ಡಿಜಿಟಲ್ ಉಪವಾಸ

ಆಸ್ತಿಕ-ನಾಸ್ತಿಕ, ಕಿರಿಯ-ಹಿರಿಯರು ಎಲ್ಲರಿಗೂ ಅನ್ವಯ

ProfileImg
22 Jan '24
4 min read


image

                         ಹಿಂದೂ ಧರ್ಮದಲ್ಲಿ “ಉಪವಾಸ” ಎಂಬ ಪದ ಸರ್ವೆಸಾಮಾನ್ಯ. ಜನರು ವಾರದಲ್ಲಿ ಒಮ್ಮೆಯಾದರೂ ಉಪವಾಸ ವೃತ ಕೈಗೊಳ್ಳುತ್ತಾರೆ. ಇಸ್ಲಾಂ ಧರ್ಮದಲ್ಲಿ ಕೂಡ ರಂಜಾನ್ ಸಂದರ್ಭದಲ್ಲಿ ಒಂದು ತಿಂಗಳ ಕಾಲ ಉಪವಾಸ ವೃತ ಆಚರಣೆಯನ್ನು ಕಾಣಬಹುದು. ಹಾಗಯೇ ಕ್ರೈಸ್ತ್ ಧರ್ಮ ಕೂಡ ಇದಕ್ಕೆ ಹೊರತಾಗಿಲ್ಲ. ಸರ್ವಧರ್ಮಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಈ ಪದ್ದತಿ ಜರುಗುತ್ತಲಿದೆ. ಅಷ್ಟೇ ಅಲ್ಲದೇ ಎಷ್ಟೋ ಆರೋಗ್ಯದ ಸಮಸ್ಯೆಗಳಿಗೆ ಈ ಉಪವಾಸ ಪರಿಹಾರವಾಗಿದೆ. 

                          “ಡಿಜಿಟಲ್ ಉಪವಾಸ” – ಈ ಪದ ಕೇಳಲು ಸ್ವಲ್ಪ ವಿಭಿನ್ನ ಹಾಗೂ ಒಂದಕ್ಕೊಂದು ಸಂಬಂಧವೇ ಇಲ್ಲ ಅಂತ ಅನ್ನಿಸಿದ್ರೂ, ಸದ್ಯದ ಮಟ್ಟಿಗೆ ನಮಗೆಲ್ಲರಿಗೂ ಇದರ ಅವಶ್ಯಕತೆ ಖಂಡಿತ ಇದೆ. ಆಧುನಿಕ ಬಿಡುವಿಲ್ಲದ ಜೀವನದಲ್ಲಿ ಪ್ರತಿಯೊಬ್ಬರು ಡಿಜಿಟಲ್‌ಮಯ ಅಂದರೆ ಡಿಜಿಟಲ್ ಸಾಧನಗಳನ್ನು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿ ಮಾಡಿಕೊಂಡಿದ್ದೇವೆ. ಮನುಷ್ಯನ ಸಹಾಯಕ್ಕೆಂದು ಮನುಷ್ಯನೆ ಸೃಷ್ಠಿಸಿದ ಉಪಕರಣಗಳು ಇಂದು ಮನುಷ್ಯನನ್ನೆ ತನ್ನ ಕೈಗೊಂಬೆ ಮಾಡಿಕೊಂಡಿದ್ದಾವೆ. ಈ ಡಿಜಿಟಲ್ ಯುಗದಲ್ಲಿ ಒಟ್ಟಾರೆಯಾಗಿ ಈ ಡಿಜಿಟಲ್ ಉಪಕರಣಗಳು ನಮ್ಮ ಆರೋಗ್ಯ, ನೆಮ್ಮದಿ, ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತಿರುವುದು ಮಾತ್ರ ಸುಳ್ಳಲ್ಲ. 

                         ಹಾಗಾದ್ರೆ ಈ ಡಿಜಿಟಲ್ ಉಪವಾಸ ಅಂದ್ರೆ ಏನು? ಡಿಜಿಟಲ್‌ಗೂ ಉಪವಾಸಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಓದುಗರಲ್ಲಿ ಮೂಡುವುದು ಸಹಜ. ಇದನ್ನು ನಾವು ಅನುಸರಿಸಿದರೆ ನಮ್ಮಲ್ಲಿ ಯಾವ ರೀತಿ ಬದಲಾವಣೆ ಕಾಣಬಹುದು ಅಂತ ನೋಡೋಣ ಬನ್ನಿ.

                         ಆರೋಗ್ಯ ಮತ್ತು ಧಾರ್ಮಿಕ ಪ್ರಕ್ರಿಯೆಗಳಲ್ಲಿ ಪ್ರಸ್ತಾಪವಾಗುವ ಈ ಉಪವಾಸ ಆಧುನಿಕ ಡಿಜಿಟಲ್ ಜಗತ್ತಿನಲ್ಲಿ ಸದ್ದು ಮಾಡುತ್ತಿದೆ. 2ಜಿ ಕಾಲದಿಂದ 4ಜಿ ಕಾಲದವರೆಗೂ ಮೊಬೈಲ್ ಅನೇಕ ಮಜಲುಗಳನ್ನು ದಾಟಿ ಈಗ 5ಜಿ ಗೆ ಬಂದು ನಿಂತಿದೆ. ಆಧುನಿಕ ತಂತ್ರಜ್ಞಾನ ಹೊಂದಿರುವ ಮೊಬೈಲ್ ಜನರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಇತ್ತಿಚೆಗೆ ಕರೆಗಳು ಮತ್ತು ಡಾಟಾ ಕೂಡ ಅತ್ಯಂತ ಕಡಿಮೆ ದರಕ್ಕೆ ಜನರ ಕೈಗೆ ಎಟಕುತ್ತಿರುವುದರಿಂದ ಬಹುತೇಕರು ಅಂತರ್ಜಾಲದಲ್ಲಿ ಬಹು ಸಮಯ ಕಳೆಯುತ್ತಿದ್ದು, ದಿನದ ಸುದೀರ್ಘ ಅವಧಿಯನ್ನು ಮೊಬೈಲ್, ಇಂಟರ್‌ನೆಟ್, ಸಾಮಾಜಿಕ ಜಾಲತಾಣಗಳು ಎಂಬ ಡಿಜಿಟಲ್ ಜಗತ್ತಿನಲ್ಲಿ ಮುಳುಗಿರುತ್ತೇವೆ. ಇಲ್ಲಿ ವ್ಯಯವಾಗುವ ಸಮಯವನ್ನು ತಗ್ಗಿಸಿ, ಅದೇ ಸಮಯವನ್ನು ನಮ್ಮ ಅಭಿರುಚಿ, ಹವ್ಯಾಸ, ಉತ್ತಮ ಕಾರ್ಯಗಳಿಗೆ ವಿನಿಯೋಗಿಸುವುದರ ಮೂಲಕ ನಮ್ಮ ಮಾನಸಿಕ, ದೈಹಿಕ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು ಎಂಬುದು ಈ ಡಿಜಿಟಲ್ ಉಪವಾಸದ ಆಶಯ.

                         ಈಗಿನ ಕಾಲದಲ್ಲಿ ಮಕ್ಕಳು, ಯುವಕರು ಮಾತ್ರವಲ್ಲದೇ ಹಿರಿಯರು ಕೂಡ ಈ ಡಿಜಿಟಲ್ ಜಗತ್ತಿಗೆ ಮಾರುಹೋಗಿದ್ದಾರೆ. ಯಾರನ್ನೇ ನೋಡಿದರೂ ದೊಡ್ಡ ದೊಡ್ಡ ಪರದೆಯ ಮೊಬೈಲ್‌ಗಳನ್ನು ಹಿಡಿದುಕೊಂಡು ಪೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಂ, ಟ್ವಿಟರ್, ಗೇಮ್ಸ್ ಇತ್ಯಾದಿ ಜಾಲತಾಣಗಳಲ್ಲಿ ವ್ಯಸ್ತರಾಗಿರುತ್ತಾರೆ. ಅಂತವರನ್ನೇ ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಜಪಾನ್ ದೇಶದಲ್ಲಿ ಪ್ರಥಮ ಬಾರಿಗೆ ಈ ತೆರನಾದ ಉಪವಾಸ ಪರಿಚಯಿಸಲಾಯಿತಂತೆ. ಇದೀಗ ಭಾರತ ಸೇರಿದಂತೆ ಜಗತ್ತಿನ ಹಲವೆಡೆಗಳಲ್ಲಿ ಡಿಜಿಟಲ್ ಉಪವಾಸದ ಪರಿಕಲ್ಪನೆ ಜನಪ್ರೀಯತೆಯನ್ನು ಪಡೆದುಕೊಳ್ಳುತ್ತಿರುವುದು ವಿಶೇಷ.

                        ಡಿಜಿಟಲ್ ದುನಿಯಾದಲ್ಲಿ ಮುಳುಗಿರುವವರಿಗೆ ಒಂದೇ ಬಾರಿಗೆ ಡಿಜಿಟಲ್ ಉಪಕರಣಗಳು, ಮೊಬೈಲ್ ಹಾಗೂ ಜಾಲತಾಣಗಳಿಂದ ದೂರವಾಗಲು ಅಸಾಧ್ಯ ಎನಿಸಬಹುದು. ಆದರೆ ಹನಿ ಹನಿ ಗೂಡಿದರೆ ಹಳ್ಳ ಎಂಬಂತೆ ದಿನದ ಒಂದಿಷ್ಟು ನಿಮಿಷಗಳು ಅಥವಾ ಸಾಧ್ಯವಾದರೆ ಒಂದಿಷ್ಟು ಗಂಟೆಗಳ ಕಾಲ ನಾನು (ತುರ್ತು ಸಂದರ್ಭಗಳನ್ನು ಹೊರತು ಪಡಿಸಿ) ಯಾವುದೇ ಕಾರಣಕ್ಕೂ ಆ ಕ್ಷಣಗಳಲ್ಲಿ ಮೊಬೈಲ್ ಮುಟ್ಟುವುದಿಲ್ಲ ಹಾಗೂ ಇಂಟರ್‌ನೆಟ್ ಬಳಸುವುದಿಲ್ಲ ಎಂಬ ಪ್ರತಿಜ್ಞೆ ಮಾಡಿ. ನಿಮ್ಮ ಪ್ರತಿಜ್ಞೆ ದೃಢವಾಗಿದ್ದರೆ ಮಾತ್ರ ಫಲ ದೊರೆಯುತ್ತದೆ. ಹೀಗೆ ಪ್ರತಿ ಸಲ ಅರ್ಧ ಗಂಟೆ, ಒಂದು ಗಂಟೆ, ಎರಡು ಗಂಟೆ ಹೀಗೆ ದಿನದಿಂದ ದಿನಕ್ಕೆ ನಿಮ್ಮ ಸಮಯದ ಮಿತಿಯನ್ನು ಹೆಚ್ಚಿಸುತ್ತಾ ಸಾಗಿ. ಒಂದು ಕ್ಷಣವೂ ನಿಮಗೆ ಸಂಪೂರ್ಣವಾಗಿ ಮೊಬೈಲ್‌ನ್ನು ಬಿಟ್ಟಿರಲಾರೆ ಎನ್ನುವುದಾದರೆ ಇನ್ನೊಂದು ಮಾರ್ಗ ಕೂಡ ಅನುಸರಿಸಬಹುದು. ಒಂದು ದಿನ ವಾಟ್ಸಾಪ್‌ನಿಂದ ದೂರವಿರಿ, ಮತ್ತೊಂದು ದಿನ ಪೇಸ್‌ಬುಕ್‌ನಿಂದ ದೂರವಿರಿ, ಯುಟ್ಯೂಬ್, ಟ್ವಿಟರ್, ಇನ್‌ಸ್ಟಾಗ್ರಾಂ ಹೀಗೆ ದಿನದಿಂದ ದಿನಕ್ಕೆ ನಿಮ್ಮ ದೃಡ ನಿರ್ಧಾರ ಗಟ್ಟಿಯಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೇಲೆ ಹಿಡಿದ ಸಾಧಿಸಿದ ನಂತರ ವಾರದಲ್ಲಿ ರವಿವಾರ ಅಥವಾ ನಿಮಗೆ ಅನುಕೂಲವಾದ ಒಂದು ದಿನ ಮೊಬೈಲ್ ಹಾಗೂ ಇಂಟರ್‌ನೆಟ್‌ನಿಂದ ದೂರವಿರಲು ಪ್ರಯತ್ನಿಸಬಹುದು ಮತ್ತು ಖಂಡಿತವಾಗಿ ಸಫಲರಾಗಬಲ್ಲಿರಿ.

                           ನಿಮ್ಮ ಡಿಜಿಟಲ್ ಉಪವಾಸದ ಅಮೂಲ್ಯವಾದ ಆ ಕ್ಷಣಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಯಾಕೆಂದರೆ ಮಹತ್ವಪೂರ್ಣವಾದ ಕ್ಷಣಗಳನ್ನು ನೀವು ಉತ್ತಮ ರೀತಿಯಲ್ಲಿ ಬಳಸಿಕೊಳ್ಳದಿದ್ದರೆ, ಇಷ್ಟೊಂದು ಸಂಯಮದಿಂದ ನೀವು ವ್ಯಯಿಸಿದ ಶ್ರಮಕ್ಕೆ ಅರ್ಥವೇ ಇರಲ್ಲ, ಅದನ್ನು ಅರ್ಥಪೂರ್ಣಗೊಳಿಸುವ ಹೊಣೆ ಕೂಡ ಸ್ವಯಂ ನಮ್ಮ ಮೇಲಿದೆ. ಆ ಸಮಯದಲ್ಲಿ ನೀವು ಓದಬೇಕೆಂದಿರುವ ಪುಸ್ತಕ ಓದಿ, ನಿಮ್ಮಲ್ಲಿ ಅಡಗಿರುವ ಕಲೆಯನ್ನು ಹೊರತನ್ನಿ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ, ಸಾಮಾಜಿಕವಾಗಿ ಜನರೊಂದಿಗೆ ಬೆರೆಯಿರಿ, ನಿಮ್ಮ ಕುಟುಂಬ ಹಾಗೂ ಆಪ್ತರೊಂದಿಗೆ ಕಾಲ ಕಳೆಯಿರಿ, ನಿಮ್ಮ ಬಾಲ್ಯದ ಕನಸುಗಳಿಗೆ ಮರುಜೀವ ನೀಡಿ, ಹೀಗೆ ನೀವು ಮಾಡಬೇಕೆಂದಿರುವ ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲು ಈ ಸದಾವಕಾಶವನ್ನು ಬಳಸಿಕೊಳ್ಳಬಹುದು.

                           ಚಾಟಿಂಗ್, ಗೇಮ್ಸ್, ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಾಗಿರುವ ಮಾನವನಿಗೆ ಸಮಯದ ಪರಿವೇ ಇರುವುದಿಲ್ಲ. ಕೈಗೆತ್ತಿಕೊಂಡ ಮೊಬೈಲ್‌ನ್ನು ಮತ್ತೆ ಕೆಳಗಿಡುವುದು ಅದರ ಬ್ಯಾಟರಿ ಖಾಲಿಯಾದಾಗಲೇ. ಮೊಬೈಲ್‌ನಲ್ಲಿನ ಹಲವಾರು ಬಗೆಯ ಚಟುವಟಿಕೆಗಳು ನಮ್ಮ ಮನಸ್ಸಿನ ಮೇಲೆ ಬಹಳ ಗಾಢವಾದ ಪರಿಣಾಮ ಬೀರುತ್ತವೆ. ಅತಿಯಾದ ಮೊಬೈಲ್ ಬಳಕೆಯಿಂದ ಮನುಷ್ಯನಲ್ಲಿ ಚಿಕ್ಕ ವಿಷಯಕ್ಕೂ ಕೋಪಗೊಳ್ಳುವುದು, ಮೊಬೈಲ್ ತರಂಗಗಳಿಂದ ಮಿದುಳಿಗೆ ತೊಂದರೆಯಾಗುವ ಸಂಭವ, ಎಕಾಂಗಿತನ ಬಯಸುವುದು, ಎಕಾಗ್ರತೆಯ ಕೊರತೆ, ಮೊಬೈಲ್ ಪರದೆಯ ಬೆಳಕಿನಿಂದ ಕಣ್ಣುಗಳಿಲ್ಲಿ ನೋವು ಕಾಣಿಸುವುದು ಸಾಮಾನ್ಯ. ಮೊಬೈಲ್ ಎಂಬ ಸಾಧನದಲ್ಲಿ ಅಡಗಿರುವ ಪೇಸ್‌ಬುಕ್, ವಾಟ್ಸಾಪ್, ಟ್ವಿಟರ್, ಇನ್‌ಸ್ಟಾಗ್ರಾಂ ಇತ್ಯಾದಿ ಜಾಲತಾಣಗಳೆಂಬ ಕಾಯಿಲೆಗಳು ನಿಧಾನವಾಗಿ ಮಾನವನ ಮನಸ್ಸನ್ನು ಆಕ್ರಮಿಸಿಕೊಳ್ಳುವ ಮೂಲಕ ಆತನ ಆರೋಗ್ಯಕ್ಕೆ ಹಾನಿಕಾರ ಎನಿಸಿವೆ.

                         ತನ್ನ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುವ ಮಾನವನಿಗೆ ಈ ಮೊಬೈಲ್‌ನಿಂದ ತನ್ನ ಆರೋಗ್ಯ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಮಾಹಿತಿ ಇದ್ದರೂ ಕೂಡ ಅದರ ಬಿಗಿಯಾದ ಜಾಲದಲ್ಲಿ ಬಂಧಿತನಾಗಿದ್ದಾನೆ. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳುಲು, ನಮಗಾಗಿ ಅಲ್ಲದಿದ್ದರೂ ನಮ್ಮವರಿಗಾಗಿ ಇದು ಅತ್ಯಗತ್ಯವಾಗಿದೆ. ಡಿಜಿಟಲ್ ಉಪವಾಸದಿಂದ ಇದು ಸಾಧ್ಯವಾಗುವುದಾದರೆ ಇದನ್ನು ಒಂದು ಬಾರಿ ಪ್ರಯತ್ನಿಸುವುದರಲ್ಲಿ ತಪ್ಪೇನಿಲ್ಲ. 

                         ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ಈ ಸುದಿನದಂದು ಈ ಆಧುನಿಕ ಡಿಜಿಟಲ್ ಉಪವಾಸ ಪ್ರಾರಂಭಿಸಿ. ಆಸ್ತಿಕರು ಈ ಭವ್ಯವಾದ ದಿನವನ್ನು ತಮ್ಮ ಜೀವನದಲ್ಲಿ ಗುರುತಾಗಿಸಿಕೊಳ್ಳಲು ಒಂದೊಳ್ಳೆ ಅವಕಾಶ. ಇನ್ನು ದೇವರ ಮೇಲೆ ನಂಬಿಕೆ ಇಲ್ಲದವರು ಕೂಡ ಪ್ರಾರಂಭಿಸುವ ಮೂಲಕ ತಮ್ಮ ಬದುಕಿನಲ್ಲಿ ಬದಲಾವಣೆ ಕಾಣಬಹುದು. ಒಂದು ಶುಭ ಕಾರ್ಯ ಆರಂಭಿಸಲು ಮತ್ತೇಕೆ ತಡ, ನಾಳೆ ಎನ್ನುವ ಬದಲು ಇಂದೇ ಕಾರ್ಯ ಪ್ರಾರಂಭವಾಗಲಿ. 

✍ ಆರ್.ಕೆ. ಅಂಕಣ …

Category:Personal Development



ProfileImg

Written by RK Ankan

0 Followers

0 Following