ಶಂಕರಮಠದಲ್ಲಿ ತಾಯಿ ಶಾರದಾಂಬೆ ಎದುರು ಮಗ ಅಥರ್ವನ ಅಕ್ಷರಾಭ್ಯಾಸಕ್ಕೆ ಸಂಕಲ್ಪ ನಡೆಯುತಿತ್ತು. ಕೈ ಮುಗಿದು ಮಗನ ಪಕ್ಕದಲ್ಲಿ ನಿಂತಿದ್ದ ನನಗೆ ಕಿಡಕಿಯಾಚೆ ಶಂಕರ ಆಸ್ಪತ್ರೆಯ ವರಾಂಡ ಕಾಣಿಸಿತು. ಆ ವರಾಂಡದಲ್ಲಿನ ಕಲ್ಲಿನ ಬೆಂಚನ್ನು ನೋಡಿದ ಕ್ಷಣ ನನಗೆ ಜೊತೆಗಿಲ್ಲದ ಅಪ್ಪ ಬಂದು ನಿಂತಂತೆ ಆಯಿತು. ನನಗರಿವಿಲ್ಲದಂತೆ ಭಾವುಕನಾದೆ. ನನ್ನ ಕಣ್ಣೀರ ಹನಿಯೊಂದು ಜಾರಿ ಪಕ್ಕದಲ್ಲಿಯೇ ನಿಂತಿದ್ದ ಮಗನ ತಲೆಯ ಮೇಲೆ ಜಾರಿಬಿತ್ತು. ಅತ್ತ ಅರ್ಚಕರು ಸಂಕಲ್ಪ ಮುಗಿಸಿ ಮಗನ ತಲೆ ಮೇಲೆ ಹಾಕಿದ ಅಕ್ಷತೆ ಕಾಳುಗಳು ಅಪ್ಪನೇ ಹಾಕದಂತಿತ್ತು. ಮಗ ನನ್ನತ್ತ ನೋಡಿ ಸಣ್ಣಗೆ ನಕ್ಕ ಥೇಟ್ ಅಪ್ಪನನ್ನೇ ನೋಡಿದಂಗಾಗಿ ಸಮಾಧಾನವಾಯ್ತು.
ಅವತ್ತು ಅಪ್ಪನ ಜೊತೆಗೆ ಸ್ಕ್ಯಾನಿಂಗ್ ರಿಪೋರ್ಟ್ಗಳನ್ನೆಲ್ಲ ಹಿಡಿದುಕೊಂಡು ಅದೆ ಶಂಕರಮಠದ ಆವರಣದಲ್ಲಿರುವ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ಹೋಗಿದ್ದೆ. ಎಲ್ಲಾ ಸ್ಕ್ಯಾನಿಂಗ್ ರಿಪೋರ್ಟ್ ಸುದೀರ್ಘವಾಗಿ ಪರಿಶೀಲಿಸಿದ ಹೆಸರಾಂತ ವೈದ್ಯರೊಬ್ಬರು ಅಪ್ಪನನ್ನು ಅಲ್ಲಿಯೇ ಕೂರುವಂತೆ ಹೇಳಿ ನನ್ನನ್ನ ಪಕ್ಕದ ರೂಮಿಗೆ ಕರೆದುಕೊಂಡು ಹೋಗಿ, ನಿಮ್ಮ ತಂದೆಯವರಿಗೆ ಈಗ ಎಷ್ಟು ವಯಸ್ಸು..? ಈಗಲೂ ಕೃಷಿ ಮಾಡ್ತಾರಾ..? ತಂಬಾಕು ತಿನ್ನುವ ಚಟವಿತ್ತಾ..? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳತೊಡಗಿದರು. ವೈದ್ಯರು ಕೇಳುವ ಪ್ರಶ್ನೆಗಳಿಗೆ ನಾನು ತಾಳ್ಮೆಯಿಂದಲೇ ಉತ್ತರಿಸುತ್ತ ಹೋದೆ. ವೈದ್ಯರು ಕೊಂಚ ಇಳಿಧ್ವನಿಯಲ್ಲಿ “ ರವಿ ನಿಮ್ಮ ತಂದೆಯವರು ಹೆಚ್ಚೆಂದರೆ ಇನ್ನೊಂದು ಆರು ತಿಂಗಳು ಮಾತ್ರ ನಿಮ್ಮ ಜೊತೆ ಇರಬಲ್ಲರು. ಅಲ್ಲಿತನಕ ಚೆನ್ನಾಗಿ ನೋಡಿಕೊಳ್ಳಿ. ಅವರಿಗೆ ಇಷ್ಟವಾದ ಸ್ಥಳಗಳು ಇದ್ದರೆ ಕರೆದುಕೊಂಡು ಹೋಗಿ. ಅವರ ಮನಸ್ಸಿಗೆ ನೋವು ಮಾಡಬೇಡಿ ಎಂದು ಅವರು ಹೇಳುವಷ್ಟರಲ್ಲಿ ಅದಾಗಲೇ ನನ್ನ ಕೈಕಾಲು ಸಣ್ಣಗೆ ನಡುಗುತ್ತಿದ್ದವು.
ವೈದ್ಯರು ಮತ್ತೆ ಮಾತು ಮುಂದುವರೆಸಿ.. ನಿಮ್ಮ ತಂದೆಯವರಿಗೆ ಅನ್ನನಾಳ ಕ್ಯಾನ್ಸರ್, ಈಗಾಗಲೇ ಕೊನೆ ಹಂತದಲ್ಲಿದೆ ಎಂದರು. ಅವರ ಮಾತನ್ನು ಕೇಳಿ ಎದೆ ಒಡೆದಂತಾಗಿ ನಾನು ಸದ್ದಿಲ್ಲದೆ ಕಣ್ಣೀರಾದೆ. ನನ್ನ ಎದುರು ಕುಳಿತ ವೈದ್ಯರು ಸದ್ಯಕ್ಕೆ ನಮ್ಮಿಂದ ಏನೂ ಮಾಡಲು ಆಗುವುದಿಲ್ಲ. ಆದಾಗ್ಯೂ ಆರು ಕೀಮೋಥೇರೆಪಿ ಮಾಡೋಣ. ಆಗ ಬಹುಶ: ಮತ್ತೊಂದೆರೆಡು ತಿಂಗಳು ಹೆಚ್ಚು ಕಾಲ ಬದುಕಬಲ್ಲರು ಎಂದು ಹೇಳಿ ಎದ್ದು ಹೋದರು. ಹಾಗೆ ಎದ್ದು ಹೋದ ವೈದ್ಯರನ್ನೇ ನಾನು ನೋಡುತ್ತ ಕೂತೆ. ಕರ್ನಾಟಕದಲ್ಲಿಯೇ ಹೆಸರಾಂತ ವೈದ್ಯರಾಗಿದ್ದರಿಂದ ಅವರ ಮಾತನ್ನು ತಳ್ಳಿ ಹಾಕುವಂತಿರಲಿಲ್ಲ. ನಂತರ ಸಾವಕಾಶ ಅಪ್ಪ ಇರುವ ಕೋಣೆಯತ್ತ ನಡೆದು ಹೋದೆ.
ಅಪ್ಪ ಎಂದಿನಂತೆ ಶುಭ್ರವಾದ ಬಿಳಿ ಪಂಚೆ, ಅಂಗಿ ಹಾಗೂ ಹೆಗಲ ಮೇಲೊಂದು ಶೆಲ್ಲೆಯೊಂದನ್ನು ಹಾಕಿ ಗುಂಡಕಲ್ಲಿನಂತೆ ಹಸನ್ಮುಖಿಯಿಂದಲೇ ಕೂತಿದ್ದರು. ಯಾಕೋ ಅಪ್ಪನನ್ನು ನೋಡಿ ಮತ್ತಷ್ಟು ಸಂಕಟವಾಯಿತು. ಆದರೆ ಸಮಾಧಾನವಾಗಿ ಕೂತಿದ್ದ ಅಪ್ಪನನ್ನೇ ನೋಡುತ್ತ ಒಂದೆರಡು ನಿಮಿಷ ಕೂತೆ. ಹಿಂದೆ ಯಾವತ್ತೂ ಅಪ್ಪನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡದ ಮಾತನಾಡಿಸದ ನಾನು ಅವತ್ಯಾಕೋ ಮತ್ತೆ ಮತ್ತೆ ನೋಡಬೇಕೆನಿಸಿತು. ನಾನು ಹಾಗೆ ನೋಡುತ್ತ ಕೂತವನನ್ನು ನೋಡಿದ ಅಪ್ಪ " ಡಾಕ್ಟರ್ ಏನ್ ಅಂದ್ರು..? “ನಂಗೆ ಯಾಕೋ ಹೊಟ್ಟೆ ಹಸಿವು ಆಗ್ತಿದೆ ಮನೆಗೆ ಹೊಗೋಣ” ಅಂದ. ತಕ್ಷಣಕ್ಕೆ ಆಯ್ತು ಎನ್ನುವಂತೆ ತಲೆ ಅಲ್ಲಾಡಿಸಿ ಸಾವಕಾಶ ಅಪ್ಪನನ್ನು ಹೊರಗೆ ಕರೆದುಕೊಂಡು ಹೋಗಿ ಕಾರ್ ಹತ್ತಿಸಿದೆ. ಯಾಕೋ ಸಮಾಧಾನವಾಗಲಿಲ್ಲ ಅಪ್ಪನನ್ನು ಐದು ನಿಮಿಷ ಕಾರಲ್ಲೆ ಕೂರುವಂತೆ ಹೇಳಿ ನಾನು ವೈದ್ಯರ ಬಳಿಗೆ ಮತ್ತೆ ಓಡಿ ಹೋಗಿ ವಿಚಾರಿಸಿದೆ. ವೈದ್ಯರು ಮಿಸ್ಟರ್ ರವಿ ನಮ್ಮ ಕೈಮೀರಿ ಹೋಗಿದೆ. ಹೆಚ್ಚೇನೂ ಮಾತಾಡಲು ಉಳಿದಿಲ್ಲ ಎಂದರು.
ಆಗ ಕಾರ್ ಹತ್ತಿರ ಬರುತ್ತಿದ್ದ ನನಗೆ ಅದ್ಯಾಕೋ ಶಂಕರಮಠ ಆವರಣಕ್ಕೆ ಹೋಗಬೇಕೆನಿಸಿತು. ಮಠದ ಮುಂಭಾಗದಲ್ಲಿರುವ ಮೆಟ್ಟಿಲುಗಳ ಮೇಲೆ ಕೂತು ಸದ್ದಿಲ್ಲದೆ ಅಳತೊಡಗಿದೆ. ಪ್ರಾಯಶ: ಅಪ್ಪ ಅವನ ಇಡೀ ಜೀವಮಾನದಲ್ಲಿ ಮಾತ್ರೆ ತೆಗೆದುಕೊಂಡಿದ್ದು, ಆಸ್ಪತ್ರೆ ಬಾಗಿಲಿಗೆ ಹೋಗಿ ಇಂಜೆಕ್ಷನ್ ಮಾಡಿಸಿಕೊಂಡಿದ್ದು ಇದ್ಯಾವುದು ನಮಗೆ ನೆನಪಿರಲಿಲ್ಲ. ಬೆಳಿಗ್ಗೆದ್ದು ಆರೇಳು ಬಿಸಿರೊಟ್ಟಿ ತಿಂದು ಹೊರಗೆ ಕಾಲಿಟ್ಟ ಅಪ್ಪನಿಗೆ ಕಣ್ಣು ಮುಂದೆ ಇರುವ ಬೆಟ್ಟದಷ್ಟು ಕೆಲಸವನ್ನು ಕರಗಿಸಿಬಿಡುವುಷ್ಟು ಗಟ್ಟಿ ಗುಂಡಿಗೆ ಇತ್ತು.
ಇಂಥ ಅಪ್ಪ ಇನ್ನು ಕೆಲವೇ ತಿಂಗಳುಗಳಲ್ಲಿ ನಮ್ಮ ಜೊತೆಗೆ ಇರುವುದಿಲ್ಲ ಎನ್ನುವ ಸಂಗತಿಯನ್ನು ಮಾತ್ರ ನನಗೆ ಅರಗಿಸಿಕೊಳ್ಳಲು ಆಗಲಿಲ್ಲ. ಕಣ್ಣೀರು ಒರೆಸಿಕೊಂಡು ತಾಯಿ ಶಾರದಾಂಬೆಗೆ ಕೈ ಮುಗಿದು ಮತ್ತೆ ಕಾರಿನತ್ತ ಬಂದೆ. ಚಾಮರಾಜಪೇಟೆಯ ಶಂಕರಪುರದಲ್ಲಿರುವ ಶಂಕರ ಆಸ್ಪತ್ರೆಯಿಂದ ಜಯನಗರದಲ್ಲಿರುವ ನನ್ನ ಮನೆಯತ್ತ ಕಾರು ತಿರುಗಿಸಿ ಹೊರಟೆ. ಅಪ್ಪ ನನ್ನ ಪಕ್ಕ ಶಾಂತವಾಗಿ ಕೂತಿದ್ದ. ಮುಂದೆ ಏನು ಮಾಡುವುದು? ಅಪ್ಪನಿಗೆ ಹೇಗೆಲ್ಲಾ ಉಪಚರಿಸಿವುದು? ಈ ವಿಚಾರವನ್ನು ಅವ್ವ ಹಾಗೂ ತಮ್ಮ, ತಂಗಿಗೆ ಹೇಗೆ ಹೇಳುವುದು? ಎನ್ನುವಂಥ ಪ್ರಶ್ನೆಗಳೇ ನನ್ನ ತಲೆಯಲ್ಲಿ ಓಡುತ್ತಿದ್ದವು. ಅಷ್ಟೊತ್ತಿಗೆ ನನ್ನ ಕಾರು ಜಯನಗರದ 1ನೇ ಬ್ಲಾಕ್ನಲ್ಲಿನ ಮಾಧವನ್ ಪಾರ್ಕ್ ಬಳಿ ಇತ್ತು.
ಎಡಕ್ಕೆ ತಿರುಗಿ ಒಂದೆರಡು ನಿಮಿಷದಷ್ಟು ಸಾಗಿದ್ದರೆ ಸಾಕಿತ್ತು! ಕಾರು ಮನೆ ಮುಂದೆ ನಿಲ್ಲುತಿತ್ತು. ಆದರೆ ಅದ್ಯಾಕೋ ತಕ್ಷಣಕ್ಕೆ ಮನೆಗೆ ಹೋಗಬೇಕು ಎನ್ನಿಸಲಿಲ್ಲ. ಅಪ್ಪನ ಕಡೆ ತಿರುಗಿ “ಮಸಾಲೆ ದೋಸೆ ತಿನ್ನೊಣವಾ..?” ಎಂದು ಕೇಳಿದೆ. ತುಂಬಾ ಹೊಟ್ಟೆ ಹಸಿವಾಗಿತ್ತೇನೋ ತಕ್ಷಣಕ್ಕೆ ಅಪ್ಪ ಹೂ ಅಂದ. ಅದ್ಕಕ್ಕೂ ಮಿಗಿಲಾಗಿ ಮೊದಲಿನಿಂದಲೂ ಅಪ್ಪನಿಗೆ ಮಸಾಲೆ ದೋಸೆ ಅಂದ್ರೆ ಎಲ್ಲಿಲ್ಲದ ಇಷ್ಟ. ನಾನು ಚಿಕ್ಕವನಿದ್ದಾಗ ಅಪ್ಪ ನನ್ನನ್ನು ಧಾರವಾಡಕ್ಕೋ.. ದಾವಣಗೆರೆಗೊ ಕರೆದುಕೊಂಡು ಹೋದರೆ ಸಾಕು ಮೊದಲು ಮಾಡುತ್ತಿದ್ದ ಕೆಲಸವೆಂದರೆ ಅಲ್ಲಿ ಯಾವುದಾದರೂ ಒಂದೊಳ್ಳೆ ಹೊಟೇಲ್ಗೆ ಹೋಗಿ ಮೊದಲು ಮಸಾಲೆ ದೋಸೆ ತಿನ್ನಿಸುತ್ತಿದ್ದ. ಅದೆಷ್ಟೋ ಸಲ ಅಪ್ಪನ ಜೇಬು ಖಾಲಿಯಾಗಿರುತಿತ್ತು. ಆದರೂ ಹೇಗೋ ಹೊಂದಿಸಿ ನಮಗೊಂದು ಒಳ್ಳೆ ತಿಂಡಿ ಕೊಡಿಸುತ್ತಿದ್ದ.
ಮುಂದೆ ನಾನು ಧಾರವಾಡದಲ್ಲಿ ಓದು ಮುಗಿಸಿಕೊಂಡು ಬೆಂಗಳೂರಿಗೆ ಕೆಲಸಕ್ಕೆ ಅಂತ ಬಂದ ಮೇಲೆ ಅಪ್ಪನ ಜೊತೆ ಮಸಾಲೆ ದೋಸೆ ತಿನ್ನದೇ ಬಹಳಷ್ಟು ವರ್ಷಗಳೇ ತೀರಿ ಹೋಗಿದ್ವು. ಅದಕ್ಕಾಗಿಯೇ ಅವತ್ತು ಮಸಾಲೆ ದೋಸೆ ತಿನ್ನೊಣ್ವಾ ಎಂದು ಕೇಳಿ ತಕ್ಷಣಕ್ಕೆ ನಾಲ್ಕನೇ ಬ್ಲಾಕ್ನಲ್ಲಿದ್ದ ಮಯ್ಯಸ್ ಹೊಟೇಲ್ನತ್ತ ಹೋಗಲು ಕಾರನ್ನು ಯೂಟರ್ನ್ ಮಾಡಿಕೊಂಡಿದ್ದೆ.
ಹೊಟೇಲ್ಗೆ ಹೋಗಿ ಎರಡು ಮಸಾಲೆ ದೋಸೆ ಆರ್ಡರ್ ಮಾಡಿ ಎದುರು ಕುಳಿತಿದ್ದ ಅಪ್ಪನನ್ನೇ ದಿಟ್ಟಸುತ್ತ ಕೂತೆ. ಸುಮಾರು ಹೊತ್ತು ಮೌನವಾಗಿದ್ದ ಅಪ್ಪ ಮಾತನಾಡಲು ಆರಂಭಿಸಿದ. “ತೋಟದಲ್ಲಿನ ಪೇರಲ ಗಿಡಗಳು ಬಾಳಾ ಚೋಲೋ ಆಗ್ಯಾವ ನೋಡು ಈಗ. ಈ ಸಾರಿ ಮಳೆಗಾಲ ಟೈಂನ್ಯಾಗ ಒಂದು ನೂರು ತೆಂಗಿನ ಸಸಿ ಹಾಕೋಣ..! ಮುಂದೆ ನಿಮಗೆ ಅನುಕೂಲ ಆಗ್ತೈತಿ. ನೀನಂತ್ರೂ ಊರ ಕಡಿಗೆ ಬರಂಗೀಲ್ಲ.. ಮಾಡಂಗಿಲ್ಲ. ಬಂದಕಂತ ಇದ್ರ ನಮ್ಗೂ ಅನುಕೂಲ ಆಗ್ತೈತಿ” ಎಂದು ಪ್ರತಿ ಸಾರಿ ಹೇಳುವಂತೆ ಈ ಸಾರಿನೂ ಹೇಳಿದ. ನಾನು ಮೌನವಾಗಿಯೇ ಇದ್ದೆ. ಅಷ್ಟರಲ್ಲಿ ಆರ್ಡರ್ ಮಾಡಿದ ಮಸಾಲೆ ದೊಸೆ ಬಂತು. ಅಪ್ಪ ದೋಸೆ ತಿನ್ನತೊಡಗಿದ.
ದಿಕ್ಕು ತೋಚದಂತೆ ಕೂತಿದ್ದ ನನ್ನನ್ನು ಗಮನಿಸಿದ ಅಪ್ಪ “ದೋಸೆ ತಿನ್ನು. ಯಾಕ್ ಬಾಳ ಚಿಂತೀ ಮಾಡಕತ್ತೀ ಅಲ್ಲ ಆಫಿಸ್ಯಾನಾಗ ಬಾಳ ಕೆಲಸ ಐತಿನೂ ನಿನಗ” ಎಂದ ಅಪ್ಪ. ಹಾಗೇನೂ ಇಲ್ಲ ನೀನು ಇಲ್ಲೇ ಒಂದು ವಾರ ಇರಬೇಕಾಗುತ್ತೆ. ಡಾಕ್ಟರ್ ಒಂದಿಷ್ಟು ಔಷದಿ ಕೊಡ್ತಿನಿ ಅಂತ ಹೇಳ್ಯಾರ ಅಂದೆ. ಅದಕ್ಕ ಅಪ್ಪ ಹಾಗಿದ್ರೆ ಇವತ್ತು ಊರಿಗೆ ಬಸ್ಸು ಹತ್ತಿಸು ತೋಟದಲ್ಲಿ ಒಂಚೂರು ಕೆಲಸ ಉಳಿದೈತಿ ಅದನ್ನ ಮುಗಿಸ್ಕೊಂಡು ಬರ್ತಿನಿ ಎಂದ. ಆ ಕ್ಷಣಕ್ಕೆ ನಾನು ಹೆಚ್ಚೇನೂ ಮಾತನಾಡದೇ ಅವತ್ತಿನ ಸಂಜೆ ದಿನವೇ ಊರಿಗೆ ಕಳುಹಿಸಿ ಕೊಟ್ಟೆ.
ಅಪ್ಪನ ಅರೋಗ್ಯದ ಬಗ್ಗೆ ವೈದ್ಯರು ಹೇಳಿದ ವಿಚಾರಗಳನ್ನೆಲ್ಲ ನಿಧಾನಕ್ಕೆ ಅಮ್ಮ ತಮ್ಮ ತಂಗಿಗೆ ಹೇಳಿದೆ. ಕಾರ್ಮೋಡ ಕವಿದಂತಾದ ಅಂಥ ವಿಷಮ ಪರಿಸ್ಥಿತಿಯಲ್ಲೂ ನಾವ್ಯಾರೂ ಧೃತಿಗೆಟ್ಟು ಕೂರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅಪ್ಪನಿಗೆ ಒಂದೇ ಒಂದು ದಿನವೂ ಅಂಥದೊಂದು ರೋಗ ಇದೆ ಎನ್ನುವುದನ್ನೂ ಅಪ್ಪನಿಗೆ ಗೊತ್ತು ಮಾಡಿಕೊಡಲಿಲ್ಲ. ಆ ಮಹಾಮಾರಿ ಅನ್ನನಾಳ ಕ್ಯಾನ್ಸರನ್ನು ಬುಡಸಮೇತ ಕಿತ್ತು ಹಾಕಲು ಸಾಧ್ಯವೆ ಎಂದು ಇಡೀ ಮನೆಮಂದಿ ಹೋರಾಟ ಮಾಡಿದೆವು. ಕರ್ನಾಟಕದ ಮೂಲೆ ಮೂಲೆಗಳಲ್ಲಿ ಸಿಗುವಂಥ ವನೌಷಧಿಯನ್ನು ಹೋಗಿ ತಂದೆವು. ಶಂಕರ ಆಸ್ಪತ್ರೆಯ ವೈದ್ಯರು ಹೇಳಿದ ಹಾಗೆ ಅಪ್ಪನಿಗೆ ಬರೊಬ್ಬರಿ ಆರು ಕೀಮೋಥೇರಪಿಗಳನ್ನು ಮಾಡಿಸಿದೆವು.
ಅಪ್ಪನದು ಎಂಥ ಗಟ್ಟಿ ಜೀವವೆಂದರೆ ಶಂಕರ ಆಸ್ಪತ್ರೆಯಲ್ಲಿ ನೀಡಿದ್ದ ಆ ಆರೂ ಕೀಮೋಥೇರಪಿಗಳಿಗೂ ಸ್ವಲ್ಪವೂ ಕುಗ್ಗಲಿಲ್ಲ ಅಷ್ಟೇ ಅಲ್ಲ ಎಂಟತ್ತು ಬಿಸಿ ರೊಟ್ಟಿ ತಿನ್ನುವುದನ್ನೂ ಎಂದಿಗೂ ಬಿಡಲಿಲ್ಲ. ವಿಚಿತ್ರವೆಂದರೆ ಅಪ್ಪನ ವಿಚಾರದಲ್ಲಿ ನಾವೆಲ್ಲ ಚಿಂತಿಸಿ ತಿಂಗಳಿನಿಂದ ತಿಂಗಳಿಗೆ ತೂಕ ಕಡಿಮೆ ಆಗುತ್ತಿದ್ದರೆ ಅಪ್ಪ ಮಾತ್ರ ತನ್ನ ತೂಕದಲ್ಲಿ ಕಿಂಚಿತ್ತೂ ಕಡಿಮೆಯಾಗದೆ ನಮ್ಮಲ್ಲೊಂದು ಸಣ್ಣ ಭರವಸೆ ಹುಟ್ಟಿಸಿದ್ದ. ಅಷ್ಟೇ ಅಲ್ಲ ಕೇವಲ ಆರು ತಿಂಗಳು ಮಾತ್ರ ಬದುಕಬಲ್ಲರು ಎಂದು ಸ್ವತ: ಹೇಳಿದ ವೈದ್ಯರಲ್ಲೂ ಅಚ್ಚರಿ ಹುಟ್ಟಿಸಿದ್ದ.
ಆರು ತಿಂಗಳುಗಳ ಕಾಲ ಚಿಕಿತ್ಸೆ ನೀಡಿದ ವೈದ್ಯರು ಈಗ ಮೊದಲಕ್ಕಿಂತ ಗಟ್ಟಿಯಾಗಿದ್ದಾರೆ ಯಾರೂ ಅಷ್ಟಾಗಿ ಚಿಂತಿಸಬೇಕಿಲ್ಲ ಎಂದು ಹೇಳಿದ ಮೇಲಂತೂ ನಮಗೊಂಚೂರು ದೈರ್ಯ ಬಂದಿತು. ಅಪ್ಪ ಎಂದಿನಂತೆ ಮೊದಲಿನಂತೆ ಅದೇ ದಾಟಸಿಯಿಂದ ಹೊಲಕ್ಕೆ ತೋಟಕ್ಕೆ ಓಡಾಡತೊಡಗಿದ. ಊಟ ಉಪಚಾರ ಎಲ್ಲವೂ ಸುಸೂತ್ರವಾಗಿ ನಡೆದಿತ್ತು. ಚಿಕ್ಕಂದಿನಿಂದಲೂ ದೈವಿ ಭಕ್ತನಾದ ಅಪ್ಪನಿಗೆ ಅದೇನೋ ಪವಾಡವೇ ನಡೆದಿರಬಹುದೆಂದು ಅಂದುಕೊಂಡು ತಲೆಕೆಡಿಸಿಕೊಳ್ಳುವುದನ್ನು ಬಿಟ್ಟೆವು. ಅಪ್ಪನೂ ಮಾಮೂಲಿಯಾಗಿ ಓಡಾಡಿಕೊಂಡು ಇದ್ದುಬಿಟ್ಟ. ಮೊದಲಿಗಿಂತ ಒಂಚೂರು ಜಾಸ್ತಿನೇ ಕೆಲಸ ಮಾಡಿಕೊಂಡು ಹೆಚ್ಚೆಚ್ಚು ಕಾಲ ತೋಟದಲ್ಲಿಯೇ ಕಾಲ ಕಳೆಯತೊಡಗಿದ.
ಊರು ಬಿಟ್ಟು ಬೆಂಗಳೂರಿನಲ್ಲಿರುವ ನನಗೆ ಹಾಗೂ ತಮ್ಮನಿಗೆ ನಿತ್ಯ ಫೋನ್ ಮಾಡಿ ಮಾತನಾಡತೊಡಗಿದ. ತೋಟವನ್ನು ಮತ್ತಷ್ಟು ಹಸಿರು ಮಾಡಬೇಕೆಂದು ಧಾರವಾಡದಲ್ಲಿರುವ ಕೃಷಿ ವಿಶ್ವವಿದ್ಯಾಲಯಕ್ಕೂ ಹೋಗಿ ಬಂದ. ಅಪ್ಪನ ಚಟುವಟಿಕೆಗಳನ್ನು ನೋಡದ ನಮಗೆ ನಿಧಾನವಾಗಿ ಅವನ ಆರೋಗ್ಯದ ಬಗ್ಗೆ ಇರುವ ಆತಂಕ ದೂರಾಗಿತ್ತು.
ಆದರೆ ಅವತ್ತೊಂದಿನ ಅಂದ್ರೆ 2020 ಅಗಸ್ಟ್ 11ರ ರಾತ್ರಿ ಬೆಂಗಳೂರಿನ ಡಿಜೆ ಹಳ್ಳಿ ಕೆಜೆ ಹಳ್ಳಿಯಲ್ಲಿ ಅಹಿತಕರ ಘಟನೆಯೊಂದು ನಡೆದು ಇಡೀ ರಾಜ್ಯವೇ ಬೆಚ್ಚಿಬೀಳುವಂಥ ಘಟನೆ ನಡೆಯಿತು. ನಾನು ಹಾಗೂ ತಮ್ಮಾ ಚಿದಾನಂದ ಇಬ್ಬರೂ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದರಿಂದ ಅವತ್ತು ರಾತ್ರಿಪೂರ್ತಿ ಆಫೀಸ್ನಲ್ಲಿ ಕೆಲಸ ಮಾಡಿ ಬೆಳಿಗ್ಗೆದ್ದು ಮನೆಗೆ ಹೋಗಿ ಫೋನ್ ಸ್ವಿಚ್ಡ್ ಆಫ್ ಮಾಡಿ ಮಲಗಿಬಿಟ್ಟಿದ್ದೆವು.
ಮಧ್ಯಾಹ್ನದೊತ್ತಿಗೆ ಎದ್ದು ಮೊಬೈಲ್ ಆನ್ ಮಾಡಿದಾಗ ತಂಗಿ ಮಾಡಿದ ಅದೆಷ್ಟೋ ಮಿಸ್ಡ್ ಕಾಲ್ಗಳು ಇದ್ದವು. ಒಂದು ಕ್ಷಣ ಗಾಬರಿಯಾಗಿ ನಿದ್ದೆಗಣ್ಣಲ್ಲೇ ತಂಗಿಗೆ ಫೋನ್ ಮಾಡಿದೆ. ಅತ್ತ ಕಡೆಯಿಂದ ಅವ್ವ ಹಾಗೂ ತಂಗಿ ಅಳುವ ಶಬ್ದ ಮಾತ್ರ ಕೇಳುತಿತ್ತು. ಅರಗಳಿಗೆಯಲ್ಲಿ ತಮ್ಮನೊಂದಿಗೆ ಕಾರ್ ಹತ್ತಿ ಊರತ್ತ ಹೊರಟೆ. ಕಾರು ಬೆಂಗಳೂರಿನಿಂದ ಹಾವೇರಿ ಹತ್ತಿರವಿರುವ ಊರಿನತ್ತ ಹೊರಟಾಗಿನ ಸಮಯದಲ್ಲಿ ಅಪ್ಪ ಅವನ ಜೀವನದೂದ್ದಕ್ಕೂ ಹೋರಾಡಿದ ಹಾಗೂ ನಾನು ಕಣ್ಣಾರೆ ಕಂಡ ಚಿತ್ರಣ ಸುಮ್ನೆ ಕಣ್ಮುಂದೆ ಬಂತು.
ಸಣ್ಣ ವಯಸ್ಸಿನಲ್ಲಿಯೇ ದಾವಣಗೆರೆಗೆ ಬಂದು ಹಣ್ಣಿನ ವ್ಯಾಪಾರಕ್ಕಿಳಿದಿದ್ದ ಅಪ್ಪ ಕೆಲವೇ ವರ್ಷಗಳಲ್ಲಿ ಸೂತ್ತಲಿನ ಊರುಗಳಲ್ಲಿ ಹೆಸರು ಮಾಡಿದ್ದ. ಹಣ್ಣಿನ ವ್ಯಾಪರದ ತಂತ್ರಗಳನ್ನು ಮುದ್ದಿ ಶಿವಣ್ಣನಿಂದ ಕಲಿಯಬೇಕೆಂದು ಆ ಭಾಗದ ಜನರು ಮಾತನಾಡಿಕೊಂಡಿದ್ದರು. ದಾವಣಗೆರೆ ಮಂಡಿಪೇಟೆಯಲ್ಲಿ ಅಪ್ಪ ತಕ್ಕಮಟ್ಟಿಗೆ ಹಿಡಿತವನ್ನೂ ಸಾಧಿಸಿದ್ದ. ಪುಡಿ ವ್ಯಾಪರಸ್ಥರಿಗೆ ಅತಿ ಕಡಿಮೆ ಬೆಲೆಗೆ ಹಣ್ಣು ಕೊಟ್ಟು ಧಾರಾಳತನ ತೋರಿದ್ದ. ಒಂದು ಸಾರಿ ಅಪ್ಪ ನನ್ನನ್ನೂ ದಾವಣಗೆರೆ ಮಂಡಿಪೇಟೆಗೆ ಕರೆದುಕೊಂಡು ಹೋಗಿದ್ದ. ಆ ಸಮಯದಲ್ಲಿ ಅಪ್ಪನಿಂದ ಹಣ್ಣುಗಳನ್ನು ಪಡೆಯುವ ಸಣ್ಣ ವ್ಯಾಪರಸ್ಥರೆಲ್ಲ ನನ್ನನ್ನು ಹೆಗಲು ಮೇಲೆ ಕೂರಿಸಿಕೊಂಡು ಹೋಗಿ ನನಗಿಷ್ಟವಾದ ತಿಂಡಿ ತಿನಿಸು ಕೊಡಿಸಿದ್ದರು. ಅವರೆಲ್ಲ ಅಪ್ಪನಿಗೆ ಗೌರವ, ಪ್ರೀತಿ ತೋರುವುದನ್ನು ನೋಡಿ ನಾನು ಮೂಕವಿಸ್ಮಿತನಾಗಿದ್ದೆ.
ಇನ್ನು ಹಣ್ಣಿನ ವಹಿವಾಟಿನಿಂದ ಬಂದ ಹಣದಿಂದ ಊರಲ್ಲಿ ಐದಂಕಣ ಮನೆ ಕಟ್ಟಿಸಿದ್ದಾಗಲಂತೂ ಊರಿನ ಜನರು ಬೆರಗುಗಣ್ಣಿನಿಂದ ನೋಡಿದ್ದರು. ಹೀಗೆ ಬರೊಬ್ಬರಿ ಒಂದು ದಶಕ ಕಾಲ ಸುಗಮವಾಗಿ ಹಾಗೂ ಸಮೃದ್ದವಾಗಿ ನಡೆದ ವ್ಯಾಪಾರ ನಿಧಾನಗತಿಯಲ್ಲಿ ಕುಗ್ಗತೊಡಗಿತು. ಊರಲ್ಲಿನ ಸ್ವಂತ ತೋಟ ವರ್ಷದಿಂದ ವರ್ಷಕ್ಕೆ ಸೊರಗತೊಡಗಿದ್ದೆ ಇದಕ್ಕೆ ಮುಖ್ಯ ಕಾರಣವಾಗಿತ್ತು. ಅದರ ಪ್ರತಿಫಲವಾಗಿ ಅಪ್ಪನೂ ವ್ಯಾಪರದ ಬಗ್ಗೆ ಆಸಕ್ತಿ ಕಳೆದುಕೊಂಡ. ದಾವಣಗೆರೆಯಿಂದ ನಮ್ಮೂರು ಹಾಲಗಿಗೆ ಬಂದು ಎಂದೂ ಗೊತ್ತಿರದ ಹೊಲ ಉಳುಮೆ ಮಾಡತೊಡಗಿದ. ಆದರೆ ಮಳೆರಾಯನ ಕಣ್ಣಾಮುಚ್ಚಾಲೆಯಿಂದಾಗಿ ಕೃಷಿಯಲ್ಲೂ ಏಳ್ಗೆಯಾಗಲಿಲ್ಲ. ನಂತರ ಸುಮ್ಮನೆ ಕೂರದ ಅಪ್ಪ ಊರಲ್ಲಿಯೇ ಚಾದಂಗಡಿಯನ್ನು ಶುರು ಮಾಡಿ ತಕ್ಕಮಟ್ಟಿಗೆ ಮನೆಮಂದಿಯನ್ನೆಲ್ಲ ಸಂಭಾಳಿಸತೊಡಗಿದ.
ಕೆಲವು ವರ್ಷಗಳ ನಂತರ ಆ ಚಾದಂಗಡಿಯೂ ಅಪ್ಪನ ಕೈ ಹಿಡಿಯಲಿಲ್ಲ. ಅಷ್ಟರಲ್ಲಾಗಲೇ ನಮ್ಮ ಓದು ಶುರುವಾಗಿತ್ತು. ಕೊನೆಗೆ ಹೊಲಮನಿ ಎಲ್ಲವನ್ನೂ ಅದರ ಪಾಡಿಗೆ ಅವುಗಳನ್ನು ಬಿಟ್ಟು ಮಕ್ಕಳನ್ನು ಓದಿಸಿದರೆ ಸಾಕೆಂದು ಅಪ್ಪ ಹತ್ತು ಹಲವು ಹೋರಾಟಗಳನ್ನೇ ಮಾಡಿದ ಅದಕ್ಕೆ ಅವ್ವನೂ ಜೊತೆಯಾಗಿ ನಿಂತಳು. ಧಾರವಾಡದಲ್ಲಿ ಪಿಯುಸಿ ಓದುತ್ತಿದ್ದ ನನಗೆ ಐದನೂರು ಸಾವಿರ ರೂಪಾಯಿ ಕಳುಹಿಸುವುದಕ್ಕಾಗಿ ಮೆಕ್ಕೆಜೋಳ ಸುಲಿಯುವ ಮಷಿನ್ ಜೊತೆ ಊರೂರು ಸುತ್ತಿ ಕೂಲಿ ಕೂಡಾ ಮಾಡಿದ. ಒಂದು ಕಾಲದಲ್ಲಿ ಕೇಳಿದವರಿಗೆ ಸಾವಿರಾರು ರೂಪಾಯಿ ಕೊಡುತ್ತಿದ್ದ ಅಪ್ಪನೇ ಮೈ-ಕೈ ಮಸಿ ಮಾಡಿಕೊಂಡು ಊರೂರು ಸುತ್ತಿ ಕೂಲಿ ಮಾಡತೊಡಗಿದ. ಅಪ್ಪನ ಈ ಸ್ಥಿತಿ ಕಂಡು ಕೆಲವರು ಅಪಹಾಸ್ಯ ಮಾಡಿದರು. ಮತ್ತೆ ಕೆಲವರು ಮರಗಿದರು.
ಆದರೆ ಅಪ್ಪ ಅದ್ಯಾವುದನ್ನು ಕಿವಿಗೆ ಹಾಕಕೊಳ್ಳಲಿಲ್ಲ. "ನಾನು ಕೂಲಿ ಮಾಡೋದು ನನ್ನ ಮಕ್ಕಳನಾ ಓದ್ಸಾಕ. ಅದಕ್ಯಾಕ ನಾನು ಚಿಂತಿ ಮಾಡ್ಬೇಕು" ಅಂತ ಕೇಳಿದವರಿಗೆ ಹೇಳುತ್ತ ಹಗಲುರಾತ್ರಿ ಊರು ಬಿಟ್ಟು ಹೋಗಿ ದುಡಿದ ಅಪ್ಪನ ಪ್ರತಿ ಹೋರಾಟಗಳು ನೆನಪಾದವು. ಅವನು ಅವತ್ತು ತನಗಿದ್ದ ಆಡಂಬರಕ್ಕೆ ಜೋತುಬೀಳದೇ ಮೈಕೈ ಮಸಿ ಮಾಡಿಕೊಂಡು ಕೂಲಿ ಮಾಡಿ ಕೊಟ್ಟು ಕಳುಹಿಸಿದ ಪುಡಿ ಹಣಗಾಸಿನಿಂದಲೇ ನಾವು ಮೂರು ಜನ ಓದಿಕೊಂಡು ಬದುಕು ರೂಪಿಸಿಕೊಂಡೆವು. ನಮ್ಮ ಓದಿನ ವಿಚಾರದಲ್ಲಿ ಅವ್ವನಿಗೆ ಪ್ರತಿ ಹೆಜ್ಜೆಯಲ್ಲೂ ಅಪ್ಪ ಜೊತೆಯಾಗಿರುತ್ತಿದ್ದ. ವಿಚಿತ್ರವೆಂದರೆ ಆಗಿದ್ದ ಕಷ್ಟಗಳನ್ನೆಲ್ಲ ಕರಗಿಸಿಕೊಂಡು ನಮ್ಮನ್ನು ದಾರಿಗೆ ಹಚ್ಚಿದ್ದ ಅಪ್ಪ ಮಾತ್ರ ನಾನು ಬೆಂಗಳೂರಿಗೆ ಬಂದು ದುಡಿಮೆ ಶುರು ಮಾಡಿದರೂ, ಒಂದೇ ಒಂದು ದಿನ ನನಗಿಷ್ಟು ರೊಕ್ಕ ಬೇಕು ಕೊಡು ಅಂತ ಎಂದೂ ಕೇಳಲಿಲ್ಲ. ಹೀಗೆ ಅಪ್ಪ ಸವೆಸಿದ ಕಲ್ಲುಮುಳ್ಳು ಹಾದಿಯ ಮತ್ತಷ್ಟು ಮಗದಷ್ಟು ಪರಿಪಾಟಲು ನನ್ನ ಅರಿವಿಗೆ ಬರಬೇಕೆನ್ನುವಷ್ಟರಲ್ಲಿ ನಮ್ಮ ಕಾರು ಬರೊಬ್ಬರಿ 350 ಕೀಲೋಮಿಟರ್ಗಳನ್ನು ದಾಟಿ ಊರು ತಲುಪಿತ್ತು.
ಪರಮ ಸ್ವಾಭಿಮಾನಿ ಅಪ್ಪ ಇಷ್ಟಪಟ್ಟು ಹಾಕುತ್ತಿದ್ದ ಬಿಳಿಪಂಚೆ, ಅಂಗಿ ಹಾಗೂ ಹೆಗಲು ಮೇಲೊಂದು ಶೆಲ್ಲೆ ಹಾಕಿಯೇ ನಡುಮನಿಯಲ್ಲಿ ಕೂರಿಸಿದ್ದರು. ಅಪ್ಪನ ಮುಂದೆ ಹೋಗಿ ಕೈಮುಗಿದು ನಿಂತು. ಯಾಕಪ್ಪಾ ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ಹೊರಟೆ ಎಂದು ಮನದಲ್ಲೇ ಅಂದುಕೊಂಡೆ. ಅವ್ವನ ಆದಿಯಾಗಿ ಸುತ್ತಲೂ ಕೂತುಕೊಂಡವರು ನಾನು ಹಾಗೇ ಅಪ್ಪನ ಮುಂದೆ ನಿಂತದ್ದನ್ನು ಕಂಡು ಮತ್ತಷ್ಟು ಅಳಲು ಶುರು ಮಾಡಿದರು. ಯಾಕೋ ಸಣ್ಣನೇ ಕಾಲುಗಳು ನಡುಗಲು ಆರಂಭಿಸಿ ಅಲ್ಲಿ ನಿಲ್ಲಲಾಗದೇ ಮನೆಯಿಂದ ಹೊರಗೆ ಬಂದೆ..
ಇದ್ದಕಿದ್ದಂತೆ ಅಪ್ಪನಿಗೆ ಏನಾಯಿತು..? ಅವನಿಗಂಟಿದ ಕ್ಯಾನ್ಸರ್ಗೂ ಜಗ್ಗದೇ ಒಂದು ಹಂತದಲ್ಲಿ ಹೆಡೆಮುರಿ ಕಟ್ಟಿಬೀಸಾಡಿದ್ದ ಎಂದು ತಂಗಿಗೆ ಕೇಳಿದೆ. ಅವಳು ಹೇಳಿದ್ದಿಷ್ಟು "ಬೆಳಿಗ್ಗೆದ್ದು ತೋಟದಲ್ಲಿ ತುಸು ಹೆಚ್ಚೇ ಓಡಾಡಿಕೊಂಡು ಮನೆಗೆ ಬಂದು ಸ್ನಾನ ಮಾಡಿ ವರದಾ ನದಿ ತಟದಲ್ಲಿರೋ ಕಲ್ಮೇಶ್ವರ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ಮಾಡಿಸಿಕೊಂಡು ಬಂದಿದ್ದ ಅಪ್ಪನಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ಹುಬ್ಬಳ್ಳಿ ಆಸ್ಪತ್ರೆಗೆ ಹೋಗುವ ತನಕವೂ ಅವ್ವನೊಟ್ಟಿಗೆ ತೋಟ ಹೋಲ ಅಂತ ಮಾತನಾಡುತ್ತಲೇ ಇದ್ದ. ತಂಗಿಯ ತಲೆ ನೇವರಿಸಿ "ಅಣ್ಣಾರಿಗೂ ಫೋನ್ ಹಚ್ಚು ಮಾತಾಡ್ಬೇಕು" ಅಂದನಂತೆ ದುರ್ದೈವಶಾತ್ ತಂಗಿಯ ಫೋನಿಗೆ ನಾವಿಬ್ಬರೂ ಸಿಕ್ಕಲಿಲ್ಲ. ಅದಾಗಿ ಸ್ವಲ್ಪ ಹೊತ್ತಿಗೆ ಆಸ್ಪತ್ರೆಯ ಲಿಫ್ಟ್ನಲ್ಲಿಯೇ ಅಪ್ಪ ಪ್ರಾಣಬಿಟ್ಟಿದ್ದ. ಡಾಕ್ಟರ್ ಕಾರ್ಡಿಯಾಕ್ ಅರೆಸ್ಟ್ ಅಂತ ಹೇಳಿ ಶರಾ ಬರೆದಿದ್ದರಂತೆ.
ವಿಚಿತ್ರವೆಂದರೆ ಅಪ್ಪ ಅಲ್ಲಿ ಕೊನೆಯುಸಿರೆಳೆದಾಗ ಇಲ್ಲಿ ನಾವು ರಾತ್ರಿಪೂರ್ತಿ ಕಚೇರಿಯಲ್ಲಿ ಕೆಲಸ ಮಾಡಿ, ಮನೆಗೆ ಬಂದು ಫೋನ್ ಸ್ವಿಚ್ಡ್ ಆಪ್ ಮಾಡಿ ಮಲಗಿದ್ದೆವು. ಪ್ರಾಯಶ: ಅವತ್ತು ನಾನು ನನ್ನ ತಂಗಿ ಫೋನ್ಗೆ ಸಿಕ್ಕಿದ್ದರೇ ಅಪ್ಪ ಕೊನೆಯದಾಗಿ ನನಗೆ ಏನು ಹೇಳುತಿದ್ದನೋ ಏನೋ..? ಇವತ್ತಿಗೂ ಯೋಚಿಸುತ್ತಿದ್ದೇನೆ. ಈಗ ಅಪ್ಪ ಅವ್ವನೊಂದಿಗೆ ದಶಕಗಳ ಕಾಲ ಇಷ್ಟಪಟ್ಟು ಬೆಳೆಸಿದ್ದ ತೋಟದಲ್ಲಿನ ಪೇರಲ ಗಿಡಗಳ ಮಧ್ಯೆಯೇ ಈಗ ಅಪ್ಪ ಸದ್ದಿಲ್ಲದೇ ತಣ್ಣಗೆ ಮಲಗಿದ್ದಾನೆ.
ಅವತ್ತು ನನ್ನ ಮಗನ ಅಕ್ಷರಾಭ್ಯಾಸದ ಸಮಯದಲ್ಲಿ ಶಂಕರಮಠದ ಮೆಟ್ಟಿಲು ಹಾಗೂ ಶಂಕರ್ ಅಸ್ಪತ್ರೆಯ ಆ ವರಾಂಡ ಇಲ್ಲದ ಅಪ್ಪನನ್ನು ನಾನು ಮತ್ತೆ ನೆನೆಯುವಂತೆ ಮಾಡಿತ್ತು. ಅಪ್ಪನ ಆ ದಿನಗಳಲ್ಲಿ ಮುಳುಗಿದ್ದ ನನಗೆ ಪಕ್ಕದಲ್ಲಿಯೇ ಇದ್ದ ಮಗನ ಕಲರವ ಕಿವಿಗೆ ಬಿತ್ತು. ಸಂಪ್ರದಾಯದಂತೆ ಅಕ್ಷರಾಭ್ಯಾಸ ಮುಗಿದ ಖುಷಿಯಲ್ಲಿ ಅಥರ್ವ ಸ್ಲೇಟು ಬಳಪ ಹಿಡಿದು ತನಗಿಷ್ಟವಾಗಿದ್ದನ್ನು ಗೀಚತೊಡಗಿದ್ದ. ಮೊಮ್ಮಗನನ್ನು ನೋಡಿ ಅಪ್ಪ ನಕ್ಕು ಅಲ್ಲಿಂದ ಮರೆಯಾದನೋ ಏನೋ..? ನಾವು ಮತ್ತೊಮ್ಮೆ ಶಾರದಾಂಬೆಗೆ ಕೈ ಮುಗಿದು ಅಲ್ಲಿಂದ ಹೊರಟೆವು. ಅಪ್ಪನಿಗೆ ಕ್ಯಾನ್ಸರ್ ಇದೆಯೆಂದು ಗೊತ್ತಾಗಿ ನಾನು ಅಳುತ್ತಿರುವುದನ್ನು ನೋಡಿ ಅವತ್ತು ಸಾಂತ್ವಾನ ಹೇಳಿದ್ದ ಶಂಕರಮಠದ ಮೆಟ್ಟಿಲುಗಳು ನನ್ನ ಮಗನ ಅಕ್ಷರಾಭ್ಯಾಸಕ್ಕೆ ಸಾಕ್ಷಿಯಾಗಿ ಹರಸಿದ್ದವು.
ಪತ್ರಕರ್ತ - ಚಿತ್ರಸಾಹಿತಿ - ಲೇಖಕ
0 Followers
0 Following