ಹಿಂದಿನ ಸಂಚಿಕೆಯಿಂದ
ನಮ್ಮನ್ನು ಕರಕೊಂಡು ಬಂದುದು ಅಳಿಯನ ಗೆಳೆಯನ ಮನೆಗೆ ಅಂತ ಹೇಳಿದೆನಲ್ಲಾ.ಆ ಗೆಳೆಯನ ಹೆಸರು ಪ್ರಸಾದ್ ಅಂತ. ಆ ಮನೆಯಲ್ಲಿ ಯಾರೂ ಇರಲಿಲ್ಲ. ಯಾಕೆಂದರೆ ಪ್ರಸಾದರ ಹೆಂಡತಿ ಮಗ ಇರುವುದು ಇನ್ನೊಂದು ಊರಲ್ಲಿ . ಅವರ ಹೆಂಡತಿಗೆ ಅಲ್ಲಿ ಕೆಲಸ. ಇವರಿಗೆ ಡೆಟ್ರಾಯಿಟ್ ನಲ್ಲಿ ಕೆಲಸವಾದರೂ ಕೋವಿಡ್ ದೆಸೆಯಿಂದ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ಇದೆಯಲ್ಲಾ. ಹಾಗಾಗಿ ಆತ ಪತ್ನಿ ಮತ್ತು ಮಗನೊಂದಿಗೆ ಪತ್ನಿಯ ಊರಲ್ಲಿರುತ್ತಾರೆ. ಇಲ್ಲಿರುವುದು ಬಾಡಿಗೆ ಮನೆ. ಮೂರೋ ನಾಲ್ಕೋ ತಿಂಗಳಿಗೊಮ್ಮೆ ಬಂದು ಹೋಗುವುದು.ಕಾಗದ ಪತ್ರಗಳೇನಾದರೂ ಬಂದಿದ್ದರೆ ನೋಡಲು ಅಥವಾ ಮನೆಯಲ್ಲಿ ಏನಾದರೂ ತೊಂದರೆಯಾದರೆ ನೋಡಲು ಅಂತ ಮನೆಯ ಬಾಗಿಲ ಕೀಯನ್ನು ನನ್ನ ಅಳಿಯನಲ್ಲಿ ಕೊಟ್ಟಿದ್ದರು.
ಆ ಮನೆಗೆ ಮಗಳ ಮನೆಯಿಂದ ಕಾರಿನಲ್ಲಿ ಕೇವಲ ಹತ್ತು ನಿಮಿಷದ ದಾರಿ ಕಾರಿನಲ್ಲಿ.
ನಮ್ಮನ್ನು ಪ್ರಸಾದರ ಮನೆಯಲ್ಲಿ ಇರಲು ಅವರ ಒಪ್ಪಿಗೆಯನ್ನು ಅಳಿಯ ಕೇಳಿದ್ದ.ಹಾಗಾಗಿ ನಮಗೆ ಉಪಕಾರವಾಯಿತು. ಭಾರತದಲ್ಲಿ ಅಪರಿಚಿತರಿಗೆ ನಾವು ಮನೆ ಬಿಟ್ಟುಕೊಡಲಾರೆವು.
ಅಮೆರಿಕದಲ್ಲಿ ಗ್ಯಾಸ್ ಸ್ಟೌ,ಫ್ರಿಜ್, ವಾಶಿಂಗ್ ಮೆಶೀನ್, ಡಿಶ್ ವಾಶರ್ಗಳೊಂದಿಗೆ ಬಾಡಿಗೆ ಮನೆಗಳು ಸಿಗುತ್ತವೆ.ಹಾಗಾಗಿ ಮನೆ ಬದಲಾಯಿಸಲು ಕಷ್ಟವಿಲ್ಲ. ಪ್ರಸಾದರ ಮನೆ ಇದ್ದುದು ಒಂದು ವಸತಿ ಸಮುಚ್ಚಯದಲ್ಲಿ .ಅದು ಬಾಡಿಗೆ ಮನೆ. ಮನೆ ಮೊದಲನೆ ಮಹಡಿಯಲ್ಲಿತ್ತು. ಮನೆಯ ಹಿಂದೆ ವಿಶಾಲವಾದ ಹುಲ್ಲುಹಾಸು. . ಅದರಲ್ಲಿ ಕೆಲವು ಮರಗಳಿದ್ದವು.
ಅದೊಂದು ಒಂದು ಬೆಡ್ರೂಮ್ ನ ಮನೆ. ಆದರೆ ಅದರಲ್ಲಿ ಎಲ್ಲಾ ಸೌಕರ್ಯಗಳಿದ್ದವು.ನಮಗೆ ಅಮೆರಿಕನ್ ಮನೆಯಲ್ಲಿ ಮೊದಲು ಇದ್ದುದರಿಂದ ಈ ಮನೆಗೆ ಹೊಂದಿಕೊಳ್ಳಲು ಕಷ್ಟವಾಗಲಿಲ್ಲ.
ನಾವು ಹೋದಾಗ ನನ್ನ ಮಗಳು ಬೆಡ್ ಶೀಟ್ ಗಳನ್ನು ಮನೆಯಿಂದ ತಂದು ಮೊದಲು ಮಂಚದಲ್ಲಿದ್ದುದನ್ನು ಬದಲಾಯಿಸಿದ್ದಳು. ಹಾಲು ಮೊಸರು ,ಚಹಾ ಪುಡಿ ಎಲ್ಲಾ ತಂದಿಟ್ಟಿದ್ದಳು.
ವಿಶಾಲವಾದ ಹಾಲ್ ,ದೊಡ್ಡ ಬೆಡ್ರೂಮ್ .. ಸುಸಜ್ಜಿತ ಅಡಿಗೆಮನೆ. ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಇರುವಂತದ್ದೇ. ನೆಲದಲ್ಲಿ ಕಾರ್ಪೆಟ್ ಇಲ್ಲವೇ ವುಡ್ .. ನಾವು ಹೋಗುವಾಗ ಮಗಳು ಇರಲಿಲ್ಲ. ಮೊಮ್ಮಗಳನ್ನು ಕರೆತರಲು ಹೋಗಿದ್ದಳು.
ನಾವು ಹೋಗಿ ಸ್ವಲ್ಪ ಹೊತ್ತಿನಲ್ಲಿ ಮೊಮ್ಮಗಳನ್ನು ಕರಕೊಂಡು ಮಗಳು ಬಂದಳು. ಮೊಮ್ಮಗಳು ನಾವು ಬರಲು ಎಷ್ಟು ದಿನಗಳಿವೆ ಅಂತ ಲೆಕ್ಕ ಹಾಕುತ್ತಿದ್ದಳಂತೆ. ಮತ್ತೆ ಮಲಕ್ಕೊಳ್ಳೋದು ಅಜ್ಜಿ ಅಜ್ಜನ ಹತ್ತಿರ ಅಂತ ಲೆಕ್ಕಾಚಾರ ಹಾಕಿದ್ದಳು.ನಾವು ತರುವ ತಿಂಡಿಗೆ ಬೌಲ್ ರೆಡಿ ಮಾಡಿದ್ದಳು.
ಈಗ ನಮ್ಮನ್ನು ನೋಡಿದಾಗ ಅಪ್ಪಿಕೊಂಡಳು.
ನಮಗೆ ಊಟಕ್ಕೆ ಮಗಳು ಪಲಾವ್ ಸಾಂಬಾರ್ ಅನ್ನ ತಂದಿದ್ದಳು. ಅದನ್ನು ಮಾಡಿದ್ದು ಒಬ್ಬರು ಉಡುಪಿಯವರು ಮಗಳ ಫ್ರೆಂಡ್ .. ಆಕೆ ಚಿಕ್ಕ ಪುಟ್ಟ ಸಮಾರಂಭಗಳಿಗೂ ಅಡಿಗೆ ಮಾಡಿ ಕೊಡುತ್ತಾರೆ. ಹಿಂದಿನ ಸಲ ಬಂದಿದ್ದಾಗ ಯಾವುದೋ ಸಮಾರಂಭಕ್ಕೆ ಆಕೆ ಕೇಟರಿಂಗ್ ಮಾಡಿದ್ದಳು. ಅವರ ಮನೆಗೆ ಹೋಗಿ ಮಗಳು ಮರುದಿನ ಬೆಳಿಗ್ಗೆಗೆ ಇಡ್ಲಿ ಚಟ್ನಿ ತಂದಿದ್ದಳು. ಮಧ್ಯಾಹ್ನಕ್ಕೆ ಸಾಂಬಾರ್ ಇತ್ತು.ಅನ್ನ ಅಲ್ಲಿದ್ದ ಇಲೆಕ್ಟ್ರಿಕ್ ಸ್ಟೌ ನಲ್ಲಿ ಮಾಡಿಕೊಂಡೆವು.ಇಷ್ಟೆಲ್ಲಾ ಮಾಡಿ ಮನೆಗೆ ಯಾಕೆ ಹೋಗುವುದಿಲ್ಲ ಅಂತ ಪ್ರಶ್ನೆ ಉದ್ಭವಿಸುವುದಲ್ಲಾ.. ಕಾರಣ ಏನೆಂದರೆ ಮನೆಯವರಿಗೆಲ್ಲಾ ಕೋವಿಡ್ ಇದ್ದುದರಿಂದ ಮನೆಯನ್ನೆಲ್ಲಾ ಸಾನಿಟೈಸ್ ಮಾಡಬೇಕಿತ್ತು. ಸಾನಿಟೈಸ್ ಮಾಡಲು ಒಂದು ಕಂಪೆನಿಯವರು ಶನಿವಾರ ಬರುವವರಿದ್ದರು. ಹಾಗಾಗಿ ಶುಕ್ರವಾರವೂ ನಾವು ಆ ಮನೆಯಲ್ಲೇ ಇದ್ದೆವು. ನಮ್ಮ ಜೊತೆ ಮಲಗುತ್ತೇನೆ ಎಂದ ಮೊಮ್ಮಗಳನ್ನು ಮನೆಗೆ ಕಳುಹಿಸಿಯಾಯಿತು.
ಶನಿವಾರ ಹನ್ನೊಂದು ಗಂಟೆಗೆ ಮನೆಯೆಲ್ಲಾ ಸಾನಿಟೈಸ್ ಮಾಡಿದುದರಿಂದ ಸಾಯಂಕಾಲ ನಮ್ಮನ್ನು ಕರಕೊಂಡು ಹೋಗಲು ಮಗಳು ,ಅಳಿಯ ಬಂದರು.ಈ ನಡುವೆ ನಾಯಕ್ ಅವರು ಲಗೇಜ್ ಅವರ ಮನೆಗೆ ಬಂತು ಅಂತ ಮೆಸೇಜ್ ಮಾಡಿದರು.
ಮುಂದೆ ಮಗಳ ಮನೆಯತ್ತ ಪಯಣ.
✍️ಪರಮೇಶ್ವರಿ ಭಟ್