ಬೆಳಗ್ಗೆ ಎದ್ದಾಗಲೇ ತಲೆ ಭಾರ ಭಾರ ಎನಿಸುತ್ತಿತ್ತು; ಮುಖ ತೊಳೆದವನೇ ಅಡಿಗೆ ಕೊನೆಗೆ ಬಂದೆ. ಕಾಫಿ ಕುಡಿಯಲು ಫ್ಲಾಸ್ಕ್ ತೆರೆದೆ, ಕಾಫಿ ಇರಲಿಲ್ಲ. ಸರಿ, ನಾನೇ ಕಾಫಿ ಮಾಡಿಕೊಳ್ಳೋಣ ಎಂದು ಕೊಳ್ಳುತ್ತಾ ಪಾತ್ರೆಯ ಕಡೆ ನೋಡಿದೆ, ತೊಳೆಯದೆ ಇರುವ ಪಾತ್ರೆಗಳ ರಾಶಿಯೇ ಸಿಂಕ್ ನಲ್ಲಿ ಬಿದ್ದಿತ್ತು. ತಲೆ ಸಿಡಿಯುತ್ತಿತ್ತು, ಜೊತೆಗೆ ಹಸಿವು ಕಾಣಿಸಿಕೊಂಡಿತು. ನಿಂತಲ್ಲೇ ಅಡುಗೆಕೋಣೆಯನ್ನು ಒಮ್ಮೆ ಸರಿಯಾಗಿ ದಿಟ್ಟಿಸಿದೆ. ಮನೆಯಲ್ಲಿ ಅಡುಗೆ ಮಾಡಿದ ಕುರುಹು ಕಾಣಲಿಲ್ಲ. ಅವಳೂ ಹಸಿದುಕೊಂಡೆ ಆಫೀಸ್‌ಗೆ ಹೋಗಿದ್ದಾಳೆ ಅಂದುಕೊಂಡೆ. ಮನೆಗೆ ಬಾಗಿಲು ಹಾಕಿ ಹೊರಬಂದೆ,ಮನೆಗೆ ಬಾಗಿಲು ಹಾಕಿ ಹೊರಬಂದೆ. ಪಕ್ಕದಲ್ಲೇ ಇದ್ದ ಕ್ಯಾಂಟೀನ್ ಒಂದು ಹೊಕ್ಕು, ಒಂದು ರೈಸ್ಬಾತ್ ಮತ್ತು ಕಾಫಿ ಹೇಳಿದೆ. ತೆಲುಗಿನವರ ರೈಸ್ ಬಾತ್ ಜೊತೆಗೆ ಚಟ್ನಿ ಬಂದಿತು. ಅದ್ಯಾಕೋ ಅದನ್ನು ತಿನ್ನುವಾಗ ಅಮ್ಮ ತುಂಬಾ ನೆನಪಾದಳು. ಇವತ್ತು ಶುಕ್ರವಾರ ರಜೆ ಹಾಕಿದ್ದೇನೆ. ಇನ್ನು ನಾಳೆ ನಾಡಿದ್ದು ಹೇಗಿದ್ರು ರಜೆ ಇದ್ದೇ ಇದೆ; ಮನೆಗೆ ಹೋಗೋಣ ಅಂತ ನಿರ್ಧರಿಸಿ ಬಿಟ್ಟೆ. ಹೊಟ್ಟೆಗೆ ತಿಂಡಿ, ಬಿಸಿ ಕಾಫಿ ಬಿದ್ದ ತಕ್ಷಣ ನೆಮ್ಮದಿ ಅನ್ನಿಸಿತು, ಸೀದಾ ಮನೆಗೆ ಬಂದೆ. ಮೂರು-ನಾಲ್ಕು ದಿನಗಳಿಗೆ ಆಗುವಷ್ಟು ಬಟ್ಟೆ ಬ್ಯಾಗ್ ತುಂಬಿಸಿಕೊಂಡೆ.. ಇನ್ನೇನು ವಸ್ತುಗಳು ಬೇಕೋ ಎಲ್ಲವನ್ನು ಅದೇ ಬ್ಯಾಗಿಗೆ ತುಂಬಿಸಿಕೊಂಡು ಮನೆಗೆ ಬೀಗ ಹಾಕಿ ಕಾರಲ್ಲಿ ಬಂದು ಕುಳಿತೆ. ಸತ್ಯಳಿಗೆ ಮೇಸಜ್ ಕಳುಹಿಸಿದೆ, ಮನೆಗೆ ಹೋಗುವುದಾಗಿ.ನನ್ನ ಪಯಣ ಹೊರಟಿತು. ಆದರೆ ನನ್ನಮನಸ್ಸಿನ ಒಳಗಿದ್ದ ದುಗುಡ ಮಾತ್ರ ನನ್ನ ಬಿಟ್ಟು ಪ್ರಯಾಣ ಮಾಡುವ ಹವಣಿಕೆಯಲ್ಲಿ ಇರಲಿಲ್ಲ. ಅದು ಕೂಡ ತನ್ನ ಜೊತೆಗೆ ಯೋಚನೆ ಮತ್ತು ನೆನಪುಗಳ ಜೊತೆ ಸೇರಿ ನನ್ನ ಪ್ರಯಾಣದ ಜೊತೆಗಳದವು. ನನ್ನ ಹೆಸರು ವಿಶ್ವಾಸ್ ಇರುವುದು ಮಹಾನಗರಿ ಬೆಂಗಳೂರು. ಇನ್ನು ಅದೇನೋ ಹೇಳ್ತಾರಲ್ಲ. ಬೆಂಗಳೂರಲ್ಲಿ ನಿಂತು ನೀವು ಗುರಿ ಇಡದೇ ಕಲ್ಲು ಎಸೆದ್ರೂ ಅದು ಒಂದು IT ಉದ್ಯೋಗಿಗೆ ಬೀಳುತ್ತೆ ಅಂತ, ಅಂತ ಸಾವಿರಾರು IT ಉದ್ಯೋಗಿಗಳಲ್ಲಿ ನಾನು ಒಬ್ಬ. ಇನ್ನು ಊರು? ಅದರ ಹೆಸರು ಹೇಳಿದ್ರೆ ನಿಮಗೆ ಗೊತ್ತಾಗ್ಲಿಕ್ಕೆ ಇಲ್ಲ;ಸಣ್ಣ ಹಳ್ಳಿ ಅದು. ಕುಕ್ಕೆ ಸುಬ್ರಮಣ್ಯ ಗೊತ್ತಲ್ವ? ಅದರ ಹತ್ರನೇ ಬೀಳುತ್ತೆ. ತಂದೆ ಕೃಷಿಕರು, ತಾಯಿ ಗೃಹಿಣಿ ನಾನು ಮತ್ತು ತಂಗಿ ಇಬ್ರೇ ಮಕ್ಕಳು. ಮುಖ್ಯವಾಗಿ ಅಡಿಕೆ ತೋಟದಿಂದ ಬಂದ ಆದಾಯದಿಂದ ನಾನು ನನ್ನ ಇಂಜಿನಿಯರಿಂಗ್ ಅನ್ನು ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮುಗಿಸಿಕೊಂಡು ಬೆಂಗಳೂರು ಸೇರಿಕೊಂಡೆ; ನಿಜವಾದ ಕಥೆ ಶುರುವಾಗುವುದು ಇಲ್ಲಿಂದ ಖಾಸಗಿ ಕಂಪನಿ ಒಂದರಲ್ಲಿ ಇಂಟರ್ನ್ ಆಗಿ ಸೇರಿಕೊಂಡಿದ್ದ ನನಗೆ ನನ್ನ ಜೊತೆಗೆ ಇಂಟರ್ನ್ ಆಗಿ ಸೇರಿಕೊಂಡ ಸತ್ಯ ಪರಿಚಯವಾಗುತ್ತದೆ. ನನ್ನ ಕಾಲೇಜು ವಿದ್ಯಾಭ್ಯಾಸವೆಲ್ಲ ಮಂಗಳೂರಿನಲ್ಲಿ ಹಾಸ್ಟೆಲ್ ನಲ್ಲಿ ಕಳೆದರೂ ಸಹ ಬೆಂಗಳೂರಿಗೆ ಬಂದ ತಕ್ಷಣ ನನ್ನವರಿಂದ ಬಹಳ ದೂರ ಬಂದಿದ್ದೇನೆ ಅನ್ನಿಸುತ್ತಿತ್ತು. ಹೀಗೆ ಗುರಿಯಿಲ್ಲದೇ ಸುತ್ತುತ್ತಿದ್ದ ನನಗೆ ನನ್ನ ರೀತಿಯೇ ಈ ತಿರುಗಿನೊಳಗೆ ಸಿಕ್ಕಿಹಾಕಿಕೊಂಡಿದ್ದ ಸತ್ಯಳ ಪರಿಚಯವಾಗುತ್ತದೆ. ಸತ್ಯ ಮಲೆನಾಡಿನವಳು ತಂದೆ ಖಾಸಗಿ ಸಂಸ್ಥೆಯಲ್ಲಿ ಗುಮಾಸ್ತರು;ಜೊತೆಗೆ ಸ್ವಲ್ಪ ತೋಟದ ಮಾಲೀಕರು. ತಾಯಿ ಗೃಹಿಣಿ. ಇವಳು ಮತ್ತು ತಂಗಿ ತಂದೆಯ ಬೆನ್ನಿಗೆ ಅಂಟಿಕೊಂಡು ಬೆಳೆದವರು. ನನ್ನ ರೀತಿ ಅವಳು ಹಾಸ್ಟೆಲ್ ಅಲ್ಲಿ ಓದಿದವಳಲ್ಲ.ಸತ್ಯ ಒಂದು ದಿನಾನೂ ತಂದೆ ತಾಯಿಯ ಬಿಟ್ಟು ಇರದ ಹುಡುಗಿ ಕೆಲಸಕ್ಕಾಗಿ ಈ ಮಹಾನಗರಿ ಬಂದು ಸೇರಿಕೊಂಡಳು. ದಿನಾ ತಂದೆ ತಾಯಿಯ ನೆನೆದು ಬಿಕ್ಕಳಿಸುತ್ತಿದ್ದ ಅವಳಿಗೆ ನಾನು ಜೊತೆಯಾದೆ. ನಾವು ಒಂದೇ ಸಂಸ್ಥೆಯಲ್ಲಿ ಒಟ್ಟಿಗೆ ಇಂಟರ್ನ್ ಆಗಿದ್ದೆವು. ಸಹೋದ್ಯೋಗಿಗಳು, ಗೆಳೆಯರಾದೇವು. ಸಮಯ ಉರುಳಿದಂತೆ ಪ್ರೇಮಿಗಳು ನಾವು. ತಂದೆ, ತಾಯಿ, ಬಂಧುಗಳ, ಪರಿಚಯಸ್ಥರ ಇವರ್ಯಾರ ಭಯ ದೂರದ ಬೆಂಗಳೂರಿನ ನಮಗೆ ತಲುಪದೇ, ನಾವು ಜೊತೆಯಾಗಿ ಕೈ ಕೈ ಹಿಡಿದು ಬೆಂಗಳೂರು ಸುತ್ತಿದ್ದೇ... ಸುತ್ತಿದ್ದು. ಪ್ರೀತಿಯ ಪ್ರೇಮದ ಹಾಡು ಹಾಡಿದ್ದೇ.... ಹಾಡಿದ್ದು. ಒಂದು ಗಳಿಗೆಯೂ ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಬಾಂಧವ್ಯ ಚೆನ್ನಾಗಿ ಗಟ್ಟಿಯಾಯಿತು….. ಗಟ್ಟಿಯಾಯಿತೇ? ..,...
ಬೆಂಗಳೂರಿನ ಸಂಚಾರ ದಟ್ಟನೆಯಿಂದ ತುಂಬಾ ಮುಂದೆ ಬಂದಿದ್ದೆ, ಹಾಸನದತ್ತ ಗಾಡಿ ಸಾಗುತ್ತಿತ್ತು ನಿಧಾನವಾಗಿ,, ನನ್ನ ಯೋಚನಾ ಲಹರಿಗೆ ಜೊತೆಯಾಗುತ್ತಾ. "ಬಾಂಧವ್ಯ ಗಟ್ಟಿಯಾಯಿತೇ?"ಈ ಪ್ರಶ್ನೆ ಮತ್ತೆ ಮತ್ತೆ ನನ್ನನ್ನು ಕಾಡತೊಡಗಿತು. ಇತ್ತೀಚೆಗೆ ಕೆಲವು ದಿನಗಳಿಂದ ನಾನು ಇಷ್ಟ ಪಟ್ಟು ಮದುವೆಯಾದ ಹುಡುಗಿ ಇವಳೇನ? ಅನ್ನಿಸಿಬಿಟ್ಟಿದೆ. ಹೌದು ಪ್ರೇಮಿಗಳಾಗಿದ್ದವರು ನಾವು ದಂಪತಿಗಳು ನಾವೀಗ; ಮದುವೆಗೆ ಮೂರು ವರುಷಗಳಾಗಿದೆ. ಇಂಟರ್ನ್ಶಿಪ್ ಮುಗಿಸಿ ಇಬ್ಬರೂ ಅದೇ ಕಂಪನಿಯಲ್ಲಿ ಸಹೋದ್ಯೋಗಳಾಗಿದ್ದವರು ನಮ್ಮ ಪ್ರೇಮಕ್ಕೆ ಮದುವೆಯ ಮೊಹರನ್ನು ಒತ್ತಬೇಕು ಎಂದು ಬಯಸಿದೆವು. ಒಳ್ಳೆಯ ವಿದ್ಯೆ ಪಡೆದು ಬೃಹತ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು ಲಕ್ಷಗಟ್ಟಳೆ ಸಂಬಳ ಪಡೆಯುತ್ತಿದ್ದ ನಮ್ಮನ್ನು ತಡೆಯುವವರು ಯಾರು ಇಲ್ಲ ಎಂದು ಅಂದುಕೊಂಡದ್ದು ನಮ್ಮ ತಪ್ಪು. ಇಬ್ಬರ ಮನೆಯಿಂದನೂ ವಿರೋಧ ಬಂದೇ ಬಂದಿತ್ತು. ಜಾತಿ, ಭಾಷೆ,ಅಂತಸ್ತು ಮುಂತಾದ ಹಂಗಿಗೆ ಒಳಗಾಗದೆ ಓಡಾಡುತ್ತಿದ್ದ ನಮಗೆ ಈಗ ಮನೆಯವರ ಯೋಚನಾ ಲಹರಿಯ ಬಿಸಿ ತಾಗತೊಡಗಿತ್ತು. ನನ್ನ ಮನೆಯವರು ಮೌನಕ್ಕೆ ಜಾರಿದರೆ ಅವಳ ಮನೆಯರು ಯುದ್ಧಕ್ಕೆ ಸನ್ನದ್ಧರಾದರು. ವಿಷಯತಿಳಿದ ಮರುದಿನವೇ ಅವಳ ತಂದೆ ಅವಳನ್ನು ಊರಿಗೆ ಹೊರಡಿಸಲು ಸಿದ್ದರಾದರು. ಮೊದಲೇ, ತಂದೆಯ ಮುದ್ದಿನ ಮಗಳು ಎಲ್ಲಿ ತಂದೆಯ ಜೊತೆಗೆ ಹೊರಟು ಬಿಡುವಳೋ ಅಂದುಕೊಂದೆ ಆದರೆ ನನ್ನ ಅದೃಷ್ಟಕ್ಕೆ ಹಾಗಾಗದೆ ಅವಳು ಕೆಲಸದ ಕಾರಣ ನೀಡಿ ಆ ಕ್ಷಣಕ್ಕೆ ತಪ್ಪಿಸಿಕೊಂಡಳು. ಆದರೆ ಆದಷ್ಟು ಬೇಗ ಕೆಲಸ ಬಿಡುವಂತೆಯೂ, ಜೊತೆಗೆ ನನ್ನನು ಬಿಡುವಂತೆ ದಿನೇ ದಿನೇ ಒತ್ತಡ ಹೆಚ್ಚಾಗತೊಡಗಿತು. ನಾನು ಮನೆಗೆ ಬಂದವನೇ ನನ್ನ ಮನೆಯವರನ್ನು ಓಲೈಸತೊಡಗಿದೆ ನನಗೂ ಏನು ಬೆಣ್ಣೆಯಷ್ಟು ಮೃದವಾಗಿ ಕೆಲಸವಾಗಲಿಲ್ಲ, ತಂದೆಯ ಸಿಟ್ಟು, ಅಮ್ಮನ ಅಳು,ಆತ್ಮಹತ್ಯೆಯ ಧಮ್ಕಿ, ತಂಗಿಯ ತಾತ್ಸಾರ, ಮಾವಂದಿರ ಒರಟು ನುಡಿ ಎಲ್ಲವನ್ನು ಸಹಿಸಿ ಅವರನ್ನು ಓಲೈಸಿಕೊಳ್ಳಬೇಕಾದರೆ ಒಂದು ಹೊಸ ಲೋಕ ನೋಡಿದ ಅನುಭವ. ನನ್ನ ಓಲೈಕೆಗೆ ಒಪ್ಪಿಕೊಂಡರೆ? ಅಥವಾ ದುಡಿಯುತ್ತಿರುವ ಒಬ್ಬನೇ ಮಗನನ್ನು ಕಳೆದುಕೊಳ್ಳಲು ಇಷ್ಟಪಡಲಿಲ್ಲವೋ ಗೊತ್ತಿಲ್ಲ ಅಂತೂ ಒಲ್ಲದ ಮನಸ್ಸಿನ ಹಸಿರು ನಿಶಾನೆಯಂತೂ ದೊರಕಿತ್ತು. ಆದರೆ ಸತ್ಯಳ ಮನೆಯಲ್ಲಿ ಇಂತ ಅವಕಾಶ ಸಿಗಲಿಲ್ಲ. ನಿಜ ಹೇಳಬೇಕಂದರೆ,ನಮ್ಮ ವಿಷಯ ತಿಳಿಸಿದ ನಂತರ ಅವಳು ಮನೆಗೇ ಕಾಲಿಡಲಿಲ್ಲ. ಮನೆಗೆ ಹೋದರೆ ಎಲ್ಲಿ ವಾಪಾಸು ಬರದಂತೆ ಬಂಧಿಸಿಡುವರೋ ಎಂಬ ಭಯ. ಅದೊಂದು ದಿನ ಮತ್ತೆ ಅವಳ ತಂದೆ ಇವಳ ಕಾಣಲು ಬಂದರು; ಮತ್ತೆ ಅದೇ ಹಠ. ನಾನು ಅವರ ಮನಒಲಿಸಲು ಭೇಟಿ ಆದೆ ಆದರೆ ಅವರು ನನ್ನ ಮಾತಿರಲಿ ನನ್ನ ಮುಖ ನೋಡಲೂ ಸಹ ಅಸಹ್ಯಪಡುತ್ತಿದ್ದರು. ಸಂಜೆಯ ಹೊತ್ತು ಪಾರ್ಕ್ ನ ಬೆಂಚಿನ ಮೇಲೆ ಕುಳಿತು ನಾನು, ಸತ್ಯ ಅವಳ ತಂದೆಯ ಮನ ಒಲಿಸಲು ಬಹಳ ಪ್ರಯತ್ನಪಟ್ಟೆವು ಆದರೆ ಅವರು ಪಟ್ಟು ಬಿಡಲಿಲ್ಲ ಕೊನೆ ಕೊನೆಗೆ ನನ್ನ, ನನ್ನ ಮನೆಯವರ ಕುರಿತಾಗಿ ಕೆಟ್ಟದಾಗಿ ಧ್ವನಿ ಎತ್ತರಿಸಿ ಮಾತನಾಡಲು ಶುರು ಮಾಡಿದಾಗ ನನಗೂ ಸ್ವಲ್ಪ ಸಿಟ್ಟು ಬಂದು ನಾನು ಸ್ವಲ್ಪ ಧ್ವನಿ ಎತ್ತರಿಸಿದೆ, ನಮ್ಮನ್ನು ನೋಡಿ ಸತ್ಯ ಅಳಲು ಪ್ರಾರಂಭಿಸಿದಳು. ಮಾತು ಎಲ್ಲೆ ಮೀರಿತ್ತು. ಅವರು ಆವೇಶಬಂದಂತೆ ಕಿರುಚಾಡಲು ಶುರುಹಚ್ಚಿಕೊಂಡರು ಸಂಜೆಯ ಹೊತ್ತಾದ ಕಾರಣ ಪಾರ್ಕ್ನಲ್ಲಿ ಬಹಳಷ್ಟು ಜನರು ಸೇರಿದ್ದರು ಅವರನ್ನು ಅಲ್ಲಿಂದ ಹೊರಡಿಸಲು ಅವರ ಕೈ ಹಿಡಿದೆ ಅಷ್ಟೇ.. ರಪ್ಪೆಂದು ಒಂದು ಏಟು ಕೆನ್ನೆಗೆ ಬಂದು ಬಿತ್ತು ಅವರ ಕಣ್ಣಲ್ಲಿ ಸಿಟ್ಟಿತ್ತು,ನನ್ನ ಕಣ್ಣಲ್ಲಿ ಅವಮಾನ. ಒಂದು ಸಲ ಸುತ್ತ ಇದ್ದವರು ಚಟುವಟಿಕೆ ನಿಲ್ಲಿಸಿ ನಮ್ಮನು ನೋಡಿದರು. ನಾನು ಅಲ್ಲಿಂದ ಕಾಲು ಕೀಳುವ ಹೊರತು ನನಗೆ ಬೇರೆ ಯಾವುದೇ ದಾರಿ ಇರಲಿಲ್ಲ. ಈ ಘಟನೆಯ ನಂತರ ಯಾರನ್ನೂ ಒಲಿಸಿಕೊಳ್ಳುವ ಅಗತ್ಯ ಇರಲಿಲ್ಲ ನನ್ನ ಮನೆಯವರು ಮತ್ತು ಒಂದಷ್ಟು ಗೆಳೆಯರ ಸಮ್ಮುಖದಲ್ಲಿ ನಾವು ಮದುವೆಯಾದೆವು ನನ್ನ ಬಳಗ ಎಲ್ಲರಿದ್ದರು ಅವಳ ಬಳಗ ಅವಳೊಬ್ಬಳೆ;ಮದುವೆ ಆಯಿತು.
ಹೊಸ ಜೀವನ ಶುರು,ಹೊಸ ಮನೆ ಮಾಡಿದೆವು, ನಾನು ಕಂಪನಿ ಬದಲಾಯಿಸಿದೆ ಎಲ್ಲವೂ ಹೊಸತನ ಆದರೆ ಅವಳ ಮನೆಯವರ ಹಠ ಒಂದನ್ನು ಹೊರತುಪಡಿಸಿ. ದಿನಗಳು ತಿಂಗಳಾದವು ಅದ್ಯಾಕೋ ಮದುವೆಯ ತನಕ ಇದ್ದಉತ್ಸಾಹ, ಪ್ರೀತಿ, ಉತ್ಕಟತನ ಮದುವೆಯ ನಂತರ ಉಳಿಯುವುದಿಲ್ಲ ಅನ್ನಿಸುತ್ತದೆ. ಇವಳೂ ಹಾಗೆ ಮದುವೆಗೆ ಮುಂಚೆ ಇದ್ದ ಸತ್ಯ ಈಗ ಇಲ್ಲ ಎಲ್ಲಕ್ಕೂ ಸಿಡುಕುತ್ತಾಳೆ, ಪ್ರತಿ ಮಾತಿಗೂ ಅಳುತ್ತಾಳೆ ಅಥವಾ ಸನ್ಯಾಸಿಯಂತೆ ಸುಮ್ಮನಾಗುತ್ತಾಳೆ.ಹೀಗೆ ತಿಂಗಳುಗಳು ಉರುಳಲು ಕೋವಿಡ್ ಬಂದು ಅಪ್ಪಳಿಸಿತು. ಯಾರು ಯಾರಿಗೆ ಕೋವಿಡ್ ಯಾವ ರೀತಿ ಅನುಭವ ಕೊಟ್ಟಿತೋ ತಿಳಿಯೇ ನನಗಂತೂ ಎಲ್ಲವೂ ಕೆಟ್ಟದೇ.ಮದುವೆಗೆ ಮುಂಚೆ ನಾವಿಬ್ಬರಷ್ಟೇ ಸಮಯ ಕಳೆಯಬೇಕು ಎಂದು ಬಯಸುತ್ತಿದ್ದೆವು ;ಆದರೆ ನಾವಿಬ್ಬರು ಒಂದೇ ಮನೆಯೊಳಗೇ ಬದುಕುತ್ತಿದರೂ ಅದೂ ಇಪ್ಪನಾಲ್ಕು ಗಂಟೆ ಒಟ್ಟಿಗೆ,ಆದರೆ ಈಗ ನಮ್ಮ ಜೊತೆ ನಮಗೆ ಸಹ್ಯವಾಗುತ್ತಿಲ್ಲ. ನನಗೆ ಗೊತ್ತಿತ್ತು ಸತ್ಯ ಅವಳ ಮನೆಯರೊಂದಿಗೆ ಮಾತನಾಡಲು ತುಂಬಾ ಪ್ರಯತ್ನಪಡುತ್ತಿದ್ದಳು ಆದರೆ ಅವರು ಯಾರು ಇವಳ ಕರೆಗೆ ಓಗೊಡುತ್ತಿರಲಿಲ್ಲ. ಇವಳ ತಾಯಿಗೆ, ಅಕ್ಕನಿಗೆ ಮಾತನಾಡಬೇಕು ಎಂಬ ಮನಸ್ಸಿದರೂ ತಂದೆಯ ಭಯಕ್ಕೆ ಸುಮ್ಮನಿರಬಹುದು, ಯಾರಿಗೆ ಗೊತ್ತು ?ಅವರೊಂದಿಗೆ ಮಾತನಾಡಲು ನಾನಂತೂ ಎಂದೂ ಪ್ರಯತ್ನಿಸಲೂ ಇಲ್ಲ ಇವಳನ್ನು ಇವಳ ಪ್ರಯತ್ನವನ್ನು ತಡೆಯಲೂ ಇಲ್ಲ. ಆದರೆ ಅವರೊಂದಿಗೆ ಮಾತನಾಡಬೇಕು ಎಂಬ ಹಠ ಮಾತ್ರ ದಿನದಿಂದ ದಿನಕ್ಕೆ ಇವಳಿಗೆ ಹೆಚ್ಚಾಯಿತು. ಅವರ ನಿರಾಕರಣೆಯ ಸಿಟ್ಟು ನನ್ನ ಮೇಲೆ ಪ್ರಾಯೋಗಿಸುತ್ತಿದ್ದಳು. ಮನೆಯೊಳಗೇ ಬಂಧಿಯಾಗಿದ್ದ ನನಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿರಲಿಲ್ಲ ಅವಳ ಮನಸ್ಸನ್ನು ಬೇರೆ ಕಡೆ ತಿರುಗಿಸಲು ನನಗೆ ಸವಾಲಾಯಿತು; ಈ ನಾಲ್ಕು ಗೋಡೆಗಳ ಮಧ್ಯ ನಾವು ಅಸಹಾಯಕ ಜೀವಿಗಳಾಗಿದ್ದೆವು. ನಾನು ಕೋವಿಡ್ ನ ಸಮಯವಾದರೂ ಕಷ್ಟ ಪಟ್ಟು ಇವಳಿಗೆ ಬದಲಾವಣೆ ಇರಲಿ ಎಂದು ಊರಿಗೆ ಇವಳನ್ನು ಕರೆತಂದೆ. ಆದರೆ ನನ್ನ ಮನೆಯವರ ನಡವಳಿಕೆ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿ ಬಿಟ್ಟಿತು. ನನ್ನ ಮನೆಯವರು ಇವಳನ್ನು ಆದರದಿಂದ ಅಪ್ಪಿಕೊಳ್ಳಲೂ ಇಲ್ಲ, ದೂರ ದೂಡಲೂ ಇಲ್ಲ. ಮನೆಯಲ್ಲಿ ಇದ್ದರೂ ಇಲ್ಲದಂತೆ ಇವಳ ಜೀವನವಾಯಿತು. ಎಲ್ಲರೂ ಇದ್ದೂ ನಿರಾಕರಣೆಯ ಒಂಟಿ ಭಾವ ಇವಳನ್ನು ಮತ್ತಷ್ಟು ಕೊರಗಿಗೆ ದೂಡಿತು. ರಾತ್ರಿ ಅಳುವಿನ ಜೊತೆ ಇವಳ ಸಂಘರ್ಷ ನನ್ನನ್ನು ಬಡವಾಯಿಸಿತು. ಪುಣ್ಯಕ್ಕೆ ಕೋವಿಡ್ ನಿರ್ಬಂಧ ಕಡಿಮೆಯಾಯಿತು. ಬೆಂಗಳೂರಿಗೆ ವಾಪಸು ಬಂದು ಕಛೇರಿಗೆ ಹೋಗಿ ಬರತೊಡಗಿದೆ .ಆದರೆ ಇವಳಿಗೆ ವರ್ಕ್ ಫ್ರಮ್ ಹೋಂ ಸಿಕ್ಕಿತು. ನಾನು ಹೊರಗೆ ಓಡಾಡಿ ಮನಸ್ಸು ಹಗೂರಾಗಿಸ ತೊಡಗಿದೆ; ಇವಳು ಒಳ ಒಳಗೆ ಬವಣೆ ಪಡತೊಡಗಿದಳು ನಾನು ಮೂಖಸಾಕ್ಷಿ ಮಾತ್ರ.
ಕಾರು ಸಕಲೇಶಪುರದ ಹಾದಿಯಲ್ಲಿ ಇತ್ತು, ನನ್ನ ಪಯಣದ ಗುರಿ ಇನ್ನು ಬಹಳದೂರವಿತ್ತು. ಸಕಲೇಶಪುರದ ಹತ್ತಿರ ಒಂದು ಕಡೆ ಗಾಡಿ ನಿಲ್ಲಿಸಿ ಮತ್ತೆ ಕಾಫಿ ಕುಡಿದೆ. ನಾನು ಕುಳಿತಲ್ಲಿಂದ ಒಂದು ಒಳದಾರಿ ಸಾಗುತ್ತಿತ್ತು "ಹರಿಪುರ" ಎಂದು. ಆ ದಾರಿಯಲ್ಲಿ ಎಂದೂ ನಾನು ಹೋದವನಲ್ಲ. ಹೋಗುವ ಅವಶ್ಯಕತೆ ಆದರೂ ಏನಿತ್ತು? ಅದ್ಯಾಕೋ ಗೊತ್ತಿಲ್ಲ ಅತ್ತ ಕಡೆ ಕಾರು ತಿರುಗಿಸಿದೆ ಕಾರಿನ ಜೊತೆಗೆ ನೆನಪಿನ ಮೆರವಣಿಗೆ ಕೂಡ. ನಿನ್ನೆ ಮತ್ತೆ ಅವಳು ತಂದೆಗೆ ಕರೆ ಮಾಡಿದ್ದಳು ಯಾವತ್ತೂ ಕರೆ ತೆಗೆಯದ ಮನುಷ್ಯ, ನಿನ್ನೆ ಕರೆಗೆ ಉತ್ತರ ಕೊಟ್ಟ; ಆದರೆ ಇವಳಿಗೆ ಬಾಯಿಗೆ ಬಂದಂತೆ ಉಗಿದುಬಿಟ್ಟ. ತಮ್ಮನ್ನು ನೆಮ್ಮದಿಯಾಗಿ ಇರಲು ಬಿಡುವಂತೆಯೂ ಕೇಳಿಕೊಳ್ಳುವ ಜೊತೆಗೆ ಒಂದಷ್ಟು ಚುಚ್ಚಿ ನುಡಿದು ಹಂಗಿಸಿಬಿಟ್ಟ. ಆ ಪುಣ್ಯಾತ್ಮ ಅದ್ಯಾಕೆ ಕರೆಗೆ ಉತ್ತರಕೊಟ್ಟನೋ ಗೊತ್ತಿಲ್ಲ ಇವಳು ಅಳುತ್ತಾ ವಿಷಯ ನನ್ನಲ್ಲಿ ಹೇಳತೊಡಗಿದಳು,ಇವಳ ಮಾತು ಕೇಳಿ ನನಗೆ ರೇಗಿತು. ನಾನು ಇವಳನ್ನು ನೇರವಾಗಿ ಕೇಳಿದೆ "ನಿನ್ನ ತಂದೆಗೆ ನಾನು ಇಷ್ಟವೇ ಇಲ್ಲಾ ಅನ್ನುವಂತೆ ನಾನು ಅವರಿಗೆ ಏನು ಮಾಡಿದ್ದೇನೆ"? ಅಥವಾ ಇಷ್ಟಪಟ್ಟು ಮದುವೆ ಆದದ್ದೇ ತಪ್ಪಾ? ನಾವೇನು ಸಣ್ಣ ಮಕ್ಕಳೇ? ಬುದ್ದಿ ತಿಳಿದು ಒಬ್ಬರನ್ನೊಬ್ಬರು ಇಷ್ಟ ಪಟ್ಟು ಅವರಿಗೆ ತಿಳಿಸಿದೆವು ಅಲ್ಲವೇ? ಅವರಿಗೆ ಅವರ ಅಹಂಕಾರವೇ, ಸ್ವ ಪ್ರತಿಷ್ಠೆಯೇ ದೊಡ್ಡದಾದರೆ ನಾನೇನು ಮಾಡಬೇಕು? ಕಾಲಿಗೆ ಬೀಳಬೇಕೇ? ಕಪಾಳಕ್ಕೆ ಸಿಕ್ಕಿದ್ದು ಸಾಕಾಗಲಿಲ್ಲ ಎಂದೇ? ಇಷ್ಟೊಂದು ಕಲಿತು ದೊಡ್ಡ ಕೆಲಸದಲ್ಲಿರುವ ನಿನ್ನ ವರ್ತನೆ ಏನು? ಅವರಿಗೆ ಮಾತನಾಡಲು ಇಷ್ಟ ಇಲ್ಲ ಎಂದೂ ತಿಳಿದ ಮೇಲೆ ನೀನ್ಯಾಕೆ ಹೀಗೆ ಹಠಕ್ಕೆ ಬಿದ್ದಿರುವೆ? ನಿನ್ನಿಂದಾಗಿ ನನಗೆ ನೆಮ್ಮದಿ ಇಲ್ಲ.
ಮದುವೆಯ ನಂತರದಿಂದ ದಿನ ಇದೇ ರಾಗ ನಿನಗೆ ಅಷ್ಟೊಂದು ಅವರೇ ಬೇಕು ಎಂದಿದ್ದರೆ, ನನ್ನನು ಬಿಟ್ಟು ಅವರ ಜೊತೆಯೇ ಹೋಗು ಎಂದು ಹೊರ ನಡೆದೆ; ಗೆಳೆಯರ ಜೊತೆ ನೋವಿನ ಮದ್ದು ಅರಸುತ್ತ. ರಾತ್ರಿ ಎಷ್ಟು ಹೊತ್ತಿಗೆ ಮರಳಿ ಬಂದೇ? ಗೊತ್ತಿಲ್ಲ.ಅವಳೆಲ್ಲಿ ಮಲಗಿದ್ದಳು? ತಿಳಿದಿಲ್ಲ. ಬೆಳಗ್ಗೆ ಎದ್ದ ಮೇಲೆ ಅರಿವಿಗೆ ಬರತೊಡಗಿತು . ನನ್ನ ಮೇಲೆ ಸಿಟ್ಟು ಮಾಡಿ ಹೋಗಿದ್ದಾಳೆ, ಹೋಗುವುದು ಎಲ್ಲಿ? ಅಪರೂಪಕ್ಕೆ ಆಫೀಸ್ ಕಡೆ ಮುಖ ತೋರಿಸಿ ಬರುವಂತೆ ಇಂದೂ ಹೋಗಿದ್ದಾಳೆ ಅಷ್ಟೇ.
ಒಳ ದಾರಿ ರಸ್ತೆ ಚೆನ್ನಾಗಿರಲಿಲ್ಲ. ಗಾಡಿ ಕುಲುಕಲು ಶುರುಮಾಡಿತು ಗಮನ ರಸ್ತೆಗೆ ಕೊಡ ತೊಡಗಿದೆ ಹೀಗೆ ಗಾಡಿ ಕುಲುಕುತ್ತ ಕಾಫಿತೋಟದ ಮಧ್ಯದಿಂದ ಸಾಗುತ್ತಿರಬೇಕಾದರೆ ಕೊಡೆ ಹಿಡಿದ ಇಬ್ಬರು ಕಾರಿಗೆ ನಿಲ್ಲಿಸುವಂತೆ ಕೈ ಅಡ್ಡಹಿಡಿದರು. ನಾನು ಗಾಡಿ ನಿಲ್ಲಿಸಲು ಮನಸ್ಸಾಗದೆ ಒಂದಷ್ಟು ಮುಂದೆ ಸಾಗಿದೇನಾದರೂ ಯಾಕೋ ಮನಸ್ಸಿಗೆ ಸರಿ ಕಾಣದೆ ಗಾಡಿ ನಿಲ್ಲಿಸಿದೆ. ಗಾಡಿ ಹಿಂದೆ ತೆಗೆದೆ ನನ್ನ ಕಾರಿನ ಸೈಡ್ ಮಿರರ್ನಲ್ಲಿ ಅವರನ್ನು ನಾನು ನೋಡುತ್ತಾ ಇದ್ದೆ ಎಪ್ಪತ್ತರ ಅಸುಪಾಸಿನ ಸಣ್ಣ ದೇಹದ ಅಜ್ಜ ಮಾಸಿ ಹೋದ ಬಿಳಿ ಲುಂಗಿ, ಬಿಳಿ ಶರಟು ಧರಿಸಿದ್ದರು, ತಲೆಗೆ ರೂಮಲು ಸುತ್ತಿದ್ದರು, ಅವರ ಜೊತೆಗೆ ಕೊಡೆ ಹಿಡಿದ್ದದ್ದು ಅವರ ಹೆಂಡತಿ ಇರಬೇಕು, ಹೂವಿನ ಚಿತ್ತಾರವಿದ್ದ ನೂಲಿನ ಸೀರೆ ,ಕೈ ತುಂಬಾ ಬಳೆ ಕೂದಲು ಬಾಚಿ ಹಿಂದೆ ಹೆರಳು ಹಾಕಿದ್ದರು. ಅದ್ಯಾವುದೋ ಹೂ ಅವರ ಮುಡಿಯಲ್ಲಿ ಇತ್ತು ಬೆನ್ನು ತುಸು ಬಾಗಿತ್ತು. ಅಜ್ಜ ಒಂದು ಕೈಯಲ್ಲಿ ಕೋಲಿನ ಸಹಾಯ ಇನ್ನೊಂದು ಕೈಯಲ್ಲಿ ಹೆಂಡತಿಯ ಆಧಾರವಾಗಿ ಹಿಡಿದು ಬಿರ ಬಿರನೇ ನಡೆದು ಬಂದರು ಆದರೆ ಆ ಪ್ರಾಯದವರ ವೇಗ ಎಷ್ಟಿದೆ ಎಂದು ನೀವೇ ಊಹಿಸಬಲ್ಲಿರಿ ಕೈಯಲ್ಲಿ ಒಂದು ಚೀಲ ಬೇರೆ ಪ್ಲಾಸ್ಟಿಕ್ ನದು ಸುಷ್ಮಾ ಸಿಲ್ಕ್ಸ್ ಬರೆದಿತ್ತು ಅದರ ಮೇಲೆ. ಕಾರಿನ ಹತ್ತಿರ ಬಂದ ಅವರಲ್ಲಿ ಅಜ್ಜಿ ಕೇಳಿದರು "ಪೇಟೆಯ ಕಡೆಯ ಮಗ?" ಒಳ ದಾರಿಯಲ್ಲಿ ಬಂದಿದ್ದ ನನಗೆ ಹೇಗೂ ಮುಖ್ಯ ರಸ್ತೆ ಸೇರಬೇಕಿತ್ತು "ಹೌದು " ಎಂದೆ ಹಾಗಾದರೆ ನಮ್ಮನ್ನು ಪೇಟೆ ಬಸ್ ಸ್ಟಾಂಡ್ ಗೆ ಬಿಡು ಮಗ ಎಂದು ಕಾರಿನ ಹಿಂದಿನ ಸೀಟಲ್ಲಿ ಕುಳಿತರು. ಕಾರು ಮುಂದೆ ಚಲಿಸಿದಂತೆ ಅಜ್ಜಿಯೇ ಮಾತು ಶುರುಹಚ್ಚಿಕೊಂಡರು. ಇವರಿಗೆ ಗಂಟು ನೋವು ಮಗಾ ಬಸ್ ಸ್ಟಾಂಡ್ ಹತ್ತಿರ ಡಾಕ್ಟರ್ ಇದ್ದಾರೆ ಅದಕ್ಕೆ ಈ ಒಂದು ಗಂಟೆಯ ಹೊತ್ತಿಗೆಲ್ಲ ಒಂದು ಬಸ್ ಇತ್ತು ಆದ್ರೆ ಇವತ್ತು ಬಂದಿಲ್ಲ. ಆ ಬಸ್ ಇಲ್ಲ ಅಂದ್ರೆ ಇನ್ನೊಂದ್ ಬಸ್ ಹಿಡಿಯಲು ಮುಂದಿನ ನಿಲ್ದಾಣಕ್ಕೆ ಹೋಗಬೇಕು ಅದು ಮೂರು ಕಿಲೋಮೀಟರ್ ಮಗಾ ಎಂದು. ಹೀಗೆ ಅವರದ್ದೇ ತೋಟದ, ಮನೆಯ ಮಕ್ಕಳ ವಿಚಾರಗಳನ್ನು ಒಂದಷ್ಟು ಹೇಳಿ ಮತ್ತೆ ನಿಂದು ಊರು ಯಾವ್ದು? "ಸುಬ್ರಹ್ಮಣ್ಯ ಹತ್ತಿರ" ಎಂದೆ. ಅಷ್ಟೇ ಆಗ ಏನೋ ಹೊಸ ಹುಮ್ಮಸ್ಸು ಬಂದವರಂತೆ ಹಾಗಾದ್ರೆ "ತುಳು ಬರುತ್ತಾ" ? ನನಗೂ ತುಳು ಬರುತ್ತೆ ಮಗಾ "ನಮ್ದು ಪುತ್ತೂರು" ಎಂದು ದೊಡ್ಡ ಸ್ವರದಲ್ಲೇ ಹೇಳಿದರು. ನಾನು ತಲೆ ಅಲ್ಲಾಡಿಸಿದೆ ಅಷ್ಟೇ. "ಮನೆಯಲ್ಲಿ ಯಾರಿದ್ದಾರೆ ಮಗ" ಅವರೇ ಕೇಳಿದರು. "ಅಮ್ಮ, ಅಪ್ಪ, ತಂಗಿ" ಅಂದೆ ಚುಟುಕಾಗಿ ಅವರೇ ಮುಂದು ವರಿಸಿದರು ನಾವು ಸಣ್ಣವರಿದ್ದಾಗ ಅಪ್ಪನ ಜೊತೆ ಸುಬ್ರಮಣ್ಯಕ್ಕೆ ಬರುವುದಿತ್ತು ಜಾತ್ರೆ ಸಮಯಕ್ಕೆ, ಆಗ ಹೀಗೆ ಬೇಕಾದಾಗ ಹಾಗೆ ಕಾರ್,ಬಸ್ಸು ಗಳೇ? ಅಪ್ಪನ ಕೈ ಹಿಡಿದು ಅದೆಷ್ಟು ನಡೆದಿರಲಿಕ್ಕೆ ಇಲ್ಲ ನಾವೆಲ್ಲಾ?ಅಪ್ಪ ಅನ್ನುವಾಗ ಅವರ ಮಾತಲ್ಲಿ ಹೊಮ್ಮತ್ತಿದ್ದ ವಾತ್ಸಲ್ಯ ನನ್ನನೇಕೋ ಬಲವಾಗಿ ಚುಚ್ಚಿತು. ಅಲ್ಲಿಯತನಕ ಹೆಚ್ಚು ಮಾತನಾಡದ ನಾನು ಅವರನ್ನು ಕೇಳಿಯೇ ಬಿಟ್ಟೆ "ಹೆಣ್ಣು ಮಕ್ಕಳಿಗೇಕೆ ತಂದೆ,ತವರು ಮನೆ ಎಂದೇ ಯಾವಾಗಲೂ ಕನವರಿಕೆ? ನಿಮಗೆ ಇಷ್ಟೊಂದು ವಯಸ್ಸಾಯಿತು ಈಗಲೂ ನೋಡಿ ತವರಿನ ಆಸೆ" ಎಂದು ಸ್ವಲ್ಪ ವ್ಯಂಗ್ಯ ಸೇರಿಸಿಯೇ ಕೇಳಿದೆ? ವ್ಯಂಗ್ಯ ಅವರಿಗಿಂತ ಹೆಚ್ಚು ನನ್ನ ಹೆಂಡತಿಯ ಮೇಲಿನದಾಗಿತ್ತು. ಅದಕ್ಕೆ ಅವರು ನಗು ತಂದುಕೊಳ್ಳುತ್ತಾ ಹೇಳಿದರು, ನನಗೆ ಹದಿನಾರು ಅಲ್ಲಲ್ಲ ಅದ್ಕಕಿಂತ ಸ್ವಲ್ಪ ಮೊದಲೇ ಮದುವೆಯಾಗಿರಬೇಕು. ನಾವು ಒಟ್ಟು ಆರು ಮಂದಿ ಮಕ್ಕಳು ;ನಮ್ಮ ತಂದೆ ತಾಯಿಗೆ ನಾನು ನಾಲ್ಕನೇಯವಳು ನನಗಿಂತ ಮುಂಚಿನವರೆಲ್ಲ ಗಂಡು ಮಕ್ಕಳು ನಂತರದವರೆಲ್ಲ ಹೆಣ್ಣು ಮಕ್ಕಳು. ತಂದೆ ಕೃಷಿಕರು. ನಾವು ಶಾಲೆಯ ಮುಖ ನೋಡಿದವರಲ್ಲ ಬುದ್ದಿ ತಿಳಿಯುವ ತನಕ ಗದ್ದೆಯಲ್ಲಿ, ತೋಡಿನಲ್ಲಿ, ಕಾಡು ಗುಡ್ಡದಲ್ಲಿ ಆಡಿದ್ದೇ ಆಡಿದ್ದು, ಆಗೆಲ್ಲಾ ನಮ್ಮ ಹಿಂದೆ ಇದ್ದವರು ಅಪ್ಪ. ಕಾಡಿನ ದಾರಿ ತೋರಿಸಿದ್ದು, ಎಳನೀರು ಕಿತ್ತು ಕೊಟ್ಟಿದ್ದು, ತೆಂಗಿನ ಗರಿಯಿಂದ ಆಟಿಕೆ ಮಾಡಿದ್ದೂ ಎಲ್ಲ ಅಪ್ಪ.ನಾವು ತಪ್ಪು ಮಾಡಿದಾಗ ಸಿಟ್ಟು ಹುಣಸೆ ಮರದ ಕಡ್ಡಿಯಲ್ಲಿ ಎರಡೇಟು ಕೊಟ್ಟದ್ದು ಅವನೇ. ಮೂರು ಗಂಡು ಮಕ್ಕಳ ನಂತರ ಹುಟ್ಟಿದ್ದ ಹೆಣ್ಣು ಮಗುವೆಂದು ನನ್ನ ಮೇಲೆ ಅಕ್ಕರೆ ಹೇಳತೀರದು ಅವರಿಗೆ. ಸಂಜೆ ಆಗಿ ಹಸುಗಳನೆಲ್ಲ ದೊಡ್ಡಿಯ ಒಳಗೆ ಅಟ್ಟಿ ಬಂದು ಸೇರುವುದರೊಳಗೆ, ನಾನು ತಂಗಿಯಂದಿರು ಅವನ ಹೆಗಲು ಏರಿ ಆಡುತ್ತಿದ್ದೆವು ಅಮ್ಮ ಬಂದು ಎರಡೇಟು ಬಾರಿಸಿ ನಮ್ಮನ್ನು ಇಳಿಸುವ ತನಕ. ಅಣ್ಣಂದಿರು ಎಂದೂ ಹೀಗೆ ಅಪ್ಪನ ಜೊತೆಗೆ ಆಡಿದವರಲ್ಲ, ಅವರಿಗೆ ಅಪ್ಪನ ಬಗ್ಗೆ ಅಂಜಿಕೆ ಜಾಸ್ತಿ. ಸ್ವಲ್ಪ ದೊಡ್ಡವರಾದ ಹಾಗೆ ಅಮ್ಮ ಮನೆಯ ಕೆಲಸಕ್ಕೆ, ತೋಟದ ಸಣ್ಣ ಪುಟ್ಟ ಕೆಲಸಕ್ಕೆ ಹಚ್ಚಿ ಬಿಟ್ಟಳು ಮನೆ, ತೋಟ ಹೀಗೆ ಜೀವನ. ಏನಾದರು ಬೇಕಿದ್ದರೆ ತಂದು ಕೊಡುವವರು ಅಪ್ಪ ಪೇಟೆಯಿಂದ, ತಲೆಗೆ ಎಣ್ಣೆ ತಿಕ್ಕಿ ನೀರು ಹಾಕುತ್ತಿದ್ದವಳು ಅಮ್ಮ ಹೀಗೆ ಜೀವನ. ಪ್ರೀತಿ, ಮಮತೆ, ಮಮಕಾರ ಮುಂತಾದ ಪದಗಳು ಆಗ ತಿಳಿದಿರಲೂ ಇಲ್ಲ ಅದರ ಅರ್ಥವೂ ಗೊತ್ತಿಲ್ಲ, ಆದರೆ ಅನುಭವಿಸಿದೆವು ಅಷ್ಟೇ. ಮದುವೆ ಗೊತ್ತಾಯಿತು ಈಗಿನವರ ಹಾಗೆಯೇ? ಆಗ ಅಪ್ಪ ಅದೆಷ್ಟು ಕಷ್ಟ ಪಟ್ಟು ದುಡ್ಡು ಹೊಂದಿಸಿ ವರದಕ್ಷಿಣೆ, ವರೋಪಚಾರ ಮಾಡಿ ಮದುವೆಮಾಡಿ ಕೊಟ್ಟ ನಾನು ಆ ಮನೆಯಿಂದ ಹೊರಟಾಗ ಅಪ್ಪ, ಅಮ್ಮ, ಅಣ್ಣ, ತಂಗಿ ಅದೆಷ್ಟು ಅತ್ತರು, ಆದರೆ ನಿಜವಾದ ಪ್ರೀತಿಯ ಅರ್ಥದ ಪರಿಕಲ್ಪನೆ ನನಗೆ ಮುಂದೆ ಆಗುತ್ತಾ ಬಂತು . ಹೊಸ ಮನೆಗೆ ಬಂದೆ ಇಲ್ಲೂ ಅದೇ ಜೀವನ ಮನೆ,ತೋಟದ ಕೆಲಸ. ಹೊಸ ಮನೆಯಲ್ಲಿ ಯಾರೊಬ್ಬರೂ ನನಗೆ ಬೇಸರ ಮಾಡಲಿಲ್ಲ, ಹಿಂಸೆ ಮಾಡಲಿಲ್ಲ, ಎಲ್ಲರೂ ಒಳ್ಳೆಯವರೇ ಉಣ್ಣಲು, ಉಡಲು ಕಮ್ಮಿಯೂ ಮಾಡಲಿಲ್ಲ. ಆದರೆ ಯಾರೊಬ್ಬರೂ ಪೇಟೆಗೆ ಹೋದಾಗ ನನಗೇನು ಬೇಕೆಂದು ಕೇಳಿ ತಂದು ಕೊಡಲಿಲ್ಲ, ಸುಸ್ತಾದಾಗ ಬಿಸಿ ಗಂಜಿ ತಿಳಿಗೆ ಉಪ್ಪು ಹಾಕಿ ತಂದು ನೀಡಲಿಲ್ಲ, ಪೇರಳೆ ನನಗಿಷ್ಟವೆಂದು ಕಿತ್ತು ತೆಗೆದಿಡಲಿಲ್ಲ. ಮಲ್ಲಿಗೆಯೂ ನನಗೆ ಇಷ್ಟವೆಂದು ಕೊಯ್ದು ನನಗಾಗಿ ಮಾಲೆ ಕಟ್ಟಿ ಇಡಲಿಲ್ಲ. ನನಗೆ ಹುಷಾರಿಲ್ಲ ಎಂದಾಗ ನನ್ನ ಆರೈಕೆ ಮಾಡಿದ್ದಾರೆ ಆದರೆ ಇವಳಿಗೆ ಮೊದಲ ಮಳೆಗೆ ಯಾವತ್ತೂ ಶೀತ ಆಗುತ್ತದೆ ಎಂದು ಮೊದಲೇ ಒಳ್ಳೆಮೆಣಸಿನ ಕಷಾಯ ಪುಡಿಮಾಡಿ ಇಟ್ಟಿರಲಿಲ್ಲ. ಎಲ್ಲರೂ ಅಂದರು ಇನ್ನು ಗಂಡನ ಮನೆಯೇ ನಿನ್ನ ಮನೆ ಎಂದು ಆದರೆ ಗಂಡನ ಮನೆಯಲ್ಲಿ ಇದು ನಿನ್ನ ಮನೆ ಎಂದೂ ಯಾರು ಬಾಯಿಬಿಟ್ಟು ಹೇಳಲಿಲ್ಲ. ನನ್ನ ತವರು ಮನೆಯಲ್ಲಿ ಯಾವುದೇ ಆತಂಕ,ದುಗುಡ ಇಲ್ಲದೆ ನೆಮ್ಮದಿಯಾಗಿದ್ದೆ. ಅದು ಯಾವತ್ತೂ ನನಗೆ ಬೆಚ್ಚನೆಯ ನೆಮ್ಮದಿ ನೀಡಿತ್ತು. ಗಂಡನ ಮನೆಯೂ ಯಾವತ್ತೂ ನನಗೆ ಅನ್ಯಾಯ ಮಾಡಲಿಲ್ಲ ಆದರೆ ತಾಯಿ ಮನೆಯಲ್ಲಿ ಸಿಕ್ಕಿದ ಬೆಚ್ಚನೆಯ,ನೆಮ್ಮದಿಯ ,ಸುರಕ್ಷತಾ ಅನುಭವ ಯಾವತ್ತೂ ಈ ಮನೆಯಲ್ಲಿ ನನಗೆ ಸಿಗಲಿಲ್ಲ, ಬೇರೆ ಯಾವ ಮನೆಯಲ್ಲೂ ಸಿಗಲಿಕ್ಕಿಲ್ಲ. ನನಗೆ ಮಕ್ಕಳಾದರು ಪ್ರತಿ ಬಾಣಂತನ ಮುಗಿಸಿ ಬಂದಾಗಲೂ ಅಳುತ್ತಾ ಬಂದೆ. ನನ್ನ ತನವನ್ನು ಯಾರೋ ಮತ್ತೆ ಮತ್ತೆ ಕಿತ್ತುಕೊಂಡಂತೆ, ಸಮಯ ಚಕ್ರ ಉರುಳಿತು ಅಣ್ಣಂದಿರಿಗೆ ಮದುವೆಯಾಯಿತು ,ಅತ್ತಿಗೆಯಂದಿರು ಬಂದರುಅವರ ಸಂಸಾರವು ದೊಡ್ಡದಾಯಿತು ಅದು ನನ್ನ ತವರು ಮನೆ ಅನ್ನೋದಕ್ಕಿಂತ ಹೆಚ್ಚು ಅಣ್ಣಂದಿರ ಮನೆಯಾಯಿತು ಯಾವಾಗ ತಂದೆ ತಾಯಿ ದೇವರ ಪಾದ ಸೇರಿಕೊಂಡ್ರೋ ನಾನು ಹೋಗೋದೇ ಕಮ್ಮಿಯಾಯಿತು.ಹೌದು ಇವತ್ತು ನನ್ನ ಮಕ್ಕಳು ದೊಡ್ಡವರಾಗಿದ್ದಾರೆ ನನ್ನ ಸಂಸಾರದೊಳಗೆ ನಾನು ಮುಳುಗಿದ್ದೇನೆ. ಅತ್ತ ನನ್ನ ತವರು ಮನೆಯಲ್ಲಿ ಅಣ್ಣನ ಮಕ್ಕಳು ಮನೆಯ ಅಧಿಕಾರ ಹಿಡಿದು ನಿಂತಿದ್ದಾರೆ ಒಂದು ಕಾಲದಲ್ಲಿ ಆ ಮನೆಯಲ್ಲಿ ನಾನು ಹುಟ್ಟಿ ಬೆಳೆದಿದ್ದೆ ಅನ್ನುವ ಕುರುಹು ಕೂಡ ಅಲ್ಲಿಲ್ಲ. ಆದ್ರೆ ಇಂದಿಗೂ ಆ ಮನೆಗೆ ಹೊಕ್ಕು ಕಾಲು ಚಾಚಿ ಕುಳಿತಿಕೊಂಡೆ ಅಂದ್ರೆ ಪ್ರಪಂಚದಲ್ಲಿ ಎಲ್ಲೂ ಸಿಗದ ನೆಮ್ಮದಿ ಅಲ್ಲಿ ಸಿಗುತ್ತದೆ. ನಿಸ್ವಾರ್ಥ ಪ್ರೀತಿ, ಮಮಕಾರದ ಭಾವಗಳು ನಮ್ಮ ಜೀವವನ್ನು ಬೆಚ್ಚಗಾಗಿಸುತ್ತದೆ ಎಂದು ಹನಿಗಣ್ಣಾದರು. ಅವರ ಗಂಡ ಅವರ ಕೈ ಹಿಡಿದಿದ್ದರು. ಅಷ್ಟರಲ್ಲಿ ಅವರು ತಲುಪಬೇಕಾದ ಬಸ್ ಸ್ಟಾಂಡ್ ಬಂದಿತ್ತು. ಅವರನ್ನು ಇಳಿಸಿ ನಾನು ಸತ್ಯಳಿಗೆ ಮೆಸೇಜ್ ಕಳುಹಿಸಿದೆ ಮನೆಗೆ ಬಂದು ಎರಡು ದಿನಕ್ಕೆ ಆಗುವಷ್ಟು ನಿನ್ನ ಬಟ್ಟೆ ಪ್ಯಾಕ್ ಮಾಡು ನಾಳೆ ನಿನ್ನ ಮನೆಗೆ ಹೋಗೋಣ ಎಂದು; ಗಾಡಿ ಮತ್ತೆ ಬೆಂಗಳೂರಿನತ್ತ ತಿರುಗಿತ್ತು....
GEEVA
KANNADA KANASU MANASU