ರಲ್ಲಿ ನಡೆದ ಅವ್ಯವಹಾರ ಅಕ್ರಮಗಳ ಬಗ್ಗೆ ಅವರಿಗೆ ತಿಳಿದಿರಲಾರರು.ಹಾಗಾಗಿ ಅವರಿಗೆ ಇರುವ ವಿಚಾರವನ್ನು ಲೀಗಲ್ ನೋಟೀಸಿನ ಉತ್ತರದಲ್ಲಿ ತಿಳಿಸಿರುವೆ.

ಇನ್ನು ಇಲ್ಲಿನ ನಡೆದ ಅಕ್ರಮ ಅವ್ಯವಹಾರ ಭ್ರಷ್ಟಾಚಾರದ ಬಗ್ಗೆ ನನಗಿಂತ ಹೆಚ್ಚು ಅಧಿಕೃತವಾಗಿ ತಿಳಿದವರು ಆಗ ರಿಜಿಸ್ಟ್ರಾರ್ ಆಗಿದ್ದು ಈಗ ವೀಸಿಗಳಾಗಿರುವ ಡಾ.ಪಿ ಎಸ್ ಯಡಪಡಿತ್ತಾಯರು.ಹಾಗಾಗಿ ಅವರಲ್ಲಿ ಮಾಹಿತಿ ಪಡೆಯುವಂತೆ ಸೂಚಿಸಿರುವೆ..ಅನ್ಯಾಯ ಅಕ್ರಮಮಾಡಬಹುದು..ಹೇಳಬಾರದು ಎಂದರೆ ಹೇಗೆ ?  
ಇಂತಹ ಸಾವಿರ ನೋಟೀಸ್ ಗಳನ್ನೂ ಕೇಸ್ ಗಳನ್ನೂ ನಾನು ಎದುರಿಸಬಲ್ಲೆ ಆದರೆ ಪ್ರಾಮಾಣಿಕವಾಗಿ ಶೆಡ್ಡಿನಲ್ಲಿ ಚಿಮಿಣಿ ದೀಪದಲ್ಲಿ ಕಚ್ಚುವ ಸೊಳ್ಳೆಗಳ ಕಾಟದ ನಡುವೆಯೂ ಓದುವ ಕಲಿಯುವ ನಮ್ಮ‌ ಬಡ ಮಕ್ಕಳಿಗೆ ಉದ್ಯೋಗ ಸಿಗದೆ ಅವೆಲ್ಲವೂ ಭ್ರಷ್ಟರ ಪಾಲಾದರೆ ಎಂಬ ಆತಂಕ ನನ್ನನ್ನು ನಡುಗಿಸುತ್ತಿದೆ.ನಮ್ಮ‌ ಪ್ರತಿಭಾವಂತ ಮಕ್ಕಳ ಮುಖ ನೋಡುವಾಗ ಇವರಿಗೊಂದು ಒಳ್ಳೆಯ ಕೆಲಸ ದೊರೆಯಲಿ ದೇವರೇ ಎಂದು ಪ್ರಾರ್ಥಿಸುವಂತಾಗುತ್ತಿದೆ.ಮೊದಲೆಲ್ಲ ಈ ಆತಂಕ ನನಗಿರಲಿಲ್ಲ.ನಾನು ಲಿಖಿತ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಆಯ್ಕೆ ಅಗಿದ್ದೆನಲ್ಲ.ಹಾಗೆಯೇ ಇವರಯ ಗೆಲ್ಲವರು ಎಂಬ ದೃಢ ನಂಬಿಕೆ ನನಗಿತ್ತು.ಆದರೆ ಭ್ರಷ್ಟಾಚಾರ ಎಲ್ಲೆಡೆ ಹರಡಿದೆ.ಇದನ್ನು ಬುಡ ಸಹಿತ ಕತ್ತರಿಸಿದರೆ ಮಾತ್ರ ಭಾರತಕ್ಕೆ ಭವಿಷ್ಯವಿದೆ 

(ಪ್ರಸ್ತುತ ವಿ ಯ ಅರ್ಥ ಮಾಡಿಕೊಂಡ ರಿಜಿಸ್ಟ್ರಾರ್ ನೋಟಿಸ್ ಕೊಟ್ಟು ಸುಮ್ಮನಾಗಿದ್ದಾರೆ...ಮುಂದುವರಿಸಿಲ್ಲ‌‌.

ನಾನಂತೂ ಕಳೆದ 25 ವರ್ಷಗಳಲ್ಲಿ ಮಂಗಳೂರು ಯೂನಿವರ್ಸಿಟಿ ಮೇಲಿನ ಭ್ರಷ್ಟಾಚಾರ ಆರೋಪದ ಪ್ರಕರಣಗಳ ಮಾಹಿತಿ ಸಂಗ್ರಹಿಸಿ ನ್ಯಾಯಾಲಯದಲ್ಲಿ ಹೋರಾಟ ಮಾಡಲು ಸಿದ್ಧಳಾಗಿದ್ದೆ.) 

ನನ್ನ ಧ್ವನಿ ಉಡುಗಿದೆ 
ಈ ಬರಹ ಸ್ತ್ರೀ ಜಾಗೃತಿ ಪತ್ರಿಕೆಯಲ್ಲಿ ಈ ಹಿಂದೆ ಪ್ರಕಟವಾಗಿದೆ 
 

ನನ್ನ ನಿರೀಕ್ಷೆ ಮೀರಿ ಮೆಚ್ಚುಗೆಯನ್ನು ಈ ಲೇಖನ ಪಡೆದಿದೆ,ಅನೇಕರು ಪೋನ್ ಮಾಡಿ ಮಾತಾಡಿದ್ದಾರೆ


ಡಾ.ಲಕ್ಷ್ಮೀ ಜಿ ಪ್ರಸಾದ್ ,ಕನ್ನಡ ಉಪನ್ಯಾಸಕರು 

Category:Personal Experience



ProfileImg

Written by Dr Lakshmi G Prasad

Verified