ಹಿಂದಿನ ಸಂಚಿಕೆಯಿಂದ..
ಚಾರ್ಲ್ಸ್ ಡಿ ಗಾಲೆ ನಿಲ್ದಾಣದಿಂದ ಡೆಟ್ರಾಯಿಟ್ (DTW) DETROIT METROPOLITAN WAYNE COUNTY AIRPORT) ಗೆ ಸುಮಾರು ಒಂಬತ್ತು ಗಂಟೆಗಳ ಪ್ರಯಾಣ. ಈ ಪ್ರಯಾಣವು ಹೆಚ್ಚಾಗಿ ಸಾಗರದ ಮೇಲೆ ಸಾಗುವುದು.
ಏರ್ ಫ್ರಾನ್ಸಿನಲ್ಲಿ ಮೋಡಗಳ ಮೇಲಿಂದ ಹಾರುವಾಗ ಹತ್ತಿ ಯನ್ನು ಹರಡಿದಂತೆ ಕಾಣುವ ದೃಶ್ಯ ರುದ್ರ ರಮಣೀಯ. ಎಲ್ಲಿ ನೋಡಿದರೂ ಮೋಡಗಳು. ಕೆಲವು ಕಡೆ ಮೈಲಿಗಟ್ಟಲೆ ಹಿಮಾಚ್ಛಾದಿತ ಆಲ್ಪ್ಸ್ ಪರ್ವತ ಶ್ರೇಣಿಗಳು. ನಾನು ಕಿಟಿಕಿಯ ಪಕ್ಕ ಕುಳಿತುಕೊಂಡುದರಿಂದ ಕೆಲವು ಫೋಟೋ ಕ್ಲಿಕ್ಕಿಸಿದೆ. ಮತ್ತೆ ವಿಡಿಯೋ ಮಾಡಿದೆ. ನಾನು ಕಿಟಿಕಿ ಪಕ್ಕ ಸೀಟು ಬೇಕೆಂದಾಗ ಯಾಕೆ ರಾತ್ರಿ ಏನು ಕಾಣುತ್ತದೆ ಅಂತ ಛೇಡಿಸಿದ್ದರು. ಆದರೆ ಬೆಳ್ಳಂಬೆಳಗಿನ ರಮಣೀಯ ದೃಶ್ಯ ಮನಸೂರೆಗೊಂಡಿತು. ಕೆಳಗೆ ಒಂದೇ ರೀತಿಯ ಮರಗಳ ಗುಂಪು. ಹೊಲಗಳೋ ದೊಡ್ಡ ಕೇಕ್ ತುಂಡುಗಳಂತೆ ಕಾಣುವ ಹಸಿರು ಹೊಲಗಳು. ಕೆಲವು ಗದ್ದೆಗಳಲ್ಲಿ ಹಳದಿ ಬಣ್ಣದ ಹೂಗಳಿದ್ದವು. ಸಾಸಿವೆ ಗಿಡಗಳಿರಬೇಕು.
ಡೆಲ್ಟಾದಲ್ಲಿ ಹೊರಗಿನ ದೃಶ್ಯ ಕಾಣುತ್ತಿರಲಿಲ್ಲ. ಯಾಕೆಂದರೆ ನಮ್ಮ ಸೀಟು ಮಧ್ಯದಲ್ಲಿತ್ತು. ಕಿಟಿಕಿ ಪಕ್ಕ ಇದ್ದರೂ ಹೊರಗೆ ನೋಡಲೇನಿದೆ ಬರೇ ನೀರು..
ಏರ್ ಫ್ರಾನ್ಸ್ ವಿಮಾನದಲ್ಲಿ ನಮ್ಮ ಮತ್ತು ನಾಯಕ್ ದಂಪತಿಗಳು ಸೀಟುಗಳು ದೂರದಲ್ಲಿದ್ದವು.ಜೊತೆಗೆ ಹೋಗುವಾಗ ಸೀಟುಗಳು ಹತ್ತಿರ ಇರಬೇಕು. ಇಲ್ಲದಿದ್ದರೆ ಒಮ್ಮೆ ಬೇರೆಯಾಗಿದೆ ಇಳಿದ ಮೇಲೆ ಜೊತೆಯಾಗಲು ಕಷ್ಟ. ಅಲ್ಲಿ ಕಾಯಲು ಆಗುವುದಿಲ್ಲ. ಹಿಂದಿನ ಸಲ ಒಬ್ಬ ಮಹಿಳೆಯನ್ನು ನಮ್ಮ ಜೊತೆ ಬರಲು ಅವರಿಗಾಗಿ ಕಾದು ಹೇಳಿ ನಮಗೆ ಫ್ಲೈಟ್ ತಪ್ಪಿ ಹೋಗಿತ್ತು. ಅದು ಹೇಗೆ ಅಂತ ಇನ್ನೊಮ್ಮೆ ಬರೆಯುತ್ತೇನೆ.ಈ ವಿಮಾನದಲ್ಲಿ ನಾಯಕ್ ದಂಪತಿಗಳು ನಮ್ಮ ಮುಂದಿನ ಸೀಟಿನಲ್ಲಿದ್ದರು.
ವಿಮಾನ ಟೇಕ್ಆಫ್ ಆಗಿ ಸುಮಾರು ನಾಲ್ಕು ಗಂಟೆಗೆ ಊಟ ಬಂತು.
ಘೀರೈಸ್, ಮೆಂತೆ ಸೊಪ್ಪನ್ನು ಮತ್ತು ಕಾಳಿನ ಪಲ್ಯ , ಇನ್ನೊಂದು ಕಾಳಿನ ಪಲ್ಯ , ಹಣ್ಣು, ಚೀಸ್,ಸಾಬುದಾನದ ಡಿಶ್ , ಆರೆಂಜ್ ಜ್ಯೂಸ್ ಇತ್ತು.
ಈ ವಿಮಾನದಲ್ಲಿ ನೋಡುವಂತ ಯಾವ ಸಿನೆಮಾವೂ ಇರಲಿಲ್ಲ. ಆಗಾಗ್ಗೆ ವಿಮಾನ ಸಾಗುತ್ತಿರುವ ದಾರಿಯನ್ನು ನೋಡುತ್ತಾ ಕುಳಿತುಕೊಂಡದ್ದಾಯಿತು. ಆಗಾಗ ಗಗನ ಸಖಿಯರು ಪಾನೀಯಗಳ ಸರಬರಾಜು ಮಾಡುತ್ತಿದ್ದರು. ನಾನು ಕಾಫಿ ತೆಗೆದುಕೊಂಡೆ . ಕುಡಿಯುವಂತಿರಲಿಲ್ಲ. ಯಾಕೆಂದರೆ ಸಕ್ಕರೆ ,ವೈಟ್ನರ್ ನಾವೇ ಹಾಕಿಕೊಳ್ಳಬೇಕಿತ್ತು. ನನಗದು ಇಷ್ಟವಿಲ್ಲ. ಎಲ್ಲಾ ಹಾಕಿ ತಯಾರು ಮಾಡುವಾಗ ಕಾಫಿ ಆರಿಹೋಗಿರುತ್ತದೆ.
ನಮ್ಮ ಸಹಪ್ರಯಾಣಿಕ( ಬಿಳಿಯ )ಪ್ರಯಾಣದುದ್ದಕ್ಕೂ ನೀರು ವಿನಃ ಬೇರೇನೂ ತೆಗೆದುಕೊಂಡಿರಲಿಲ್ಲ.
ಡೆಟ್ರಾಯಿಟ್ ತಲುಪಲು ಇನ್ನೂ ಒಂದು ತಾಸು ಇರಬೇಕಾದರೆ ತಿನ್ನಲು ಬಿಸಿ ಪಿಜ್ಜಾ , ಕುಡಿಯಲು ಜ್ಯೂಸ್ ಕೊಟ್ಟರು. ಜ್ಯೂಸ್ ಇಷ್ಟವಾಗಲಿಲ್ಲ.( ಅಂದ ಹಾಗೆ ಪ್ಯಾರಿಸ್ ನಿಲ್ದಾಣದಲ್ಲಿ ಇಳಿದು ಹೋಗುತ್ತಿದ್ದಂತೆ ಒಬ್ಬಾಕೆ ನಮಗೆಲ್ಲಾ ಬಿಳಿ ರಿಬ್ಬನ್ ಕೊಟ್ಟಿದ್ದಳು. ಇದು ಯಾಕೆ ಅಂತ ಕೇಳಿದೆ. ಫ್ರೆಶ್ ಆಗಲಿಕ್ಕೆ ಅಂತ ಹೇಳಿದಳು. ಮೂಗಿಗೆ ಹಿಡಿದು ನೋಡಿದೆ.
ಪರಿಮಳಯುಕ್ತವಾದ ರಿಬ್ಬನ್ ಅದಾಗಿತ್ತು. ಹಾಗೆಯೇ ಹ್ಯಾಂಡ್ ಬ್ಯಾಗ್ ನಲ್ಲಿ ಹಾಕಿಕೊಂಡೆ.
ಡೆಟ್ರಾಯಿಟ್ ಗೆ ವಿಮಾನ ಬಂದಿಳಿದಾಗ ಲೋಕಲ್ ಸಮಯ ಒಂದೂಕಾಲು ಗಂಟೆ ಅಪರಾಹ್ನ. ವಿಮಾನ ಭೂಸ್ಪರ್ಶ ಮಾಡಿದ ಮೇಲೂ ನಮಗೆ ಇಳಿಯಲು ಮತ್ತೆ ಇಪ್ಪತ್ತು ನಿಮಿಷ ಬೇಕು. ಮತ್ತೆ ಅಲ್ಲಿಂದ ಹೊರಗೆ ಬರಲು ಅರ್ಧ ಗಂಟೆಯಾದರೂ ಆಗುತ್ತದೆ. ಕೆಲವು ಕಡೆ ರನ್ ವೇಯಲ್ಲೇ ಹದಿನೈದು ನಿಮಿಷ ಆಗುತ್ತದೆ.
ವಿಮಾನವು ಸಾಗರದ ಮೇಲೆ ಕಿಲೋಮೀಟರ್ ಗಟ್ಟಲೆ ಹಾರುವಾಗ ಮನಸಿನಲ್ಲಿ ಕೆಲವು ಋಣಾತ್ಮಕ ಭಾವನೆಗಳು ಬಂದು ಹೋಗುತ್ತಿದ್ದವು. ಅಂದರೆ ವಿಮಾನ ಸಾಗರದಲ್ಲಿ ಬಿದ್ದರೆ, ವಿಮಾನದಲ್ಲಿ ಏನಾದರೂ ತೊಂದರೆಯಾದರೆ ,ಪೈಲಟ್ಗೆ ಏನಾದರೂ ಆದರೆ...ಮುಂತಾದ ಆಲೋಚನೆಗಳು ಬಂದು ಹೋದುದೂ ಉಂಟು. ಕೆಟ್ಟ ಹವಾಮಾನ ಇದ್ದಾಗ ಈ ಭಯ ಇನ್ನೂ ಹೆಚ್ಚು. ಹಿಂದಿನ ಪ್ರಯಾಣಗಳಿಗೆ ಹೋಲಿಸಿದರೆ ಈ ಸಲದ ಪ್ರಯಾಣ ಸುಖಕರವಾಗಿಯೇ ಇತ್ತು ಅಂತ ಹೇಳಬಹುದು.
ಅಂತೂ ವಿಮಾನದಿಂದ ಇಳಿದೆವು. ಸಾಮಾನ್ಯವಾಗಿ ವಿಮಾನ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಇರುತ್ತದೆ. ಕೆಲವು ಕಡೆ ಕೆಲವು ನಿಮಿಷಗಳ ತನಕವಷ್ಟೇ ಸಿಗುವುದು. ಡೆಟ್ರಾಯಿಟ್ ಏರ್ಪೋರ್ಟ್ ವೈ ಫೈ ಕನೆಕ್ಷನ್ ಗೆ ಯತ್ನಿಸಿದೆವು.ಸಾಧ್ಯವಾಗಲಿಲ್ಲ. ಹೇಗೂ ಕರೆದುಕೊಂಡು ಹೋಗಲು ಬಂದಿರ್ತಾರಲ್ಲಾ. ನಮ್ಮ ವಿಮಾನ ಬಂದಿರುವುದು ಹೇಗೂ ಗೊತ್ತಾಗಿರುತ್ತದೆ. ಮೊದಲು ನಮ್ಮ ಸೂಟ್ಕೇಸುಗಳನ್ನು ತೆಗೆದುಕೊಳ್ಳೋಣ ಅಂತ ನಿರ್ಧರಿಸಿ ಲಗ್ಗೇಜ್ ಬರುವಲ್ಲಿಗೆ ಹೋದೆವು.
ನಮ್ಮ ನಾಲ್ಕು ಸೂಟ್ಕೇಸ್ ಗಳು ಕನ್ವೇಯರ್ ಬೆಲ್ಟ್ ನಲ್ಲಿ ಬಂದವು . ಆದರೆ ನಾಯಕ್ ದಂಪತಿಗಳ ಲಗ್ಗೇಜ್ ಸಿಕ್ಕಿತೇ? ಸ್ವಾರಸ್ಯಕರವಾಗಿದೆ..ಮುಂದಿನ ಕಂತಿನಲ್ಲಿ .
✍️ಪರಮೇಶ್ವರಿ ಭಟ್
0 Followers
0 Following