ಅರೆ!ಇದೇನು !ನಮ್ಮ ಕ್ರೀಡಾಕ್ಷೇತ್ರಕ್ಕೆ ಹೊಸತಾಗಿ ಸೇರಿದ ಆಟವಾ?ಖಂಡಿತಾ ಅಲ್ಲ..ಹಳ್ಳಿ ಪ್ರದೇಶಗಳ ಸದ್ಯದ ವಿದ್ಯುತ್ ನ ಪರಿಸ್ಥಿತಿ.ಅಂದ ಹಾಗೆ ನಾನು ಹೇಳಲು ಹೊರಟದ್ದು ಹಳ್ಳಿಯ ಕರೆಂಟ್ ಅ(ವ್ಯ)ವಸ್ಥೆ ಬಗ್ಗೆ. ಹಳ್ಳಿ ಪ್ರದೇಶಗಳಲ್ಲಿ ದಿನದಲ್ಲಿ ಅಬ್ಬಬ್ಬಾ ಅಂದರೆ 12 ರಿಂದ 14 ಗಂಟೆಗಳ ಕಾಲವಷ್ಟೇ ಕರೆಂಟ್.ಮಳೆಗಾಲದಲ್ಲಿ ಅಷ್ಟೂ ಇಲ್ಲ.ಅದಕ್ಕೇ ಇರಬೇಕು ನಮ್ಮೂರಲೆಲ್ಲ ಕರೆಂಟ್ ನ್ನು "ಅತಿಥಿ "ಎನ್ನುವುದು.
ಹಲವು ವರ್ಷಗಳ ಮೊದಲು ಊರಿನ ಕೆಲವು ಮನೆಗಳು ಮಾತ್ರ ಕರೆಂಟ್ ಸೌಕರ್ಯ ಹೊಂದಿದ್ದವು..ವರುಷಗಳು ಕಳೆದಂತೆ ಪ್ರತಿ ಮನೆಗೂ ಕರೆಂಟ್ ಬಂತು.ಟಿವಿ, ಫ್ರಿಟ್ಜ್, ಮಿಕ್ಸಿ,ಗ್ರೈಂಡರ್,ಪಂಪ್ ಸೆಟ್ ಇವೆಲ್ಲವೂ ಜೊತೆಯಾದವು.ಹೀಗೆ ಪ್ರತಿಯೊಂದು ಮನೆಯೂ ಕರೆಂಟ್ ನ್ನು ಅವಲಂಬಿಸುವಂತಾಯಿತು.
" ನೀರಲ್ಲಿ ಹುಟ್ಟುವೆ ಕಮಲಮುಖಿಯಲ್ಲ,
ತಂತಿಯ ಮೇಲೆ ನಡೆವೆ ಗೆಣೆಗಾತಿಯಲ್ಲ,
ಊರೂರು ಸುತ್ತುವೆ ಅಲೆಮಾರಿಯಲ್ಲ,
ಮನೆ ಮನೆಯಲಿರುವೆ ನಾನಾರು?"
ಹೀಗೆ ಕರೆಂಟ್ ಬಗೆಗೆ ಅಪರೂಪದ ಒಗಟೊಂದಿದೆ."ಅದೆಲ್ಲಾ ಓ.ಕೆ. ಆದರೆ ಈ ಕರೆಂಟ್ ನೆಂಟನಂತೆ ಬಂದು ಹೋಗುವುದು ಯಾಕೆ?" ಎನ್ನುವುದು ನನ್ನ ಪ್ರಶ್ನೆ.ಬೆಳಗ್ಗೆ ಇದ್ದ ಕರೆಂಟ್,ಮಧ್ಯಾಹ್ನ ಕ್ಕಿಲ್ಲ.ಮಧ್ಯಾಹ್ನ ಕ್ಕಿದ್ದರೆ ಸಂಜೆಗಿಲ್ಲ.ಇನ್ನು ರಾತ್ರಿ ಯ ಕಥೆ ಕೇಳುದೇ ಬೇಡ . ನಾಳೆ ಕರೆಂಟಿದ್ದರೆ ಸಾಕಪ್ಪಾ ಅನ್ನುತ್ತಾ ಮರುದಿನ ಕ್ಕೆ ದೋಸೆಗೆಂದು ಅಕ್ಕಿನೆನೆಹಾಕುವುದು,ಬೆಳಗ್ಗೆ ಎದ್ದು ಸ್ವಿಚ್ ಹಾಕಿ ನೋಡಿದ್ರೆ ಕರೆಂಟ್ ನಾಪತ್ತೆ!ಐದು ನಿಮಿಷ ಕಾದದ್ದಾಯಿತು,ಹತ್ತು ನಿಮಿಷ ಕಾದದ್ದಾಯಿತು...ಉಹುಂ ಕರೆಂಟ್ ಬರುವ ಯಾವ ಲಕ್ಷಣಗಳೂ ಇಲ್ಲ.ಇನ್ನು ಹಳೇ ಕಡಿವಕಲ್ಲೇ ಗತಿ ಎಂದು ರುಬ್ಬಲು ಶುರು ಮಾಡಿದ ಐದು ನಿಮಿಷಕ್ಕೆ ಕರೆಂಟ್ ಹಾಜರ್!ಅತ್ತ ಮಿಕ್ಸಿ ಜಾರ್ ಗೆ ಅಕ್ಕಿ ಹಾಕುವುದೂ ಅಲ್ಲ,ಇತ್ತ ಕಡಿವಕಲ್ಲು ತಿರುಗಿಸುವುದೂ ಅಲ್ಲದ ಸಂದಿಗ್ಧ ಪರಿಸ್ಥಿತಿ..ಅಂತೂ ಇಂತೂ ಕರೆಂಟ್ ಸಹಸ್ರ ನಾಮಾರ್ಚನೆಯೊಂದಿಗೆ ದೋಸೆಹಿಟ್ಟು ರೆಡಿ .ಹೇಗಿದ್ದರೂ ಕರೆಂಟ್ ಇದೆಯಲ್ಲ್ವಾ ಎನ್ನುತ್ತಾ ಚಟ್ನಿಗೆಂದು ಕಾಯಿತುರಿದಾಗ ಕರೆಂಟ್ ಮಾಯವಾಗಬೇಕೆ!.ಚಟ್ನಿ ಇಲ್ಲದಿದ್ದರೇನಂತೆ ತುಪ್ಪ,ಸಕ್ಕರೆ ,ಮೊಸರಿನೊಂದಿಗೆ ದೋಸೆ ತಿಂದರಾಯಿತು ಎಂಬ ಸಮಾಧಾನ. ಬೆಳಗ್ಗೆ ಎಲ್ಲಾದರೂ ಗಂಜಿ ಎಂದರೆ ಆ ಮನೆಯಲ್ಲಿ ಕರೆಂಟ್ ಇಲ್ಲವೆಂಬುದು ಒಳಾರ್ಥ!!.ಮಧ್ಯಾಹ್ನ ದವರೆಗೂ ಕರೆಂಟಿಲ್ಲವೆಂದರೆ ಸಾರು ,ಪಲ್ಯವೇ ಗತಿ.
ಕರೆಂಟ್ ಹೆಚ್ಚು ಕೈ ಕೊಡುವುದು ತೋಟಕ್ಕೆ ನೀರು ಹಾಕುವ ಸಮಯದಲ್ಲಿ ಯೇ.ದಿನದ ನಿಗದಿತ ಸಮಯದಲ್ಲಿ ಮಾತ್ರ 3 ಫೇಸ್ ಕರೆಂಟ್ . ಪಂಪ್ ಸ್ವಿಚ್ ಆನ್ ಮಾಡಿ ಮನೆ ತಲುಪಿದಾಗ ಕರೆಂಟಿಲ್ಲ ಎಂಬ ಅಶರೀರವಾಣಿ.ಹೀಗೆ ತೋಟ -ಮನೆ ಎಂದು ತಿರುಗಿ ತಿರುಗಿ ಒಂದು ಶಿಫ್ಟ್ ನೀರು ಹಾಕಿದಾಗ ಕೃಷಿಕ ಹೈರಾಣಾಗುವುದರಲ್ಲಿ ಸಂಶಯವಿಲ್ಲ.ಇನ್ನು ಎಲ್ಲಿಯಾದರೂ ಒಂದೆರಡು ದಿನವಿಡೀ ಕರೆಂಟಿಲ್ಲವೆಂದರೆ ಟಾಂಕಿ ಖಾಲಿ! ಮೊಬೈಲ್ ನೋಡನೋಡುತ್ತಲೇ 10%,5%,3% ಅನ್ನುತ್ತಲೇ ಚಾರ್ಜ್ ಖಾಲಿ.ನಂತರ "ನೀವು ಕರೆ ಮಾಡಿದ ಚಂದಾದಾರರು ಸ್ವಿಚ್ ಆಫ್ ಮಾಡಿದ್ದಾರೆ".. ಕರೆಂಟ್ ಹೀಗೆ ಕೈ ಕೊಟ್ಟಾಗಲೇ ನಾವು ಎಷ್ಟರ ಮಟ್ಟಿಗೆ ಅದನ್ನು ಅವಲಂಬಿಸಿದ್ದೇವೆ ಎಂಬುವುದರ ಅರಿವಾಗುವುದಲ್ಲವೇ.
ಹಗಲು ಕರೆಂಟ್ ಸರಿ ಇಲ್ಲದಿದ್ದರೇನಂತೆ ರಾತ್ರಿಯಿರಬಹುದು ಎಂಬ ಊಹೆಯೂ ಉಲ್ಟಾ...ಹೆಚ್ಚು ಹೋಮ್ ವರ್ಕು ಇದ್ದಾಗ,ಪರೀಕ್ಷಾ ಸಮಯದಲ್ಲಿ, ಮನೆ ಕಾರ್ಯಕ್ರಮ ಗಳಿದ್ದಾಗ ಕರೆಂಟ್ ಕೂಡ ಬ್ಯುಸಿ...ನಾಪತ್ತೆ!.ಶಾಲಾ ಮಕ್ಕಳಿಗೆ ಚಾರ್ಜರ್ ಲೈಟ್,ಕ್ಯಾಂಡಲ್ ಬೆಳಕಿನಲ್ಲಿ ಓದಿ ಬರೆಯುವ ಪರಿಸ್ಥಿತಿ. ಮನೆಯವರಿಂದ ಮಂಗಳಾರತಿಯಾಗಿ ಅಪರೂಪಕ್ಕೆ ಪುಸ್ತಕ ಬಿಡಿಸಿದಾಗ ಕರೆಂಟ್ ಹೋದರೆ ಮಕ್ಕಳಿಗೆಲ್ಲಾ ಖುಷಿ ಯೋ ಖುಷಿ."ಇನ್ನು ನಾಳೆ ಬೆಳಿಗ್ಗೆ ಬೇಗ ಎದ್ದು ಓದಿದರಾಯಿತು.ಬೇಗ ಊಟ ಮಾಡಿ ಮಲಗು "ಎಂಬ ಮಾತುಗಳನ್ನು ಕೇಳಿದಾಗಲಂತೂ ಸ್ವರ್ಗಕ್ಕೆ ಮೂರೇ ಗೇಣು.
ಪರೀಕ್ಷೆಗಳೆಲ್ಲಾ ಮುಗಿದು ಒಂದು ಸಿನಿಮಾ ನೋಡುವ ಎಂದು ಟಿ.ವಿ ಎದುರು ಕುಳಿತರೆ ಅದಕ್ಕೂ ಅಡ್ಡಿಪಡಿಸುತ್ತದೆ ಈ ಕರೆಂಟ್.ಇಷ್ಟದ ಸೀರಿಯಲ್ ಸಮಯದಲ್ಲಿ ಕರೆಂಟ್ ಕಟ್ ಆದರೆ ಕೆಇಬಿ,ಮೆಸ್ಕಾಂ ಹೀಗೆ ಮುಂದುವರಿದು ಮಂತ್ರಿ ಗಳ ವರೆಗೂ ಬೈಗುಳಿನ ಸುರಿಮಳೆ ಶುರು.ಮಳೆಗಾಲ ಗುಡುಗು ,ಸಿಡಿಲು ,ಗಾಳಿ ಮಳೆ ಬಂದರಂತೂ ಕರೆಂಟ್ ಕಥೆ ಹೇಳಬೇಕೆಂದೆನಿಲ್ಲ!.
ಅಪರೂಪಕ್ಕೆ ಇಡೀದಿನ ಕರೆಂಟ್ ಇದ್ದರೆ,ಇವತ್ತು ತಪ್ಪಿ ಕರೆಂಟ್ ಕೊಟ್ಟದ್ದಾಗಿರಬಹುದು ಎಂದು ಎಲ್ಲರೂ ಆಡಿಕೊಳ್ಳುವುದುಂಟು.ಕರೆಂಟ್ ಇಲ್ಲದಾಗ ನೆರೆಕರೆ ಮನೆಗಳಿಗೆ ಭೇಟಿ ನೀಡುವ,ಕರಕುಶಲ ಕಲೆಗಳ ಮಾಡುವ ಮನಸಾಗುವುದು. ಕರೆಂಟ್ ಇಲ್ಲದ ರಾತ್ರಿ ಮನೆಮಂದಿಯೆಲ್ಲ ಜಗಲಿಯಲಿ ಕುಳಿತು ಪಟ್ಟಾಂಗ ಹಾಕುವುದು ಮಾಮೂಲು.ಮಕ್ಕಳಿಗೆ ನಕ್ಷತ್ರ ವೀಕ್ಷಣೆಯ ಮಜಾವೂ ಸಿಗುತ್ತದೆ.ಅಂದ ಹಾಗೆ ಕರೆಂಟಿಲ್ಲದಾಗ ಲೇಖನ ಬರೆಯುವ ಮನಸಾಯಿತು.