ಡೇವಿಡ್‌ ಅಟೆನ್‌ಬರೋ

"ಲೈಫ್"ಗೆ ಜೀವ ತುಂಬಿದ ವನ್ಯಲೋಕದ ಗಾರುಡಿಗ!

ProfileImg
19 Mar '24
10 min read


image

     ನಿಮಗೆ ಬಿಬಿಸಿ ಚಾನೆಲ್ ನೋಡುವ ಅಭ್ಯಾಸವಿದ್ದರೆ ಒಂದು ದೃಶ್ಯವನ್ನು ಗಮನಿಸಿರಬಹುದು. ವಿಶಾಲವಾಗಿ ಸಾವಿರಾರು ಮೈಲು ದೂರದವರೆಗೆ ಹಬ್ಬಿರುವ ಆಫ್ರಿಕದ ಸವನ್ನಾ ಹುಲ್ಲುಗಾವಲಿನಲ್ಲಿ ಲಕ್ಷಾಂತರ ಝೀಬ್ರಾ, ವಿಲ್ಡೆಬೀಸ್ಟ್, ಇಂಪಾಲಾ, ಜಿರಾಫ್, ಆನೆ ಇತ್ಯಾದಿ ಸಸ್ಯಾಹಾರಿಗಳು ಮೇಯುತ್ತಿರುತ್ತವೆ. ಜೊತೆಗೆ ಸಿಂಹ, ಚಿರತೆ, ಚೀತಾ, ಕತ್ತೆಕಿರುಬ ಇತ್ಯಾದಿ ಮಾಂಸಾಹಾರಿಗಳು ಬೇಟೆಗಾಗಿ ಹೊಂಚುಹಾಕುತ್ತ ಇರುತ್ತವೆ. ಅವುಗಳ ನಡುವಿನಿಂದ ಓರ್ವ ವಯಸ್ಸಾದ, ಆದರೆ ಜೀವನೋತ್ಸಾಹದಿಂದ ಪುಟಿಯುತ್ತಿರುವ ವ್ಯಕ್ತಿ ಕಾಣಿಸಿಕೊಳ್ಳುತ್ತಾನೆ. ತನ್ನ ಮೋಡಿ ಮಾಡುವ ಇಂಗ್ಲಿಷ್‌ನಲ್ಲಿ ಆತ ಅಲ್ಲಿ ಪ್ರತಿದಿನ ನಡೆಯುವ ಜೀವಲೋಕದ ಸಾವಿರಾರು ವಿಸ್ಮಯಕರ ವಿದ್ಯಮಾನಗಳನ್ನು ವಿವರಿಸುತ್ತಿದ್ದರೆ ಕೇಳುವವರು ಮಂತ್ರಮುಗ್ಧರಾಗಿ ನೋಡುತ್ತ ನಿಲ್ಲುವಂತಾಗುತ್ತದೆ. ಆ ವ್ಯಕ್ತಿಯ ಹೆಸರೇ ಡೇವಿಡ್ ಅಟೆನ್‌ಬರೋ. ಈ ಎರಡು ಪದಗಳ ಹೆಸರೇ ಯಾವುದೇ ನಿಸರ್ಗಪ್ರೇಮಿಯ ಮನದಲ್ಲಿ ರೋಮಾಂಚನ ಉಂಟುಮಾಡಲು ಸಾಕು. 
     ಸಿನಿಮಾ ಪ್ರಿಯರಿಗೆ ರಿಚರ್ಡ್ ಅಟೆನ್‌ಬರೋ ಹೇಗೆ ಚಿರಪರಿಚಿತರೋ ಹಾಗೆ ನಿಸರ್ಗಪ್ರೇಮಿಗಳಿಗೆ ಡೇವಿಡ್ ಅಟೆನ್‌ಬರೋ ಚಿರಪರಿಚಿತ. ಚಿಕ್ಕ ಇರುವೆಯಿಂದ ಹಿಡಿದು ದೈತ್ಯ ನೀಲಿ ತಿಮಿಂಗಿಲಗಳವರೆಗೆ ಡೇವಿಡ್ ಯಾವ ಪ್ರಾಣಿಯನ್ನೂ ಬಿಟ್ಟಿಲ್ಲ. ಸಸ್ತನಿ, ಸರೀಸೃಪ, ಉಭಯವಾಸಿ, ಪಕ್ಷಿ, ಮತ್ಸ್ಯ, ಕೀಟ, ಮೃದ್ವಂಗಿ, ಕಂಟಕಚರ್ಮಿ ಹೀಗೆ ಎಲ್ಲಾ ವಿಧದ ಜೀವಿಗಳನ್ನೂ ತನ್ನ ಸಾಕ್ಷ್ಯಚಿತ್ರಗಳಲ್ಲಿ ತಂದಿದ್ದಾರೆ. ನಮ್ಮಲ್ಲಿ “ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಬರೆಯದ ವಿಷಯವಿಲ್ಲ” ಎಂಬ ಮಾತಿದೆ. ಅದಕ್ಕೆ “ಅಟೆನ್‌ಬರೋ ಸಾಕ್ಷ್ಯಚಿತ್ರ ಮಾಡದ ಪ್ರಾಣಿಗಳಿಲ್ಲ” ಎಂದೂ ಸೇರಿಸಬಹುದು ಎಂದರೆ ಅತಿಶಯೋಕ್ತಿಯಲ್ಲ! ಜೊತೆಗೆ ಸುಡುವ ಮರುಭೂಮಿಗಳಿಂದ ಹಿಡಿದು ಹಿಮ ಕೊರೆಯುವ ಅಂಟಾರ್ಕ್ಟಿಕಾ, ಅತೀವ ಒತ್ತಡದ ಆಳವಾದ ಮಹಾಸಾಗರಗಳಿಂದ ಹಿಡಿದು ಅತೀ ವಿರಳ ಒತ್ತಡದ ಅತ್ಯುನ್ನತ ಪರ್ವತಗಳವರೆಗೆ, ಕಗ್ಗತ್ತಲ ಗುಹಾಂತರಾಳಗಳಿಂದ ಹಿಡಿದು ನದಿ ಸರೋವರಗಳವರೆಗೆ, ಹುಲ್ಲುಗಾವಲುಗಳಿಂದ ಹಿಡಿದು ಜ್ವಾಲಾಮುಖಿಗಳ ಬಾಯಿಯ ತನಕ ಅಟೆನ್‌ಬರೋ ಕಾಲಿಡದ ಜಾಗಗಳೇ ಇಲ್ಲ. ಅಟೆನ್‌ಬರೋ ಸಾಕ್ಷ್ಯಚಿತ್ರವೆಂದರೆ ಅದೊಂದು ಸುಂದರ ದೃಶ್ಯಕಾವ್ಯ. ಓದುಗರ ಮನಸ್ಸನ್ನು ಆಳವಾಗಿ ತಟ್ಟುವಂತೆ ವರ್ಣಿಸುವ ಕಲೆ ಅಟೆನ್‌ಬರೋ ಅವರಿಗೆ ಕರಗತ. ಒಂದು ಜೀವಿಯ ಜೀವನದ ವಿವಿಧ ಹಂತಗಳಲ್ಲಿ ಜರುಗುವ ಘಟನಾವಳಿಗಳನ್ನು ಅವು ನಮ್ಮ ಕಣ್ಣಮುಂದೆಯೇ ನಡೆಯುತ್ತಿವೆಯೇನೋ ಎಂಬ ಭ್ರಮೆ ಮೂಡಿಸುವಂತೆ ವರ್ಣಿಸುತ್ತಾರೆ. ಹಿಮಕರಡಿಯೊಂದು ಸೀಲ್ ಗಳನ್ನು ಬೇಟೆಯಾಡಲು ವಿಫಲವಾಗಿ ಆಹಾರವಿಲ್ಲದೆ ಹಸಿವಿನಿಂದ ದುರ್ಬಲವಾಗಿ ಸಾವನ್ನು ಎದುರು ನೋಡುತ್ತ ಬಿದ್ದಿರುವಾಗ “ಅನೇಬಲ್ ಟು ಫೀಡ್, ದಿಸ್ ಪೋಲಾರ್ ಬೇರ್ ವಿಲ್ ನಾಟ್ ಸರ್ವೈವ್” (ಆಹಾರ ತಿನ್ನಲಾಗದ ಈ ಹಿಮಕರಡಿ ಬದುಕುವುದಿಲ್ಲ”) ಎಂದು ಆತ ವರ್ಣಿಸುತ್ತಿರುವಾಗ ನೋಡುಗರಿಗೆ ಅರಿವಿಲ್ಲದಂತೆಯೇ ಕಣ್ತುಂಬಿ ಬರುತ್ತದೆ. ಹಾಗೆಯೇ ಆಫ್ರಿಕದ ಹುಲ್ಲುಬಯಲಿನಲ್ಲಿ ಚಿರತೆಯ ಮರಿಯೊಂದು ಕಿರುಬಗಳ ದಾಳಿಗೆ ತುತ್ತಾಗಿ ಸೊಂಟ ಮುರಿದುಕೊಂಡು ಬಿದ್ದಿರುವಾಗ ತಾಯಿ ಚಿರತೆ ಹತ್ತಿರ ಬಂದು ಅಸಹಾಯಕತೆಯಿಂದ ನೋಡುವುದನ್ನು ಆತ ವರ್ಣಿಸುವಾಗಲೂ ಅದೇ ರೀತಿ ಹೃದಯ ಭಾರವಾಗುತ್ತದೆ. ಆಫ್ರಿಕದ ಮರುಭೂಮಿಯಲ್ಲಿ ಆನೆಮರಿಯೊಂದು ನೀರು, ಆಹಾರವಿಲ್ಲದೆ ದುರ್ಬಲವಾಗಿ ಕುಸಿದು ಬಿದ್ದಿದ್ದಾಗ ತಾಯಿ ಅದನ್ನು ಎತ್ತಲು ಯತ್ನಿಸುವ ದೃಶ್ಯವೂ ಮನಮಿಡಿಯುತ್ತದೆ. ಆ ವರ್ಣನೆಯನ್ನು ಅಟೆನ್‌ಬರೋ ಮಾತುಗಳಲ್ಲೇ ಕೇಳಬೇಕು. ಪ್ರಕೃತಿಯ ವರ್ಣನೆಯಲ್ಲಿ ಆತನನ್ನು ಮೀರಿಸುವ ಮತ್ತೊಬ್ಬ ಇಲ್ಲ. 
     ಅಟೆನ್‌ಬರೋ ಅವರ “ಲೈಫ್” ಸರಣಿಯ ಎಲ್ಲ ಸಾಕ್ಷ್ಯಚಿತ್ರಗಳನ್ನು ನೋಡಿದರೆ ಈ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತಿಲ್ಲದ ನೂರಾರು ಪ್ರಾಣಿಗಳು ಅದರಲ್ಲಿವೆ ಎಂದರೆ ತಪ್ಪಾಗಲಾರದು. ನೆಲದ ಮೇಲೆ ಪ್ರತಿನಿತ್ಯ ಕಾಣುವ ಅನೇಕ ಪ್ರಾಣಿಗಳ ಬಗೆಗೇ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಇನ್ನು ಅಟೆನ್‌ಬರೋ ಸಾಗರದಾಳದಿಂದ ಹುಡುಕಿ ತೆಗೆದಿರುವ ಸಾವಿರಾರು ವೈವಿಧ್ಯಮಯ ಜೀವಿಗಳನ್ನು ಗಮನಿಸಿದರೆ ಅಂಥ ಜೀವಿಗಳ ಬಗೆಗೆ ಗೊತ್ತಿರುವವರ ಸಂಖ್ಯೆ ವಿರಳಾತಿವಿರಳ ಎಂಬುದರಲ್ಲಿ ಅನುಮಾನವೇ ಉಳಿಯುವುದಿಲ್ಲ. ಬಿಚ್ಚಿಟ್ಟ ಛತ್ರಿಗಳಂತಿರುವ ಅಂಬಲಿಮೀನುಗಳು, ತನ್ನ ಮೊಟ್ಟೆಗಳ ಸಂರಕ್ಷಣೆಗಾಗಿ ತನ್ನ ಜೀವವನ್ನೇ ತ್ಯಾಗ ಮಾಡುವ ಅಷ್ಟಪದಿ ತಾಯಿ, ಒಂದೇ ತುತ್ತಿನಲ್ಲಿ ಕೆಜಿಗಟ್ಟಲೆ ಮೀನುಗಳನ್ನು ನುಂಗುವ ತಿಮಿಂಗಿಲಗಳು ಇತ್ಯಾದಿ ಜೀವಿಗಳನ್ನೊಳಗೊಂಡ ರಮ್ಯಲೋಕವೊಂದನ್ನು ನಮ್ಮ ಕಣ್ಣೆದುರು ತೆರೆದಿಡುತ್ತಾರೆ ಅಟೆನ್ ಬರೋ. 
೧೯೨೬ರ ಮೇ ೮ರಂದು ಜನಿಸಿದ ಡೇವಿಡ್ ಅಟೆನ್‌ಬರೋ ಅವರಿಗೆ ಚಿಕ್ಕಂದಿನಿಂದಲೇ ವನ್ಯಜೀವಿಗಳ ಬಗೆಗೆ ಅಪಾರ ಆಸಕ್ತಿ ಇತ್ತು. ಪ್ರಾಚೀನ ಜೀವಿಗಳ ಪಳೆಯುಳಿಕೆಗಳ ಸಂಗ್ರಹದಲ್ಲಿ ಅವರಿಗೆ ಅಪಾರ ಆಸಕ್ತಿಯಿತ್ತು. ಅದೇ ಆಸಕ್ತಿ ಬೆಳೆದು ಹೆಮ್ಮರವಾಯಿತು. ಲೀಸೆಸ್ಟರ್‌ನ ಯೂನಿವರ್ಸಿಟಿ ಕಾಲೇಜಿನಲ್ಲಿ ಡೇವಿಡ್‌ನ ಅಪ್ಪ ಫ್ರೆಡರಿಕ್ ಪ್ರಿನ್ಸಿಪಾಲರಾಗಿದ್ದರು. ಅಲ್ಲೇ ಡೇವಿಡ್ ಬೆಳೆದ. ಅಲ್ಲಿಂದಲೇ ಆತನ ಆಸಕ್ತಿಗೂ ಹೊಸ ಆಯಾಮ ಸಿಕ್ಕಿತು. ೧೯೩೬ರಲ್ಲಿ ಡೇವಿಡ್ ಇನ್ನೂ ಹತ್ತು ವರ್ಷದವನಾಗಿದ್ದಾಗಲೇ ಅವನ ಜೀವನದ ದಿಕ್ಕನ್ನೇ ಬದಲಾಯಿಸಿದ ಘಟನೆ ಸಂಭವಿಸಿತು. “ಗ್ರೇ ಔಲ್” ಎಂದೇ ಹೆಸರಾಗಿದ್ದ ಆರ್ಚಿಬಾಲ್ಡ್ ಬೆಲನಿಯ ಉಪನ್ಯಾಸವನ್ನು ಡೇವಿಡ್ ಮತ್ತು ರಿಚರ್ಡ್ ಕೇಳಿದರು. ಅಮೆರಿಕದಲ್ಲಿ ನದಿಗಳಿಗೆ ಅಣೆಕಟ್ಟು ಕಟ್ಟುವ ಬೀವರ್ ಎಂಬ ಒಂದು ಜಾತಿಯ ಪ್ರಾಣಿಯ ಸಂರಕ್ಷಣೆಯ ಬಗೆಗೆ ಆತ ಉಪನ್ಯಾಸ ನೀಡಿದ್ದ. ಅದರ ಪ್ರಭಾವ ಡೇವಿಡ್‌ನ ಮೇಲೆ ಗಾಢವಾಗಿ ಆಯಿತು. ಅಂದಿನಿಂದಲೇ ಆತನ ಜೀವನ ಹೊಸ ದಿಕ್ಕಿನತ್ತ ತೆರೆದುಕೊಂಡಿತೆನ್ನಬಹುದು. 
     ೧೯೫೦ರಲ್ಲಿ ಜೇನ್ ಎಲಿಜಬೆತ್‌ಳನ್ನು ವಿವಾಹವಾದ ಅಟೆನ್‌ಬರೋಗೆ ಇಬ್ಬರು ಮಕ್ಕಳು. ರಾಬರ್ಟ್ ಮತ್ತು ಸೂಸಾನ್. ಮೂರು ತಿಂಗಳ ತರಬೇತಿಯ ನಂತರ ೧೯೫೨ರಲ್ಲಿ ಡೇವಿಡ್ ಬಿಬಿಸಿಯಲ್ಲಿ ಪೂರ್ಣಾವಧಿಗೆ ಸೇರಿದ. ನಂತರದ್ದು ಇತಿಹಾಸ. ಕಳೆದ ಅರವತ್ಮೂರು ವರ್ಷಗಳಿಂದ ನಾವು ವಾಸಿಸುತ್ತಿರುವ ಈ ಭೂಮಿ ಮತ್ತು ಅದರ ಮೇಲೆ ಬದುಕುತ್ತಿರುವ ಲಕ್ಷಾಂತರ ಜೀವಿ ಪ್ರಭೇದಗಳ ಬಗೆಗೆ ವಿವರಿಸುತ್ತ ಭೂಮಿಯ ಅಂಗುಲ ಅಂಗುಲವನ್ನೂ ಸುತ್ತಿದ. ಇಂದು ಪ್ರಕೃತಿ ಪ್ರೇಮಿಗಳಿಗೆ ಡೇವಿಡ್ ಅಟೆನ್‌ಬರೋ ಎಂದರೆ ಆರಾಧ್ಯದೈವ! ಆ ಹೆಸರು ಕೇಳಿದರೇ ಮೈಯೆಲ್ಲ ಪುಳಕ!! ಅನಿಮಲ್ ಪ್ಲಾನೆಟ್, ನ್ಯಾಶನಲ್ ಜಿಯಾಗ್ರಫಿಕ್ ಚಾನೆಲ್ ಗಳಿಗಿಂತಲೂ ಅಟೆನ್‌ಬರೋನ ಬಿಬಿಸಿ ಚಾನೆಲ್ ಪ್ರಸಿದ್ಧವಾಗಿದೆ. 
ಅಟೆನ್‌ಬರೋ “ದ ಪ್ಯಾಟರ್ನ್ ಆಫ್ ಅನಿಮಲ್ಸ್” ಎಂಬ ಸರಣಿಯನ್ನು ನಿರೂಪಿಸುವುದರೊಂದಿಗೆ ಪ್ರಾಣಿ ಪ್ರಪಂಚಕ್ಕೆ ಮೊದಲು ಕಾಲಿಡುತ್ತಾನೆ. ಇನ್ನೊಬ್ಬ ನಿಸರ್ಗಪ್ರೇಮಿ ಜೂಲಿಯನ್ ಹಕ್ಸ್ಲೀ ಎಂಬಾತನ ಜೊತೆ ಸೇರಿ ತಯಾರಿಸಿದ ಲಂಡನ್ನಿನ ಮೃಗಾಲಯದ ಪ್ರಾಣಿಗಳ ಬಗೆಗೆ ರೂಪಿಸಲಾದ ಈ ಸಾಕ್ಷ÷್ಯಚಿತ್ರದಲ್ಲಿ ಪ್ರಾಣಿಗಳ ಛದ್ಮವೇಷ ಮತ್ತು ಪ್ರಣಯದ ಸಂಗತಿಗಳನ್ನು ಸೊಗಸಾಗಿ ನಿರೂಪಿಸಲಾಗಿತ್ತು. ಈ ಸರಣಿ ಚಿತ್ರಗಳು ಅಟೆನ್‌ಬರೋಗೆ ದೊಡ್ಡಮಟ್ಟದ ಖ್ಯಾತಿಯನ್ನು ತಂದುಕೊಟ್ಟವು. ಅಲ್ಲಿ ಆ ಮೃಗಾಲಯದ ಕ್ಯೂರೇಟರ್ ಆಗಿದ್ದ ಜಾಕ್ ಲೆಸ್ಟರ್ ನನ್ನು ಭೇಟಿಯಾದ ಅಟೆನ್ ಬರೋ ಅವನೊಂದಿಗೆ ಸೇರಿ “ಝೂ ಕ್ವೆಸ್ಟ್” ಎಂಬ ಹೊಸ ಕಾರ್ಯಕ್ರಮವನ್ನು ನಿರೂಪಿಸಿದರು. ಅಟೆನ್ ಬರೋನ ಖ್ಯಾತಿ ಉತ್ತುಂಗಕ್ಕೇರಿತು. 
೬೦ರ ದಶಕದ ಅವಧಿಗೆ ಅಟೆನ್ ಬರೋ ಬಿಬಿಸಿಯ ಪೂರ್ಣಾವಧಿ ಹುದ್ದೆಗೆ ರಾಜೀನಾಮೆ ನೀಡಿದ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡುವ ಉದ್ದೇಶದಿಂದ ಆತ ರಾಜೀನಾಮೆ ಸಲ್ಲಿಸಿದ್ದ. ಆದರೆ ಅವನ ಬೆಲೆ ಎಷ್ಟೆಂದು ತಿಳಿದಿದ್ದ ಬಿಬಿಸಿ ಯಾವುದೇ ಸಂದರ್ಭದಲ್ಲಿ ಸಾಕ್ಷ್ಯಚಿತ್ರಗಳನ್ನು ತಯಾರಿಸುವ ಅವಕಾಶವನ್ನು ಅವನಿಗೆ ನೀಡಿತು. ೧೯೬೯ರಲ್ಲಿ ಟಾಂಜಾನಿಯಾದಲ್ಲಿ ಆನೆಗಳ ಬಗೆಗೆ ಸಾಕ್ಷ್ಯಚಿತ್ರ ತಯಾರಿಸಿದ. ಅದಾದ ನಂತರ ಆತ ಹಿಂತಿರುಗಿ ನೋಡಿದ್ದೇ ಇಲ್ಲ. 
     ಡೇವಿಡ್ ಅಟೆನ್‌ಬರೋ ಅವರ ಸಾಕ್ಷ್ಯಚಿತ್ರಗಳನ್ನು ನೋಡುವಾಗ ಅವಕ್ಕೆ ನೂರಾರು ಆಯಾಮಗಳಿವೆ ಎಂಬುದನ್ನು ಅರ್ಥೈಸಿಕೊಳ್ಳಬಹುದು. ಅವುಗಳನ್ನು ಕೇವಲ ಮನರಂಜನೆಯ ದೃಷ್ಟಿಯಿಂದ ನೋಡುವವರಿಗೂ ಧಾರಾಳ ಮನರಂಜನೆ ಸಿಗುತ್ತದೆ. ಜೊತೆಗೆ ಜ್ಞಾನ ಸಂಪಾದನೆಯ ದೃಷ್ಟಿಯಿಂದ ನೋಡುವವರಿಗೂ ನಿರಾಶೆಯಾಗುವುದಿಲ್ಲ. ಸಾಮಾಜಿಕ, ಆರ್ಥಿಕ ಮತ್ತು ಮಾನವೀಯ ನೆಲೆಗಟ್ಟಿನಿಂದಲೂ ಈ ಸಾಕ್ಷ್ಯಚಿತ್ರಗಳು ತುಂಬಾ ಪ್ರಮುಖವಾಗಿವೆ. ಅವರ ಜೀವನೋತ್ಸಾಹ ಎಂಥವರನ್ನೂ ಅಚ್ಚರಿಗೊಳಿಸದಿರದು. ಪ್ರಕೃತಿಯ ವಿಸ್ಮಯಗಳ ಕುರಿತು ವಿವರಿಸುವುದರೊಂದಿಗೇ ನಾವು ಪ್ರಕೃತಿಯನ್ನು ಹೇಗೆ ಶೋಷಿಸುತ್ತಿದ್ದೇವೆಂದು ವಿವರಿಸುತ್ತ ಮುಂದೊಂದು ದಿನ ನಮಗೆ ಎದುರಾಗಲಿರುವ ಭೀಕರ ದಿನಗಳ ಬಗೆಗೆ ಎಚ್ಚರಿಕೆಯನ್ನೂ ನೀಡುತ್ತಾರೆ ಅಟೆನ್‌ಬರೋ. ಯಾವುದನ್ನೂ ಪೂರ್ವಾಗ್ರಹ ಪೀಡಿತ ದೃಷ್ಟಿಯಿಂದ ನೋಡದೆ ಇದ್ದದ್ದನ್ನು ಇದ್ದಂತೆ ಹೇಳುವುದು ಅವರ ಪದ್ಧತಿ.
     ಅವರಿಗೆ ವಿಶ್ವವಿಖ್ಯಾತಿಯನ್ನು ತಂದುಕೊಟ್ಟ ಸರಣಿ ಎಂದರೆ “ಲೈಫ್” ಸರಣಿ. ಬಹುಶಃ ಈ ಸರಣಿಯಲ್ಲಿ ಭೂಮಿಯ ಮೇಲೆ ಇಂದು ವಾಸವಾಗಿರುವ ಎಲ್ಲ ವರ್ಗಗಳ ಜೀವಿಗಳ ಬಗೆಗೂ ಪ್ರಸ್ತಾಪಿಸಿದ್ದಾರೆ. ಸಸ್ತನಿಗಳು, ಉರಗ ಮತ್ತು ಉಭಯವಾಸಿಗಳು, ಪಕ್ಷಿಗಳು, ಮೀನುಗಳು, ಕೀಟಗಳು ಹೀಗೆ ಪ್ರತಿ ಜೀವಿವರ್ಗದ ಬಗ್ಗೆ ಪ್ರತ್ಯೇಕವಾಗಿ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಕೆಸರು ಜಿಗಣಿ (ಮಡ್ ಸ್ಕಿಪ್ಪರ್) ಎಂದು ಕರೆಯಲ್ಪಡುವ ಒಂದು ಜಾತಿಯ ಮೀನಿನ ಬಗೆಗೆ ವಿವರಿಸುತ್ತ ಅಟೆನ್‌ಬರೋ ತನ್ನ ಸಂತತಿಯನ್ನು ಕಾಪಾಡುವುದಕ್ಕಾಗಿ ಈ ಪುಟ್ಟ ಮೀನು ಮಾಡುವ ಹರಸಾಹಸವನ್ನು ವಿವರಿಸುವಾಗ ಎಂಥವರಿಗೂ ಆ ಮೀನಿನ ಬಗೆಗೆ ಗೌರವ ಉಂಟಾಗದಿರದು. ಕೆಸರಿನಿಂದ ಕೂಡಿದ ಜೌಗು ಪ್ರದೇಶದಲ್ಲಿ ಕುಳಿಗಳನ್ನು ತೋಡಿ ಅದರೊಳಗೆ ಮೊಟ್ಟೆ ಇಡುವ ಈ ಮೀನು ತನ್ನ ಮೊಟ್ಟೆಗಳಿಗೋಸ್ಕರ ಪ್ರತಿದಿನ ನೂರಾರು ಬಾರಿ ಆಮ್ಲಜನಕಭರಿತ ನೀರನ್ನು ತನ್ನ ಬಾಯಿಯಲ್ಲಿ ತುಂಬಿಕೊಂಡು ಬಂದು ತನ್ನ ಮೊಟ್ಟೆಗಳ ಮೇಲೆ ಎರಚುವ ಮೂಲಕ ಅವುಗಳ ಉಸಿರಾಟಕ್ಕೆ ಅನುವು ಮಾಡಿಕೊಡುತ್ತದೆ. ಹಾಗೆಯೇ ಅಮೆಜಾನಿನ ಮಳೆಕಾಡುಗಳಲ್ಲಿ ವಾಸಿಸುವ ಚಿಕ್ಕ ಕಪ್ಪೆಯೊಂದು ಮಹಾವೃಕ್ಷಗಳ ಮೇಲೆ ಬ್ರೋಮಿಲಿಯಾಡ್ (ನಮ್ಮ ಅನಾನಸ್ ಗಿಡವನ್ನು ಹೋಲುವ ಗಿಡ) ಗಿಡದ ಎಲೆಗಳ ನಡುವೆ ಸಂಗ್ರಹವಾಗಿರುವ ನೀರಿನಲ್ಲಿ ಮೊಟ್ಟೆಯಿಡುತ್ತದೆ. ಆದರೆ ಅದರ ಕೆಲಸ ಅಷ್ಟಕ್ಕೇ ಮುಗಿಯುವುದಿಲ್ಲ. ಅನೇಕ ಮರಗಳಲ್ಲಿ ಒಂದೊಂದು ಮೊಟ್ಟೆ ಇಡುವ ಆ ಕಪ್ಪೆ ಮತ್ತೆ ಪ್ರತಿ ಮರಕ್ಕೂ ಮ್ಯಾರಥಾನ್ ಪಯಣ ಆರಂಬಿಸುತ್ತದೆ. ಪ್ರತಿ ಮರಿಗೂ ಆಹಾರ ಒದಗಿಸುವ ಸಲುವಾಗಿ ತನ್ನದೇ ಫಲಿತವಾಗದ ಮೊಟ್ಟೆಯೊಂದನ್ನು ಆ ನೀರಿನಲ್ಲಿ ಉದುರಿಸುತ್ತದೆ. ತನ್ನ ಮರಿಯ ಮೇಲಿನ ಕಾಳಜಿಯಿಂದ ಆ ಪುಟ್ಟ ಕಪ್ಪೆ ಪಡುವ ಹರಸಾಹಸವನ್ನು ಕಂಡಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ. 
     ಏನಾದರೂ ಕೆಟ್ಟ ಕೆಲಸ ಮಾಡಿದವರನ್ನು “ಮಣ್ಣು ತಿನ್ನುವ ಕೆಲಸ ಮಾಡಿದೆಯಲ್ಲೋ” ಎಂದು ಬೈಯುವುದಿದೆ. ಆದರೆ ಮಣ್ಣು ತಿನ್ನುವುದು ಎಷ್ಟೋ ಜೀವಿಗಳಿಗೆ ಅತ್ಯಂತ ಅಗತ್ಯ ಎಂದರೆ ನಂಬುತ್ತೀರಾ? ಸೇವಿಸುವ ಆಹಾರದಲ್ಲಿರುವ ಕೆಲವು ವಿಷಕಾರಿ ಅಂಶಗಳ ಪ್ರಭಾವವನ್ನು ನಿಷ್ಕ್ರಿಯಗೊಳಿಸಲು ಹಾಗೂ ಕೆಲವು ಅತ್ಯಗತ್ಯ ಖನಿಜ ಹಾಗೂ ಲವಣಗಳನ್ನು ಪಡೆದುಕೊಳ್ಳಲು ಮಣ್ಣು ತಿನ್ನುವ ಅಭ್ಯಾಸ ಕೆಲವು ಪ್ರಾಣಿಗಳಿಗಿದೆ. ಆಫ್ರಿಕದಲ್ಲಿ ಕೆಲವು ಗುಹೆಗಳು ಪ್ರಾಣಿಗಳ ಖಾಯಂ ಮಣ್ಣು ತಿನ್ನುವ ಸ್ಥಳಗಳಾಗಿವೆ. ಚಿಕ್ಕ ಇಂಪಾಲಾಗಳಿಂದ ಹಿಡಿದು ಆನೆಗಳವರೆಗೆ ಬೇರೆ ಬೇರೆ ಪ್ರಾಣಿಗಳು ಅಲ್ಲಿ ಬಂದು ಮಣ್ಣು ತಿನ್ನುತ್ತವೆ. ಮೊದಲಿಗೆ ಆ ಗುಹೆಯ ಒಳಗೋಡೆಗಳ ಮೇಲೆ ಇರುವ ಗುರುತುಗಳನ್ನು ನೋಡಿ ಅದು ಆದಿಮಾನವರಿಂದ ಆಗಿದ್ದಿರಬೇಕೆಂದು ಭಾವಿಸಿದ್ದರಂತೆ. ಆದರೆ ಆ ಮೇಲೆ ತಿಳಿಯಿತು ಅದು ಆನೆಗಳು ತಮ್ಮ ದಂತಗಳಿಂದ ಗೋಡೆಯ ಮಣ್ಣನ್ನು ಕೆರೆದು ಕೆರೆದು ಮಾಡಿದ ಗುರುತುಗಳು ಎಂದು. 
     ಹವಾಯಿ ದ್ವೀಪಗಳಲ್ಲಿ ಒಂದು ಜಾತಿಯ ಪುಟಾಣಿ ಮೀನಿದೆ. ಗೋಬಿ ಎಂದು ಕರೆಯಲ್ಪಡುವ ಈ ಮೀನು ನಮ್ಮ ಹೆಬ್ಬೆರಳಿಗಿಂತ ಚಿಕ್ಕದು. ಈ ಮೀನು ಸಾಗರದ ನೀರಿನಲ್ಲಿ ಬದುಕುತ್ತದೆ. ಆದರೆ ಅಲ್ಲಿನ ವಿಪ್ಲವಗಳಿಂದ ಬೇಸತ್ತು ಮೊಟ್ಟೆಯಿಡಲು ಸಿಹಿನೀರನ್ನು ಹುಡುಕಿಕೊಂಡು ಹೊರಡುತ್ತವೆ. ಅದು ಬಹುಶಃ ಗೋಬಿಗಳ ಜೀವನದ ಅತಿ ಕಠಿಣವಾದ ಪಯಣ. ಭೋರ್ಗರೆಯುತ್ತ ಹರಿಯುವ ನದಿ ಕೆಲವೆಡೆ ಜಲಪಾತವಾಗಿ ರಭಸದಿಂದ ಧುಮ್ಮಿಕ್ಕುತ್ತದೆ. ಆ ಜಲಪಾತದ ವಿರುದ್ದ ಈಜುತ್ತ ಮೇಲೆ ಹತ್ತುವ ಸವಾಲು ಅವುಗಳ ಎದುರಿಗೆ ಇರುತ್ತದೆ. ಅರ್ಧಕ್ಕೂ ಹೆಚ್ಚು ಗೋಬಿಗಳು ನೀರಿನ ಹೊಡೆತ ತಾಳಲಾಗದೆ ಕೆಳಕ್ಕೆ ಬಿದ್ದು ಸಾಯುತ್ತವೆ. ಆದರೆ ಆ ಅಡೆತಡೆಗಳನ್ನೂ ನಿವಾರಿಸಿ ಮೇಲೆ ಹತ್ತುವ ಮೀನುಗಳಿಗೆ ಪ್ರಶಾಂತವಾದ ನೀರು ಸಿಗುತ್ತದೆ. ಅಲ್ಲಿ ಅವು ಮೊಟ್ಟೆಯಿಡುತ್ತವೆ. ಮೊಟ್ಟೆ ಒಡೆದು ಹೊರಬಂದ ಮೀನುಗಳು ಸಮುದ್ರ ಸೇರುತ್ತವೆ. ಮತ್ತೆ ಅವು ಪ್ರೌಢಾವಸ್ಥೆಗೆ ಬಂದ ಮೇಲೆ ಮೊಟ್ಟೆಯಿಡಲು ಮರಳಿ ನದಿಯತ್ತ ಪಯಣ ಬೆಳೆಸುತ್ತವೆ. ಈ ಆವರ್ತನ ಹೀಗೆಯೇ ಸಾಗುತ್ತದೆ. ಈ ಕಥೆಯನ್ನು ನಾನು ಹೇಳಿದರೆ ನಿಮಗೇನೂ ಅನ್ನಿಸದೆ ಇರಬಹುದು. ಆದರೆ ಆ ವರ್ಣನೆಯನ್ನು ಅಟೆನ್ ಬರೋ ಮಾತುಗಳಲ್ಲಿ ಕೇಳಿದರೆ ಅದು ಹೃದಯ ತಟ್ಟದಿರದು. ಇದನ್ನೆಲ್ಲ ತಿಳಿಯಬೇಕೆಂದರೆ ಅವರ “ಫಿಶ್” ಎಂಬ ಸಾಕ್ಷ್ಯಚಿತ್ರ ನೋಡಿ. 
     ನೀಲಿ ತಿಮಿಂಗಿಲದ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಅದರ ದೈತ್ಯಗಾತ್ರದ ಬಗೆಗೂ ನೂರಾರು ದಂತಕಥೆಗಳು ಎಲ್ಲೆಡೆ ಹಬ್ಬಿವೆ. ಆದರೆ ನೀಲಿ ತಿಮಿಂಗಿಲ ನಿಜಕ್ಕೂ ಎಷ್ಟು ದೊಡ್ಡದಿದೆ? ದೈತ್ಯ ಗಾತ್ರವೊಂದೇ ಅದರ ವೈಶಿಷ್ಟ್ಯವೇ? ನೀರಿನಲ್ಲಿ ಶಾಶ್ವತವಾಗಿ ವಾಸಿಸುವ ಸಸ್ತನಿಗಳು ಅಲ್ಲಿನ ಸವಾಲುಗಳನ್ನು ಹೇಗೆ ಎದುರಿಸುತ್ತವೆ? ನೀರಿನಲ್ಲಿ ವಾಸಿಸಿದರೂ ಉಸಿರಾಡಲು ಗಾಳಿಯನ್ನೇ ಅವಲಂಬಿಸಿರುವ ಸಸ್ತನಿಗಳು ಅದನ್ನು ಹೇಗೆ ನಿಭಾಯಿಸುತ್ತವೆ? ಅದಕ್ಕಾಗಿ ಅವುಗಳ ದೇಹದಲ್ಲಿ ಆಗಿರುವ ಮಾರ್ಪಾಡುಗಳೇನು? ನೀರಿನಲ್ಲಿ ವಂಶಾಭಿವೃದ್ಧಿ ಮಾಡುವಾಗ ಎದುರಾಗುವ ಸವಾಲುಗಳೇನು? ಅದನ್ನು ಅವು ಹೇಗೆ ನಿಭಾಯಿಸುತ್ತವೆ? ನೀರಿನಾಳದಲ್ಲಿ ಪರಸ್ಪರ ಸಂಭಾಷಣೆ ನಡೆಸುವುದು ಹೇಗೆ? ಡಾಲ್ಫಿನ್‌ಗಳು ಬೇಟೆಯಾಡುವಾಗ ಹೇಗೆ ಸೋನಾರ್ ತಂತ್ರಜ್ಞಾನವನ್ನು ಬಳಸುತ್ತವೆ? ಅವುಗಳ ಬುದ್ಧಿಮತ್ತೆ ಏನು? ತಿಮಿಂಗಿಲಗಳು ಭೂವಾಸಿ ಪ್ರಾಣಿಗಳಿಗಿಂತ ಬೃಹದ್ಗಾತ್ರದಲ್ಲಿ ಬೆಳೆಯಲು ಕಾರಣವೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಅಟೆನ್‌ಬರೋ ಅವರ “ರಿಟರ್ನ್ ಟು ದ ವಾಟರ್” ಸಾಕ್ಷ್ಯಚಿತ್ರ ನೋಡಿ. 
     ಮಾಂಸಾಹಾರಿ ಪಕ್ಷಿಗಳು ತಮ್ಮ ಬಲಿಯನ್ನು ಹೇಗೆ ಗುರುತಿಸುತ್ತವೆ? ನೂರಾರು ಅಡಿ ಎತ್ತರದಲ್ಲಿ ಹಾರುತ್ತಿರುವ ಹದ್ದು, ಗಿಡುಗಗಳು ತಮ್ಮ ಬಲಿಯನ್ನು ಗುರುತಿಸುವುದು ಹೇಗೆ? ನೆಲದ ಮೇಲೆ ಓಡಾಡುತ್ತಿರುವ ಚಿಕ್ಕ ಇಲಿಯನ್ನೂ ಕೂಡ ಅಷ್ಟು ಎತ್ತರದಿಂದ ಕರಾರುವಾಕ್ಕಾಗಿ ಗುರುತಿಸಲು ಅವಕ್ಕೆ ಹೇಗೆ ಸಾಧ್ಯವಾಗುತ್ತದೆ? ಹದ್ದುಗಳ ದೃಷ್ಟಿಗೂ ಗೂಬೆಗಳ ದೃಷ್ಟಿಗೂ ಇರುವ ವ್ಯತ್ಯಾಸವೇನು? ಇತ್ತೀಚೆಗೆ ಮಾಂಸಾಹಾರ ರೂಢಿಸಿಕೊಂಡ ಪಕ್ಷಿಗಳಿಗೂ ತುಂಬಾ ಹಿಂದಿನಿAದ ಮಾಂಸಾಹಾರವನ್ನು ರೂಢಿಸಿಕೊಂಡ ಪಕ್ಷಿಗಳಿಗೂ ಇರುವ ವ್ಯತ್ಯಾಸವೇನು? ಮಂಗಗಳನ್ನೂ ಸಹ ಬೇಟೆಯಾಡುವ ಆಫ್ರಿಕದ ಬಲಿಷ್ಟ ಗರುಡ ಯಾವುದು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಅಟೆನ್‌ಬರೋ ಅವರ “ಮೀಟ್ ಈಟರ್ಸ್” ನೋಡಿ. 
     ಪ್ರಾಣಿಗಳ ಚಟುವಟಿಕೆಯಿಂದ ಕೂಡಿದ ಜೀವನಕ್ಕೆ ಹೋಲಿಸಿದರೆ ತಟಸ್ಥ ಮತ್ತು ವಿಶ್ರಾಂತ ಎನಿಸುವ ಸಸ್ಯಗಳ ಜೀವನ ಕೂಡ ಎಷ್ಟೊಂದು ಚಟುವಟಿಕೆಯಿಂದ ಕೂಡಿದೆ ಮತ್ತು ಪ್ರಾಣಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಸ್ಯಗಳೂ ಕೂಡ ಅನೇಕ ತಂತ್ರಗಳನ್ನು ಹೂಡುತ್ತವೆ ಎಂಬುದು ಎಷ್ಟು ಜನರಿಗೆ ಗೊತ್ತು? ಸಸ್ಯಗಳ ದಟ್ಟಣೆ ಯಾಕೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿದೆ? ಹುಲ್ಲುಗಾವಲು, ನಿತ್ಯಹರಿದ್ವರ್ಣ ಕಾಡುಗಳು ಮತ್ತು ಎಲೆ ಉದುರಿಸುವ ಕಾಡುಗಳಿಗಿರುವ ವ್ಯತ್ಯಾಸಗಳೇನು ಮತ್ತು ಆ ಕಾಡುಗಳಿಗಷ್ಟೇ ಸೀಮಿತವಾಗಿರುವ ವಿಶಿಷ್ಟ ಜೀವಿಪ್ರಭೇದಗಳು ಯಾವುವು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಅವರ “ಪ್ರೈವೇಟ್ ಲೈಫ್ ಆಫ್ ಪ್ಲಾಂಟ್ಸ್” ಓದಿ. 
     ಭೂಮಿಯ ಮೇಲ್ಮೈಯ ಶೇಕಡಾ ೭೧ರಷ್ಟನ್ನು ಸಮುದ್ರಗಳು ಆವರಿಸಿಕೊಂಡಿವೆ. ಆದ್ದರಿಂದ ಸಹಜವಾಗಿಯೇ ನೆಲದ ಮೇಲೆ ವಾಸಿಸುವುದಕ್ಕಿಂತ ಹೆಚ್ಚಿನ ಜೀವಿಪ್ರಭೇದಗಳು ಕಡಲನ್ನೇ ಆಶ್ರಯಿಸಿ ಬದುಕುತ್ತಿರಬೇಕು. ನೆಲದ ಮೇಲೆ ವಾಸಿಸುವ ಯಾವುದೇ ರೀತಿಯ ಜೀವಿಪ್ರಭೇದವನ್ನೇ ತೆಗೆದುಕೊಂಡರೂ ಅದರ ಕೆಲವಾದರೂ ಪ್ರತಿನಿಧಿಗಳು ಸಾಗರದಲ್ಲೂ ವಾಸಿಸುವುದನ್ನು ನಾವು ಕಾಣಬಹುದು. ಕಡಲ ನೀರೇಕೆ ಜೀವಿಗಳಿಗೆ ಅಷ್ಟೊಂದು ಪ್ರಶಸ್ತ? ಸಾಗರದಲ್ಲಿ ಎಷ್ಟು ಆಳದವರೆಗೆ ಜೀವಿಗಳಿರುತ್ತವೆ? ತೀವ್ರವಾದ ಒತ್ತಡದಿಂದ ಕೂಡಿದ, ಸೂರ್ಯನ ಬೆಳಕೇ ಇಲ್ಲದ, ಮೈಕೊರೆಯುವ ಚಳಿಯ ಸಾಗರದಾಳದಲ್ಲಿ ಪ್ರಾಣಿಗಳು ಹೇಗೆ ಬದುಕುತ್ತವೆ? ಈ ಎಲ್ಲ ವಿಷಯಗಳನ್ನು ತಿಳಿಯಬೇಕಿದ್ದರೆ ಅಟೆನ್‌ಬರೋ ಅವರ “ಬ್ಲೂ ಪ್ಲಾನೆಟ್” ಸರಣಿಯನ್ನು ನೋಡಿ. 
     ಭೂಮಿಯ ಮೇಲೆ ಶೀತರಕ್ತ ಪ್ರಾಣಿಗಳದ್ದೇ ಒಂದು ವಿಶೇಷ ವಿಧ. (ಶೀತರಕ್ತ ಎಂಬುದು ಅವುಗಳ ಸಮರ್ಪಕವಾದ ವ್ಯಾಖ್ಯೆ ಅಲ್ಲ, ಇರಲಿ). ಅವುಗಳನ್ನು ಶೀತರಕ್ತ ಪ್ರಾಣಿಗಳೆಂದು ಕರೆಯಲು ಅವುಗಳ ರಕ್ತ ತಣ್ಣಗಿರುತ್ತದೆ ಎಂಬುದು ಕಾರಣವಲ್ಲ. ತಣ್ಣನೆಯ ರಕ್ತ ಇಟ್ಟುಕೊಂಡು ಯಾವ ಪ್ರಾಣಿಯೂ ಬದುಕಲು ಸಾಧ್ಯವೂ ಇಲ್ಲ. ಆದರೆ ನಮ್ಮಂತೆ ಶರೀರದ ಚಟುವಟಿಕೆಗಳಿಗೆ ಅಗತ್ಯವಾದ ಶಾಖವನ್ನು ಆಹಾರದಿಂದ ಉತ್ಪಾದಿಸುವ ಶಕ್ತಿ ಅವುಗಳಿಗೆ ಇಲ್ಲ. ಅವು ನೇರವಾಗಿ ಸೂರ್ಯನಿಂದಲೇ ತಮಗೆ ಬೇಕಾದ ಶಾಖವನ್ನು ಪಡೆಯುತ್ತವೆ. ಮೊಸಳೆ, ಇಗುವಾನ ಇತ್ಯಾದಿ ಜೀವಿಗಳು ಬಿಸಿಲು ಕಾಯಿಸುವುದಕ್ಕೆ ಇದೇ ಕಾರಣ. ಆದ್ದರಿಂದಲೇ ಈ ಪ್ರಾಣಿಗಳಿಗೆ ಹವಾಮಾನದ ವೈಪರೀತ್ಯಗಳನ್ನು ತಡೆದುಕೊಳ್ಳುವ ಶಕ್ತಿ ಕಡಿಮೆ. ಉರಗಗಳು, ಉಭಯವಾಸಿಗಳು ಮತ್ತು ಮೀನುಗಳು ಭೂಮಿಯ ಮೇಲಿರುವ ಮೂರು ಪ್ರಮುಖ ಶೀತರಕ್ತ ಪ್ರಾಣಿಗಳ ಗುಂಪುಗಳು. ಇವುಗಳಲ್ಲಿ ಆಗಿರುವ ದೈಹಿಕ ಮಾರ್ಪಾಡುಗಳೇನು? ಶೀತರಕ್ತ ಪ್ರಾಣಿಗಳು ಯಾಕೆ ಬಿಸಿರಕ್ತದ ಪ್ರಾಣಿಗಳಿಗೆ ಹೋಲಿಸಿದರೆ ಕಡಿಮೆ ಚಟುವಟಿಕೆಯಿಂದ ಕೂಡಿರುತ್ತವೆ? ಯಾಕೆ ಕಡಿಮೆ ಆಹಾರ ಸೇವಿಸುತ್ತವೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಅವರ “ಲೈಫ್ ಇನ್ ಕೋಲ್ಡ್ ಬ್ಲಡ್” ನೋಡಿ. 
     ಭೂಮಿಯ ಮೇಲೆ ಮನುಷ್ಯ ಅವತರಿಸುವುದಕ್ಕಿಂತ ಮೊದಲು ಯಾವ ರೀತಿಯ ಜೀವಿಗಳು ಬದುಕಿದ್ದವು? ಲಕ್ಷಾಂತರ ವರ್ಷಗಳಿಂದ ವಿಕಾಸವಾಗುತ್ತ ಬಂದಿರುವ ಜೀವಿ ಪ್ರಭೇದಗಳು ಹೇಗೆ ತಮ್ಮ ಪರಿಸರಕ್ಕೆ ಹೊಂದಿಕೊಳ್ಳುವಂತೆ ಬದಲಾಗುತ್ತಿವೆ? ಅರವತ್ತೈದು ದಶಲಕ್ಷ ವರ್ಷಗಳ ಹಿಂದೆ ನಿರ್ನಾಮವಾದ ದೈತ್ಯೋರಗಗಳು ಶೀತರಕ್ತ ಪ್ರಾಣಿಗಳೇ ಆಗಿದ್ದವೇ ಅಥವಾ ಬಿಸಿರಕ್ತದ ಪ್ರಾಣಿಗಳಾಗಿದ್ದಿರಬಹುದಾದ ಸಾಧ್ಯತೆಗಳಿವೆಯೇ? ಅವು ವರ್ಣರಹಿತವಾಗಿದ್ದವೇ ಅಥವಾ ವರ್ಣರಂಜಿತವಾಗಿದ್ದವೇ? ಯಾಕೆ ಅವು ಆ ರೀತಿ ಭಾರೀ ಗಾತ್ರಕ್ಕೆ ಬೆಳೆದವು? ಆ ಭಾರೀ ಗಾತ್ರದ ಅನುಕೂಲ-ಅನಾನುಕೂಲಗಳೇನು? ಹೂಗಿಡಗಳ ಅಸ್ತಿತ್ವವೇ ಇರದ ಆ ಕಾಲದಲ್ಲಿ ಜೀರ್ಣಿಸಿಕೊಳ್ಳಲು ಅತ್ಯಂತ ಕಷ್ಟಕರವಾದ ಫರ್ನ್ ಗಿಡಗಳನ್ನು ಹೇಗೆ ಅವು ಜೀರ್ಣಿಸಿಕೊಳ್ಳುತ್ತಿದ್ದವು? ಇದನ್ನೆಲ್ಲ ತಿಳಿದುಕೊಳ್ಳಲು ಅವರ “ವ್ಯಾನಿಷ್ಡ್ ಲೈಫ್” ನೋಡಿದರೆ ಸಾಕು. 
     ಕಶೇರುಕ ಮತ್ತು ಅಕಶೇರುಕ ಎಂಬ ಸ್ಥೂಲವಾದ ವರ್ಗೀಕರಣವನ್ನು ಸಾಮಾನ್ಯವಾಗಿ ಎಲ್ಲರೂ ತಿಳಿದಿರುತ್ತಾರೆ. ಕೀಟಗಳು, ಜೇಡಗಳು, ಮೃದ್ವಂಗಿಗಳು, ಅಂಬಲಿಮೀನುಗಳು (ಇವುಗಳ ಹೆಸರಿನಲ್ಲಿ ಮೀನು ಇದ್ದರೂ ಇವು ಮೀನುಗಳಲ್ಲ), ಕಂಟಕಚರ್ಮಿಗಳು ಇತ್ಯಾದಿಗಳು ಬೆನ್ನೆಲುಬಿಲ್ಲದ ಜೀವಿಗಳು. ಇವೇ ಅಕಶೇರುಕಗಳು. ಈ ಜೀವಿಗಳಿಗೆ ನಮ್ಮಂತೆ ದೇಹದೊಳಗಿನಿಂದ ಬೆನ್ನೆಲುಬಿನ ಆಸರೆ ಇರುವುದಿಲ್ಲ. ಹಾಗಾಗಿ ಈ ಜೀವಿಗಳ ಗಾತ್ರಕ್ಕೆ ಒಂದು ಮಿತಿಯಿದೆ. ಅವು ಒಂದೋ ನೀರಿನ ಆಸರೆ ಇರುವ ಸಾಗರಗಳಲ್ಲಿರಬೇಕು, ಅಥವಾ ನೆಲದ ಮೇಲಿದ್ದರೆ ವಾಮನರೂಪಿಗಳಾಗಿರಬೇಕು. ಕ್ರಮೇಣ ಅಕಶೇರುಕಗಳಿಂದ ಕಶೇರುಕಗಳು ಅಭಿವೃದ್ಧಿ ಹೊಂದಿದ್ದು ಹೇಗೆ? ಈ ನಿಟ್ಟಿನಲ್ಲಿ ಮೊದಲ ಹಂತ ಯಾವುದು? ಬೆನ್ನೆಲುಬಿರುವ ಪ್ರಾಣಿಗಳಿಗೆ ಬೆನ್ನೆಲುಬಿಲ್ಲದ ಪ್ರಾಣಿಗಳಿಗಿಲ್ಲದ ಯಾವ ಪ್ರಯೋಜನಗಳು ಇವೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಅವರ “ರೈಸ್ ಆಫ್ ಅನಿಮಲ್ಸ್” ನಲ್ಲಿ ಕಂಡುಕೊಳ್ಳಬಹುದು. 
     ಗುಹೆಯೊಂದರ ಒಳಗೆ ಎಂಥೆಂಥ ಜೀವಿಗಳೆಲ್ಲ ವಾಸಿಸಬಹುದು? ನಮಗೆಲ್ಲ ಪಂಚತಂತ್ರದ ಕಥೆಗಳಲ್ಲಿ ಬರುವಂತೆ ಹುಲಿ, ಚಿರತೆ ಇತ್ಯಾದಿ ಪ್ರಾಣಿಗಳು ಗುಹೆಗಳಲ್ಲಿ ವಾಸಿಸುತ್ತವೆ ಎಂದು ಗೊತ್ತು. ಆದರೆ ಗುಹೆಗಳೆಂದರೆ ನಾವು ತಿಳಿದಿರುವಂತೆ ಬರೇ ಕತ್ತಲ ಲೋಕಗಳಲ್ಲ. ಗುಹೆಗಳ ಒಳಗೆ ಕೂಡ ವೈವಿಧ್ಯಮಯವಾದ ಜೀವಲೋಕ ಇದೆ. ಬಾವಲಿಗಳು, ಕೆಲವು ಜಾತಿಯ ಹಕ್ಕಿಗಳು, ಜೇಡಗಳು, ಜಿರಲೆಗಳು, ಸಲಮ್ಯಾಂಡರ್ ಗಳು ಹೀಗೆ ಗುಹೆಯ ಒಳಗೆ ಕೂಡ ಅನೇಕ ಜೀವಿಪ್ರಭೇದಗಳು ನೆಮ್ಮದಿಯ ಬಾಳ್ವೆ ನಡೆಸಿವೆ. ಇದೆಲ್ಲ ತಿಳಿಯಬೇಕಾದರೆ ಅಟೆನ್ ಬರೋ ಅವರ “ಕೇವ್ಸ್” ನೋಡಬೇಕು. 
     ಕೀಟಗಳೆಂದರೆ ಅತ್ಯಂತ ಕ್ಷುದ್ರ ಜೀವಿಗಳೆಂದೇ ನಮ್ಮ ಭಾವನೆ. ಕೀಟಗಳ ಬಗೆಗೆ ಯಾರೂ ಸಾಮಾನ್ಯವಾಗಿ ಅಷ್ಟು ಗಮನ ಹರಿಸುವುದಿಲ್ಲ. ಎಲ್ಲ ಕೀಟಗಳೂ ಮನುಷ್ಯರಿಗೆ ಹಾನಿಕಾರಕ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಆದರೆ ಜೇನುಹುಳ, ಚಿಟ್ಟೆ, ರೇಷ್ಮೆಹುಳ ಇತ್ಯಾದಿ ಕೀಟಗಳು ನಮಗೆ ಉಪಕಾರಿಗಳೂ ಆಗಿವೆ. ಈ ವಿಷಯವನ್ನು ತಿಳಿದಿರುವವರಿಗೆ ಕೂಡ ಕೀಟಗಳ ಜೀವನಶೈಲಿಯ ಬಗೆಗೆ ಹೆಚ್ಚು ತಿಳಿದಿರಲಾರದು. ನಾವು ನಿಸ್ಸಹಾಯಕ ಎಂದು ತಿಳಿದಿರುವ ಎಷ್ಟೋ ಚಿಕ್ಕ ಕೀಟಗಳು ಸಹ ತಮ್ಮ ಮೇಲೆ ದಾಳಿ ಮಾಡಲು ಬಂದ ತಮಗಿಂತ ಎಷ್ಟೋ ಪಟ್ಟು ದೊಡ್ಡ ಪ್ರಾಣಿಗಳನ್ನು ಸಹ ರಾಸಾಯನಿಕ ಅಸ್ತçಗಳನ್ನು ಬಳಸಿ ಹಿಮ್ಮೆಟ್ಟಿಸಬಲ್ಲವು. ಹಾಗೆಯೇ ನೋಡಿದರೆ ಕೆಲವು ನೂರು ಅಡಿಗಳಷ್ಟು ಸಹ ಹಾರಲಾರದಷ್ಟು ದುರ್ಬಲವಾಗಿ ಕಾಣಿಸುವ, ಕಾಗದದಷ್ಟು ತೆಳುವಾದ ರೆಕ್ಕೆಗಳನ್ನು ಹೊಂದಿರುವ ಚಿಟ್ಟೆಗಳು ಅಗತ್ಯಬಿದ್ದರೆ ಸಾವಿರಾರು ಮೈಲುಗಳಷ್ಟು ದೂರ ಪ್ರಯಾಣಿಸಬಲ್ಲವು ಎಂದರೆ ನಂಬುತ್ತೀರಾ? ಉತ್ತರ ಅಮೆರಿಕಾದ ಮೊನಾರ್ಕ್ ಹೆಸರಿನ ಈ ಚಿಟ್ಟೆಯ ಜೀವನಚರಿತ್ರೆಯನ್ನು ತಿಳಿಯಬೇಕಾದರೆ ಅವರ “ಇನ್‌ಸೆಕ್ಟ್ಸ್”ಸಾಕ್ಷ್ಯಚಿತ್ರ ನೋಡಿ.
‌     ಅವರ “ನ್ಯೂ ವರ್ಲ್ಡ್ಸ್” ನೋಡುತ್ತಿದ್ದರೆ ಮಾನವರಾಗಿ ಹುಟ್ಟಿದ್ದಕ್ಕೇ ನಾಚಿಕೆಯೆನಿಸುತ್ತದೆ. ಸುಮಾರು ನಾಲ್ಕು ಬಿಲಿಯನ್ ವರ್ಷಗಳಿಂದ ಅನೇಕಾನೇಕ ಪ್ರಯೋಗಗಳ ಮೂಲಕ ಪ್ರಕೃತಿ ಲಕ್ಷಾಂತರ ಜೀವಿಗಳನ್ನು ಸೃಷ್ಟಿಸಿ, ಅದರಲ್ಲಿ ಕೆಲವು ನಾಶಹೊಂದಿ, ಇನ್ನು ಕೆಲವು ಅನೇಕ ಮಾರ್ಪಾಡುಗಳನ್ನು ಹೊಂದಿ ಒಂದು ಸಮತೋಲನವನ್ನು ಸಾಧಿಸಿದೆ. ಆದರೆ ಆ ಸಮತೋಲನವನ್ನು ನಾವು ಕಳೆದ ಒಂದೆರಡು ಶತಮಾನಗಳಲ್ಲೇ ಅಲ್ಲೋಲಕಲ್ಲೋಲ ಮಾಡಿದ್ದೇವೆ. ಅಟೆನ್ ಬರೋ ಒಂದೊಂದು ಮಾತಿನ ಮೂಲಕವೂ ಮನುಕುಲದ ಈ ಹೀನಕೃತ್ಯಗಳ ಬಗೆಗೆ ವಿವರಿಸುತ್ತಿದ್ದರೆ ವೀಕ್ಷಕರಿಗೆ ಅಪರಾಧಿ ಪ್ರಜ್ಞೆಯಿಂದ ತಲೆ ತಗ್ಗಿಸುವಂತಾಗುತ್ತದೆ. ವಾಯುಮಡಲಕ್ಕೆ ನಾವು ವಿಷಯುಕ್ತ ಅನಿಲಗಳನ್ನು ಉಗುಳುತ್ತಿರುವ ಪರಿಣಾಮವಾಗಿ ಎಲ್ಲೆಡೆ ಆಮ್ಲಮಳೆ ಉಂಟಾಗಿ ಕೆರೆ, ನದಿ, ಸರೋವರಗಳ ನೀರು ಸಹ ಆಮ್ಲೀಯವಾಗಿ ಅಲ್ಲಿ ಯಾವುದೇ ರೀತಿಯ ಜೀವಿಗಳು ಬೆಳೆಯದಂತಾಗುತ್ತವೆ. ನಾರ್ವೆ ದೇಶವೊಂದರಲ್ಲೇ ಅಂತ ೧೮೦೦ ಮೃತ ಸರೋವರಗಳಿವೆ. “ದೆ ಸ್ಟ್ಯಾಂಡ್ ಆಸ್ ಶೇಮ್‌ಫುಲ್ ಮಾನ್ಯುಮೆಂಟ್ಸ್ ಟು ಅವರ್ ಕೇರ್‌ಲೆಸ್‌ನೆಸ್ ಅಂಡ್ ಲ್ಯಾಕ್ ಆಫ್ ಕನ್ಸರ್ನ್” (ಅವು ನಮ್ಮ ಬೇಜವಾಬ್ದಾರಿತನ ಮತ್ತು ಕಾಳಜಿಯ ಕೊರತೆಗೆ ನಾಚಿಕೆಗೇಡಿನ ಸ್ಮಾರಕಗಳಾಗಿ ನಿಂತಿವೆ) ಎನ್ನುವ ಆತನ ಮಾತುಗಳನ್ನು ಕೇಳುವಾಗಂತೂ ನಾವೂ ಈ ಪಾಪಕೃತ್ಯಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿಯಾದರೂ ಭಾಗಿಯಾಗಿದ್ದೇವಲ್ಲ ಎನಿಸಿ ಪಶ್ಚಾತ್ತಾಪವುಂಟಾಗದೇ ಇರದು. ನ್ಯೂಯಾರ್ಕ್ ನಗರವೊಂದರಲ್ಲೇ ಪ್ರತಿದಿನ ಸುಮಾರು ೨೨,೦೦೦ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅದನ್ನು ನಿರ್ಜನ ದ್ವೀಪವೊಂದರಲ್ಲಿ ಸುರಿಯಲಾಗುತ್ತಿದೆ. “ನಾವು ಈ ಭೂಮಿ ನಮ್ಮ ವಿಷಗಳನ್ನೆಲ್ಲ ನುಂಗುವಷ್ಟು ವಿಶಾಲವಾಗಿದೆ ಎಂಬ ಕುರುಡು ನಂಬಿಕೆಯಲ್ಲಿದ್ದೇವೆ” ಎನ್ನುವ ಆತನ ಮಾತುಗಳು ಎಷ್ಟು ಸತ್ಯ ಅಲ್ಲವೇ? ಯಾವುದೇ ಅಪಾಯಕಾರಿ ತ್ಯಾಜ್ಯವಾದರೂ ಅದು ನಮ್ಮ ಕಣ್ಣಿಗೆ ಕಾಣದೆ ಇದ್ದರೆ ಸಾಕು, ಅದು ಬೇರೆ ಪ್ರಾಣಿಗಳಿಗೆ ಉಂಟುಮಾಡುವ ತೊಂದರೆಗಳ ಬಗೆಗೆ ನಾವು ತಲೆಕೆಡಿಸಿಕೊಳ್ಳುವುದೇ ಇಲ್ಲ. ದ್ವೀಪಗಳು ನಿರ್ಜನವಾದ ಮಾತ್ರಕ್ಕೆ ಅವು ಜೀವಿರಹಿತವಾಗಿವೆ ಎಂದೇನೂ ಅಲ್ಲ. ಅಲ್ಲಿನ ಪರಿಸರಕ್ಕೇ ಹೊಂದಿಕೊಂಡು ಲಕ್ಷಾಂತರ ವರ್ಷಗಳಿಂದ ಬದುಕುತ್ತಿರುವ ಅನೇಕ ಪ್ರಾಣಿ ಹಾಗೂ ಸಸ್ಯಸಂಕುಲಗಳಿವೆ. ಅವುಗಳ ಮೇಲೆಲ್ಲ ಈ ವಿಷಗಳಿಂದ ಏನೆಲ್ಲ ಪರಿಣಾಮವಾಗಬಹುದೆಂದು ನಾವು ಯಾವತ್ತಾದರೂ ಆಲೋಚಿಸಿದ್ದೇವೆಯೇ? ಖಂಡಿತ ಇಲ್ಲ. 
     ಒಟ್ಟಿನಲ್ಲಿ ಡೇವಿಡ್ ಅಟೆನ್‌ಬರೋ ಎಂದರೆ ಪ್ರಕೃತಿಪ್ರಿಯರಿಗೆ ಮೊಗೆದಷ್ಟೂ ಮುಗಿಯದ ಅಕ್ಷಯಪಾತ್ರೆಗಳ ಖಜಾನೆ. ಅವರ ಎಲ್ಲ ಸಾಕ್ಷ್ಯಚಿತ್ರಗಳನ್ನು ಒಮ್ಮೆ ನೋಡಿದರೆ ಬಹುಶಃ ನೀವು ಈ ಭೂಮಿಯ ಬಗೆಗೆ ಮತ್ತು ಇಲ್ಲಿ ವಾಸವಾಗಿರುವ ಅಸಂಖ್ಯ ಜೀವಿಪ್ರಭೇದಗಳ ಬಗೆಗೆ ತಿಳಿಯುವುದಕ್ಕೆ ಏನೂ ಉಳಿಯುವುದಿಲ್ಲ ಎಂದರೆ ತುಸು ಅತಿಶಯೋಕ್ತಿ ಎನ್ನಿಸಬಹುದಾದರೂ ಅವರ ಎಲ್ಲ ಸಾಕ್ಷ್ಯಚಿತ್ರಗಳನ್ನು ನೋಡಿದರೆ ಈ ಮಾತು ಸತ್ಯಕ್ಕೆ ತೀರಾ ದೂರವಾದದ್ದೇನೂ ಅಲ್ಲವೆಂದು ಅರಿವಾಗುತ್ತದೆ. ನಿಮ್ಮ ಮಕ್ಕಳಿಗೆ ಜೀವಲೋಕದ ಬಗೆಗೆ ಬೆರಗು ಮೂಡಿಸಬೇಕೇ? ಅವರಲ್ಲಿ ಜೀವಿಗಳ ಬಗೆಗಿನ ಅರಿವನ್ನು ಹೆಚ್ಚಿಸಬೇಕೆ? ಹಾಗಾದರೆ ಅವರಿಗೆ ಓದಲು ಯಾವುದೇ ವಿಶ್ವಕೋಶಗಳನ್ನು ತಂದುಕೊಡುವ ಅವಶ್ಯಕತೆಯಿಲ್ಲ. ಬದಲಾಗಿ ಅಟೆನ್‌ಬರೋ ಅವರ ಸಾಕ್ಷ್ಯಚಿತ್ರಗಳನ್ನು ತೋರಿಸಿದರೆ ಸಾಕು!!
 

Category:Nature



ProfileImg

Written by Srinivasa Murthy

Verified