Do you have a passion for writing?Join Ayra as a Writertoday and start earning.

ಕ್ರಿಕೆಟ್:‌ಈ ದಾಖಲೆಗಳಿರುವುದೇ ಮುರಿಯದಿರುವುದಕ್ಕೆ!

ಮುರಿಯಲಸಾಧ್ಯವಾದ ದಾಖಲೆಗಳ ಇಣುಕುನೋಟ

ProfileImg
29 Mar '24
6 min read


image

        ಕ್ರಿಕೆಟ್‌ನಲ್ಲಿ ದಾಖಲೆಗಳಿರುವುದೇ ಮುರಿಯುವುದಕ್ಕಾಗಿ ಎಂಬ ಮಾತಿದೆ. ಟೆಸ್ಟ್‌ ಕ್ರಿಕೆಟ್‌ಗೆ 147 ವರ್ಷ ಹಾಗೂ ಏಕದಿನ ಕ್ರಿಕೆಟ್‌ಗೆ ಸುಮಾರು 53 ವರ್ಷಗಳ ಇತಿಹಾಸವಿದೆ. ಈ ಅವಧಿಯಲ್ಲಿ ಸಾವಿರಾರು ಕ್ರಿಕೆಟಿಗರು ಸಾವಿರಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅನೇಕ ದಾಖಲೆಗಳನ್ನು ಅನೇಕರು ಮುರಿದಿದ್ದಾರೆ ಮತ್ತು ಮುರಿಯುತ್ತಲೂ ಇದ್ದಾರೆ. ಆದ್ದರಿಂದ ಕ್ರೀಡೆಯಲ್ಲಿ ದಾಖಲೆಗಳಿರುವುದೇ ಮುರಿಯುವುದಕ್ಕಾಗಿ ಎನ್ನುವ ಮಾತೊಂದಿದೆ. ಆದರೆ ಇದು ನೂರಕ್ಕೆ ನೂರು ಸರಿಯಲ್ಲ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಏಕೆಂದರೆ ಕೆಲವು ದಾಖಲೆಗಳನ್ನು ಗಮನಿಸಿದರೆ ಅದನ್ನು ಯಾರೂ ಯಾವತ್ತೂ ಮುರಿಯುವುದು ಬಹುಶಃ ಅಸಂಭವ ಎನ್ನಿಸುತ್ತದೆ. ಅಂಥ ಕೆಲವೊಂದು ದಾಖಲೆಗಳನ್ನು ನಾವೀಗ ನೋಡೋಣ.

       ಕ್ರಿಕೆಟ್‌ ತಂಡಗಳಲ್ಲಿ ಆಲ್‌ರೌಂಡರ್‌ಗಳಿಗೆ ಬಹಳ ಮಹತ್ವವಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡನ್ನೂ ಮಾಡಬಲ್ಲ ಸಾಮರ್ಥ್ಯ ಇರುವ ಆಟಗಾರ ತಂಡಕ್ಕೆ ಅತ್ಯಮೂಲ್ಯ ಆಸ್ತಿಯಾಗಬಲ್ಲ. ಇಂದು ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ರವೀಂದ್ರ ಜಡೇಜಾ, ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್‌, ಇಂಗ್ಲೆಂಡಿನ ಬೆನ್‌ ಸ್ಟೋಕ್ಸ್‌, ಬಾಂಗ್ಲಾದೇಶದ ಶಕೀಬ್‌ ಅಲ್‌ ಹಸನ್‌, ಆಸ್ಟ್ರೇಲಿಯಾದ ಮಾರ್ಕಸ್‌ ಸ್ಟೊಯಿನಿಸ್‌ ಹೀಗೆ ಸಾಕಷ್ಟು ಆಲ್‌ರೌಂಡರ್‌ಗಳು ಇಂದು ಕ್ರಿಕೆಟ್‌ ಜಗತ್ತಿನಲ್ಲಿ ನಮ್ಮ ಛಾಪು ಮೂಡಿಸಿದ್ದಾರೆ. ಆದರೆ ಇಂದು ಕೇವಲ ಬೌಲರ್‌ ಆಗಿ ತಂಡವನ್ನು ಪ್ರವೇಶಿಸಿದ ಬಳಿಕ ಬ್ಯಾಟಿಂಗ್‌ನಲ್ಲೂ ಸೈ ಎನ್ನಿಸಿಕೊಂಡು ಆಲ್‌ರೌಂಡರ್‌ಗಳ ಪಟ್ಟಿ ಸೇರಿದವರೂ ತುಂಬಾ ಜನ ಇದ್ದಾರೆ. ನಮ್ಮ ಅಶ್ವಿನ್‌ ಮತ್ತು ಅಕ್ಷರ್‌ ಇದೇ ಪಟ್ಟಿಗೆ ಸೇರುತ್ತಾರೆ. 

       ಆದರೆ ಕ್ರಿಕೆಟ್‌ ಇತಿಹಾಸ ಕಂಡ ಮಹಾನ್‌ ದಿಗ್ಗಜ ಆಲ್‌ರೌಂಡರ್‌ಗಳ ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದೇ ಇಲ್ಲ. ವೆಸ್ಟ್‌ ಇಂಡೀಸ್‌ನ ಗ್ಯಾರಿ ಸೋಬರ್ಸ್‌, ಭಾರತದ ಕಪಿಲ್‌ ದೇವ್‌, ವಿನೂ ಮಂಕಡ್‌, ನ್ಯೂಜಿಲೆಂಡಿನ ರಿಚರ್ಡ್‌ ಹ್ಯಾಡ್ಲಿ, ಇಂಗ್ಲೆಂಡಿನ ಇಯಾನ್‌ ಬಾಥಂ, ಪಾಕಿಸ್ತಾನದ ಇಮ್ರಾನ್‌ ಖಾನ್‌ ಮೊದಲಾದವರು ಕ್ರಿಕೆಟ್‌ ಜಗತ್ತು ಎಂದೆಂದೂ ಮರೆಯಲಾರದಂಥ ಸಾಧನೆಗಳನ್ನು ಮಾಡಿಹೋಗಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಜಾಕ್‌ ಕಾಲಿಸ್‌ ಅವರ ಸಾಧನೆ ಮಾತ್ರ ಬಹುಶಃ ಅಜರಾಮರ ಎಂದರೆ ತಪ್ಪಾಗಲಾರದು. ಅದನ್ನು ಮುರಿಯುವ ಆಲ್‌ರೌಂಡರ್‌ ಒಬ್ಬ ಹುಟ್ಟಿಬರುವುದು ಬಹುತೇಕ ಅಸಂಭವವೇ ಸರಿ. ಆತ ಟೆಸ್ಟ್‌ ಮತ್ತು ಏಕದಿನ ಎರಡೂ ಪ್ರಕಾರಗಳಲ್ಲಿ 10,000ಕ್ಕಿಂತ ಹೆಚ್ಚು ರನ್‌ ಹಾಗೂ 250ಕ್ಕಿಂತ ಹೆಚ್ಚು ವಿಕೆಟ್‌ ಪಡೆದಿರುವ ಜಗತ್ತಿನ ಏಕಮಾತ್ರ ಕ್ರಿಕೆಟಿಗ. ಎರಡೂ ಪ್ರಕಾರಗಳಲ್ಲಿ ಹತ್ತು ಸಾವಿರ ರನ್‌ ಮಾಡಿರುವ ಇತರೆ ಬ್ಯಾಟರ್‌ಗಳ ಪೈಕಿ ಸಚಿನ್‌ ತೆಂಡೂಲ್ಕರ್‌ ಮಾತ್ರ ಟೆಸ್ಟ್‌ನಲ್ಲಿ 46 ಹಾಗೂ ಏಕದಿನ ಪಂದ್ಯಗಳಲ್ಲಿ 154 ವಿಕೆಟ್‌ ಗಳಿಸಿದ್ದಾರೆ. ಉಳಿದಂತೆ ರಾಹುಲ್‌ ದ್ರಾವಿಡ್‌, ಮಹೇಲ ಜಯವರ್ಧನೆ, ಕುಮಾರ ಸಂಗಕ್ಕರ, ಬ್ರಿಯಾನ್‌ ಲಾರಾ ಮತ್ತು ರಿಕಿ ಪಾಂಟಿಂಗ್‌ ಅವರೆಲ್ಲ ಗಳಿಸಿರುವುದು ಬೆರಳೆಣಿಕೆಯಷ್ಟು ವಿಕೆಟ್‌ಗಳನ್ನು ಮಾತ್ರ. ಈಗಿರುವ ಬ್ಯಾಟರ್‌ಗಳಲ್ಲಿ ಎರಡೂ ವಿಭಾಗಗಳಲ್ಲಿ ಹತ್ತುಸಾವಿರದ ಗಡಿ ದಾಟಬಲ್ಲಂತೆ ಕಾಣುತ್ತಿರುವವರು ನಮ್ಮ ವಿರಾಟ್‌ ಕೊಹ್ಲಿ ಮಾತ್ರ. ಅವರು ಬೌಲಿಂಗ್‌ ಮಾಡುವುದೇ ಅತ್ಯಪರೂಪ. ಹಾಗಾಗಿ ಸದ್ಯ ಆಡುತ್ತಿರುವ ಯಾವುದೇ ಕ್ರಿಕೆಟಿಗ ಕಾಲಿಸ್‌ ದಾಖಲೆಯನ್ನು ಮುರಿಯುವುದು ಅಸಾಧ್ಯವೇ ಸರಿ. ಮುಂದೆ ಬರುವವರು ಕೂಡ ಈ ದಾಖಲೆಯನ್ನು ಮುರಿಯಬೇಕಾದರೆ ಅದೆಷ್ಟು ಏಕಾಗ್ರತೆಯಿಂದ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡನ್ನೂ ನಿಭಾಯಿಸಿಕೊಂಡು ದಶಕಗಳ ಕಾಲ ಕ್ರಿಕೆಟ್‌ ಆಡಬೇಕು ನೋಡಿ. ಸದ್ಯದ ಪರಿಸ್ಥಿತಿಯಲ್ಲಂತೂ ಅದು ಅಸಾಧ್ಯವೇ ಸರಿ. 

       ಇನ್ನು ನಮ್ಮ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಅತ್ಯಪರೂಪದ ದಾಖಲೆಗಳ ಗೊಂಚಲನ್ನು ಗಮನಿಸಿ. ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ ಎರಡೂ ವಿಭಾಗಗಳಲ್ಲಿ ಏಕಕಾಲಕ್ಕೆ ಅತ್ಯಧಿಕ ಪಂದ್ಯಗಳನ್ನಾಡಿದ್ದು, ಅತ್ಯಧಿಕ ರನ್‌ ಗಳಿಸಿದ್ದು, ಅತ್ಯಧಿಕ ಶತಕಗಳನ್ನು ಗಳಿಸಿದ್ದು, ಅತ್ಯಧಿಕ ಅರ್ಧಶತಕಗಳನ್ನು ಗಳಿಸಿದ್ದು ಹಾಗೂ ಅತ್ಯಧಿಕ ಬೌಂಡರಿಗಳನ್ನು ಗಳಿಸಿದ್ದು ಈ ಹತ್ತೂ ದಾಖಲೆಗಳನ್ನು ಏಕಕಾಲಕ್ಕೆ ಹೊಂದಿದ್ದ ಜಗತ್ತಿನ ಏಕಮಾತ್ರ ಕ್ರಿಕೆಟಿಗ ಸಚಿನ್.‌ ಇಂದು ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ಶತಕಗಳ ದಾಖಲೆಯನ್ನು ವಿರಾಟ್‌ ಕೊಹ್ಲಿ ಮುರಿದಿರಬಹುದು. ಇನ್ನೂ ಒಂದೆರಡು ದಾಖಲೆಗಳನ್ನು ಅವರು ಮುರಿಯಲೂಬಹುದು ಅಥವಾ ಬೇರೆ ಯಾರಾದರೂ ಮುರಿಯಬಹುದು. ಆದರೆ ಈ ಹತ್ತು ದಾಖಲೆಗಳನ್ನು ಏಕಕಾಲಕ್ಕೆ ಹೊಂದಿದ್ದ ಸಾರ್ವಕಾಲಿಕ ಶ್ರೇಷ್ಠ ದಾಖಲೆಯನ್ನು ಯಾರಿಂದಲೂ ಮುರಿಯಲಾಗದು ಎಂದು ಧೈರ್ಯವಾಗಿ ಹೇಳಬಹುದು. ಹಾಗೆಯೇ ಟೆಸ್ಟ್‌ ಮತ್ತು ಏಕದಿನ ಎರಡೂ ಪ್ರಕಾರಗಳಲ್ಲಿ 15000ಕ್ಕಿಂತ ಹೆಚ್ಚು ರನ್‌ ಗಳಿಸಿರುವ ದಾಖಲೆಯನ್ನು ಸಹ ಮುರಿಯುವುದು ಸುಲಭವಲ್ಲ. 20-20 ಕ್ರಿಕೆಟ್‌ ಏನಾದರೂ ಸಚಿನ್‌ ಅವರ ಕ್ರಿಕೆಟ್‌ ಕೆರಿಯರ್‌ ಆರಂಭವಾದ ಸಮಯದಲ್ಲೇ ಇದ್ದಿದ್ದರೆ ಅದರಲ್ಲೂ ಅವರು ಒಂದಿಷ್ಟು ದಾಖಲೆಗಳ ಗೊಂಚಲನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಿದ್ದರು ಎನ್ನುವುದರಲ್ಲಿ ಅನುಮಾನವೇ ಇಲ್ಲ. 

       ಮಿಸ್ಟರ್‌ 360 ಎಂಬ ಅಡ್ಡಹೆಸರಿನಿಂದಲೇ ಚಿರಪರಿಚಿತರಾಗಿರುವ, ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಕಾರಣದಿಂದ ಕನ್ನಡಿಗರಿಗೂ ಅಚ್ಚುಮೆಚ್ಚಾಗಿರುವ ದಕ್ಷಿಣ ಆಫ್ರಿಕದ ಚಿನಕುರುಳಿ ಎಬಿಡಿ ವಿಲಿಯರ್ಸ್‌ ಅವರ ದಾಖಲೆಗಳು ಅನೇಕ. ಆದರೆ ಏಕದಿನ ಪಂದ್ಯಗಳಲ್ಲಿ ಅತಿವೇಗದ ಅರ್ಧಶತಕ (16 ಎಸೆತ) ಅತಿವೇಗದ ಶತಕ (31 ಎಸೆತ) ಹಾಗೂ ಅತಿವೇಗದ 150 (64 ಎಸೆತ) ರನ್‌ಗಳನ್ನು ಗಳಿಸಿದ ದಾಖಲೆ ಅವರ ಹೆಸರಿನಲ್ಲಿದೆ. ಈ ಮೂರು ದಾಖಲೆಗಳನ್ನೂ ಒಂದೇ ಬಾರಿಗೆ ಮುಡಿಗೇರಿಸಿಕೊಳ್ಳುವ ಸಾಮರ್ಥ್ಯ ಇರುವ ಬೇರಾವುದೇ ಬ್ಯಾಟ್ಸ್‌ಮನ್‌ ಜಗತ್ತಿನಲ್ಲಿ ಇಲ್ಲ. ಮುಂದೆಯೂ ಇಂಥ ಒಬ್ಬ ಬ್ಯಾಟ್ಸ್‌ಮನ್‌ ಬರಬಹುದು ಎಂದು ಅನ್ನಿಸುತ್ತಿಲ್ಲ. ಈ ಮೂರರ ಪೈಕಿ ಯಾವುದಾದರೊಂದು ದಾಖಲೆಯನ್ನು ಒಬ್ಬ ಮುರಿಯಬಹುದು. ಅಥವಾ ಮೂರು ದಾಖಲೆಗಳನ್ನೂ ಬೇರೆಬೇರೆಯವರು ಮುರಿಯಬಹುದು. ಆದರೆ ಮೂರೂ ದಾಖಲೆಗಳನ್ನು ಒಬ್ಬನೇ ಮುರಿಯುವುದು ಅಸಂಭವವೇ ಸರಿ. 

       ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ ಆರಂಭಿಸುವವರು ವೇಗವಾಗಿ ರನ್‌ಗಳನ್ನು ಗಳಿಸಿ ತಂಡಕ್ಕೆ ಉತ್ತಮ ಆರಂಭ ದೊರಕಿಸಿಕೊಡಬೇಕು ಎನ್ನುವುದು ಬಹಳ ಹಳೆಯ ತತ್ವ. 1992ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡಿನ ಮಾರ್ಕ್‌ ಗ್ರೇಟ್‌ಬ್ಯಾಚ್‌ ಅವರು ಬಿರುಸಿನ ಬ್ಯಾಟಿಂಗ್‌ ಮೂಲಕ ಇನಿಂಗ್ಸ್‌ ಆರಂಭಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದರು. 1996ರಲ್ಲಿ ಶ್ರೀಲಂಕಾದ ಸನತ್‌ ಜಯಸೂರ್ಯ ಹಾಗೂ ರೊಮೇಶ್‌ ಕಲುವಿತರಣ ಇದನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಈ ಶತಮಾನದಲ್ಲಂತೂ ಆರಂಭಿಕರು ಮೊದಲ ಎಸೆತದಿಂದಲೇ ಚೆಂಡನ್ನು ಚಚ್ಚುವ ಪರಿಪಾಠ ಆರಂಭವಾಯಿತು. ಇದೀಗ ಟೆಸ್ಟ್‌ನಲ್ಲಿ ಸಹ ಇದೇ ಮಾದರಿಯ ಆಟ ಆರಂಭವಾಗಿದೆ. ಆದರೆ ಟೆಸ್ಟ್‌ನಲ್ಲಿ ಸಹ ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನರಾಗಿ ಚೆಂಡನ್ನು ಮನಬಂದಂತೆ ಚಚ್ಚುತ್ತಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಎಂದರೆ ಅದು ಭಾರತದ ವೀರೇಂದ್ರ ಸೆಹ್ವಾಗ್.‌ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ತಂಡಕ್ಕೆ ಸೇರಿದರೂ ನಂತರ ಆರಂಭಿಕನಾಗಿ ಬಡ್ತಿ ಬಡೆದು ಜಗತ್ತಿನಾದ್ಯಂತ ಬೌಲರ್‌ಗಳ ಹಣೆಯಲ್ಲಿ ಬೆವರಿಳಿಸಿದ ಆಟಗಾರ ಅವರು. ಟೆಸ್ಟ್‌ನಲ್ಲಿ ಸಹ ಅವರ ಬ್ಯಾಟಿಂಗ್‌ ಏಕದಿನ ಪಂದ್ಯಗಳಂತೆಯೇ ಇರುತ್ತಿತ್ತು. 278 ಎಸೆತಗಳಲ್ಲಿ ಒಮ್ಮೆ ತ್ರಿಶತಕ ಹಾಗೂ 168, 182 ಹಾಗೂ 194 ಎಸೆತಗಳಲ್ಲಿ ದ್ವಿಶತಕ ಗಳಿಸಿರುವ ಅವರು 100ಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್‌ನಲ್ಲಿ ಒಂದು ತ್ರಿಶತಕ, ಮೂರು ದ್ವಿಶತಕ ಹಾಗೂ ಏಳು ಶತಕಗಳನ್ನು ಗಳಿಸಿದ್ದಾರೆ. ಈ ದಾಖಲೆಯನ್ನು ಮುರಿಯುವುದು ಅಸಾಧ್ಯ ಎಂದು ಧೈರ್ಯವಾಗಿ ಹೇಳಬಹುದು. ಜೊತೆಗೆ ಗೌತಮ್‌ ಗಂಭೀರ್‌ ಜೊತೆಗೂಡಿ ಕ್ರಿಕೆಟ್‌ನ ಮೂರೂ ಪ್ರಕಾರಗಳಲ್ಲಿ ಆರಂಭಿಕರಾಗಿ ಆಡಿ, ಮೂರರಲ್ಲೂ ಶತಕ ಜೊತೆಯಾಟ ಆಡಿರುವ ಅತ್ಯಪರೂಪದ ಸಾಧನೆ ಸಹ ಅವರದ್ದು. ಅದನ್ನು ಸಹ ಮುರಿಯುವುದು ಸುಲಭವಲ್ಲ.

       ಭಾರತ ತಂಡದ ಇಂದಿನ ಕಪ್ತಾನ ರೋಹಿತ್‌ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಮೂಡಿಸಿರುವ ಛಾಪನ್ನು ಯಾರಿಂದಲೂ ಅಳಿಸಲಾಗದು. 2013ರಿಂದ 2019ರವರೆಗೆ ಸತತ ಏಳು ವರ್ಷ ಕನಿಷ್ಠ ಒಂದು 150+ ಸ್ಕೋರ್‌ನ್ನು ದಾಖಲಿಸಿರುವ ಅವರ ದಾಖಲೆಯೂ ಅಜರಾಮರವೇ ಸರಿ. ಇದನ್ನು ಮುರಿಯುವುದು ಬಹುತೇಕ ಅಸಂಭವ. ಜೊತೆಗೆ ಅವರ ಮೂರು ದ್ವಿಶತಕಗಳ ದಾಖಲೆಯನ್ನು ಮೀರಿ, ನಾಲ್ಕು ದ್ವಿಶತಕ ಗಳಿಸುವುದಾಗಲೀ, 264 ರನ್‌ಗಳ ವೈಯಕ್ತಿಕ ಗರಿಷ್ಠ ಮೊತ್ತವನ್ನು ಮೀರಿಸುವುದಾಗಲೀ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 597 ಸಿಕ್ಸರ್‌ಗಳ ದಾಖಲೆಯನ್ನು ಮುರಿಯುವುದಾಗಲೀ ಅಸಂಭವ. ಅಷ್ಟೊಂದು ದೀರ್ಘಕಾಲ ಒಂದೇ ಲಯದಲ್ಲಿ ಆಡುವ ಸ್ಥಿರತೆ ಮತ್ತು ಬದ್ಧತೆಯನ್ನು ಪ್ರದರ್ಶಿಸುವುದು ಸುಲಭದ ಮಾತಲ್ಲ.

       ಇಂಗ್ಲೆಂಡಿನ ಜೇಮ್ಸ್‌ ಆಂಡರ್ಸನ್‌ ನಿಜಕ್ಕೂ ಈ ಶತಮಾನದ ಅದ್ಭುತ ಬೌಲರ್‌ ಎಂದರೆ ತಪ್ಪಾಗಲಾರದು. 2003ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಅವರು 187 ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. ಓರ್ವ ವೇಗದ ಬೌಲರ್‌ ಆಗಿ ಇಷ್ಟು ಪಂದ್ಯಗಳನ್ನು ಆಡಿರುವುದೇ ಬಹುದೊಡ್ಡ ಸಾಧನೆ. ಇದರೊಂದಿಗೆ 700 ವಿಕೆಟ್‌ಗಳನ್ನೂ ಗಳಿಸಿರುವ ಅವರ ಈ ಎರಡೂ ಸಾಧನೆಗಳನ್ನು ಯಾರಾದರೂ ಸ್ಪಿನ್ನರ್‌ ಮುರಿಯಬಹುದೇನೋ, ಆದರೆ ವೇಗದ ಬೌಲರ್‌ ಒಬ್ಬ ಈ ದಾಖಲೆಗಳನ್ನು ಮುರಿಯಲಾರ. ಜೊತೆಗೆ 2003ರಿಂದ ಇದುವರೆಗೆ ಸತತ 22 ವರ್ಷಗಳ ಕಾಲ ಟೆಸ್ಟ್‌ಗಳಲ್ಲಿ ಕನಿಷ್ಠ ಒಂದಾದರೂ ವಿಕೆಟ್‌ ಪಡೆದಿರುವುದು ಸಹ ಅವರ ದಾಖಲೆ. ವರ್ಷಕ್ಕೆ ಕನಿಷ್ಠ ಒಂದು ವಿಕೆಟ್‌ ಪಡೆಯುವುದೇನು ಮಹಾ ಎಂದು ನಿಮಗನ್ನಿಸಬಹುದು. ಆದರೆ ವೇಗದ ಬೌಲರ್‌ ಒಬ್ಬ ಎರಡು ದಶಕಗಳಿಗೂ ಹೆಚ್ಚುಕಾಲ ದೈಹಿಕ ಸಾಮರ್ಥ್ಯ ಉಳಿಸಿಕೊಂಡು ಕ್ರಿಕೆಟ್‌ ಆಡುವುದೆಂದರೆ ಅದು ಅಸಾಮಾನ್ಯ ಸಾಧನೆಯೇ ಸರಿ. ಈ ನಿಟ್ಟಿನಲ್ಲಿ ಆಂಡರ್ಸನ್‌ ಅವರ ಸಾಧನೆ ಅದ್ವಿತೀಯ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ದಾಖಲೆಯನ್ನಂತೂ ಯಾವ ವೇಗಿ ಕೂಡ ಮುರಿಯಲಾರ ಎಂದು ಧೈರ್ಯವಾಗಿ ಹೇಳಬಹುದು. 

       ದಕ್ಷಿಣ ಆಫ್ರಿಕದ ಮಾರ್ಕ್‌ ಬೌಷರ್‌ ಕ್ರಿಕೆಟ್‌ ಜಗತ್ತು ಕಂಡ ಮಹಾನ್‌ ವಿಕೆಟ್‌ಕೀಪರ್‌ಗಳಲ್ಲೊಬ್ಬರು. ಟೆಸ್ಟ್‌, ಏಕದಿನ ಹಾಗೂ 20-20 ಸೇರಿ ಒಟ್ಟು 999 ಬಲಿಗಳನ್ನು ಪಡೆದಿರುವ ಅವರ ದಾಖಲೆ ಸಹ ಮುರಿಯಲಸಾಧ್ಯ ಎಂದು ಧೈರ್ಯವಾಗಿ ಹೇಳಬಹುದು. 2012ರಲ್ಲಿ ಇಂಗ್ಲೆಂಡ್‌ ಪ್ರವಾಸದಲ್ಲಿದ್ದಾಗ ದುರದೃಷ್ಟವಶಾತ್ ಬೇಲ್ಸ್‌ ಕಣ್ಣಿಗೆ ತಗುಲಿದ್ದರಿಂದ ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡು ನಿವೃತ್ತಿ ಘೋಷಿಸಬೇಕಾಯಿತು. ಇಲ್ಲವಾದರೆ ಒಂದುಸಾವಿರ ಬಲಿಗಳನ್ನು ಪಡೆದ ಜಗತ್ತಿನ ಏಕಮಾತ್ರ ವಿಕೆಟ್‌ಕೀಪರ್‌ ಎಂಬ ಸಾಧನೆ ಮಾಡುವ ಎಲ್ಲ ಸಾಮರ್ಥ್ಯವೂ ಅವರಲ್ಲಿತ್ತು. 

       ಭಾರತದ ರಾಹುಲ್‌ ದ್ರಾವಿಡ್‌ ಟೆಸ್ಟ್‌ ಜಗತ್ತು ಕಂಡ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಪೈಕಿ ಒಬ್ಬರು. ಆದರೆ ಅವರು ಏಕದಿನ ಕ್ರಿಕೆಟ್‌ನಲ್ಲಿ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ. ಎರಡು ಸಲ 300ಕ್ಕಿಂತ ಹೆಚ್ಚು ರನ್‌ಗಳ ಜೊತೆಯಾಟದಲ್ಲಿ ಪಾಲ್ಗೊಂಡಿರುವುದು ಅವರ ಸಾಧನೆ. ಜೊತೆಗೆ ಟೆಸ್ಟ್‌ನಲ್ಲಿ ಮೂರು ಸಲ 300+ ಜೊತೆಯಾಟದಲ್ಲಿ ಪಾಲ್ಗೊಂಡಿದ್ದಾರೆ. ಟೆಸ್ಟ್‌ ಮತ್ತು ಏಕದಿನ ಎರಡೂ ವಿಭಾಗಗಳಲ್ಲಿ ಕನಿಷ್ಠ ಎರಡು ಸಲ 300ಕ್ಕಿಂತ ಹೆಚ್ಚಿನ ಜೊತೆಯಾಟದಲ್ಲಿ ಪಾಲುದಾರನಾಗಿರುವುದು ಖಂಡಿತ ಮುರಿಯಲು ಸುಲಭವಾದ ದಾಖಲೆಯಲ್ಲ.

       ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲಿಂಗ್‌ ಸಾಧನೆ ಎಂದರೆ ಕ್ರಮವಾಗಿ ಶ್ರೀಲಂಕಾದ ಚಮಿಂಡಾ ವಾಸ್‌ ಅವರ 19ಕ್ಕೆ 8 ವಿಕೆಟ್‌ಗಳ ಸಾಧನೆ ಹಾಗೂ ಇಂಗ್ಲೆಂಡಿನ ಜಿಮ್‌ ಲೇಕರ್‌ ಅವರ 53ಕ್ಕೆ 10 ವಿಕೆಟ್‌ಗಳ ಸಾಧನೆ. ಅದೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಲೇಕರ್‌ 37ಕ್ಕೆ 9 ವಿಕೆಟ್‌ ಪಡೆದಿದ್ದರು. ಹಾಗಾಗಿ ಆ ಟೆಸ್ಟ್‌ನಲ್ಲಿ ಅವರ ಅತ್ಯುತ್ತಮ ಬೌಲಿಂಗ್‌ ಸಾಧನೆ 90ಕ್ಕೆ 19 ವಿಕೆಟ್.‌ ಏಕದಿನ ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ ಪಡೆಯುವುದಾಗಲೀ ಟೆಸ್ಟ್‌ನಲ್ಲಿ ಎರಡೂ ಇನಿಂಗ್ಸ್‌ ಸೇರಿ 20 ವಿಕೆಟ್‌ ಪಡೆಯುವುದಾಗಲೀ ಅಸಾಧ್ಯದ ಮಾತು ಎಂದು ಧೈರ್ಯವಾಗಿ ಹೇಳಬಹುದು. ಹಾಗಾಗಿ ಈ ದಾಖಲೆಗಳು ಸಹ ಅಜೇಯ ದಾಖಲೆಗಳು ಎಂದರೆ ತಪ್ಪಾಗಲಾರದು.

       ಕೊನೆಯದಾಗಿ ಒಬ್ಬ ಬ್ಯಾಟ್ಸ್‌ಮನ್‌ ಒಂದು ಇನ್ನಿಂಗ್ಸ್‌ನಲ್ಲಿ ಗರಿಷ್ಠ ಎಷ್ಟು ಎಸೆತಗಳನ್ನೆದುರಿಸಬಹುದು? ಏಕದಿನ ಮತ್ತು 20-20ಯಲ್ಲಿ ಓವರ್‌ಗಳ ಮಿತಿ ಇರುತ್ತದೆ. ಅದನ್ನು ಬಿಡಿ, ಟೆಸ್ಟ್‌ನಲ್ಲಿ ಎಷ್ಟು ಎಸೆತಗಳನ್ನು ಎದುರಿಸಬಹುದು? ನೂರು? ಇನ್ನೂರು? ಮುನ್ನೂರು? ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಇಂಗ್ಲೆಂಡಿನ ಲೆನ್‌ ಹಟನ್‌ 1939ರಲ್ಲಿ ಆಸ್ಟ್ರೇಲಿಯಾ ವಿರುದ್ಧ 847 ಎಸೆತಗಳವರೆಗೆ ತಮ್ಮ ವಿಕೆಟ್‌ ಕಾಯ್ದುಕೊಂಡಿದ್ದರು! ಅಂದರೆ 141.1 ಓವರ್‌ಗಳ ಆಟ! ಅಂದು ಅವರು ಬಾರಿಸಿದ್ದ 364 ರನ್‌ಗಳು ಅವತ್ತಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸರ್ವಾಧಿಕ ಮೊತ್ತವಾಗಿತ್ತು. ಇಂದು ಇಡೀ ಟೆಸ್ಟ್‌ ಪಂದ್ಯಗಳೇ ಇದಕ್ಕಿಂತ ಕಡಿಮೆ ಎಸೆತಗಳಲ್ಲಿ ಮುಗಿದುಹೋದ ಎಷ್ಟೋ ಉದಾಹರಣೆಗಳಿವೆ! ಅಂದು ಟೆಸ್ಟ್‌ ಪಂದ್ಯಗಳಿಗೆ ಇಂದಿನಂತೆ ಐದು ದಿನ ಹಾಗೂ ಓವರ್‌ಗಳ ಮಿತಿ ಇರಲಿಲ್ಲ ನಿಜ, ಆದರೂ ಒಬ್ಬ ಬ್ಯಾಟರ್‌ 800ಕ್ಕೂ ಹೆಚ್ಚು ಎಸೆತಗಳನ್ನೆದುರಿಸುವುದೆಂದರೆ ಖಂಡಿತ ಅದು ಹುಡುಗಾಟದ ಮಾತಲ್ಲ. ಈ ದಾಖಲೆಯಂತೂ ಯಾರೂ ಮುರಿಯಲಸಾಧ್ಯವಾದ ದಾಖಲೆ ಎಂದು ನಿರ್ಭಯವಾಗಿ ಹೇಳಬಹುದು!

       

       

       

       

Category : Sports


ProfileImg

Written by Srinivasa Murthy