ಜ್ವಾಲಾಮುಖಿ ಅಥವಾ ಅಗ್ನಿಪರ್ವತ ಎಂಬ ಹೆಸರು ಕೇಳಿದರೇನೇ ಮನಸ್ಸು ಬೆವರುತ್ತದೆ. ಇತಿಹಾಸದುದ್ದಕ್ಕೂ ಬೆಂಕಿಕಾರುತ್ತ ಸುತ್ತಮುತ್ತಲ ಎಲ್ಲವನ್ನೂ ಸುಟ್ಟು ಕರಕಲಾಗಿಸುವ ಅಗ್ನಿಪರ್ವತಗಳ ಜೊತೆಗೇ ಮನುಷ್ಯ ಬಾಳುತ್ತ ಬಂದಿದ್ದಾನೆ. ತಾನೇ ಸರ್ವಶ್ರೇಷ್ಠ ಹಾಗೂ ಸರ್ವಶಕ್ತ ಎಂಬ ಮನುಷ್ಯನ ಅಹಂಕಾರಕ್ಕೆ ಆಗಾಗ್ಗೆ ಕೊಡಲಿಯೇಟು ನೀಡುವುದು ಇದೇ ರೀತಿಯ ಪ್ರಕೃತಿ ವಿಕೋಪಗಳೇ. ಅದರಲ್ಲೆಲ್ಲ ಪ್ರಸಿದ್ದವಾದ ಜ್ವಾಲಾಮುಖಿ ಸ್ಫೋಟವೆಂದರೆ ೧೮೮೩ರ ಕ್ರಕಟೋವಾ ಅಗ್ನಿಪರ್ವತದ ಮಹಾಸ್ಫೋಟ. ಮೂವತ್ತಾರು ಸಾವಿರಕ್ಕೂ ಹೆಚ್ಚು ಜೀವಗಳನ್ನು ಈ ಪೃಥ್ವಿಯ ಮುಖದಿಂದ ಒರೆಸಿಹಾಕಿದ ಈ ಮಹಾಸ್ಫೋಟ ಭೂಮಿಯ ಅತಿಹಾಸದಲ್ಲೇ ಅತ್ಯಂತ ಭಯಾನಕವಾದ ಸ್ಫೋಟ ಎನ್ನಿಸಿಕೊಂಡಿದೆ.
೧೮೮೩ರಕ್ಕೆ ಮೊದಲಿನ ಒಂದೆರಡು ವರ್ಷಗಳ ಅವಧಿಯಲ್ಲಿ ಕ್ರಕಟೋವಾದ ಸುತ್ತಮುತ್ತ ಭೂಕಂಪದ ಅನುಭವಗಳಾಗಿದ್ದವು. ಕೆಲವಂತೂ ಎಷ್ಟು ತೀವ್ರವಾಗಿದ್ದವೆಂದರೆ ದೂರದ ಆಸ್ಟ್ರೇಲಿಯಾದಲ್ಲೂ ಕಂಪನದ ಅನುಭವಗಳಾಗಿದ್ದವು. ೧೮೮೩ರ ಮೇ ಇಪ್ಪತ್ತರಂದು ಅಗ್ನಿಪರ್ವತದ ತುದಿಯಿಂದ ಹೊಗೆ ಮತ್ತು ಬೂದಿಗಳು ಹೊರಸೂಸಲಾರಂಭಿಸಿದ್ದವು. ಅದಾದ ಬಳಿಕೆ ಕೆಲವು ವಾರ ಶಾಂತವಾಗಿದ್ದ ಪರ್ವತ ಮತ್ತೆ ಜೂನ್ ಹದಿನಾರರಂದು ಹೊಗೆಯುಗುಳಲು ಆರಂಭಿಸಿತು. ಜೂನ್ ಇಪ್ಪತ್ನಾಲ್ಕರಂದು ಬೀಸಿದ ಗಾಳಿ ಆಗ ಆಕಾಶವನ್ನು ಮುಸುಕಿದ್ದ ಹೊಗೆಯ ಕಾರ್ಮೋಡವನ್ನು ದೂರಕ್ಕೆ ಸರಿಸಿತು. ಆದರೆ ಕ್ರಕಟೋವಾದ ಆಟಾಟೋಪ ತಾತ್ಕಾಲಿಕವಾಗಿ ತಣ್ಣಗಾಗಿತ್ತೇ ಹೊರತು ಸಂಪೂರ್ಣವಾಗಿ ಅದರ ಕೋಪ ಆರಿರಲಿಲ್ಲ. ಮತ್ತೆ ಆ ವರ್ಷದ ಆಗಸ್ಟ್ನಲ್ಲಿ ಅದು ಎಚ್ಚೆತ್ತಿತು.
ಆಗಸ್ಟ್ ಇಪ್ಪತ್ತೈದರಂದು ಮತ್ತೆ ಕ್ರಕಟೋವಾದ ಆರ್ಭಟ ಜೋರಾಗುವ ಲಕ್ಷಣಗಳು ಕಾಣಿಸಿದವು. ಇಪ್ಪತ್ತೇಳು ಕಿಲೋಮೀಟರ್ ಎತ್ತರದವರೆಗೆ ಅದರ ಬೂದಿ ಕಾಣತೊಡಗಿತು. ದ್ವೀಪದಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿದ್ದ ಹಡಗುಗಳ ಡೆಕ್ಕಿನ ಮೇಲೆ ಇದರ ಬೂದಿಯ ಮಳೆ ಸುರಿಯತೊಡಗಿತು. ಬೂದಿಯ ಜೊತೆಗೆ ಹತ್ತಾರು ಸೆಂಟಿಮೀಟರ್ ಗಾತ್ರದ ಬಿಸಿಯಾದ ಅಗ್ನಿಶಿಲೆಯ ತುಣುಕುಗಳು ಬೀಳಲಾರಂಭಿಸಿದವು. ಆಗಸ್ಟ್ ಇಪ್ಪತ್ತಾರರಂದು ಇನ್ನಷ್ಟು ಹೆಚ್ಚಿದ ಇದರ ಆಟಾಟೋಪದ ಪರಿಣಾಮ ಪ್ರತಿ ಹತ್ತು-ಹದಿನೈದು ನಿಮಿಷಗಳಿಗೊಮ್ಮೆ ಗುಡುಗಿನ ಸದ್ದು ದೂರದೂರದವರೆಗೆ ಕೇಳಲಾರಂಭಿಸಿತು. ಸುಮಾರು ನಲವತ್ತು ಕಿಲೋಮೀಟರ್ ದೂರದ ಸುಮಾತ್ರಾ ಮತ್ತು ಜಾವಾವನ್ನು ಸಣ್ಣ ಸುನಾಮಿಗಳು ಅಪ್ಪಳಿಸಿದವು.
ಆಗಸ್ಟ್ ಇಪ್ಪತ್ತೇಳರಂದು ಜ್ವಾಲಾಮುಖಿ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿತು. ಅಂದು ಮುಂಜಾವಿನಿಂದಲೇ ಅದರ ಅಬ್ಬರ ಹೆಚ್ಚತೊಡಗಿತು. ಅಂದು ಐದೂವರೆಗೆ ಮೊದಲ ಸ್ಫೋಟ ಸಂಭವಿಸಿತು. ಎರಡನೇ ಸ್ಫೋಟ ಬೆಳಗ್ಗೆ ೬.೪೪ಕ್ಕೆ ಸಂಭವಿಸಿತು. ಅನಂತರ ಮೂರನೇ ಸ್ಫೋಟ ೧೦.೦೨ಕ್ಕೆ ಸಂಭವಿಸಿತು. ಈ ಸ್ಫೋಟ ಭೂಮಿ ರಚನೆಯಾದ ನಂತರದ ಇತಿಹಾಸದಲ್ಲಿ ಸಂಭವಿಸಿದ ಅತೀ ಭಯಾನಕ ಅಗ್ನಿಪರ್ವತ ಸ್ಫೋಟವಾಗಿ ಚರಿತ್ರೆಯಲ್ಲಿ ದಾಖಲಾಗಿದೆ. ಅಂದು ಇದರಿಂದ ಉಂಟಾದ ಶಬ್ದ ಇಡೀ ಭೂಮಿಯ ಇತಿಹಾಸದಲ್ಲಿ ದಾಖಲಾದ ಅತ್ಯಂತ ಹೆಚ್ಚಿನ ತೀವ್ರತೆಯ ಶಬ್ದ ಎಂದು ದಾಖಲಾಗಿದೆ. ದ್ವೀಪದಿಂದ ೧೬೦ ಕಿಲೋಮೀಟರ್ ದೂರದಲ್ಲಿ ಅಳೆಯಲಾದ ಶಬ್ದದ ತೀವ್ರತೆ ೩೧೦ ಡೆಸಿಬಲ್‌ಗಳಷ್ಟಿತ್ತು. ಇದರ ತೀವ್ರತೆ ಎಷ್ಟಿತ್ತೆಂಬುದನ್ನು ಅರ್ಥಮಾಡಿಕೊಳ್ಳಬೇಕಾದರೆ ಈ ಹೋಲಿಕೆಯನ್ನು ಗಮನಿಸಿ. ನಮಗೆ ಅತ್ಯಂತ ಸಮೀಪದಲ್ಲಿ ಸಿಡಿಲು ಬಡಿದರೆ ಅದರ ತೀವ್ರತೆ ೧೨೦ ಡೆಸಿಬಲ್‌ಗಳಷ್ಟಿರುತ್ತದೆ. ಅದನ್ನೇ ನಮಗೆ ಸಹಿಸುವುದು ಅತ್ಯಂತ ಕಷ್ಟವಾಗುತ್ತದೆ. ಅಂಥದ್ದರಲ್ಲಿ ೩೧೦ ಡೆಸಿಬಲ್ಸ್ ಎಂದರೆ? ಇಲ್ಲಿ ೧೨೦ಕ್ಕಿಂತ ೩೧೦ ಸುಮಾರು ಎರಡೂವರೆ ಪಟ್ಟು ತೀವ್ರವಾಗಿದೆ ಎಂದು ಲೆಕ್ಕ ಹಾಕಿಬಿಡಬೇಡಿ. ಇದು ಲಾಗರಿದಮ್ (ಲಘುಗಣಕ) ಆಧಾರದ ಮೇಲೆ ತಯಾರಿಸಿರುವ ಅಳತೆಯ ಮಾನ. ಇಲ್ಲಿ ೧೨೦ಕ್ಕಿಂತ ೧೩೦ ಹತ್ತು ಪಟ್ಟು ಶಕ್ತಿಶಾಲಿ, ೧೪೦ ಅದಕ್ಕಿಂತ ಹತ್ತು ಪಟ್ಟು ಶಕ್ತಿಶಾಲಿ. ಹೀಗೆ ೩೧೦ ಡೆಸಿಬಲ್ ಎಂದರೆ ೧೨೦ ಡೆಸಿಬಲ್‌ಗಿಂತ ೧೦,೦೦೦,೦೦೦,೦೦೦,೦೦೦,೦೦೦,೦೦೦ ಪಟ್ಟು ಶಕ್ತಿಶಾಲಿ! (ಈ ಸಂಖ್ಯೆಯನ್ನು ಓದುವ ಕಷ್ಟವನ್ನು ನಿಮಗೇ ಬಿಟ್ಟುಬಿಡುತ್ತೇನೆ!). ಅದೂ ಸ್ಫೋಟದ ಸ್ಥಳದಿಂದ ೧೬೦ ಕಿ.ಮೀ. ದೂರದಲ್ಲಿ! ಹಾಗಾದರೆ ಸ್ಫೋಟವಾದ ಸ್ಥಳದಲ್ಲಿ ತೀವ್ರತೆ ಎಷ್ಟಿರಬಹುದು ಎಂಬುದು ನಿಮ್ಮ ಊಹೆಗೆ ಬಿಟ್ಟ ವಿಚಾರ.
ಇದರ ತೀವ್ರತೆಯ ಪರಿಣಾಮ ಆ ಸ್ಥಳದಿಂದ ಹತ್ತು ಮೈಲಿ ಸುತ್ತಳತೆಯಲ್ಲಿ ಇದ್ದವರ ಕಿವಿಗಳೆಲ್ಲ ಕಿವುಡಾಗಿ ಹೋದವು. ಅಷ್ಟೇ ಏಕೆ, ಅಲ್ಲಿಂದ ನಲವತ್ತು ಮೈಲಿ ದೂರದಲ್ಲಿ ಸಾಗುತ್ತಿದ್ದ ಹಡಗೊಂದರಲ್ಲಿದ್ದವರ ಕಿವಿಯ ತಮಟೆಗಳೆಲ್ಲ ಮತ್ತೆ ಸರಿಪಡಿಸಲಾರದಷ್ಟು ತೀವ್ರವಾಗಿ ಘಾಸಿಗೊಂಡವು. ಈ ಸ್ಫೋಟ ಸುಮಾರು ಇನ್ನೂರು ಮೆಗಾಟನ್ ಟಿಎನ್‌ಟಿ ಸ್ಫೋಟದ ತೀವ್ರತೆಗೆ ಸಮನಾಗಿತ್ತು. ಭೂಮಿಯ ಮೇಲೆ ಇದುವರೆಗೆ ಸ್ಫೋಟಿಸಲಾದ ಅತ್ಯಂತ ತೀವ್ರತೆಯ ಅಣುಬಾಂಬ್‌ನ ತೀವ್ರತೆಗಿಂತ ನಾಲ್ಕು ಪಟ್ಟು ತೀವ್ರವಾದ ಸ್ಫೋಟ ಇದಾಗಿತ್ತು. ಇದರ ಶಬ್ದದ ತೀವ್ರತೆ ಎಷ್ಟಿತ್ತೆಂದರೆ ಇದು ೩೧೧೦ ಕಿಲೋಮೀಟರ್ ದೂರದ ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಹಾಗೂ ೪೮೦೦ ಕಿಲೋಮೀಟರ್ ದೂರದ ಮಾರಿಷಸ್‌ನ ರೋಡ್ರಿಗಸ್ ದ್ವೀಪಗಳಲ್ಲಿ ಸಹ ಕೇಳಿಸಿತು. ಅಲ್ಲಿನ ಜನ ಇದನ್ನು ಕೇಳಿ ಸಾಗರದಲ್ಲಿ ಸಂಚರಿಸುತ್ತಿರುವ ಹಡಗಿನಿಂದ ಹಾರಿಸಿದ ಫಿರಂಗಿಯ ಗುಂಡಿನ ಸದ್ದಿರಬೇಕು ಎಂದುಕೊಂಡಿದ್ದರು. ಇದರಿಂದ ಉಂಟಾದ ಕಂಪನದ ಅಲೆಗಳು ಗಂಟೆಗೆ ಒಂದುಸಾವಿರ ಕಿಲೋಮೀಟರ್ ವೇಗದಲ್ಲಿ ಇಡೀ ಭೂಮಿಯನ್ನು ಏಳುಸಲ ಸುತ್ತಿದವು. ಇದರಿಂದ ಎದ್ದ ಬೂದಿ ಸುಮಾರು ಐವತ್ತು ಮೈಲಿ (ಎಂಬತ್ತು ಕಿಲೋಮೀಟರ್) ಎತ್ತರದವರೆಗೆ ಚಿಮ್ಮಿತು. ನಿಜವಾದ ಅರ್ಥದಲ್ಲಿ ಇದು ಅಗ್ನಿಪರ್ವತದ ಭೀಕರ ರುದ್ರನರ್ತನವೇ ಆಗಿತ್ತು.
೧೦:೪೧ಕ್ಕೆ ನಾಲ್ಕನೆಯ ಹಾಗೂ ಕೊನೆಯ ಸ್ಫೋಟ ಸಂಭವಿಸಿತು. ಮೂರನೆಯ ಸ್ಫೋಟಕ್ಕೆ ಹೋಲಿಸಿದರೆ ಇದರ ತೀವ್ರತೆ ಅತ್ಯಂತ ಕಡಿಮೆ ಇತ್ತು. ಮರುದಿನ, ಅಂದರೆ ಆಗಸ್ಟ್ ೨೮ರ ಮುಂಜಾನೆಯ ವೇಳೆಗೆ ಕ್ರಕಟೋವಾ ಶಾಂತವಾಯಿತು. ಆದರೂ ಸಣ್ಣಸಣ್ಣ ಸ್ಫೋಟಗಳು ಅಕ್ಟೋಬರ್‌ವರೆಗೆ ಮುಂದುವರೆದವು. ಅಷ್ಟು ಹೊತ್ತಿಗೆ ಆ ದ್ವೀಪದ ಶೇಕಡಾ ಎಪ್ಪತ್ತಕ್ಕಿಂತ ಹೆಚ್ಚು ಭೂಭಾಗ ಜ್ವಾಲಾಮುಖಿಯ ಬೂದಿಯಲ್ಲಿ ಹೂತುಹೋಗಿತ್ತು. ಅಧಿಕೃತ ದಾಖಲೆಗಳ ಪ್ರಕಾರ ಇದರಿಂದಾಗಿ ಸತ್ತವರು ೩೬,೪೧೭ ಜನ. ಲೆಕ್ಕಕ್ಕೆ ಸಿಗದೇ ಇನ್ನೆಷ್ಟು ಜನ ಸತ್ತಿದ್ದಾರೋ ಗೊತ್ತಿಲ್ಲ. ನೇರವಾಗಿ ಇದರಿಂದ ಸತ್ತವರಿಗಿಂತ ಇದರ ಪರಿಣಾಮವಾಗಿ ಎದ್ದ ಭೀಕರ ಸುನಾಮಿಗೆ ತುತ್ತಾಗಿ ಸತ್ತವರೇ ಹೆಚ್ಚು. ನೂರು ಮೀಟರ್‌ಗಿಂತ ಹೆಚ್ಚು ಎತ್ತರದ ನೀರಿನ ಗೋಡೆ ಸಾಗರದಲ್ಲಿ ನಿರ್ಮಾಣವಾಗಿತ್ತು ಎಂಬ ದಾಖಲೆಗಳಿವೆ. ಈ ನೀರಿನ ಗೋಡೆ ಮುಂದುವರೆಯುತ್ತ ತನ್ನ ಹಾದಿಯಲ್ಲಿ ಸಿಕ್ಕಿದ ಎಲ್ಲವನ್ನೂ ತೊಳೆಯುತ್ತ ಸಾಗಿತು. ಸುಮಾತ್ರದ ಮೇಲೆ ಸುರಿದ ಬಿಸಿ ಬೂದಿಯ ಮಳೆಗೆ ಸಾವಿರಕ್ಕೂ ಹೆಚ್ಚು ಜನ ಸಿಲುಕಿ ಸಮಾಧಿಯಾದರು. ಕ್ರಕಟೋವಾದಿಂದ ಹನ್ನೆರಡು ಕಿಲೋಮೀಟರ್ ದೂರದಲ್ಲಿದ್ದ ಸೆಬೆಸಿ ಎಂಬ ದ್ವೀಪದಲ್ಲಿದ್ದ ಮೂರುಸಾವಿರ ಜನರಲ್ಲಿ ಒಬ್ಬರೂ ಬದುಕುಳಿಯಲಿಲ್ಲ.
ಕ್ರಕಟೋವಾ ಸ್ಫೋಟದ ಪರಿಣಾಮ ಇಡೀ ಭೂಮಿಯ ವಾತಾವರಣದ ಮೇಲೆ ಗಮನಾರ್ಹವಾಗಿತ್ತು. ಅಷ್ಟು ಭಯನಕವಾದ ಸ್ಫೋಟ ಸಂಭವಿಸಿದಾಗ ಜಗತ್ತಿನ ಹವಾಮಾನದ ಮೇಲೆ ಪರಿಣಾಮ ಉಂಟಾಗುವುದು ಸಹಜವೇ ಆಗಿತ್ತು. ಅದರಿಂದ ಎದ್ದ ಧೂಳು ಮತ್ತು ಹೊಗೆ ತಿಂಗಳುಗಟ್ಟಲೆ ವಾತಾವರಣವನ್ನು ಮುಸುಕಿತ್ತು. ಇದರ ಪರಿಣಾಮ ಮರುವರ್ಷ ಬೇಸಿಗೆಯಲ್ಲಿ ವಾತಾವರಣದ ಉಷ್ಣತೆ ಸರಾಸರಿ ೧.೨ ಡಿಗ್ರಿ ಸೆಲ್ಷಿಯಸ್‌ಗಳಷ್ಟು ಕಡಿಮೆಯಾಗಿತ್ತು. ಅಲ್ಲದೆ ಮುಂದಿನ ಐದು ವರ್ಷಗಳವರೆಗೆ ಇದರ ಪರಿಣಾಮವಾಗಿ ಜಗತ್ತಿನ ಬೇರೆಬೇರೆ ಕಡೆಗಳಲ್ಲಿ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಇದಕ್ಕೆಲ್ಲ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕ್ರಕಟೋವಾ ಸ್ಫೋಟವೇ ಕಾರಣ ಎಂಬುದಕ್ಕೆ ವಿಜ್ಞಾನಿಗಳು ಅನೇಕ ಸಾಕ್ಷಿಗಳನ್ನು ನೀಡುತ್ತಾರೆ. ಆಗಸದಲ್ಲಿ ಮುಸುಕಿದ್ದ ಧೂಳು ಮತ್ತು ಹೊಗೆಯ ಪರಿಣಾಮ ಬೇರೆಬೇರೆ ಕಡೆಗಳಲ್ಲಿ ಸೂರ್ಯಾಸ್ತದ ಮತ್ತು ಸೂರ್ಯೋದಯದ ಸಂದರ್ಭಗಳಲ್ಲಿ ಕೆಂಗಂದು ಬಣ್ಣದ ಮನಮೋಹಕ ನೋಟ ಕಂಡುಬಂದಿದ್ದನ್ನು ಜನ ವರದಿ ಮಾಡಿದ್ದಾರೆ.
ಈ ರಕ್ಕಸ ಸ್ಫೋಟದ ಬಳಿಕ ಕ್ರಕಟೋವಾ ತಣ್ಣಗಾಯಿತು. ಮುಂದೆ ಅನೇಕ ವರ್ಷಗಳವರೆಗೆ ಇಲ್ಲಿ ಯಾವ ಚಟುವಟಿಕೆಗಳೂ ಕಂಡುಬರಲಿಲ್ಲ. ಮುಂದೆ ೧೯೨೭ರಲ್ಲಿ ಇಲ್ಲಿ ಮತ್ತೆ ಚಟುವಟಿಕೆಗಳು ಆರಂಭವಾದವು. ಆ ವರ್ಷ ಡಿಸೆಂಬರ್ ೨೯ರಂದು ಇನ್ನೊಂದು ಚಿಕ್ಕ ಅಗ್ನಿಪರ್ವತ ಸಮುದ್ರದಿಂದ ಮೇಲೆದ್ದಿತು. ಅದರ ಸುತ್ತಮುತ್ತ ಇನ್ನೂ ಎರಡು ಚಿಕ್ಕ ದ್ವೀಪಗಳು ತಲೆ ಎತ್ತಿದವು. ಆದರೆ ಅವೆಲ್ಲ ಅಷ್ಟೇ ಬೇಗ ಸಮುದ್ರದ ನೀರಿನಲ್ಲಿ ತೊಳೆದುಹೋದವು. ಆದರೆ ೧೯೩೦ರಲ್ಲಿ ಮೇಲೆದ್ದ ನಾಲ್ಕನೇ ಅಗ್ನಿಪರ್ವತ ಮಾತ್ರ ಸಮುದ್ರವನ್ನು ಹಿಮ್ಮೆಟ್ಟಿಸಿ ದೃಢವಾಗಿ ಮೇಲೆದ್ದಿತು. ಇದನ್ನು ಅನಕ್ ಕ್ರಕಟೋವಾ (ಕ್ರಕಟೋವಾದ ಮಗು) ಎಂದು ಕರೆಯುತ್ತಾರೆ. ಅನಕ್ ಕ್ರಕಟೋವಾ ಆಗಾಗ್ಗೆ ಹೊಗೆಯುಗುಳುತ್ತ ಸದ್ದು ಮಾಡುತ್ತಲೇ ಇದೆ. ತೀರಾ ಇತ್ತೀಚಿನ ವರ್ಷಗಳಲ್ಲೂ ಅದರಲ್ಲಿ ಸಣ್ಣ ಪ್ರಮಾಣದ ಆಸ್ಫೋಟಗಳು ಸಂಭವಿಸುತ್ತಲೇ ಇವೆ. ಇದರ ವ್ಯಾಸ ಸುಮಾರು ನಾಲ್ಕು ಕಿಲೋಮೀಟರ್ ಮತ್ತು ಎತ್ತರ ಇತ್ತೀಚಿನವರೆಗೂ ೪೦೦ ಮೀಟರ್‌ಗಳಷ್ಟಿತ್ತು. ಆದರೆ ೨೦೧೮ರ ಡಿಸೆಂಬರ್‌ನಲ್ಲಿ ಇದರಲ್ಲಿ ಕುಸಿತ ಸಂಭವಿಸಿದ್ದು ಅದರ ಪರಿಣಾಮ ಇದರ ಎತ್ತರ ಈಗ ೧೧೦ ಮೀಟರ್‌ಗಳಿಗೆ ಇಳಿದಿದೆ.
ಕ್ರಕಟೋವಾದಂಥ ಸ್ಫೋಟ ಇಲ್ಲಿ ಮತ್ತೆ ಸಂಭವಿಸಬಹುದೇ? ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಹೌದು ಅಥವಾ ಇಲ್ಲ ಎಂಬ ಎರಡೂ ರೀತಿಯ ಉತ್ತರಗಳು ಅಪೂರ್ಣವಾಗುತ್ತವೆ. ಕ್ರಕಟೋವಾದ ತೀವ್ರತೆ ಮತ್ತು ಅಬ್ಬರ ಎಷ್ಟಿತ್ತೆಂದರೆ ನಾವು ಅದರಂಥ ಇನ್ನೊಂದು ಸ್ಫೋಟ ಭೂಮಿಯಲ್ಲಿ ಮತ್ತೆ ಸಂಭವಿಸಲಿಕ್ಕಿಲ್ಲ ಎಂದು ಭಾವಿಸಿದ್ದೇವೆ. ಆದರೆ ವಸುಂಧರೆಯ ಒಡಲೊಳಗಿನ ವಿಚ್ಛಿದ್ರಕಾರಿ ಶಕ್ತಿಗಳ ಬಗ್ಗೆ ನಮಗೆ ತಿಳಿದಿರುವುದು ತುಂಬಾ ಅಲ್ಪ. ಹಾಗಾಗಿ ಮುಂದೊಂದು ದಿನ ಕ್ರಕಟೋವಾದ ಮಗು ಕ್ರಕಟೋವಾದ ರೀತಿಯಲ್ಲೇ ಅಬ್ಬರಿಸಬಹುದು ಅಥವಾ ಅದನ್ನೂ ಮೀರಿ ಘರ್ಜಿಸಬಹುದು. ಪ್ರಕೃತಿಯ ಬಲಗಳ ಮುಂದೆ ನಾವೆಷ್ಟು ಕುಬ್ಜರು ಎಂದು ನಮಗೆ ಮತ್ತೆ ನೆನಪು ಮಾಡಿಕೊಡಬಹುದು. ಅಂಥ ದಿನ ಬಂದರೆ ಅದಕ್ಕೆ ನಾವೆಲ್ಲರೂ ಸಿದ್ಧವಾಗಿರಬೇಕಾಗುತ್ತದೆ. ಅಲ್ಲವೇ?