ಪ್ರಯಾಸವಾದರೂ ಮುದ ಕೊಟ್ಟ ಪಯಣ_೧೧

ವಸಂತ ಋತುವಿನ ಸಂಭ್ರಮ

ProfileImg
08 May '24
3 min read


image


ಹಿಂದಿನ ಸಂಚಿಕೆಯಿಂದ 
 

 ಚಳಿಗಾಲದ ಭಯಂಕರ ಚಳಿಗೆ ಮುದುಡಿದ್ದ ಮನಸುಗಳು ವಸಂತ ಋತುವಿನ ಆಗಮನ ಆಗುತ್ತಿದ್ದಂತೆ ಅರಳತೊಡಗುತ್ತವೆ.. ಮರಗಳ‌ ತುಂಬಾ ಪರಿಮಳ ಸೂಸುವ ಹೂಗಳು ಅರಳುತ್ತವೆ. ಚಳಿಗಾಲದ ಆರಂಭದಲ್ಲಿ ಬಣ್ಣ ಬದಲಿಸುವ ಗಿಡಮರಗಳನ್ನು ನೋಡಲು ಎಷ್ಟು ಚಂದವೋ, ಅಷ್ಟೇ ಚಂದ ವಸಂತ ಋತುವಿನಲ್ಲಿ ಗಿಡಮರಗಳು ಚಿಗುರಿ ಹೂಬಿಡುವ ದೃಶ್ಯಗಳು.ಮನೆಗಳೂ ಹೂಬುಟ್ಟಿಗಳಿಂದ ಅಲಂಕರಿಸಲ್ಪಡುತ್ತವೆ.


ಅಮೆರಿಕವು ವಿಶಾಲ ದೇಶ .ಆದುದರಿಂದ ಇಲ್ಲಿ ಆರು ಟೈಮ್ ಝೋನ್ಗಳಿವೆ ಅಂತ ಹಿಂದಿನ ಸಂಚಿಕೆಯಲ್ಲಿಯೇ  ಬರೆದಿದ್ದೇನೆ. ಮಿಶಿಗನ್ ರಾಜ್ಯ ಅಮೆರಿಕದ ಉತ್ತರ ಭಾಗದಲ್ಲಿದೆ. ಕೆನಡಾಕ್ಕೆ  ಹತ್ತಿರ. ಇಲ್ಲಿ ಈಗ ಬೇಸಿಗೆ ಆರಂಭವಾಗಿದೆ. ಮೇ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ  ಬೇಸಿಗೆ ಕಾಲ. ಈ ಸಮಯದಲ್ಲಿ ಚಟುವಟಿಕೆಗಳು ಹೆಚ್ಚು. 
ಚಳಿಗಾಲದಲ್ಲಿ ಹಿಮಾಚ್ಛಾದಿತ ಗಿಡಮರಗಳಿದ್ದರೆ ಈ ಕಾಲದಲ್ಲಿ ಗೀಡಮರಗಳು ಚಿಗುರಿ ಹೂ ಹಣ್ಣು ಬಿಡುತ್ತವೆ.  ರಾತ್ರಿ ಒಂಬತ್ತು ಗಂಟೆಯಾದರೂ ಕತ್ತಲು ಇರುವುದಿಲ್ಲ. ನಮ್ಮ ಮುಸ್ಸಂಜೆಯಂತಿರುತ್ತದೆ. ಸೂರ್ಯನ ಬೆಳಕು ಹೆಚ್ಚು ಸಮಯ ಇರುವುದರಿಂದಲೋ ಏನೋ ಮರಗಿಡಗಳ ತುಂಬಾ ಹೂವುಗಳು , ಚಿಕ್ಕ ಚಿಕ್ಕ ಬೆರಿಗಳು ತುಂಬಿರುತ್ತವೆ. 
ಮನೆಯ ಬದಿಯಲ್ಲಿಯೇ ತರಕಾರಿ ಬೆಳೆಸಲು  ಗೊಬ್ಬರ ಹಾಕಿ ಸುತ್ತ ಮರದ ಬೇಲಿ ಹಾಕಿ ತೊಟ್ಟಿಯಂತೆ ಮಾಡಿರುತ್ತಾರೆ.ಗೊಬ್ಬರ ಅಂದರೆ ಕಪ್ಪು ಪುಡಿ ಸಾವಯವ ಗೊಬ್ಬರ. 
ಇಲ್ಲಿ ಕೆಂಪು ಮಣ್ಣೇ ಇಲ್ಲ.   ಮನೆಗಳಿಗೆ ಕಾಂಪೌಂಡು ಗಳಿಲ್ಲ. ಸುತ್ತಲೂ ಹುಲ್ಲು ಹಾಸು ಗಳು ನಡು ನಡುವೆ ಮರಗಳು. ಆ ಮರಗಳ ಗೆಲ್ಲುಗಳನ್ನೂ‌ ಆಗಾಗ  ಟ್ರಿಮ್ ಮಾಡಿ  ಗೆಲ್ಲುಗಳು ಅಡ್ಡಾದಿಡ್ಡಿ ಬೆಳೆಯದಂತೆ ನೋಡಿಕೊಳ್ಳುತ್ತಾರೆ.ಇಲ್ಲಿ ಮೇಪಲ್, ಪೈನ್, ಈಸ್ಟರ್ನ್ ಕಾಟನ್ ವುಡ್,ಓಕ್ ,ಸಿಡಾರ್  , ಚೆಸ್ಟ್ನಟ್, ಬರ್ಚ್ ಮುಂತಾದ  ಮರಗಳನ್ನು ಇಲ್ಲಿ ಕಾಣಬಹುದು. 
ನಮಗೆ ಬೇಕಾದಂತೆ ಮರಗಳನ್ನು ಬೆಳೆಸುವಂತಿಲ್ಲ.  ಯಾಕೆಂದರೆ ಮರದ ಬೇರುಗಳು ಮನೆಗೆ ಹಾನಿ ಮಾಡಬಹುದು. ಅಷ್ಟೆ ಅಲ್ಲ. ಜಾಗದ ಸೌಂದರ್ಯವೂ ಹಾಳಾಗಬಹುದು. ಮನೆಗಳಿಗೂ ಯಾವುಯಾವುದೋ ಬಣ್ಣ ಕೊಡುವಂತಿಲ್ಲ. ಪ್ರಕೃತಿಗೆ ಹೊಂದಿಕೊಳ್ಳುವ ಬಣ್ಣಗಳಾಗಬೇಕು.
ನಾವು ಸಾಮಾನ್ಯವಾಗಿ ಸಾಯಂಕಾಲ ವಾಯುವಿಹಾರಕ್ಕೆ ಹೋಗುತ್ತಿದ್ದುದು‌.. ಈಗ ಬೆಳಿಗ್ಗೆ ಹನ್ನೊಂದು ಗಂಟೆಗೂ   ಹವಾಮಾನ ಚೆನ್ನಾಗಿದ್ದರೆ  ಒಂದು ಸುತ್ತು ವಾಕಿಂಗ್ ಹೋಗಲು ಪ್ರಾರಂಭಿಸಿದೆವು.
ರಸ್ತೆ ಬದಿಯಲ್ಲಿ ಸೇವಂತಿಗೆ ಹೂವಿನಂತೆ ಹಳದಿ ಬಣ್ಣದ ಡಾಂಡೇಲಿಯನ್ ಹೂಗಳು ಅರಳಿ ನೋಡಲು ಚಂದ ಕಾಣುತ್ತವೆ. ಅದಕ್ಕೆ ಜೇನ್ನೊಣಗಳು ಬರುತ್ತವೆ ಅಂತ ಅವುಗಳನ್ನು ಕತ್ತರಿಸದೆ ಬಿಟ್ಟಿರುತ್ತಾರೆ. ಅವುಗಳ  ಬೀಜಗಳು ಚಿಕ್ಕ ಹಾತೆಗಳಂತೆ ಗಾಳಿಯಲ್ಲಿ ತೇಲಾಡುತ್ತಿರುತ್ತವೆ.ಸಾಮಾನ್ಯವಾಗಿ  ಎಲ್ಲಾ ಕಡೆ ಕಾಣುವ ಕಳೆಗಿಡ ಇದು.ಆದರೆ ಇದು ಪೌಷ್ಟಿಕ ಆಹಾರವಂತೆ.ನಮ್ಮ ದೇಶದಲ್ಲೂ ಈ ಗಿಡ ಇದೆ. ಆದರೆ ಹೂಗಳು ಇಷ್ಟು ದೊಡ್ಡವಿಲ್ಲ.
ಇಲ್ಲಿ ರಸ್ತೆಯಲ್ಲಿ ನಡೆದು ಹೋಗುವವರು ತುಂಬಾ ವಿರಳ. ಅಕಸ್ಮಾತ್ ಸಿಕ್ಕಿದರೆ ನಮಸ್ಕರಿಸದೆ ಇಲ್ಲ. ಗುಡ್ ಮಾರ್ನಿಂಗ್ ಗುಡ್ ಇನ್ನಿಂಗ್ ಅಂತ ನಗುಮುಖದಿಂದ ಹೇಳಿ ಮುಂದೆ ಸಾಗುತ್ತಾರೆ. ನಾಯಿಯ ಜೊತೆ ವಾಕಿಂಗ್ ಹೋಗುವವರೂ  ಇದ್ದಾರೆ. 
ಇಲ್ಲಿ ಮುಖ್ಯವಾಗಿ ಕೇಳುವ ಸದ್ದು ಲಾನ್ ಮೂವರಿಂದ್ದು.   ಲಾನ್ ಇದ್ದರೆ ಸಾಲದು. ಅದು ಹೆಚ್ಚು ಎತ್ತರ ಬೆಳೆಯದಂತೆ, ಕಳೆಗಿಡಗಳು ಬೆಳೆಯದಂತೆ ನೋಡಿಕೊಳ್ಳಬೇಕಲ್ಲ. ಹಾಗಾಗಿ ಒಂದಲ್ಲಾ ಒಂದು ಮನೆಯಿಂದ ಹುಲ್ಲು ಕತ್ತರಿಸುವ ಮೆಶಿನಿನ ಸದ್ದು ಆಕಾಶದಲ್ಲಿ ವಿಮಾನ ಹಾರುವಾಗ ಕೇಳುವ ಸದ್ದಿನಂತೆ ಕೇಳುತ್ತಲೇ ಇರುತ್ತದೆ.
ಮಗಳ ಮನೆಯಲ್ಲಿ‌ ಹುಲ್ಲುಹಾಸನ್ನು ಕತ್ತರಿಸಲು ನಿಯಮಿತವಾಗಿ ತಿಂಗಳಿಗೆ ಎರಡು ಸಲ ಇಬ್ಬರು ಬರುತ್ತಾರೆ. ಜಾನ್‌ಮತ್ತು ಅವನ ಅಳಿಯ ಛಾಡ್. ಅವರ ಪಾಡಿಗೆ ಅವರು ಕೆಲಸ ಮಾಡಿ ಹೋಗುತ್ತಾರೆ. ಮೇಲ್ವಿಚಾರಣೆ ಅಗತ್ಯವಿಲ್ಲ.  ಆರು‌ ವರ್ಷದ ಹಿಂದೆ ಜಾನ್ ತರಕಾರಿ ಬೆಳೆಸಲು ಒಂದು  ತೊಟ್ಟಿ ಮಾಡಿಕೊಟ್ಟಿದ್ದ. ಈ ವರ್ಷ ನಾವು ಬಂದ ಮೇಲೆ ಇನ್ನೆರಡು  ತೊಟ್ಟಿ ಮಾಡಿದ್ದ. 
ಹಿಂದಿನ ಸಲ ಬಂದಾಗ ಟೊಮೇಟೊ, ಬೀನ್ಸ್ , ಸೌತೆಕಾಯಿ, ಕ್ಯಾಪ್ಸಿಕಂ, ಮೆಣಸಿನಕಾಯಿ, ಬದನೆಕಾಯಿಗಳನ್ನು ಬೆಳೆಸಿದ್ದೆವು.ರಾಶಿ ರಾಶಿ ಟೊಮೆಟೊ , ಬದನೆ , ಸೌತೆಕಾಯಿಗಳು  ಬೆಳೆದಿದ್ದವು
ಇಲ್ಲಿ ಗಿಡಗಳಿಗೆ ಕೀಟಬಾಧೆ ಗಳು ಕಡಿಮೆ.ಆದರೆ ಇಲ್ಲಿ ಮೊಲಗಳು ಬಂದು ತಿನ್ನುವ ಸಂಭವವುಂಟು.  ಒಮ್ಮೊಮ್ಮೆ ಜಿಂಕೆಗಳೂ ಬರುತ್ತವೆ.ಮೊಲಗಳು ಬಾರದಂತೆ ಜಾನ್ ಮರದ ಅಡ್ಡ ಕಟ್ಟಿದ್ದ. 
ಸೆಪ್ಟೆಂಬರ್ ತಿಂಗಳ ನಂತರ  ಚಳಿಗಾಲ ಪ್ರಾರಂಭವಾಗಿ ಗಿಡಗಳೆಲ್ಲಾ ಚಳಿಗೆ ಸುಟ್ಟುಹೋದಂತಾಗುತ್ತವೆ.ಕೆಲವು ಗಿಡಗಳು ಚಳಿಗಾಲದಲ್ಲಿ ಒಣಗಿದರೂ ಬೇಸಿಗೆಯಲ್ಲಿ ಮತ್ತೆ ಚಿಗುರುತ್ತವೆ.
ಶಾಲೆಗೆ ಜೂನಿನಿಂದ ಸೆಪ್ಟೆಂಬರ್ ತನಕ ರಜೆ ಕೊಡುತ್ತಾರೆ. ಬೇಸಿಗೆಯಲ್ಲಿ ಮಕ್ಕಳಿಗೆ ಪ್ರವಾಸ ಹೋಗಲು  ಅಥವಾ ವಿವಿಧ ಚಟುವಟಿಕೆಗಳಲ್ಲಿ  ತೊಡಗಿಸಿಕೊಳ್ಳಲು ಸಹಾಯವಾಗಲಿ ಅಂತ.‌ಚಳಿಗಾಲದಲ್ಲಿ ತಿರುಗಾಡಲು ಕಷ್ಟ.ನಮ್ಮ ದೇಶದಲ್ಲಿದ್ದಂತೆ ಅಲ್ಲೂ ವಿಧವಿಧದ ಬೇಸಿಗೆ ಶಿಬಿರಗಳಿವೆ. ಅದಕ್ಕೂ ಮೊದಲೇ ಸೀಟು ಕಾಯ್ದಿರಿಸಬೇಕು.  
ಮಿಶಿಗನ್ನಲ್ಲಿ  ಒಂದು ಕನ್ನಡ ಸಂಘವಿದೆ. ಅದರ ಹೆಸರು ಪಂಪ ಕನ್ನಡ ಕೂಟ .ಎಲ್ಲಾ ರಾಜ್ಯಗಳಲ್ಲೂ ಈ ಪಂಪಾ ಕನ್ನಡ ಕೂಟಗಳಿವೆಯಂತೆ.
ಅದರ ಪದಾಧಿಕಾರಿಗಳು  ವಿಶೇಷ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಗಣೇಶ ಚೌತಿಯನ್ನು ಒಟ್ಟಾಗಿ ಆಚರಿಸುತ್ತಾರೆ.ಹೆಸರಾಂತ ಕಲಾವಿದರಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಹಿಂದಿನ ಸಲ ಬಂದಿದ್ದಾಗ ಅಂತಹ ಕಾರ್ಯಕ್ರಮ ನೋಡುವ ಅವಕಾಶ ನನಗೆ ಸಿಕ್ಕಿತ್ತು. ಅಲ್ಲಿಯ ಪರಾಶಕ್ತಿ ದೇವಸ್ಥಾನದಲ್ಲಿ ಗಣಪತಿ ಮೂರ್ತಿಯಿಟ್ಟು ಪೂಜೆ , ಮೆರವಣಿಗೆ ಮಾಡಿದ್ದರು.ಈ ಬೇಸಿಗೆ ಸಮಯದಲ್ಲಿಯೇ ಊರಿಂದ ತಂದೆ ತಾಯಿಯರನ್ನು ಕರೆಸಿಕೊಳ್ಳುವುದು. ಯಾಕೆಂದರೆ ಚಳಿಗಾಲವನ್ನು ಎಲ್ಲರಿಗೂ ತಾಳಿಕೊಳ್ಳಲಾಗುವುದಿಲ್ಲ.   ಕೆಲವರಿಗೆ ಇಲ್ಲಿ ಜೊತೆಗಾರರು ಇಲ್ಲದೆ, ಒಬ್ಬರೇ ಎಲ್ಲಿಗೂ ಹೋಗಲಾಗದೆ ಬೇಸರವಾಗಿ  ಹೆಚ್ಚು ದಿನ ಉಳಕೊಳ್ಳುವುದಿಲ್ಲ. ಆಧುನಿಕತೆಗೆ ಹೊಂದಿಕೊಂಡರೆ ನಮ್ಮಂಥವರಿಗೆ ಸಮಯ ಕಳೆಯುವುದು ಕಷ್ಟವಾಗುವುದಿಲ್ಲ.. 
ಅಲ್ಲಿಯೂ‌ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಿದೆವು. ವಿಜಯಪ್ರಕಾಶರ ಸಂಗೀತ ಗೋಷ್ಠಿ ಗೆ ಹೋಗುವ ಅವಕಾಶ ಸಿಕ್ಕಿತ್ತು.ಕ್ಯೂನಲ್ಲಿ ನಿಂತು ಅವರೊಂದಿಗೆ ಫೋಟೋ ತೆಗೆಸಿಕೊಂಡೆವು .

ಅಲ್ಲಿದ್ದ ಆರು ತಿಂಗಳುಗಳಲ್ಲಿ ಆರೇಳು ಗೃಹಪ್ರವೇಶಗಳಿಗೆ ಹೋಗಿದ್ದೆವು.ಜಗನ್ನಾಥ ರಥೋತ್ಸವದ ಸುಂದರ ದೃಶ್ಯ ನೋಡಲು ಸಿಕ್ಕಿತು.
ಈ ಸಲದ ಪ್ರವಾಸ  ಅರಿಜೋನಾ ,ಲಾಸ್ ವೇಗಾಸ್ , ಕೊಲೆರೋಡೋ ನದಿ, ದಿನ ಗ್ರ್ಯಾಂಡ್ ಕ್ಯಾನಿಯನ್ , ಏಂಟಿಲೋಪ್ ಕ್ಯಾನಿಯನ್, ಬ್ರೈಸ್  ಕ್ಯಾನಿಯನ್ ಮುಂತಾದ ಜಾಗಗಳಿಗೆ ಹೋಗುತ್ತಾ ಅದ್ಭುತವಾದ  ಮೈಲಿಗಟ್ಟಲೆ ಉದ್ದದ ವರ್ಮಿಲಿಯನ್ ಕ್ಲಿಫ್ ನ್ನೂ ನೋಡಿದೆವು. ಆ ಪ್ರವಾಸ ಮುಗಿಸಿ ಬರುವಾಗ ನನಗೂ ,ನನ್ನ  ಯಜಮಾನರಿಗೂ ಕೋವಿಡ್! ಲಸಿಕೆ ಹಾಕಿಸಿಕೊಂಡುದರಿಂದಲೋ ಏನೋ ಸುಸ್ತು ಮತ್ತು ಜ್ವರವಷ್ಟೆ ಬಂದು ಗುಣವಾಯಿತು.
ಇಲ್ಲಿಗೆ ಬೆಂಗಳೂರಿನಿಂದ ಮಿಶಿಗನ್ ರಾಜ್ಯದ. ರೋಚೆಸ್ಟರ್ ಹಿಲ್ಸ್ ವರೆಗಿನ ಪ್ರಯಾಣ ವೃತ್ತಾಂತ ಸಂಪೂರ್ಣಂ .

✍️ಪರಮೇಶ್ವರಿ ಭಟ್ 
 

Category:Travel



ProfileImg

Written by Parameshwari Bhat