ಮಣ್ಣು ಮೆತ್ತಿದ ಹಳದಿ ಚಪ್ಪಲಿ
ನನ್ನ ಸೋದರಳಿಯ ಏಳನೇ ತರಗತಿಯಲ್ಲಿ ಓದುತ್ತಿರುವ ಹುಡುಗ. ಮೊನ್ನೆ ಅವರ ಮನೆಗೆ ಹೋದಾಗ, ಅವನಿಗೆ ಅವನ ಅಮ್ಮನಿಂದ ಬಯ್ಗುಳದ ಅಭಿಷೇಕವಾಗುತ್ತಿತ್ತು. ಅವನು ತನ್ನ ಚಪ್ಪಲಿಯನ್ನು ಮನೆಯ ಒಳಗಿರುವ ಬಾತ್‌ರೂಮಿನಲ್ಲಿ ತೊಳೆದು, ಕೈಯಲ್ಲಿ ಹಿಡಿದುಕೊಂಡು ಓಡಾಡಿ, ಮನೆತುಂಬಾ ನೀರು ಹನಿಸಿದ್ದು ಬಯ್ಗುಳಕ್ಕೆ ಕಾರಣವಾಗಿತ್ತು. ಇವನ ಕಾಟ ತಾಳಲಾಗದೇ, ಅಪ್ಪನಿಗೆ ಗೊತ್ತಾಗದ ಹಾಗೇ ಈ ಚಪ್ಪಲಿ ಕೊಡಿಸಿದ್ದೇ ತಪ್ಪಾಯಿತು ಅನ್ನುತ್ತಿದ್ದಳು ಅವನಮ್ಮ. ಅದರಲ್ಲು ದೊಡ್ಡದಾಗಿ, ನೋಡಲು ಕೆಟ್ಟದಾಗಿ ಕಾಣಿಸುವ ಹಳದಿ ಬಣ್ಣದ ಚಪ್ಪಲಿಯನ್ನೇ ಹುಡುಕಿ ತಗೊಂಡಿದ್ದಾನೆ. ಶಾಲೆಯಿಂದ ಬರೋವಾಗ ಪೂರ್ತಿ ಮಣ್ಣು ಮೆತ್ತಿಸಿಕೊಂಡು ಬರೋದಲ್ಲದೇ, ಮನೆಯೊಳಗೆಲ್ಲ ಗಲೀಜ್ ಮಾಡಿಡ್ತಾನೆ ಅನ್ನೋದು ಆಕೆಯ ತಕರಾರು. ಮುಂಭಾಗದಲ್ಲಿ ತೂತುಗಳಿರುವ ಆ ಚಪ್ಪಲಿ ಹುಡುಗನಿಗೆ ಇಷ್ಟವಾಗಿದ್ದಕ್ಕು ಕಾರಣವಿತ್ತು. ಅವನ ಶಾಲೆ ಮತ್ತು ಗೆಳೆಯರ ಬಳಗದಲ್ಲಿ, ಆ ಡಿಸೈನ್‌ನ ಚಪ್ಪಲಿ ಹಾಕಿಕೊಂಡು ಓಡಾಡೋದು ಫ್ಯಾಷನ್ ಆಗಿದ್ದರಿಂದಲೇ ಅವನಿಗೆ ಆ ಚಪ್ಪಲಿ ಇಷ್ಟವಾಗಿದ್ದು. ಇವತ್ತಿಲ್ಲಿ ಹೇಳೋಕೆ ಹೊರಟಿರೋದು ಆ ತರದ ಚಪ್ಪಲಿಯ ಬ್ರ್ಯಾಂಡ್ ಒಂದು ಹುಟ್ಟಿ, ಬೆಳೆದ ಕತೆಯನ್ನು. ಆ ಹುಡುಗನ ಅಮ್ಮ ಹೇಳಿದಂತೆ ನೋಡೋದಿಕ್ಕೆ ಕೆಟ್ಟದಾಗಿದೆ ಎಂದು ಅನ್ನಿಸಿಕೊಂಡು, ಮುಂದೆ ಚಪ್ಪಲಿಯ ಬ್ರ್ಯಾಂಡ್ ಒಂದು ಫ್ಯಾಷನ್ ಐಕಾನ್ ಆಗಿ ಬೆಳೆದ ಕತೆಯನ್ನು. ಆ ಶೂ ಅಥವಾ ಚಪ್ಪಲಿಯ ಬ್ರ್ಯಾಂಡ್ ಹೆಸರು "ಕ್ರಾಕ್ಸ್" (Crocs). ಇವತ್ತು ಈ ಚಪ್ಪಲಿಯನ್ನೇ ಹೋಲುವ ಹಲವಾರು ಡೂಪ್ಲಿಕೇಟ್ ಬ್ರ್ಯಾಂಡುಗಳು ಮಾರುಕಟ್ಟೆಯಲ್ಲಿವೆ. ಕ್ರಾಕ್ಸ್ ಕಂಪೆನಿಯ ಪಾದರಕ್ಷೆಗಳನ್ನು ಕೊಳ್ಳಲು ದುಡ್ಡಿಲ್ಲದವರು, ಅದನ್ನೇ ಹೋಲುವ ಬೇರೆ ಕಂಪೆನಿಗಳ ಶೂಗಳನ್ನು ಕೊಂಡು ಖುಷಿ ಪಡುತ್ತಾರೆ. ನನ್ನ ಸೋದರಳಿಯ ಕೊಂಡು ಸಂಭ್ರಮದಿಂದ ಓಡಾಡುತ್ತಿದ್ದುದು ಕೂಡಾ ಅಂತದ್ದೇ ಒಂದು ಡೂಪ್ಲಿಕೇಟ್ ಶೂ ಹಾಕಿಕೊಂಡೇ ಆಗಿತ್ತು. ಅದೇನೇ ಆದರೂ, “Comfortable is fashion” ಎಂಬ ಹೊಸ ಫ್ಯಾಷನ್ ಸ್ಟೇಟ್‌ಮೆಂಟ್‌ಗೆ ನಾಂದಿ ಹಾಡಿದ ಕ್ರಾಕ್ಸ್ ಅನ್ನೋ ಬ್ರ್ಯಾಂಡ್ ಹುಟ್ಟುಹಾಕಿದ ಕ್ರೇಜ್ ಅಷ್ಟಿಷ್ಟೇನಲ್ಲ.
ಬೋಟ್ ಸವಾರಿಯಲ್ಲಿ ಹೊಳೆದ ಯೋಜನೆ
ಕ್ರಾಕ್ಸ್ ಬ್ರ್ಯಾಂಡ್ ಮಾರುಕಟ್ಟೆಗೆ ಪ್ರವೇಶಿಸಿದ್ದು 2002 ರಲ್ಲಿ. Crocs, Inc. ಹೆಸರಿನಲ್ಲಿ ರಿಜಿಸ್ಟರ್ ಆಗಿರುವ ಈ ಕಂಪೆನಿಯು ಅಮೇರಿಕಾದ ಕೊಲೊರಾಡೋದ, ಬ್ರೂಮ್‌ಫೀಲ್ಡ್ ಮೂಲದ್ದಾಗಿದೆ. ಇದು ಮೂವರು ಗೆಳೆಯರು ಸೇರಿ ಹುಟ್ಟುಹಾಕಿದ ಕಂಪೆನಿ. ಒಂದು ದಿನ ಗೆಳೆಯರಾದ ಸ್ಕಾಟ್ ಸೀಮನ್ಸ್, ಜಾರ್ಜ್ ಬಾಡೆಕ್ಕರ್ ಮತ್ತು ಲಿಂಡನ್ ಹ್ಯಾನ್ಸನ್ ಸೇರಿ ಬೋಟಿಂಗ್ ಹೋಗುತ್ತಾರೆ. ಸ್ಕಾಟ್ ಸೀಮನ್ಸ್ ಕೆನೆಡಿಯನ್ ಕಂಪೆನಿಯಾದ 'Foam creation' ಗೋಸ್ಕರ ನಿರ್ಮಿಸಿದ ಕ್ಲಾಗ್ (clog) ಶೂ ಒಂದನ್ನು ಗೆಳೆಯರಿಗೆ ತೋರಿಸುತ್ತಾನೆ. ಆದರೆ ಆ ಶೂ ಒಂದಿಷ್ಟೂ ಆಕರ್ಷಣೀಯವಾಗಿಲ್ಲ ಎಂಬುದಾಗಿತ್ತು ಅವನ ಗೆಳೆಯರ ಅಭಿಪ್ರಾಯ. ಆದರೆ ಅತ್ಯಂತ ಹಗುರವಾಗಿದ್ದ ಅದನ್ನು ಹಾಕಿ ನೋಡಿದಾಗ, ಗೆಳೆಯರ ಅಭಿಪ್ರಾಯ ಬದಲಾಗುತ್ತದೆ. ಈ ಶೂ ಡಿಸೈನನ್ನು ಸ್ವಲ್ಪ ಬದಲಾಯಿಸಿ, ಅದರ ಹಿಂದಕ್ಕೊಂದು ಸ್ಟ್ರಾಪ್ ಹಾಕಿ ಹೊಸ ನಮೂನೆಯ ಕ್ಲಾಗ್ ಶೂ ತಯಾರಿಸುವ ಬಯಕೆಯಿತ್ತು ಸ್ಕಾಟ್ ಸೀಮನ್ಸಿಗೆ. ಹೀಗೇ ಇದರ ಬಗ್ಗೆ ಚರ್ಚಿಸುತ್ತಾ, ಆ ಬೋಟ್ ಸವಾರಿ ಮುಗಿಸುವ ಹೊತ್ತಿಗೆ 'ಕ್ರಾಕ್ಸ್' ಎಂಬ ಶೂ ತಯಾರಿಸುವ ಯೋಜನೆಗೆ ಮೂವರು ಗೆಳೆಯರು ಸಿದ್ಧರಾಗುತ್ತಾರೆ.
ಮೂವರು ಗೆಳೆಯರಲ್ಲಿ 'ಕ್ರಾಕ್ಸ್'ನ ರೂಪುರೇಷೆಗಳನ್ನು ತಯಾರಿಸಿದಾತ ಲಿಂಡನ್. ಸ್ಕಾಟ್ ನಿರ್ಮಾಣದ ಜವಾಬ್ದಾರಿಗಳನ್ನು ವಹಿಸಿಕೊಂಡ. ಜಾರ್ಜ್ ಕಂಪೆನಿಗೆ ಬೇಕಾದ ಆರ್ಥಿಕ ವ್ಯವಹಾರಗಳನ್ನು ನೋಡಿಕೊಂಡ. ಮೊದಲಿಗೆ ಆರಾಮದಾಯಕವಾಗಿ ಹಾಕಲು ಸಾಧ್ಯವಾಗುವ, ಬೋಟಿಂಗ್ ಮಾಡುವಾಗ ಉಪಯೋಗಿಸಬಹುದಾದ ಶೂ ತಯಾರಿಸುತ್ತಾರೆ. ಆದರೆ, ಮುಂದಕ್ಕೆ ನೀರು ಮತ್ತು ನೆಲ ಎರಡರಲ್ಲೂ ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸಬಹುದಾದ ಶೂ ಇದಾಗಿರುವುದು ಇವರ ಗಮನಕ್ಕೆ ಬರುತ್ತದೆ. ನೋಡಲು ಈ ಶೂ ಮೊಸಳೆಯ ತರ ಇರುವುದು ಕೂಡಾ ಕಾರಣವಾಗಿ ಮತ್ತು ಇದರ ಉಪಯೋಗಕ್ಕು ಅನುಸಾರವಾಗಿ ಉಭಯಚರ ಜೀವಿಯಾದ ಮೊಸಳೆಯ ಇಂಗ್ಲೀಷ್ ಹೆಸರಾದ ಕ್ರಾಕಡೈಲ್ ನಿಂದ ಕ್ರಾಕ್ಸ್ ಎಂಬ ಹೆಸರನ್ನು ಈ ಚಪ್ಪಲಿಗೆ ಇಡಲಾಗುತ್ತದೆ. ಹೀಗೆ ಈ ಗೆಳೆಯರ ನೇತ್ರತ್ವದಲ್ಲಿ ಕ್ರಾಕ್ಸ್ ಬ್ರ್ಯಾಂಡ್ ಮಾರುಕಟ್ಟೆ ಪ್ರವೇಶಿಸುತ್ತದೆ.
ಅಲ್ಲಿಂದಾಚೆಗೂ ಕ್ರಾಕ್ಸ್ ಚಪ್ಪಲಿಗಳ ಪಯಣ ಸುಲಭದ್ದಾಗಿರಲಿಲ್ಲ. 'One of the worst invention of Mankind' - ಇದು ಟೈಮ್ಸ್ ಮ್ಯಾಗಜೀನ್ ಕ್ರಾಕ್ಸ್ ಶೂ ಬಗ್ಗೆ ಕೊಟ್ಟ ಪ್ರತಿಕ್ರಿಯೆಯಾಗಿತ್ತು. ನೋಡಲು ಕೆಟ್ಟದಾಗಿರುವ ಈ ಚಪ್ಪಲಿ ಹಾಕಿಕೊಂಡು ಜನ ಹೇಗೆ ಓಡಾಡ್ತಾರೆ? ಇದನ್ನು ಯಾರಾದರು ಖರೀದಿಸುತ್ತಾರೆಯೇ? - ಇವೆಲ್ಲಾ ಕ್ರಾಕ್ಸ್ ಅನ್ನೋ ಈ ಶೂ ಮಾರುಕಟ್ಟೆಗೆ ಬಂದ ಮೊದ ಮೊದಲಿಗೆ ಆಡಿಕೊಂಡ ಮಾತುಗಳಾಗಿದ್ವು. ಜನ ಈ ಚಪ್ಪಲಿ ಖರೀದಿಸಲು ಎಷ್ಟು ಹೇಸಿಗೆ ಪಡುತ್ತಿದ್ದರು ಎಂಬುದಕ್ಕೆ ಮೇಲಿನ ಮಾತುಗಳೆಲ್ಲಾ ಸಾಕ್ಷಿಯಾಗಿದ್ದವು. ಅತೀ ಕೆಟ್ಟ ಶೂ ಎಂಬಲ್ಲಿಂದ, ಅತ್ಯಂತ ಆರಾಮದಾಯಕ ಮತ್ತು ಫ್ಯಾಷನೇಬಲ್ ಶೂ ಆಗಿ ಬದಲಾದ ಕ್ರಾಕ್ಸ್ ಶೂಗಳ ಬೆಳವಣಿಗೆಯ ಕಥೆಯು ಕೂಡಾ ಏರುಪೇರಿನದ್ದೇ ಆಗಿದೆ.
ಫ್ಲೋರಿಡಾ ಬೋಟ್ ಷೊ
ತಮ್ಮ ಊರಾದ ಕೊಲಾರಾಡೋದಲ್ಲಿ ಮೊದಲ ಅಂಗಡಿಯನ್ನು ತೆರೆಯುತ್ತಾರೆ. ಬಹುತೇಕರಿಂದ ಕೆಟ್ಟ ಡಿಸೈನ್ ಎಂದು ತೆಗಳಿಕೆಗೊಳಗಾದ ಕ್ರಾಕ್ಸ್ ಪಾದರಕ್ಷೆಗಳನ್ನು ಮಾರಾಟ ಮಾಡುವುದು ಸುಲಭವಾಗಿರಲಿಲ್ಲ. ಇದರ ಮಾರ್ಕೆಟಿಂಗ್ ಮತ್ತು ಮಾರಾಟ ಹೇಗೆ ಮಾಡುವುದೆಂದು ಆ ಗೆಳೆಯರು ಅಲೋಚಿಸುತ್ತಿರುತ್ತಾರೆ. ಕೊನೆಗೆ 2002 ರಲ್ಲಿ ಫ್ಲೋರಿಡಾದಲ್ಲಿ ನಡೆದ ಬೋಟ್ ಷೋ ಒಂದರಲ್ಲಿ ಕ್ರಾಕ್ಸ್ ಪಾದರಕ್ಷೆಗಳನ್ನು ಜನರಿಗೆ ಪರಿಚಯಿಸುವ ಮೂಲಕ ಮಾರ್ಕೆಟಿಂಗ್ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಾರೆ. ಆದರೆ ಅಲ್ಲೂ ನೋಡೋದಿಕ್ಕೆ ಚೆನ್ನಾಗಿಲ್ಲವೆಂದು, ಕ್ರಾಕ್ಸ್ ಕಂಪೆನಿಯ ಈ ಚಪ್ಪಲಿಗೆ ಜನರಿಂದ ನೀರಸ ಪ್ರತಿಕ್ರಿಯೆಯಷ್ಟೇ ಸಿಗುತ್ತದೆ. ಆದರೆ ತಮ್ಮ ಉತ್ಪನ್ನದ ಮೇಲೆ ಅಪಾರ ನಂಬಿಕೆಯಿದ್ದ ಈ ಮೂವರು ತಮ್ಮ ಪರಿಶ್ರಮ ಮುಂದುವರಿಸಿದರು. ಬೇಡ ಎಂದು ಹೇಳಿ ನಿರಾಕರಿಸಿದ ಜನರಿಗೆ, ನೀವಿದನ್ನೊಮ್ಮೆ ಧರಿಸಿ ನೋಡಿ ಆಮೇಲೆ ತೀರ್ಮಾನಿಸಿ ಎಂದು ಮನವೊಲಿಸಿದರು. ಕ್ರಾಕ್ಸ್ ಶೂಗಳ ಆರಾಮದಾಯಕತೆ ಮತ್ತು ಬಾಳಿಕೆ(comfortability & Durability) ಜನರು ಇದನ್ನು ಕೊಳ್ಳುವಂತೆ ಪ್ರೇರೇಪಿಸಿತು. ಹಾಗೇ ಆ ಬೋಟ್ ಷೋದಲ್ಲಿ 200ಕ್ಕು ಅಧಿಕ ಕ್ರಾಕ್ಸ್ ಚಪ್ಪಲಿಗಳು ಮಾರಾಟವಾದುವು. ಇದು ಕಂಪೆನಿಗೆ ದಕ್ಕಿದ ಮೊದಲ ವಿಜಯವಾಗಿತ್ತು.
ಮುಂದೆ ಅಡುಗೆ ಮನೆಯಿಂದ ಹಿಡಿದು ಆಸ್ಪತ್ರೆಯವರೆಗು ಉಪಯೋಗವಾಗುವಂತಹ ಕ್ರಾಕ್ಸ್ ಬ್ರ್ಯಾಂಡಿನ ಶೂಗಳು ತಯಾರಾಗಿ, ಮಾರಾಟವಾಗತೊಡಗಿದವು. ಇಷ್ಟೆಲ್ಲಾ ಆಗುವಾಗಲು ಅವತ್ತಿನ ಫ್ಯಾಷನ್ ಮಾರುಕಟ್ಟೆಯಲ್ಲಿ ಕ್ರಾಕ್ಸ್ ಒಂದು ಪರಾಜಯವಾಗುತ್ತದೆ ಎಂದೇ ಜನ ಭಾವಿಸಿದ್ದರು. ಆದರೆ ಜನರ ಅನಿಸಿಕೆಗಳನ್ನೆಲ್ಲ ಅಡಿಮೇಲಾಗಿಸಿದ ಕ್ರಾಕ್ಸ್ 2003 ರಲ್ಲಿ 76,000 ದಷ್ಟು ಉತ್ಪನ್ನಗಳನ್ನು ಮಾರಾಟ ಮಾಡಿತು. ಈ ನಡುವೆ ‘Foam creation incorporation’ ಅನ್ನೋ ಶೂ ತಯಾರಿಕಾ ಸಂಸ್ಥೆಯನ್ನು ಕ್ರಾಕ್ಸ್ ತನ್ನದಾಗಿಸಿಕೊಂಡಿತು. ಈ ಮೂಲಕ ಶೂ ತಯಾರಿಸಲು ಉಪಯೋಗಿಸುವ ಕ್ರಾಸ್ಲೈಟ್(Croslite) ಎಂಬ ವಸ್ತುವನ್ನು (Material) ಉಪಯೋಗಿಸುವ ಅನುಮತಿ ಕಂಪೆನಿಗೆ ದಕ್ಕಿತು. ಪ್ಲಾಸ್ಟಿಕ್ ಮತ್ತು ರಬ್ಬರ್ ಉಪಯೋಗಿಸಿದರೂ ಸಾಧ್ಯವಾಗದಂತ ಆರಾಮದಾಯಕತೆ ಮತ್ತು ಬಾಳಿಕೆ ಕ್ರಾಸ್ಲೈಟ್ ಉಪಯೋಗಿಸುವುದರಿಂದ ಸಿಗುತ್ತಿತ್ತು. ಅದು ಕ್ರಾಕ್ಸ್ ಶೂಗಳ ಗುಣಮಟ್ಟಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿತು. ಹೀಗೆ, ಜನರ ನೆಗಟಿವ್ ಪ್ರಚಾರದ ನಡುವೆಯು ಕ್ರಾಕ್ಸ್ ಪಾದರಕ್ಷೆಗಳು ಹೆಚ್ಚಿನ ಮಾರಾಟವಾಗಲು ಶುರುವಾದವು.
ಆರ್ಥಿಕ ಬಿಕ್ಕಟ್ಟಿನ ಹೊಡೆತ
2006 ರಷ್ಟಾಗುವರಲ್ಲಿ ಆ ಮೂವರು ಸ್ನೇಹಿತರಲ್ಲಿ ಒಬ್ಬನಾದ ಜಾರ್ಜ್ ನಲ್ಲಿ ಕೆಲವು ಕ್ರಿಮಿನಲ್ ಸ್ವಭಾವಗಳು ಪ್ರಕಟವಾಗತೊಡಗಿದವು. ಆತನ ಮೇಲೆ ಕೆಲವು ಮೊಕದ್ದಮೆಗಳು ದಾಖಲಾದವು. ಇವೆಲ್ಲವುಗಳಿಂದಾಗಿ ಜಾರ್ಜ್ ನನ್ನು ಕಂಪೆನಿಯ ಸಿಇಓ ಸ್ಥಾನದಿಂದ ಕೆಳಗಿಳಿಸಲಾಯಿತು. ಆ ಸ್ಥಾನಕ್ಕೆ ಲಿಂಡನ್ ಸ್ನೇಹಿತನಾದ 'ರಾನ್' ನನ್ನು ತರಲಾಯಿತು. ಮುಂದೆ ಕ್ರಾಕ್ಸ್ ನ ಮಾರುಕಟ್ಟೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿತು. ಇನ್ನೂರಕ್ಕಿಂತಲೂ ಹೆಚ್ಚಿನ ಡಿಸೈನ್ಗಳು ಮಾರುಕಟ್ಟೆಗೆ ಬಂದವು. ಇದಲ್ಲದೇ 'ಡಿಸ್ನಿ' ಮತ್ತು 'ಎನ್ ಬಿ ಎ' ಯಂತಹ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಇನ್ನಷ್ಟು ಬೆಳೆಯಿತು. ಕ್ರಾಕ್ಸ್ ಅನ್ನೋ ಚಪ್ಪಲಿ ಕಂಪೆನಿ ಬೆಳೆಯುತ್ತಿರುವ ಈ ಹೊತ್ತಿನಲ್ಲೇ 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಳ್ಳುತ್ತದೆ. ಎಲ್ಲಾ ಕಂಪೆನಿಗಳಂತೆಯೇ ಕ್ರಾಕ್ಸ್ ಕೂಡಾ ಆರ್ಥಿಕ ಬಿಕ್ಕಟ್ಟಿನ ಹೊಡೆತಕ್ಕೆ ತತ್ತರಿಸುತ್ತದೆ. ಕ್ರಾಕ್ಸ್ ತನ್ನ ಕಂಪೆನಿಯ ಬಹಳಷ್ಟು ಕೆಲಸಗಾರರನ್ನು ಕೆಲಸದಿಂದ ತೆಗೆದುಹಾಕುತ್ತದೆ. ತನ್ನ ಹಲವಾರು ಶಾಖೆಗಳನ್ನು ಮುಚ್ಚಬೇಕಾಗಿ ಬರುತ್ತದೆ. ಈ ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬರಲು ಕಂಪೆನಿ ಹಲವು ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತದೆ. ಸೆಲೆಬ್ರಿಟಿಗಳ ಮುಖಾಂತರ ತನ್ನ ಬ್ರ್ಯಾಂಡ್ ಅನ್ನು ಮತ್ತೆ ಜನರ ಮನಸ್ಸಿನಲ್ಲಿ ಸ್ಥಾಪಿಸಲು ಪ್ರಯತ್ನಿಸುತ್ತದೆ. ರಾಜಕುಮಾರ ಜಾರ್ಜ್ ಮತ್ತು ಮಿಶಲ್ ಒಬಾಮನಂತವರು ಕ್ರಾಕ್ಸ್ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಕಂಪೆನಿಯ ಮಾರುಕಟ್ಟೆಯನ್ನು ಮತ್ತೆ ಬಲಪಡಿಸುತ್ತದೆ. ಪಾಪ್ ಜಗತ್ತಿನ ತಾರೆ 'ಜಸ್ಟಿನ್ ಬೈಬರ್' ಜೊತೆ ಮತ್ತು 'ಕೆ ಎಫ್ ಸಿ' ಯಂತಹ ಬಲಾಢ್ಯ ಕಂಪೆನಿಗಳ ಜೊತೆ ಕ್ರಾಕ್ಸ್ ಮಾರ್ಕೆಟಿಂಗ್ ಒಪ್ಪಂದಗಳನ್ನು ಮಾಡಿಕೊಳ್ಳುತ್ತದೆ. ಹೀಗೆ ಕ್ರಾಕ್ಸ್ ತನ್ನ ಇಮೇಜನ್ನು ಇನ್ನಷ್ಟು ವೃದ್ಧಿಸಿಕೊಂಡು, ಇನ್ನಷ್ಟು ಡಿಸೈನ್ಗಳೊಂದಿಗೆ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುತ್ತದೆ. ಹಿಂದಿನದ್ದಕ್ಕಿಂತಲೂ ಹೆಚ್ಚು ಫೇಮಸ್ ಆಗಿ, ಬಿಲಿಯನ್ ಡಾಲರ್ ಕಂಪೆನಿಯಾಗಿ ತನ್ನ ಪಾರುಪತ್ಯವನ್ನು ಸ್ಥಾಪಿಸಿಕೊಳ್ಳುತ್ತದೆ.
ಕಂಫರ್ಟಬಲ್ ಈಸ್ ಸ್ಟೈಲ್
ಇಂದು ಕ್ರಾಕ್ಸ್ ಚಪ್ಪಲಿಗಳ ಜಗತ್ತಿನ ಫ್ಯಾಷನ್ ಐಕಾನ್. ಬಹುಜನರ ಅಚ್ಚುಮೆಚ್ಚಿನ ಬ್ರ್ಯಾಂಡ್. ಹೊಸ ಹೊಸ ಡಿಸೈನ್‌ಗಳಲ್ಲಿ ಮಾರುಕಟ್ಟೆಗೆ ಬರುವ ಕ್ರಾಕ್ಸ್ ಶೂಗಳ ಹಲವಾರು ಮಾದರಿಗಳನ್ನು ಸಂಗ್ರಹಿಸಿಡುವ ಹವ್ಯಾಸವಿರುವವರು ಇದ್ದಾರೆ. ಕ್ರಾಕ್ಸ್ ಅನ್ನೋ ಬ್ರಾಂಡನ್ನು ತಮ್ಮ ಬದುಕಿನ ಭಾಗವಾಗಿಸಿ, ಹೆಮ್ಮೆಯಿಂದ ಅದನ್ನು ಪ್ರದರ್ಶಿಸುವ ಯುವ ಜನತೆಯಿದೆ. ತಮ್ಮ ಲ್ಯಾಪ್ಟಾಪ್, ಮೊಬೈಲ್ ಮತ್ತು ಕೋಣೆಗಳನ್ನು ಕ್ರಾಕ್ಸ್ ಸ್ಟಿಕ್ಕರುಗಳಿಂದ ತುಂಬಿಸಿಡುವ ಯುವಕರೂ ಕಡಿಮೆಯೇನಿಲ್ಲ. ಕ್ರಾಕ್ಸ್ ಅನ್ನೋ ಚಪ್ಪಲಿ ಧರಿಸಿ ಜನ ಸಮೂಹ ಇಂದು ಜಗತ್ತಿನಾದ್ಯಂತ ಮಿಂಚುತ್ತಿದೆ. 2006 ರಲ್ಲಿ ಜಿಬಿಟ್ಸ್(Jibbitz) ಅನ್ನೋ ಫ್ಯಾನ್ಸಿ ವಸ್ತುಗಳನ್ನು ಉತ್ಪಾದಿಸುವ ಕಂಪೆನಿಯನ್ನು ಕ್ರಾಕ್ಸ್ ಖರೀದಿಸಿತ್ತು. ಈ ಫ್ಯಾನ್ಸಿ ವಸ್ತುಗಳನ್ನು ಕ್ರಾಕ್ಸ್ ಚಪ್ಪಲಿಗಳ ತೂತುಗಳು ಹಾಗು ಇನ್ನಿತರ ಭಾಗಗಳಲ್ಲಿ ಅಂಟಿಸಿಕೊಂಡು ಓಡಾಡುತ್ತಾರೆ ಮಂದಿ. ಕೋವಿಡ್ ಬಂದಾಗಲಂತು 'Comfort is style' ಅನ್ನುವ ಜನರ ನಡವಳಿಕೆ ಕ್ರಾಕ್ಸ್ ಕಂಪೆನಿಗೆ ಇನ್ನಷ್ಟು ಲಾಭ ತಂದು ಕೊಡುವುದರೊಂದಿಗೆ ಕ್ರಾಕ್ಸ್ ಇಮೇಜ್ ಮತ್ತಷ್ಟು ಎತ್ತರಕ್ಕೇರಿತು.
ಇವತ್ತು ನಾವೆಲ್ಲಾ, ಬದುಕಲು ಅಗತ್ಯವಾಗಿ ಬೇಕಾದುದುದಕ್ಕಿಂತಲೂ ಹೆಚ್ಚಿನ ಖರ್ಚು ಮಾಡುತ್ತಾ, ಕೊಳ್ಳುಬಾಕ ಸಂಸ್ಕೃತಿಯ ಮೋಡಿಗೊಳಗಾಗುತ್ತಿದ್ದೇವೆ. ಮುಖದ, ದೇಹದ ಸೌಂದರ್ಯವನ್ನು ಮಾನದಂಡವಾಗಿಟ್ಟುಕೊಂಡು ಮನುಷ್ಯರನ್ನು ಹೊಗಳುವ, ಹಿಯ್ಯಾಳಿಸುವ ಕೆಲಸ ಮಾಡುತ್ತದೆ ಸಮಾಜ. ದಪ್ಪ, ಸಪೂರ ದೇಹಗಳೆಂದು ವಿಭಾಗಿಸಿ ಬಟ್ಟೆಗಳ ಸ್ಟೈಲ್ ಅನ್ನು ನಿರ್ಧರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕ್ರಾಕ್ಸ್ ಬ್ರ್ಯಾಂಡಿನ ಪಾದರಕ್ಷೆಗಳು ನಮ್ಮ ಕಂಫರ್ಟಿನ ಆಧಾರದಲ್ಲಿ ಯಶಸ್ವಿಯಾಗಿರುವುದು ಒಳ್ಳೆಯ ವಿಷಯವೇ ಆಗಿದೆ.
Writer, Poet & Automotive Enthusiast