ಸೃಷ್ಟಿಯಲ್ಲಿ ಅತೀ ಬುದ್ಧಿವಂತ ಜೀವಿ ಎಂದು ಸ್ವಘೋಷಿತವಾಗಿ ತನ್ನನ್ನು ತಾನೇ ಕರೆದು ಕೊಳ್ಳುತ್ತಿರುವ ಮಾನವ ಇಪ್ಪತ್ತೆರಡನೆ ಶತಮಾನಕ್ಕೆ ಗಾಳಿಯ ಜೊತೆ ಜೊತೆಗೇ ನಾನೇನೂ ಕಮ್ಮಿಯಿಲ್ಲವೆಂದು ವೇಗವಾಗಿ ಓಡುತ್ತಿದ್ದಾನೆ. ಅದರ ಫಲ ಇಂದಿನ ಆಧುನಿಕ ತಾಂತ್ರಿಕ ಜಗತ್ತು; ಭೂಮಿ ಬಿಟ್ಟು ಚಂದಿರ, ಮಂಗಳನ ಅಂಗಳದಲ್ಲೂ ತನ್ನ ಛಾಪು ಮೂಡಿಸಿದೆ. ಹಿಂದೆ ಗೆಡ್ಡೆ ಗೆಣಸುಗಳು ಸೊಪ್ಪುತಿಂದು, ಮರದ ತೊಗಟೆ ಹಾಗೂ ಸೊಪ್ಪುಗಳಿಂದ ಮೈ ಮುಚ್ಚಿಕೊಂಡು ಕಾಡಿನಲ್ಲಿ ಜೀವಿಸುತ್ತಿದ್ದ ಮಾನವ ಇಂದು ನಾಡನ್ನು ಕಟ್ಟಿಕೊಂಡು ಭಕ್ಷ್ಯ ಭೋಜನಗಳನ್ನು ತಿನ್ನುತ್ತಾ, ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ವೈಭೋಗದ ಜೀವನವನ್ನು ನೆಡೆಸುತ್ತಿದ್ದಾನೆ. ಅಂದು ಬೆಳಕಿಗಾಗಿ ಕೇವಲ ಸೂರ್ಯ ಚಂದ್ರರನ್ನು ಅವಲಂಬಿಸಿದ್ದ ಮಾನವ ಇಂದು ಕೃತಕ ಬೆಳಕನ್ನೂ ಸಹ ಕಂಡುಹಿಡಿದು ಕೊಂಡಿದ್ದಾನೆ.
ಅಂದು ಮಾನವ ಶಕ್ತಿಯಿಂದ ನೆಡೆಯುತ್ತಿದ್ದ. ಕೆಲಸ ಕಾರ್ಯಗಳನ್ನು ಇಂದು ಮಶಿನ್ಗಳು ಮಾಡುವಂತಾ ಅನುಕೂಲಗಳನ್ನು ಮಾಡಿಕೊಂಡಿದ್ದಾನೆ. ಅಂದು ಕಾಡು ಪ್ರಾಣಿಗಳಂತೆ ಅನಾಗರೀಕವಾಗಿ ಜೀವಿಸುತ್ತಿದ್ದ ಮನುಷ್ಯ ಇಂದು ಹತ್ತು ಹಲವು ಸೌಲಭ್ಯಗಳೊಂದಿಗೆ ನಾಗರೀಕನಾಗಿ ಬದುಕುತ್ತಿದ್ದಾನೆ.!
ಇಂದು ನಾವು ದೈನಂದಿನ ಜೀವನದಲ್ಲಿ ನಿತ್ಯವೂ ಬಳಸುವ ಎಲ್ಲಾ ವಸ್ತುಗಳೂ ತಂತ್ರಜ್ಞಾನದ ಫಲವೇ ಜೊತೆಗೆ ಅವುಗಳಿಲ್ಲದೆ ಬದುಕಲೂ ಕೂಡ ಆಗುವುದಿಲ್ಲ ಎಂಬುವಷ್ಟರ ಮಟ್ಟಿಗೆ ಹಾಸು ಹೊಕ್ಕಾಗಿವೆ.ಹಾಗಂತ ಇದೆಲ್ಲವೂ ಸಾಧ್ಯವಾದದ್ದು ಮನುಷ್ಯನ ಬುದ್ಧಿವಂತಿಕೆಯಿಂದ ಹಾಗೂ ಅವನ ಉನ್ನತ ಜ್ಞಾನದಿಂದ ಎಂಬುದು ಹೆಮ್ಮೆಯ ವಿಷಯವೇ.! ಮನುಷ್ಯನ ಬುದ್ಧಿವಂತಿಕೆ ಹಾಗೂ ಜ್ಞಾನದ ಫಲವಾಗಿ ದಿನದಿಂದ ದಿನಕ್ಕೆ ತಂತ್ರಜ್ಞಾನ ಅತ್ಯುನ್ನತ ಮಟ್ಟಕ್ಕೆ ಬೆಳೆಯುತ್ತಾ ಹೋಗುತ್ತಿದೆ. ಇದರ ಫಲವಾಗಿ ಕಾಡಿನಿಂದ ನಾಡಿಗೆ ಬಂದ ಜೀವನ ಊರು, ಕೇರಿ, ರಾಜ್ಯ, ದೇಶ ಬಿಟ್ಟು ಅನ್ಯ ದೇಶಗಳನ್ನೂ ಸಂಪರ್ಕಿಸುವಂತೆ ಆಗಿದೆ. ರಂಗುರಂಗಿನ ಅಂಗಿ ತೊಟ್ಟು ಆಕರ್ಷಿಸುತ್ತಿರುವ ಇಂದಿನ ಜಗತ್ತಿನ ಮೂಲೆ ಮೂಲೆಗಳನ್ನೂ ಬೆರಳ ತುದಿಯಲ್ಲಿ ತಿರುಚುತ್ತಾ ಕುಳಿತಲ್ಲೇ ನೋಡುವಂತಾಗಿದೆ! ತಂತ್ರಜ್ಞಾನದ ಫಲ ಇಡೀ ಜಗತ್ತು ದೇಶ ಭಾಷೆಗಳಾಚೆ ದೇಶ ದೇಶಗಳ ನಡುವಿನ ತೀವ್ರ ಪೈಪೋಟಿಯ ನಡುವೆ ಹೊಸ ಹೊಸ ಉದ್ಯೋಗಾವಕಾಶಗಳನ್ನು ಹುಟ್ಟು ಹಾಕುತ್ತಿದೆ. ಅಂದು ಉದ್ಯೋಗಕ್ಕಾಗಿ ಊರುಬಿಟ್ಟು ಹೋಗಿ ನೆರೆ ಊರಿನಲ್ಲಿ, ನೆರೆ ರಾಜ್ಯದಲ್ಲಿ ಜೀವನ ಕಟ್ಟಿಕೊಳ್ಳುತ್ತಿದ್ದ ಮಾನವ ಇಂದು ದೇಶವನ್ನೇ ಬಿಟ್ಟು ; ದೇಶ, ಭಾಷೆ ಗಡಿಗಳ ಆಚೆ ವಿವಿಧ ದೇಶಗಳನ್ನು ಸುತ್ತಿ ಜೀವನ ಕಟ್ಟಿಕೊಳ್ಳುವಷ್ಟು ಜಗತ್ತು ಒಂದೇ ಎಂಬಂತೆ ಸಂಕುಚಿತಗೊಂಡಿದೆ. ಜೊತೆಗೆ ದಿನದಿಂದ ದಿನಕ್ಕೆ ಜನರ ಜೀವನ ಶೈಲಿಯ ರೀತಿ ನೀತಿಯೂ ಬದಲಾಗುತ್ತಿದೆ.
ಅಂದು ಸರಳತೆಯಿಂದ ನಿಧಾನವಾಗಿ ನಡೆಯುತ್ತಿದ್ದ ಬದುಕು ಇಂದು ಲಂಗು ಲಗಾಮಿಲ್ಲದ ಕುದುರೆಯಂತೆ ಯದ್ವಾ ತದ್ವಾ ಓಡುತ್ತಿದೆ! ಮನುಕುಲಕ್ಕೆ ತಂತ್ರಜ್ಞಾನ ಒಂದೆಡೆ ವರವಾದರೆ ; ಅತಿಯಾದ ತಾಂತ್ರಿಕ ಬೆಳೆವಣಿಗೆಯ ಫಲ ಇನ್ನೊಂದೆಡೆ ಶಾಪವಾಗಿ ಕೂಡ ಪರಿಣಮಿಸುತ್ತಿದೆ. ತಂತ್ರಜ್ಞಾನದ ಪರಿಣಾಮಗಳು ಯಾವಾಗಲೂ ಪ್ರಯೋಜನಕಾರಿಯಾಗಿರುವುದಿಲ್ಲ. ಆದರೆ ಕೆಲವು ಅವಿಷ್ಕಾರಗಳು ಮಾನವನಿಗೆ ವರದಾನ ವಾಗುತ್ತಿವೆ. ಅವುಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ವ್ಯೆದ್ಯಕೀಯ ಕ್ಷೇತ್ರ. ವ್ಯೆದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಹೊಸ ಅವಿಷ್ಕಾರಗಳು ಮನುಕುಲಕ್ಕೆ ವರದಾನವೇ ಸರಿ. ಆದರೆ ಅದಕ್ಕೆ ತದ್ವಿರುದ್ಧವಾಗಿ ಪ್ಲಾಸ್ಟಿಕ್ ಹಾಗೂ ನ್ಯೂಕ್ಲಿಯರ್ ಬಾಂಬ್ಗಳ ಅವಿಷ್ಕಾರ ಮನುಕುಲಕ್ಕೆ ಒಂದು ರೀತಿಯ ಶಾಪವಿದ್ದಂತೆ. ಇಂದಿನ ಸಮಾಜದ ಸ್ಥಿತಿಗತಿಗಳನ್ನು ನೋಡಿದಾಗ ಸಹಜವಾಗಿ ಅನಿಸುವುದು ಒಂದೇ. ಹೊಸ ಹೊಸ ತಾಂತ್ರಿಕ ಅವಿಷ್ಕಾರದ ಅನೂಕಲತೆಯಿಂದ ಎಷ್ಟು ಒಳ್ಳೆಯದಾಗುತ್ತಿದೆಯೋ ಅದರ ದುಪ್ಪಟ್ಟು ಕೆಡುಕೇ ಆಗುತ್ತಿದೆ. ಆದರೆ ಇದೆಲ್ಲಾ ಮನಕ್ಕೆ ಅರಿವಾದರೂ ಅರಿವೇ ಆಗಿಲ್ಲವೆಂಬಂತೆ ಮನುಕುಲ ಜಾಣ ಕುರುಡುತನ ಪ್ರದರ್ಶಿಸುತ್ತ ತನ್ನನ್ನು ತಾನೇ ವಿನಾಶದ ಅಂಚಿಗೆ ದೂಡಿ ಕೊಳ್ಳುತ್ತಿರುವದು ನಿಜಕ್ಕೂ ವಿಪರ್ಯಾಸ !
ತಂತ್ರಜ್ಞಾನದ ಮೋಹಕ್ಕೆ ಸಿಲುಕಿ ಅತಿಯಾಗಿ ತಂತ್ರಜ್ಞಾನವನ್ನು ಬೆಳೆಸುತ್ತಿರುವುದರ ಜೊತೆಗೆ ಕಾಂಚಾಣದ ಅಮಲಿಗೆ ಬಿದ್ದ ಮಾನವನ ಬದುಕು ಸಂಸ್ಕಾರವನ್ನೇ ಕಳೆದುಕೊಂಡು ಲೆಕ್ಕಾಚಾರವೇ ಬದುಕಾಗುತ್ತಿದೆ. ಮೌಲ್ಯಗಳಿಲ್ಲದ ಇಂದಿನ ಜೀವನ ಕೆಟ್ಟ ಪೈಪೋಟಿಯ ಸುಳಿಗೆ ಸಿಲುಕಿ; ಆಧುನಿಕತೆಯ ಬಣ್ಣ ಬಳಿದುಕೊಂಡು ಸ್ವಾಭಾವಿಕತೆಯನ್ನು ಕಳೆದುಕೊಳ್ಳುತ್ತಿದೆ.ತತ್ಪರಿಣಾಮ ಕೃತಕತೆ ಮತ್ತು ತೋರ್ಪಡಿಕೆಯೇ ಜೀವನವಾಗುತ್ತಿದೆ. ಕೃತಕತೆ ಸ್ವಾಭಾವಿಕವಾಗಿ ; ಸ್ವಾಭಾವಿಕತೆ ಕೃತಕತೆಯಾಗಿ ಸಹಜತೆ ದೂರವಾಗುತ್ತಿದೆ.!
ಇನ್ನೂ ಮೊಬೈಲ್ ಎಂಬ ಮಾಂತ್ರಿಕನಿಂದ ಮನುಜನಿಗೆ ಇಂದು ಸಂಬಂಧಗಳೇ ಬಂಧನವಾಗುತ್ತಿವೆ. ನಡೆ, ನುಡಿ, ಅಳು, ನಗು ಎಲ್ಲವೂ ಕೃತಕತೆಯ ಮುಖವಾಡ ಹಾಕಿಕೊಂಡು ಹುಟ್ಟು ಸಾವುಗಳೂ ಸಹ ತನ್ನ ಸಹಜತೆಯನ್ನು ಕಳೆದುಕೊಳ್ಳುತ್ತಿವೆ. ಅಲ್ಲದೆ, ಇಂದಿನ ಜನರ ಬಹುಪಾಲು ಸಮಯವನ್ನು ಸಾಮಾಜಿಕ ಜಾಲತಾಣಗಳೇ ಕಸಿದು ಕೊಳ್ಳುತ್ತಿದ್ದು ಸೋಮಾರಿತನವೆಂಬ ಬಹುದೊಡ್ಡ ರೋಗ ದಿನದಿನಕ್ಕೂ ಹೆಚ್ಚುತ್ತಿದೆ. ಇಂದಿನ ಜನತೆ ಮೊಬೈಲ್ ಎಂಬ ಸುರಪಾನಕ್ಕೆ ದಾಸನಾಗಿರುವುದರ ಪ್ರತಿಫಲ ಮನುಷ್ಯ ಮನುಷ್ಯರ ನಡುವಿನ ಸಂಬಂಧದ ಅಂತರ ಹೆಚ್ಚುತ್ತಿದ್ದು ಸಂಬಂಧಗಳೇ ಇಲ್ಲದಂತಾಗಿದೆ. ಅಲ್ಲದೆ ಗ್ರಂಥಾಲಯಗಳು, ಪುಸ್ತಕಗಳು ಮೂಲೆ ಗುಂಪಾಗುತ್ತಿವೆ. ಆಲ್ಲದೆ ಅತಿಯಾದ ಮೊಬೈಲ್ ಬಳಕೆ ಹಲವು ರೋಗಗಳಿಗೂ ಮೂಲವಾಗುತ್ತಿದ್ದು ಜನರು ಮಾನಸಿಕ ಸ್ಥಿರತೆಯನ್ನೇ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ.
ಇಂದಿನ ಮನುಕುಲ ತನ್ನ ದುರಾಸೆಗೆ ಬಹುತೇಕ ಕಾಡನ್ನು ನಾಡನ್ನಾಗಿ ಪರಿವರ್ತಿಸಿ ಕಾರ್ಖಾನೆಗಳ ಹಂದರವನ್ನಾಗಿ ಮಾಡುತ್ತಿರುವ ದುಷ್ಫಲ ಗಾಳಿ, ನೀರು, ಮಣ್ಣಿನ ಜೊತೆ ಇಡೀ ಪ್ರಕೃತಿಯೇ ಮಲೀನವಾಗುತ್ತಿದೆ. ಇದರಿಂದ ಜಾಗತಿಕ ತಾಪಮಾನ ಹೆಚ್ಚಾಗಿ ಪ್ರಕೃತಿ ಮಾತೇ ಅಗಾಗ್ಗೆ ಒಂದಲ್ಲಾ ಒಂದು ರೀತಿಯಲ್ಲಿ ಸಿಡಿಯುತ್ತಲೇ ಇರುತ್ತಾಳೆ. ಜೊತೆಗೆ ಕಾರ್ಖಾನೆಗಳ ಕಲುಷಿತ ನೀರನ್ನು ಭೂ ತಾಯಿಯ ಒಡಲಿಗೆ ಕುಡಿಸುತ್ತಿರುವ ದುಷ್ಪರಿಣಾಮ ತಾನು ಜೀವಿಸಲು ಅಗತ್ಯವಾಗಿ ಬೇಕಾಗಿರುವ ಜೀವ ಜಲವನ್ನೂ ಕೂಡ ಹಾಲಾಹಲವನ್ನಾಗಿ ಮಾರ್ಪಡಿಸಿಕೊಳ್ಳುತ್ತಿದ್ದಾನೆ. ಮೂರ್ಖ ಮಾನವ !
ಅಲ್ಲದೆ ಅಭಿವೃದ್ಧಿಯ ಹೆಸರಿನಲ್ಲಿ ಕೈಗಾರೀಕರಣಕ್ಕಾಗಿ ಕಾಡನ್ನು ಕಡಿಯುತ್ತಿರುವ ಪರಿಣಾಮ ಪ್ರಾಣಿ, ಪಕ್ಷಿ, ವನ್ಯ ಜೀವಿಗಳಿಗೆ ನೆಲೆಯಿಲ್ಲದಂತಾಗಿದೆ. ಪ್ರಕೃತಿಯಲ್ಲಿ ಬದುಕುವ ಹಕ್ಕು ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಇದೆ ಎಂಬ ಮಹತ್ವದ ವಿಷಯವನ್ನೇ ಸ್ವಾರ್ಥಿ ಮಾನವ ಮರೆಯುತ್ತಿದ್ದಾನೆ. ತಂತ್ರಜ್ಞಾನದ ಆವಿಷ್ಕಾರಗಳು ಎಷ್ಟು ಉದ್ಯೋಗವನ್ನು ಸೃಷ್ಟಿಸುತ್ತಿವೆಯೋ ಅಷ್ಟೇ ನಿರುದ್ಯೋಗವೂ ಸೃಷ್ಟಿಯಾಗುತ್ತಿದ್ದು ಸಾವಿರಾರು ಕಾರ್ಮಿಕರು ಮಾಡುವ ಕೆಲಸವನ್ನು ಕೇವಲ ಒಂದು ಯಂತ್ರ ಮಾಡುತ್ತಿದೆ; ಇದರಿಂದ ಮಾನವ ಶಕ್ತಿ ಪೋಲಾಗುತ್ತಿದೆ.
ಅಲ್ಲದೆ ಹಲವು ಸೈಬರ್ ಕ್ರೈಂ ಗಳು, ಆನ್ಲೈನ್ ಸೌಲಭ್ಯ ಕೂಡ ಮೋಸ, ವಂಚನೆ ಸೇರಿ ನೂರಾರು ಸಮಸ್ಯೆಗಳಿಗೆ ಮೂಲವಾಗಿ ನಂಬಿಕೆಯ ಸ್ಥಾನವನ್ನು ಲೆಕ್ಕಾಚಾರಗಳು ತುಂಬುತ್ತಿವೆ. ಇಷ್ಟು ಸಾಲದೆಂಬಂತೆ ಅತಿಯಾದ ಫಸಲಿನ ದುರಾಸೆಗೆ ಬಲಿಬಿದ್ದು ಅಮೃತದಂತ ಆರೋಗ್ಯಕರ ಬೆಳೆ ಬೆಳೆಯುವ ವಸುಧೆಯೊಡಲಿಗೆ ರಸಾಯನಿಕಯುಕ್ತ ಗೊಬ್ಬರ ಹಾಕಿ ತಾನು ತಿನ್ನುವ ಆಹಾರವನ್ನೇ ವಿಷವನ್ನಾಗಿ ಮಾರ್ಪಡಿಸಿಕೊಳ್ಳುತ್ತಿದ್ದಾನೆ ಅವಿವೇಕಿ ಮಾನವ!ದಿನಗಳು ಉರುಳಿದಂತೆ ಸಾವಿರಾರು ಉತ್ಪನ್ನಗಳನ್ನು ಕಂಡುಹಿಡಿಯುತ್ತಲೇ ಇರುತ್ತಾನೆ. ಅವುಗಳಲ್ಲಿ ಕೆಲವೊಂದಿಷ್ಟು ಉತ್ಪನ್ನಗಳಿಂದ ತನ್ನನ್ನು ತಾನೇ ಅವನತಿಯ ಅಂಚಿನತ್ತಾ ದೂಡಿಕೊಳ್ಳುತ್ತಿದ್ದಾನೆ ಎಂಬುದು ಅವನ ಅರಿವಿಗೇ ಬರುತ್ತಿಲ್ಲ. ಇಂಥಹ ಅಪಾಯಕಾರಿ ಉತ್ಪನ್ನಗಳಲ್ಲಿ ಪ್ರಮುಖವಾದದ್ದು "ಪ್ಲಾಸ್ಟಿಕ್" ಎಂಬ ವಿಷ. ಸುಟ್ಟರೂ ಕರಗದ ನಾಶಮಾಡಲೂ ಆಗದ ಪ್ಲಾಸ್ಟಿಕ್ ಅನ್ನು ಭೂಮಿಗೆ ಹಾಕುತ್ತಿರುವ ಪರಿಣಾಮ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಇದೂ ಸಾಲದೆಂಬಂತೆ ಮನುಜ ತಾನು ತಿನ್ನುವ ಆಹಾರಕ್ಕೆ ತಾನೇ ಕಲಬೆರಿಕೆಯೆಂಬ ವಿಷ ಹಾಕಿಕೊಳ್ಳುತ್ತಾ ತನ್ನ ಆರೋಗ್ಯಕ್ಕೆ ತಾನೇ ಸಂಚಕಾರ ತಂದುಕೊಳ್ಳುತ್ತಿದ್ದಾನೆ! ಭೂ ಒಡಲಿಗೆ ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಹಾಲಾಹಲವನ್ನುಣಿಸುತ್ತಿರುವ ಪ್ರತಿಫಲಕ್ಕೆ ದಿನಕ್ಕೊಂದು ರೂಪದ ರೋಗಾಣುಗಳು ಹುಟ್ಟಿಕೊಂಡು ಮನುಷ್ಯನ ದೇಹ ರೋಗ ರುಜನೆಗಳು ಗೂಡಾಗುತ್ತಿದೆ. ಅಂದು ಶುದ್ಧ ಆಹಾರ ತಿಂದು ಬದುಕುತ್ತಿದ್ದ ಮನುಷ್ಯ... ಇಂದು ಔಷಧಿ ತಿಂದು ಬದುಕುವಂತಾಗಿದೆ.! ಇದಕ್ಕೆಲ್ಲಾ ಪರಿಹಾರವೆಂದರೆ ತಂತ್ರಜ್ಞಾನದ ಮೇಲಿನ ನಮ್ಮ ಅವಲಂಬನೆಯನ್ನು ನಾವು ನಿಗ್ರಹಿಸಬೇಕೇ ಹೊರತು ತಂತ್ರಜ್ಞಾನವಲ್ಲ.
ತಾಂತ್ರಿಕತೆ ಅಭಿವೃದ್ಧಿಗೆ ಬೇಕೇ ಬೇಕು ಆದರೆ ನಾವು ನಮ್ಮತನವನ್ನು ಕಳೆದುಕೊಳ್ಳದೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಸ್ವೀಕರಿಸಬೇಕು. ಎಲೆಕ್ಟ್ರಾನಿಕ್ಸ್ ವಸ್ತುಗಳ ಮಿತಿಮೀರಿದ ಬಳಕೆಯನ್ನು ಕಡಿಮೆ ಗೊಳಿಸಿಕೊಳ್ಳಬೇಕೇ ಹೊರತು ನಮ್ಮನ್ನೇ ನಿಯಂತ್ರಿಸಲು ತಂತ್ರಜ್ಞಾನಕ್ಕೆ ಬಿಡಬಾರದು. ನಮ್ಮ ಬುದ್ದಿ ಸದಾ ಕ್ರಿಯಾತ್ಮಕವಾಗಿ, ಸದೃಢತೆಯಿಂದ ಧನಾತ್ಮಕ ಬೆಳವಣಿಗೆಯ ಬಗ್ಗೆ ಚಿಂತಿಸುತ್ತಾ ಆರೋಗ್ಯಕರ ವಾಗಿರಬೇಕೆ ವಿನಃ, ಬೇಡದ ವಿಷಯಗಳ ಬಗ್ಗೆ ಚಿಂತಿಸುತ್ತಾ ಚಿತೆ ಏರುವಂತಾಗಬಾರದು. ಅತಿಯಾದ ತಂತ್ರಜ್ಞಾನದ ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಅಕ್ಷರಶಃ ಸತ್ಯ! ಯಾವುದಾದರೂ ಸರಿ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದನ್ನು ಕಲಿಯುಗದ ಈ ಮನುಕುಲ ಅರ್ಥಮಾಡಿಕೊಳ್ಳಬೇಕು. ಹಾಗೂ ತನ್ನ ದುರಾಸೆಯನ್ನು ಬಿಟ್ಟು, ವಾಸ್ತವದ ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳಬೇಕಾಗಿರುವುದು ಅತ್ಯವಶ್ಯಕವಾಗಿದೆ. ಹಾಗಾದಾಗ ಮಾತ್ರ ನಮ್ಮ ಮುಂದಿನ ಪೀಳಿಗೆ ಆರೋಗ್ಯಕರ ಪರಿಸರದ ಜೊತೆ ಉತ್ತಮ ಜೀವನ ನೆಡೆಸಲು ಸಾಧ್ಯ.
“ದುರಾಸೆಯ ದುಷ್ಫಲವನ್ನು ಉಣ್ಣುವ ಮುನ್ನ ಜ್ಞಾನದ ಕಣ್ತೆರೆದು ನೋಡೊಮ್ಮೆ ಮನುಜ”!
ಗೀತಾಂಜಲಿ ಎನ್ ಎಮ್
ಲೇಖಕಿ
Author ✍️
0 Followers
0 Following