ಕೇಳಿರಿ ಕೇಳಿರಿ ಜೇಬಿನ ಕಥೆಯನು
ಅಪ್ಪನ ಜೇಬಿನ ಕಷ್ಟದ ವ್ಯಥೆಯನು
ಅಪ್ಪನ ಅಂಗಿಗೆ ಇತ್ತೆರಡು ಜೇಬು
ಎದುರುಗಡೆಯೊಂದು ಬದಿಯಲ್ಲೊಂದು!
ಅಪ್ಪನ ಜೇಬು ತುಂಬಿದ ಜೇಬು
ನೋಟೇ ಇಲ್ಲದೆ ತುಂಬಿದ ಜೇಬು
ಪ್ರೀತಿಯ ತುಂಬಿಸಿ ಅದನ್ನೇ ಹಂಚುತ
ಅಕ್ಷಯಪಾತ್ರೆಯಂತಿದ್ದ ಜೇಬು!
ಮಾತಿನ ಮುತ್ತು ತುಂಬಿದ ಜೇಬು
ಒಳಿತಿನ ಉಡುಗೊರೆ ಇರುವ ಜೇಬು
ಆಶೀರ್ವಾದವ ನೀಡುವ ಜೇಬು
ಮಕ್ಕಳಿಗೆಲ್ಲಾ ಮೆಚ್ಚಿನ ಜೇಬು!
ಕೆಡುಕನ್ನೆಲ್ಲಾ ಜಾಡಿಸಿ ಓಡಿಸಿ
ಕರುಣಾ ರಸವನ್ನು ಧಾರಾಳ ಹರಿಸಿ
ಮಂದಿಯ ಕಷ್ಟಕ್ಕೆ ಮನದಲಿ ದ್ರವಿಸಿ
ಜೇಬಿನ ದುಡ್ಡನ್ನು ಕೂಡಲೇ ಕೊಡಿಸಿ
ತುಂಬಿದ ಮನೆಯ ಜನರನ್ನು ಪ್ರೀತಿಸಿ
ಕೋಪ ,ಅತೃಪ್ತಿಯ ದೂರ ಕಳುಹಿಸಿ
ಸ್ವಾರ್ಥದ ಭಾವನೆಯನ್ನೆಲ್ಲಾ ಅಳಿಸೀ
ಎಲ್ಲರ ಮನವನ್ನು ಒಟ್ಟುಗೂಡಿಸಿ!
ಅಪ್ಪನ ಜೇಬನು ಹುಡುಕುವ ಪುಟ್ಟಿ
ಪೆಪ್ಪರಮಿಂಟು ಸಿಕ್ಕರೆ ಸಂತುಷ್ಟಿ
ಅಣ್ಣನು ಹುಡುಕುವ ಚಿಲ್ಲರೆ ಕಾಸು
ಐಸ್ಕ್ರೀಂ ಕೊಳ್ಳಲು ಪುಡಿಕಾಸು!
ಚಿಲ್ಲರೆ ನಾಣ್ಯ ಉಳಿಯುವುದೇ ಇಲ್ಲ
ಸಾಸಿವೆ ಡಬ್ಬ ಸೇರುವುದಲ್ಲಾ!
ಅಪ್ಪನಿಗೆಂದೂ ಚಿಂತೆಯೆ ಇಲ್ಲಾ
ಹಣವಿರದೆಂದೂ ಮರುಗುವುದಿಲ್ಲಾ!
ದುಡಿತದ ಒಳಗೆ ತುಂಬಿದೆ ಕಾಸು
ತೋಳಿನ ಬಲದಲಿ ತುಂಬಿದೆ ಕನಸು
ಮಕ್ಕಳ ಬಗೆಗೆ ಇದೆ ಹೊಂಗನಸು
ಬಯಸುವರೆಂದು ಅದರ ನನಸು!
ಅಪ್ಪನ ಜೇಬಲಿ ಪೆನ್ನೇ ಇಲ್ಲ
ದುಡಿಯುವವನಿಗೆ ಯಾಕೆ ಅದೆಲ್ಲಾ
ದಿನವೂ ಅಂಗಿಯ ಧರಿಸುವುದಿಲ್ಲಾ.
ಗೂಟದಿ ಅಂಗಿಯು ಜೋತಿರುವುದಲ್ಲಾ!
ಪೇಟೆಗೆ ಹೋದರೆ ಧರಿಸುವ ಅಂಗಿ
ಆದು ಆಗಿರುವುದು ಉದ್ದನೆ ಅಂಗಿ
ಹಾಲಿನ ಬಣ್ಣದ ಅಪ್ಪನ ಅಂಗಿ
ಎಲ್ಲರಿಗೂ ಅದು ಪರಿಚಿತ ಅಂಗಿ!
ಎಲ್ಲರ ಗೌರವ ಪಡೆಯುವ ಅಂಗಿ
ಬಣ್ಣವ ಮಾಸದ ನಿಲುವಂಗಿ!
ನೆಂಟರ ಆದರ ಪಡೆಯುವ ಅಂಗಿ
ಎಂದೂ ಹರಿಯದ ಗಟ್ಟಿ ಅಂಗಿ!
ಅಡಿಕೆಯ ಮಾಲಿನ ಮಾರುಕಟ್ಟೆ
ಮಾರಿದ ಮೇಲೆ ನೋಟಿನ ಕಟ್ಟು
ತುಂಬಲು ಜೇಬನು ನೋಟಿನ ಕಂತೆ
ಖರ್ಚಿಗೆ ಈಗ ಇಲ್ಲವು ಚಿಂತೆ!
ದುಡಿತದ ಫಲವು ಸೇರಲು ಕೈಗೆ
ಬಾಯಿಗೆ ಸಿಹಿಯು ಮಕ್ಕಳಿಗೆ
ಜೇಬಿನ ಮೇಲೆ ಎಲ್ಲರ ನೋಟ
ನೋಡಲು ಜೇಬಲ್ಲಿರುವ ನೋಟು!
ಮನೆಯವರೆಲ್ಲರ ಬೇಡಿಕೆ ತುಂಬಾ
ಒಂದೇ ಎರಡೇ ಮನೆಮಂದಿಯದೆಲ್ಲಾ
ತುಂಬಿದ ಜೇಬನು ನೋಡಿದಾಗಲೆಲ್ಲಾ
ಬೇಡಿಕೆ ಪಟ್ಟಿ ಬೆಳೆಯುವುದಲ್ಲಾ!
ಅಕ್ಕಗೆ ಬೇಕು ಫೀಸಿಗೆ ದುಡ್ಡು
ಅಣ್ಣಗೆ ಬೇಕು ಪ್ರವಾಸಕೆ ದುಡ್ಡ
ಅಮ್ಮನಿಗೆ ಬೇಕು ಸೀರೆಗೆ ದುಡ್ಡು
ಅಜ್ಜಿಗೆ ಬೇಕು ಮದ್ದಿಗೆ ದುಡ್ಡು!
ಕೆಲಸದ ಸೀತುಗೆ ಕೂಲಿ ಬೇಕು
ಎಲ್ಲರ ಊಟಕೆ ಅಕ್ಕಿ ಬೇಕು!
ದುಡಿಯುವ ಕೈಯು ಒಂದೇ ಒಂದು
ತಿನ್ನುವ ಬಾಯಿ ಹನ್ನೊಂದು!
ತೂತಿನ ಜೇಬು ತುಂಬುವುದಿಲ್ಲ
ತುಂಬುವ ಮೊದಲೇ ಸೋರುವುದಲ್ಲ
ತಿಂಗಳ ಪೂರ್ತಿ ಸಾಕಾಗುವುದಲ್ಲ
ಆದರೂ ಅಪ್ಪಂಗೆ ಬೇಜಾರಿಲ್ಲ!
ಕಾಲವು ಒಂದೇ ತೆರನಾಗಿಲ್ಲ
ಬದಲಾಗುತ್ತಲೇ ಇರುವುದಲ್ಲಾ
ಅಂಗಿಗೆ ಜೋಬು ಬೇಕಾಗಿಲ್ಲ
ಕಣ್ಣಿಗೆ ನೋಟು ಕಾಣಬೇಕಾಗಿಲ್ಲ!
ಅಪ್ಪನ ತೆರದಿ ದುಡಿಯುವವರಿಲ್ಲ
ಕೈಗೆ ಮಣ್ಣನು ಮೆತ್ತುವವರಿಲ್ಲ
ಹೊಲದಲಿ ದುಡಿದರೆ ಗೌರವವಿಲ್ಲ
ಪೇಟೆಗೆ ವಲಸೆ ಹೋಗುವವರೆಲ್ಲಾ!
ಮಕ್ಕಳು ಜೇಬನು ಹುಡುಕುವುದಿಲ್ಲ
ಮೊಬೈಲಿನಲ್ಲೇ ಹಣ ಇದೆಯೆಲ್ಲಾ
ಆನ್ಲೈನಲ್ಲೇ ತರಿಸುವರೆಲ್ಲಾ
ಮೊಬೈಲ್ ಕೊಡದಿರೆ ಕೋಪಿಸುವರಲ್ಲಾ!
ಪೆಪ್ಪರಮಿಂಟು ಬೇಕಾಗಿಲ್ಲ
ಪಿಜ್ಜಾ ಬರ್ಗರ್ ತಿನ್ನುವವರೆಲ್ಲಾ!
ಹೋಟೆಲ ತಿಂಡಿಯ ಮೆಚ್ಚುವರಲ್ಲಾ
ಹಳಸಿದರೂ ಅದು ಪರವಾಗಿಲ್ಲ!
ಅಪ್ಪನ ಅಂಗಿಗೆ ಜೇಬೇ ಇಲ್ಲ
ಅಮ್ಮನ ತಿಂಡಿಗೆ ಡಿಮ್ಯಾಂಡ್ ಇಲ್ಲ
ಭಾವನೆಗಳೆಲ್ಲಾ ಮರೆಯಾದುವಲ್ಲಾ
ಅಪ್ಪನೆ ಇಲ್ಲ ಡ್ಯಾಡಿಯೆ ಎಲ್ಲಾ..
✍️ಪರಮೇಶ್ವರಿ
0 Followers
0 Following