ಛದಸ್ಸು ಮತ್ತು ಅಲಂಕಾರ

ಛಂದಸ್ಸು

ProfileImg
01 Feb '24
10 min read


image

ಕನ್ನಡ ಛಂದಸ್ಸಿನ ಸ್ವರೂಪ [ಛಂದಸ್ಸು ಎಂದರೇನು?], ಕನ್ನಡ ಛಂದಸ್ಸಿನ ಇತಿಹಾಸ ಹಾಗೂ ಪ್ರಯೋಜನ:

ಛಂದಸ್ಸು ಎಂದರೇನು?:

  ಭರತಖಂಡದ ಬಹುಪ್ರಾಚೀನವಾದ ಸಾಹಿತ್ಯಾಬ್ಯಾಸ ಕುರಿತಂತೆ ಪ್ರಮುಖ ಸ್ಥಾನಪಡೆದ ಹಲವಾರು ಶಾಸ್ತçಗಳಲ್ಲಿ ‘ಛಂದಶ್ಶಾಸ್ತç’ವೂ ಒಂದು. ಎಂದರೆ, ಛಂದಸ್ಸು ಬಹುಪ್ರಾಚೀನ ಕಾಲದಿಂದಲೂ ಒಂದು ಅಧ್ಯಯನ ಯೋಗ್ಯವಾದ ಶಾಸ್ತçವಾಗಿ ಭರತಖಂಡದಲ್ಲಿಬೆಳೆದು ಬಂದಿದೆ. ಈ ಛಂದಸ್ಸು ಎನ್ನುವುದು ಪದ್ಯರಚನೆಗೆ ಅಥವಾ ಕಾವ್ಯರಚನೆಗೆ ಅತ್ಯಂತ ಅವಶ್ಯಕವಾದ ಒಂದು ಪ್ರಮುಖಾಂಗ. ಆದ್ದರಿಂದ ‘ಛಂದಸ್ಸು’ ಎಂದರೆ, ಪದ್ಯರಚನೆಗೆ ಅಥವಾ ಕಾವ್ಯರಚನೆಗೆ ನಿಯಮಗಳನ್ನು ವಿಧಿಸುವ ಅಥವಾ ಕಟ್ಟುಕಟ್ಟಳೆಗಳನ್ನು ಹೇಳುವ ಒಂದು ವಿಧಾನ. ಹೀಗೇ ಪದ್ಯ ಅಥವಾ ಕಾವ್ಯಕ್ಕೆ ನಿಯಮಗಳನ್ನು ವಿಧಿಸುವ ಒಂದು ಶಾಸ್ತçವೇ ‘ಛಂದಶ್ಶಾಸ್ತç’. ಆದರೆ, ‘ಛಂದಸ್ಸು’ ಅಥವಾ ‘ಛಂದಶ್ಶಾಸ್ತç’ ಕಾವ್ಯಕ್ಕೆ ನಿಯಮಗಳನ್ನು ವಿಧಿಸುತ್ತದೆಯೆನ್ನುವುದಾದರೂ, ಅದಕ್ಕೂ ಒಂದು ಮಿತಿಯಿದೆ ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ಅಂತೆಯೇ, ಶಾಸ್ತçಕಾರರು ಕಾವ್ಯಕ್ಕೆ ಛಂದಸ್ಸು ಅಥವಾ ಪದ್ಯರಚನೆಯ ಕಟ್ಟುಕಟ್ಟಳೆಗಳು ಎಷ್ಟರಮಟ್ಟಿಗೆ ಅವಶ್ಯವೆನ್ನುವುದನ್ನು ಕರಿತು ವಿಚಾರಿಸಿದ್ದುಂಟು.

ಛಂದಸ್ಸು ಪದದ ನಿಷ್ಪತ್ತಿ:

  ಕಾವ್ಯರಚನೆಯಲ್ಲಿ ಛಂದಸ್ಸು ಒಂದು ಅನಿವಾರ್ಯವಾದ ಅಂಗ. ಕಾವ್ಯಕ್ಕೆ ಸೀಮಿತವಾದ ಈ ಛಂದಸ್ಸಿನ ಸ್ವರೂಪ ಕುರಿತಂತೆ, ಅನೇಕ ನಿಘಂಟುಕಾರರು ಹಾಗೂ ವ್ಯಾಕರಣಕಾರರು ಬಗೆಬಗೆಯ ನಿಷ್ಪತ್ತಿಗಳನ್ನು ಹೇಳಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಗಮನಿಸಬಹುದು:

  ಪ್ರಾಚೀನಕಾಲದಲ್ಲಿ ಛಂದಸ್ಸಿನ ನಿಷ್ಪತ್ತಿಯನ್ನು ವೇದಗಳಲ್ಲಿ ಗುರುತಿಸಿದಂತೆ ಕಂಡು ಬರುತ್ತದೆ. ‘ಛಂದಸ್ಸು’ ಪದ ಮೊದಲು ವೇದಗಳಲ್ಲಿ ಮಾತ್ರ ಬಳಕೆಯಲ್ಲಿದ್ದು, ನಂತರ ಅದು ಸಾಹಿತ್ಯವಲಯ ಪ್ರವೇಶಿಸಿದಂತೆ ತಿಳಿದು ಬರುತ್ತದೆ. ಪ್ರಾಚೀನ ವ್ಯಾಕರಣಕಾರರು ವೇದಗಳನ್ನೇ ‘ಛಂದಸ್ಸು’ ಎಂದು ಕರೆದರು. ಪಾಣಿನಿಯ ‘ಅಷ್ಟಧ್ಯಾಯೀ’ ವ್ಯಾಕರಣಗ್ರಂಥ, ‘ರಘುವಂಶ’, ‘ಯಾಜ್ಞಾವಲ್ಕö್ಯ’, ‘ಮನುಸ್ಮೃತಿ’, ‘ಉತ್ತರರಾಮಚರಿತೆ’- ಮುಂತಾದ ಕಡೆಗಳಲ್ಲೆಲ್ಲ ‘ಛಂದಸ್’ ಪದ ವೇದಮಂತ್ರಗಳಿಗೆ ಉಪಯೋಗಿಸಿದ ಪದವಾಗಿದೆ. ವೇದದ ಛಂದೋಬದ್ಧವಾದ ಭಾಗ ‘ಛಂದಸ್ಕೃತA’ ಎನಿಸಿಕೊಂಡಿದೆ. ವೇದವನ್ನು ಓದಿದವನು ‘ಛಾಂದಸ’; ಸಾಮವೇದವನ್ನು ಪಠಿಸತಕ್ಕವನು ‘ಛಂದೋಗ’; ವೇದಭಾಷೆ ‘ಛಂದೋಭಾಷೆ’; ವೇದಮಂತ್ರಗಳನ್ನು ಒಳಗೊಂಡ ವೈದಿಕಸಂಹಿತೆಗಳು ‘ಛಂದೋಮಯಿವಾಕ್’. ಹೀಗೆ ‘ಛಂದಸ್’ ಪದ ವೇದಾರ್ಥದಲ್ಲಿ ಪ್ರಚಲಿತವಿದ್ದುದನ್ನು ಕಾಣುತ್ತೇವೆ.

  ಪ್ರಾಚೀನ ವ್ಯಾಕರಣಕಾರರು ಇದಕ್ಕನುಗುಣವಾಗಿ ಕೆಲವು ನಿಷ್ಪತ್ತಗಳನ್ನು ಸೂಚಿಸಿದ್ದು, ಅವು ಇಂತಿವೆ:

  “ಚದಿ ಆಹ್ಲಾದೇ”-ಎಂದರೆ, ಆಹ್ಲಾದವನ್ನುಂಟು ಮಾಡುವುದು ಯಾವುದೋ, ಅದು ಛಂದಸ್ಸು”. ವೇದಜ್ಞರನ್ನು ಆಹ್ಲಾದಗೊಳಿಸುವ ವೇದಗಳೇ ಛಂದಸ್ಸು- ಎಂಬುದು ಇಲ್ಲಿಯ ಆಶಯ. “ಛದಿರೂರ್ಜನೆ” ಎಂಬ ಇನ್ನೊಂದು ಮಾತೂ ಇದೆ. ಎಂದರೆ, “ಬಲಶಾಲಿಗಳನ್ನಾಗಿ ಮಾಡುವುದು ಯಾವುದೋ, ಅದು ಛಂದಸ್ಸು”. ವೇದಾಧ್ಯಯನ ಬ್ರಾಹ್ಮಣರನ್ನು ಬಲಶಾಲಿಗಳನ್ನಾಗಿ ಮಾಡುತ್ತದೆ ಎಂಬುದು ಇದರ ತಾತ್ಪರ್ಯ. " ಛದ ಅಥವಾರಣೇ" ಇನ್ನೊಂದು ಛಂದೋನಿಷ್ಪತ್ತಿ ವಾಕ್ಯ. ಎಂದರೆ, ಯಾವುದು ದೋಷ ಹಾಗೂ ಪಾಪಗಳನ್ನು ಮುಚ್ಚುತ್ತದೆಯೋ ಅಥವಾ ನಿವಾರಿಸುತ್ತದೆಯೋ, ಅದು ಛಂದಸ್ಸು" ಎಂಬುದು ಇಲ್ಲಿನ ಆಶಯ.

  ಹೀಗೆ, ಮೊದಮೊದಲು ವೇದ ಹಾಗೂ ಅವುಗಳಲ್ಲಿನ ‘ಗಾಯತ್ರಿ’ ಮೊದಲಾದ ಪದ್ಯಜಾತಿಗಳಿಗೆ ಅನ್ವಯಿಸುತ್ತಿದ್ದ ‘ಛಂದಸ್’ ಪದ, ಅನಂತರದಲ್ಲಿ ವಿವಿಧ ಸಂಸ್ಕೃತ ವೃತ್ತ ಹಾಗೂ ಅವುಗಳನ್ನು ಒಳಗೊಳ್ಳುವ ವರ್ಗಗಳಿಗೆ ಅನ್ವಯಿಸುವಂತಾಗಿ ಸಾಹಿತ್ಯವಲಯವನ್ನು ಪ್ರವೇಶೀಸಿತು. ಇದರ ಪರಿಣಾಮವಾಗಿ ಸಂಸ್ಕೃತ ವೃತ್ತಗಳು ‘ಛಂದಸ್ಸು’ ಎಂದು ಕರೆಸಿಕೊಳ್ಳತೊಡಗಿದವು. ಕಾವ್ಯರಚನೆಯ ವಿಧಿ-ವಿಧಾನಗಳನ್ನು ತಿಳಿಸುವ ‘ಛಂದಶ್ಯಾಸ್ತç’ಕ್ಕೆ ‘ಛಂದೋವಿಚಿತಿ’ ಎನ್ನುವಂತೆಯೇ, ‘ಛಂದಸ್’ ಎಂದು ಕರೆಯುವುದೂ ರೂಢಿಗೆ ಬಂತು. ಹಾಗೆಯೇ ಮಾತ್ರಾಕ್ಷರಗಳ ನಿಯಮದಿಂದ ಕೂಡಿದ ವಾಕ್. ಅಕ್ಷರ ನಿಯಮದಿಂದ ಕೂಡಿದ ವಾಕ್, ಅಂಶನಿಯಮದಿAದ ಕೂಡಿದ ವಾಕ್- ಇವೆಲ್ಲ ‘ಛಂದಸ್ಸು’ ಎಂದು ಪದ್ಯರಚನೆಯ ವಿಧಿಗೆ ಅನ್ವಯಿಸಿ, ಸಂಕುಚಿರ್ತಾದಲ್ಲಿ ಇವುಗಳನ್ನು ‘ಮಾತ್ರಾಛಂದಸ್ಸು’, ‘ಅಕ್ಷg ಛಂದಸ್ಸು’ ಹಾಗೂ ‘ಆಂಶಛಂದಸ್ಸು’ಎಂದು ಕರೆಯುವುದು ಪ್ರಚಲಿತಕ್ಕೆ ಬಂದಿತು. ಹೀಗೆ, ‘ಛಂದಸ್’ ಎಂದರೆ, ವೇದಮಂತ್ರ, ವೇದಪಾಠ ಹಾಗೂವೇದಗಳ ಆವರಣ ಎಂದು ತಿಳಿಯಲಾಗುತ್ತಿತ್ತು. ನಂತರ ವೈದಿಕಭಾಷೆಯನ್ನೇ ‘ಛಂದಸ್’ ಎಂದು ಕರೆಯುವ ಪದ್ಧತಿಯೂ ರೂಢಿಗೆ ಬಂದಿತು. ಅನಂತರದಲ್ಲಿ ಗೇಯವಾದ ಹಾಗೂ ಲಯಬದ್ಧವಾದ ಎಲ್ಲ ರಚನೆಗಳಿಗೂ, ಲೌಕಿಕ ಛಂದಸ್ಸಿನ ಎಲ್ಲ ವೃತ್ತಗಳಿಗೂ ‘ಛಂದಸ್ಸು’ ಪದ ಅನ್ವಯಿಸುವಂತಾಗಿರಬೇಕು.

  ಸಾಮಾನ್ಯವಾಗಿ, ಛಂದಸ್ಸಿನ ನಿಷ್ಪತ್ತಿಯನ್ನು ಹೆಚ್ಚು ಕಡಿಮೆ ಒಂದೇ ಅರ್ಥ ಕೊಡುವ ‘ಛದ್’ ಮತ್ತು ‘ಛಂದ್’ ಎಂಬೆರಡು ಧಾತುಗಳಿಂದ ಸಾಧಿಸಲಾಗುತ್ತದೆ. ಇವೆರಡು ಧಾತುಗಳು ಆಚ್ಛಾದಿಸು ಅಥವಾ ಹೊದಿಸು ಎಂಬರ್ಥವನ್ನು ಕೊಡುತ್ತವೆ. ಛಂದಸ್ಸೆಂದರೆ ಕಾವ್ಯಕ್ಕೆ ಒಂದು ಆವರಣ, ಒಂದು ಆಚ್ಛಾದನವಿದ್ದಂತೆ ಎಂಬ ಹೇಳಿಕೆ ಪಾಶ್ಚಾತ್ಯ ತತ್ವಜ್ಞಾನಿ ಹೆಗಲ್‌ನದು. ಛಂದಕ್ಕೆ ಈ ಅರ್ಥ ತಕ್ಕಮಟ್ಟಿಗೆ ಸಮಂಜಸವಾಗಬಹುದಾದರೂ, ಅದು ಛಂದಸ್ಸು ಮತ್ತು ಕಾವ್ಯಗಳಲ್ಲಿರುವ ನಿಕಟವಾದ ಸಂಬಂಧವನ್ನು ಸರಿಯಾಗಿ

ವ್ಯಕ್ತಮಾಡುವುದಿಲ್ಲವೆಂದು ಎಂಬುದು ಡಿ.ಎಸ್. ಕರ್ಕಿಯವರ ಮತ. ಆದ್ದರಿಂದ ಅವರು “ಆಹ್ಲಾದವನ್ನುಂಟು ಮಾಡುವುದು ಯಾವುದೋ, ಅದು ಛಂದಸ್ಸು”ಎಂದು ಅಭಿಪ್ರಾಯಪಡುವುದುಂಟು. ಛಂದಕ್ಕೆ ಈ ಅರ್ಥ ಹೆಚ್ಚು ಒಪ್ಪುತ್ತದೆ ಎಂಬುದು ಅವರ ಅಭಿಮತ. ನಿಯತವಾದ ಆವರ್ತನೆಯಿಂದುಂಟಾಗುವ ಆಂದೋಲನದಿಂದ ಛಂದಸ್ಸು ನಿಜವಾಗಿಯೂ ಆನಂದವನ್ನುಂಟು ಮಾಡುತ್ತದೆ ಎಂಬುದು ಅವರ ವಿಚಾರ. ರಸಾತ್ಮಕವಾದ ಕಾವ್ಯದಲ್ಲಿ ಗೋಚರಿಸುವ ಮುಖ್ಯ ಅಂಶವೆAದರೆ ಭಾವ, ನಾದ ಮತ್ತು ಭಾಷೆಗಳ ಸಾಮರಸ್ಯ. ಕಾವ್ಯದ ಆತ್ಮವಾದ ರಸದ ಪರಿಪಾಕಕ್ಕೆ ಈ ಸಾಮರಸ್ಯವೇ ಕಾರಣ. ಗದ್ಯದಲ್ಲಿ ನಾದವಿದ್ದರೂ, ಅಲ್ಲಿನ ನಾದಕ್ಕೆ ಪದ್ಯದಲ್ಲಿರುವ ಲಯದ ಸೊಗಸಿರುವುದಿಲ್ಲ. ಪದ್ಯದ ನಾದದಲ್ಲಿ ಅದರದೇ ಆದ ಒಂದು ಲಾಸ್ಯವಿರುತ್ತದೆ. ಇದು ಕಾವ್ಯದ ಅಂತರAಗವನ್ನೂ ಛಾಯೆಗಾಣಿಸುವುದಲ್ಲದೆ, ಅದರ ಬಾಹ್ಯಾಂಗ ಸೌಂದರ್ಯಕ್ಕೂ ಕಳೆಕಟ್ಟುತ್ತದೆ. ಅತ್ತ ಭಾವ ಅತಿ ಸೂಕ್ಷö್ಮ: ಇತ್ತ ಭಾಷೆ ಸ್ಥೂಲ. ನಾದಲಯ ಅವೆರಡಕ್ಕೂ ಮಧ್ಯವರ್ತಯಾಗಿದ್ದು, ಅವುಗಳಲ್ಲಿ ತಾಳ-ಮೇಳವನ್ನುಂಟು ಮಾಡುತ್ತದೆ. ಇದುವೇ ಛಂದಸ್ಸಿನ ರಹಸ್ಯ. ಭಾವ ನಾದಲಯದಲ್ಲಿ ಹೊರಹೊಮ್ಮುತ್ತದೆ. ಆ ನಾಧಲಯದಲ್ಲಿ ಭಾಷೆ ಅಳವಟ್ಟು ಕಾವ್ಯಕ್ಕೆ ಒಂದು ನಿಶ್ಚಿತ ರೂಪರಾಗವನ್ನು ಒದಗಿಸುತ್ತದೆ. ಕಾವ್ಯ ರೂಪುಗೊಳ್ಳುವುದು ಹೀಗೆಯೇ. ಸಹೃದಯನಿಗೆ ರಸಾನುಭವವನ್ನುಂಟು ಮಾಡುವಲ್ಲಿ ಕಾವ್ಯದ ಬಾಷೆಯ ಜೊತೆಗೆ ಅದರ ಛಂದಸ್ಸೂ ಸಹಾಯಕವಾಗುತ್ತದೆ. ಎಂದರೆ, ಭಾಷೆಯ ಮುಖಾಂತರ ಹೇಗೋ ಹಾಗೆಯೇ, ಛಂದಸ್ಸಿನ ಮುಖಾಂತರವಾಗಿಯೂ ಕವಿಯ ಬಾವ ರಸಿಕನ ಭಾವವಾಗಿ ಪರಿಣಮಿಸುತ್ತದೆ.

  ಆದರೆ, ನಾವು ನೆನಪಿನಲ್ಲಿಡಬೇಕಾದ ಮುಖ್ಯಾಂಶವೆAದರೆ ಛಂದಸ್ಸು ಕಾವ್ಯದ ಹೊರಗಿನ ಅಂಶವಲ್ಲ; ಒಳಗಿನ ಅಂಶ ಎಂಬುದು. ಅಂತಯೇ, “ಕವಿ ತನ್ನ ಭಾವನೆಗಳಿಗೆ ಮಾತಿನ ರೂಪವನ್ನು ಕೊಟ್ಟು, ಬಳಿಕ ಆ ಪಾಕವನ್ನು ಪಾತ್ರೆಗಳಲ್ಲಿ ನೀರು ತುಂಬುವAತೆ ಕೆಲವು ವೃತ್ತಗಳಲ್ಲಿ ತುಂಬಿ ಬಿಡುವುದಿಲ್ಲ; ಬದಲಿಗೆ ಕವಚಧಾರಿಯಾಗಿ ಕರ್ಣ ಜನಿಸಿದಂತೆ ಭಾವಗಳು ಕವಿಯ ಛಂದೋಬದ್ಧವಾಗಿ ರೂಪುತಳೆದು ಹೊರಬೀಳುತ್ತವೆ. ಒಂದು ಪದ್ಯಬಂಧಕ್ಕೂ, ಅದರಲ್ಲಿ ವ್ಯಕ್ತವಾಗುವ ಭಾವಗಳಿಗೂ ಬಹು ಹತ್ತರದ ಸಂಬAಧವಿದೆ”ಎನ್ನುತ್ತಾರೆ ತೀ.ನಂ.ಶ್ರೀ-ತಮ್ಮ ‘ಸಮಾಲೋಕನ’ ಕೃತಿಯಲ್ಲಿ. ಆದಿಕವಿ ವಾಲ್ಮೀಕಿ ತನ್ನ ಮೂಡಿದ ಭಾವನೆಗಳಿಗೆ ವೇದಿಕೆಯನ್ನು ಪೂರೈಸಲು ಕೇವಲ ನೆನಪಿಗೆ ನೆರವಾಗಬೇಕೆಂದು ‘ಅನುಷ್ಟಬ್’ ಛಂದಸ್ಸನ್ನು ಆಶ್ರಯಿಸಿದ ಎನ್ನುವುದಕ್ಕಿಂತ ‘ಅನುಷ್ಟಬ್’ ಛಂದಸ್ಸಿನಲ್ಲಿ ಕವಿಯ ಮನೋಭಾವ ಸ್ಪಂದಿಸಿತು- ಎಂದು ಹೇಳುವುದು ಹೆಚ್ಚು ಸಮಂಜಸ.

   ಛಂದಸ್ಸು ಕಾವ್ಯದ ಸಹಜ ಸುಂದರ ಸ್ವರಾಂದೋಲನ. ಅದು ಪದ್ಯದ ಪ್ರಾಣ. ಕಾವ್ಯಕ್ಕೆ ಚಲನೆ ಉಂಟಾಗುವುದು ಛಂದದಿAದಲೇ. ಕಾವ್ಯದೇವಿಯ ಅಂತರAಗ ತರತರಂಗವಾದಾಗ ಅವಳ ಅಂಗ ಛಂದೋಭಂಗಿಯಲ್ಲಿ ಚಲಿಸುತ್ತದೆ. ಭಾಷೆ ಹೆಗೋ ಹಾಗೆ ಛಂದಸ್ಸು. ಅದು ಕಾವ್ಯಕನ್ನಿಕೆಯ ಮೈಲುಗಲ್ಲೂ ಅಲ್ಲ; ಭಾವ ಹೇಗೇ ಹಾಹೆ, ಅದು ಅವಳ ಆತ್ಮವೂ ಅಲ್ಲ. ಅದು ಅವಳ ಆತ್ಮಶ್ರೀಯನ್ನು ಅಂಗಾAಗಗಳ ಚಲನೆಯಿಂದ ಸುಳುಹುಗಾಣಿಸುವ ಒಣದು ವಿಧಾನ ಎಂಬುದು ಕರ್ಕಿಯವರ ಅಭಿಪ್ರಾಯ.

  ಪ್ರಪಂಚದ ಯಾವುದೇ ಸಾಹಿತ್ಯದ ಎರಡು ಪ್ರಕಾರಗಳೆಂದರೆ ಗದ್ಯ ಮತ್ತು ಪದ್ಯ. ಗದ್ಯ ಛಂದೋರಹಿಯವಾದ ಒಂದು ವಿಧಾನವಾದರೆ, ಪದ್ಯ ಛಂದೀಬದ್ಧವಾದ ಒಂದು ವಿಧಾನ. ಗದ್ಯದಲ್ಲಿ ಭಾವಾಭಿವ್ಯಕ್ತಿಗೆ ಭಾಷೆಯೊಂದೇ ಸಾಧನ. ಆದರೆ ಪದ್ಯದಲ್ಲಿ ಭಾವಾಭಿವ್ಯಕ್ತಿಗೆ ಭಾಷೆಯ ಜೊತೆಗೆ ತಾಳಲಯವೂ ಸಾಧನವಾಗುತ್ತದೆ.

  ಸ್ವರಗಳ ಆಂದೋಲನವೇ ಅಥವಾ ಸ್ವರಾಂದೋಲನವೇ ಛಂದಸ್ಸು. ಸ್ವರಗಳ ಸಂಯೋಜನೆಗಳೇ ಗಣ. ಗಣಗಳ ಆವರ್ತನೆಯಿಂದ ಲಯ. ಲಯದ ವಿಭಾಗವಾಗಿ ಚರಣ. ಚರಣಗಳ ಆವರ್ತನೆಯಿಂದ ಪದ್ಯ. ಇದು ಛಂದಸ್ಸಿನಲ್ಲಿ ಕಂಡು ಬರುವ ಒಂದು ಸಾಮಾನ್ಯ ವಿಧಾನ; ವಿನ್ಯಾಸ. ಎಲ್ಲ ಛಂದಸ್ಸುಗಳಲ್ಲೂ ಇದನ್ನು ಕಾಣಬಹುದು. ಮೇಲಾಗಿ ಎಲ್ಲ ಛಂದಸ್ಸುಗಳಿಗೂ ಅನ್ವಯವಾಗುವ ಅಂಶಗಳೆAದರೆ ಯತಿ,ಪ್ರಾಸ ಮತ್ತು ಅನುಪ್ರಾಸಗಳು. ಅಲ್ಲದೆ, ಕೇಲವು ಛಂದೋಬAಧಗಳAತೂ ಕನ್ನಡ, ಸಂಸ್ಕೃತ, ಪ್ರಾಕೃತಗಳಲ್ಲಿ ಒಂದೇ ಗತಿಗಮಕಗಳನ್ನು ಒಳಗೊಂಡಿವೆ.

  ವಿದ್ವಾಂಸರು ಛಂದಸ್ಸನ್ನು ಕುರಿತಂತೆ, ಎರಡು ದೃಷ್ಟಿಗಳನ್ನು ಹೊಂದಿದ್ದಾರೆ. ಒಂದು ಸೌಂದರ್ಯ ದೃಷ್ಟಿ; ಇನ್ನೊಂದು ಪ್ರಯೋಜನ ದೃಷ್ಟಿ. ಛಂದಸ್ಸು ಕಾವ್ಯದ ಸೌಂದರ್ಯವನ್ನು ಹೆಚ್ಚಿಸಿ ಆನಂದವನ್ನು ನೀಡುತ್ತದೆ ಎಂಬುದು ಸೌಂದರ್ಯ ದೃಷ್ಟಿ. “ಪದ್ಯಂ ಸಮಸ್ತ ಜನತಾ ಹೃದ್ಯಂ” ಎಂದಿದ್ದಾನೆ ಕವಿರಾಜಮಾರ್ಗಕಾರ. ಆತನ ಪ್ರಕಾರ ಕಾವ್ಯ ಸಮಸ್ತ ಜನತೆಗೆ ಆಪ್ಯಾಯಮಾನವಾಗುತ್ತದೆಂಬುದೇನೋ ನಿಜ. ಆದರೆ ಕಾವ್ಯದಲ್ಲಿನ ಈ ಹೃದ್ಯತೆ ಬರೀ ಛಂದಸ್ಸಿನಿAದಲೇ ಬಂದುದಲ್ಲ; ಅದು ಕವಿಯ ಅನುಭವ. ಶೈಲಿ, ಅಲಂಕಾರಗಳೊAದಿಗೆ ಛಂದಸ್ಸೂ ಕೂಡ ಕಾವ್ಯಕ್ರಿಯೆಯಲ್ಲಿ ತೊಡಗುತ್ತದೆ. ಆದ್ದರಿಂದ, ಅದೊಂದಕ್ಕೇ ಸಂಪೂರ್ಣವಾಗಿ ಕಾವ್ಯದ ಯಶಸ್ಸನ್ನೆಲ್ಲ ಕಟ್ಟಲಾಗದು. ಆದರೆ ಛಂದೋರಹಿತವಾದ ತನ್ನ ಶಕ್ತಿಯಿಂದ ಓದುಗರ ಹೃದಯವನ್ನು ಸೂರೆಗೊಳ್ಳುವುದೂ ಉಂಟು. ಛಂದಸ್ಸು ಮಾತ್ರೆ, ಗಣ, ಚರಣ, ಯತಿ, ಪ್ರಾಸಗಳ ಲೆಕ್ಕಾಚಾರಗಳನ್ನೊದಗಿಸುವ ಶಾಸ್ತçವಾದುದರಿಂದ, ಅದರಿಂದಲೇ ಕಾವ್ಯ ಆದ್ಯತೆಯನ್ನು ಪಡೆಯುತ್ತದೆಯೆಂದಾಗಲೀ, ಅದೊಂದು ಕಲೆಯೆಂದಾಗಲೀ ಹೇಳುವುದು ಸರಿಯಲ್ಲ.      

  ಆದರೆ ಹೀಗೆಂದ ಮಾತ್ರಕ್ಕೆ ಕಾವ್ಯಕ್ಕೆ ಛಂದಸ್ಸಿನ ಅವಶ್ಯಕತೆಯೇ ಇಲ್ಲವೆಂದಲ್ಲ. ‘ಕಾವ್ಯ ಛಂದೋಬದ್ಧವಾದ ಒಂದು ರಚನೆ’ ಎಂ¨ ಮಾತೊಂದಿದೆ. ಮುಕ್ತಛಂದ ಎಂದು ನಾವೇನು ಕರೆಯುತ್ತೆವೆಯೋ, ಅದೂ ಸಹಿತ ಛಂದಸ್ಸಿನ ಒಂದು ಪ್ರಕಾರವೇ! ಈ ಅರ್ಥದಲ್ಲಿ ‘ಛಂದಸ್ಸು ಕವಿಯ ಕಣ್ಣಿನ ಬೆಳಕು’ ಎಂಬ ನಾಗವರ್ಮನ ಮಾತು ಇಲ್ಲಿ ತುಂಬಾ ಗಮನಾರ್ಹ. ಪ್ರಾಚೀನ ಕಾವ್ಯ ಛಂದೋಬದ್ಧ ರಚನೆಯಿಂದ ಕೂಡಿರುವುದರಿಂದ, ಮತ್ತು ಆ ಕಾಲದ ಕಾವ್ಯಕ್ಕೆ ಛಂದಸ್ಸಿನ ಅಗತ್ಯ ಅನಿವಾರ್ಯವಿದ್ದುದರಿಂದ ಆ ಕಾಲಕ್ಕೆ ವೈವಿಧ್ಯಮಯ ಛಂದೋರಚನೆಗಳು ಪ್ರಕಟವಾದವು. ಇದರಿಂದ ಹಳೆಯ ಸಾಹಿತ್ಯದ ಅಭ್ಯಾಸಕ್ಕೆ ಛಂದಸ್ಸಿನ ತಿಳಿವಳಿಕೆ ತುಂಬಾ ಅಗತ್ಯ; ಅವಶ್ಯ. ಅಂತಯೇ ನಾಗವರ್ಮ-   

      “ಛಂದಮನಱಿಯದೆ ಕವಿತೆಯ     

        ದಂದುಗದೊಳ್ ತೊಳಲಿ ಸುಳಿವ

        ಕುಕವಿಯೇ ಕರುಡಂ

ಎಂದಿರುವುದು ಸಹಜವಾಗಿಯೇ ಇದೆ.

  ಪಂಪರನ್ನಾದಿ ಪ್ರಾಚೀನಕವಿಗಳಷ್ಟೇ ಅಲ್ಲ, ಹೊಸಗನ್ನಡಕವಿಗಳೂ ಸಹಿತ ಛಂದಸ್ಸಿನ ಬಗ್ಗೆ ಸಾಕಷ್ಟು ಒಲವು ತೋರಿದ್ದಾರೆ. ಸರಳಛಂದಸ್ಸು, ಮಹಾಛಂದಸ್ಸು- ಇವು ಈ ಯುಗದ ವಿಶಿಷ್ಟ ಛಂದೋ ಕೊಡುಗೆಗಳಾಗಿವೆ. ಹೊಸಗನ್ನಡದಲ್ಲಿ ಸರಳಛಂದಸ್ಸನ್ನು ‘ಮಹಾಛಂದಸ್ಸ’ನ್ನಾಗಿ ಪರಿವರ್ತಿಸಿದ ಕುವೆಂಪು ಅವರ ಸಾಧನೆ ಬಹು ದೊಡ್ಡದು. ‘ಚಿತ್ರಾಂಗದ’ ಖಂಡಕಾವ್ಯದಲ್ಲಿ ಸರಳಛಂದಸ್ಸನ್ನು ಬಹುಸಮರ್ಥವಾಗಿ ದುಡಿಸಿಕೊಂಡ ಕುವೆಂಪು ಅವರು, ಅದನ್ನು ತಮ್ಮ “ಶ್ರೀರಾಮಾಯಣ ದರ್ಶನಂ” ಮಹಾಕಾವ್ಯದಲ್ಲಿ ಮಹಾಛಂದಸ್ಸನ್ನಾಗಿ ಪರಿವರ್ತಿಸಿದ್ದು ಗಮನಿಸಬೇಕಾದ ಪ್ರಮುಖಅಂಶ. ಪುತಿನ, ಕಾವ್ಯಾನಂದ, ಎಸ್.ವಿ. ಪರಮೇಶ್ವರಭಟ್ ಹೊಸಗನ್ನಡ ಛಂದಸ್ಸಿನಲ್ಲಿ ಕಾವ್ಯರಚಿಸಿ ಸುಪ್ರಸಿದ್ಧರಾದುದನ್ನೂ ಇಲ್ಲಿ ಗಮನಿಸಬಹುದು.

ಕನ್ನಡ ಛಂದಸ್ಸು ಛಂದಸ್ಸಿನ ಇತಿಹಾಸ :

   ಕನ್ನಡ ಛಂದಸ್ಸಿಗೆ ಒಂದು ಸುದೀರ್ಘವಾದ ಇತಿಹಾಸವಿದೆ. ಕಾವ್ಯಸೃಷ್ಟಿಯೊಂದಿಗೇ ಛಂದಸ್ಸಿನ ಸೃಷ್ಟಿಯೂ ಆಗುತ್ತದೆ. ಕಾವ್ಯ ಸೃಷ್ಟಿಯಾಗುವುದೇ ಛಂದಸ್ಸಿನಲ್ಲಿ. ಛಂದಸ್ಸಿಲ್ಲದೆ  ಕಾವ್ಯ ಸೃಷ್ಟಿ ಸಾಧ್ಯವಿಲ್ಲ. ಆದ್ದರಿಂದ ಕಾವ್ಯಕ್ಕೆ ಛಂದಸ್ಸು ಒಂದು  ಅವಶ್ಯಕ ಅಂಗ.  ಹೀಗಾಗಿ ಕಾವ್ಯಕ್ಕೆ ಎಷ್ಟು ಸುದೀರ್ಘವಾದ ಇತಿಹಾಸವಿರುತ್ತದೆಯೋ, ಛಂದಸ್ಸಿಗೂ ಅಷ್ಟೇ ಸುದೀರ್ಘವಾದ ಇತಿಹಾಸವಿರುತ್ತದೆ. ಏಕೆಂದರೆ, ಛಂದಸ್ಸು ಎನ್ನುವುದು

ಕಾವ್ಯದ ನಾಡಿಯಾಗಿದೆ; ಜೀವ ಜೀವಾಳವಾಗಿದೆ. ಕಾವ್ಯ ಮತ್ತು ಛಂದಸ್ಸುಗಳ ಸಂಬಂಧ ತುಂಬಾ ಅನ್ಯೋನ್ಯವಾದುದು; ಅನನ್ಯವಾದುದು. ಛಂದಸ್ಸು ಕಾವ್ಯದ ನಾಡಿಯಾಗಿ ನುಡಿಯುವುದರಿಂದ, ಅದು ಕಲೆಯ ಅಂಶವನ್ನು ಒಳಗೊಂಡಿರುತ್ತದೆ. "ಮಾತ್ರೆ, ಗಣ, ಚರಣಗಳ ಲೆಕ್ಕಾಚಾರಕ್ಕೆ ಛಂದಸ್ಸು ಎಂದು ಭಾವಿಸದೆ,  ಅದು ಕಾವ್ಯದ ನೃತ್ಯವಿನ್ಯಾಸವೆಂದು ಭಾವಿಸುವುದು ಉತ್ತಮ"ಎನ್ನುತ್ತಾರೆ ಡಿ.ಎಸ್. ಕರ್ಕಿಯವರು.

ಕನ್ನಡ ಛಂದಸ್ಸಿನ ಪ್ರಕಾರಗಳು :

ಕನ್ನಡ ಛಂದಸ್ಸನಲ್ಲಿ ಪ್ರಾಚೀನ ಕನ್ನಡ ಛಂದಸ್ಸು ಹಾಗೂ ಹೊಸಗನ್ನಡ ಛಂದಸ್ಸು ಎಂದು ಎರಡು ಪ್ರಕಾರಗಳನ್ನು ಮಾಡಲಾಗುತ್ತದೆ. ಮತ್ತೆ ಪ್ರಾಚೀನ ಕನ್ನಡ ಛಂದಸ್ಸಿನಲ್ಲಿ ಸಂಸ್ಕೃತ ಛಂದಸ್ಸು (ವೈದಿಕ ಛಂದಸ್ಸು) ಹಾಗೂ ಅಚ್ಚಗನ್ನಡ ಛಂದಸ್ಸು ಎಂದುಎರಡು ಪ್ರಕಾರಗಳನ್ನು  ಮಾಡಲಾಗುತ್ತಿದೆ.

ಸಂಸ್ಕೃತ ಛಂದಸ್ಸು:

ಕನ್ನಡ ಛಂದಸ್ಸಿನ ಮೇಲೆ ಸಂಸ್ಕೃತ ಛಂದಸ್ಸಿನ ಗಾಢ ಪ್ರಭಾವ ಬಹು ಕಾಲದ್ದು, ಕನ್ನಡ ಪ್ರಾಚೀನ ಕವಿಗಳು ಸಂಸ್ಕೃತದ ಮಹಾಭಾರತ, ರಾಮಾಯಣ, ಭಾಗವತ, ಪುರಾಣ, ಮಹಾಕಾವ್ಯ, ನಾಟಕ ಇವುಗಳ ಪ್ರಭಾವಕ್ಕೆ ಒಳಗಾಗಿ ಸಂಸ್ಕೃತದಲ್ಲಿ ಪಾಂಡಿತ್ಯವಳ್ಳವರಾಗಿದ್ದರು. ಸಂಸ್ಕೃತದ ಈ ಪ್ರಭಾವ ಅವರಿಂದ ಮಾರ್ಗಶೈಲಿಯ  ಚಂಪುಮಹಾಕಾವ್ಯಗಳನ್ನು ರಚಿಸಲು ಪ್ರೇರೇಪಿಸಿತು. ಇದರ ಪರಿಣಾಮವಾಗಿ ಕನ್ನಡ ಕವಿಗಳೆಲ್ಲಾ ಸಂಸ್ಕೃತ ಛಂದಸ್ಸನ್ನೇ ಆಧಾರವಾಗಿಟ್ಟುಕೊಂಡು ಚಂಪುಮಹಾಕಾವ್ಯಗಳನ್ನು ರಚಿಸಿದರು. ಅದರಲ್ಲೂ ಪ್ರಾಚೀನ ಕನ್ನಡ ಕವಿಗಳಿಗೆ ಸಂಸ್ಕೃತದ ಆರು ವೃತ್ತಗಳು ಅತ್ಯಂತ ಪ್ರಿಯವಾದವು. ಈ ವೃತ್ತಗಳನ್ನು ಎರಡನೆಯ ನಾಗವರ್ಮ 'ಕರ್ಣಾಟ ವೃತ್ತಗಳೆಂ'ದು ಕರೆದು, ಕನ್ನಡದಲ್ಲಿ ಇವು ನಿಜೋಜ್ವಲವಾಗಿವೆ ; ಸುಪ್ರಸಿದ್ಧವಾಗಿವೆ ಎಂದು ಹೇಳಿದ್ದಾನೆ. ನಾಗವರ್ಮ ಹೇಳುವ  ಕನ್ನಡ ಕವಿಗಳಿಗೆ ಬಹುಪ್ರಿಯವಾದ ಸಂಸ್ಕೃತದ ಆರು ವೃಂತ್ತಗಳೆಂದರೆ - ಉತ್ಪಲಮಾಲೆ- ಚಂಪಕಮಾಲೆ, ಶಾರ್ದೂಲ ವಿಕ್ರೀಡಿತ - ಮತ್ತೇಭವಿಕ್ರೀಡಿತ ಹಾಗೂ ಸ್ರಗ್ಧರೆ - ಮಹಾಸ್ರಗ್ಧರೆ ಎಂಬ ಆರು ವೃತ್ತಗಳು. ಪಂಪನ ಆದಿಪುರಾಣ ಹಾಗೂ ವಿಕ್ರಮಾರ್ಜುನ ವಿಜಯ, ರನ್ನನ ಅಜಿತನಾಥ ಪುರಾಣ ಹಾಗೂ ಸಾಹಸಭೀಮವಿಜಯ (ಗದಾಯುದ್ಧ), ಪೊನ್ನನ ಶಾಂತಿಪುರಾಣ ಈ ಮೊದಲಾದವು  ಸಂಸ್ಕೃತ  ಛಂದಸ್ಸಿನಲ್ಲಿ  ರಚಿತವಾದ ಕನ್ನಡ ಚಂಪುಮಹಾಕಾವ್ಯಗಳು. ಇಲ್ಲೆಲ್ಲಾ ಸಂಸ್ಕೃತ ಛಂದಸ್ಸಿನದೇ ಮೇಲುಗೈ ; ಹೆಗ್ಗಳಿಕೆ. . ಪಂಪನ ನಂತರದ ಕವಿಗಳೆಲ್ಲರೂ  ಸಂಸ್ಕೃತದ ಈ ಮಾರ್ಗಶೈಲಿಯನ್ನೇ ಆಧಾರವಾಗಿಟ್ಟುಕೊಂಡು ಚಂಪುಮಹಾಕಾವ್ಯಗಳನ್ನು ರಚಿಸಿದರು. ಈ ಆರು ವೃತ್ತಗಳ ಜೊತೆಗೆ ಕಂದಪದ್ಯವೂ ಕನ್ನಡ ಕವಿಗಳಿಗೆ ಅತ್ಯಂತ ಪ್ರಿಯವಾದುದು. ಹಾಗೆ ನೋಡಿದರೆ  ಕಾವ್ಯದ ಮುಕ್ಕಾಲು ಭಾಗ ಕಂದಪದ್ಯಗಳಳೇ ಸಾರ್ವಭೌಮತ್ವ!  ಇದನ್ನು ಗಮನಿಸಿದರೆ, ಕನ್ನಡ ಛಂದಸ್ಸಿನ ಮೇಲಾದ ಸಂಸ್ಕೃತದ ಪ್ರಭಾವ ಎಷ್ಟು ಗಾಢವಾದುದು ಎಂಬ ಅಂಶ ನಮಗೆ ಸುವ್ಯಕ್ತವಾಗುತ್ತದೆ.

  ಸಂಸ್ಕೃತ ಛಂದಸ್ಸನ್ನು  'ವೈದಿಕ ಛಂದಸ್ಸು' ಎಂತಲೂ ಕರೆಯಲಾಗುತ್ತದೆ. ಸಂಸ್ಕೃತದಲ್ಲಿ  ಛಂದಸ್ಸು ಹುಟ್ಟಿಕೊಂಡದ್ದೇ ವೇದಗಳಿಗಾಗಿ ಅಥವಾ ವೇದಗಳ ವಾಚನಕ್ಕಾಗಿ. ವೇದಗಳನ್ನು ಆಗ ರಾಗಬದ್ಧವಾಗಿ ಹೇಳಲಾಗುತ್ತಿತ್ತೆಂದು ತಿಳಿದು ಬರುತ್ತದೆ.ಈ  ಸಂಸ್ಕೃತದ ಛಂದಸ್ಸನ್ನು 'ವೃತ್ತಗಳೆಂತಲೂ, 'ವೃತ್ತ ಛಂದಸ್ಸು' ಎಂತಲೂ ಕರೆಯಲಾಗುತ್ತದೆ.

   ಆರು ವೃತ್ರಗಳ ಜೊತೆಗೆ ಕ್ವಚಿತ್ತಾಗಿ ಇನ್ನು ಕೆಲ ಸಂಸ್ಕೃತ ವೃತ್ತಗಳೂ ಕನ್ನಡ ಕಾವ್ಯಗಳಲ್ಲಿ ಪ್ರಯೋಗವಾಗಿವೆ. ಅವೆಂದರೆ – ಮಾಲಿನಿ, ಪೃಥ್ವಿ, ಶಿಖಿರಿಣಿ, ಮಂದಾರಾಂತ್ಯ, ಮಲ್ಲಿಕಾಮಾಲೆ, ತರಳ-ಮುಂತಾದವು.

             ಕನ್ನಡ ಕಾವ್ಯಗಳಲ್ಲಿ ಖ್ಯಾತ ಕರ್ನಾಟಕ ವೃತ್ತಗಳಿಗಿಂತ ಅಧಿಕ ಪ್ರಮಾಣದಲ್ಲಿ ಪ್ರಯೋಗಗೊಂಡ ಛಂದಸ್ಸೆಂದರೆ ಕಂದ.

ಕನ್ನಡ ಚಂಪು ಮಹಾಕಾವ್ಯಗಳಲ್ಲಿಯಂತೂ

ಕಂದಕ್ಕೆ ಅಗ್ರಪಟ್ಟ ; ಸಿಂಹಪಾಲು.  ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕಂದ ಹಲವಾರು ಚಿಕ್ಕ ದೊಡ್ಡ ಕೃತಿಗಳಿಗೆ  ಛಂದೋಮಾಧ್ಯಮವಾಗಿದೆ.ಪರಿಣಾಮವಾಗಿ ಕನ್ನಡದಲ್ಲಿ ಅನೇಕ ಕಂದ ಕಾವ್ಯಗಳು ರಚನೆಗೊಂಡಿವೆ. ಎಂದರೆ, ಕನ್ನಡದಲ್ಲಿ ಕಂದ ಸಮಗ್ರ ಕಾವ್ಯವಾಹಕವಾಗಿಯೂ ಬಳಕೆಗೊಂಡಿದೆ

ಅಚ್ಚುಗನ್ನಡ ಛಂದಸ್ಸು (ಕನ್ನಡ ಛಂದಸ್ಸು):

   ಕನ್ನಡದ ವಸ್ತು, ಭಾಷೆ, ಶೈಲಿ, ಅಲಂಕಾರಗಳಿಂದ ಕೂಡಿದ ಅಥವಾ ಒಟ್ಟಾರೆ ಕನ್ನಡ ಜಾಯಮಾಣದಿಂದ ಕೂಡಿದ ಛಂದಸ್ಸೇ ' ಅಚ್ಚಗನ್ನಡ' ಛಂದಸ್ಸು'. ಇದನ್ನು 'ಕನ್ನಡ ದೇಶ್ಯಛಂದಸ್ಸು' ಎಂತಲೂ ಕರೆಯಲಾಗುತ್ತದೆ. ಕರ್ಕಿಯವರು ಇದನ್ನು  'ಕನ್ನಡ ಛಂದ' ಎಂದೇ ಗೌರವಿಸಿದ್ದಾರೆ. ಕನ್ನಡದಲ್ಲಿಯೇ ಹುಟ್ಟಿ ದ್ರಾವಿಡ ಭಾಷೆಗಳಿಗೆ ಸಹಜವಾದ ಛಂದಸ್ಸಿದು. ಚಾರಿತ್ರಿಕ ‍ದೃಷ್ಟಿಯಿಂದ ಸಂಸ್ಕೃತ ಛಂದಸ್ಸಿನ ನಂತರ ಕನ್ನಡ ಛಂದಸ್ಸಿನ ಮೇಲೆ ಪ್ರಾಭಾವ ಬೀರಿದ  ಛಂದಸ್ಸೆಂದರೆ ಈ ಅಚ್ಚುಗನ್ನಡ ಛಂದಸ್ಸು. ಕನ್ನಡ ಛಂದಸ್ಸಿನ ಇತಿಹಾಸವನ್ನು ಅರಿಯುವಲ್ಲಿ ನಾಗವರ್ಮನ 'ಛಂದೋಂಬುಧಿ' ಒಂದು ಖಚಿತಘಟ್ಟ; ಅಥವಾ ಅದೊಂದು ಬಹುಪ್ರಮುಖವಾದ ದಾಖಲೆ.  ಇದು ಕನ್ನಡದ ಅತ್ಯಂತ ಪ್ರಾಚೀನ ಗ್ರಂಥ ಮಾತ್ರವಲ್ಲ ;  ಕನ್ನಡದ ಮೊಟ್ಟಮೋದಲ ಛಂದೋಗ್ರಂಥ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಸಂಸ್ಕೃತದ ಪಿಂಗಳನಿಂದ ತೆಗೆದು [ಆಕರವನ್ನೆತ್ತಿಕೊಂಡು ] ಕನ್ನಡದಲ್ಲಿ ತಾನು 'ಛಂದೋಂಬುಧಿ'ಯನ್ನು ರಚಿಸಿದುದಾಗಿ ನಾಗವರ್ಮ ತನ್ನ ಈ ಛಂದೋಗ್ರಂಥದಲ್ಲಿ ಹೇಳಿಕೊಂಡಿದ್ದಾನೆ. ಇದನ್ನು ಗಮನಿಸಿದರೆ, ನಾಗವರ್ಮನ ಛಂದೋಂಬುಧಿ ಛಂದೋಗ್ರಂಥಕ್ಕೆಸಂಸ್ಕೃತದ ಪಿಂಗಳನ ಛಂದೋಗ್ರಂಥವೇ ಮೂಲ ಆಕರ ಗ್ರಂಥವೆಂದು ತಿಳಿದು ಬರುತ್ತದೆ. ಆದರೆ, ಕನ್ನಡದಲ್ಲಿ 'ಗುಣಗಾಂಕೀಯಂ' ಎಂಬೊಂದು ಛಂದೋಗ್ರಂಥವಿತ್ತೆಂದು  ಹೇಳಲಾಗುತ್ತಿದೆ. ಇದರ ಕರ್ತೃ ಯಾರೆಂದು ತಿಳಿಯದು. ಇದರ ಕಾಲವೂ ಸ್ಪಷ್ಟವಾಗಿಲ್ಲ. ಈ  ಕೃತಿಯೂ ಉಪಲಬ್ಧವಿಲ್ಲ. ನಾಗವರ್ಮ ಈ ಕೃತಿಯನ್ನಾಗಲಿ, ಯಾವ ಕನ್ನಡ  ಛಂದೋಗ್ರಂಥವನ್ನಾಗಲೀ ಹೆಸರಿಸದೆ , ಸಂಸ್ಕೃತದ ಪಿಂಗಳನಿಂದ ತೆಗೆದು ಹೇಳುತ್ತೇನೆಂದು  ತಿಳಿಸಿ, ಅದಕ್ಕೆ ತಕ್ಕಂತೆ ಪ್ರಸ್ತಾರವನ್ನೂ, ಯತಿಯನ್ನೂ ಹೇಳಿ, ಸಂಸ್ಕೃತ ಪ್ರಾಕೃತ ಮುಂತಾದ ವ್ರತ್ತ ,  ಕಂದ ಮೊದಲಾದವುಗಳನ್ನೂ ನಿರ್ದೇಶಿಸಿ, ದೇಶ  ಅಚ್ಚಗನ್ನಡದಲ್ಲಿರುವ ಪದ್ಯಗಳನ್ನೂ ಹೆಸರಿಸುತ್ತಾನೆ. ಮದನವತಿ, ಅಕ್ಕರ, ಚೌಪದಿ, ಗೀತಿಕೆ, ಏಳೆ, ತಿವದಿ (ತ್ರಿಪದಿ), ಉತ್ಸಾಹ, ಷಟ್ಪದಿ, ಅಕ್ಕರಿಕೆ , ಛಂದೋವತಂಸ -  ಇವು ಅಚ್ಚಗನ್ನಡ ಛಂದಸ್ಸಿನ ಮಟ್ಟುಗಳು.

. ಇವು ಕನ್ನಡಕ್ಕೆ ವಿಶಿಷ್ಟವಾದ  ಮಟ್ಟುಗಳೆಂದು ನಾಗವರ್ಮ ತನ್ನ 'ಛಂದೋಂಬುಧಿ'ಯಲ್ಲಿ  ಹೇಳಿಕೊಂಡಿದ್ದಾನೆ. ಅಲ್ಲದೆ, ಸಂಸ್ಕೃತದ ಸುಪ್ರಸಿದ್ಧ ಛಂದಶಾಸ್ತ್ರಕಾರ ಜಯಕೀರ್ತಿ ತನ್ನ 'ಛಂದೋನುಶಾಸನ'ದಲ್ಲಿ ಇವು ಅಚ್ಚಗನ್ನಡ ಛಂದೋಮಟ್ಟುಗಳೆಂದು ಬೆರಳಿಟ್ಟು ತೋರಿಸಿದ್ದಾನೆ. ನಾಗವರ್ಮ ಒಟ್ಟು ಹತ್ತು ಅಚ್ಚಗನ್ನಡ ಛದೋಮಟ್ಟುಗಳನ್ನು ಹೇಳಿದರೆ, ಜಯಕೀರ್ತಿ ಒಂಬತ್ತು ಹೇಳಿದ್ದಾನೆ. ನಾಗವರ್ಮ ಹೇಳಿದ ಉತ್ಸಾಹವನ್ನು ಜಯರ್ಸಿ ಹೇಳಿಲ್ಲ. ಉಳಿದ ಒಂಬತ್ತು ಮಟ್ಟುಗಳು ಇಬ್ಬರಲ್ಲೂ ಒಂದೇ ಆಗಿವೆ. ಇವು 'ಕರ್ಣಾಟ ವಿಷಯ ಜಾತಿ' ಎಂದೇ ಪ್ರಸಿದ್ಧ.

  ನಾಗವರ್ಮ ಮತ್ತು ಜಯಕೀರ್ತಿ ಹೆಸರಿಸಿದ ಹಾಗೂ ಲಕ್ಷಣಿಸಿದ 'ಕರ್ಣಾಟ ವಿಷಯ ಜಾತಿ'  ಮಟ್ಟುಗಳಲ್ಲಿ ಅಕ್ಕರ, ಗೀತಿಕೆ, ತಿವದಿ, ಚೌಪದಿ ಈ ನಾಲ್ಕನ್ನೂ ಮಾತ್ರ  'ಕವಿರಾಜಮಾರ್ಗ'ದಲ್ಲಿ 'ಚಿತ್ರಾಣ'ವೆಂಬ ಹಾಡುಗಬ್ಬದ ಸಂದರ್ಭದಲ್ಲಿ ಹೆಸರಿಸಲಾಗಿದೆ. ಇದರಿಂದ ಕ್ರಿ.ಶ. 850 ರ ಕವಿರಾಜ ಮಾರ್ಗದ ರಚನೆಯ ಕಾಲಕ್ಕೆ ಈ ನಾಲ್ಕೇ ಛಂದಸ್ಸು ರೂಪುಗೊಂಡಿರಬೇಕೆಂದೂ, ಉಳಿದವು ರೂಪುಗೊಂಡಿದ್ದಿರಬಹುದಾದರೂ ಅಷ್ಟೊಂದು

ಪ್ರಚಲಿತದಲ್ಲಿರಲಿಲ್ಲವೆಂದೂ ಊಹಿಸಬಹುದಾಗಿದೆ.

   ಇನ್ನು ನಮ್ಮ ಕನ್ನಡ ಕಾವ್ಯಗಳನ್ನು ಪರಿಶೀಲಿಸಿದರೆ, ಅವುಗಳಲ್ಲಿ 'ಅಕ್ಕರ' ಹಾಗೂ 'ತಿವದಿ' ಅವೆರಡೇ ಕಾವ್ಯಗಳಲ್ಲಿ ಸೇರುವ ಗಣ್ಯತೆಯನ್ನು ಪಡೆದಿದ್ದುವೆಂದು ಕಂಡು ಬರುತ್ತದೆ. ಸಾಂಗತ್ಯವಂತೂ ಆಗ ಒಂದು ಪ್ರತ್ಯೇಕ ಮಟ್ಟು ಎಂಬ ರೀತಿಯಲ್ಲಿ ರೂಪಗೊಂಡಿರಲಾರದು.

   'ಕರ್ಣಾಟ ವಿಷಯ ಜಾತಿ' ಯ ಹತ್ತು ಮಟ್ಟುಗಳಲ್ಲಿ ತ್ರಿಪದಿ ಅತ್ಯಂತ ಜನಪ್ರಿಯವಾದ ಹಾಗೂ ಬಹು ಪ್ರಾಚೀನವಾದ  ಅಚ್ಚಗನ್ನಡ ಛಂದೋರೂಪ. ಕ್ರಿ. ಶ. ಏಳನೆಯ ಶತಮಾನದ ಬಾದಾಮಿಯ 'ಕಪ್ಪೆ ಅರಭಟ್ಟ'ನ ಶಾಸನದಲ್ಲಿ ಪ್ರಪ್ರಥಮವಾಗಿ ಕಾಣಿಸಿಕೊಳ್ಳುವ ತ್ರಿಪದಿಗೆ ಕನ್ನಡದ ಮೊತ್ತಮೊದಲ ಛಂದೋಮಟ್ಟು ಎಂಬ ಹೆಗ್ಗಳಿಕೆಯಿದೆ. ಜಾನಪದ ಸಾಹಿತ್ಯದ ಮುಕ್ಕಾಲು ಭಾಗವನ್ನು ಆವರಿಸಿರುವ ಈ

ತ್ರಿಪದಿ ಸರ್ವಜ್ಞಕವಿಗಂತೂ ಒಂದು ಸಮರ್ಥ ಕಾವ್ಯಮಾಧ್ಯಮವಾಗಿ ಪರಿಣಮಿಸಿತು. ತ್ರಿಪದಿಯನ್ನು ಬಹುಸಮರ್ಥವಾಗಿ ದುಡಿಸಿಕೊಂಡ  ಶಿಷ್ಟಕವಿ ಎಂದರೆ ಸರ್ವಜ್ಞನೊಬ್ಬನೇ.  ತ್ರಿಪದಿಗೆ ಕನ್ನಡ ಕಾವ್ಯದಲ್ಲಿ ಒಂದು ಸ್ವತಂತ್ರ ಸ್ಥಾನವನ್ನು ಹಾಗೂ ಮಹತ್ವವನ್ನು ತಂದುಕೊಟ್ಟು, 'ತ್ರಿಪದಿಸಾಹಿತ್ಯ ಚಕ್ರವರ್ತಿ', 'ತ್ರಿಪದಿ ಸಾರ್ವಭೌಮ', 'ತ್ರಿಪದಿ ಬ್ರಹ್ಮ' ಎಂದೆಲ್ಲ ಖ್ಯಾತನಾಗಿದ್ದಾನೆ ಸರ್ವಜ್ಞ.

  ತ್ರಿಪದಿಯ ಉಗಮವನ್ನು ನಾವು 7 ನೆಯ ಶತಮಾನದಿಂದಲೇ ಕಾಣುತ್ತೇವೆ. ಕ್ರಿ.ಶ. 7 ನೆಯ ಶತಮಾನದ 'ಕಪ್ಪೆ ಅರಭಟ್ಟನ ಬಾದಾಮಿ ಶಾಸನ'ದಲ್ಲಿ ಪ್ರಪ್ರಥಮವಾಗಿ ಮೂರು ತ್ರಿಪದಿ

ಪದ್ಯಗಳು ಬಳಕೆಗೊಂಡಿದ್ದು, ಇವು ಇಂದಿಗೂ ಸುಪ್ರಸಿದ್ಧವಾಗಿವೆ. ಉಳಿದ ಅಚ್ಚಗನ್ನಡ ಛಂದೋಮಟ್ಟುಗಳು ತ್ರಿಪದಿಯಷ್ಟು ವ್ಯಾಪಕವಾಗಿ ಮತ್ತು  ಜನಪ್ರಿಯವಾಗಿ ಬಳಕೆಗೊಳ್ಳಲಿಲ್ಲವಾದರೂ, ತಕ್ಕ ಮಟ್ಟಿಗಾದರೂ ಬಳಕೆಗೊಂಡಿದ್ದು, ಇವು ಇಂದಿಗೂ ಪ್ರಚಲಿತದಲ್ಲಿವೆ. ಕರ್ನಾಟ ವಿಷಯ ಜಾತಿಯ ಮಟ್ಟುಗಳೆಲ್ಲ ಅಂಶಗಣಗಳ ಮೇಲೆ ನಿಂತವುಗಳು. ಅಂದರೆ ಅಚ್ಚಗನ್ನಡ ಛಂದಸ್ಸು ಮೂಲತಃ  ಅಂಶಗಣಗಳಿಂದ ಕೂಡಿದ ಛಂದಸ್ಸಾಗಿದೆ. ಕನ್ನಡದಲ್ಲಿ ಮೂರು ಅಂಶಗಣಗಳಿವೆ. ಅವೆಂದರೆ - ಬ್ರಹ್ಮ, ವಿಷ್ಟು, ರುದ್ರ.

  ಕನ್ನಡ ಛಂದದ ಚರಿತ್ರೆಯಲ್ಲಿ ತ್ರಿಪದಿಯ ತರುವಾಯ ಸ್ಥಾನ ಪಡೆಯಬೇಕಾದ ಮಟ್ಟೆಂದರೆ ಪಿರಿಯಕ್ಕರ. ಅಕ್ಕರದಲ್ಲಿ ಪಿರಿಯಕ್ಕರ, ದೊರೆಯಕ್ಕರ, ನಡುವಣಕ್ಕರ,

ಎಡೆಯಕ್ಕರ, ಕಿರಿಯಕ್ಕರ ಎಂದು ಐದು ಪ್ರಭೇದಗಳಿದ್ದು, ಅವುಗಳ ಪ್ರಸ್ತಾಪ ನಾಗವರ್ಮನ  'ಛಂದೋಂಬುಧಿ' ಮತ್ತು ಜಯಕೀರ್ತಿಯ 'ಛಂದೋನುಶಾಸನ'ಗಳಲ್ಲಿ ಬಂದಿದೆ.

  ಕರ್ಣಾಟ ವಿಷಯ ಜಾತಿಯ ಒಟ್ಟು ಹತ್ತು ಮಟ್ಟುಗಳಲ್ಲಿ ನಾಲ್ಕು ನಾಲ್ಕು ಚರಣಗಳನ್ನೊಳಗೊಂಡ ಸಮವೃತ್ತಗಳೇ ಬಹಳ.  ಒಟ್ಟು ಹತ್ತು ಮಟ್ಟುಗಳಲ್ಲಿ ಮದನವತಿ, ಅಕ್ಕರ, ಅಕ್ಕರಿಕೆ, ಚೌಪದಿ, ಉತ್ಸಾಹ, ಛಂದೋವತಂಸ ಇವು ಆರು ಸಮವೃತ್ತಗಳು. ಗೀತಿಕೆ

ಹೆಚ್ಚು ಕಡಿಮೆ ಸಮವೃತ್ತದಂತೆ ಇದೆ. ಷಟ್ಟದಿ ಅರ್ಧಸಮವೃತ್ತ. ತ್ರಿಪದಿ ಮತ್ತು ಏಳೆ ವಿಷಮಬಂಧ ಬಂಧಗಳು. ತ್ರಿಪದಿ ಕೂಡ ಬರುಬರುತ್ತ ಸಾಂಗತ್ಯದತ್ತ ತಿರುಗಿ ಅರ್ಧಸಮವೃತ್ತವಾಗುವ

ಹವಣಿಕೆಯನ್ನು ತೋರಿತು; ಸಾಂಗತ್ಯಕ್ಕೆ ದಾರಿ ಮಾಡಿಕೊಟ್ಟಿತು. ತ್ರಿಪದಿಯಿಂದ ರೂಪುಗೊಂಡ ಸಾಂಗತ್ಯ ನಾಲ್ಕು ಚರಣಗಳ ಪದ್ಯ.  ಕನ್ನಡ ಛಂದಸ್ಸಿನ ಚರಿತ್ರೆಯ ದಾರಿಯಲ್ಲಿ ಸಾಂಗತ್ಯವೂ

ಒಂದು ಮೈಲುಗಲ್ಲು! ಇದು ಅಂಶಗಣ ಛಂದೋಮಟ್ಟು ಎಂಬುದರಲ್ಲಿ ಯಾವ ಸಂದೇಹವಿಲ್ಲ, ಅದರ ಚರಣಗಳಲ್ಲಿ ಗಣಗಳ ಯೋಜನೆ ತ್ರಿಪದಿಯಂತೆ ಏರ್ಪಟ್ಟಿರುತ್ತದೆ.ಅದರ ಲಯ ತ್ರಿಪದಿಯ ಲಯಕ್ಕೆ ತೀರ ಸಮೀಪ. ತ್ರಿಪದಿಯ ಗತಿಯನ್ನೇ ಅನುಸರಿಸಿದ ಸಾಂಗತ್ಯ ಲಕ್ಷಣದಲ್ಲಿ ಹೆಚ್ಚಿನ ಸರಳತೆಯನ್ನು ಸಾಧಿಸಿತು.

    ಅಂಶಗಣದಲ್ಲಿ ಅಕ್ಷರಗಳನ್ನು ಲಯದಲ್ಲಿ ಹಿಗ್ಗಿಸಿಯೋ, ತೇಲಿಸಿಯೋ ಹೇಳುವ ಕ್ರಮ ಕನ್ನಡ ಛಂದದ ಒಂದು ಪ್ರಮುಖ ವೈಶಿಷ್ಟ್ಯ. ಅದರಂತೆ ಪ್ರಾಸ ಅದರ ಇನ್ನೊಂದು ವೈಶಿಷ್ಟ್ಯ. ಕನ್ನಡ ಕಾವ್ಯಗಳು ತಮ್ಮ ಆವರಣದಲ್ಲಿ ಬರಮಾಡಿಕೊಂಡ ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳ ಛಂದೋಬಂಧಗಳು ಕೂಡ ಕನ್ನಡಕ್ಕೆ ಹೊಂದಿಕೆಯಾಗುವಂತೆ ಆದಿ ಪ್ರಾಸವನ್ನು ಧರಿಸಿಯೇ ಹಳಗನ್ನಡ ಹಾಗೂ ನಡುಗನ್ನಡ ಕಾವ್ಯಗಳಲ್ಲಿ ಮೂಡಿ ಬಂದವು.

  ಅಕ್ಷರಗಳನ್ನು ಲಯದಲ್ಲಿ ಹಿಗ್ಗಿಸಿಯೋ, ತೇಲಿಸಿಯೋ ಹೇಳುವ ಕ್ರಮಕ್ಕೆ  ಕರ್ಣಾಟ ವಿಷಯ ಜಾತಿಯ ಎಲ್ಲ ಮಟ್ಟುಗಳೂ ಸೇರುತ್ತವೆ. ಆದುದರಿಂದ ನಾಗವರ್ಮ ಮತ್ತು ಜಯಕೀರ್ತಿ ಇಬ್ಬರೂ  ಕರ್ಣಾಟ ವಿಷಯ ಜಾತಿಯ ಎಲ್ಲ ಮಟ್ಟುಗಳನ್ನು  ಅಂಶಗಣಾನ್ವಯವಾಗಿ ಲಕ್ಷಣಿಸಿದ್ದಾರೆ. ಅಕ್ಕರದ ಪ್ರಭೇದಗಳನ್ನು ಗಣನೆಗೆ ತೆಗೆದುಕೊಂಡರೆ  ಕರ್ಣಾಟ ವಿಷಯ ಜಾತಿಯ ಮಟ್ಟುಗಳು ಒಟ್ಟು ಹದಿನಾಲ್ಕು. ಈ ಹದಿನಾಲ್ಕರಲ್ಲಿ  ತ್ರಿಪದಿ, ಪಿರಿಯಕ್ಕರ ಮತ್ತು ಉತ್ಸಾಹ - ಈ ಮೂರು ಚಂಪುಕಾವ್ಯಗಳಲ್ಲಿ ಪ್ರಯೋಗವಾಗಿವೆ. ಉತ್ಸಾಹವೊಂದನ್ನು ಬಿಟ್ಟು ಉಳಿದೆಲ್ಲ ಮಟ್ಟುಗಳಲ್ಲಿ ವಿಷ್ಟುಗಣವೇ ಪ್ರಧಾನ.  ಅಷ್ಟೇ ಏಕೆ? ಹಾಸುಹೋಕ್ಕಾಗಿದೆ ಎಂದರೂ ಸಲ್ಲುವುದು. ಕರ್ಣಾಟ ವಿಷಯ ಜಾತಿಗಳಲ್ಲಿ ಬ್ರಹ್ಮಗಣ ಪ್ರಧಾನವಾದ ಮಟ್ಟು ಎಂದರೆ 'ಉತ್ಸಾಹ' ಒಂದೇ. ರುದ್ರಗಣ ಪ್ರಧಾಶವಾದ ಮಟ್ಟು ಅವುಗಳಲ್ಲಿ

ಒಂದೂ ಇಲ್ಲ. ರುದ್ರಗಣ ಪ್ರಧಾನವಾಗಿ ಸೇರಿದರೆ ಉಸುರಿಗೆ ಕಷ್ಟ. ರುದ್ರಗಣಗಳು  ಹೊಂದಿಕೊಳ್ಳುವ ಶಬ್ದಗಳು ಕನ್ನಡದಲ್ಲಿ ಕಡಿಮೆಯಾಗಿರುವುದೂ ಇದಕ್ಕೆ ಒಂದು ಕಾರಣ.

  ಕರ್ಣಾಟ ವಿಷಯ ಜಾತಿಯ ಮಟ್ಟುಗಳಲ್ಲಿ 'ಸಂಗೀತ' ಒಂದು ಪ್ರಧಾನ ಅಂಶ.

  ಎಚ್.ಡಿ. ವೆಲಂಕರ್‌ರು ಅಭಿಪ್ರಾಯಪಟ್ಟಂತೆ ಈ ಸಂಗೀತ ಸಂಪೂರ್ಣ 'ವರ್ಣಸಂಗೀತ'ವೂ ಅಲ್ಲ ;  ಸಂಪೂರ್ಣ 'ತಾಳಸಂಗೀತ'ವೂ ಅಲ್ಲ.  ಈ ಸಂಗೀತ ಅವರೆಡರ ಮಧ್ಯದಲ್ಲಿ ಬರುತ್ತದೆ.

 

  ಅಂಶಗಣ ಕ್ರಮೇಣ 12ನೆಯ ಶತಮಾನದಲ್ಲಿ ಮಾತ್ರಾಗಣಕ್ಕೆ ತಿರುಗಿತು. ಅಕ್ಕಮಹಾದೇವಿಯ 'ಯೋಗಾಂಗ ತ್ರಿವಿಧಿ'ಯಲ್ಲಿ ಇದನ್ನು ಪ್ರಪ್ರಥಮ ಬಾರಿಗೆ ಕಾಣುತ್ತೇವೆ. ಅಕ್ಕನ ಇಲ್ಲಿನ ತ್ರಿಪದಿಗಳು ಮಾತ್ರಾಗಣ ಘಟಿತವಾಗಿವೆ.

 

Category:Literature



ProfileImg

Written by LS KADADEVARMATH

Lokayya Shivalingayya Kadadevarmath Education: M.A.In Kannada [1984-85] Karnataka University Dharwad Experience: Writing & DTP Published: Publication of about 60-70 works.