ಹಕ್ಕಿ ಹಾರುತಿದೆ ನೋಡಿದಿರಾ?

ಹಾರಾಟ: ಜೀವಿಲೋಕದ ಅದ್ಭುತ ಸಾಮರ್ಥ್ಯ

ProfileImg
23 Mar '24
10 min read


image

     ಪ್ರತಿನಿತ್ಯ ನಾವು ನಮ್ಮ ಸುತ್ತಮುತ್ತ ಅನೇಕ ಹಕ್ಕಿಗಳನ್ನು ನೋಡುತ್ತೇವೆ. ಹಕ್ಕಿಗಳು ನಮಗೆ ಬಹಳ ಕೌತುಕದ ಜೀವಿಗಳಾಗಿ ಕಾಣುತ್ತವೆ. ಇದಕ್ಕೆ ಕಾರಣಗಳು ಅನೇಕ. ಅವುಗಳ ಅನನ್ಯ ಹಾರಾಟ ಸಾಮರ್ಥ್ಯ ಮತ್ತು ಅವುಗಳ ಕಣ್ಣುಕೋರೈಸುವ ವರ್ಣವೈವಿಧ್ಯ ಇದಕ್ಕೆ ಕಾರಣ. ಆದರೆ ಹಾರಾಟ ಎಂಬುದು ಮಾತ್ರ ಪಕ್ಷಿಜಗತ್ತಿನ ಅತ್ಯಂತ ಮಹತ್ವದ ಗುಣಲಕ್ಷಣ ಎಂದರೆ ತಪ್ಪಾಗಲಾರದು. ಏಕೆಂದರೆ ಹಕ್ಕಿಗಳನ್ನು ಬಿಟ್ಟರೆ ಹಾರಾಡಬಲ್ಲ ಇನ್ನೂ ಕೆಲವು ಜೀವಿವರ್ಗಗಳು ಭೂಮಿಯ ಮೇಲೆ ಇದ್ದರೂ ಹಾರಾಟ ಎಂದಕೂಡಲೇ ಎಲ್ಲರಿಗೂ ಮೊದಲು ನೆನಪಾಗುವುದೇ ಹಕ್ಕಿಗಳು. ಆದರೆ ನಾವೆಲ್ಲ ನೆನಪಿಡಬೇಕಾದ ಒಂದು ಮುಖ್ಯ ಅಂಶವೆಂದರೆ ಹಾರಾಡಬಲ್ಲ ಎಲ್ಲ ಜೀವಿಗಳೂ ಹಕ್ಕಿಗಳಲ್ಲ ಅಥವಾ ಎಲ್ಲ ಹಕ್ಕಿಗಳೂ ಹಾರಾಡಬಲ್ಲ ಹಕ್ಕಿಗಳೂ ಅಲ್ಲ. ಹಾಗಾದರೆ ಜೀವಜಗತ್ತಿನಲ್ಲಿ ಮೊದಲಬಾರಿಗೆ ಹಾರಾಟ ಆರಂಭಿಸಿದ ಜೀವಿಗಳು ಯಾವುವು? ಯಾವ ಜೀವಿಗಳು ಇಂದು ಹಾರಾಡುವ ಸಾಮರ್ಥ್ಯ ಪಡೆದಿವೆ ಮತ್ತು ಹಾರಾಟದ ಕೌಶಲ್ಯಗಳೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಪಡೆಯಲು ಪ್ರಯತ್ನಿಸೋಣ.

       ಭೂಮಿಯ ಮೇಲೆ ಮೊದಲಬಾರಿಗೆ ಹಾರಾಟದ ಕಲೆಯನ್ನು ಜೀವಿಗಳು ಕಲಿತಿದ್ದು ಯಾವಾಗ ಎಂದು ಕಾಲಚಕ್ರದಲ್ಲಿ ಹಿಂದಕ್ಕೆ ಹೋದಾಗ ನಮಗೆ ದೊರಕುವ ಉತ್ತರ ಸುಮಾರು ಮೂವತ್ತೈದು ಕೋಟಿ ವರ್ಷಗಳ ಹಿಂದೆ ಎಂಬುದು. ಅಂದರೆ ಭೂಮಿಯ ಮೇಲೆ ಜೀವೋದಯ ಆಗಿದ್ದು ಮುನ್ನೂರೈವತ್ತು ಕೋಟಿ ವರ್ಷಗಳ ಹಿಂದೆ ಎಂಬುದನ್ನು ನೆನಪಿಸಿಕೊಂಡಾಗ ಹಾರಾಟ ಎಂಬುದು ತೀರಾ ಇತ್ತೀಚೆಗೆ ಜೀವಿಗಳು ಕಲಿತ ಕಲೆ ಎಂಬುದು ನಮಗೆ ಅರ್ಥವಾಗುತ್ತದೆ. 

       ಮೊದಲಬಾರಿಗೆ ಹಾರುವ ಪ್ರಯತ್ನ ಮಾಡಿದ ಜೀವಿಗಳೆಂದರೆ ಡ್ರ್ಯಾಗನ್ ಫ್ಲೈ (ಏರೋಪ್ಲೇನ್ ಚಿಟ್ಟೆ) ವರ್ಗಕ್ಕೆ ಸೇರಿದ ಜೀವಿಗಳು. ಸುಮಾರು ೩೨-೩೩ ಕೋಟಿ ವರ್ಷಗಳ ಹಿಂದಿನ ಅನೇಕ ಪಳೆಯುಕೆಗಳಲ್ಲಿ ಇವುಗಳ ರೆಕ್ಕೆಗಳು ಅಚ್ಚೊತ್ತಿದ್ದು ಸ್ಪಷ್ಟವಾಗಿ ದಾಖಲಾಗಿವೆ. ಒಂದು ಅಡಿ ಉದ್ದದ ಅಗಾಧವಾದ ರೆಕ್ಕೆಗಳು ದಾಖಲಾಗಿವೆ. ಅಂದರೆ ಇಂದಿನ ಏರೋಪ್ಲೇನ್ ಚಿಟ್ಟೆಗಳ ಹತ್ತು ಪಟ್ಟು ಭಾರವಾದ ಏರೋಪ್ಲೇನ್ ಚಿಟ್ಟೆಗಳು ಅಂದು ಹಾರಾಡುತ್ತಿದ್ದವು. ಅಷ್ಟು ದೊಡ್ಡ ಕೀಟಗಳು ಹೇಗೆ ಹಾರಾಡಲು ಸಾಧ್ಯವಾಗಿತ್ತು ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ ಒಂದು ಊಹೆಯ ಪ್ರಕಾರ ಅಂದು ವಾತಾವರಣದಲ್ಲಿ ಹೆಚ್ಚಿನ ಪ್ರಮಾಣದ ಆಮ್ಲಜನಕ ಇದ್ದಿದ್ದರಿಂದ ಈ ಕೀಟಗಳು ತಮ್ಮ ಹಾರಾಟಕ್ಕೆ ಬೇಕಾದ ಅಗಾಧವಾದ ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತಿತ್ತು ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಅದೇನೇ ಇದ್ದರೂ ಹಾರುವ ಪ್ರಕ್ರಿಯೆಗೆ ಭೂಮಿಯ ಮೇಲೆ ಮೊದಲು ಚಾಲನೆ ನೀಡಿದ್ದು ಡ್ರ್ಯಾಗನ್‌ಫ್ಲೈಗಳೇ ಎಂಬುದು ಈಗ ನಿರ್ವಿವಾದವಾಗಿ ಸಾಬೀತಾಗಿದೆ. 

       ಜೀವ ಇತಿಹಾಸದಲ್ಲಿ ಹಾರಾಟದ ಕಲೆಯನ್ನು ಸಮರ್ಥವಾಗಿ ಕಲಿತಿರುವ ಜೀವಿವರ್ಗಗಳು ಕೇವಲ ನಾಲ್ಕು ಮಾತ್ರ. ಅವುಗಳೆಂದರೆ ಕೀಟಗಳು, ಟೆರೋಸಾರ್‌ಗಳು, ಹಕ್ಕಿಗಳು ಹಾಗೂ ಬಾವಲಿಗಳು. ಮೊಟ್ಟಮೊದಲಬಾರಿಗೆ ಹಾರಾಡಿದ ಜೀವಿಗಳಾದ ಡ್ರ್ಯಾಗನ್‌ಫ್ಲೈಗಳನ್ನೊಳಗೊಂಡ ಕೀಟಗಳ ತರಗತಿ ಇದರಲ್ಲಿ ಮೊದಲ ಸ್ಥಾನ ಪಡೆಯುತ್ತದೆ. ಕೀಟಗಳಲ್ಲಿ ಎಲ್ಲ ಕೀಟಗಳೂ ಹಾರಲಾರವು ಎಂಬುದು ನಿಜ. ಕೆಲವು ಕೀಟಗಳಲ್ಲಿ ಗಂಡುಕೀಟಗಳು ಮಾತ್ರ ಹಾರಬಲ್ಲವಾದರೆ ಇನ್ನು ಕೆಲ ಕೀಟಗಳಲ್ಲಿ ಕೆಲವೊಂದು ವಿಶೇಷ ಕೀಟಗಳು ಮಾತ್ರ ಹಾರಬಲ್ಲವು. ಉದಾಹರಣೆಗೆ ಇರುವೆಗಳಲ್ಲಿ ರಾಣಿಗಳು ಮಾತ್ರ ರೆಕ್ಕೆ ಹೊಂದಿದ್ದು ಹಾರಬಲ್ಲವು. ಅಪರೂಪಕ್ಕೆ ಕೆಲವು ಕೀಟಗಳಲ್ಲಿ ಹೆಣ್ಣುಗಳು ಮಾತ್ರ ಹಾರಬಲ್ಲವು. ಇನ್ನೂ ಕೆಲವು ಕೀಟಗಳಲ್ಲಿ ಅವಕ್ಕೆ ಒಂದು ನಿರ್ದಿಷ್ಟ ಕಾಲದಲ್ಲಿ ಮಾತ್ರ ರೆಕ್ಕೆಗಳು ಹುಟ್ಟಿಕೊಳ್ಳುತ್ತವೆ. ರೆಕ್ಕೆಗಳೇ ಇಲ್ಲದ, ಎಂದೆಂದೂ ಹಾರಲಾರದ ಕೆಲವು ಕೀಟಗಳೂ ಇವೆ. 

       ಕೀಟಗಳ ನಂತರ ಹಾರಾಟ ಮಾಡಿದ ಜೀವಿಗಳೆಂದರೆ ಟೆರೋಸಾರ್‌ಗಳು. ಡೈನೋಸಾರ್‌ಗಳ ಹತ್ತಿರದ ಸಂಬಂಧಿಗಳಾದ (ಆದರೆ ಇವುಗಳನ್ನು ಡೈನೋಸಾರ್‌ಗಳೇ ಎಂದು ಕೆಲವರು ಪರಿಗಣಿಸುತ್ತಾರೆ, ಅದು ಸರಿಯಲ್ಲ, ಇವು ಕೇವಲ ಡೈನೋಸಾರ್‌ಗಳ ಸಂಬಂಧಿಗಳಷ್ಟೆ) ಟೆರೋಸಾರ್‌ಗಳು ಇಂದಿನ ಹಾರುವ ಹಕ್ಕಿಗಳಿಗೆ ಹೋಲಿಸಿದರೆ ಬೃಹದ್ದೇಹಿಗಳೇ ಆಗಿದ್ದವು. ಇವುಗಳಲ್ಲಿ ಅತ್ಯಂತ ದೊಡ್ಡ ಪ್ರಭೇದಗಳು ೩೫-೫೦ ಅಡಿಗಳಷ್ಟು ಅಗಲದ ರೆಕ್ಕೆ ವಿಸ್ತಾರವನ್ನು ಹೊಂದಿದ್ದು ಸುಮಾರು ಹದಿನೆಂಟು ಅಡಿ ಎತ್ತರಕ್ಕೆ ನಿಲ್ಲುತ್ತಿದ್ದವು ಹಾಗೂ ಅವುಗಳ ದೇಹದ ತೂಕ ೭೦ ಕಿಲೋಗ್ರಾಂ ಇರುತ್ತಿತ್ತು ಎಂದು ಊಹಿಸಿದ್ದಾರೆ. ಇನ್ನೂ ಕೆಲವರು ಇವುಗಳ ತೂಕ ಇನ್ನೂರು ಕೆ.ಜಿ.ಗೂ ಹೆಚ್ಚಿರುತ್ತಿತ್ತು ಎಂದೂ ಅಂದಾಜಿಸಿದ್ದಾರೆ. ಈ ಎರಡೂ ಅಂದಾಜುಗಳ ನಡುವೆ ಎಲ್ಲೋ ಸತ್ಯ ಅಡಗಿರಬಹುದು. ಆದರೆ ನಾವಿಂದು ಆ ಒಂದೂ ಪ್ರಭೇದಗಳು ಬದುಕಿಲ್ಲದ ಅಥವಾ ಅವಕ್ಕೆ ಸಮೀಪದ ಸಂಬಂಧಿಗಳಾದ ಬೇರಾವ ವರ್ಗದ ಜೀವಿಗಳೂ ಕೂಡ ಬದುಕಿಲ್ಲವಾದ್ದರಿಂದ ಅವುಗಳ ಬಗ್ಗೆ ಕೇವಲ ಊಹೆಗಳನ್ನಷ್ಟೇ ಮಾಡಬಹುದೇ ವಿನಾ ನಿಖರವಾಗಿ ಹೀಗೆಯೇ ಎಂದು ಹೇಳಲಾಗದು. ಆದರೆ ಒಂದಂತೂ ಸತ್ಯ, ನಮಗೆ ಇದುವರೆಗೆ ತಿಳಿದಿರುವ ಪಳೆಯುಳಿಕೆಗಳ ಪ್ರಕಾರ ಇವು ಭೂಮಿಯ ಮೇಲೆ ಯಾವುದೇ ಕಾಲಘಟ್ಟಗಳಲ್ಲಿ ಬದುಕಿದ್ದ ಅತಿ ದೊಡ್ಡ ಹಾರುವ ಜೀವಿಗಳಾಗಿದ್ದವು ಎಂಬುದು. 

       ಟೆರೋಸಾರ್‌ಗಳ ರೆಕ್ಕೆಗಳು ಹಕ್ಕಿಗಳ ರೆಕ್ಕೆಗಳಿಂದ ಪುಕ್ಕ ಅಥವಾ ಗರಿಗಳಿಂದಾಗಿರಲಿಲ್ಲ. ಅವು ಈಗ ನಾವು ನೋಡುವ ಹಾರುವ ಓತಿಗಳ ರೆಕ್ಕೆಗಳಂತೆ ಚರ್ಮದ ಪರೆಯಿಂದಾಗಿತ್ತು. ಆದರೆ ಅವು ಈ ಓತಿಗಳ ರೆಕ್ಕೆಗಳಂತೆ ಬರೇ ತೇಲಲು ಸಹಾಯಮಾಡುವ ಚರ್ಮದ ಪರೆ ಆಗಿರಲಿಲ್ಲ. ಪ್ರಬಲವಾದ ಸ್ನಾಯುಗಳ ಬಲದಿಂದ ಆ ರೆಕ್ಕೆಗಳನ್ನು ಇಂದಿನ ಹಕ್ಕಿಗಳ ರೆಕ್ಕೆಗಳಂತೆಯೇ ಬಡಿಯುತ್ತ ಹಾರಬಲ್ಲ ಸಾಮರ್ಥ್ಯ ಅವಕ್ಕಿತ್ತು. ಟೆರೋಸಾರ್‌ಗಳೇ ಭೂಮಿಯ ಮೇಲೆ ಹಾರಾಟವನ್ನು ಕಲಿತ ಮೊದಲ ಕಶೇರುಕ ಜೀವಿಗಳೆನ್ನಬಹುದು. ಗರಿ, ಪುಕ್ಕಗಳಿಲ್ಲದಿದ್ದರಿಂದ ಮತ್ತು ಹಲ್ಲುಗಳಿಂದೊಡಗೂಡಿದ್ದ ದವಡೆಗಳನ್ನು ಹೊಂದಿದ್ದ ಕಾರಣ ಇವುಗಳನ್ನು ಹಕ್ಕಿಗಳೆಂದು ಪರಿಗಣಿಸಲಾಗುವುದಿಲ್ಲ. ಅಲ್ಲದೆ ಇವು ಈಗಿನ ಹಕ್ಕಿಗಳಂತೆ ಹಗುರ ದೇಹದ ಸಿಂಗಾರಿಗಳಾಗಿರಲಿಲ್ಲ. ಅವು ಕನಿಷ್ಠ ೮೦ರಿಂದ ಗರಿಷ್ಠ ೨೫೦ ಕೆಜಿವರೆಗೆ ತೂಗುತ್ತಿದ್ದ ದೈತ್ಯಜೀವಿಗಳು ಎಂದು ನಮ್ಮ ಗಣಕಯಂತ್ರದ ಮಾದರಿಗಳು ಹೇಳುತ್ತವೆ. ಈ ಮಾದರಿಗಳನ್ನು ಯಾವುದೇ ಊಹೆಯ ಮೇಲೆ ತಯಾರಿಸಲಾಗಿಲ್ಲ. ಇದುವರೆಗೆ ಸಿಕ್ಕಿದ ಈ ಜೀವಿಗಳ ದೇಹದ ಬೇರೆಬೇರೆ ಭಾಗಗಳ ಎಲುಬುಗಳನ್ನು ಜೋಡಿಸಿ ಅದರ ಆಧಾರದ ಮೇಲೆ ಈ ಮಾದರಿಗಳನ್ನು ರೂಪಿಸಲಾಗಿದೆ. ಈ ಮಾದರಿಗಳ ಪ್ರಕಾರ ಈ ಬೃಹದ್ದೇಹಿಗಳು ಹಾರಾಟದ ಸಾಮರ್ಥ್ಯ ಹೊಂದಿದ್ದವು. ಖಂಡಿತವಾಗಿಯೂ ಇದು ಅನೇಕ ಪ್ರಶ್ನೆಗಳಿಗೆ ದಾರಿ ಮಾಡಿಕೊಡುತ್ತದೆ. ಏಕೆಂದರೆ ಇಂದು ಬದುಕಿರುವ ಅತಿದೊಡ್ಡ (ಅಂದರೆ ಅತ್ಯಂತ ಭಾರವಾದ) ಹಾರಬಲ್ಲ ಹಕ್ಕಿ ಎಂದರೆ ಬಸ್ಟರ್ಡ್. ಅದರ ತೂಕ ಹತ್ತೊಂಬತ್ತು ಕೆಜಿ. ಅದಕ್ಕಿಂತ ಹೆಚ್ಚು ತೂಕದ ರಿಯಾ, ಎಮು, ಆಸ್ಟಿçಚ್, ಕ್ಯಾಸೋವರಿ, ಎಂಪರರ್ ಪೆಂಗ್ವಿನ್ ಮುಂತಾದ ಅನೇಕ ಹಕ್ಕಿಗಳು ಶಾಶ್ವತವಾಗಿ ಹಾರಾಟದ ಸಾಮರ್ಥ್ಯವನ್ನೇ ಕಳೆದುಕೊಂಡು ನೆಲವನ್ನೇ ಆಶ್ರಯಿಸಿವೆ. ಅದೇ ರೀತಿ ಹಿಂದೆ ಬದುಕಿದ್ದ ಮೋವಾ, ಎಲಿಫೆಂಟ್ ಬರ್ಡ್ ಇತ್ಯಾದಿ ದೈತ್ಯ ಹಕ್ಕಿಗಳು ಸಹ ಹಾರಲಾರದ ಹಕ್ಕಿಗಳಾಗಿದ್ದವು. ಹಾಗಾದರೆ ಅಂಥ ದೈತ್ಯ ಟೆರೋಸಾರ್‌ಗಳು ಹೇಗೆ ಹಾರಾಟವನ್ನು ಸಾಧ್ಯವಾಗಿಸಿಕೊಂಡಿದ್ದವು ಎಂಬ ಪ್ರಶ್ನೆ ಉಂಟಾಗುತ್ತದೆ.

       ಟೆರೋಸಾರ್‌ಗಳ ಹಾರಾಟ ಖಂಡಿತವಾಗಿಯೂ ಇಂದು ನಾವು ಕಾಣುವ ಹಕ್ಕಿಗಳ ಹಾರಾಟದಷ್ಟು ಕೌಶಲ್ಯಪೂರ್ಣ ಅಥವಾ ಸುಲಲಿತವಾಗಿರಲಿಲ್ಲ ಎಂಬುದಂತೂ ಸತ್ಯ. ಆದರೆ ಅವುಗಳ ಒಟ್ಟಾರೆ ದೇಹಪ್ರಕೃತಿಯನ್ನು ಮಾದರಿಗಳ ಮೂಲಕ ಅರ್ಥಮಾಡಿಕೊಂಡಾಗ ಅವು ದೈತ್ಯದೇಹಿಗಳಾಗಿದ್ದರೂ ಕೂಡ ತಮ್ಮ ಭಾರೀ ದೇಹಕ್ಕೆ ಹೋಲಿಸಿದರೆ ತುಂಬಾ ಹಗುರವಾಗಿದ್ದವು ಎಂಬುದು ತಿಳಿದುಬರುತ್ತದೆ. ಒಂದು ಜಿರಾಫೆಯಷ್ಟು ಎತ್ತರವಿದ್ದ ಅವುಗಳ ದೇಹತೂಕ ಕೇವಲ ೮೦ ಕೆಜಿ ಇದ್ದಿರಬಹುದಷ್ಟೆ. ಗರಿಷ್ಠ ೨೫೦ ಕೆಜಿ ಇದ್ದಿರಬಹುದೆಂಬ ಊಹೆಗಳನ್ನು ಗಣನೆಗೆ ತೆಗೆದುಕೊಂಡರೂ ಜಿರಾಫೆ ಸಾವಿರ ಕೆಜಿ ತೂಗುತ್ತದೆ ಎಂಬುದನ್ನು ಗಮನಿಸಿದಾಗ ಈ ಜೀವಿಗಳು ಎಷ್ಟು ಹಗುರವಾಗಿದ್ದವು ಎಂದು ಅರ್ಥವಾಗುತ್ತದೆ. ಜೊತೆಗೆ ಅವುಗಳ ಮೂಳೆಗಳು ಕೂಡ ಇಂದಿನ ಹಕ್ಕಿಗಳ ಮೂಳೆಗಳಂತೆ ಟೊಳ್ಳಾದ ಕಡಿಮೆ ತೂಕದ ಎಲುಬುಗಳಾಗಿದ್ದವು. ಅಲ್ಲದೆ ಅವುಗಳ ದೇಹದಲ್ಲಿ ಅನೇಕ ಗಾಳಿಚೀಲಗಳಿದ್ದು ಅವು ಹೆಚ್ಚಿನ ಆಮ್ಲಜನಕವನ್ನು ಒದಗಿಸುವ ಮೂಲಕ ಹಾರಾಟಕ್ಕೆ ಬೇಕಾದ ಅಗಾಧವಾದ ಶಕ್ತಿಯನ್ನು ಒದಗಿಸುತ್ತಿದ್ದವು. ಜೊತೆಗೆ ಅಂದು ವಾತಾವರಣದಲ್ಲಿ ಸಹ ಇಂದಿಗಿಂತ ಹೆಚ್ಚಿನ ಪ್ರಮಾಣದ ಆಮ್ಲಜನಕ ಲಭ್ಯವಿತ್ತೆಂದು ಸಹ ನಂಬಲಾಗಿದೆ. ಇವುಗಳ ಬಲದಿಂದ ಈ ಬೃಹದ್ದೇಹಿಗಳು ಹಾರಬಲ್ಲವಾಗಿದ್ದಿರಬೇಕು.

       ನಮ್ಮ ಪ್ರಾಥಮಿಕ ಶಾಲೆಯ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಆರ್ಕಿಯಾಪ್ಟೆರಿಕ್ಸ್ ಎಂಬ ಹೆಸರನ್ನು ಓದಿದ್ದು ಅನೇಕರಿಗೆ ನೆನಪಿರಬಹುದು. ತೀರ ಇತ್ತೀಚೆನವರೆಗೂ ಭೂಮಿಯ ಮೇಲೆ ಅವತರಿಸಿದ ಮೊಟ್ಟಮೊದಲ ಪಕ್ಷಿ ಇದು ಎಂದು ನಂಬಲಾಗಿತ್ತು. ಆದರೆ ಇಂದು ಇದಕ್ಕಿಂತ ಪುರಾತನ ಪಕ್ಷಿ ಪಳೆಯುಳಿಕೆಗಳು ಲಭ್ಯವಾಗಿವೆ. ಆದರೆ ಇವು ಯಾವುವೂ ಇಂದಿನ ಪಕ್ಷಿಗಳಂತೆ ಪರಿಪೂರ್ಣ ಹಾರಾಟದ ಯಂತ್ರಗಳಾಗಿರಲಿಲ್ಲ. ಅವುಗಳ ಕೊಕ್ಕಿನಲ್ಲಿ ಹಲ್ಲುಗಳಿದ್ದವು ಹಾಗೂ ಬಾಲದಲ್ಲಿ ಮೂಳೆಗಳಿದ್ದವು. ಇವೆರಡೂ ಇಂದಿನ ಹಕ್ಕಿಗಳಲ್ಲಿಲ್ಲ ಎಂಬುದನ್ನು ಗಮನಿಸಬೇಕು. ಹಾಗಾಗಿ ಅವು ಇಂದಿನ ಹಕ್ಕಿಗಳಂತೆ ಚತುರ ಹಾರಾಟಗಾರರಾಗಿರಲಿಲ್ಲ. ಬಹುಶಃ ಬಲವಾಗಿ ರೆಕ್ಕೆ ಬಡಿಯುತ್ತ ಕೆಲವೇ ಮೀಟರ್ ದೂರ ತಡವರಿಸುತ್ತ ಹಾರುತ್ತಿದ್ದಿರಬೇಕು ಅಥವಾ ರೆಕ್ಕೆ ಬಿಚ್ಚಿಹಿಡಿದು ಒಂದಿಷ್ಟು ದೂರ ತೇಲುತ್ತಿದ್ದಿರಬಹುದು ಎಂಬುದು ನಮ್ಮ ಊಹೆ. ಆದರೆ ಖಂಡಿತವಾಗಿಯೂ ಅವು ಕಿಲೋಮೀಟರ್‌ಗಟ್ಟಲೆ ದಣಿವರಿಯದೆ ಹಾರಬಲ್ಲ ಹಕ್ಕಿಗಳಂತೂ ಆಗಿರಲಿಲ್ಲ. 

       ಇಂದಿನ ಹಕ್ಕಿಗಳನ್ನು ಗಮನಿಸಿದರೆ ಅವುಗಳಲ್ಲಿ ಹಾರಾಟ ಎಲ್ಲ ಹಕ್ಕಿಗಳಲ್ಲೂ ಒಂದೇ ರೀತಿಯಾಗಿಲ್ಲ ಎಂಬುದನ್ನು ನಾವು ಗಮನಿಸಬಹುದು. ಗುಬ್ಬಿ, ಕಾಗೆಗಳಂಥ ಹಕ್ಕಿಗಳು ರೆಕ್ಕೆಗಳನ್ನು ನಿರಂತರವಾಗಿ ಬಡಿಯುತ್ತ ಹಾರುತ್ತವೆ. ಝೇಂಕಾರದ ಹಕ್ಕಿಗಳಂತ ಚಿಕ್ಕ ಹಕ್ಕಿಗಳಂತೂ ಸೆಕೆಂಡಿಗೆ ಅನೇಕ ಸಾರಿ ರೆಕ್ಕೆ ಬಡಿಯುತ್ತ ಹಾರುತ್ತವೆ. ಹೂವಿನ ಮಕರಂದವನ್ನಷ್ಟೇ ಆಹಾರವನ್ನಾಗಿ ಸ್ವೀಕರಿಸುವ ಈ ಹಕ್ಕಿಗಳು ಹೂವಿನ ಎದುರು ಹಾರುತ್ತಲೇ ತಮ್ಮ ಸೂಜಿಯಂಥ ಕೊಕ್ಕಿನಿಂದ ಮಕರಂದ ಹೀರುತ್ತವೆ. ಆಗ ಸೆಕೆಂಡಿಗೆ ಅನೇಕ ಸಲ ರೆಕ್ಕೆ ಬಡಿಯುತ್ತ ಗಾಳಿಯಲ್ಲಿ ನಿಶ್ಚಲವಾಗಿ ನಿಲ್ಲುತ್ತವೆ. ಇದು ಒಂದು ರೀತಿಯ ಕೌಶಲ್ಯ. ಅಲ್ಲದೆ ಈ ಹಕ್ಕಿಗಳು ಹಿಮ್ಮುಖವಾಗಿ ಸಹ ಹಾರಬಲ್ಲ ಸಾಮರ್ಥ್ಯ ಹೊಂದಿವೆ. ಬೇರೆ ಯಾವ ಹಕ್ಕಿಗಳಿಗೂ ಈ ಸಾಮರ್ಥ್ಯ ಇಲ್ಲ. ಬೃಹದ್ಗಾತ್ರದ ರೆಕ್ಕೆಗಳನ್ನು ಹೊಂದಿರುವ ರಣಹದ್ದು, ಆಲ್ಬಟ್ರಾಸ್, ಪೆಲಿಕನ್ ಇತ್ಯಾದಿ ಭಾರೀ ಹಕ್ಕಿಗಳು ಎತ್ತರದ ಆಗಸದಲ್ಲಿ ಏರುವ ಗಾಳಿಯ ಅಲೆಗಳ ಮೇಲೆ ತಮ್ಮ ವಿಶಾಲವಾದ ರೆಕ್ಕೆಗಳನ್ನು ಹರಡಿಕೊಂಡು ತೇಲುತ್ತವೆ. ಆಲ್ಬಟ್ರಾಸ್‌ಗಳಂತೂ ಒಮ್ಮೆ ಗಾಳಿಗೆ ಏರಿದರೆ ಮತ್ತೆ ತಮ್ಮ ಜೀವನದ ಬಹುಕಾಲವನ್ನು ಗಾಳಿಯಲ್ಲಿ ತೇಲುತ್ತಲೇ ಕಳೆಯುತ್ತವೆ. ಇದು ಅತ್ಯಂತ ಸುಲಭವಾದ ಹಾರಾಟ ವಿಧಾನ. ಏಕೆಂದರೆ ರೆಕ್ಕೆಗಳನ್ನು ಬಡಿಯುವ ಅಗತ್ಯವಿಲ್ಲವಾದ್ದರಿಂದ ಅವುಗಳಿಗೆ ಅತ್ಯಂತ ಕಡಿಮೆ ಶಕ್ತಿ ಸಾಕು. ಬಹುತೇಕ ಕಡಲ ಹಕ್ಕಿಗಳು ಇದೇ ಬಗೆಯ ಹಾರಾಟ ಕ್ರಮವನ್ನು ರೂಢಿಸಿಕೊಂಡಿರುತ್ತವೆ.

       ಕೆಲವು ಹಕ್ಕಿಗಳು ಬೃಹದಾಕಾರದ ದೇಹವನ್ನು ಹೊಂದಿದ್ದರೂ ಅದಕ್ಕೆ ತಕ್ಕಂತೆ ಹಾರಾಟ ಸಾಮರ್ಥ್ಯವನ್ನು ಪಡೆದಿರುವುದಿಲ್ಲ. ಅವು ಕುಡಿದವರಂತೆ ತೂರಾಡುತ್ತ ಹಾರುತ್ತವೆ. ಸ್ವಲ್ಪ ದೂರ ಹಾರಿದಕೂಡಲೇ ಯಾವುದಾದರೂ ಮರದ ಆಶ್ರಯ ಪಡೆಯುತ್ತವೆ. ದಕ್ಷಿಣ ಅಮೆರಿಕದ ಹೋಟ್ಜಿನ್ ಎಂಬ ಒಂದು ಜಾತಿಯ ಹಕ್ಕಿಯು ಇದೇ ರೀತಿ ಹೊಸದಾಗಿ ಹಾರಲು ಕಲಿತವರಂತೆ ಯದ್ವಾತದ್ವಾ ಹಾರುತ್ತದೆ. ನಮ್ಮಲ್ಲೇ ಮಂಗಟ್ಟೆ (ಹಾರ್ನ್‌ಬಿಲ್) ಅಥವಾ ಕೆಂಬೂತಗಳು ಹಾರುವುದನ್ನು ನೀವು ಕಂಡಿದ್ದರೆ ಅವು ಲೀಲಾಜಾಲವಾಗಿ ಹಾರುವುದಿಲ್ಲ ಎಂಬುದನ್ನು ಗಮನಿಸಿರಬಹುದು. ಮಂಗಟ್ಟೆಗಳು ತೂರಾಡುತ್ತಾ ಹಾರಾಡಿ ಸ್ವಲ್ಪ ದೂರ ಹಾರಿದಕೂಡಲೇ ವಿಶ್ರಾಂತಿಗಾಗಿ ಕೂರುತ್ತವೆ. ಕೆಂಬೂತಗಳು ಹತ್ತಾರು ಅಡಿಗಿಂತ ಹೆಚ್ಚು ದೂರ ಹಾರುವುದೇ ಇಲ್ಲ. 

       ಹಾರಾಟ ಎಂಬುದು ಅಷ್ಟು ಸುಲಭದ ಕೆಲಸ ಅಲ್ಲ. ಹಾರುತ್ತಿರುವ ಪ್ರತಿಕ್ಷಣವೂ ಆ ಜೀವಿ ಗುರುತ್ವದ ವಿರುದ್ಧ ಕೆಲಸ ಮಾಡುತ್ತಿರಬೇಕು. ರೆಕ್ಕೆಗಳನ್ನು ಬಡಿದು ಹಾರುವುದಾದರಂತೂ ಅದಕ್ಕೆ ಅಗಾಧವಾದ ಶಕ್ತಿ ಬೇಕೇಬೇಕು. ಆದ್ದರಿಂದಲೇ ಒಂದು ಹಕ್ಕಿ ತನ್ನದೇ ಗಾತ್ರದ ಅಥವಾ ತೂಕದ ಸಸ್ತನಿಗಿಂತಲೂ ಹೆಚ್ಚಿನ ಪ್ರಮಾಣದ ಆಹಾರವನ್ನು ಸೇವಿಸುತ್ತದೆ. ಝೇಂಕಾರದ ಹಕ್ಕಿಗಳಂಥ (ಹಮ್ಮಿಂಗ್ ಬರ್ಡ್) ಚಿಕ್ಕ ಹಕ್ಕಿಗಳಂತೂ ಎಷ್ಟು ಚಟುವಟಿಕೆಯಿಂದಿರುತ್ತವೆ ಎಂದರೆ ಅವು ಪ್ರತಿ ಐದು ನಿಮಿಷಕ್ಕೊಮ್ಮೆ ಹೂವುಗಳನ್ನು ಹುಡುಕಿ ಮಧುಪಾನ ಮಾಡುತ್ತಲೇ ಇರಬೇಕು. ಇಲ್ಲವಾದರೆ ಅವು ಶಕ್ತಿಹೀನವಾಗಿ ಕುಸಿದುಬೀಳುತ್ತವೆ. 

       ಹಾರುವ ಓತಿ, ಹಾರುವ ಅಳಿಲು, ಹಾರುವ ಕಪ್ಪೆ ಇತ್ಯಾದಿಗಳನ್ನು ನೀವು ಕೇಳಿರಬಹುದು ಅಥವಾ ನೋಡಿರಲೂಬಹುದು. ಹಾಗಾದರೆ ಇವು ಸಹ ನಿಜಕ್ಕೂ ಹಕ್ಕಿಗಳಂತೆಯೇ ಹಾರುತ್ತವೆಯೇ? ಇಲ್ಲ. ಏಕೆಂದರೆ ಇವಕ್ಕೆ ಹಕ್ಕಿಗಳಂತೆ ಬಲಿಷ್ಠವಾದ ಸ್ನಾಯುಗಳಿಂದ ರಚಿತವಾದ ಮೇಲೆ ಕೆಳಗೆ ಬಡಿಯಬಹುದಾದ ಬಲವಾದ ರೆಕ್ಕೆಗಳಿಲ್ಲ. ಇವಕ್ಕೆ ಇರುವುದು ದೇಹದ ಎರಡೂ ಪಕ್ಕೆಗಳಲ್ಲಿ ಇರುವ ಪ್ಯಾಟಾಶೂಟ್‌ನಂಥ ಚರ್ಮದ ಪರೆ ಮಾತ್ರ. ಕಪ್ಪೆಗಳಿಗೆ ಅವುಗಳ ಜಾಲಪಾದವೇ ವಿಸ್ತಾರವಾಗಿರುತ್ತದೆ. ಓತಿ ಮತ್ತು ಅಳಿಲುಗಳಿಗೆ ಚರ್ಮದ ಪರೆ ಇರುತ್ತದೆ. ಆದ್ದರಿಂದ ಅವು ಎತ್ತರದ ಮರಗಳ ಮೇಲಿಂದ ಜಿಗಿದು ಗಾಳಿಯಲ್ಲಿ ತೇಲುತ್ತ ದೂರದ ಮರಗಳನ್ನು ಸೇರುತ್ತವೆ. ಹಾಗೆ ತೇಲುವಾಗ ಅವು ರೆಕ್ಕೆಗಳನ್ನು ಬಡಿಯಲಾರವು. ಹಾಗಾಗಿ ಅವು ಕೆಳಗಿನಿಂದ ಮೇಲಕ್ಕೆ ಹಾರಲಾರವು. ಕೇವಲ ಎತ್ತರದಿಂದ ತೇಲುತ್ತ ಕೆಳಕ್ಕಿಳಿಯಬಲ್ಲವು ಅಷ್ಟೆ. ಅವು ಮರದ ಮೇಲಿಂದ ಜಿಗಿಯಬಲ್ಲವೇ ಹೊರತು ನೆಲದ ಮೇಲೇನಾದರೂ ಬಿದ್ದರೆ ಅಲ್ಲಿಂದ ಪ್ರಾಣಿಗಳಂತೆ ಮರ ಏರಬಲ್ಲವೇ ಹೊರತು ರೆಕ್ಕೆ ಬಡಿದು ಗಾಳಿಯಲ್ಲಿ ಮೇಲಕ್ಕೇರಲಾರವು. 

       ಬಾವಲಿಗಳದ್ದು ಇನ್ನೊಂದು ಬಗೆಯ ಹಾರಾಟ ಸಾಮರ್ಥ್ಯ. ಅವು ಸಹ ನೆಲದಿಂದ ಗಾಳಿಗೇರಲಾರವಾದರೂ ಅವು ಹಾರುವ ಓತಿ, ಅಳಿಲುಗಳಂತಲ್ಲದೆ ತಮ್ಮ ರೆಕ್ಕೆಗಳನ್ನು ಬಡಿಯುತ್ತ ಬಹುದೂರ ಹಾರಬಲ್ಲವು ಮತ್ತು ಮರದ ಮೇಲಿಂದ ಒಮ್ಮೆ ಗಾಳಿಗೆ ನೆಗೆದರೆ ರೆಕ್ಕೆ ಬಡಿಯುತ್ತ ಇನ್ನೂ ಹೆಚ್ಚು ಎತ್ತರಕ್ಕೆ ಏರಬಲ್ಲವು. ಆದ್ದರಿಂದ ಬಾವಲಿಗಳನ್ನು ನಿರಂತರ ಹಾರಾಟ ಸಾಮರ್ಥ್ಯ ಹೊಂದಿದ ನಾಲ್ಕು ಜೀವಿವರ್ಗಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಉಳಿದ ಮೂರು ಟೆರೋಸಾರ್, ಕೀಟಗಳು ಹಾಗೂ ಹಕ್ಕಿಗಳು. ಈ ರೀತಿ ಹಾರಬಲ್ಲ ಏಕೈಕ ಸಸ್ತನಿವರ್ಗ ಎಂದರೆ ಬಾವಲಿಗಳದ್ದು. ಇವುಗಳಲ್ಲಿ ಕೀಟಗಳಷ್ಟೇ ಚಿಕ್ಕದಾದ ಬಂಬಲ್‌ಬೀ ಬ್ಯಾಟ್‌ನಿಂದ ಹಿಡಿದು ಐದೂವರೆ ಅಡಿ ಅಗಲಕ್ಕೆ ರೆಕ್ಕೆ ಹರಡುವ ಫ್ಲೈಯಿಂಗ್ ಫಾಕ್ಸ್ (ಹಾರುವ ನರಿ) ಎಂಬ ಬಿರುದು ಹೊಂದಿರುವ ದೈತ್ಯ ಪ್ರಭೇದಗಳಿವೆ. 

       ಹಾರಾಡುವ ಜೀವಿಗಳು ಧರೆಯ ಮೇಲೆ ಏಕಾಏಕಿ ಅವತರಿಸಿದ್ದಲ್ಲ. ಸಹಜವಾಗಿಯೇ ಅವುಗಳದ್ದು ನಿಧಾನವಾದ ವಿಕಾಸದ ಹಾದಿ. ಡ್ರ್ಯಾಗನ್‌ಫ್ಲೈಗಳ ಮೂಲಕ ಆರಂಭವಾದ ಈ ಹಾರಾಟದ ಹಾದಿ ಸುಲಭದ್ದೂ ಆಗಿರಲಿಲ್ಲ. ಹಾರುವ ಮೀನುಗಳನ್ನು ನೋಡಿದರೆ ನಮಗೆ ಹಾರಾಟದ ಹಾದಿಯ ಬಗ್ಗೆ ಒಂದು ಅಂದಾಜು ಮೂಡಬಹುದು. ಸುಮಾರು ಐವತ್ತು ಪ್ರಭೇದದ ಮೀನುಗಳು ಹಾರಾಟವನ್ನು ಕಲಿತಿವೆ. ಅವೆಲ್ಲ ತಮ್ಮ ಈಜುರೆಕ್ಕೆಗಳನ್ನೇ ಹಕ್ಕಿಗಳ ರೆಕ್ಕೆಗಳಂತೆ ಬಳಸಿ ಒಂದಿಷ್ಟು ದೂರ ಹಾರಬಲ್ಲವು. ನೀರಿನಲ್ಲಿ ಅವುಗಳನ್ನು ಬೇಟೆಯಾಡುವ ಜೀವಿಗಳೇನಾದರೂ ಅಟ್ಟಿಸಿಕೊಂಡು ಬಂದರೆ ಒಂದಿಷ್ಟು ದೂರ ಈಜಿ ನಂತರ ಹಠಾತ್ತಾಗಿ ಗಾಳಿಗೇರುತ್ತವೆ. ತಬ್ಬಿಬ್ಬಾಗುವ ಬೇಟೆಗಾರ ತನ್ನ ಮಿಕ ಎಲ್ಲಿ ಹೋಯಿತು ಎಂದು ಸುತ್ತಮುತ್ತ ನೋಡುವಷ್ಟರಲ್ಲಿ ಬಹಳದೂರ ಹೋಗಿ ಮರಳಿ ನೀರಿಗೆ ಬೀಳುವ ಈ ಮೀನು ಬೇಟೆಗಾರರಿಂದ ಬಚಾವಾಗುತ್ತದೆ.

       ಹಕ್ಕಿಗಳು ಉರಗಗಳಿಂದ ವಿಕಸನ ಹೊಂದಿವೆ ಎಂದು ಪಳೆಯುಳಿಕೆಗಳು ಹೇಳುತ್ತವೆ. ಇದಕ್ಕೆ ಸಾಕ್ಷಿಯಾಗಿ ಅನೇಕ ಪಳೆಯುಳಿಕೆಗಳನ್ನು ನಾವು ಕಾಣಬಹುದು. ಆರ್ಕಿಯಾಪ್ಟೆರಿಕ್ಸ್ ಇಂಥ ಒಂದು ಮಹತ್ವದ ಪಳೆಯುಳಿಕೆ. ಜೊತೆಗೆ ಇಂದು ಬದುಕಿರುವ ಹೋಟ್ಜಿನ್ ಹಕ್ಕಿ ಕೂಡ ಇಂಥ ಒಂದು ಉದಾಹರಣೆಯಾಗಬಲ್ಲದು. ಏಕೆಂದರೆ ಅವು ಮರಿಗಳಾಗಿದ್ದಾಗ ಅವುಗಳ ರೆಕ್ಕೆಗಳಲ್ಲಿ ಉಗುರುಗಳಿರುತ್ತವೆ. ಮುಂದೆ ಅವು ಬೆಳೆದಂತೆಲ್ಲ ಆ ಉಗುರುಗಳು ಉದುರಿಹೋಗುತ್ತವೆ. ಮರಿಗಳಿಗೆ ಮರದ ಕೊಂಬೆಗಳಿಗೆ ನೇತಾಡಲು ಈ ಉಗುರುಗಳು ನೆರವಾಗುತ್ತವೆ. ಇದರಿಂದ ಉರಗಗಳಿಂದ ಹಕ್ಕಿಗಳು ವಿಕಸನ ಹೊಂದಿದ್ದು ಎಂಬುದಕ್ಕೆ ಇನ್ನೊಂದು ಸಾಕ್ಷಿ ದೊರೆತಂತಾಯಿತು. ಆದ್ದರಿಂದಲೇ ಈ ಹಕ್ಕಿಗಳನ್ನು ಜೀವಂತ ಪಳೆಯುಳಿಕೆಗಳು ಎನ್ನಲಾಗುತ್ತದೆ.

       ಈ ಮೊದಲೇ ಹೇಳಿದಂತೆ ಹಾರಾಟ ಎಂಬುದು ವಿಪರೀತ ಶಕ್ತಿಯನ್ನು ಬೇಡುವ ಕೆಲಸ. ಹಾಗಾಗಿ ಅವಕಾಶವಿದ್ದರೆ ಹಾರಾಟವನ್ನು ತ್ಯಜಿಸಿ ನೆಲದ ಮೇಲೆಯೇ ಬದುಕಲು ಎಲ್ಲ ಹಕ್ಕಿಗಳೂ ಬಯಸುತ್ತವೆ. ಅನೇಕ ಬೃಹದ್ದೇಹಿಯಾದ ಹಕ್ಕಿಗಳಿಗಂತೂ ಅವು ಬಯಸಿದರೂ ಹಾರಲು ಸಾಧ್ಯವೇ ಇಲ್ಲ. ಆಸ್ಟಿçಚ್, ಎಮು, ರಿಯಾ, ಕ್ಯಾಸೋವರಿ, ಪೆಂಗ್ವಿನ್, ಕಿವಿ ಇತ್ಯಾದಿ ಹಕ್ಕಿಗಳು ಇದಕ್ಕೆ ಉದಾಹರಣೆ. ಇನ್ನು ಹಾರಬಲ್ಲ ಹಕ್ಕಿಗಳ ವರ್ಗಗಳಲ್ಲೂ ಕೆಲ ಹಕ್ಕಿಗಳು ದೂರದ ದ್ವೀಪಗಳಲ್ಲಿ ನೆಲೆಸಿದ್ದು ಅಲ್ಲಿ ಅವಕ್ಕೆ ಯಾವುದೇ ಶತ್ರುಗಳ ಭಯವಿಲ್ಲ ಮತ್ತು ಆಹಾರದ ಕೊರತೆಯೂ ಇಲ್ಲವಾದ್ದರಿಂದ ಅವು ಹಾರಾಟವನ್ನು ಕಡಿಮೆಮಾಡುತ್ತ ಬಂದವು. ಅಂಥ ಎಷ್ಟೋ ಹಕ್ಕಿಗಳು ಇಂದು ಶಾಶ್ವತವಾಗಿ ಹಾರಾಟದ ಸಾಮರ್ಥ್ಯವನ್ನು ಕಳೆದುಕೊಂಡು ನೆಲವಾಸಿಗಳಾಗಿವೆ. ನ್ಯೂಜಿಲೆಂಡಿನ ಒಂದು ಬಗೆಯ ಗಿಳಿ ಕಕಾಪೋ, ಗ್ಯಾಲಪಾಗಸ್ ದ್ವೀಪಗಳ ಹಾರಲಾರದ ನೀರುಕಾಗೆ (ಕಾರ್ಮೋರಂಟ್), ನ್ಯೂಜಿಲೆಂಡಿನ ಟಕಾಹೇ ಇತ್ಯಾದಿಗಳು ಇದಕ್ಕೆ ಉದಾಹರಣೆ. ಆದರೆ ದುರಂತವೆಂದರೆ ಯಾವಾಗ ಆ ದ್ವೀಪಗಳಿಗೆ ಮಾನವ ಕಾಲಿಟ್ಟನೋ ಆಗ ಈ ಹಕ್ಕಿಗಳಿಗೆ ಕೇಡುಗಾಲ ಆರಂಭವಾಯಿತು. ಹಾರಲಾರದ ಈ ಹಕ್ಕಿಗಳು ಮಾನವನಿಗೂ ಅವನ ಜೊತೆ ದ್ವೀಪಕ್ಕೆ ಆಗಮಿಸಿದ ಇಲಿ, ಹೆಗ್ಗಣ, ಹಂದಿ, ಬೆಕ್ಕು, ನಾಯಿ ಇತ್ಯಾದಿಗಳಿಗೂ ಸುಲಭದ ತುತ್ತಾಗತೊಡಗಿದವು. ಹೀಗಾಗಿ ಅವುಗಳ ಅಸ್ತಿತ್ವಕ್ಕೇ ಅಪಾಯ ಬಂದೊದಗಿತು. ಎಷ್ಟೋ ಹಾರಲಾರದ ಹಕ್ಕಿಗಳು ಈ ಕಾರಣಕ್ಕಾಗಿಯೇ ನಿರ್ನಾಮವಾದವು. ಅದರಲ್ಲಿ ಮುಖ್ಯವಾದವೆಂದರೆ ನ್ಯೂಜಿಲೆಂಡಿನ ಮೋವಾ ಮತ್ತು ಮಾರಿಷಸ್ ದ್ವೀಪದ ಡೋಡೋ ಹಕ್ಕಿಗಳು ಇದಕ್ಕೆ ಅತ್ಯುತ್ತಮ ಉದಾಹರಣೆಗಳು. 

       ಹಾರುವ ಹಕ್ಕಿಗಳಲ್ಲೆಲ್ಲ ಅತ್ಯಂತ ಬೃಹತ್ ರೆಕ್ಕೆ ವಿಸ್ತಾರ ಹೊಂದಿರುವ ಹಕ್ಕಿಗಳೆಂದರೆ ಆಲ್ಬಟ್ರಾಸ್‌ಗಳು. ಹನ್ನೆರಡು ಅಡಿ ಅಗಲಕ್ಕೆ ಹರಡುವ ಅಗಾಧವಾದ ರೆಕ್ಕೆ ವಿಸ್ತಾರದ ಈ ಭಾರೀ ಹಕ್ಕಿಗಳು ತಮ್ಮ ವಿಶಾಲವಾದ ರೆಕ್ಕೆಗಳನ್ನು ಬಿಚ್ಚಿ ಹರಡಿಕೊಂಡು ಹಾಗೆಯೇ ಆಗದಸಲ್ಲಿ ತೇಲುತ್ತಲೇ ಜೀವನದ ಬಹುಭಾಗವನ್ನು ಕಳೆಯುತ್ತವೆ. ಆದರೆ ಈ ಹಕ್ಕಿಗಳು ಗಾಳಿಗೇರಲು ಪಡುವ ಕಷ್ಟವನ್ನು ಕಂಡರೆ ಮಾತ್ರ ಅಯ್ಯೋ ಎನ್ನಿಸದಿರದು. ಏಕೆಂದರೆ ಇವಕ್ಕೆ ಬೇರೆ ಹಕ್ಕಿಗಳಂತೆ ನಿಂತಲ್ಲಿಂದಲೇ ಗಾಳಿಗೇರಲು ಆಗುವುದಿಲ್ಲ. ಅಗಾಧವಾದ ದೇಹತೂಕವೇ ಇದಕ್ಕೆ ಕಾರಣ. ಇವು ವಿಮಾನಗಳು ರನ್‌ವೇ ಮೇಲೆ ಓಡುವಂತೆ ಗಾಳಿಗೇರುವ ಮುನ್ನ ಕೆಲಹೊತ್ತು ಓಡಿ ನಂತರ ಗಾಳಿಗೆ ಏರುತ್ತವೆ. ಇದೇ ರೀತಿ ಫ್ಲೆಮಿಂಗೋಗಳು ಸಹ ಓಡುತ್ತಲೇ ಗಾಳಿಗೇರುತ್ತವೆ. ಜೊತೆಗೆ ನೆಲಕ್ಕಿಳಿಯುವಾಗಲೂ ಅವು ಬಹಳ ಕಷ್ಟಪಡುತ್ತವೆ. ಸುಲಭವಾಗಿ ನೆಲಕ್ಕಿಳಿದು ನಿಲ್ಲಲು ಅವಕ್ಕೆ ಆಗುವುದಿಲ್ಲ. ವಿಮಾನವೊಂದು ಪತನಗೊಳ್ಳುವಂತೆ ಅಡ್ಡಾದಿಡ್ಡಿಯಾಗಿ ನೆಲಕ್ಕೆ ಬಿದ್ದು ಮತ್ತೆ ಸಾವರಿಸಿಕೊಂಡು ಎದ್ದು ಕುಳಿತುಕೊಳ್ಳುತ್ತವೆ. ಬೃಹದ್ದೇಹದ ಹಕ್ಕಿಗಳದ್ದೆಲ್ಲ ಇದೇ ಸಮಸ್ಯೆ. ಆದರೆ ಒಮ್ಮೆ ಗಾಳಿಗೇರಿದರೆ ಮತ್ತೆ ತಮ್ಮ ವಿಶಾಲವಾದ ರೆಕ್ಕೆಗಳನ್ನು ಗಾಳಿಯಲ್ಲಿ ಹರಡಿ ಹಾಗೇ ತೇಲುತ್ತ ಸಾಗುವ ಅವು ಅತ್ಯಂತ ಕಡಿಮೆ ಶಕ್ತಿಯನ್ನು ವ್ಯಯಮಾಡಿ ಹಾರುತ್ತವೆ. ಹಾಗಾಗಿ ಅವು ಅಷ್ಟು ದೊಡ್ಡ ದೇಹ ಹೊಂದಿದ್ದರೂ ಹಾರಲು ಸಮರ್ಥವಾಗಿವೆ. ಆಲ್ಬಟ್ರಾಸ್, ಪೆಲಿಕನ್, ಗ್ಯಾನೆಟ್, ಬೂಬಿ, ರಣಹದ್ದುಗಳು ಇತ್ಯಾದಿಗಳು ಇದಕ್ಕೆ ಅತ್ಯುತ್ತಮ ಉದಾಹರಣೆಗಳು. 

       ಇನ್ನು ಹಾರಾಟದಲ್ಲಿ ಶಕ್ತಿಯನ್ನು ಉಳಿಸಲು ಹೆಚ್ಚುಕಡಿಮೆ ಎಲ್ಲ ಹಕ್ಕಿಗಳೂ ತಮ್ಮ ಕೈಲಾದ ಪ್ರಯತ್ನ ಮಾಡುತ್ತವೆ. ಬಾತುಗಳು ಆಕಾಶದಲ್ಲಿ ಹಾರುವಾಗ ಆಂಗ್ಲಭಾಷೆಯ ವಿ ಅಕ್ಷರದ ಆಕಾರದಲ್ಲಿ ಹಾರಾಡುತ್ತವೆ. ಅವು ಈ ರೀತಿ ರಚನೆಯಲ್ಲಿ ಹಾರಲು ಕಾರಣ ಪ್ರತಿ ಹಕ್ಕಿಯೂ ಅದರ ಮುಂದಿನ ಹಕ್ಕಿಯ ಹಾರಾಟದ ಕಾರಣ ಅದರ ಮೂಲಕ ತನಗೆ ಲಭಿಸುವ ಗಾಳಿಯ ನೆರವಿನಿಂದ ತನ್ನ ಹಾರಾಟವನ್ನು ಸುಗಮವಾಗಿಸಿಕೊಳ್ಳತ್ತದೆ. ಜೀವಿಗಳ ಬುದ್ಧಿವಂತಿಕೆಗೆ ಇದೊಂದು ಅತ್ಯುತ್ತಮ ಉದಾಹರಣೆ.

       ಹಾರಾಟದಲ್ಲಿ ಅತ್ಯಂತ ವೇಗವಾಗಿ ಹಾರುವುದು ಮತ್ತು ಅತ್ಯಂತ ದೂರದವರೆಗೆ ಹಾರುವುದು ವಿಶ್ವದಾಖಲೆಗೆ ಭಾಜನವಾದ ಸಂಗತಿಗಳು. ಇದರಲ್ಲಿ ಚಾಂಪಿಯನ್ ಪಟ್ಟ ಪಡೆದಿರುವ ಹಕ್ಕಿಗಳು ಪೆರಿಗ್ರೈನ್ ಫಾಲ್ಕನ್ ಮತ್ತು ಆರ್ಕ್ಟಿಕ್ ಟರ್ನ್ ಹಕ್ಕಿಗಳು. ಪೆರಿಗ್ರೈನ್ ಫಾಲ್ಕನ್‌ಗಳು ಬೇಟೆಯ ಮೇಲೆ ಎರಗುವಾಗ ಗಂಟೆಗೆ ೨೦೦ ಮೈಲಿ (೩೨೦ ಕಿಲೋಮೀಟರ್) ವೇಗದಲ್ಲಿ ಎರಗುತ್ತವೆ. ಇದು ಭೂಮಿಯ ಮೇಲೆ ದಾಖಲಾದ ಯಾವುದೇ ಹಕ್ಕಿಯ ಅಥವಾ ಜೀವಿಯ ಅತಿವೇಗದ ಚಲನೆ ಎಂದು ದಾಖಲಾಗಿದೆ. ಬೇಟೆಯ ಮೇಲೆ ಎರಗುವಾಗ ಈ ಮಿಂಚಿನ ವೇಗದಲ್ಲಿ ಎರಗುವ ಫಾಲ್ಕನ್ ಅದರ ಮೊನಚಾದ ಉಗುರುಗಳಿಂದ ದಾಳಿ ಮಾಡಿದ ಕೂಡಲೇ ಅದರ ಬೇಟೆ ಸಾವನ್ನಪ್ಪುತ್ತದೆ. ಗಿನ್ನಿಸ್ ದಾಖಲೆಯ ಪ್ರಕಾರ ಅತ್ಯಂತ ವೇಗದಲ್ಲಿ ಬೇಟೆಯ ಮೇಲೆ ಎರಗಿದ ಒಂದು ಫಾಲ್ಕನ್ ಗಂಟೆಗೆ ೩೮೯ ಕಿಲೋಮೀಟರ್ ವೇಗದಲ್ಲಿ ಎರಗಿತ್ತು! ಇನ್ನು ಸ್ವಿಫ್ಟ್ ಹಕ್ಕಿಗಳು ಕೂಡ ಗಂಟೆಗೆ ಇನ್ನೂರು ಕಿಲೋಮೀಟರ್‌ಗಳ ಮಹಾವೇಗದಲ್ಲಿ ಹಾರುತ್ತವೆ. ಇವಂತೂ ಗೂಡು ಕಟ್ಟಿ ಮೊಟ್ಟೆಯಿಡುವುದನ್ನು ಹೊರತುಪಡಿಸಿದರೆ ಇನ್ಯಾವ ಕಾರಣಕ್ಕೂ ನೆಲಕ್ಕಿಳಿಯುವುದೇ ಇಲ್ಲ! ಅವುಗಳ ಕಾಲುಗಳು ಅತ್ಯಂತ ಚಿಕ್ಕದಾಗಿ ದುರ್ಬಲವಾಗಿದ್ದು ಅವು ನೆಲದ ಮೇಲಾಗಲೀ ಮರದ ಮೇಲಾಗಲೀ ಕೂರಲು ಸಾಧ್ಯವಿಲ್ಲ. ಹಾಗಾಗಿ ಅವುಗಳನ್ನು ಕನ್ನಡದಲ್ಲಿ ಅಂಬರದ ಹಕ್ಕಿಗಳು ಎಂದೇ ಕರೆಯುತ್ತಾರೆ. ಅವುಗಳ ಬಗೆಗೆ ಅನೇಕ ದಂತಕಥೆಗಳಿವೆ. ಅವು ಆಕಾಶದಲ್ಲಿ ಎಷ್ಟು ಎತ್ತರಕ್ಕೇರಿ ಮೊಟ್ಟೆಯುಡುತ್ತವೆ ಎಂದರೆ ಆ ಮೊಟ್ಟೆಗಳು ನೆಲಕ್ಕೆ ಇನ್ನೇನು ಬೀಳಬೇಕು ಎನ್ನುವಷ್ಟರಲ್ಲಿ ಮೊಟ್ಟೆಯೊಡೆದು ಹೊರಬಂದು ರೆಕ್ಕೆ ಬಡಿಯುತ್ತ ಆಗಸಕ್ಕೇರುತ್ತದೆ ಎಂಬ ನಂಬಿಕೆ ಇದೆಯಂತೆ. ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಕನ್ನಡನಾಡಿನ ಹಕ್ಕಿಗಳು ಪುಸ್ತಕದಲ್ಲಿ ಈ ನಂಬಿಕೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಇದೊಂದು ವಿಷಯವನ್ನು ಹೊರತುಪಡಿಸಿ ಸ್ವಿಫ್ಟ್ಗಳ ಬಗೆಗಿನ ಇನ್ನೆಲ್ಲ ನಂಬಿಕೆಗಳೂ ಸತ್ಯವೆಂಬುದು ತಿಳಿದುಬಂದಿದೆ. ಅಂದರೆ ಅವು ಗೂಡುಕಟ್ಟಿ ಮೊಟ್ಟೆಯಿಡುವುದನ್ನು ಹೊರತುಪಡಿಸಿ ಬೇರಾವ ಕಾರಣಕ್ಕೂ ಕೆಳಕ್ಕಿಳಿಯುವುದೇ ಇಲ್ಲ!

       ಆರ್ಕ್ಟಿಕ್ ಟರ್ನ್‌ಗಳದ್ದಂತೂ ದೂರದ ಹಾರಾಟದಲ್ಲಿ ವಿಶ್ವದಾಖಲೆ. ಪ್ರತಿವರ್ಷ ಉತ್ತರ ಧೃವದಿಂದ ದಕ್ಷಿಣ ಧೃವಕ್ಕೆ, ಮರುವರ್ಷ ಮರಳಿ ದಕ್ಷಿಣ ಧೃವದಿಂದ ಉತ್ತರ ಧೃವಕ್ಕೆ ಸುಮಾರು ಹತ್ತೊಂಬತ್ತು ಸಾವಿರ ಕಿಲೋಮೀಟರ್ ಪ್ರಯಾಣ ಕೈಗೊಳ್ಳುತ್ತವೆ. ಅವುಗಳ ವಾರ್ಷಿಕ ಪಯಣ ೭೦೦೦೦ದಿಂದ ೯೦೦೦೦ ಕಿಲೋಮೀಟರ್‌ವರೆಗೂ ವಿಸ್ತರಿಸುತ್ತದೆ! ಹೀಗೆ ದೂರ ಹಾರಾಟದಲ್ಲಿ ಇವುಗಳನ್ನು ಮೀರಿಸುವ ಜೀವಿ ಭೂಮಿಯ ಮೇಲೆ ಮತ್ತೊಂದಿಲ್ಲ. 

       ಒಟ್ಟಿನಲ್ಲಿ ಹಾರಾಟ ಎಂಬುದು ಅತ್ಯಂತ ಹೆಚ್ಚಿನ ಶಕ್ತಿಯನ್ನು ಬೇಡುವ, ಅಗಾಧವಾದ ಕೌಶಲ್ಯಗಳನ್ನು ಬೇಡುವ ಒಂದು ಕ್ರಿಯೆ. ಮನುಷ್ಯ ಹಕ್ಕಿಗಳಿಂದ ಪ್ರೇರೇಪಣೆ ಪಡೆದು ಹಾರುವ ಯಂತ್ರಗಳನ್ನು ಕಂಡುಹಿಡಿದ. ಕೇವಲ ಒಂದು-ಒAದೂಕಾಲು ಶತಮಾನದ ಹಿಂದಷ್ಟೇ ವಿಮಾನಗಳು ಪ್ರವರ್ಧಮಾನಕ್ಕೆ ಬಂದವು. ಇಂದು ಜಗತ್ತಿನ ಪ್ರತಿಯೊಂದು ದೇಶದ ಪ್ರತಿಯೊಂದು ಪ್ರಮುಖ ನಗರದಲ್ಲೂ ವಿಮಾನ ನಿಲ್ದಾಣಗಳಿವೆ. ಇಂದು ವಿಮಾನಗಳು ಜಗತ್ತಿನ ಆರ್ಥಿಕತೆಯ ಅವಿಭಾಜ್ಯ ಅಂಗಗಳಾಗಿವೆ. ಪ್ರತಿದಿನ ಸುಮಾರು ಒಂದು ಲಕ್ಷ ವಿಮಾನಗಳು ಜಗತ್ತಿನ ಬೇರೆಬೇರೆ ಕಡೆಗಳಲ್ಲಿ ಹಾರಾಟ ನಡೆಸುತ್ತವೆ. ಆದರೆ ನಮಗೆ ಹಾರಾಟಕ್ಕೆ ಪ್ರೇರಣೆಯಾದ ಹಕ್ಕಿಗಳು ಮತ್ತು ಕೀಟಗಳು ಅನೇಕ ಮಿಲಿಯನ್ ವರ್ಷಗಳಿಂದಲೇ ಹಾರಾಟವನ್ನು ಕರಗತ ಮಾಡಿಕೊಂಡಿವೆ. ಹಾರಾಟವು ಅಗಾಧವಾದ ಶಕ್ತಿಯನ್ನು ಬೇಡುವ ಕ್ರಿಯೆಯಾಗಿದ್ದರೂ ಅದರಲ್ಲೂ ಶಕ್ತಿಯ ಮಿತವ್ಯಯದೊಂದಿಗೆ ದಕ್ಷ ಹಾರಾಟಗಾರರಾಗಿರುವ ಜೀವಿಗಳ ಸಂಖ್ಯೆ ಭೂಮಿಯ ಮೇಲೆ ಹಲವಾರಿವೆ. ಆದ್ದರಿಂದಲೇ ಅವು ಜಗತ್ತಿನೆಲ್ಲೆಡೆ ಯಶಸ್ವಿಯಾಗಿ ಬಾಳುವೆ ನಡೆಸುತ್ತಿವೆ.

 

Category:Nature



ProfileImg

Written by Srinivasa Murthy

Verified

0 Followers

0 Following