ದೇಹದ ಆರೋಗ್ಯ ಕಾಪಾಡಿಕೊಳ್ಳಲು ಬಹಳ ರಿಸ್ಕ್ ಪಡುವ ಅವಶ್ಯಕತೆ ಏನೂ ಇಲ್ಲ. ಡಯೆಟ್ ಮಾಡಿದರೆ ಅಷ್ಟೇ ಸಾಕು. ಅದರೊಂದಿಗೆ ನಿತ್ಯ ಅರ್ಧ ತಾಸು ವಾಕಿಂಗ್ ಮಾಡಿದರೆ ದಿನವಿಡೀ ಉತ್ಸಾಹದಿಂದ ಕಳೆಯಬಹುದು. ಇದರೊಂದಿಗೆ ಆರೋಗ್ಯವೂ ಚೆನ್ನಾಗಿ ಇರಲಿದೆ. ಹಾಗಾದರೆ ಈ ಡಯೆಟ್ ಎಂದರೆ ಹೇಗೆ ? ಏನೇನೆಲ್ಲಾ ತಿನ್ನಬೇಕು. ಏನೆಲ್ಲಾ ತಿನ್ನಬಾರದು ಎಂಬುದನ್ಮು ಈ ಲೇಖನದಲ್ಲಿ ತಿಳಿಯೋಣ.
ಸಸ್ಯಹಾರ
ರಾಗಿ, ಗೋಧಿ, ರವೆ, ಧಾನ್ಯಗಳು ಹಾಗೂ ಹಣ್ಣು ತರಕಾರಿ
ಮಾಂಸಹಾರ
ಚಿಕನ್ ಮತ್ತು ಮೊಟ್ಟೆ
ಮೇಲಿನ ಈ ಆಹಾರಗಳನ್ನು ಬಳಸಿ ಕನಿಷ್ಠ 2½ (ಎರಡೂವರೆ) ತಿಂಗಳು ಡಯೆಟ್ ಮಾಡಿದರೆ ದೃಢ ಕಾಯದ ದೇಹ ಪಡೆದುಕೊಳ್ಳಬಹುದು. ಇದರ ಜೊತೆ ನಿತ್ಯ ಕನಿಷ್ಠ ಅರ್ಧ ಗಂಟೆ ಅಥವಾ ಮುಕ್ಕಾಲು ಗಂಟೆ ವಾಕಿಂಗ್ ಮಾಡುವುದು ಡಯೆಟ್ ನ ಭಾಗವೇ ಆಗಿದೆ.
ಯಾವ ಆಹಾರ ಹೇಗೆ ಸೇವಿಸಿದರೆ ಉತ್ತಮ :
ರಾಗಿ - ಎಣ್ಣೆ ರಹಿತ ತಯಾರಿಸಿದ ರಾಗಿ ದೋಸೆ, ರೊಟ್ಟಿ ಸೊಪ್ಪಿನ ಪಲ್ಯದೊಂದಿಗೆ ಸೇವಿಸುವುದು. ರಾಗಿ ಮುದ್ದೆಯನ್ನು ಉಪ್ಸಾರು, ಬಸ್ಸಾರು ಅಥವಾ ಮಸ್ಸೊಪ್ಪು ಸಾಂಬಾರ್‌ನಲ್ಲಿ ತಿನ್ನುವುದು.
ಗೋಧಿ - ಎಣ್ಣೆ ರಹಿತ ಗೋಧಿ ಚಪಾತಿ ಸೊಪ್ಪಿನ ಪಲ್ಯದ ಜೊತೆ ಸೇವಿಸುವುದು.
ರವೆ - ಎಣ್ಣೆ ರಹಿತ ರವೆ ದೋಸೆ,ರೊಟ್ಟಿ ತರಕಾರಿ ಉಪ್ಪಿಟ್ಟು
ಧಾನ್ಯಗಳು - ಅವರೆಕಾಳು, ಅಲಸಂದೆ, ಹಸಿಕಡಲೆ ಮತ್ತು ಹೆಸರುಕಾಳು ಈ ನಾಲ್ಕು ಕಾಳುಗಳನ್ನು ಸೇರಿಸಿ ರವೆಯಂತೆ ಮಿಲ್ ಮಾಡಿಸಿ ಅದರಲ್ಲಿ ಎಣ್ಣೆ ರಹಿತ ದೋಸೆ, ರೊಟ್ಟಿ ಅಥವಾ ತರಕಾರಿ ಉಪ್ಪಿಟ್ಟು ಮಾಡಿ ತಿನ್ನುವುದು. ಈ ಕಾಳುಗಳ ಬದಲು ಸಿರಿಧಾನ್ಯಗಳನ್ನು ಕೂಡ ಬಳಸಬಹುದು.
ಹಣ್ಣುಗಳು - ಮೋಸಂಬಿ, ಕಿತ್ತಳೆ ಅಥವಾ ಕಪ್ಪು ದ್ರಾಕ್ಷಿ, ರಾತ್ರಿ ಊಟದ ಬಳಿಕ ಮಲಗುವ ಒಂದೆರಡು ಗಂಟೆಗಳ ಮುನ್ನಾ ಸೇವಿಸುವುದು.
ತರಕಾರಿ - ಬೀನ್ಸ್, ಕ್ಯಾರೆಟ್, ಬೀಟ್‌ರೋಟ್, ಹೀರೇಕಾಯಿ, ಕ್ಯಾಪ್ಸಿಕಂಮ್, ಎಲೆಕೋಸು ಮತ್ತು ಈರುಳ್ಳಿ ಇವುಗಳನ್ನು ಕತ್ತರಿಸಿ ಉಪ್ಪು ಖಾರದೊಂದಿಗೆ ನೀರಿನಲ್ಲಿ ಬೇಯಿಸಿ ಬೆಳೆಗ್ಗೆ ತಿಂಡಿಗೆ ಬಳಸಿದರೆ ಸೂಕ್ತ. ನಂತರ ಸ್ವಲ್ಪ ಸಿಪ್ಪೆ ಸಹಿತ ಸೌತೇಕಾಯಿ ಜೊತೆ ಟೊಮ್ಯಾಟೊ ರುಚಿಗೆ ಬೇಕಿದ್ದರೆ ಉಪ್ಪು ಮತ್ತು ಕಾರದಪುಡಿ ಹಾಕಿಕೊಂಡು ತಿನ್ನುವುದು.
ತರಕಾರಿಗಳಲ್ಲಿ ಯಾವುದೇ ಮಸಾಲೆ ಪದಾರ್ಥಗಳು ಪ್ಯಾಕೆಟ್ ಪೌಡರ್‌ಗಳು ಮತ್ತು ಕಿಂಚಿತ್ತೂ ಅಯಿಲ್ ಬಳಸದೆ ಬೇಯಿಸಿದರೆ ಮಾತ್ರ ಉತ್ತಮ ಡಯೆಟ್ ಆಗುತ್ತದೆ. ಈ ತಿಂಡಿಯ ಅರ್ಧ ಗಂಟೆ ನಂತರ ಸಾಕಷ್ಟು ನೀರು ಕುಡಿಯುವುದು.
ಮೊಟ್ಟೆ - ಬೆಳೆಗ್ಗೆ ತಿಂಡಿ ಮತ್ತು ರಾತ್ರಿ ಊಟಕ್ಕೆ ಒಂದೊಂದು ಬೇಯಿಸಿದ ಮೊಟ್ಟೆಯ ಬಿಳಿ ಭಾಗ ಮಾತ್ರ ತಿನ್ನಬೇಕು ಇದರಿಂದ ದೇಹಕ್ಕೆ ಪ್ರೋಟೀನ್ ಅಂಶ ಸಿಗುತ್ತದೆ.
ಚಿಕನ್ - ಮಾಂಸಹಾರ ಸೇವಿಸುವವರು ಸ್ಕಿನ್ ಔಟ್ ಮಾಡಿಸಿದ ಚಿಕನ್ ಮಾತ್ರ ಸೇವಿಸಬೇಕು. ಕೆಂಪು ಮಾಂಸ ಸೇವಿಸಕೂಡದು. ಚಿಕನ್‌ನಲ್ಲಿ ಖಂಡಗಳ ಭಾಗ ಉತ್ತಮ ಡಯೆಟ್ ಗೆ ಸಹಕಾರಿಯಾಗುತ್ತದೆ. ಲೆಗ್ ಪೀಸ್, ಕತ್ತಿನ ಭಾಗ ಮತ್ತು ಪಕೋಟ ಇವುಗಳಲ್ಲಿ ಕೊಬ್ಬಿನ ಅಂಶ ಇರುವುದರಿಂದ ಇದನ್ನು ತ್ಯಜಿಸುವುದು ಒಳ್ಳೆಯದು. ಮುಖ್ಯವಾಗಿ ಚಿಕನ್ ನಲ್ಲಿ ಮಾಡುವ ಯಾವುದೇ ಪದಾರ್ಥಗಳು ಎಣ್ಣೆ ರಹಿತವಾಗಿರಬೇಕು.
ಅಕ್ಕಿ : ಅನ್ನ ಅಥವಾ ದೋಸೆ ಇಡ್ಲಿ ಸೇವನೆ ಮಾಡಿದರೆ ಡಯೆಟ್ ಆಗುವುದಿಲ್ಲ. ನಿತ್ಯ ನೀವು ಸಾಮಾನ್ಯವಾಗಿ ಸೇವಿಸುವ ಪ್ರಮಾಣದಲ್ಲಿ ಎಷ್ಟು ಅನ್ನವನ್ನು ಕಡಿಮೆ ಮಾಡುತ್ತೀರೋ ಅಷ್ಟು ಡಯೆಟ್‌ಗೆ ಸಹಕಾರಿಯಾಗುತ್ತದೆ. ಅನ್ನ ತಿನ್ನದೇ ಇರಲಾಗದು ಎಂದುಕೊಳ್ಳುವವರು ಡಯೆಟ್ ಆಲೋಚನೆ ಮಾಡದಿರುವುದು ಉತ್ತಮ.
ಮೇಲೆ ತಿಳಿಸಿದ ಪದಾರ್ಥಗಳಲ್ಲದೇ ಇನ್ಯಾವುದೇ ತಿನಿಸುಗಳನ್ನು ಸೇವಿಸಬಾರದು. ಹೊರಗೆ ಸಿಗುವ ಯಾವುದೇ ಸಿಹಿ, ಖಾರ ಮತ್ತು ಎಣ್ಣೆಯಲ್ಲಿ ಕರೆದ ಪದಾರ್ಥಗಳಿಂದ ಸೀಮಿತ ಅವಧಿಯವರೆಗೆ ದೂರ ಇರಬೇಕು. ಆರೋಗ್ಯವೇ ಭಾಗ್ಯ.
ಪತ್ರಕರ್ತ, ಲೇಖಕ ಹಾಗೂ ಸಂದರ್ಶಕ