ಸಾವು!

ProfileImg
18 Jul '24
1 min read


image

ಅನೇಕ ವಿಚಾರಗಳು ನಮ್ಮನ್ನು ಬೇರೆಯವರಿಗಿಂತ ಭಿನ್ನವಾಗಿ , ವಿಶಿಷ್ಟವಾಗಿ ಮಾಡುತ್ತವೆ. ನಮ್ಮ ಮನಸ್ಸಿಗೆ ಸರಿಹೊಂದುವ ವಿಚಾರವಂತರು ನಮಗೆ ಆತ್ಮೀಯರಾಗುತ್ತಾರೆ !  ಬದುಕೆಂಬುದೇ ವಿಸ್ಮಯ ! ಸಂಬಂಧಗಳಿಗೆ ಪರಿಧಿಯಲ್ಲಿ ?

    ಕೆಲವೊಮ್ಮೆ ನಾವು ಎಷ್ಟು  ಬಯಸಿದರೂ ಸಿಗದು, ಮತ್ತೆ ಕೆಲವೊಮ್ಮೆ ಬೇಡವೆಂದರೆ ಕೇಳದೆ ಬೆನ್ನಟ್ಟಿ ಬರುವ ಒಂದೇ ಒಂದು ವಿಷಯವೆಂದರೆ .. ಅದು .. ಸಾವು...
ಯಮನ ಇಚ್ಛೆ, ಕಾಲನ ಕರೆಗೆ ಮತ್ಯಾವುದೂ ಅಡ್ಡ ಬರಲಾಗದು... ಎನ್ನುವ ಭಾವ ನಮ್ಮ ಸಮಾಧಾನಕ್ಕೇನೋ?? 
ಇಂಥಾ ಸಾವುಗಳು ಸದ್ಯ ಒಂದು ವಾರದೊಳು ಎಷ್ಟು ಜನರನ್ನು ಬಲಿ ತೆಗೆದು ಕೊಂಡಿತೋ ಆ ದೇವನೇ ಬಲ್ಲ!

    ಎಲ್ಲ ಸಾವುಗಳೂ ಒಂದಲ್ಲ ಒಂದು ರೀತಿಯಲ್ಲಿ ಜೀವನ ಪಾಠವನ್ನು ಕಲಿತವರದ್ದೇ ಎಂದಾದರೆ ಮನ ಕಲುಕದಿದ್ದೀತೇ ! ?
ಮನಸ್ಸನ್ನು ಎಷ್ಟು ಸ್ಥಿಮಿತದಲ್ಲಿ ಇಟ್ಟುಕೊಳ್ಳಬಹುದು ? ! ನಮ್ಮವರು , ನಮಗಾತ್ಮೀಯರಾದವರು , ನಮಗೆ ಇಷ್ಟವಾದವರು , ಹೀಗೆ ಪಟ್ಟಿಯ ತುಂಬೆಲ್ಲ ನಮಗಾವರಿಸಿದವರೇ ತುಂಬಿದರೆ ಮನಸ್ಸು ಕದಡದಿದ್ದೀತೆ ?

    ವಿಧಿ ಯಾಕಿಷ್ಟು ಕ್ರೂರಿ ಅನ್ನಬಹುದೇ?! ಗೊತ್ತಿಲ್ಲ.ಬಾಳಿ ಬದುಕಿ ಇನ್ನೆಷ್ಟೊ ಸಾಧನೆಗಳನ್ನು ಮಾಡಿ ಜೀವಿಸಬೇಕಾದವರನ್ನೇ ಬಲಿತೆಗೆದುಕೊಂಡರೆ?!

ಒಳ್ಳೆಯವರನ್ನು ದೇವರು ಬೇಗ ತನ್ನ ಬಳಿ ಕರೆದುಕೊಳ್ತಾನಂತೆ- ಹಿರಿಯರ ಅಂಬೋಣ..
ಸಾವು ಒಂದು ಮಟ್ಟಿನ ಜವಾಬ್ದಾರಿಗಳು ಮುಗಿದ ಬಳಿಕವಾದರೆ ಏನೋ ಅಷ್ಟಾದರೂ ಸಮಾಧಾನ ‌ಪಡಬಹುದು!
ಆದರೆ ಹಾಗಲ್ಲ ಅದು. ಇದ್ದಕ್ಕಿದ್ದಂತೆ, ಸೂಚನೆಗಳಿಲ್ಲದೆಯೇ ಬರಬಹುದು...
ಅಥವಾ ಸದ್ಯದಲ್ಲೆ ಹತ್ತಿರ ಬರುವೆ ಎಂದು ಮಾರಣಾಂತಿಕ ಖಾಯಿಲೆಗಳ ಮೂಲಕವೂ ಸೂಚಿಸಬಹುದು ...

ಈಗಿನ ಕಾಲದಲ್ಲಿ ಹಿಂದು ಮುಂದಿಲ್ಲದೆ ಬರುವ ಸಾವನ್ನು ನಾವು ಕಂಡಿದ್ದೇವಲ್ಲ?!
ಇಷ್ಟೆಲ್ಲ ಆದರೂ ನಾವು ಎಷ್ಟು ಎಚ್ಚೆತ್ತುಗೊಂಡಿದ್ದೇವೆ? ಏನು ಪಾಠ ಕಲಿತಿದ್ದೇವೆ? 
ಆಪ್ತೇಷ್ಟರ ಸಾವಿನ ನೋವನ್ನು ಅನುಭವಿಸಿಯೂ ಯಾಕೆ ಸ್ವಾರ್ಥ, ಅಹಂ, ಮತ್ಸರ ಇಂಥಾ ಗುಣಗಳು ನಮ್ಮೊಳಗಿವೆ?!
ಅರ್ಥವಾಗದು....

ಅದೇನೋ ಅಂತಾರಲ್ಲ, ಮೂರುದಿನದ ಬಾಳು...ಬರುವಾಗ ಏನೂ ತಂದಿಲ್ಲ, ಹೋಗುವಾಗಲೂ ಏನೂ ತೆಗೆದುಕೊಂಡು ಹೋಗಲಾಗದು...ಹೀಗೇ ಎಂದಾದ ಮೇಲೆ,
ಇರುವುದಲ್ಲೇ ಖುಷಿ ಪಡುತ್ತಾ, ಎಲ್ಲರೊಂದಿಗೂ ಒಳ್ಳೆಯ ಭಾವನೆ ಬೆಳೆಸಿಕೊಂಡು ನಮ್ಮ ದೃಷ್ಟಿಯೇ ಸಕಾರಾತ್ಮಕವಾಗಿ ಯಾಕಿರಬಾರದು?!

ಪ್ರಯತ್ನ ಪಡೋಣವೇ?!




ProfileImg

Written by Vijayalakshmi Neerpaje

0 Followers

0 Following