ಹಿಂದಿನ ಸಂಚಿಕೆಯ ಕೊಂಡಿ
ನಾವು ಪ್ರಸಾದರ ಮನೆಯಲ್ಲಿದ್ದರೂ ನಮ್ಮ ಸಾಮಾನುಗಳನ್ನೇ ಉಪಯೋಗಿಸಿದುದು. ಮಗಳು ಅವಳ ಮನೆಯಿಂದ ತತ್ಕಾಲಕ್ಕೆ ಬೇಕಾದ ಸಾಮಾನುಗಳನ್ನು ತಂದಿದ್ದಳು. ಇಲೆಕ್ಟ್ರಿಕ್ ಸ್ಟೌ ,ತವಾ, ಕೆಲವು ಸ್ಪೂನ್ ಗಳು ,ತಟ್ಟೆಗಳನ್ನಷ್ಟೇ ಅಡಿಗೆಮನೆಯಿಂದ ಉಪಯೋಗಿಸಿದುದು.
ಇಲ್ಲಿ ಕಸ ತುಂಬಾ ಆಗುತ್ತದೆ.ಕಸ ಯಾವುದೆಂದರೆ ಪ್ಲಾಸ್ಟಿಕ್ ಕವರುಗಳು ,ಊಟದ ಪ್ಯಾಕ್ ಗಳು ಮುಂತಾದವುಗಳು .ಹಾಗಾ ಐದುಗಿಯೇ ಅಡಿಗೆ ಮನೆಯಲ್ಲೂ ಹೊರಗೂ ದೊಡ್ಡ "ಟ್ರಾಶ್ ಬಿನ್"ಗಳು ಇರುತ್ತವೆ..ಹೊರಗೆ ನಿಗದಿತ ದಿನದಂದು ಮನೆಮುಂದಿನ ರಸ್ತೆ ಬದಿಯಲ್ಲಿ ಇಡುತ್ತಾರೆ. ಕಸದ ಟ್ರಕ್ ಅದನ್ನು ಮೆಶಿನಿನ ಮುಖಾಂತರವೇ ಖಾಲಿ ಮಾಡುತ್ತದೆ. ಹಾಗಾಗಿ ಈ ಟ್ರಾಶ್ ಬಿನ್ಗಳೆಲ್ಲಾ ಒಂದೇ ಸೈಜಿನವು. ರಿಸೈಕ್ಲ್ ಮಾಡುವಂತಹವುಗಳಿಗೆ ಬೇರೆಯೇ ಬಿನ್ಇದೆ.
ನಾವು ಆ ಮನೆಯಲ್ಲಿ ಇದ್ದುದು ಎರಡು ದಿನವಾದರೂ ಈ 'ರೆಡಿಮೇಡ್ ' ಊಟದ ದೆಸೆಯಿಂದ ಸಾಕಷ್ಟು ಕಸ ಆಗಿತ್ತು. ಅಡಿಗೆ ಮನೆಯಲ್ಲಿ ಒರೆಸಲು ಪೇಪರ್ ನ್ಯಾಪ್ಕಿನ್ ಬಳಸುವುದರಿಂದ ಅದರ ಗಾತ್ರವೇ ಜಾಸ್ತಿ ಯಾಗಿತ್ತು.ಅವುಗಳನ್ನು ಕಸದ ಡಬ್ಬಿಗೆ ಹಾಕಿದರೂ ಅಲ್ಲಿಂದ ಖಾಲಿ ಮಾಡುವುದು ಸೌಜನ್ಯದ ಲಕ್ಷಣ. ಇನ್ನೊಬ್ಬರ ಮನೆಯಲ್ಲಿ ಕಸ ಬಿಟ್ಟು ಬರಬಾರದಲ್ಲಾ. ಅದನ್ನು ದೊಡ್ಡ ಕವರಿನಲ್ಲಿ ಹಾಕಿ ಮಗಳ ಮನೆಯ ಕಸದ ಡಬ್ಬಿಗೆ ಹಾಕಲು ತಂದರು.
ಆಗ ದಿನ ಸ್ವಲ್ಪ ತುಂತುರು ಮಳೆ ಬಿದ್ದಿತ್ತು. ಸಾಯಂಕಾಲ ಮನೆಗೆ ಹೋದೆವು.ಈ ಸಲ ಪ್ರಯಾಣದ ಸುಸ್ತು ಇಲ್ಲದಿದ್ದರೂ ಸ್ವಲ್ಪ ಜೆಟ್ಲಾಗ್ ಇತ್ತು. ಸ್ವಲ್ಪ ಅಂತ ಯಾಕೆ ಬರೆದೆನೆಂದರೆ ನಾನು ಮೊದಲ ಸಲ ಬಂದಾಗ ಸುಮಾರು ಐದು ದಿನಗಳ ವರೆಗೂ ಜೆಟ್ಲಾಗ್ ಇತ್ತು.
ಅಮೆರಿಕಕ್ಕೆ ಬಂದಾಗ ಸಾಮಾನ್ಯವಾಗಿ ಎಲ್ಲರಿಗೂ ಆಗುವ ಅನುಭವ ಜೆಟ್ಲಾಗಿನದ್ದು. ಅದಕ್ಕೆ ಕಾರಣ ನಮ್ಮ ದೇಶ ಹಾಗೂ ಅಮೇರಿಕದ ಟೈಮ್ ಝೋನ್ ನಲ್ಲಿ ವ್ಯತ್ಯಾಸ ವಿರುವುದು. ಅಮೇರಿಕಾ ವಿಶಾಲ ದೇಶ. ಅದರಲ್ಲಿಯೇ ಆರು ಟೈಮ್ ಝೋನ್ಗಳಿವೆ.ಭಾರತದೇಶದ ಕಾಲಮಾನ ನಾವಿರುವ ಪ್ರದೇಶದಿಂದ ಮುಂದಿದೆ.ನಾವು ವಿಮಾನದಲ್ಲಿ ಪ್ರಯಾಣಿಸುವಾಗ ಹಲವಾರು ಟೈಮ್ ಝೋನ್ ಗಳನ್ನು ಹಾದು ಬಂದಿರುತ್ತೇವೆ. ನಾವು ಆಯಾ ಪ್ರದೇಶದ ವೈ ಫೈ ಯನ್ನು ಕನೆಕ್ಟ್ ಮಾಡಿದಾಗ ಮೊಬೈಲಿನಲ್ಲಿ ಆ ಪ್ರದೇಶದ ಸಮಯ ತೋರಿಸುತ್ತದೆ. ಇಲ್ಲಾಂದ್ರೆ ಹಳೆ ಸಮಯವೇ ತೋರಿಸುವುದು. ವಿಮಾನದ ವೇಳೆ ನೋಡಲು ಆಯಾ ಪ್ರದೇಶದ ಸಮಯವೇ ಆಗಬೇಕು. ವಿಮಾನದಲ್ಲಿ ಸೀಟಿನ ಮುಂದಿರುವ ಟಿವಿ ಪರದೆಯಲ್ಲಿ ವಿಮಾನ ಹೊರಟ ಸ್ಥಳದ ಆಗಿನ ಸಮಯ ,ಗಮ್ಯ ಸ್ಥಳವನ್ನು ತಲುಪುವ ಸಮಯ ಎಲ್ಲಾ ಕಾಣಿಸುತ್ತದೆ.
ನಮ್ಮ ಶರೀರವು ನಮ್ಮ ದೇಶದ ಟೈಮಿಗೆ ಹೊಂದಿಕೊಂಡಿರುತ್ತದೆ. ಹಾಗಾಗಿ ಆ ಟೈಮಿನ ಪ್ರಕಾರ ನಮಗೆ ನಿದ್ದೆ ಬರುತ್ತದೆ ಮತ್ತುಎಚ್ಚರ ಆಗುತ್ತದೆ. ಅಮೆರಿಕಕ್ಕೆ ಬಂದ ನಂತರ ಎರಡು ಮೂರು ದಿನ ನಮಗೆ ಜೆಟ್ಲಾಗ್ ಇರುತ್ತದೆ. ಅಂದರೆ ಹಗಲಿಡೀ ನಿದ್ದೆ ಊಟ ,ತಿಂಡಿ ತಿನ್ನಲೂ ಆಗುವುದಿಲ್ಲ. ಅಷ್ಟೊಂದು ನಿದ್ದೆ. ಹಾಗಾಗದಂತೆ ಕಷ್ಟಪಟ್ಟು ನಿದ್ದೆ ತಡಕೊಳ್ಳಲು ಯತ್ನಿಸಿದರೂ ನಿದ್ದೆ ಆವರಿಸಿಬಿಡುತ್ತಿತ್ತು.
ಜೆಟ್ಲಾಗಿನಿಂದಾಗಿ ನಾನು ಗಂಜಿಯಲ್ಲಿ ಬಿದ್ದ ನೊಣದಂತಾಗಿದ್ದೆ.ಆದರೆ ಎರಡು ದಿನದಲ್ಲಿ ಸುಧಾರಿಸಿಕೊಂಡಿದ್ದೆ.ನಾವು ತಂದ ಸೂಟ್ಕೇಸುಗಳು ಮೊದಲು ಮನೆಗೆ ತಲುಪಿದ್ದರೂ ಅದನ್ನು ಮಗಳು ತೆರೆದಿರಲಿಲ್ಲ. ನಮ್ಮ ಅಗತ್ಯದ ಬಟ್ಟೆ ಬರೆ ನಮ್ಮ ಜೊತೆಗೆ ಇದ್ದುದರಿಂದ ದೊಡ್ಡ ಸೂಟ್ಕೇಸುಗಳನ್ನು ತೆರೆಯಬೇಕಾಗಿರಲಿಲ್ಲ.. ಆದರೆ ಅದರಲ್ಲಿ ತಿಂಡಿಗಳಿದ್ದವಲ್ಲಾ. ತೆರೆದರೂ ಮೊಮ್ಮಗಳಿಗೆ ಕೋವಿಡ್ ಬಂದುದರಿಂದ ಅವಳಿಗೆ ಕೊಡುವ ಹಾಗಿರಲಿಲ್ಲ..ಕೋವಿಡ್ ನೆಗೆಟಿವ್ ಬಂದರೂ ಅವಳಿಗೆ ಶೀತ ,ಕೆಮ್ಮು ಇನ್ನೂ ಇತ್ತು.
ಮತ್ತೆ ಎರಡು ದಿನ ಆರಾಮವಾಗಿದ್ದೆವು.ಹೆಚ್ಚು ಓಡಾಡದೆ ಶರೀರ ಜಡ್ಡುಗಟ್ಟಿತ್ತು. ಹಾಗಾಗಿ ನನ್ನವರು ವಾಕಿಂಗ್ ಹೋಗೋಣ ಅಂತ ಹೇಳಿದರು. ಮನಸಿಲ್ಲದಿದ್ದರೂ ಶರೀರಕ್ಕೆ ವ್ಯಾಯಾಮ ಇಲ್ಲ ಅಂತ ಬಯ್ಯುವರೆಂದು ಹೊರಟೆ. ಹಿಂದಿನಸಲ ಬಂದಾಗ ಓಡಾಡಿ ಅಭ್ಯಾಸ ವಿದ್ದುದರಿಂದ ದಾರಿ ತಪ್ಪುವ ಸಂಭವವಿರಲಿಲ್ಲ. ಆದರೂ ಮೊಬೈಲ್ ನ್ನು ಜೊತೆಗೆ ತೆಗೆದುಕೊಂಡೆ. ಅದರಲ್ಲಿ ಲೋಕಲ್ ಸಿಮ್ ಹಾಕಿಕೊಟ್ಟಿದ್ದರು.
ಅಕಸ್ಮಾತ್ ಫೋನ್ ಮಾಡಬೇಕಾಗಿ ಬಂದರೆ ಅಥವಾ ಫೋಟೋ ಕ್ಲಿಕ್ ಮಾಡಬೇಕಾದರೆ ಅಂತ ಮೊಬೈಲ್ ಹಿಡಿದುಕೊಂಡೆ.
ಸುಮಾರು ಒಂದು ಗಂಟೆಯ ವಾಯು ವಿಹಾರ ನಮ್ಮದು. ಇಲ್ಲಿ ರಸ್ತೆ ಗಳಲ್ಲಿ ವಿಧವಿಧವಾದ ಕಾರುಗಳನ್ನೇ ಕಾಣುವುದು ಹೊರತು ಬಸ್ ಎಂದರೆ ಶಾಲಾ ಬಸ್ಸುಗಳನ್ನು ಮಾತ್ರ ನಾನು ನೋಡಿದುದು.ನನ್ನ ಪ್ರೀತಿಯ ಹುಡುಗಿ ಸಿನೆಮಾದ "ಕಾರ್ ಕಾರ್" ಹಾಡನ್ನು ಚೀತ್ರೀಕರಿಸಿದ್ದು ಡೆಟ್ರಾಯಿಟ್ನಲ್ಲೇ.
ಇಲ್ಲಿಯ ಮಾರ್ಗಗಳಲ್ಲಿ ನಮ್ಮಲ್ಲಿ ಅಡ್ಡಿ ಬರುವಂತೆ ನಾಯಿ, ದನ, ಆಡುಗಳು ಇಲ್ಲವೇ ಇಲ್ಲ. ಸ್ವಚ್ಛವಾದ ,ಅಗಲವಾದ ರಸ್ತೆಗಳು , ಯಾವುದೇ ಗೊಂದಲವಾಗದಂತೆ ಇರುವ ರಸ್ತೆಬದಿಯ ಸೂಚನಾ ಫಲಕಗಳು ಪ್ರಯಾಣವನ್ನು ಸುಖಕರವಾಗಿಸುತ್ತವೆ. ಇಲ್ಲಿಯ ಯಾವುದೇ ಫಲಕಗಳಾಗಲೀ, ಮಕ್ಕಳ ಪಾರ್ಕಿನಲ್ಲಿರುವ ಆಟದ ಸಲಕರಣೆಗಳಾಗಲೀ ಬಣ್ಣ ಮಾಸಿದಂತಿರುವುದನ್ನು ನಾನು ಕಂಡಿಲ್ಲ.ಎಲ್ಲವೂ ಜನರಿಗೆ ಉಪಯೋಗಿಸಲು ಸುಲಭವಾಗುವಂತಹವು.
ಆದರೆ ಊಟದಲ್ಲಿ ಕಲ್ಲು ಸಿಗುವಂತೆ ರಸ್ತೆಗಳ ಸಿಗ್ನಲ್ ಗಳ ಬಳಿ ತಾವು "ಹೋಂಲೆಸ್, ಸಹಾಯ ಮಾಡಿ" ಅಂತ ಬರೆದ ಫಲಕ ಹಿಡಿದು ನಿಂತಿರುವ ಗತಿಹೀನರನ್ನು ನೋಡಿದಾಗ ಇಂತಹ ಶ್ರೀಮಂತ ರಾಷ್ಟ್ರದಲ್ಲೂ
ಭಿಕ್ಷೆ ಬೇಡುವವರಿದ್ದಾರಲ್ಲಾ ಅಂತ ಬೇಸರವಾಯಿತು.
ನಾಯಕ್ ಅವರೂ ಯಜಮಾನರ ಫೋನಿಗೆ ಆಗಾಗ ಮೆಸೇಜ್ ಮಾಡುತ್ತಿದ್ದರು. ಅವರೂ ಅವರ ಅಳಿಯನ ಗೆಳೆಯನ ಮನೆಯಲ್ಲಿ ಇದ್ದುದು. ಅಲ್ಲಿ ಗೆಳೆಯನ ಕುಟುಂಬವೂ ಇತ್ತು. ಇವರಿಗೋ ಅಪರಿಚಿತರೊಂದಿಗೆ ಎರಡು ದಿನ ಇದ್ದು ಬೇಸರ ಬಂದಿತ್ತು. ಹಾಗಾಗಿ ಮನೆಗೆ ಬರುತ್ತೇನೆ ಎಂದು ಹೇಳತೊಡಗಿದರಂತೆ. ಬೇರೆ ಉಪಾಯವಿಲ್ಲದೆ ಅಳಿಯ ಮನೆಗೆ ಕರೆದುಕೊಂಡು ಹೋದರಂತೆ. ಮತ್ತೆ ಒಂದು ವಾರವಾಗುವಾಗ ನಾಯಕ ದಂಪತಿಗಳಿಗೂ ಕೋವಿಡ್ ತಗುಲಿದುದು ತಿಳಿಯಿತು. ಅದೇನೂ ತೊಂದರೆ ಕೊಡಲಿಲ್ಲವಂತೆ. ಡೋಲೋ ತಿಂದು ಗುಣಪಡಿಸಿಕೊಂಡೆವು ಅಂತ ನಾಯಕ್ ಮೆಸ್ಸೇಜ್ ಹಾಕಿದರು.
ಮನೆಯನ್ನು ಸಾನಿಟೈಸ್ ಮಾಡಿರದ್ದಿದ್ದರೆ ನಮಗೂ ಕೋವಿಡ್ ಬರುತ್ತಿತ್ತೇನೋ..
ಮುಂದುವರಿಯುವುದು.
ಧನ್ಯವಾದಗಳು
✍️ಪರಮೇಶ್ವರಿ ಭಟ್