ಮೈಯೆಲ್ಲಾ ಬೆಚ್ಚಾಗಾಗಿ ನಿಧಾನವಾಗಿ ಕಣ್ಬಿಟ್ಟೆ. ನಾನೆದ್ದೆ ಎಂದರೆ ಈಗ ಸರಿಯಾಗಿ ಒಂಬತ್ತೂವರೆ ಆಗಿರಬೇಕು. ಪ್ರತಿದಿನವೂ ಆ ಬಟ್ಟಲು ಕಂಗಳ ಹುಡುಗಿ ದೀಪ ಇಷ್ಟೊತ್ತಿಗೆ ಅಲ್ಲವೇ ನನ್ನನ್ನೆಬ್ಬಿಸುವುದು? ಅವಳ ಹೆಸರಿಗೂ ನನಗೂ ಹೇಗೆ ನಂಟಿದೆಯೋ, ಅವಳಿಗೂ ನನಗೂ ಹಾಗೇ ನಂಟಿದೆ.
ಮೊದಲ ಬಾರಿ ಸುಮಾರು ಆರು ತಿಂಗಳ ಹಿಂದೆ ನಾನು ಜೀವ ತಳೆದಿದ್ದು. ಕಣ್ತೆರೆದಾಗ ನನಗೆ ಒಮ್ಮೆ ಏನೂ ಅರ್ಥವಾಗಲಿಲ್ಲ. ಸುತ್ತ ನೋಡಿದಾಗ ಕಂಡದ್ದು ಅವಳ ಬಟ್ಟಲು ಕಂಗಳ ಒಳಗೆ ನನ್ನದೇ ಪ್ರತಿಬಿಂಬ. ನನ್ನ ನೋಡಿ ನಸುನಕ್ಕ ಅವಳ ತುಟಿಯಲ್ಲಿ ಯಾಕೋ ನನಗೆ ನಗು ಕಾಣಿಸಲಿಲ್ಲ. ನನ್ನನ್ನೇ ತುಂಬಾ ಹೊತ್ತು ದಿಟ್ಟಿಸಿ ನೋಡಿದ್ದಕ್ಕೊ ಏನೋ ಅವಳ ಬಟ್ಟಲು ಕಂಗಳಲ್ಲಿ ಕಾಣಿಸಿದ ನೀರಿನ ಪಸೆ ಅವಳ ಕಣ್ರೆಪ್ಪೆಯ ಎರಡು ಬಡಿತದಲ್ಲಿ ಹಾಗೇ ಮಾಯವಾಗಿತ್ತು. ನನ್ನ ಪಕ್ಕದಲ್ಲಿ ತಲೆಯಿಟ್ಟು ಹಾಗೇ ನಿದ್ರೆಗೆ ಜಾರಿದ ಅವಳ ಜೊತೆ ನಾನೂ ನಿದ್ರೆಗೆ ಜಾರಿದ್ದೆ.
ಮತ್ತೆ ಕಣ್ತೆರೆದಾಗ ಅದೇ ಬಟ್ಟಲು ಕಂಗಳು ನನ್ನೆದುರು ಕಂಡಿತ್ತು. "ಇದು ನನ್ನ ನಿನ್ನ ಎರಡನೇ ಭೇಟಿ" ಅದೇ ನಗುವಲ್ಲದ ನಗುವಲ್ಲಿ ಮೆಲುವಾಗಿ ಹೇಳಿದಳು. "ಈ ದೀಪಳಿಗೆ ಈ ದೀಪವೆ ಸಂಗಾತಿ" ಮೆಲ್ಲನೆ ನುಡಿದ ಅವಳ ನನ್ನ ಗೆಳೆತನ ಅಂದೇ ಶುರುವಾಯಿತು.
ಮರುದಿನ ಮತ್ತೆ ಕಣ್ಬಿಟ್ಟಾಗ ನಾನೊಂದು ಪುಟ್ಟ ಮೇಜಿನ ಮೇಲಿದ್ದೆ. "ಹೇಗಿದೆ ನಿನ್ನ ಹೊಸ ಸ್ಥಳ? ಇನ್ಮೇಲೆ ಇದು ನಿನ್ನದೇ ಜಾಗ" ಕೊಂಚ ಹೆಮ್ಮೆಯಿಂದ ಹೇಳಿದ್ದಳು. ಅವಳ ತಲೆದಿಂಬಿನ ಪಕ್ಕದ ಆ ಸ್ಥಳ ನನಗೂ ಇಷ್ಟವಾಯಿತು.
ಪ್ರತಿದಿನ ರಾತ್ರಿ ಅವಳು ಮಲಗುವ ಮೊದಲು ನನ್ನನ್ನು ಎಬ್ಬಿಸುವುದು ಮಾಮೂಲಾಯಿತು. ನಿಧಾನವಾಗಿ ಅವಳ ಪರಿಚಯ ನನಗಾಯಿತು. ಪ್ರತಿದಿನವೂ ಅವಳ ದಿನದ ಖುಷಿಯ ವಿಚಾರ, ಬೇಜಾರಾದ ಘಟನೆ, ಕೋಪ ತರಿಸಿದ ವಿಷಯ ಎಲ್ಲವನ್ನೂ ಹಂಚಿಕೊಳ್ಳಲು ಮೌನ ಸಂಗಾತಿ ನಾನಾಗಿದ್ದೆ. ಕೆಲವೊಮ್ಮೆ ಏನೂ ಹೇಳದೆ ಸುಮ್ಮನೆ ನನ್ನ ನೋಡುತ್ತಾ ಹಾಗೇ ಮಲಗಿಬಿಡುತ್ತಿದ್ದಳು, ನನ್ನ ಅವಳ ಮೊದಲ ದಿನದ ಭೇಟಿಯ ಹಾಗೆ. ಆಗೆಲ್ಲ ಏನೋ ಅವ್ಯಕ್ತ ನೋವಿನ ಛಾಯೆ ಅವಳ ಬಟ್ಟಲು ಕಂಗಳಲ್ಲಿ ಹಾದು ಹೋದಹಾಗೆ ಅನಿಸುತ್ತಿತ್ತು. ಎಷ್ಟೋ ಸಲ ಯೋಚಿಸಿದ್ದೇನೆ, ಯಾಕೆ ನನಗೆ ಜೀವ ಕೊಟ್ಟಳು ಇವಳು ಎಂದು.
" ನಾನು ಅಮ್ಮನ ಹೋಲಿಕೆ ಇರಬಹುದಾ ಅಥವಾ ಅಪ್ಪನ ಹೋಲಿಕೆ ಇರಬಹುದಾ? ಅವರು ಹೇಗಿರಬಹುದು?" ಒಮ್ಮೆ ಶೂನ್ಯದತ್ತ ದೃಷ್ಟಿಯಿಟ್ಟು ನುಡಿದಿದ್ದಳು. "ಈ ಕ್ಷಣವಷ್ಟೇ ಬದುಕು. ಬದುಕು ಮುಗಿಯುವ ತನಕನು ಈ ಕ್ಷಣದಲ್ಲಿ ಖುಷಿಯಾಗಿರಬೇಕು" ನಸು ನಗೆಯೊಂದಿಗೆ ಕಣ್ಣನ್ನು ಕಿರಿದಾಗಿಸಿ ತತ್ವಜ್ಞಾನಿಯ ಹಾಗೆ ಒಮ್ಮೆ ಹೇಳಿ ನಕ್ಕು ಮೌನವಾಗಿದ್ದಳು. ಅವಳ ಬಟ್ಟಲು ಕಂಗಳಲ್ಲೇನೋ ಜೀವಕಳೆ ಇತ್ತು.
ಅವಳ ಮೌನಕ್ಕೆ ನಾನು ಮೌನವಾಗಿದ್ದೆ. ಅವಳ ಖುಷಿಯೊಂದಿಗೆ ನಾನೂ ಬೆರೆಯುತ್ತಿದ್ದೆ. ಅವಳ ಕೋಪಕ್ಕೆ ನಾನೂ ಉರಿಯುತ್ತಿದ್ದೆ. ಬೇಜಾರಾದಾಗ ಸಾಂತ್ವನ ನೀಡಬೇಕೆಂದು ಹಾತೊರೆಯುತ್ತಿದ್ದೆ. ಆದರೆ ಮೌನವಾಗಿ ಜೊತೆಯಲ್ಲಿ ಕುಳಿತು ಬೆಳಕು ಬೀರಲಷ್ಟೆ ನನ್ನಿಂದ ಸಾಧ್ಯವಾಗುತ್ತಿದ್ದದ್ದು. ಪ್ರತಿದಿನ ಅವಳು ನಿದ್ರೆಗೆ ಜಾರಿದ್ದನ್ನು ನೋಡಿಯೇ ನಾನು ಕಣ್ ಮುಚ್ಚುತ್ತಿದ್ದದ್ದು. ಹೀಗೇ ಆರು ಮಾಸ ಕಳೆದಿತ್ತು.
ಇಂದು ಕಣ್ತೆರೆದಾಗ ಪ್ರತಿದಿನದಂತೆ ಅವಳ ಬಟ್ಟಲು ಕಂಗಳು ಕಾಣಲಿಲ್ಲ. ಪ್ರತಿದಿನದಂತೆ ಪುಟ್ಟ ಮೇಜಿನ ಮೇಲೂ ನಾನಿರಲಿಲ್ಲ. ಗೊಂದಲವಾಗಿ ಸುತ್ತ ನೋಡಿದೆ. ಮೆಲುದನಿಯಲ್ಲಿ ಜನರ ಮಾತು ಕೇಳುತ್ತಿತ್ತು. " ಬ್ರೈನ್ ಟ್ಯೂಮರ್ ಅಂತೆ. ಆಪರೇಷನ್ ಸಕ್ಸಸ್ ರೇಟ್ ತುಂಬಾ ಕಮ್ಮಿ ಇತ್ತು. ಕೊನೆಗೂ ಉಳಿಯಲಿಲ್ಲ." ಎಂಬ ದನಿಗೆ "ಈ ವಯಸ್ಸಲ್ಲಿ ಅದೇನು ಕಾಯಿಲೆಯೋ? ಪಾಪ ಇನ್ನೂ 23 ವರ್ಷ" ಮತ್ತೊಂದು ದನಿ ಕೇಳಿಸಿತು.
ನಿನ್ನೆ ಕಣ್ತೆರೆದಾಗ ದೀಪ ಹೇಳಿದ್ದು ನೆನಪಾಯಿತು. "ಒಂಟಿಯಾಗಿ ನಾ ಕತ್ತಲಲ್ಲಿದ್ದಾಗ ಬೆಳಕಾಗಿದ್ದೆ. ಇನ್ನೆಷ್ಟು ದಿನ ನಾ ನಿನಗೆ ಎಣ್ಣೆ ಎರೆಯುವೆನೋ?" ಶೂನ್ಯದತ್ತ ಇದ್ದ ಅವಳ ಕಣ್ಣ ಭಾವ ಅರಿಯಲು ಸಾಧ್ಯವಾಗಿರಲಿಲ್ಲ.
ನನ್ನ ಪಕ್ಕದಲ್ಲಿ ದೀಪ ತನ್ನ ಬಟ್ಟಲು ಕಂಗಳನ್ನು ಮುಚ್ಚಿ ಮಲಗಿದ್ದಳು.
0 Followers
0 Following