ಈ ಸಲದ ಪ್ರಯಾಣ ಯಾವುದೇ ತೊಂದರೆ ಇಲ್ಲದೆ ಆಯ್ತಲ್ಲಾ ಅಂತ ಖುಶಿಯಾಗಿದ್ದೆವು. ನಮ್ಮ ಲಗ್ಗೇಜೂ ಬಂದಿತ್ತು .ಅವುಗಳನ್ನು ಪುಶ್ ಕಾರ್ಟ್ ಗಳಲ್ಲಿ ಹಾಕಿ ಇನ್ನು ಇಮಿಗ್ರೇಷನ್ ಚೆಕ್ ಮಾಡಿಸಿ ಹೊರಬಂದರೆ ಆಯಿತು ಅಂತ ಯೋಚಿಸಿ ನಮ್ಮ ಜೊತೆ ಬಂದ ನಾಯಕರತ್ತ ನೋಡಿದೆವು.ಅವರು ಚಿಂತಾಕ್ರಾಂತರಾದಂತೆ ಕಂಡು ಬಂದರು. ಅವರ ಎರಡು ಲಗೇಜ್ ಸಿಗಲಿಲ್ಲ ಅಂತ ಹೇಳಿದರು. ನಾವೂ ಮೂರು ಕಡೆ ತಿರುಗುತ್ತಿದ್ದ ಕನ್ವೇಯರ್ ಬೆಲ್ಟ್ ಗಳಲ್ಲಿ ಹುಡುಕಿದೆವು. ಅವರಿಗೆ ಅವರ ಸೂಟ್ಕೇಸ್ ಗುರುತು ಹಿಡಿಯಲು ಕಷ್ಟವಾದಂತೆನಿಸಿತು. ಅಪರೂಪಕ್ಕೆ ಸೂಟ್ಕೇಸ್ ತಂದಾಗ ಎಲ್ಲಾ ಸೂಟ್ಕೇಸುಗಳು ಒಂದೇ ರೀತಿ ಕಾಣುವಾಗ ಗುರುತು ಹಿಡಿಯಲು ಕಷ್ಟ. ಹಾಗಾಗಿ ನನ್ನ ಯಜಮಾನರು ಸೂಟ್ಕೇಸಿನ ಹಿಡಿಕೆಯ ಹತ್ತಿರ ಹೆಸರು ಬರೆದು ಅಂಟಿಸಿದ್ದರು.
ಈಗ ಕನ್ವೇಯರ್ ಬೆಲ್ಟ್ ನಲ್ಲಿ ಕೆಲವೇ ಕೆಲವು ಲಗ್ಗೇಜುಗಳು ಇದ್ದವು.ಅಲ್ಲೊಂದು ನೀಲಿ ಬಣ್ಣದ ಸೂಟ್ಕೇಸ್. ನಾಯಕ್ ಅಂತ ಬರೆದಿತ್ತು. ನನ್ನ ಯಜಮಾನರು ನಾಯಕರಲ್ಲಿ "ಇದು ನಿಮ್ಮದಾ "ಅಂತ ಕೇಳಿದಾಗ ಅಲ್ಲ ಅಂದರು. ಅದರಲ್ಲಿ ವಸಂತ ನಾಯಕ್ ಅಂತ ಬರೆದಿತ್ತು. ವಸಂತ ನಾಯಕ್ ಅಂತ ಇದೆ. ನಿಮ್ಮ ಸೂಟ್ಕೇಸಾ ಅಂದಾಗ ಹಾ.. ಹೌದು ಎಂದರು. ಬಹುಶಃ ಮಗನ ಸೂಟ್ಕೇಸ್ ಆಗಿರಬಹುದು. ಒಂದು ಸೂಟ್ಕೇಸ್ ಸಿಕ್ಕಿತು. ಇನ್ನೊಂದು ಎಲ್ಲಿ ? ಎಲ್ಲಿಯೂ ಕಾಣ್ತಿಲ್ಲ. ಆಗ ನನ್ನ ಪತಿ ಹೋಗಿ ದೂರು ಕೊಟ್ಟು ಬನ್ನಿ ಎಂದರು. ಅವರ ಉಳಿದ ಲಗ್ಗೇಜು ನಮ್ಮ ಜೊತೆ ಇಟ್ಟು ಅವರಿಬ್ಬರೂ ಹೋದರು. ಎಲ್ಲಿಗೆ ಹೋದರೋ ತಿಳಿಯದು. ಹತ್ತು ಹದಿನೈದು ನಿಮಿಷವಾದರೂ ಅವರು ಹಿಂದಿರುಗಿ ಬರಲಿಲ್ಲ. ಕನ್ವೇಯರ್ ಬೆಲ್ಟ್ ಗಳಲ್ಲಿ ಲಗಾಗೇಜ್ಗಳೆಲ್ಲಾ ಖಾಲಿಯಾಗಿದ್ದು. ಜನರೂ ಖಾಲಿಯಾಗಿದ್ದರು.
ಅಷ್ಟರಲ್ಲಿ ಒಬ್ಬ ಚುರುಕಿನ ನಗುಮುಖದ ಯುವಕ ನಾವಿದ್ದಲ್ಲಿಗೆ ಬಂದ.ಅವನು ನಿಲ್ದಾಣದ ಅಟೆಂಡೆಂಟ್ ಆಗಿರಬಹುದು. .ಡೆಸಿಗ್ನೇಶನ್ ತಿಳಿಯದು. ಹೆಲ್ಪರ್ ಆಗಿರಬಹುದು . ಆತ 'ನೀವ್ಯಾಕೆ ಇಲ್ಲಿ ನಿಂತಿದ್ದೀರಿ.ಇಮಿಗ್ರೆಶನ್ಗೆ ಹೋಗಿ 'ಅಂತ ಅಂದ. ಆಗ ನಾವು ಒಂದು ಸೂಟ್ಕೇಸ್ ಕಾಣ್ತಿಲ್ಲ ನಮ್ಮ ಜೊತೆಗೆ ಬಂದವರದ್ದು ಅಂತ ಹೇಳಿದುದನ್ನು ಪೂರ್ತಿ ಕೇಳಿಸಿಕೊಳ್ಳಲಿಲ್ಲ. ಅದ್ಯಾವುದೋ ಹಿಂದಿ ಶಬ್ದ ಆತನ ಬಾಯಿಂದ ಬಂತು. ನಾನು ಡೆಲ್ಲಿಯವನಾ ಅಂತ ಕೇಳಿದಾಗ ಆತ ಅಲ್ಲ ಅಂತ ಹೇಳಿದ. ಆತ ಕರಾಚಿಯವನಂತೆ . ಆತ ಪಾಕಿಸ್ತಾನಿ ಅಂತ ಅನಿಸಲಿಲ್ಲ. ಆಂಟಿ ಅಂಕಲ್ ಅಂತ ನಗುಮೊಗದಿಂದ ಮಾತಾಡಿಸುತ್ತಿದ್ದ. ಆತನ ಹೆಸರು ಮಹಮ್ಮದ್ ಆರಿಫ್. ತುಂಬಾ ಚುರುಕಿನ ಹುಡುಗ.. ನೀವು ಬನ್ನಿ ಕಂಪ್ಲೇಂಟ್ ಕೊಡಿ ಅಂತ ಸೂಟ್ಕೇಸ್ ತುಂಬಿದ್ದ ಎರಡೂ ಗಾಡಿಗಳನ್ನು ದೂಡುತ್ತಾ ಹೋದ.ಆಗ "ನಾವು ನಾಯಕ್ ರ ಸೂಟ್ಕೇಸ್ ನ ಗಾಡಿ ಇಲ್ಲೇ ಇದೆಯಲ್ಲಾ.ಅವರು ದೂರು ಕೊಡಲು ಹೋಗಿದ್ದಾರೆ , ಇದನ್ನೂ ತೆಗೆದುಕೊಂಡು ಹೋಗಬೇಕಲ್ಲಾ ಎಂದೆವು. ಅದು ಇಲ್ಲೇ ಇರುತ್ತದೆ .ನೀವಾಗಲೀ ನಾನಾಗಲೀ ತೆಗೆದುಕೊಂಡು ಹೋಗುವಂತೆ ಇಲ್ಲ ಅಂತ ಹೇಳಿದ.
"ನಮ್ಮ ಸೂಟ್ಕೇಸ್ ಬಂದಿವೆ. ನಮ್ಮ ಫ್ರೆಂಡಿಂದು ಬಂದಿಲ್ಲ.
ಅವರ ಅಳಿಯನಿಗೆ ಸುದ್ದಿ ಮುಟ್ಟಿಸಬೇಕು. ಫೋನ್ ಹೋಗ್ತಿಲ್ಲಾ" ಅಂದೆವು. ಅವರು ಹೊರಗೆ ಕಾಯ್ತಾ ಇರಬಹುದು. ನಮಗೆ ಅವರ ನಂಬರ್ ಗೊತ್ತಿಲ್ಲ. ಆದರೆ ನಮ್ಮ ಅಳಿಯಂದು ಗೊತ್ತಿತ್ತಲ್ಲಾ. ಅವನೂ ಬಂದಿರ್ತಾನೆ. ಆರಿಫ್ ನಮ್ಮ ಅಳಿಯನ ಮೊಬೈಲಿಗೆ ವೈ ಫೈ ಕನೆಕ್ಟ್ ಮಾಡಲು ಯತ್ನಿಸಿದ. ಯಾಕೋ ಆಗಲಿಲ್ಲ.ಮತ್ತೆ ಅವನ ಮೊಬೈಲಿನಿಂದಲೇ ಕನೆಕ್ಟ್ ಮಾಡಿ ಕೊಟ್ಟ. ಅಳಿಯನಿಗೆ ವಿಷಯ ಹೇಳಿದಾಗ ಅವನು ಇನ್ನೊಂದು ಸಮಾಚಾರ ಹೇಳಿದ. ಆಗ ವಿಷಯ ನಾಯಕರಿಗೆ ಗೊತ್ತಿಲ್ಲ. ನಮಗೂ ಗೊತ್ತಿರಲಿಲ್ಲ. ಅದೇನು ವಿಷಯ?
ಆರಿಫ್ ಗಡಿಬಿಡಿಯ ಮನುಷ್ಯ. ಬನ್ನಿ ಬನ್ನಿ.ಅಂತ ನಮ್ಮ ಸೂಟ್ಕೇಸ್ ಗಾಡಿಗಳನ್ನು ದೂಡಿಕೊಂಡು ಇಮಿಗ್ರೇಷನ್ ಜಾಗದ ಹತ್ತಿರ ತಂದು ಬಿಟ್ಟ. ಮತ್ತೆ ನಾಯಕರ ಗಾಡಿಯನ್ನು ಯಾರೂ ಮುಟ್ಟುವ ಹಾಗಿಲ್ಲ. ನೀವೂ ತರುವ ಹಾಗಿಲ್ಲ. ಅವರೂ ಮತ್ತೆ ವಾಪಾಸು ಹೋಗುವ ಹಾಗಿಲ್ಲ ಅಂತ ಹೇಳಿದ. ಇಮಿಗ್ರೇಷನ್ ಅಧಿಕಾರಿ ನನ್ನ ಯಜಮಾನರ ಫಿಂಗರ್ ಪ್ರಿಂಟ್ , ಕಣ್ಣಿನ ಫೋಟೋ ತೆಗೆದುಕೊಂಡರು.ನನ್ನದೂ ಕೂಡ.. ಫಿಂಗರ್ ಪ್ರಿಂಟ್ ಬೇಡ ಅಂತ ಹೇಳಿದರು. ಆರಿಫ್ ನಮ್ಮ ಗಾಡಿಯನ್ನು ಜನರ ಗುಂಪಿದ್ದಲ್ಲಿಗೆ ತಂದಿಟ್ಟ. ಅಲ್ಲಿ ನಾಯಕ್ ದಂಪತಿಗಳು ನಿಂತಿದ್ದರು. ಅದು ದೂರು ಕೊಡುವ ಜಾಗ ಅಂತ ಆಮೇಲೆ ಗೊತ್ತಾಯಿತು. ಆರಿಫ್ ನಮ್ಮ ಸೂಟ್ಕೇಸ್ ಕಾಣೆಯಾದುದು ಅಂತ ತಿಳಿದು ದೂರು ಕೊಡುವಲ್ಲಿಗೆ ಕರಕೊಂಡು ಬಂದಿದ್ದ. ಆತನಿಗೆ ನಾವು ಹೇಳಿದ್ದು ಅರ್ಥ ಆಗಿರಲಿಲ್ಲ. ಅರ್ಥ ಆಗಲು ಆತ ನಮ್ಮ ಮಾತನ್ನೂ ಪೂರ್ತಿ ಕೇಳಿಸಿಕೊಂಡಿರಲಿಲ್ಲ.! ಸ್ವಲ್ಪ ಹೊತ್ತು ಕಳೆದ ಮೇಲೆ ಆತ ಪುನಃ ಬಂದಾಗ ನಾವು ಅಲ್ಲೇ ನಿಂತಿದ್ದು ನೋಡಿ ವಿಚಾರಿಸಿದ.ದೂರು ಕೊಟ್ಟು ಆಗಲಿಲ್ಲವೇ ಅಂತ ಕೇಳಿದ.ಆತನಿಗೆ ನಾಯಕ್ ದಂಪತಿಗಳನ್ನು ತೋರಿಸಿ ಅವರ ಸೂಟ್ಕೇಸ್ ಕಳೆದುಹೋದುದು ಅಂತ ಹೇಳಿದೆವು. ಮತ್ತೆ ಅವರಲ್ಲಿಯೂ ಅವರ ಲಗ್ಗೇಜಿನ ವಿಷಯ ತಿಳಿಸಿ ನಾವು ಹೊರಗೆ ಹೋಗುತ್ತೇವೆ ಅಂತ ಹೇಳಿದೆವು. ಅವರಂತೆ ದೂರು ಕೊಡಲು ತುಂಬಾ ಜನರಿದ್ದರು. ಅವರ ಸರದಿ ಬರಲು ಇನ್ನೂ ತಡವಾಗಿತ್ತು. ಹೇಗೂ ಅವರ ಅಳಿಯ ಇದ್ದಾರಲ್ಲ. ಅದಾಗಲೇ ನಾವು ಬಂದು ಒಂದು ಗಂಟೆ ಕಳೆದಿತ್ತು. ಅವರಿಗೆ ಆರಿಫ್ ನನ್ನು ತೋರಿಸಿ ಆತ ಸಹಾಯ ಮಾಡುತ್ತಾನೆ ಅಂತ ತಿಳಿಸಿ ಹೊರಬಂದೆವು. ಆರಿಫ್ ಪಾದರಸದಂತೆ ಓಡಾಡಿಕೊಂಡಿದ್ದು ಪ್ರಯಾಣಿಕರಿಗೆ ಸಹಾಯ ಮಾಡುತ್ತಿದ್ದ. ಹೊರಗೆ ಅಳಿಯ ಕಾಯುತ್ತಿದ್ದ. ಮುಂದೆ ಏನಾಯಿತು..ನಾವು ಮಗಳ ಮನೆಗೆ ಹೋದೆವು ಅಂತ ತಿಳಿದಿರಾ.. ಇಲ್ಲ. ಹಾಗಾದರೆ ಎಲ್ಲಿಗೆ ಹೋದೆವು ಅಂತ ತಿಳಿಯಲು ಮುಂದಿನ ಕಂತು ಓದಿ.
ಧನ್ಯವಾದಗಳು.
✍️ಪರಮೇಶ್ವರಿ ಭಟ್ .