ಮನುಷ್ಯನ ದೇಹದ ಅವಯವಗಳಾದ ಕಣ್ಣು, ಕಿವಿ,ಕೈ,ಕಾಲುಗಳಲ್ಲಿ ನಾನು ಹೆಚ್ಚು,ನಾನು ಹೆಚ್ಚೆಂಬ ಕುರಿತು ಜಗಳವಾಯಿತು.ಇತರ ಅವಯವಗಳಿಗೆ ಪಾಠ ಕಲಿಸಲು ಅವುಗಳು ತಮ್ಮ ತಮ್ಮ ಕಾರ್ಯ ನಿಲ್ಲಿಸಿ ವಾದಕ್ಕಿಳಿದವಂತೆ.ಇದನ್ನೆಲ್ಲಾ
ಗಮನಿಸುತ್ತಿದ್ದ ಹೊಟ್ಟೆಯು ಸಹ ಉಪವಾಸ ಮಾಡಿತಂತೆ.ಆಗ ಉಳಿದ ಅಂಗಾಂಗಳೆಲ್ಲ ನಿಸ್ತೇಜಗೊಂಡು,ತಮ್ಮ ತಪ್ಪಿನ ಅರಿವಾಗಿ,ಪಶ್ಚಾತ್ತಾಪಟ್ಟು,"ಹೊಟ್ಟೆಗೆ "ನೀನೇ
ಶ್ರೇಷ್ಠ ಎಂದು ಕೈಮುಗಿದು ಬೇಡಿಕೊಂಡವಂತೆ. ಹೊಟ್ಟೆ ಉಪವಾಸ ನಿಲ್ಲಿಸಿ ತನ್ನ ಚೀಲ ತುಂಬಿಕೊಳ್ಳುತ್ತಿದಂತೆ,ಉಳಿದ ಅವಯವಗಳಿಗೆ ಜೀವಕಳೆ ಲಭಿಸಿ, ಚೇತರಿಸಿಕೊಂಡವಂತೆ.ಇಲ್ಲಿ ಹೊಟ್ಟೆಯ
ಅರ್ಥಾತ್ ಆಹಾರ ಸೇವನೆ (ಊಟ) ಹಾಗೂ ಮಹತ್ವವನ್ನು ಬಿಂಬಿಸಲಾಗಿದೆ.ದೇಹದ ಯಂತ್ರ
ಸೂಸುತ್ರವಾಗಿ ಕೆಲಸ ಮಾಡಲು ಅದಕ್ಕೆ
ಕಾಲಕಾಲಕ್ಕೆ ಆಹಾರದ ಪೂರೈಕೆ ಆಗಲೇ ಬೇಕು.ಹಟಮಾರಿ ಹೊಟ್ಟೆ ಹಸಿದಾಗಲೆಲ್ಲಾ
ಅದರ ಒಡಲು ತುಂಬುವದು ಅನಿವಾರ್ಯ.
ಆದ್ದರಿಂದಲೇ "ಎಲ್ಲರೂ ಮಾಡುವದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ" ಎಂದು ದಾಸರು ಹೊಟ್ಟೆ ಹೊರೆಯುವ ಕಷ್ಟವನ್ನು
ಉಲ್ಲೇಖಿಸಿದ್ದಾರೆ.
ಊಟ ಮಾಡುವ ಕ್ರಿಯೆ ಅಂದರೆ ಜಠರಕ್ಕೆ ಆಹಾರ ಸಲ್ಲಿಸುವದು- ಹಸಿವು ತಣಿಸುವದೆ ಆಗಿದೆ. ಅದ್ದರಿಂದ
ಭೋಜನ ನಮ್ಮ ಜೀವನದ ಬಹು ಪ್ರಮುಖ
ಕ್ರಿಯೆ. ದೇಹದೊಳಗಿನ ಶಕ್ತಿಯ ಸೃಜನೆಗೆ ಇದು ತೀರ ಅಗತ್ಯ.ಇದುವೆ "ಅನ್ನ ದೇವರ ಮುಂದೆ
ಇನ್ನು ದೇವರಿಲ್ಲ ಎಂಬ ಸರ್ವಜ್ಞನ ವಚನದಲ್ಲಿ
ಪ್ರತಿಧ್ವನಿತ.
ಜೀವನದ ಪರಮೋದ್ದೇಶ ಹೊಟ್ಟೆ ಹೊರುವದೇ ಆದರೂ ಅದನ್ನು ಅರಿತು
ಬಾಳುವದು ಅಷ್ಟೇ ಮಹತ್ವದ್ದು.ನಾವು ಕೂಳಿಗೆ ದಂಡ,ಭೂಮಿಗೆ ಭಾರವಾಗಬಾರದು.ಹಿತ ಮಿತ ಆಹಾರದಿಂದ ಆಯಸ್ಸು ವರ್ಧಿಸುತ್ತದೆ. ಕೈಗೆ ಸಿಕ್ಕದ್ದನ್ನು,ಬಾಯಿಗೆ ಬಂದದ್ದನ್ನು, ಮನಸ್ಸಿಗೆ ತೋಚಿದ್ದನ್ನು,ನಾಲಿಗೆ ಬೇಡಿದ್ದನ್ನು ಸದಾ ಕಾಲ ಹೊಟ್ಟೆಗೆ ತುರುಕುತ್ತಲೆ ಇದ್ದರೆ ದೇಹ ಸ್ವಾಸ್ಥ್ಯ ಕೆಟ್ಟು ಔಷಧೋಪಚಾರಕ್ಕೆ ಮೊರೆ ಹೋಗಿ ,ಮತ್ತಷ್ಟು ವಿಷ ಜಠರಾಗ್ನಿಗೆ ಸೇರುತ್ತದೆ.ಪ್ರಾಣಿಗಳು ಸಹ ತಮ್ಮ ಹೊಟ್ಟೆ ತುಂಬಿದ ನಂತರ ಆಹಾರ ಸೇವಿಸುವದಿಲ್ಲ. ಹಾಗೆ ನೋಡಿದರೆ ಮನುಷ್ಯರಿಗೆ ತಿನ್ನುವ ವಿಷಯದಲ್ಲಿ ನಿಯಂತ್ರಣ ಇರುವದಿಲ್ಲ. ಆದ್ದರಿಂದಲೇ ಅಲ್ಲವೆ "ಊಟ ಬಲ್ಲವನಿಗೆ ರೋಗವಿಲ್ಲ,ಮಾತು ಬಲ್ಲವನಿಗೆ ಜಗಳವಿಲ್ಲ" ಎಂಬ ಗಾದೆ ಹುಟ್ಟಿಕೊಂಡಿದ್ದು.
ಪ್ರಹ್ಲಾದ ಪರ್ವತಿ.
ನಾನು ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಸಹಾಯಕ ನಿರ್ದೇಶಕನಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವೆ.ಬರವಣಿಗೆ ನನ್ನ ಪ್ರೀತಿಯ ಹವ್ಯಾಸ.ಅನೇಕ ಲೇಖನ,ಪ್ರವಾಸ ಕಥನ,ಕತೆ,ಕವನ ನಾಡಿನ ಪ್ರಮುಖ ದಿನಪತ್ರಿಕೆಗಳಲ್ಲಿ,ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.ಪಸ್ತುತ ಹುಬ್ಬಳ್ಳಿಯಲ್ಲಿರುವೆ.
0 Followers
0 Following