ಬದುಕಿನಲಿ ಕಣ್ತೆರೆದ ಹಗಲಿನ ರಮಣೀಯತೆ

ಸೂರ್ಯೋದಯದ ಕವನ

ProfileImg
24 Jan '24
3 min read


image

ಪ್ರತಿ ವ್ಯಕ್ತಿಯ ಸುಧೀರ್ಘ ಜೀವನದಲ್ಲಿ ನೆಲೆನಿಂತ ದುಃಖ, ಕಣ್ಣೀರು,ಅವಮಾನ ಅಪಮಾನಗಳು ಮತ್ತು ಸಂಕಷ್ಟಗಳೆಂಬ ಕತ್ತಲು ಎಂದೋ ಒಂದು ದಿನ..ದೂರ ಸರಿದು..ನೆಮ್ಮದಿಯ ಹಗಲೊಂದು ಕಣ್ತರೆದಂತೆ..ನಮ್ಮಗಳ 
ಬದುಕಿನೊಳಕ್ಕೆ,ಇರುಳು ಕಳೆದು ಸುಂದರ ಮುಂಜಾವು ಉದಯಿಸಿ ಬೆಳಕು ಪಸರಿಸಿದಂತೆ,  ಇಂದು ನಸುಕಿನ ಜಾವಕ್ಕೆ ಎಚ್ಚರಾದ ನನ್ನನು ಸ್ವಾಗತಿಸಿದ್ದು..ಭೂರಮೆಯನ್ನು ಇನ್ನೂ ಬಿಡದೇ ಆವರಿಸಿದ್ದ ನಸುಗತ್ತಲು..ಎದ್ದವನೇ ಹಾಗೆಯೇ ಮೌನವಾಗಿ ಕುಳಿತು ಸುಮಾರು ಹದಿನೈದು ನಿಮಿಷಗಳ ಕಾಲ..ಧ್ಯಾನದಲ್ಲಿ ಮುಳುಗಿಬಿಟ್ಟೆ, ಧ್ಯಾನದಿಂದ ಹೊರಬಂದು ಮನೆಯ ಬಾಗಿಲು ತೆರದು  ಮನೆಯ ಅಂಗಳಕೆ ಅಡಿಯುಟ್ಟವನಿಗೆ ಗೋಚರಿಸಿದ್ದು..ಆಗ ತಾನೇ ಅರಳುತ್ತಿರುವ ಸುಂದರ ಮುಂಜಾವು, ಅದೇ ಮುಂಜಾನೆಯ ಬೆಳಕು ಮನೆಯ ಕೈದೋಟದ ಗಿಡಗಳನ್ನು ದಾಟಿ ಕಿಟಕಿಯ ಸರಳುಗಳ ಸಂದಿಗಳಿಂದ ಮನೆಯೊಳಗೆ ಇಣುಕಿ ನೋಡುತ್ತಿತ್ತು..
ಇರುಳೆಲ್ಲಾ ನಿಶ್ಯಬ್ಧದ ಮಡುವಲ್ಲಿ ಮುಳುಗಿದ್ದ ಮನೆಯ ಹೊರಗಿನ ವಾತಾವರಣದಲ್ಲಿ..ಗ್ರಾಮದ ಜನಗಳ ದಿನಚರಿ ಆರಂಭವಾದಂತೆ ಸದ್ದುಗದ್ದಲಗಳು ನಿಧಾನವಾಗಿ ಶುರುವಾಗುತ್ತಿದ್ದವು..ಪರಿಸರದಲ್ಲಿ   ಕ್ರಮೇಣ ಜೀವಸಂಕುಲವು ಎಚ್ಚೆತ್ತು ಆ ದಿನದ ಆರಂಭಕ್ಕೆ ಕಾಯುತ್ತಿರುವಂತೆ ಕಾಣುತ್ತಿತ್ತು..ಮರಗಿಡಗಳ ಗೂಡುಗಳಲಿ ಬೆಚ್ಚಗೆ ಮಲಗಿದ್ದ ಪಕ್ಷಿಸಂಕುಲವು ಆ ದಿನದ ಆಹಾರವನ್ನು ಅರಸಿ ಬಾನ ಬಯಲಿನೆಡೆಗೆ ಚಿಮ್ಮುವ ತವಕದಲ್ಲಿದ್ದವು,

ನಾನು  ಮೊದಲಿಗೆ ಭೂದೇವಿಗೆ ಮತ್ತು ಭಗವಂತನಿಗೆ ನಮಸ್ಕರಿಸಿ , ನಂತರ ಮನೆಯ ಈಶಾನ್ಯ ಮೂಲೆಯಲ್ಲಿ ನಳನಳಿಸುತ್ತಿದ್ದ, ಪವಿತ್ರ ತುಳಸಿ‌ಮಾತೆಗೆ ಮತ್ತು ಸೂರ್ಯ ದೇವನಿಗೆ ವಂದಿಸಿ.. ಒಮ್ಮೆ ಹಾಗೆಯೇ ನಮ್ಮ ಹಳ್ಳಿಯಲಿ ಆಗತಾನೆ ಅರಳುತ್ತಿರುವ ಮುಂಜಾವಿನ  ಜೊತೆ ಜೊತೆಗೆ ಆವರಿಸುತ್ತಿರುವ ಹಗಲನೊಮ್ಮೆ ಕಣ್ ತುಂಬಿಕೊಳ್ಳುತ್ತಾ ಹತ್ತಿರದ ಹೊಂಗೆ ಮರದ ಗೊಂಬೆಗಳಲ್ಲಿ ಕೇಳಿ ಬರುತ್ತಿರುವ ಹಕ್ಕಿಗಳ ಕಲರವ ಆಲಿಸುತ್ತ ಎಲ್ಲೋ ದೂರದ ಮಾಮರದಿಂದ ಕೇಳಿ ಬರುತ್ತಿರುವ ಕೋಗಿಲೆಯ ನಾದಕೆ ಕಿವಿಗೊಡುತ್ತಾ.. ಈಶಾನ್ಯ ದಿಕ್ಕಿಗೂ ಮೂಡಣ ದಿಕ್ಕಿಗೂ ಮಧ್ಯದಲ್ಲಿನ ಬೆಟ್ಟ ಗುಡ್ಡಗಳ ಮರೆಗಳಿಂದ ಸುಯ್ಯನೆ ಬೀಸುತ್ತಿರುವ ತಂಗಾಳಿಗೊಮ್ಮೆ  ಮೈಯೊಡ್ಡಿ, ಬೆಳ್ಳಿ ಬೆಟ್ಟಗಳ ನಡುವಿನಿಂದ ಉದಯಿಸುತ್ತಿರುವ ಬಾಲ ಭಾಸ್ಕರನ ಹೊನ್ನ ಹೊಂಗಿರಣಗಳಿಗೆ ಮುಖಾರವಿಂದವನ್ನು
ಒಡ್ಡುತ್ತಾ.. ಬೆಳಗಿನ ಸೂರ್ಯ ರಶ್ಮಿಗೆ ಅರಳುತ್ತಿರುವ ನಮ್ಮ ಮನೆಯ ಕೈದೋಟದಲ್ಲಿನ ದಾಸವಾಳ , ಗುಲಾಬಿಗಳ ಸೊಗಸನ್ನು ಕಣ್ತುಂಬಿಕೊಳ್ಳುತಾ..   ಆ ಸುಂದರ ಪುಷ್ಪಗಳ..ಪರಿಮಳವನ್ನು ಮನಸಾರೆ ಅಸ್ವಾದಿಸುತ..ಆಗತಾನೇ ಉದಯಿಸಿದ..ಆ ಮುಂಜಾನೆಯ  ಬೆರಗು ಭಿನ್ನಾಣಗಳಿಗೆ..ಮನಸೋತು ನಿಂತವನನ್ನು ಎಚ್ಚರಿಸಿದ್ದು..ನಮ್ಮ ಗ್ರಾಮದ ನಮ್ಮ ಕುಲದೇವಿಯಾದ ಶ್ರೀ ಕರಗದಮ್ಮ ದೇವಿಯ ದೇವಸ್ಥಾನದ ಗೋಪುರದ ಮೇಲಿನ ಧ್ವನಿವರ್ಧಕದಲ್ಲಿ ಕೇಳಿ ಬರುತ್ತಿರುವ ಶ್ರೀಮತಿ ಸುಬ್ಬುಲಕ್ಷ್ಮಿಯವರ ಭಕ್ತಿಪ್ರಧಾನ ಸುಪ್ರಭಾತ..ನಮ್ಮ ಗ್ರಾಮದ ದಿಕ್ಕುದಕ್ಕುಗಳಿಗೂ ತಲುಪುತ್ತಾ..ಗ್ರಾಮದ ಜನತೆಯನ್ನಾವರಿಸಿದ್ದ ನಿದ್ರೆಯ ಮಂಪರನ್ನು ಓಡಿಸುತ್ತಾ..ಅವರ ಮನೆ ಮನಗಳಲ್ಲಿ ತುಂಬಿದ್ದ ಕಲ್ಮಶಗಳನ್ನೆಲ್ಲಾ ಓಡಿಸಿ,ಅವರ ಎದೆಯಲ್ಲಿ ಪರಿಶುದ್ದ ಭಾವನೆಗಳನ್ನು ತುಂಬಿ..ಒಂದು ರೀತಿಯ ಹೇಳಲಾಗದ ಲವಕವಿಕೆಯನ್ನು ಜನತೆಯ ಮನಸ್ಸುಗಳಲ್ಲಿ ನೆಲೆಯೂರುವಂತೆ ಮಾಡಿತ್ತು, ಆ ಹಿರಿಯ ಜೀವದ ಧ್ವನಿಯಲ್ಲಿನ ಭಕ್ತಿ ಬೆರೆತ ಭಾವಪೂರ್ಣತೆಗೆ ನನ್ನನು ನಾನು ಮರೆತು.. ತನ್ಮಯತೆಯಿಂದ ಆಲಿಸುತ್ತಾ..ಆ ರಮಣೀಯ ಮುಂಜಾನೆಯಲಿ..ಹಗಲಿಗೆ ಮೈ ತೆರೆದು ನಿರ್ವಾಣವಾಗುತ್ತಿರುವ ಪ್ರಕೃತಿಯ ಸೊಬಗಿಗೆ ಮನಸ್ಸು ಉಲ್ಲಸಿತವಾಗಿ..ಹಾಗೇ ಸುತ್ತಲೂ ಕಣ್ಣು ಹಾಯಿಸಿದವನಿಗೆ..ನಮ್ಮ ಹಳ್ಳಿಯ ಹೆಂಗಳೆಯರು..ಆ ನಸುಕಿನಲ್ಲೇ ಎದ್ದು..ಬೆಚ್ಚಗಿನ ಬಿಸಿನೀರು ಕಾಯಿಸಿ..ಸ್ನಾನಾಧಿಗಳನು ಮುಗಿಸಿ..ತೇವಗೊಂಡ ತಲೆಕೂದಲನ್ನು ಟವೆಲ್ ನಲ್ಲಿ ಬಂಧಿಸಿಟ್ಟಂತೆ..ಸುತ್ತಿ ಮನೆಯಂಗಳದಲ್ಲಿನ ಕಸವನು ಶುಭ್ರವಾಗಿ ಗುಡಿಸಿ..ನೀರೆರೆದು..ರಂಗೋಲಿ ಚಿತ್ತಾರ ಹಾಕುವ ಮೋಹಕ ದೃಶ್ಯವನು..ಕಣ್ತುಂಬಿಕೊಳ್ಳುವುದೇ ಒಂದು ಭಾಗ್ಯ ಎಂದರೆ..ಸರಿಹೋದಿತು, ಮತ್ತು ಕೊಟ್ಟಿಗೆಗಳಲಿ ಕಟ್ಟಿದ್ದ ಆಕಳುಗಳು..ತಮ್ಮ ಕರುಗಳಿಗೆ ಹಾಲುಣಿಸಿ..ಅವುಗಳ ಹಸಿವನ್ನು ನೀಗಿಸಿ..ಆ ಕರುಗಳ ಮೃದುವಾದ ಮೈಯನ್ನು ನಾಲಿಗೆಯಿಂದ ನೆಕ್ಕಿ..ತಮ್ಮ ವಾತ್ಸಲ್ಯ ಸೂಸುವುದು..ಕಂಡಾಗಂತೂ..ಸಾಕುಪ್ರಾಣಿಗಳಲ್ಲಿರುವ ಪ್ರಾಮಾಣಿಕತೆಗೆ..ಮಮತೆಗೆ ಮನಸ್ಸು ತನ್ನಂತಾನೇ ಮಾರುಹೋಗಿತ್ತು, 
ಹಾಗೆಯೇ  ಈ  ಸುಂದರ ಮುಂಜಾನೆಯ  ಸೊಬಗಿಗೆ ಬೆರಗಾಗಿ ನಿಂತವನಿಗೆ ಈ ದಿನದ ಕೆಲಸಗಳು ನೆನಪಾಗಿ ಎಚ್ಚೆತ್ತು ನಿತ್ಯ ಕರ್ಮಗಳನ್ನು ಮುಗಿಸಿ ಬಿಸಿ ನೀರು ಅಣಿ ಮಾಡಿ ಸ್ನಾನಾದಿಗಳನ್ನು ಮುಗಿಸಿ  ನಮ್ಮ ಕೈದೊಟದ ಹೂ ಗಿಡಗಳಿಂದ ಹೂವನ್ನು ಬಿಡಿಸಿ ತಂದು ದೇವರ ಮನೆಯಲ್ಲಿದ್ದ ಭಗವಂತನಿಗೆ  ಅರ್ಪಿಸಿ  ದೇವರ ಪ್ರಾರ್ಥನೆ ಮಾಡುತ್ತಾ ಹಾಗೆ ನನ್ನ ಇಷ್ಟ ದೇವರಾದ ಆಂಜನೇಯನ ಹನುಮಾನ್ ಚಾಲೀಸವನ್ನು ಹೇಳುತ್ತಾ ಪೂಜೆ ಪ್ರಾರ್ಥನೆಗಳನ್ನು ಮುಗಿಸಿ ನಮ್ಮ ಗ್ರಾಮದ ಶ್ರೀ ಕರಗದಮ್ಮ ದೇವಸ್ಥಾನಕ್ಕೆ ಹೋಗಿ ತಾಯಿಯ ದರ್ಶನ ಪಡೆದು..ಪೂಜೆ ಮಾಡಿ ಕೊಂಚ  ಸಮಯ ದೇವಸ್ಥಾನದ ಪ್ರಾಂಗಣದಲ್ಲೇ ದೇವರ ಎದುರಿನಲ್ಲಿ ಕುಳಿತು.. ನಮ್ಮೆಲ್ಲರ ತಪ್ಪುಗಳನ್ನೆಲ್ಲ ಮನ್ನಿಸಿ, ನಮ್ಮ ಕಷ್ಟಗಳೆಲ್ಲ ಪರಿಹರಿಸು ತಾಯಿ.. ಈ ದಿನ ಇಡೀ ಜಗತ್ತಿನ ಎಲ್ಲ ಜನತೆಗೂ ಶುಭ ಫಲಗಳನ್ನು ನೀಡು..ತಾಯಿ..ಎಂದು ಪ್ರಾರ್ಥಿಸಿ.. ಮನೆಗೆ ಬಂದು ಊಟ ಮಾಡಿ ಆ ದಿನದ ಕೆಲಸಗಳತ್ತ ಗಮನ ಕೊಟ್ಟರೆ..ಬದುಕು ಎಷ್ಟೊಂದು ಸುಂದರ ಎನ್ನಿಸುತ್ತದೆ.

ಈ ಸುಂದರ ಮುಂಜಾನೆಗೆ ಮನಸೋತು.. ಈ ಶುಭೋದಯಕ್ಕೆಂದೇ  ಆ ಭಾಲ ಭಾಸ್ಕರನಿಗೆ ಸಮರ್ಪಣೆ ಮಾಡಲಂದು ಒಂದು ಸುಂದರ ಕವನ..
ಬರೆಯಲು ಪ್ರಯತ್ನಿಸುತ್ತೇನೆ..

ಯಾರ ಅನುಮತಿಯೂ ಕೇಳದೇ
ಮೂಡಣದರಮನೆಯ ಕದ ತೆರೆದು 
ಮುಗಿಲರಸಿಯ ಅಂತಪುರಕೆ
ಅಡಿಯಿಟ್ಟ ರಸಿಕಾಗ್ರಣಿ ನೀನು..||

ಯಾರ ಅಪ್ಪಣೆಯನೂ ಕೇಳದೆ
ದೂರದ ದಿಗಂತವನ್ನು ಚುಂಬಿಸುತ್ತಿರುವ 
ಸಾಗರ ಕನ್ಯೆಯ ಕಿಬ್ಬೊಟ್ಟೆಯಾಳಕೆ
ಹೊಂಗಿರಣವಾಗಿ ತೂರಿದ ಚಿತ್ತ ಚೋರ ನೀನು..||

ಯಾರ ಮಾತಿಗೂ ಮಣೆ ಹಾಕದೆ 
ಭೂರಮೆಯ ಸೆರಗನು ಸರಿಸಿ 
ಪ್ರಕೃತಿ ದೇವಿಯ ದೇಹ ಸಿರಿಯನು 
ಕಳ್ಳನಂತೆ ಕದ್ದು ನೋಡಿದವನು ನೀನು..||

ನನ್ನ ಅನುಮತಿಯೂ ಕೇಳದೆ 
ನನ್ನದೇ ಕಲ್ಪನಾ ಲೋಕದ ಹೆಬ್ಬಾಗಿಲಲಿ ನಿಂತು ನನ್ನದೇ ಲಹರಿಯಾಳವನ್ನು ಕೆದುಕುತ್ತಾ ಸುಳಿದ  ನನ್ನೊಲುಮೆಯ ಆತ್ಮ ಬಂಧು ನೀನು..||

ಮುಂಜಾನೆಯೇ ಮುಗ್ಗಡೆದು ಬಿರಿಯಲು 
ಕಾದಿರುವ ಮನದಂಗಳ ಮಲ್ಲಿಗೆ ಮೊಗ್ಗನು 
ಮನಸಾರೆ ಓಲೈಸುತಾ ಮುದ್ದಿಸುತ..
ಅರಳಿಸು ಬಾ ಭಾಸ್ಕರ..||

ನಿನ್ನ ಆಗಮನಕ್ಕೆಂದೇ ಹಾಡದೆ ಕಾದಿರುವ 
ಮನದ ಹಕ್ಕಿಯನ್ನು ಮುದುಗಳಿಸಿ
ಮುಂಜಾನೆಯ ಪ್ರೇಮ ರಾಗವನು 
ಹಾಡಿಸು ಬಾ ದಿನಕರ..||

ಪ್ರಕೃತಿಯ ಚೆಲುವನಲ್ಲ ಆವರಿಸಿ ತಬ್ಬಿರುವ 
ಹಿಮದ ರಾಶಿಯನ್ನು ಕರಗಿಸಿ ನೀರಾಗಿಸಿ 
ಧರಣಿಯೊಡಲ ಹೊಳೆಯಾಗಿ ಝರಿಯಾಗಿ 
ಹರಿಸು ಬಾರೋ ಶುಭಕರ..||

ಪಿಳಿಪಿಳಿ ಕಣ್ಣು ಬಿಟ್ಟು ಹೊಸಹಗಲೊಂದರ
ಆಗಮನದ ನಿರೀಕ್ಷೆಯಲ್ಲಿರುವ ಹಸುಳೆಯೊಂದರ ಮುದ್ದು ಮೊಗಕೆ ಹೊಂಗಿರಣವನು ಚೆಲ್ಲುತ 
ಸುಂದರ ಹಗಲೊಂದನು ಪರಿಚಯಿಸು 
ಬಾರೋ ಪ್ರಭಾಕರ..||

ನೆನಪಿನಂಗಳದ ಮುಸ್ಸಂಜೆಯಲಿ
ಕನವರಿಕೆಗಳ ಪಡುವಣದಲಿ 
ಹೊಂಗನಸುಗಳ ದಿಗಂತದಲಿ 
ಭಾವನೆಗಳ ಮುಸ್ಸಂಜೆಯಲಿ 
ಊಹಾಲೋಕದ ಅನಾವರಣ..||

ಕೆಂಪುಸೂರ್ಯನಾ ಕೆನ್ನೆಯಲಿ 
ವರ್ಣರಂಜಿತ ಬಾನಂಗಳದಲಿ 
ಅವಳೆದೆಯಾಳದ ಬಿಸುಪಿನಲಿ 
ಸ್ವಪ್ನಲೋಕಕ್ಕೊಂದು ಹೂಬಾಣ..||

ಸಿಹಿಯಾದ ನೆನಪಿನಂಗಳದಲಿ 
ಸವಿಮಾತಿನ ಮನದಂಗಳದಲಿ 
ಮನಸೋಲುವ ಸಂಜೆರಾಗದಲಿ 
ಅವಳೆಜ್ಜೆನಾದದ್ದೇ ರಸದೌತಣ..||

ಸಾಯಂಕಾಲಗಳ ಸೊಬಗಿನಲಿ 
ವಿಹಾರಕ್ಕಿಳಿದ ಬಾನಾಡಿಗಳಲಿ 
ಮೀನಕಂಗಳ ಹೊನಲುಬೆಳಕಲಿ 
ಲಜ್ಜೆಯಾಭರಣಗಳದ್ದೇ ತೋರಣ..||

ಸಾಗರಕನೆಯ ತೀರದ ವಿರಹದಲಿ 
ತೇಲಿಬರುವ ತಂಬೆಲ್ಲರ ಮೋಹದಲಿ 
ಒಲವನ್ನೆಲ್ಲಾ ಸುರಿದವಳ ಕೆನ್ನೆಯಲಿ 
ಸುಳಿದಿತ್ತು ಆಹ್ವಾನಭರಿತ ಭಿನ್ನಾಣ..||

ಅದೇನೋ, ಇಡೀ ಬ್ರಹ್ಮಾಂಡವನು ಮತ್ತು ಸಮಸ್ತ ಪ್ರಕೃತಿಯನು ಅನುದಿನವೂ ಬೆಳಗುವ ಸೂರ್ಯನ ಕುರಿತು..ಕವನ ಬರೆಯುವುದೆಂದರೆ ನನಗೆ ಎಲ್ಲಿಲ್ಲದ ಹುಮ್ಮಸ್ಸು..ಮನಸ್ಸಿಗೇನೋ ಮುದ ನೀಡಿದಂತಾಗುತ್ತದೆ.

ಗಿರಿಶಿಖರಗಳ ಸೊಬಗನು ದಿಟ್ಟಿಸಲು ಕಣ್ಣಿಗೆ ಇಂಪು 

ನದಿಹೊಳೆಗಳಲಿ ಮೀಯಲು ಮೈಮನಸ್ಸಿಗೆ ತಂಪು 
ಕಡಲರಾಶಿ ಅಲೆಗಳ ಕಣ್ಣುಂಬಿಕೊಳ್ಳಲು ಸುಂದರ 
ಪ್ರಕೃತಿಮಾತೆ ಸೊಗಸನು ನೋಡಲು ಮನೋಹರ..!!

ಜಗದಷ್ಟೂ ರಮಣೀಯತೆಯಲಿ ಮೇಲೈಸಿದೆ ಹಸಿರು ಕಾಡುಕಣಿವೆಗಳ ಜೀವಸೆಲೆಯಾಗಿದೆ ಹಸಿರಿನ ಬಸಿರು ಸ್ವಾರ್ಥದಿ ಬದುಕುವ ಮಾನವಜೀವಕ್ಕಿತ್ತಿದೆ ಉಸಿರು 

ಸಸ್ಯರಾಶಿಯನು ಉಳಿಸಲು ಬಸಿಯಬೇಕು ಬೆವರು..!!

ಉಸಿರಾಡಲು ಬೇಕೆಮಗೆ ನಿರ್ಮಲವಾದ ತಂಗಾಳಿ 

ಗಿಡಮರಗಳನು ಕೊಂದು ಸೇವಿಸದಿರು ವಿಷಗಾಳಿ 
ನಮ್ಮ ಸುತ್ತಮುತ್ತಲು ನಿರ್ಮಿಸಿ ಶುಭ್ರವಾದ ಪರಿಸರ 
ಪರಿಸರ ಸ್ವಚ್ಚತೆಯ ಕಡೆಗಿರಲಿ ಮನದಲಿ ಅವಸರ..!

ಭೂದೇವಿ ಸಮತೋಲನ ಕಾಯ್ದಳು ಪರಿಸರಮಾತೆ 
ಉತ್ತಮ ಆರೋಗ್ಯವ ನೀಡುತಿರುವಳು ಜೀವದಾತೆ 

ಕಾಪಾಡುತಲಿರು ಮನುಜಾ ನೀ.. ನಿನ್ನಯ ನೆಲವನು 

ಕಲ್ಮಶಗೊಳಿಸದಿರು ನೈಸರ್ಗಿಕವಾದ ಗಂಗಾಜಲವನು.

ರಚನೆ :- ಜಿಂಕೆ ಮಂಜುನಾಥ್ 
              ಕಲ್ವಮಂಜಲಿ

 

 

 

Category:Books



ProfileImg

Written by Jinke Manjunath

0 Followers

0 Following