ಹಿಂದಿನ ಸಂಚಿಕೆಯಿಂದ
ನಮ್ಮ ಸೂಟ್ಕೇಸ್ ಗಾಡಿಗಳನ್ನು ಹೊರಗೆ ಲಾಬಿಗೆ ತಂದುಕೊಟ್ಟ ಆರಿಫ್. ನಾಯಕ್ ದಂಪತಿಗಳಿಗೆ ಅವರ ಅಳಿಯನನ್ನು ಅಲ್ಲಿ ಕಾಣಲಿಲ್ಲ. ಆರಿಫ್ ಫೋನ್ ಮಾಡಿದಾಗ ನಮ್ಮ ಅಳಿಯ ಹೇಳಿದ್ದೇನೆಂದರೆ ನಾಯಕರ ಮಗಳ ಮನೆಯಲ್ಲಿ ಅವರ ಅಳಿಯ, ಮಕ್ಕಳಿಗೆ ಕೋವಿಡ್ ಬಂದಿತ್ತು.ಮಗಳಿಗೆ ಮಾತ್ರ ಬಂದಿರಲಿಲ್ಲ. ಹಾಗಾಗಿ ಇವರು ಮಗಳ ಮನೆಗೆ ಹೋಗುವ ಹಾಗಿಲ್ಲ. ಬದಲಾಗಿ
ಅವರ ಅಳಿಯನ ಗೆಳೆಯನ ಮನೆಗೆ ಹೋಗುವ ಏರ್ಪಾಡು ಆಗಿತ್ತು.ಆದರೆ ಅವರ ಅಳಿಯನ ಗೆಳೆಯನಿಗೆ ನಾಯಕ ದಂಪತಿಗಳ ಮುಖ ಪರಿಚಯವಿಲ್ಲ. ಮೊದಲೇ ಈ ಕೋವಿಡ್ ವಿಷಯ ಗೊತ್ತಿರಲಿಲ್ಲ. ಅವರ ಅಳಿಯ ಗೆಳೆಯನಿಗೆ ಅತ್ತೆ ಮಾವನನ್ನು ಪರಿಚಯಿಸಲು ತಮ್ಮ ಗಾಡಿಯಲ್ಲಿ ಬಂದಿದ್ದರು. ಆದರೆ ಅಳಿಯನಿಗೆ ಕೋವಿಡ್ ಇದ್ದುದರಿಂದ ಲಾಬಿಗೆ ಬಂದಿರಲಿಲ್ಲ. ಹೊರಗೆ ಕಾದಿದ್ದರು.
ನಾವು ನಾಯಕ್ ದಂಪತಿಗಳು ಬರುವ ತನಕ ಲಾಬಿಯಲ್ಲಿ ಕಾದಿದ್ದೆವು.ಅವರಿಗೆ ವಿಷಯ ತಿಳಿಸಿದೆವು. ಅವರು ಹೋಗಬೇಕಾದ ಜಾಗ ಮತ್ತು ನಾವು ಹೋಗಬೇಕಾದ ಜಾಗ ಒಂದೇ ಅಲ್ಲ. ಆದರೂ ಜೊತೆಯಲ್ಲಿ ಬಂದಿರುವುದರಿಂದ ಅವರು ಬರುವ ತನಕ ಕಾದಿದ್ದೆವು. ಮತ್ತೆ ಸುಮಾರು ಅರ್ಧ ಗಂಟೆಯಾಗುವಾಗ ಆರಿಫ್ ನಾಯಕ್ ದಂಪತಿಗಳ ಗಾಡಿಯನ್ನು ದೂಡಿಕೊಂಡು ಬಂದ. ನಾಯಕರೂ ಹೊರ ಬಂದು 'ಸೂಟ್ಕೇಸ್ ಮರುದಿನ ಮನೆಗೆ ಬರುತ್ತಂತೆ . ನಾಳೆ ಮಾತಾಡುವಾ ' ಅಂತ ಹೇಳಿ ಹೋದರು.
ನನ್ನ ಅಳಿಯ ಆರಿಫ್ ಕೈಗೆ ಒಂದಷ್ಟು ಡಾಲರ್ ತುರುಕಿದ. ಆತ ಬೇಡ ಅಂತ ಹೇಳಿದರೂ ತೆಗೆದುಕೊಂಡ. ಆತನ ಸೇವೆ ನಮಗೆ ಅಗತ್ಯ ಇಲ್ಲದಿದ್ದರೂ ಆತ ನಗುಮುಖದೊಂದಿಗೆ ಸಹಾಯಕ್ಕೆ ಮುಂದಾಗುತ್ತಿದ್ದುದು ಖುಶಿ ಕೊಟ್ಟಿತ್ತು. ಲಗ್ಗೇಜ್ ಕ್ಲೈಮ್ ಮಾಡುವಲ್ಲಿ ಬಿಟ್ಟಿದ್ದ ನಾಯಕ್ರ ಸೂಟ್ಕೇಸ್ಗಳನ್ನು ಬಹುಷ ಅವನೇ ತಂದುಕೊಟ್ಟಿರಬೇಕು.ಯಾಕೆಂದರೆಅವರು ಅಲ್ಲಿಗೆ ವಾಪಾಸು ಹೋಗುವ ಹಾಗಿಲ್ಲ.
ಭಾರತದಲ್ಲಿ ಇರುತ್ತಿದ್ದರೆ ಆರಿಫ್ ಪಾಕಿಸ್ತಾನದವನು ಅಂತ ದೂರ ಹೋಗುತ್ತಿದ್ದೆವೇನೋ .ಈ ಹೊರದೇಶದಲ್ಲಿ ಆ ಭಾವನೆ ಬರಲಿಲ್ಲ.
ಪಾಪ ನಾಯಕ್ ದಂಪತಿಗಳಿಗೆ ಹೊರಗೆ ಬಂದಾಗಲೇ ತಾವು ಮಗಳ ಮನೆಗೆ ಹೋಗುವುದಲ್ಲ ಅಂತ ತಿಳಿದುದು. ಅವರ ಕಥೆ ಹಾಗಾದರೆ ನಮ್ಮ ಕಥೆಯೂ ಭಿನ್ನವಾಗಿರಲಿಲ್ಲ. ವ್ಯತ್ಯಾಸ ಏನು ಅಂದರೆ ನಾವು ಮಗಳ ಮನೆಗೆ ಹೋಗುವುದಲ್ಲ ಅಂತ ನಮಗೆ ಮೊದಲೇ ಗೊತ್ತಿತ್ತು. ಯಾಕೆಂದರೆ ನಾವು ಬರುವ ಹತ್ತು ದಿನ ಮೊದಲೇ ಮಗಳು ,ಅಳಿಯ ಮೊಮ್ಮಗಳಿಗೆ ಕೋವಿಡ್ ತಗುಲಿತ್ತು.ಅದು ಮೊಮ್ಮಗಳು ಶಾಲೆಯಿಂದ ತಂದ ಉಡುಗೊರೆ.
ನಮ್ಮ ಲಗೇಜುಗಳ ಸಾಗಣೆಗಾಗಿ ಅಳಿಯ ದೊಡ್ಡದೊಂದು ಗಾಡಿಯನ್ನೇ ಬಾಡಿಗೆಗೆ ತಂದಿದ್ದ. ಆ ಗಾಡಿ ಪಾರ್ಕ್ ಮಾಡಿದಲ್ಲಿಗೆ ಹೋಗಲು ಒಂದು ಲಿಫ್ಟ್ ಹತ್ತಿದೆವು. ನಾವು ಒಂದು ಲಗೇಜ್ ಗಾಡಿಯನ್ನು ಹಾಕಿದಾಗ ಲಿಫ್ಟ್ ಮುಚ್ಚಿತು. ಆಳಿಯ ಮತ್ತು ಒಂದು ಗಾಡಿ ಹೊರಗೇ ಉಳಿಯಿತು. ನಮಗೆ ಯಾವ ಫ್ಲೋರ್ ಏನೊಂದೂ ತಿಳಿಯದು. ಎಲ್ಲೂ ಇಳಿಯುವುದು ಬೇಡ ಲಿಫ್ಟ್ ಮೇಲೆ ಕೆಳಗೆ ಹೋಗುತ್ತದಲ್ವಾ. ಯಾವುದೋ ಒಂದು ಫ್ಲೋರಲ್ಲಿ ಅಳಿಯ ಇರುತ್ತಾನೆ ಅಂತ ಲಿಫ್ಟಿನಲ್ಲೇ ಉಳಿದೆವು. ಲಿಫ್ಟ್ ಮೇಲೆ ಹೋಯಿತು . ಮತ್ತೆ ಕೆಳಗೆ ಬಂದಾಗ ಬಾಗಿಲು ತೆರೆದುಕೊಂಡರೆ ಅಳಿಯ ಅಲ್ಲೇ ನಿಂತಿದ್ದ. ಎಲ್ಲೋ ಇಳಿದರೆ ಫೋನ್ ಮಾಡಿ ತಿಳಿದುಕೊಳ್ಳಲು ಫೋನೂ ಇಲ್ಲವಲ್ಲಾ.
ನಾವು ಹೋಗುವ ದಿನಕ್ಕೆ ಅದಾಗಲೇ ಮಗಳಿಗೆಲ್ಲಾ ಕೋವಿಡ್ ಬಂದು ಹತ್ತು ದಿನಗಳಾಗಿದ್ದವು. ಹತ್ತು ದಿನಗಳ ಹೋಂ ಕ್ವಾರಂಟೈನ್.ನಾವು ಹೋಗುವ ಹಿಂದಿನ ದಿನವೇ ಅವರಿಗೆ ಕೋವಿಡ್ ನೆಗೆಟಿವ್ ಅಂತ ಪರೀಕ್ಷಿಸಿ ದೃಢೀಕರಿಸಿ ಕೊಂಡಿದ್ದರು. ಆದರೂ ಕೋವಿಡ್ ಬಂದು ಮನೆಯೆಲ್ಲಾ ಓಡಾಡಿಕೊಂಡಿದ್ದರಲ್ಲಾ . ಮನೆಯನ್ನೆಲ್ಲಾ ಸಾನಿಟೈಸ್ ಮಾಡಬೇಕಾಗಿತ್ತು.ಹಾಗಾಗಿ ತಕ್ಷಣ ನಮ್ಮನ್ನು ಮನೆಗೆ ಕರೆದುಕೊಂಡು ಹೋಗುವುದು ಬೇಡ ಅಂತ ಮಗಳು ಮತ್ತು ಅಳಿಯ ನಿರ್ಧರಿಸಿದ್ದರು .
ಆ ಬಗ್ಗೆ ಮೊದಲೇ ತಿಳಿಸಿದ್ದರು. ನಾವು ಗುರುವಾರ ಸಾಯಂಕಾಲ ಡೆಟ್ರಾಯಿಟ್ ತಲುಪಿದುದು. ಭಾರತೀಯ ಸಮಯಕ್ಕೂ ಅಲ್ಲಿಯ ಸಮಯಕ್ಕೂ ಹದಿನಾಲ್ಕು ಗಂಟೆಗಳ ಅಂತರ. ಭಾರತ ಹದಿನಾಲ್ಕು ಗಂಟೆ ಮುಂದಿದೆ. ಹಾಗಾಗಿ ನಾವು ಗುರುವಾರ ಬೆಳಗ್ಗೆ ಎರಡು ಗಂಟೆಗೆ ಬೆಂಗಳೂರಿನಿಂದ ಹೊರಟರೂ ಡೆಟ್ರಾಯಿಟ್ ಗೆ ತಲುಪಿದ್ದು ಗುರುವಾರವೇ. ಅಮೆರಿಕದಲ್ಲೂ ಎಲ್ಲಾ ರಾಜ್ಯಗಳ ಟೈಮ್ ಜೋನ್ ಒಂದೇ ಇಲ್ಲ.ಅಷ್ಟು ವಿಶಾಲವಾದ ದೇಶ.
ಮೊದಲೇ ಮೂರು ದಿನಗಳಿಗೆ ಬೇಕಾದ ಬಟ್ಟೆಬರೆಗಳನ್ನು ಕ್ಯಾಬಿನ್ ಬ್ಯಾಗಿನಲ್ಲಿ ಹಾಕಿಕೊಳ್ಳಿ ಅಂತ ಮಗಳು ಹೇಳಿದ್ದಳು. ಯಾಕೆಂದರೆ ನಾವು ಹೋಗುವುದು ಇನ್ನೊಂದು ಮನೆಗೆ . ದೊಡ್ಡ ಸೂಟ್ಕೇಸುಗಳನ್ನು ತೆರೆಯಬೇಕಾಗಿಲ್ಲ.ಅವುಗಳನ್ನು ನೇರವಾಗಿ ಮನೆಗೇ ತೆಗೆದುಕೊಂಡು ಹೋಗಬಹುದು ಅಂತ ಹಾಗೆಯೇ ಮಾಡಿದೆವು. ಡೆಟ್ರಾಯಿಟ್ ವಿಮಾನ ನಿಲ್ದಾಣದಿಂದ ರೋಚೆಸ್ಟರ್ ಹಿಲ್ಸ್ನಲ್ಲಿರುವ ಮಗಳ ಮನೆಗೆ ಒಂದು ಗಂಟೆಯ ಪ್ರಯಾಣ. ನಾವು ಉಳಕೊಳ್ಳಬೇಕಾದ ಮನೆಯೂ ಅಲ್ಲಿಂದ ಹೆಚ್ಚು ದೂರವಿರಲಿಲ್ಲ. ನಮ್ಮನ್ನು ಅಳಿಯ ಕರೆದುಕೊಂಡು ಹೋದುದು ಅವನ ಒಬ್ಬ ಗೆಳೆಯನ ಮನೆಗೆ.ಆದರೆ ಅಲ್ಲಿ ಯಾರೂ ಇರ್ತಿರಲಿಲ್ಲ.
ಮುಂದೆ..?.
✍️ಪರಮೇಶ್ವರಿ ಭಟ್
0 Followers
0 Following