ಮರಳಿ ಬಾ ವಸಂತ

ಹೆಣ್ಣಿನ ಭಾವ

ProfileImg
18 Mar '24
7 min read


image

ಆಷಾಡ ಮಾಸ ಕಳೆದು ಶ್ರಾವಣ ಮಾಸದ ದಿನಗಳು ಸಮೀಪಿಸುತ್ತಿದ್ದವು.  ತಣ್ಣನೆಯ ಶೀತ ಗಾಳಿ ಮರಗಿಡಗಳನ್ನು ಸೋಕಿ ಹಾಗೇ ಮಾಯವಾಗುತ್ತಿದ್ದವು. ಜಿಮರು ಮಳೆಯ ಹನಿಗಳು ಮರದೆಲೆಗಳ ಮೇಲೆ ಬಿದ್ದು , ಜಾರುತ್ತಾ ತೊಟ್ಟಿಕ್ಕುತ್ತಿದ್ದವು‌. ಆಸಾರದಲಿ ಮಿಂದೆದ್ದ ರಂಗಿನ ಸುಮಗಳು ನೇಸರನ  ಆಲಿಂಗನವ ಬಯಸುತಲಿ ವಿರಾಗಿನಿಯರಾಗಿ ಮಂದ ಮಾರುತದ ಸ್ಪರ್ಶಕೆ ಓಲಾಡುತ ತಮ್ಮ ಕಂಬನಿಯನು ಯಾರಿಗೂ ಕಾಣದಂತೆ ಮರೆಮಾಚುತ್ತಿದ್ದವು.  ನಸುಕೋ, ಬೈಗೋ ಎಂಬುದನ್ನೇ ಊಹಿಸಲು ಅಸಾಧ್ಯವೆಂಬಂತೆ ಕಪ್ಪು ಕಾರ್ಮೋಡಗಳು ಆಗಸವನು ಆಕ್ರಮಿಸಿದ್ದವು. ಆ ಕರಿ ಕಾದಂಬಿನಿಯರ ಸಾಲು ಕರಗಿ ಸೋನೆ ಸುರಿದು ಭುವಿಯ ಒಡಲು ತಣಿಯಲಿ ಎಂದು ಜೀರುಂಡೆಗಳು ದೇವರ ಬಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದವು.

ಬೆಳ್ಳನೆಯ ಮೊಗ,  ನವಿಲಿನ ಕಣ್ಣುಗಳು, ಮೊಗಕ್ಕೊಪ್ಪುವ ನೇರ ನಾಸಿಕ, ಎಲೆ ಅಡಿಕೆ ಹಾಕಿ ಕೆಂಪಾದ ತುಟಿಗಳು, ತಲೆಯೊಳಗೆ  ಹೊಳೆಯುವ ಬಂಗಾರದ ಕೂದಲುಗಳು, ಚಿನ್ನ , ಬೆಳ್ಳಿ ಕಾಣದೆ ಬೋಳಾಗಿರುವ ಕತ್ತು, ಕಿವಿ, ಕೈಗಳು , ಮೈಗೆ ಒಪ್ಪಿದರು ಒಪ್ಪದೆ ಹೋದರು ಉಡುವುದು ಮಾತ್ರ ಅಗ್ಗದ ಸೀರೆಯನ್ನೇ.
ಕಣ್ಣೊಳಗೆ ನೂರು ಕಹಿ ನೋವುಗಳ ತುಂಬಿಕೊಂಡು,  ಹತ್ತಿಯ ಹಾಸಿಗೆ ಮೇಲೆ ಕುಳಿತು ತನ್ನ ಕೈಲಿರುವ ಭಾವಚಿತ್ರವನ್ನೇ ತದೇಕ ಚಿತ್ತವಾಗಿ ನೋಡುತ್ತಿದ್ದ ಗೀತಾಳಿಗೆ ತನ್ನ ಹಳೆಯ ದಿನಗಳು ನೆನಪಾದವು.ಹೊರಗೆ ಜೋರಾಗಿ ಮಳೆ ಸುರಿಯುತ್ತಿದ್ದರು , ಮನದೊಳಗೆ ಏಳುವ ಸಂಕಟದ  ಉರಿ ಅಲೆಗಳ ತಣ್ಣಗಾಗಿಸುವ ಮಾರ್ಗವ ಕಾಣದೆ ಮೌನಿಯಾಗಿದ್ದಳು.
ಸುಮಾರು  ಇಪ್ಪತ್ತೈದು ವರುಷಗಳ ಹಿಂದೆ ಗೀತಾಳ ಮದುವೆ ಆನಂದನೊಂದಿಗೆ ನಡೆದಿತ್ತು. ಇಬ್ಬರದ್ದು ಅನ್ಯೋನ್ಯವಾದ ದಾಂಪತ್ಯ ಜೀವನವಾಗಿತ್ತು.     ಮದುವೆಯಾಗಿ ಎರಡು ವರುಷಗಳಾದರು ಇಬ್ಬರಿಗೂ ಮಕ್ಕಳಾಗಿರಲಿಲ್ಲ. ಆದರೆ ಆನಂದ ಎಂದು ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ ಗೀತಾಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಅಕ್ಕಪಕ್ಕದ ಮನೆಹೆಂಗಸರು ಬಂಜೆ ಎಂದು ಹಂಗಿಸಿದರು ಆ ನೋವನೆಲ್ಲಾ ಆನಂದನ ಪ್ರೀತಿಯೇ ವಾಸಿ ಮಾಡುತಿತ್ತು. ಒಂದು ದಿನ ಹೊರಗೆ ಕೆಲಸದ ನಿಮಿತ್ತ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವನು, ರಾತ್ರಿ ಆದರೂ ಬಂದಿರಲಿಲ್ಲ. ಈಗ ಬರುತ್ತಾನೆ ಆಗ ಬರುತ್ತಾನೆಂದು ಕಾದವಳಿಗೆ ನಿರಾಸೆಯೇ ಆಗಿತ್ತು. ತನಗೆ ಗೊತ್ತಿದವರ ಬಳಿ , ಆನಂದನ ಸ್ನೇಹಿತರ ಬಳಿ ಎಲ್ಲಾ ಕಡೆಯೂ ಕೇಳಿ ಗೀತಾ ತನ್ನ ಶಕ್ತಿ ಮೀರಿ ಹುಡುಕಿದ್ದಳು. ಆನಂದನ ಮನೆಯವರು ಹಲವಾರು ಕಡೆ ಹುಡುಕಿಸಿದ್ದರು , ಪೋಲೀಸ್ ಕಂಪ್ಲೇಂಟನ್ನು ಕೊಟ್ಟಿದ್ದರು ಸಹ ಅವನ ಸುಳಿವೇ ಸಿಕ್ಕಿರಲಿಲ್ಲ. ಕಡೆಯದಾಗಿ ಒಂದು ಪ್ರಯತ್ನ ಎಂಬಂತೆ ಊರ ದೇವಿಯ ಗುಡಿಗೆ ಹೋಗಿ ಆನಂದ ಸಿಕ್ಕರೆ ಅನ್ನದಾನ ಮಾಡಿಸುವೆನೆಂದು ಹರಕೆ ಹೊತ್ತು ಬರಬೇಕಾದರೆ  ಪಕ್ಕದಲ್ಲೆಲ್ಲೋ ಸಣ್ಣ ಮಗು ಅಳುವ ಸದ್ದು ಕೇಳಿತು, ಅದೇ ಸದ್ದನ್ನು ಆಲಿಸುತ್ತಾ ಹುಡುಕಿಕೊಂಡು ಹೋದವಳಿಗೆ  ಗುಡಿಯ ಹಿಂಬಾಗದಲ್ಲಿ  ಹಸುಗೂಸೊಂದು ಅಳುತ್ತಾ ಮಲಗಿರುವುದು ಕಾಣಿಸಿತು. ಪುಟ್ಟ ಹೆಣ್ಣು ಮಗುವನ್ನು ಕಂಡ ಗೀತಾಳಿಗೆ ಆನಂದನೇ ಸಿಕ್ಕಷ್ಟು ಸಂತಸವಾಗಿತ್ತು. ಅಲ್ಲಿ  ಯಾರನ್ನು ಏನು  ಕೇಳದೆ ಮಗುವನ್ನು ಎತ್ತಿಕೊಂಡು ಸೀದಾ ಮನೆಗೆ ಬಂದಿದ್ದಳು. ಯಾರ ಕುಹಕದ ಮಾತುಗಳು ಅವಳ ಕಿವಿಗೆ ಬೀಳಲಿಲ್ಲ. ಆ ಮಗುವಲ್ಲೇ ಆನಂದನ ಪ್ರೀತಿಯನ್ನು ಕಾಣುತ್ತಾ ಹುಲಿಗೆ ಕೆಲಸ, ಸಿಕ್ಕಕಡೆ ಕೆಲಸ ಮಾಡಿ ಮಗುವನ್ನು ಓದಿಸಲು ಪಣತೊಟ್ಟಳು. ಮಗಳನ್ನು ಬೆಳೆಸುವ ಗಡಿಬಿಡಿಯಲ್ಲೂ ಆನಂದನ ನೆನಪು ಆಗಾಗ ಬಂದರೂ ಮಗಳೆದುರು ಏನನ್ನೂ ಹೇಳಿಕೊಳ್ಳದೇ ಸುಮ್ಮನಾಗಿ ಬಿಡುವಳು.
ಗೀತಾಳ  ತಲೆ ಕೂದಲು ಅಲ್ಲಲ್ಲಿ ಬಿಳಿಯಾಗಿ “ವಯಸ್ಸು ಓಡುವ ಕುದುರೆ ಏರಿ” ಓಡುತ್ತಿರುವಾಗ, ಮಗಳು ಪ್ರಣತಿ ಬಾಲ್ಯವ ದಾಟಿ ಯೌವನಕ್ಕೆ ಕಾಲಿಟ್ಟಳು.  ಬಿ.ಎ ಪದವಿಯನ್ನು ಓದುತ್ತಿದ್ದ ಪ್ರಣತಿ ಓದಲ್ಲೂ, ಆಟದಲ್ಲೂ ಚತುರೆಯಾಗಿದ್ದಳು.ವ್ಯಂಗ್ಯದ ಮಾತನಾಡಿ ನಕ್ಕಿದ್ದವರೇ ಗೀತನ ಮಗಳು ಎಷ್ಟು ಚೆನ್ನಾಗಿದ್ದಾಳೆ ಎಂದು ಹೊಗಳುವಂತಾಗಿತ್ತು.  ಮಗಳಿಗೆ ಯಾವಾಗ ಮದುವೆ ಮಾಡುತ್ತೀಯಾ , ಇಂಥ ಅಂದವಾಗಿರುವವಳನ್ನ ಮನೇಲಿ ಇಟ್ಟುಕೊಂಡರೆ “ಸೆರಗಲ್ಲಿ ಕೆಂಡ ಕಟ್ಟಿಕೊಂಡಂಗಲ್ವಾ..! “, ಪಾಪ ಒಂಟಿ ಹೆಂಗಸು , ಹೇಗೆ ಇರ್ತೀಯೋ ಏನೋ ಎಂಬ ಕುಹಕ ತುಂಬಿದ, ಅನುಕಂಪದ ಮಾತುಗಳನ್ನು ನಾಟಕೀಯವಾಗಿ ಆಡಲು ಬಂದವರೆದುರು, ಯಾವ ಮಾತನು ಎದುರಾಡದೆ, ಉತ್ತರವನ್ನು ಕೊಡಲು ಹೋಗದ ಗೀತಾ ತನ್ನ ಸಾಕು ಮಗಳ ಮೇಲೆ ಹೆಚ್ಚಾದ ನಂಬಿಕೆ ಇಟ್ಟಿದ್ದಳು.
ಪ್ರಣತಿಯ ಓದು ಮುಗಿದ ಬಳಿಕ ಕಾಯುವುದು ಬೇಡ , ಬೇಗ ಮದುವೆ ಮಾಡಿಬಿಡೋಣ‌ ಎಂದು ಆನಂದನ ಮನೆಯವರು ಹೇಳಿದ್ದು, ಗೀತಾಳಿಗೆ ಕೊಂಚ ಯೋಚಿಸುವಂತಾಗಿತ್ತು. ಕಾಲೇಜು ಮುಗಿಸಿ ಮನೆಗೆ ಬಂದ ಮಗಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಕೇಳಿದಳು, ಈ ಸೆಮಿಸ್ಟರ್ ಮುಗಿದರೆ ನಿನ್ನ ಓದು ಮುಗಿಯುತ್ತದೆ ಅಲ್ವಾ…! ಮುಂದಿನ ವರುಷದ ಹಾಗೇ ಮದುವೆ ಆಗಿಬಿಡು ಆಗಲ್ವಾ… ಎಂದು ಗೀತಾ ಪೀಟಿಕೆ ಹಾಕಿದಳು. ಅದಕ್ಕೆ  ಪ್ರಣತಿಯ ಬಳಿ ಸಿದ್ದ ಉತ್ತರವಿತ್ತು, ಇಲ್ಲಾಮ್ಮಾ ಇಷ್ಟು ಬೇಗ ನನಗೆ ಮದುವೆ ಇಷ್ಟ ಇಲ್ಲಾ ಒತ್ತಾಯ ಮಾಡ ಬೇಡ ಪ್ಲೀಸ್ ಎಂದು ಅಮ್ಮನ ಬಳಿ ಗೋಗರೆದಳು ಪ್ರಣತಿ. ಮಗಳಿಗೆ ಇಷ್ಟು ಬೇಗ ಮದುವೆ ಇಷ್ಟವಿಲ್ಲವೋ ಏನೋ , ಏಕೆ ಒತ್ತಾಯ ಮಾಡುವುದು , ಅವಳಿಗೆ ಇಷ್ಟ ಬಂದ ಕಾಲಕ್ಕೆ ಆಗಲಿ ಎಂದು ಗೀತ ಸುಮ್ಮನಾದಳು.

ಕಾಲೇಜಿಗೆ ಹೋದ ಪ್ರಣತಿ ಮದ್ಯಾಹ್ನದ ಸಮಯಕ್ಕೆ ಮನೆಗೆ ಬಂದವಳೇ ಅಮ್ಮಾ ನೋಡು ಯಾರ್ನೋ ಕರ್ಕಂಡು ಬಂದಿದೀನಿ ಬಾ ನೋಡು ಎಂದು ಗೀತಳಿಗೆ ಕೇಳುವಂತೆ ಕೂಗಿದಳು. ಅಡಿಗೆ ಮನೆಯ ಒಳಗೇನೋ ಕೆಲಸದಲ್ಲಿದ್ದ ಗೀತಾ ಮಗಳ ಕೂಗು ಕೇಳಿದ ತಕ್ಷಣವೇ ಹೊರ ಬಂದು ನೋಡಿದವಳಿಗೆ ಆಶ್ಚರ್ಯವಾಗಿತ್ತು. ಉದ್ದಕ್ಕೆ, ಸ್ವಲ್ಪ ಸಪೂರವೇನೋ ಎಂಬಂತಹ ಶರೀರ , ಸುಂದರ ವದನ , ಮೈಗೆ ಒಪ್ಪುವಂತಹ ದಿರಿಸು ಧರಿಸಿದ್ದ ಹುಡುಗ ನೋಡಲು ಸ್ಪುರದ್ರೂಪಿಯಾಗಿದ್ದ.  ಯಾರೇ ಇವರು ನಿನ್ನ ಸ್ನೇಹಿತಾನಾ ಎಂದು ಗೀತಾ ಅರ್ಧಕ್ಕೆ ತನ್ನ ಮಾತು ಮುಗಿಸುವ ಮುನ್ನವೇ ಇಲ್ಲಮ್ಮಾ…ಇವರು ನಂಗೆ ತುಂಬಾ ಇಷ್ಟ ಆಗಿದಾರೆ ಬರಿ ಫ್ರೆಂಡ್ ಅಲ್ಲಾ ಅಂದಳು ನಾಚುತ್ತಾ.      ಪ್ರಣತಿಯ ಮಾತು ಕೇಳಿ ಬೆರಗಾದವಳೆ, ಸೀದಾ ಅವಳನ್ನು ಒಳಗೆ ಕೈ ಹಿಡಿದು ಎಳೆದುಕೊಂಡು ಬಂದವಳೇ , ಯಾರೇ ಅವರು ಹೀಗೆ ದಾರೀಲಿ ಸಿಕ್ಕವರನೆಲ್ಲಾ ಇಷ್ಟಂತ ಕರ್ಕೊಂಡು ಬರ್ತಾರಾ ಸ್ವಲ್ಪಾನು ಗೊತ್ತಾಗಲ್ವಾ ಎಂದು ಮಗಳ ಮೇಲೆ ಸಿಡುಕಿದಳು.ಇಲ್ಲಾ ಅಮ್ಮಾ ಅವರು ಹೆಸರು ಜಯಂತ್ ಅಂತ. ಅವರದು ದೊಡ್ಡ ಕಂಪೆನಿ ಇದೆ, ಅದಕ್ಕೆ ಅವರೇ ಮಾಲೀಕರು, ಅವರೆ  ಮೊದಲು ಇಷ್ಟಾಂತ ಹೇಳಿದ್ದು ನನಗೆ, ಅವರು ಮಾಂಸ ಮಡ್ಡಿಯೆಲ್ಕಾ ತಿನ್ನಲ್ಲಮ್ಮಾ , ತುಂಬಾ ಒಳ್ಳೆಯವರು ಎಂದು ಪ್ರಣತಿ ಆ ಹುಡುಗನ ಗುಣಗಾನವನ್ನೇ ಮಾಡಿದಳು. ಏನು ಇಷ್ಟವೋ ಏನೋ ನಾನು ಅವರ ತಂದೆತಾಯಿ ನೋಡದೇ ಬರಿ ಇವನನ್ನು ನೋಡಿ ಏನನ್ನು ಹೇಳಕ್ಕೆ ಆಗಲ್ಲ ಕಣೆ, ಎಂದು ಮಗಳ ಜೊತೆ ಹೊರ ಬಂದ ಗೀತಾ ,ಆತನಿಗೆ ಕಾಫೀ ಕೊಟ್ಟು ಉಪಚರಿಸಿ , ಹುಡುಗನ ಬಗ್ಗೆ ವಿಚಾರಿಸಿ ನಾಳೆಯೇ ಆತನ ಮನೆಗೆ ಮಗಳೊಂದಿಗೆ ಬರುವುದಾಗಿ ತಿಳಿಸಿ ಅವನನ್ನು ಕಳುಹಿಸಿಕೊಟ್ಟಿದ್ದಳು. ತಾಯಿ, ತಾನು ಇಷ್ಟಪಟ್ಟ ಹುಡುಗನ‌ ಮನೆ ನೋಡಲು  ಒಪ್ಪಿದ್ದು ನೋಡಿ ಪ್ರಣತಿಗೆ ಸಂತಸವಾಗಿ ಅಮ್ಮನನ್ನು ಅಪ್ಪಿಕೊಂಡಳು. ಯಾವಾಗ ನಾಳೆಯಾಗುತ್ತದೆಯೋ ಎಂದು ಚಡಪಡಿಸಿ ಕಾದ ಪ್ರಣತಿ, ತಾಯಿಯನ್ನು ತನ್ನ ಹುಡುಗನ ಮನೆಗೆ ಹೊರಡುವಂತೆ ಇನ್ನಿಲ್ಲದಂತೆ ಕಾಡಿದ್ದಳು. ಇದ್ದಿದ್ದರಲ್ಲೇ ಒಳ್ಳೆಯ ಸೀರೆಯನ್ನು ನೋಡಿ ಉಟ್ಟಳು ಗೀತಾ , ಮಗಳ ಒತ್ತಾಯಕ್ಕೆ ಹೊರಟರು, ಮನದಲ್ಲಿ ಶ್ರೀಮಂತರು ಹೇಗೋ ಏನೋ ಎಂಬ ಅಳುಕು ಇದ್ದೇ ಇತ್ತು. ಗೀತಳಿಗಿಂತ ಮೊದಲೇ ತಯಾರಾದ ಪ್ರಣತಿ ತಿಳಿ‌ನೀಲಿ ಮತ್ತು ಹಳದಿ ಬಣ್ಣದ ಹೂಗಳಿರುವ ಚೂಡೀದಾರ್ ಧರಿಸಿ ತಲೆಗೆ ಕೆಂಪು ಗುಲಾಬಿ ಮುಡಿದಿದ್ದಳು. ದಾರಿಯಲ್ಲಿ ಸಿಕ್ಕ ಆಟೋ ಒಂದನ್ನು ಹಿಡಿದು ಸೀದಾ ಜಯಂತನ ಮನೆ ಮುಂದೆ ಇಳಿದರು. 
ಅವರ ಮನೆ ಅರಮನೆಯಂತೆ ಇತ್ತು. ಗೀತಾಳಂತು ಅಂತಹ ಮನೆಯನ್ನು ಮೊದಲ ಬಾರಿಗೆ ನೋಡುವಂತೆ ಕಣ್ಣು ಬಿಟ್ಟು ಅಚ್ಚರಿಯಿಂದ ನೋಡಿದಳು. ಮನೆ ಮುಂದೆ ಮೂರು ಐಷಾರಾಮಿ ಕಾರುಗಳು ನಿಂತಿದ್ದವು. ಹೊರಗೆ ವಿಶಾಲವಾದ ಗಾರ್ಡನ್ ಇತ್ತು. ಒಳಗೆ ಹೋಗಲು ಹಿಂಜರಿಕೆಯಾದ ಗೀತಳು  ಎಲ್ಲವನ್ನೂ ಪಿಳಿಪಿಳಿ ಕಣ್ಣು ಬಿಟ್ಟು ನೋಡಿದಳು. ತಾಯಿಯ ಮೊಗದಲ್ಲಿನ ದಿಗಿಲನ್ನು ಕಂಡ ಪ್ರಣತಿಯು, ಹೆದರಬೇಡಮ್ಮ ಬಾ ಎಂದು ಎಳೆದುಕೊಂಡೇ ಹೋದಳು. ಮನೆಗೆ ಬಂದ ಪ್ರಣತಿ ಗೀತಾರನ್ನು ಕಂಡ ಜಯಂತನಿಗೆ ಸಂತೋಷವಾಯಿತೆಂದು ಅವನ ಮೊಗವೇ ಹೇಳುತಿತ್ತು.  ಗೀತಾ ಎಂದೂ ಎಣಿಸಿರದ ಆದರದ ಸ್ವಾಗತ ಅವಳಿಗೆ ಸಿಕ್ಕಿತು. ಇವರನ್ನು ಕೂರಲು ಹೇಳಿ ತಂದೆ, ತಾಯಿಯನ್ನು ಕರೆಯಲು ಹೋದ ಜಯಂತ್. ದೊಡ್ಡ ಬಂಗಲೇ , ಮೇಲೆ ಹೊಳೆಯುವ ಶಾಂಡ್ಲಿಯಾರ್, ಬೆಲೆಬಾಳುವ ವಸ್ತುಗಳು ಎಲ್ಲವೂ ಅವರ ಸಿರಿವಂತಿಕೆಯ ಅಂತಸ್ತನ್ನು ತೋರಿಸುತ್ತಿದ್ದವು.                      ಮನೆಯನ್ನೇ ಅಚ್ಚರಿಯ ಭಾವದಿಂದ ನೋಡುತ್ತಾ ಕುಳಿತ ಗೀತಳಿಗೆ, ಬಾಲ್ಕನಿಯ ಕೆಳಗೆ ಇರುವ ಮೆಟ್ಟಿಲುಗಳಿಂದ ನಿದಾನವಾಗಿ ಇಳಿದು ಬರುತ್ತಿರುವ ವ್ಯಕ್ತಿಯನ್ನು ನೋಡಿ ಇವರನ್ನು ಎಲ್ಲೋ ನೋಡಿದ್ದೇನಲ್ಲ ಎಂಬ ಅನುಮಾನ ಮೂಡತೊಡಗಿತು. ಇವರು ನಮ್ಮ ತಂದೆ ರಮಾನಾಥ ಇವರು ನಮ್ಮ ತಾಯಿ ಪರಿಮಳಾ ದೇವಿ ಎಂದು ಜಯಂತ್ ಗೀತಳಿಗೆ ಅವರನ್ನು ಪರಿಚಯ ಮಾಡಿಕೊಟ್ಟ.  ಜಯಂತ್ ಹೇಳಿದ ಯಾವ ಮಾತುಗಳು ಗೀತಾಳ ಕಿವಿಗೆ ಬೀಳಲೇ ಇಲ್ಲ . ರಮಾನಾಥರನ್ನೇ ಎಲ್ಲವನ್ನು ಮರೆತು ದಂಗಾಗಿ ನೋಡುತ್ತಿದ್ದ ಗೀತಳು, ಅನುಮಾನವೇ ಇಲ್ಲಾ ಇವರು ಆನಂದೇ, ಅದೇ ಮುಖ, ಅದೇ ಕಣ್ಣು , ಅದೇ ಧ್ವನಿ , ನನ್ನ ಕಣ್ಣುಗಳು ನನಗೆ ಮೋಸ ಮಾಡುವುದೇ…? ಎಂದು ತನ್ನೊಳಗೆ ಕೇಳಿಕೊಂಡಳು. ಪ್ರಣತಿಯು ಏನಮ್ಮಾ ಯೋಚಿಸುತ್ತಿದ್ದೀಯಾ , ಏನಾದರು ಮಾತಾಡು ಎಂದಾಗಲೇ  ಗೀತಾಳಿಗೆ ಎಚ್ಚರವಾಗಿದ್ದು. ಏನು ಹೇಳಬೇಕೆಂದೇ ತೋಚದೇ, ಭ್ರಾಂತಿಗೆ ಒಳಗಾಗಿದ್ದಳು. ಹೇಗೋ  ತಡವರಿಸುತ್ತಾ , ನನಗೆ ಸ್ವಲ್ಪ ಆರಾಮವಿಲ್ಲ ಇನ್ನೊಮ್ಮೆ ಬರುತ್ತೇವೆ ಎಂದವಳೆ ಯಾರ ಮುಖವನ್ನು ನೋಡದೆ ಸೀದಾ ಅಲ್ಲಿಂದ ಹೊರಟೇ ಬಿಟ್ಟಳು.    ಪ್ರಣತಿಗೂ ತಾಯಿಯು ಹೋಗುತ್ತಿದ್ದುದ್ದನ್ನು ಕಂಡು ಏನು ಹೇಳಬೇಕೆಂದೇ ತಿಳಿಯದೆ, ಅವರಿಗೆ ಆರೋಗ್ಯ ಸರಿಯಿಲ್ಲ ಎಂದು ಜಯಂತನಿಗೆ ತಿಳಿಸಿ  ತಾಯಿಯ ಹಿಂದೆಯೇ ಹೊರಟಳು.
ಮನೆಗೆ ಬಂದ ಗೀತಾ, ಆ ಕ್ಷಣವೇ ಕಪಾಟಿನಲ್ಲಿಟ್ಟಿದ್ದ ಆನಂದನ ಭಾವಚಿತ್ರವನ್ನು ನೋಡುತ್ತಲೇ ಇದ್ದಳು. ಇದು ಅವರೇ, ನನ್ನನ್ನು ಅಷ್ಟು ಪ್ರೀತಿಸುತ್ತಾ ಇದ್ದವರು, ಯಾಕೆ ಇನ್ನೊಂದು ಮದುವೆ ಯಾಗಿದ್ದಾರೆ..!?, ಅದು ಅಷ್ಟು ದೊಡ್ಡ ಶ್ರೀಮಂತರು ಹೇಗಾದರು, ನನ್ನನ್ನು ನೋಡಿಯೂ ಅವರಿಗೆ ಗುರುತು ಸಿಗಲಿಲ್ಲವೇ..? , ಎಲ್ಲವೂ ಗೋಜಲಾಗಿದೆಯಲ್ಲಾ, ನನಗೆ ಮೋಸ ಮಾಡಿದರೇ , ಸಾಧ್ಯವೇ ಇಲ್ಲವಲ್ಲಾ,ಇದೆಲ್ಲಾ ಏನೆಂದು ಎಷ್ಟೇ ಯೋಚಿಸಿದರು ತಿಳಿಯದೆ ಕಂಗಾಲಾದಳು ಗೀತಾ. ಏನನು ಮಾತನಾಡದೆ ಇದ್ದಕ್ಕಿದ್ದ ಹಾಗೆ ಮನೆಗೆ ಓಡಿ ಬಂದ ತಾಯಿ, ಹೀಗೆ ಚಿಂತೆಯಲ್ಲಿ ಏಕೆ ಇದ್ದಾಳೆ,ಎಂಬುದನ್ನು ತಿಳಿಯದೆ ಪ್ರಣತಿ ತಾಯಿಯ ಮುಖವನ್ನೇ ನೋಡುತ್ತಾ ಕುಳಿತಳು.   ತಕ್ಷಣ ಏನೋ ಹೊಳೆದಂತೆ ಗೀತಾ , ಮಗಳೇ ಇವತ್ತು ಒಬ್ಬರನ್ನು ಜಯಂತ್ , ಅಪ್ಪಾ ಎಂದು ನಮಗೆ ಪರಿಚಯಿಸಿದರಲ್ಲಾ, ಅವರು ನಿಜವಾಗಿಯೂ ಅವನ ಅಪ್ಪನೇನಾ ಅಂತ ಅವನ ಹತ್ತಿರ ಕೇಳಿ ಹೇಳ್ತೀಯಾ ಎಂದಳು. ಅವಳ ಸ್ವರ ಆರ್ದ್ರವಾಗಿತ್ತು. ತಾಯಿಯ ಮಾತನ್ನು ಕೇಳಿ ಆಶ್ಚರ್ಯವಾದ ಪ್ರಣತಿಯು, ಅಮ್ಮಾ ಯಾಕೆ ಹಾಗೆ ಕೇಳ್ತಾ ಇದಿಯಾ…? ಯಾರನ್ನೋ ಅಪ್ಪಾಂತ ತೋರಿಸಕ್ಕೆ ಆಗುತ್ತಾ ..? ಎಂದಳು. ತನ್ನನ್ನೇ ಕಣ್ಣಲ್ಲಿ ನೀರು ತುಂಬಿಕೊಂಡು ಮಮತೆಯ ನೋಟದಲ್ಲಿ ನೋಡುತ್ತಿದ್ದ ತಾಯಿಯ ಕಂಡು ಬೇಸರಗೊಂಡ ಪ್ರಣತಿಯು, ನೀನು ಅಳಬೇಡಮ್ಮ ನಾನು ನಾಳೆ ಕೇಳಿ ಹೇಳ್ತೀನಿ  ಎಂದಳು. ತನ್ನ ತಾಯಿ ಯಾವುದೋ ನೋವನ್ನು ಮನಸ್ಸಲ್ಲೇ ಇಟ್ಟು ತನ್ನ ಬಳಿ ಹೇಳದೆ, ಕೊರಗುತ್ತಿದ್ದಾಳೆ ಎಂಬುದು ಪ್ರಣತಿಯ ಮನಸಿಗೂ ಅರಿವಾಯಿತು. 
ಮರುದಿನ ಜಯಂತ್ ನನ್ನು ಭೇಟಿ ಮಾಡಿ ಬಂದ ಪ್ರಣತಿ , ಏನನ್ನೋ ಯೋಚಿಸುತ್ತಾ , ಅನ್ಯಮನಸ್ಕಳಾಗಿ ಕುಳಿತ ತಾಯಿಯಯನ್ನು ಕಂಡು, ಅಮ್ಮಾ ನಿನ್ನ ಊಹೆ ಸರಿಯಾಗಿದೆ, ಅವರು ಜಯಂತನ  ಸ್ವಂತ  ಅಪ್ಪ ಅಲ್ಲವಂತೆ, ಸಾಕು ಅಪ್ಪನಂತೆ, ಮತ್ತೆ ಅವರು ಆ ಪರಿಮಳಾದೇವಿಯವರಿಗೆ ಯಾವುದೋ  ಅಪಘಾತದ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡ ಪರಿಸ್ಥಿತಿಯಲ್ಲಿ ಸಿಕ್ಕಿದ್ದಂತೆ,ಅವರಿಗೆ ಹಳೆಯ ನೆನಪುಗಳು ಯಾವುದೂ ಇಲ್ಲವಂತೆ, ಪರಿಮಳಾದೇವಿಯವರ ತಂದೆಯೇ ರಮಾನಾಥರನ್ನು ಅವರಿಗೆ ಕೊಟ್ಟು  ಸುಮಾರು ವರುಷಗಳ ಹಿಂದೆ ಮದುವೆ ಮಾಡಿಸಿದ್ದರಂತೆ, ಮತ್ತು ಜಯಂತ್ ಕೂಡ ಪರಿಮಳಾದೇವಿಯವರಿಗೆ ದತ್ತು ಪುತ್ರನಂತೆ, ಅನಾಥ ಆಶ್ರಮದಲ್ಲಿ ಬೆಳೆಯುತ್ತಿದ್ದ ಜಯಂತನನ್ನು ರಮಾನಾಥ್ ಮತ್ತು ಪರಿಮಳಾದೇವಿ ಇಬ್ಬರೂ ಸೇರಿ ದತ್ತು ತೆಗೆದುಕೊಂಡರಂತೆ, ಇದೆಲ್ಲಾ ನನಗೂ ಗೊತ್ತಿರಲಿಲ್ಲ, ಜಯಂತ್ ಹೇಳಿದಮೇಲೆಯೇ ಗೊತ್ತಾಗಿದ್ದು , ಗೊತ್ತಾ ಅಮ್ಮಾ … ಎಂದು ಜಯಂತ್ ತನಗೆ ಹೇಳಿದ್ದನ್ನೇ ಗಿಣಿಪಾಠ ಒಪ್ಪಿಸುವಂತೆ , ಒಂದೇ ಉಸಿರಿಗೆ ತಾಯಿಗೆ ಅರ್ಥವಾಗುವಂತೆ ಹೇಳಿದಳು. ಮಗಳ ಮಾತು ಕೇಳಿ ಗೀತಾಳಿಗೆ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಯ್ತು. “ಸತ್ತು ಮುರುಟಿ ಹೋದ ಅವಳ ಅನುರಾಗದ ಭಾವಗಳಿಗೆ ಮತ್ತೆ ಜೀವ ಬಂದಂತಾಯ್ತು”. ಮತ್ತೆ ಆನಂದನನ್ನು ನೋಡಲೇಬೇಕೆಂಬ “ಉತ್ಕಟವಾದ ಬಯಕೆಯ ಮೋಹ” ಗೀತಳನ್ನು ಆವರಿಸಿಕೊಂಡಿತು. ಹೆಸರು ಬದಲಾದರೇನು , ಜೀವ ಬದಲಾಗುವುದೇ , ಅವರು ಕೊಟ್ಟ ಪ್ರೀತಿ ಬದಲಾಗುವುದೇ , ಇಷ್ಟು ವರುಷವೂ ಆನಂದ ನನ್ನನ್ನು ಹುಡುಕಿ ಬಂದಿಲ್ಲವೆಂದರೆ  ಅಪಘಾತದ ಪರಿಣಾಮದಿಂದಾದ ಮರೆವೇ ಹೊರತು ನನ್ನ ಅಗಲಿ ಹೊರಡಬೇಕೆಂದೇನಲ್ಲ ಎಂಬ ಯೋಚನೆಗಳು ಅವಳಿಗೆ ಆನಂದನ ಮೇಲಿದ್ದ ಪ್ರೇಮ ಇನ್ನೂ ಬಲವಾಗುವಂತೆ ಪ್ರೇರೇಪಿಸುತ್ತಿದ್ದವು.
ಅವನು ಅವರಿಗೆ ಸಾಕು ಮಗ , ಇವಳು ನನಗೆ ಸಾಕು ಮಗಳು , ಹಾಗಿದ್ದಾಗ ಇಲ್ಲಿ ರಕ್ತ ಸಂಬಂಧಕ್ಕೆ ಮಗಳನ್ನು ಕೊಟ್ಟಂತೆ ಹೇಗು ಆಗುವುದಿಲ್ಲ, ಅದರಲ್ಲೂ “ಒಬ್ಬ ಮಾವ ಸೊಸೆಗೆ ತಂದೆಯೂ ಆಗಬಲ್ಲ,” ಹಾಗಿದ್ದಮೇಲೆ ತಾನೇಕೆ ಈ ನೆಪದಲ್ಲಾದರೂ ನನ್ನ ಆನಂದನಿಗೆ ನಾನು ಹತ್ತಿರವಾಗಬಾರದು…? ಎಂಬ ಯೋಚನೆಗಳು ಗೀತಳ ಮನದೊಳಗೆ ನುಸುಳಿದವು.  ಮುಂದೊಮ್ಮೆ ಅವರಿಗೆ  ಹಳೆಯ ನೆನಪು  ಬಂದು  ಮತ್ತೆ ತನ್ನ ಬಾಳಲ್ಲಿ ವಸಂತನ ಆಗಮನವಾಗಿ, ನವ ಭಾವಗಳು ಚಿಗುರೊಡೆದು , ಪ್ರೀತಿಯ ಹಾಡನು ಹೃದಯವೆಂಬ ಕೋಗಿಲೆ ಹಾಡಿ ಅವರಿಗೆ ತಲುಪಿಸದೇನು..? ಎಂದು ಗೀತಳು  ತನ್ನನ್ನೇ ತಾನೇ ಪ್ರಶ್ನಿಸಿಕೊಂಡಳು.                                                  “ಆ ಕೃಷ್ಣನಿಗಾಗಿ ರಾಧೆ ಕಾದಂತೆ” , ನಾನು ನನ್ನ ಪ್ರೀತಿಯ ಪತಿ ಆನಂದನಿಗೆ ಹಳೆಯ ನೆನಪು ಬರುವವರೆಗೂ ಕಾಯುತ್ತೇನೆ ಎಂದು ದೃಡ ನಿಶ್ಚಯ ಮಾಡಿದ ಗೀತಾ , ಆನಂದನ ಭಾವಚಿತ್ರವನೊಮ್ಮೆ ನೋಡಿ ನಾಚುತ್ತಾ ನಕ್ಕು, ಬರಡಾದ ಬಾಳಿಗೆ , ಹೊಸ ಹುರುಪು ತರುವ “ವಸಂತ” ಬಂದೇ ಬರುತ್ತಾನೆಂದು ಭರವಸೆಯ ಭಾವಗಳನ್ನು ಮನಕ್ಕೆ ತುಂಬಿ , ಮನಸಲ್ಲಿ ಕವಿದಿದ್ದ ಎಲ್ಲಾ ಕಾರ್ಮೋಡಗಳನ್ನು ಅಳಿಸಿ ಹಾಕಿ ,ಚೆನ್ನಾಗಿ  ತಯಾರಾದ ಗೀತಾ, ಮನದೊಳಗೆ ನೂರಾಸೆಯ ನವಿರಾದ ಭಾವಗಳನ್ನು ಬಚ್ಚಿಟ್ಟುಕೊಂಡು, ಮಗಳು ಪ್ರಣತಿಯ ಮದುವೆಯ ವಿಚಾರವನ್ನು ಮಾತಾಡುವ ಸಲುವಾಗಿ ಜಯಂತನ ಮನೆಗೆ ಆಟೋ ಹತ್ತಿ ಹೊರಟಳು.
 

Category:Parenting and Family



ProfileImg

Written by Ranjitha M Hebbar