ಹಿಂದಿನ ಕಂತಿನಿಂದ…
ನಾವು ನಿಲ್ದಾಣ ತಲುಪಿದಾಗ ನಾಯಕ್ ದಂಪತಿಗಳು ಅದಾಗಲೇ ಚೆಕ್ ಇನ್ ಗೆ ಸರತಿಯ ಸಾಲಿನಲ್ಲಿ ನಿಂತಿದ್ದರು. ಮೊದಲು ಮುಖತಾ ನೋಡದಿದ್ದರೂ ಮೊಬೈಲಿನಲ್ಲಿ ಮುಖ ಪರಿಚಯ ಮಾಡಿಕೊಂಡಿದ್ದರಿಂದ ಗುರುತು ಹಿಡಿಯಲು ಕಷ್ಟವಾಗಲಿಲ್ಲ. ಲಗ್ಗೇಜುಗಳ ತೂಕ ಮಾಡಿ ಟ್ಯಾಗ್ ಹಾಕಿ ಕಳಿಸಿ ನಮಗೆ ಬೋರ್ಡಿಂಗ್ ಪಾಸ್ ಕೊಟ್ಟರು. ಅಲ್ಲಿಂದ ಸೆಕ್ಯುರಿಟಿ ಚೆಕ್ಗೆ ಫಸ್ಟ್ ಫ್ಲೋರಿಗೆ ಹೋದೆವು.. ಇಲ್ಲಿ ಸ್ವಲ್ಪ ತಮಾಷೆಯ ಸಂಗತಿ ನಡೆಯಿತು. ಸೆಕ್ಯುರಿಟಿ ಚೆಕ್ ಗೆ ವಾಚು ,ಪರ್ಸ್ , ಮುಂತಾದವುಗಳನ್ನು ಟ್ರೇ ಗೆ ಹಾಕಿ ಕನ್ವೆಯರ್ ಬೆಲ್ಟಿನಲ್ಲಿಟ್ಟು ನಾವು ಸೆಕ್ಯುರಿಟಿ ಚೆಕಿಂಗ್ ಗೆ ಹೋಗಬೇಕು. ಕೆಲವು ಕಡೆ ಸರ,ಬಳೆ ಎಲ್ಲಾ ತೆಗೆಯಲು ಹೇಳುತ್ತಾರೆ. ಬೆಂಗಳೂರಲ್ಲಿ ಅವುಗಳನ್ನು ತೆಗೆಯಲು ಹೇಳಿರಲಿಲ್ಲ. ಸ್ವೆಟರನ್ನು ಟ್ರೇಯಲ್ಲಿಟ್ಟೆ. ಅಷ್ಟರಲ್ಲಿ ನಾಯಕ್ ಬಂದು ನನ್ನದು ವಾಚು ಮಾತ್ರ. ನಿಮ್ಮ ಟ್ರೇಯಲ್ಲಿ ಇಡಲಾ ಅಂತ ಕೇಳಿದರು. ಹಾಗಾಗಿ ಅವರ ವಾಚನ್ನು ನನ್ನ ಟ್ರೇಯಲ್ಲಿಟ್ಟೆ. ನನ್ನ ಯಜಮಾನರದ್ದು ಲಾಪ್ಟೋಪ್, ಇತ್ತು. ಟ್ರೇಗಳಲ್ಲಿಟ್ಟಿದ್ದ ಸಾಮಾನುಗಳು ಸೆಕ್ಯುರಿಟಿ ಚೆಕ್ ಆಗಿ ಹೊರಬಂದವು. ನಮ್ಮ ಚೆಕ್ಕಿಂಗೂ ಆಯ್ತು. ಆದರೆ ನಾಯಕರ ಬೆಲ್ಟ್ ಬಂದಿರಲಿಲ್ಲ.ಹಾಗೆ ಬೆಲ್ಟ್ ಸಿಕ್ಕಿಲ್ಲಾ ಅಂತ ಹೇಳಲೂ ಇಲ್ಲ.ಸುಮ್ಮನೆ ಅತ್ತಿಂದಿತ್ತ ಹುಡುಕಾಡುತ್ತಾ ಓಡಾಡುವುದನ್ನು ನೋಡಿ ಏನು ಹುಡುಕುತ್ತಿದ್ದೀರಿ ಎಂದು ಕೇಳಿದಾಗ ಬೆಲ್ಟ್ ಕಾಣುತ್ತಿಲ್ಲ ಅಂತ ಹೇಳಿದ್ರು. ನನ್ನ ಯಜಮಾನರೂ.ಎರಡು ಮೂರು ಕಡೆಯ ಚೆಕಿಂಗ್ ನಲ್ಲಿ ಹೋಗಿ ಕೇಳಿದರು. ಬೆಲ್ಟ್ ಸಿಗಲಿಲ್ಲ. ಇನ್ನೊಂದು ತೆಗೆದುಕೊಂಡರಾಯಿತು ಅಂತ ನಾಯಕ್ ಹೇಳಿದರು. ಆದರೆ ಬೆಲ್ಟ್ ಕಳೆದುಹೋಗಲು ಸಾಧ್ಯವಿಲ್ಲ.. ಈಗ ತಾನೇ ಚೆಕಿಂಗ್ ಗೆ ಹೋದದ್ದು ಕಳೆದು ಹೋಗುವುದು ಹೇಗೆ. ಚಿನ್ನವೇ ಕಳೆದುಹೋಗುವುದಿಲ್ಲ, ಇನ್ನು ಬೆಲ್ಟ್ ಯಾರು ತೆಗೆದುಕೊಳ್ಳುತ್ತಾರೆ? ಅಂತ ನನ್ನ ಯಜಮಾನರು ಮತ್ತೊಮ್ಮೆ ಹೋಗಿ ಸೆಕ್ಯುರಿಟಿಯವರಲ್ಲಿ ವಿಚಾರಿಸಿದಾಗ ಅವರ ಬೆಲ್ಟ್ ನ ಸೆಕ್ಯುರಿಟಿ ಚೆಕ್ಕೇ ಆಗಿರಲಿಲ್ಲ. ಒಂದು ಟ್ರೇಯಲ್ಲಿ ಒಂದು ಬೆಲ್ಟ್ ಮಾತ್ರವಿತ್ತು. ಅದು ಹೇಗೋ ಅಲ್ಲೇ ಉಳಿದುಕೊಂಡು ಬಿಟ್ಟಿತ್ತು. ಮತ್ತೆ ಅದನ್ನು ತೆಗೆದುಕೊಂಡು ವಿಮಾನಕ್ಕೇರಲು ಗೇಟಿನ ಬಳಿ ಕಾಯುತ್ತಾ ಕುಳಿತೆವು .
ನಮ್ಮೆಜಮಾನರು ಅಲ್ಲೇ ಸುತ್ತಾಡಿ ಕಾಲ ಕಳೆಯತೊಡಗಿದರು. ಮತ್ತೆ ಮಗನ ವಿಡಿಯೋ ಕರೆ , ಮಗಳ ಅತ್ತೆಯವರ ಫೋನ್ ಕರೆಗಳಿಗೆ ಉತ್ತರಿಸುತ್ತಾ ಕಾಲ ಕಳೆದೆವು. ಮಗಳು ವಿಡಿಯೋ ಕರೆ ಮಾಡಿ ತೊಂದರೆ ಏನೂ ಇಲ್ವಲ್ಲಾ ಅಂತ ವಿಚಾರಿಸಿಕೊಂಡಳು. ಜೊತೆಯಲ್ಲಿ ಪುಟಾಣಿ ಮಿಹಿಕಾಳೂ ಮಾತಾಡಿದಳು.
ಅಂತೂ ವಿಮಾನಕ್ಕೆ ಏರಲು ಗೇಟು ತೆರೆಯಿತು. ಜೊತೆಯಲ್ಲಿದ್ದ ಬ್ಯಾಗುಗಳನ್ನು ಮರೆಯದೆ ತೆಗೆದುಕೊಂಡು ವಿಮಾನದತ್ತ ನಡೆದೆವು.ನಮ್ಮ ಸೀಟು ಹುಡುಕಿ ಕುಳಿತಾಗ ನಿಟ್ಟುಸುರೊಂದು ಹೊರಬಂತು.ಒಂದು ತಿಂಗಳು ಓಡಾಡಿ ಈಗ ವಿರಾಮ ಸಿಕ್ಕಿತ್ತು. . ನಮ್ಮ ವಿಮಾನವು ೧.೨೦ಕ್ಕೆ ಟೇಕ್ ಆಫ್ ಇದ್ದುದು ತಡವಾಗಿ ಗಗನಕ್ಕೇರುವಾಗ ೨.೦೬ ಆಗಿತ್ತು. ಅಲ್ಲಿಂದ ನಮ್ಮ ಮುಂದಿನ ನಿಲ್ದಾಣ ಪ್ಯಾರಿಸ್ ನ 'ಚಾರ್ಲ್ಸ್ ಡಿ ಗಾಲೆ ' . ನಮ್ಮದು ಏರ್ ಫ್ರಾನ್ಸ್ ಪ್ಲೈಟ್ ಆದುದರಿಂದ ಅವರ ಪ್ರಕಟಣೆ ಫ್ರೆಂಚ್ , ಇಂಗ್ಲಿಷ್ ನಲ್ಲಿ. ಅವರ ಇಂಗ್ಲಿಷ್ ಕೂಡ ಅರ್ಥ ಆಗಬೇಕಲ್ಲಾ. ವಿಮಾನದಲ್ಲಿ ತುರ್ತುಪರಿಸ್ಥಿತಿಯಲ್ಲಿ ಆಮ್ಮಜನಕದ ನಳಿಕೆ , ಜಾಕೆಟ್ ಗಳನ್ನು ಧರಿಸುವ ಪ್ರಾಯೋಗಿಕ ಪಾಠ ಮಾಡಿಯಾದ ಮೇಲೆ ವಿಮಾನ ಮೇಲೇರಿತು.
.ನಾವು ವಿಮಾನವೇರಿ ಸುಮಾರು ಒಂದು ಗಂಟೆಗೆ ಗಗನ ಸಖಿಯರಿಂದ ಊಟದ ಸರಬರಾಜಾಯಿತು. ಅದಾಗಲೇ ನಿದ್ದೆ ಆವರಿಸುತ್ತಿತ್ತು.ಆದರೆ ಹೊರಡುವ ಧಾವಂತದಲ್ಲಿ ಸರಿಯಾಗಿ ಹೊಟ್ಟೆ ತುಂಬಿಸಿರಲಿಲ್ಲ. ಹಸಿವೆಯೂ ಆಗ ತೊಡಗಿತ್ತು. ನಾವು ವಿಜಿಟೇರಿಯನ್ ಅಂತ ಮೊದಲೇ ಬರೆಸಿದ್ದುದರಿಂದ ವಿಜ್ ಊಟವೇ ಬಂತು.
ಅದರಲ್ಲಿ ಬ್ರೆಡ್, ಜಾಮ್ , ಬೆಣ್ಣೆ ಲಸ್ಸಿ ,ಹಣ್ಣಿನ ತುಂಡುಗಳು, ಒಂದು ಕೇಕ್ ಇತ್ತು.ಅಮೂಲ್ ಬೆಣ್ಣೆ ತಿನ್ನುವಂತಿತ್ತು.ಲಸ್ಸಿಗೆ ಸೆಂಟ್ ಹಾಕಿದಂತಿತ್ತು.ಕುಡಿಯಲಾಗಲಿಲ್ಲ.ಮಸಾಲೆ ಟೀ ತೆಗೆದುಕೊಂಡೆ.ದಾಲ್ಚೀನಿ ಚೆಕ್ಕೆ ಜಾಸ್ತಿ ಇದ್ದರೂ ರುಚಿಕರವಾಗಿತ್ತು.
ಊಟದ ನಂತರ ನಿದ್ದೆ ಆವರಿಸಿತು.
ಬೆಂಗಳೂರಿನಿಂದ ಪ್ಯಾರಿಸ್ನ ಚಾರ್ಲ್ಸ್ ಡಿ ಗಾಲೆ ನಿಲ್ದಾಣಕ್ಕೆ ಸುಮಾರು ಹತ್ತೂವರೆ ಗಂಟೆಗಳ ಪ್ರಯಾಣ.
ಅದೆಷ್ಟೋ ಹೊತ್ತಿಗೆ ಎಚ್ಚರವಾಯಿತು. ಸೀಟಿನ ಮುಂದೆ ಇದ್ದ ಟಿವಿ ಪರದೆಯಲ್ಲಿ ಕಂಗನಾ ರಣಾವತ್ ಳ "ಪೆಂಗ" ಸಿನೆಮಾ ಮತ್ತೆ ಮಕ್ಕಳದ್ದೊಂದು "ಸೀಕ್ರೆಟ್ ಗಾರ್ಡನ್" ಎಂಬ ಎರಡು ಸಿನೆಮಾ ನೋಡಿದೆ.
ಪ್ರಯಾಣದ ನಡುವೆ ಸೀಟನ್ನು ಹಿಂದಿನಿಂದ ಒದ್ದಂತೆ ಅನಿಸಿತು. ಇದೇನು ಬಸ್ಸಿನಲ್ಲಿ ಹಿಂದಿನ ಸೀಟಿನಲ್ಲಿ ಕುಳಿತವರು ಮುಂದಿನ ಸೀಟನ್ನು ಕಾಲಲ್ಲಿ ಒದ್ದಂತೆ ಇಲ್ಲೂ ಒದೆಯುತ್ತಾರಾ ಅಂತ ಹಿಂದಿನ ಸೀಟಿನಲ್ಲಿರುವವರ ಕಡೆಗೆ ನೋಡಿದೆ. ತಕ್ಷಣ ನೆನಪಾಯಿತು ವಿಮಾನ ಮೋಡಗಳೆಡೆಯಲ್ಲಿ ಹೋಗುವಾಗ ಹಾಗೆ ಸದ್ದಾಗುತ್ತಿದೆ ಅಷ್ಟೇ ಅಲ್ಲ ರಸ್ತೆಯಲ್ಲಿ ಹಂಪ್ ಸಿಕ್ಕಿದ ಅನುಭವ. ಹಾಗಾಗಿ ಅಂತಹ ಸಂದರ್ಭದಲ್ಲಿ ಸೀಟ್ ಬೆಲ್ಟ್ ನನ್ನು ಹಾಕಿಕೊಳ್ಳುವಂತೆ ಪ್ರಕಟಿಸುತ್ತಾರೆ.
ಮತ್ತೆ ಸ್ಕ್ರೀನಿನಲ್ಲಿ ವಿಮಾನ ಎಲ್ಲಿ ಹಾರುತ್ತಿದೆ , ಎಷ್ಟು ಎತ್ತರದಲ್ಲಿ ಹಾರುತ್ತಿದೆ, ಲೋಕಲ್ ಟೈಮ್ ,ಗಮ್ಯಸ್ಥಾನದ ಸಮಯ ಮುಂತಾದ ಸೂಚನೆಗಳು ಸ್ಕ್ರೀನಿನಲ್ಲಿ ಬರುತ್ತಿದ್ದುದನ್ನು ನೋಡುತ್ತಾ ಕಾಲ ಕಳೆದೆ. ಮತ್ತೆ ಸ್ವಲ್ಪ ಹೊತ್ತು ನಿದ್ದೆಗೆ ಜಾರಿದೆ. ಎಚ್ಚರವಾದಾಗ
ವಿಮಾನ ಸೌದಿ, ಕುವೈಟ್ ಇರಾಕ್ಗಾಗಿ ಹಾರಿದ ದಾರಿ ತೋರಿಸುತ್ತಿತ್ತು.ನಮ್ಮ ಡೆಸ್ಟಿನೇಷನ್ ಗೆ ಇನ್ನೂ ಐದು ಗಂಟೆಯ ಪಯಣ. ಅಂದರೆ ಅರ್ಧದಾರಿಯ ಪಯಣ ಮುಗಿಸಿದ್ದೇವೆ ಅಷ್ಟೇ.ಹಾಗೆಯೆ ಕಿಟಿಕಿಯ ಮುಖಾಂತರ ಕಂಡ ದೃಶ್ಯಗಳನ್ನು ಕ್ಲಿಕ್ಕಿಸಿದೆ. ನನಗೆ ಕಿಟಿಕಿಯ ಪಕ್ಕ ಸೀಟು ಬೇಕು ಅಂತ ಇದೇ ಉದ್ದೇಶಕ್ಕೆ ಮಗನಿಗೆ ಸೀಟು ಸಿಲೆಕ್ಟ್ ಮಾಡಲು ಹೇಳಿದ್ದೆ. ನನಗೆ ಪಯಣದ ಬಗ್ಗೆ ಅಂದರೆ ಟಿಕೆಟ್ ಇತ್ಯಾದಿಗಳ ಯಾವ ತಲೆಬಿಸಿಯೂ ಇಲ್ಲ.ಮಗ ಇಲ್ಲವೇ ಪತಿಯ ಜವಾಬ್ದಾರಿಯಾಗಿತ್ತು. ಸಂಶಯ ನಿವಾರಣೆಗೆ ಮಗಳು ಅಳಿಯನಿಗೆ ಕರೆ ಮಾಡುವುದು ಅಷ್ಟೇ.
ಬೆಳಗಾಗುತ್ತಿದ್ದಂತೆ ಬೆಳಗಿನ ಉಪಾಹಾರದ ಸರಬರಾಜು ಆಯಿತು.
ಬನ್, ಇಡ್ಲಿ, ಉಪ್ಪಿಟ್ಟು, ಸಾಂಬಾರ್, ಬೆಣ್ಣೆ,ಜಾಮ್, ಆರೆಂಜ್ ಜ್ಯೂಸ್
ಹಣ್ಣುಗಳು, ಮಸಾಲೆ ಟೀ.. ಎಲ್ಲವೂ ಚೆನ್ನಾಗಿತ್ತು. ಉಪ್ಪಿಟ್ಟು ಮಾತ್ರ ಸೇರಲಿಲ್ಲ.
ಲೋಕಲ್ ಸಮಯ ೮.೧೩ ಕ್ಕೆ ವಿಮಾನ ಭೂಸ್ಪರ್ಶ ಮಾಡಿತು.
ಚಾರ್ಲ್ಸ್ ಡಿ ಗಾಲೆಯಲ್ಲಿ ಮುಂದಿನ ವಿಮಾನ ಪ್ರಯಾಣಕ್ಕೆ ಎರಡು ಗಂಟೆ ಸಮಯವಿತ್ತು. ಬೆಂಗಳೂರಿನಿಂದ ಟೆಕ್ ಆಫ್ ಆದಾಗ ವಿಳಂಬವಾದರೂ ಮತ್ತೆ ಪೈಲಟ್ ವೇಗ ಸರಿದೂಗಿಸಿ ಹೆಚ್ಚು ವಿಳಂಬವಾಗದಂತೆ ನೋಡಿಕೊಂಡಿದ್ದ.ವಿಮಾನದಿಂದ ಇಳಿದು ಮುಂದಿನ ಫ್ಲೈಟಿಗೆ ಯಾವ ಗೇಟು ,ಎಲ್ಲಿಗೆ ಹೋಗಬೇಕು ಎಂಬುದನ್ನೆಲ್ಲಾ ನೋಡಿಕೊಳ್ಳಬೇಕು. ಕೆಲವು ಸಲ ತಿಳಿಸಿದ ಗೇಟಿನ ಬದಲಾಗಿ ಬೇರೆ ಗೇಟಿಗೆ ಹೋಗಲು ಹೇಳುತ್ತಾರೆ. ಹಿಂದಿನ ಸಲ ಪ್ರಯಾಣಿಸುವಾಗ ಹಾಗೆ ಆಗಿತ್ತು. ನಾವು ಮೂವತ್ತೈದು ನಂಬರಿನ ಗೇಟಿನ ಬುಡದಲ್ಲಿ ಕಾಯುತ್ತಿದ್ದಾಗ ಸಮಯವಾದರೂ ಗೇಟು ತೆರೆದಿರಲಿಲ್ಲ. ಯಾಕೆ ಅಂತ ವಿಚಾರಿಸಿದಾಗ ಮತ್ತೆ ಐವತ್ತನೇ ಗೇಟಿಗೆ ಹೋಗಿ ಎಂಬ ಪ್ರಕಟಣೆ ಕೇಳಿ ತಡಬಡಾಯಿಸಿ ಹೋದದ್ದಾಯಿತು. ಆ ನಿಲ್ದಾಣದಲ್ಲಿ ಸರಿಯಾಗಿ ಮಾರ್ಗದರ್ಶನ ಇರಲಿಲ್ಲ.
ಮುಂದೇನಾಯಿತು?
✍️ಪರಮೇಶ್ವರಿ ಭಟ್
0 Followers
0 Following