ಪಕ್ಷಿ ಸಾಮ್ರಾಜ್ಯದಲ್ಲಿ ಪ್ಯಾಸೆರಿಫಾರಂಸ್ ಎಂಬ ವರ್ಗ ಅತ್ಯಂತ ದೊಡ್ಡ ವರ್ಗ. ಈ ವರ್ಗವು ಇಡೀ ಪಕ್ಷಿಸಂಕುಲದ ಅರ್ಧಭಾಗದಷ್ಟು ಪ್ರಭೇದಗಳನ್ನೊಳಗೊಂಡ ಅತಿದೊಡ್ಡ ವರ್ಗ. ಇದರಲ್ಲಿರುವ ಎಷ್ಟೋ ಪ್ರಭೇದಗಳು ಇನ್ನೂ ಜನಸಾಮಾನ್ಯರಿಗೆ ಅಪರಿಚಿತವಾಗಿಯೇ ಉಳಿದಿವೆ. ಕಣ್ಣುಕೋರೈಸುವಂಥ ವರ್ಣವೈವಿಧ್ಯದ ಅನೇಕ ಪ್ರಭೇದಗಳು ಇನ್ನೂ ಬೃಹತ್ ಮಳೆಕಾಡುಗಳಲ್ಲಿ ಅಜ್ಞಾತವಾಗಿ ವಾಸವಾಗಿವೆ. ನೋಡಿದರೆ "ಇಂಥ ಹಕ್ಕಿಗಳೂ ಅಸ್ತಿತ್ವದಲ್ಲಿವೆಯೇ?" ಎಂದು ಬೆರಗು ಹುಟ್ಟಿಸುವಂಥ ಅದ್ಭುತ ಹಕ್ಕಿಗಳು ಕೋಟಿಂಗಗಳು. ಹೆಸರು ಸ್ವಲ್ಪ ವಿಚಿತ್ರವಾಗಿದೆ ಎನ್ನಿಸಬಹುದು. ಆದರೆ ಈ ಹಕ್ಕಿಗಳನ್ನೊಮ್ಮೆ ನೋಡುತ್ತಿದ್ದರೆ ಅವುಗಳ ಹೆಸರಷ್ಟೇ ಏನು, ಪ್ರಪಂಚವೇ ಮರೆತುಹೋಗುತ್ತದೆ, ಅಂಥ ಚೆಲುವಾದ ಹಕ್ಕಿಗಳಿವು.
ಕೋಟಿಂಗ ಎಂಬುದು ಒಂದು ಇಡೀ ಕುಟುಂಬದ ಹಕ್ಕಿಗಳಿಗಿರುವ ಸಾಮಾನ್ಯವಾದ ಹೆಸರು. ಕೋಟಿಂಗಿಡೇ ಎಂಬ ಈ ಕುಟುಂಬದಲ್ಲಿ ಎಷ್ಟು ಪ್ರಭೇದಗಳಿವೆ ಎಂಬುದು ನಮಗೆ ನಿಖರವಾಗಿ ತಿಳಿದುಬಂದಿಲ್ಲ. ಸುಮಾರು ತೊಂಬತ್ತು ಜಾತಿಗಳಿರಬಹುದೆಂದು ಒಂದು ಅಂದಾಜು. ಇವುಗಳ ವಾಸಸ್ಥಾನ ಅಮೆಜೋನಿಯಾದ ದಟ್ಟಡವಿಗಳು. ಈ ಅಂಶವೇ ಇವುಗಳ ಬಗೆಗಿನ ಸಂಶೋಧನೆಗಳಿಗೆ ಅಡ್ಡಿಯಾದದ್ದು. ನಮಗೆ ಅತ್ಯಂತ ಕಡಿಮೆ ತಿಳಿದಿರುವ ಪಕ್ಷಿ ಕುಟುಂಬಗಳ ಪೈಕಿ ಕೋಟಿಂಗಗಳ ಕುಟುಂಬವೂ ಒಂದು. ಆದರೆ ಅವುಗಳ ಸೌಂದರ್ಯ ಮಾತ್ರ ಮಾತುಗಳಲ್ಲಿ ಹೇಳಲಾಗದಂಥದ್ದು. ಅದನ್ನು ನೋಡಿಯೇ ಅನುಭವಿಸಬೇಕು.
ಅಮೆಜೋನಿಯನ್ ಅಂಬ್ರೆಲ್ಲಾ ಬರ್ಡ್ ಎಂಬ ಹಕ್ಕಿ ಕೋಟಿಂಗಗಳ ಕುಟುಂಬದಲ್ಲೇ ಅತ್ಯಂತ ದೊಡ್ಡ ಹಕ್ಕಿ. ಇದು 50-55 ಸೆಂಟಿಮೀಟರ್ ಉದ್ದವಿರುತ್ತದೆ. ಗಂಡುಗಳು ಹೆಣ್ಣುಗಳಿಗಿಂತ ಸ್ವಲ್ಪ ದೊಡ್ಡದಿರುತ್ತವೆ. ಇವಕ್ಕೆ ಈ ಹೆಸರು ಬರಲು ಕಾರಣ ತಲೆಯ ಮೇಲಿನ ಜುಟ್ಟು. ಹಿಂದಿನಿಂದ ಮುಂದಕ್ಕೆ ಬಾಗಿದ ಈ ಜುಟ್ಟು ದೂರದಿಂದ ನೋಡಿದಾಗ ಛತ್ರಿ ಹಿಡಿದು ನಿಂತ ಮನುಷ್ಯನಂತೆಯೇ ಭಾಸವಾಗುತ್ತದೆ. ಆದ್ದರಿಂದಲೇ ಇದಕ್ಕೆ ಅಂಬ್ರೆಲ್ಲಾಬರ್ಡ್ ಎಂಬ ಹೆಸರು ಬಂದಿದೆ. ಜೊತೆಗೆ ಇದರ ಕುತ್ತಿಗೆಯಿಂದ ಕ್ಯಾಸೋವರಿಗಳಿಗ ಇರುವಂತೆ ಉದ್ದನೆಯ ಚೀಲದಂಥ ರಚನೆ ಇಳಿಬಿದ್ದಿರುತ್ತದೆ. ಇದರಿಂದ ಈ ಹಕ್ಕಿಗಳಿಗೆ ಏನು ಪ್ರಯೋಜನ ಎಂಬುದು ಇದುವರೆಗೂ ದೃಢಪಟ್ಟಿಲ್ಲ. ಬಹುಶಃ ಪ್ರಣಯಕಾಲದಲ್ಲಿ ಹೆಣ್ಣನ್ನು ಆಕರ್ಷಿಸಲು ಇವು ಗಂಡಿನ ಅಸ್ತ್ರವಾಗಿರಲೂಬಹುದು. ಏಕೆಂದರೆ ಈ ರಚನೆ ಗಂಡುಗಳಿಗೆ ಮಾತ್ರ ಇರುತ್ತದೆ. ಒಟ್ಟಾರೆ ಈ ಹಕ್ಕಿಯ ಮೈಬಣ್ಣವೆಲ್ಲ ಮಿರಮಿರನೆ ಮಿರುಗುವ ಕಪ್ಪುಬಣ್ಣ.
ಅಂಬ್ರೆಲ್ಲಾಬರ್ಡ್ ಹಕ್ಕಿಗಳಲ್ಲೇ ಮೂರು ಪ್ರಭೇದಗಳಿವೆ. ಇನ್ನೆರಡು ಪ್ರಭೇದಗಳು ಲಾಂಗ್ ವ್ಯಾಟಲ್ಡ್ ಅಂಬ್ರೆಲ್ಲಾಬರ್ಡ್ ಮತ್ತು ಬೇರ್ ನೆಕ್ಡ್ ಅಂಬ್ರೆಲ್ಲಾಬರ್ಡ್. ಇದಕ್ಕೆ ಕತ್ತಿನ ಕೆಳಗೆ ಇರುವ ಚೀಲ ಉಳಿದೆರಡು ಪ್ರಭೇದಗಳಿಗಿಂತ ಉದ್ದವಾಗಿರುವುದರಿಂದ ಈ ಹೆಸರು ಬಂದಿದೆ. ಹೆಣ್ಣುಗಳು ಗಂಡುಗಳಿಗಿಂತ ಚಿಕ್ಕದಾಗಿದ್ದು, ಅವುಗಳ ಜುಟ್ಟು ಮತ್ತು ಕತ್ತಿನ ಕೆಳಗಿನ ಚೀಲ ಸಹ ಚಿಕ್ಕದಾಗಿರುತ್ತದೆ. ಬಣ್ಣ ಮಾತ್ರ ಎರಡರದ್ದೂ ಕಡುಗಪ್ಪು. ಹಾಗೆಂದ ಮಾತ್ರಕ್ಕೆ ಇವೇನೂ ಅನಾಕರ್ಷಕ ಹಕ್ಕಿಗಳೆಂದು ತಿಳಿಯಬೇಡಿ. ಕಪ್ಪುಬಣ್ಣವೂ ಬಿಸಿಲು ಬಿದ್ದಾಗ ಮಿರಮಿರನೆ ಹೊಳೆಯುತ್ತದೆ. ಏಕೆಂದರೆ ಅವುಗಳ ಗರಿಗಳು ಕೇವಲ ಸಸ್ತನಿ ಪ್ರಾಣಿಗಳಂಥ ಮೈಬಣ್ಣ ಹೊಂದಿರುವುದಿಲ್ಲ. ಅದೊಂದು ಆಪ್ಟಿಕಲ್ ಎಫೆಕ್ಟ್ ಅಥವಾ ದ್ಯುತಿ ಪರಿಣಾಮ. ಬೇರೆಬೇರೆ ಕೋನಗಳಿಂದ ಬಿಸಿಲು ಬಿದ್ದಾಗ ಕನ್ನಡಿಯಂತೆ ಹೊಳೆಯುತ್ತದೆ.
ಬೇರ್ ನೆಕ್ಡ್ ಅಂಬ್ರೆಲ್ಲಾಬರ್ಡ್ ಎಂಬ ಹಕ್ಕಿ ಹೆಸರುವಾಸಿಯಾಗಿರುವುದು ಇದರ ಕಡುಗೆಂಪು ಬಣ್ಣದ ಕತ್ತಿನಿಂದ. ಪನಾಮಾ ಮತ್ತು ಕೋಸ್ಟಾರಿಕಾ ದೇಶಗಳಲ್ಲಿ ಮುಖ್ಯವಾಗಿ ಕಾಣಸಿಗುವ ಈ ಹಕ್ಕಿಗಳ ಕತ್ತಿನ ಭಾಗದಲ್ಲಿ ಗರಿಗಳಿಲ್ಲ. ಅದರ ಬದಲಾಗಿ ಬೋಳು ಚರ್ಮವಿದೆ. ನೌಕಾಪಕ್ಷಿ (ಫ್ರಿಗೇಟ್ ಬರ್ಡ್) ಗೆ ಇರುವಂಥದ್ದೇ ರಚನೆಯಿದು. ಇದೂ ಸಹ ಹೆಣ್ಣನ್ನು ಆಕರ್ಷಿಸಲು ಗಂಡುಗಳ ಒಂದು ಅಸ್ತ್ರ. ಯಾವ ಗಂಡಿನ ಕತ್ತಿನ ಕೆಳಗಿನ ಚರ್ಮ ಹೆಚ್ಚು ಕೆಂಪಾಗಿರುತ್ತದೋ ಅದರತ್ತ ಹೆಣ್ಣು ಆಕರ್ಷಿತಗೊಳ್ಳುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಇದು ಒಂದು ರೀತಿಯಲ್ಲಿ ಈ ಹಕ್ಕಿಗಳ ನಡುವೆ ಸಾಮಾಜಿಕ ಏಣಿ ಎಂದೂ ಕರೆಯಬಹುದು. ಹೆಚ್ಚು ಕೆಂಪಾದ ಕತ್ತನ್ನು ಹೊಂದಿರುವ ಹಕ್ಕಿಗಳು ಸಾಮಾಜಿಕವಾಗಿ ಮೇಲ್ಮಟ್ಟದಲ್ಲಿರುತ್ತವೆ ಎಂದು ಅಂದಾಜಿಸಬಹುದು.
ಪರ್ಪಲ್ ಥ್ರೋಟೆಡ್ ಫ್ರೂಟ್ ಕ್ರೋ ಎಂಬ ಇನ್ನೊಂದು ಹಕ್ಕಿ ಕೂಡ ಕೋಟಿಂಗಗಳ ಕುಟುಂಬದಲ್ಲಿ ಪ್ರಸಿದ್ಧವಾದ ಹಕ್ಕಿ. ಇದರ ಹೆಸರಿನಲ್ಲಿ ಕಾಗೆ ಇದ್ದರೂ ಇದೇನೂ ಕಾಗೆಗಳ ಸಂಬಂಧಿಯಲ್ಲ. ಆದರೆ ಕತ್ತಿನ ಕೆಳಗಿರುವ ಕಣ್ಣು ಕೋರೈಸುವ ಬಣ್ಣದ ಹೊರತಾಗಿ ಈ ಹಕ್ಕಿ ನೋಡಲು ಕಾಗೆಯನ್ನೇ ಹೋಲುತ್ತದೆ. ಆದ್ದರಿಂದ ಇದಕ್ಕೆ ಈ ಹೆಸರು ಬಂದಿದೆ. ನಿಕರಕಾಗುವ, ಪನಾಮಾ ಮತ್ತು ಕೋಸ್ಟಾರಿಕಾ ದೇಶಗಳಲ್ಲಿ ಈ ಹಕ್ಕಿಗಳನ್ನು ಪ್ರಧಾನವಾಗಿ ಕಾಣಬಹುದು. ಜೊತೆಗೆ ಬೊಲಿವಿಯಾ, ಪೆರು, ಸುರಿನಾಮ್, ವೆನೆಜುವೆಲಾ, ಬ್ರೆಜಿಲ್, ಗಯಾನಾ, ಫ್ರೆಂಚ್ ಗಯಾನಾ ಮತ್ತು ಈಕ್ವೆಡಾರ್ ದೇಶಗಳಲ್ಲಿ ಸಹ ಕಾಣಸಿಗುತ್ತದೆ. ಹಣ್ಣುಗಳೇ ಈ ಹಕ್ಕಿಯ ಬಹುಮುಖ್ಯ ಆಹಾರ.
ಗಿನಿಯನ್ ಕಾಕ್ ಆಫ್ ದ ರಾಕ್ ಎಂಬ ಇನ್ನೊಂದು ಹಕ್ಕಿ ಕೂಡ ಅತ್ಯದ್ಭುತವಾದ ವರ್ಣರಂಜಿತ ಹಕ್ಕಿಗಳಲ್ಲೊಂದು. ಕಿತ್ತಲೆ ಬಣ್ಣದ ಈ ಹಕ್ಕಿಯ ಚೆಲುವನ್ನು ನೋಡಲು ಎರಡು ಕಣ್ಣುಗಳು ಸಾಲವು ಎಂದರೆ ಅದು ಅತಿಶಯೋಕ್ತಿಯಂತೂ ಖಂಡಿತ ಅಲ್ಲ ಎಂಬುದು ಎಂಥವರಿಗೂ ಅರ್ಥವಾಗುತ್ತದೆ. ಇದರ ತಲೆಯ ಮೇಲಿರುವ ಸುಂದರವಾದ ಕಿರೀಟ ಇವುಗಳ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಇವುಗಳ ಈ ಸೌಂದರ್ಯವೆಲ್ಲ ಗಂಡುಹಕ್ಕಿಗಳಿಗೇ ಮೀಸಲು. ಹೆಣ್ಣುಗಳು ಸಾದಾ ಕಂದುಬಣ್ಣದವು. ಗಂಡುಗಳು ಪ್ರಣಯಕಾಲದಲ್ಲಿ ಲೆಕ್ಕಿಂಗ್ ಎಂಬ ನಡವಳಿಕೆಯನ್ನು ತೋರುತ್ತವೆ. ಈ ಬಗೆಯ ನಡವಳಿಕೆ ಇವಕ್ಕೆ ಮಾತ್ರ ಸೀಮಿತವಾದುದಲ್ಲ. ಕೆಲವೊಂದು ಜಾತಿಯ ಗ್ರೌಸ್ ಎಂಬ ಹಕ್ಕಿಗಳೂ ಇದೇ ರೀತಿಯ ನಡವಳಿಕೆಯನ್ನು ತೋರುತ್ತವೆ. ಹಾಗಾದರೆ ಈ ಲೆಕ್ಕಿಂಗ್ ಎಂದರೇನು? ಇದು ಕನ್ನಡದ ಲೆಕ್ಕವನ್ನು ಆಂಗ್ಲೀಕರಣಗೊಳಿಸಿ ಲೆಕ್ಕ ಹಾಕುವುದು ಎಂದು ಅರ್ಥೈಸಿಕೊಳ್ಳಬೇಡಿ. ಲೆಕ್ಕಿಂಗ್ ಎಂದರೆ ಅನೇಕ ಗಂಡುಗಳು ಗುಂಪಾಗಿ ಪ್ರಣಯನೃತ್ಯದಲ್ಲಿ ತೊಡಗುವುದು. ಆಗ ಹೆಣ್ಣು ಆ ಗುಂಪಿನಲ್ಲಿ ತನಗೆ ಸೂಕ್ತವಾಗಿ ಕಂಡ ಗಂಡನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಒಂದು ರೀತಿಯಲ್ಲಿ ಇದನ್ನು ಜೀವಿಲೋಕದ ಸ್ವಯಂವರ ಎನ್ನಬಹುದು. ಇದನ್ನು ಹಕ್ಕಿಗಳಲ್ಲಿ ಮಾತ್ರವಲ್ಲ, ಸಸ್ತನಿಗಳಲ್ಲಿ ಹಾಗೂ ಕೀಟಗಳಲ್ಲಿ ಸಹ ಕಾಣಬಹುದು. ಇದು ಹೆಣ್ಣಿಗೆ ಅತ್ಯಂತ ಬಲಿಷ್ಠವಾದ ಗಂಡನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡುತ್ತದೆ. ಇದರಿಂದ ಮುಂದಿನ ಪೀಳಿಗೆ ಕೂಡ ಬಲಿಷ್ಠವಾಗಿ ಮುಂದುವರೆಯಲು ಅವಕಾಶ ಮಾಡಿಕೊಡುತ್ತದೆ. ಚಾರ್ಲ್ಸ್ ಡಾರ್ವಿನ್ ಪ್ರತಿಪಾದಿಸಿದ "ಪ್ರಬಲ ಜೀವಿಗಳ ಉಳಿವು" ಎಂಬ ತತ್ವವನ್ನು ಇಲ್ಲಿಯೂ ಕಾಣಬಹುದು.
ಗಂಡುಗಳಿಗೆ ಈ ಉಜ್ವಲ ವರ್ಣದಿಂದ ಪ್ರಯೋಜನಗಳಿರುವಂತೆಯೇ ತೊಂದರೆಗಳೂ ಇವೆ. ಮುಖ್ಯವಾಗಿ ಇಂಥ ಕಣ್ಣುಕುಕ್ಕುವ ವರ್ಣದ ಜೀವಿಗಳು ಬಹಳ ಸುಲಭವಾಗಿ ಶತ್ರುಗಳ ಕಣ್ಣಿಗೆ ಬೀಳುತ್ತವೆ. ಹಾಗಾಗಿ ಸದಾ ಅಪಾಯದ ಕತ್ತಿಯಲುಗಿನ ಮೇಲೆಯೇ ಇವು ಬದುಕುತ್ತಿರುತ್ತವೆ. ಹಾರ್ಪಿ ಈಗಲ್ ಮತ್ತು ಬ್ಲ್ಯಾಕ್ ಅಂಡ್ ವೈಟ್ ಹಾಕ್ ಈಗಲ್ ಎಂಬ ಹದ್ದುಗಳು ಇವುಗಳ ಬಹುಮುಖ್ಯ ಶತ್ರುಗಳು. ಇವುಗಳ ಜೊತೆಗೆ ಒಮ್ಮೊಮ್ಮೆ ಜಾಗ್ವಾರ್, ಪ್ಯೂಮಾ ಮತ್ತು ಒಸೆಲಾಟ್ ಮುಂತಾದ ಬೆಕ್ಕುಗಳೂ ಕೆಲವು ಜಾತಿಯ ಹಾವುಗಳೂ ಈ ಹಕ್ಕಿಗಳ ಮುಖ್ಯ ಶತ್ರುಗಳಾಗಿವೆ. ಆದರೂ ಅದೃಷ್ಟವಶಾತ್ ಮನುಷ್ಯರ ಹಾವಳಿ ಇವಕ್ಕೆ ಅಷ್ಟೊಂದು ಇಲ್ಲ. ಆದ್ದರಿಂದ ಸದ್ಯಕ್ಕೆ ಅಳಿದುಹೋಗುವ ಅಪಾಯವನ್ನಂತೂ ಅವು ಎದುರಿಸುತ್ತಿಲ್ಲ.
ಅರ್ಜೆಂಟೀನಾ, ಬ್ರೆಜಿಲ್ ಮತ್ತು ಪರಗ್ವೆಯ ಕಾಡುಗಳಲ್ಲಿ ಬೇರ್ ಥ್ರೋಟೆಡ್ ಬೆಲ್ ಬರ್ಡ್ ಎಂಬ ಹಕ್ಕಿಯೊಂದಿದೆ. ಈ ಹಕ್ಕಿ ಹೆಸರಾಗಿರುವುದು ತನ್ನ ಕಂಚಿನ ಕಂಠದಿಂದಲೇ. ಗಂಟೆ ಹೊಡೆದಂತೆ ಗಟ್ಟಿಯಾಗಿ ಕೂಗುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಇದರ ಕುತ್ತಿಗೆಯ ಕೆಳಗೆ ಗರಿಗಳಿಲ್ಲದ ಬೋಳು ಚರ್ಮ ಇರುವುದರಿಂದ ಇದಕ್ಕೆ ಬೇರ್ ಥ್ರೋಟೆಡ್ (ಬೋಳು ಕುತ್ತಿಗೆಯ) ಎಂಬ ವಿಶೇಷಣವೂ ಇದರ ಹೆಸರಿಗೆ ಸೇರಿಕೊಂಡಿದೆ. ಇದರ ಕೂಗನ್ನು ಬೇರೆಬೇರೆ ರೀತಿಗಳಲ್ಲಿ ವರ್ಣಿಸಿದ್ದಾರೆ. ಸುತ್ತಿಗೆಯಿಂದ ಬಡಿದಂತೆ, ಜೋರಾಗಿ ಗಂಟೆ ಬಾರಿಸಿದಂತೆ ಹೀಗೆಲ್ಲ ವರ್ಣಿಸಿದ್ದಾರೆ. ಇದರ ಕೂಗು ಎಷ್ಟೊಂದು ಗಟ್ಟಿಯಾಗಿದೆಯೆಂದರೆ ಹತ್ತಿರ ನಿಂತರೆ ಮನುಷ್ಯರ ಕಿವಿಗಳನ್ನು ಘಾಸಿಗೊಳಿಸುವಷ್ಟು ಜೋರಾಗಿದೆ.
ಈ ಹಕ್ಕಿ ಇಂದು ಅಪಾಯದಂಚಿನಲ್ಲಿರುವ ಹಕ್ಕಿಗಳ ಪಟ್ಟಿಗೆ ಸೇರಿದೆ. ಇದಕ್ಕೆ ಕಾರಣ ಮಿತಿಮೀರಿದ ಅರಣ್ಯನಾಶ ಮತ್ತು ಕಳ್ಳಬೇಟೆ. ಕತ್ತಿನ ಕೆಳಗಿನ ನೀಲಿಗಪ್ಪು ಚರ್ಮವನ್ನು ಹೊರತುಪಡಿಸಿದರೆ ಈ ಹಕ್ಕಿ ಶುಭ್ರಶ್ವೇತವರ್ಣದ ಹಕ್ಕಿ. ಇದೇ ಇದಕ್ಕೆ ಮುಳುವಾದದ್ದು. ಅಲಂಕಾರಿಕ ವನ್ಯಜೀವಿ ಟ್ರೋಫಿಗಳನ್ನು ಸಂಗ್ರಹಿಸುವವರಿಗೆ ಈ ಹಕ್ಕಿಗಳು ಅತ್ಯಂತ ಪ್ರಿಯವಾದವು. ಮಳೆಕಾಡುಗಳಲ್ಲೇ ಹೆಚ್ಚಾಗಿ ಕಾಣಸಿಗುವ ಇವು ಫಲಾಹಾರಿ ಹಕ್ಕಿಗಳು. ಆದ್ದರಿಂದ ಅರಣ್ಯನಾಶ ಇವುಗಳ ಮೇಲೆ ನೇರವಾದ ಪರಿಣಾಮ ಬೀರುತ್ತಿದೆ. ಆದ್ದರಿಂದ ಇವುಗಳ ರಕ್ಷಣೆಗೆ ಎಲ್ಲರೂ ಟೊಂಕ ಕಟ್ಟಬೇಕಾದ ಸಮಯ ಬಂದಿದೆ.
ಇನ್ನೊಂದು ಹಕ್ಕಿಯಿದೆ. ಅದರ ಕೂಗು ಸಹ ಕಿವಿಯನ್ನು ಕೊರೆಯುವಂತೆ ಇರುತ್ತದೆ. ಆದ್ದರಿಂದ ಅದಕ್ಕೆ ಸ್ಕ್ರೀಮಿಂಗ್ ಪಿಹಾ ಎಂದೇ ಹೆಸರಿದೆ. ಸ್ಕ್ರೀಮಿಂಗ್ ಎಂದರೆ ಕಿರುಚುವುದು ಎಂದರ್ಥ. ಇದರ ಕೂಗನ್ನು ಕೇಳಿದರೆ ಈ ಹೆಸರು ಅನ್ವರ್ಥನಾಮವೇ ಸರಿ ಎಂದು ಯಾರಿಗಾದರೂ ಅರ್ಥವಾಗುತ್ತದೆ. ಇದರ ಈ ಕೂಗಿನಿಂದಾಗಿಯೇ ಬೇರೆಬೇರೆ ದೇಶಗಳಲ್ಲಿ ಅನೇಕ ಬೇರೆಬೇರೆ ಹೆಸರುಗಳನ್ನು ಸಂಪಾದಿಸಿರುವ ಹಕ್ಕಿಯಿದು. ಇತ್ತೀಚೆಗೆ ಎಲ್ಲೆಡೆ ಪ್ರಸಿದ್ಧವಾಗಿರುವ "ಆ್ಯಂಗ್ರಿ ಬರ್ಡ್ಸ್" ಎಂಬ ಆಟದಲ್ಲಿ ಹಿಮ್ಮೇಳವಾಗಿ ಈ ಹಕ್ಕಿಯ ಕೂಗನ್ನು ಬಳಸಲಾಗಿದೆ. ಅನೇಕ ಚಲನಚಿತ್ರಗಳಲ್ಲೂ ಈ ಹಕ್ಕಿಯ ಕೂಗನ್ನು ಬಳಸಲಾಗಿದೆ. ಕೂಗು ಕೇಳಲು ಸ್ವಲ್ಪ ಗಟ್ಟಿಯಾಗಿದೆ ಎನ್ನಿಸಿದರೂ ಒಂದು ರೀತಿ ಸುಶ್ರಾವ್ಯವಾಗಿಯೇ ಇದೆ.
ಟರ್ಕ್ವಾಯ್ಸ್ ಕೋಟಿಂಗ ಎಂಬ ಇನ್ನೊಂದು ಹಕ್ಕಿ ಕಣ್ಣು ಕೋರೈಸುವಂಥ ಸುಂದರವಾದ ಪಕ್ಷಿ. ಇದರ ಮೈಯೆಲ್ಲ ಅಚ್ಚನೀಲಿ ವರ್ಣ. ಜೊತೆಗೆ ಕತ್ತಿನ ಮತ್ತು ರೆಕ್ಕೆಯ ತುದಿಗಳಲ್ಲಿ ಉಜ್ವಲವಾದ ನೇರಳೆ ಬಣ್ಣ. ಒಮ್ಮೆ ನೋಡಿದರೆ ಮತ್ತೆಮತ್ತೆ ನೋಡುತ್ತಲೇ ಇರಬೇಕೆನ್ನಿಸುವಷ್ಟು ಸುಂದರವಾದ ಹಕ್ಕಿಯಿದು. ಆದರೆ ಇದರ ವಾಸ ಮಾತ್ರ ಅಮೆಜೋನಿಯಾದ ದಟ್ಟಡವಿಗಳಿಗೇ ಸೀಮಿತ. ಆದ್ದರಿಂದ ಇವುಗಳ ಬಗೆಗೆ ನಮಗೆ ತಿಳಿದಿರುವುದು ಅತ್ಯಲ್ಪ. ಬೇರೆ ಕೋಟಿಂಗಗಳಂತೆಯೇ ಇವುಗಳ ಗರಿಗಳು ಸಹ ಬೆಳಕನ್ನು ಪ್ರತಿಫಲಿಸಿ ಕಣ್ಣು ಕುಕ್ಕುವಂತೆ ಹೊಳೆಯುತ್ತವೆ. ಆದರೆ ಬೇರೆ ಕೋಟಿಂಗಗಳಿಗೆ ಹೋಲಿಸಿದರೆ ಇವು ಬಹಳ ಮೌನಿಗಳೇ ಸರಿ. ಪಿಹಾ ಮತ್ತು ಬೆಲ್ ಬರ್ಡ್ ಗಳಿಗೆ ಹೋಲಿಸಿದರೆ ಇವು ಮೂಕ ಪಕ್ಷಿಗಳು ಎನ್ನಿಸಿದರೂ ಅಚ್ಚರಿಯೇನಿಲ್ಲ. ಗಂಡುಗಳು ರೆಕ್ಕೆ ಅಲುಗಿಸಿದಂಥ ಸದ್ದನ್ನು ಮಾಡುತ್ತವೆ ಮತ್ತು ಹೆಣ್ಣುಗಳು ಒಮ್ಮೊಮ್ಮೆ ಸ್ವಲ್ಪ ಕರ್ಕಶವಾದ ಧ್ವನಿಯನ್ನು ಹೊರಡಿಸುತ್ತವೆ. ಪನಾಮಾ ಮತ್ತು ಕೋಸ್ಟಾರಿಕಾ ದೇಶಗಳಲ್ಲಿ ಪ್ರಧಾನವಾಗಿ ಕಂಡುಬರುವ ಈ ಹಕ್ಕಿ ಕೂಡ ಅಪಾಯದಂಚಿನಲ್ಲಿರುವ ಹಕ್ಕಿಗಳ ಸಾಲಿಗೆ ಸೇರುತ್ತದೆ. ಕೃಷಿಗಾಗಿ ಅರಣ್ಯಗಳನ್ನು ನೆಲಸಮ ಮಾಡುತ್ತಿರುವುದು ಇವುಗಳ ಮೇಲೆ ಬಲವಾದ ಮರಿಣಾಮ ಬೀರಿದೆ. ಜೊತೆಗೆ ಉಜ್ವಲ ವರ್ಣದ ಹಕ್ಕಿಯಾದ್ದರಿಂದ ಮನುಷ್ಯರ ತೆವಲುಗಳಿಗೆ ಬಲಿಯಾಗುವ ಅಪಾಯವೂ ಇವಕ್ಕೆ ಹೆಚ್ಚು.
ಕೊಲಂಬಿಯಾ, ಈಕ್ವೆಡಾರ್ ಮತ್ತು ಪನಾಮಾದ ಕಾಡುಗಳಲ್ಲಿ ಬ್ಲ್ಯಾಕ್ ಟಿಪ್ಡ್ ಕೋಟಿಂಗ ಎಂಬ ಒಂದು ಜಾತಿಯ ಹಕ್ಕಿಯಿದೆ. ಇದು ಮೈಯೆಲ್ಲ ಅಚ್ಚಬಿಳಿಯ ಬಣ್ಣದ್ದು. ಇದರ ಕಣ್ಣು ಮತ್ತು ಕೊಕ್ಕು ಮಾತ್ರ ಕಪ್ಪು ಬಣ್ಣಕ್ಕಿದ್ದು, ಉಳಿದಂತೆ ಮೈಯೆಲ್ಲ ಬಿಳಿಯ ಬಣ್ಣ. ಅರಣ್ಯನಾಶದ ಪರಿಣಾಮ ಇವುಗಳ ಮೇಲೂ ಉಂಟಾಗುತ್ತಿದ್ದರೂ ಬೇರೆ ಪ್ರಭೇದದ ಕೋಟಿಂಗಗಳಿಗೆ ಹೋಲಿಸಿದರೆ ಇವು ಸ್ವಲ್ಪ ಉತ್ತಮ ಸ್ಥಿತಿಯಲ್ಲೇ ಇವೆ ಎನ್ನಬಹುದು. ಹಿಮದಷ್ಟು ಬೆಳ್ಳಗಿನ ಇನ್ನೊಂದು ಪ್ರಭೇದದ ಕೋಟಿಂಗಾವನ್ನು ಸ್ನೋಯಿ ಕೋಟಿಂಗಾ ಎಂದೇ ಕರೆಯುತ್ತಾರೆ. ಇದರ ಹೆಸರೇ ಹೇಳುವಂತೆ ಅಚ್ಚಬಿಳುಪಿನ ಮೈಬಣ್ಣದ ಹಕ್ಕಿಯಿದು. ಜೊತೆಗೆ ಯೆಲ್ಲೋ ಬಿಲ್ಡ್ ಕೋಟಿಂಗಾ ಎಂಬುದು ಇವುಗಳ ಹತ್ತಿರದ ಸಂಬಂಧಿ. ಹೀಗೆ ಈ ಮೂರೂ ಕೋಟಿಂಗಗಳು ಅತ್ಯಂತ ಸಮೀಪದ ಸಂಬಂಧಿಗಳಾಗಿದ್ದು, ತಮ್ಮ ಕೊಕ್ಕಿನ ಬಣ್ಣದಲ್ಲಿರುವ ವ್ಯತ್ಯಾಸದಿಂದಲೇ ಗುರುತಿಸಲ್ಪಡುತ್ತವೆ. ಅದರ ಹೊರತು ಇವೆಲ್ಲವೂ ನೋಡಲು ಅವಳಿ ಜವಳಿಗಳಂತೆಯೇ ಕಾಣುತ್ತವೆ.
ಪ್ಯಾಂಪಡೋರ್ ಕೋಟಿಂಗಾ ಎಂಬ ಇನ್ನೊಂದು ಜಾತಿಯ ಕೋಟಿಂಗಾ ನೋಡಲು ಗುಬ್ಬಚ್ಚಿಯಷ್ಟೇ ಚಿಕ್ಕಗಾತ್ರದ ಹಕ್ಕಿ. ಆದರೆ ಇದರ ಮೈಯೆಲ್ಲ ತುಂಬಾ ಸುಂದರವಾದ ಕಂದುಮಿಶ್ರಿತ ನೇರಳೆ ಬಣ್ಣ. ಕೋಟಿಂಗಾಗಳ ಪೈಕಿ ಇದು ಅತ್ಯಂತ ವಿಸ್ತಾರವಾದ ವಾಸಸ್ಥಾನವನ್ನು ಹೊಂದಿರುವ ಹಕ್ಕಿ. ಬ್ರೆಜಿಲ್, ಪೆರು, ಈಕ್ವೆಡಾರ್, ಫ್ರೆಂಚ್ ಗಯಾನಾ, ಬೊಲಿವಿಯಾ, ಕೊಲಂಬಿಯಾ, ಸುರಿನಾಮ್, ವೆನೆಜುವೆಲಾ ಮುಂತಾದ ದೇಶಗಳಲ್ಲಿ ಹರಡಿರುವ ಈ ಹಕ್ಕಿ ಸದ್ಯಕ್ಕೆ ಅಂಥ ದುಃಸ್ಥಿತಿಯಲ್ಲೇನೂ ಇಲ್ಲ. ಕೋಟಿಂಗಾಗಳ ಪೈಕಿ ಸುಸ್ಥಿತಿಯಲ್ಲಿರುವ ಕೆಲವೇ ಪ್ರಭೇದಗಳಲ್ಲಿ ಇದೂ ಒಂದು. ಈ ಹಕ್ಕಿಯ ತಲೆಯನ್ನು ನೋಡಿದರೆ ನೀಟಾಗಿ ಯಾರೋ ಬಾಚಣಿಗೆಯಿಂದ ಬಾಚಿಟ್ಟಂತೆ ತೋರುತ್ತದೆ.
ಈ ಕೋಟಿಂಗಾಗಳ ಹತ್ತಿರದ ಸಂಬಂಧಿಗಳಾದ ಇನ್ನೆರಡು ಪ್ರಭೇದದ ಕೋಟಿಂಗಗಳಿವೆ. ವೈಟ್ ವಿಂಗ್ಡ್ ಕೋಟಿಂಗಾ ಮತ್ತು ವೈಟ್ ಟೈಲ್ಡ್ ಕೋಟಿಂಗಾ. ಈ ಎರಡೂ ಪ್ರಭೇದಗಳು ಸಹ ನೋಡಲು ಬಹುತೇಕ ಒಂದೇ ರೀತಿಯಲ್ಲಿದ್ದು, ಅವುಗಳ ಹೆಸರೇ ಹೇಳುವಂತೆ ಒಂದರ ರೆಕ್ಕೆಗಳು ಬಿಳಿಯಾಗಿದ್ದರೆ ಇನ್ನೊಂದರ ಬಾಲ ಬಿಳಿಯಾಗಿರುತ್ತದೆ. ಉಳಿದಂತೆ ಗಾಢ ಕಪ್ಪು ಬಣ್ಣ. ಅದೇನೇ ಇದ್ದರೂ ಇವು ಬೇರೆ ಕೋಟಿಂಗಾಗಳಂತೆಯೇ ಅತ್ಯಂತ ಸುಂದರವಾದ ಹಕ್ಕಿಗಳು ಎಂಬುದರಲ್ಲಿ ಎರಡು ಮಾತೇ ಇಲ್ಲ.
ಗ್ವಾಟೆಮಾಲಾ, ಬೆಲೀಝ್, ಹೊಂಡುರಾಸ್ ಮತ್ತು ಮೆಕ್ಸಿಕೋ ದೇಶಗಳಲ್ಲಿ ಲವ್ಲಿ ಕೋಟಿಂಗಾ ಎಂಬ ಇನ್ನೊಂದು ಸುಂದರವಾದ ಹಕ್ಕಿಯಿದೆ. ಇದರ ಹೆಸರೇ ಇದೆಷ್ಟು ಸುಂದರ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇದನ್ನು ನೋಡಿದರೆ ಅನುಭವವಿಲ್ಲದವರು ಇದನ್ನು ಟರ್ಕ್ವಾಯ್ಸ್ ಕೋಟಿಂಗಾ ಎಂದೇ ತಪ್ಪು ತಿಳಿಯುವ ಸಾಧ್ಯತೆಯಿದೆ. ಏಕೆಂದರೆ ಇದರ ವರ್ಣಸಂಯೋಜನೆ ಹೆಚ್ಚುಕಡಿಮೆ ಅದರಂತೆಯೇ ಇದೆ. ಇದರ ಬೆಡಗು ಬಿನ್ನಾಣಗಳೆಲ್ಲ ಕೇವಲ ಗಂಡಿಗೇ ಮೀಸಲು. ಹೆಣ್ಣುಗಳು ಸಾದಾ ಬೂದುಬಣ್ಣ ಹೊಂದಿರುತ್ತವೆ. ಹಾಗಾಗಿ ದಟ್ಟಡವಿಗಳ ನಡುವೆ ಅವು ಎದ್ದುಕಾಣುವುದೂ ಇಲ್ಲ.
ತ್ರೀ ವ್ಯಾಟಲ್ಡ್ ಬೆಲ್ ಬರ್ಡ್ ಎಂಬ ಇನ್ನೊಂದು ಹಕ್ಕಿ ಕೂಡ ಗಂಟೆ ಬಾರಿಸಿದಂತೆ ಗಟ್ಟಿಯಾಗಿ ಕೂಗುವ ಹಕ್ಕಿ. ಆದರೆ ಈ ಹಕ್ಕಿ ಕೂಡ ದಟ್ಟಡವಿಗಳ ಮಧ್ಯೆಯೇ ವಾಸಿಸುವುದರಿಂದ ಇದರ ಬಗ್ಗೆ ತಿಳಿದಿರುವುದು ತುಂಬಾ ಕಡಿಮೆ. ಇದರ ಹೆಸರಿನಿಂದ ಇದಕ್ಕೆ ಚೀಲದಂಥ ಮೂರು ರಚನೆಗಳಿವೆ ಎಂಬುದು ತಿಳಿದುಬರುತ್ತದೆ. ಕೊಕ್ಕಿನಿಂದ ಕೆಳಗೆ ಜೋತುಬಿದ್ದಿರುವ ಈ ರಚನೆಗಳು ಇದನ್ನು ನೋಡಲು ವಿಚಿತ್ರವಾಗಿ ಕಾಣುವಂತೆ ಮಾಡುತ್ತದೆ. ಆದರೆ ಇದು ಗಂಡುಗಳಿಗೆ ಮಾತ್ರ ಇದ್ದು, ಹೆಣ್ಣನ್ನು ಆಕರ್ಷಿಸುವ ಸಾಧನಗಳು. ಇವುಗಳಲ್ಲಿ ಗಂಡು ಮತ್ತು ಹೆಣ್ಣಿನ ರೂಪಗಳು ಎಷ್ಟೊಂದು ವಿಭಿನ್ನವಾಗಿರುತ್ತವೆ ಎಂದರೆ ಅನುಭವಿಗಳಲ್ಲದವರು ನೋಡಿದರೆ ಎರಡೂ ಬೇರೆಯೇ ಜಾತಿಯ ಹಕ್ಕಿಗಳೆಂದು ಭಾವಿಸುವ ಸಾಧ್ಯತೆಯಿದೆ. ಗಂಡು ಬಿಳಿಯ ಕತ್ತನ್ನು ಹೊಂದಿದ್ದು, ದೇಹದ ಉಳಿದ ಭಾಗವೆಲ್ಲ ಚಾಕಲೇಟಿನಂಥ ಕಂದುಬಣ್ಣ ಹೊಂದಿರುತ್ತದೆ. ಈ ಹಕ್ಕಿಯ ಕೂಗು ನಮಗೆ ಇದುವರೆಗೆ ತಿಳಿದಿರುವಂತೆ ಪಕ್ಷಿಜಗತ್ತಿನಲ್ಲಿ ಅತ್ಯಂತ ಗಟ್ಟಿಯಾದ ಧ್ವನಿ. ಸುಮಾರು ಅರ್ಧ ಮೈಲು ದೂರದಿಂದಲೇ ಇದರ ಕೂಗನ್ನು ಕೇಳಬಹುದು. ಇದೂ ಸಹ ಹೆಣ್ಣನ್ನು ಆಕರ್ಷಿಸುವ ಒಂದು ಸಾಧನ.
ಕೋಟಿಂಗಾಗಳ ಕುಟುಂಬದಲ್ಲಿ ಬೆಲ್ ಬರ್ಡ್ ಗಳದ್ದೇ ಒಂದು ವಿಶಿಷ್ಟವಾದ ಗುಂಪು. ಈಗಾಗಲೇ ವಿವರಿಸಿರುವ ಬೋಳು ಕತ್ತಿನ ಬೆಲ್ ಬರ್ಡ್ (ಬೇರ್ ಥ್ರೋಟೆಡ್ ಬೆಲ್ ಬರ್ಡ್) ಮತ್ತು ತ್ರೀ ವ್ಯಾಟಲ್ಡ್ ಬೆಲ್ ಬರ್ಡ್ ಗಳ ಜೊತೆಗೆ ಬಿಯರ್ಡೆಡ್ ಬೆಲ್ ಬರ್ಡ್ ಎಂಬ ಇನ್ನೊಂದು ಪ್ರಭೇದವಿದೆ. ಈ ಹಕ್ಕಿಗೆ ಕುತ್ತಿಗೆಯ ಕೆಳಗೆ ಇರುವ ಗರಿಗಳಿಂದಾಗಿ ಇದು ನೋಡಲು ಗಡ್ಡದಂತೆ ಭಾಸವಾಗುವ ಕಾರಣ ಬಿಯರ್ಡೆಡ್ ಬೆಲ್ ಬರ್ಡ್ ಎಂಬ ಹೆಸರು ಇದಕ್ಕೆ ಬಂದಿತು. ಇದರ ಕೂಗು ಸಹ ಗಂಟೆ ಬಾರಿಸಿದಂತೆ ಗಟ್ಟಿಯಾದ ಕೂಗು.
ಒಟ್ಟಿನಲ್ಲಿ ಕೋಟಿಂಗಾಗಳು ಜನಸಾಮಾನ್ಯರಿಗೆ ಪರಿಚಿತವಲ್ಲದ ಹಕ್ಕಿಗಳಾಗಿದ್ದರೂ ಅತ್ಯಂತ ಸುಂದರವಾದ ಹಕ್ಕಿಗಳು ಎನ್ನುವುದರಲ್ಲಿ ಅನುಮಾನವೇ ಇಲ್ಲ. ವರ್ಣವೈವಿಧ್ಯದಲ್ಲಿ, ಸೌಂದರ್ಯದಲ್ಲಿ ಇವು ಭೂಮಿಯ ಮೇಲಿನ ಯಾವ ಹಕ್ಕಿಗಳಿಗೂ ಕಡಿಮೆಯಿಲ್ಲ. ಆದರೆ ಕಳ್ಳಬೇಟೆ, ಪರಿಸರನಾಶ ಇತ್ಯಾದಿ ಕಾರಣಗಳಿಂದಾಗಿ ಇವುಗಳ ಸಂತತಿ ಅಪಾಯದಲ್ಲಿದೆ. ಒಂದುವೇಳೆ ಕೋಟಿಂಗಾಗಳು ಧರೆಯ ಮೇಲಿನಿಂದ ಕಣ್ಮರೆಯಾದರೆ ಅದಕ್ಕೆ ಮನುಷ್ಯರಾದ ನಾವು ತೆರಬೇಕಾಗಿರುವ ಬೆಲೆ ಅಪಾರ. ನಮಗದು ಒಂದೇ ಬಾರಿಗೆ ಗೊತ್ತಾಗಲಿಕ್ಕಿಲ್ಲ. ಆದರೆ ಪರಿಸರ ವ್ಯವಸ್ಥೆಯಲ್ಲಿ ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ಮಹತ್ವದ ಪಾತ್ರ ವಹಿಸುವಂತೆ ಕೋಟಿಂಗಾಗಳು ಸಹ ತಮ್ಮದೇ ಆದ ಪಾತ್ರ ವಹಿಸುತ್ತವೆ. ಹೇರಳ ಸಸ್ಯಪ್ರಭೇದಗಳ ಬೀಜಪ್ರಸಾರದಲ್ಲಿ ಅವು ಪ್ರಮುಖ ಪಾತ್ರ ವಹಿಸುತ್ತವೆ. ಜೊತೆಗೆ ಅನೇಕ ಕೋಟಿಂಗಾಗಳ ಆಹಾರ ಕೀಟಗಳಾದ್ದರಿಂದ ಕೀಟಗಳ ನಿಯಂತ್ರಣದಲ್ಲೂ ಅವು ಪ್ರಮುಖ ಪಾತ್ರ ವಹಿಸುತ್ತವೆ. ಇದಿಷ್ಟು ನಮಗೆ ಗೊತ್ತಿರುವ ವಿಷಯಗಳು. ನಮಗೇ ಗೊತ್ತಿಲ್ಲದಂತೆ ಈ ಹಕ್ಕಿಗಳ ಪಾತ್ರ ಇನ್ನೆಷ್ಟಿದೆಯೋ ಎಂಬುದನ್ನು ಕಂಡುಹಿಡಿಯಬೇಕಿದೆ. ಡೋಡೋ ಹಕ್ಕಿಯನ್ನೇ ಅವಲಂಬಿಸಿದ್ದ ಕಾಲ್ವೇರಿಯಾ ಮೇಜರ್ ಎಂಬ ಗಿಡದಂತೆ ಈ ಹಕ್ಕಿಗಳನ್ನೇ ಅವಲಂಬಿಸಿದ ಎಷ್ಟೋ ಗಿಡಗಳಿರಬಹುದು. ನಮಗದರ ಬಗ್ಗೆ ಏನೇನೂ ಗೊತ್ತಿಲ್ಲ. ಹಾಗಾಗಿ ಇವುಗಳನ್ನು ನಾಶಮಾಡಿದರೆ ಪರೋಕ್ಷವಾಗಿ ಅಂಥ ಗಿಡಗಳನ್ನೂ ನಾಶಮಾಡಿದಂತಾಗುತ್ತದೆ.
ಇದೆಲ್ಲ ಸರಿ, ಆದರೆ ನಾವು ಈ ಹಕ್ಕಿಗಳನ್ನು ರಕ್ಷಿಸಲು ಇವಿಷ್ಟೇ ಕಾರಣಗಳೇ? ಇಷ್ಟೇ ಕಾರಣಗಳಿಗಾಗಿ ಇವುಗಳನ್ನು ರಕ್ಷಿಸಬೇಕು ಎನ್ನುವುದು ನಮ್ಮ ಸ್ವಾರ್ಥವೇ ಆಗುತ್ತದೆ. ಪ್ರಖ್ಯಾತ ವನ್ಯಜೀವಿ ತಜ್ಞ ಡೇವಿಡ್ ಅಟೆನ್ ಬರೋ ತಮ್ಮ ಒಂದು ಸಾಕ್ಷ್ಯಚಿತ್ರದಲ್ಲಿ ಹೇಳುತ್ತಾರೆ "ನಾವು ಬೇರೆ ಪ್ರಾಣಿಪಕ್ಷಿಗಳನ್ನು ರಕ್ಷಿಸಬೇಕಾದದ್ದು ಅವುಗಳಿಂದ ನಮಗೆ ಪ್ರಯೋಜನವಿದೆ ಎಂಬ ಒಂದೇ ಕಾರಣಕ್ಕಾಗಿ ಅಲ್ಲ. ನಾವು ಅರ್ಥೈಸಿಕೊಳ್ಳಬೇಕಾದ ಅಂಶವೆಂದರೆ ನಮ್ಮೊಂದಿಗೆ ಈ ಭೂಮಿಯನ್ನು ಹಂಚಿಕೊಂಡಿರುವ ಅವುಗಳನ್ನು ಕೊಲ್ಲಲು ನಮಗೆ ಯಾವ ನೈತಿಕ ಹಕ್ಕೂ ಇಲ್ಲವೆಂಬ ಸಂಗತಿ." ಇದನ್ನು ನಾವೆಲ್ಲರೂ ಕೇಳುತ್ತೇವೆ, ಕೇಳಿದ ತಕ್ಷಣ ಎಂಥ ಉದಾತ್ತ ಚಿಂತನೆ ಎಂದು ತಲೆದೂಗುತ್ತೇವೆ. ಆದರೆ ಅದನ್ನು ಅಲ್ಲಿಗೇ ಮರೆತುಬಿಡುತ್ತೇವೆ. ಪರಿಸರ ಸಂರಕ್ಷಣೆ ಎಂಬುದು ಯಾವುದೋ ಒಂದು ಇಲಾಖೆ ಮಾಡಬೇಕಾದ ಕೆಲಸವೇ ಹೊರತು ನಮಗೂ ಅದಕ್ಕೂ ಸಂಬಂಧವೇ ಇಲ್ಲವೆಂದು ಏಕಪಕ್ಷೀಯವಾಗಿ ತೀರ್ಮಾನಿಸಿಬಿಡುತ್ತೇವೆ. ಒಂದು ಪ್ರಾಣಿಯನ್ನು ಕೊಲ್ಲುವ ಮೊದಲು ಒಂದೇ ಒಂದು ಕ್ಷಣ ಅವುಗಳ ಜಾಗದಲ್ಲಿ ನಮ್ಮನ್ನು ಕಲ್ಪಿಸಿಕೊಂಡು ಯೋಚಿಸಿದರೆ ಸಾಕು, ಅವುಗಳ ಬವಣೆ ಏನೆಂದು ನಮಗೆ ಅರ್ಥವಾಗುತ್ತದೆ. ಆದರೆ ಅಷ್ಟು ಯೋಚಿಸುವ ವ್ಯವಧಾನ ನಮಗಿದೆಯೇ?