“ಮಳೆಯ ಒಡಲನು ಧರಿಸಿ
ಹರಿಯುತಿದೆ ಹೊಳೆ
ಅಲೆದಲೆದಾಡಿ ಅಲೆಯಾಗುವ ಮೋಹದಿ
ನೆರಳಾಗುವ ಮರ ಮೀಯುತಿದೆ
ನಲಿದಾಡುತ ತನು ತೊಯ್ಯುತಿದೆ
ಸುರಿಯುತಲಿರಲಿ ಮಳೆ ಹೀಗೆ
ಕರಗೋಗಿ ಕರಗೋಗಿ ಕಡಲಾಗುವೆನು
ಹರಿಯುತಲಿರಲಿ ಮನ ಹೀಗೆ
ಹರಿವಲ್ಲಿ ಹರಿದ ಹಾಳೆಗಳ ದೋಣಿಹಾಡು”
ಹೊರಗೆ ಮಳೆ ಬರ್ತಾ ಇತ್ತು. ಮೊಳಕೆ ಬಂದ ಹೆಸರುಕಾಳಿನ ಪಲ್ಯ, ಕಣ್ಣ ಚಾ ಹೊಟ್ಟೆಯೊಳಗಿಳಿಯುತ್ತಿತ್ತು. ಬೆಕ್ಕಿನ ಮರಿ ತೊಡೆ ಹತ್ತಿ ಕೂತು, ಹಾಕಿದ್ದ ನೈಟ್ ಪ್ಯಾಂಟಿನ ನೂಲು ಕೀಳುತ್ತಾ ಆಟವಾಡುತ್ತಿತ್ತು. ಎರಡ್ಮೂರು ದಿನಗಳಿಂದ ಮಕ್ಕಳ ಜೊತೆಗೆ ಮಗುವಿನಂತ ಕ್ಷಣಗಳನ್ನು ಕಳೆದಿದ್ದೆ. ಆ ಕ್ಷಣಗಳು ಈ ಬೆಕ್ಕಿನ ಮರಿಯ ನಡವಳಿಕೆಯಲ್ಲಿ ಮರುಕಳಿಸುತ್ತಿತ್ತು. “ಮಕ್ಕಳು ಹುಟ್ಟುತ್ತಲೇ ಇವೆ. ಮಕ್ಕಳು, ಮರಿಗಳು ಕೊಡುವ ಖುಷಿಯನ್ನು ಅನುಭವಿಸುತ್ತಲೇ, ಲೋಕೆದೆಲ್ಲೆಡೆ ಅತಿಯಾಗಿರುವ ಮನುಷ್ಯರ ಸಂಖ್ಯೆಗೆ ನನ್ನಿಂದಾಗಿ ಇನ್ಯಾವ ಕೊಡುಗೆಯನ್ನು ನೀಡಲು ಇಷ್ಟವಿಲ್ಲ. ಪ್ರೀತಿ ಮತ್ತು ದುಃಖದ ನಡವೆ ಅರಳುವ, ನಲುಗುವ ಚಾಳಿಯಿರುವ ನನಗೆ ನೆನಪುಗಳೇ ಕನಸುಗಳು. ಆದರೂ, ಸೆಂಟಿಮೆಂಟ್’ಗಳನ್ನು ರೊಮ್ಯಂಟಿಸೈಸ್ ಮಾಡಿ ಸಂಕೋಲೆಗಳನ್ನು ಸವರುತ್ತಿರುವ ಜಗತ್ತಲ್ಲಿ ಕ್ಷಣಗಳ ಮೋಹಿತ ನಾನು”. ಹೀಗೆಂದು ಯೋಚಿಸುತ್ತಿರುವಾಗಲೇ ಮಳೆಯ ಸದ್ದು ನನ್ನನ್ನು ಮುದಗೊಳಿಸುತ್ತಿತ್ತು. ನಾನು ಬೆಕ್ಕಿಗೆ ಕಚಗುಳಿಯಿಡುತ್ತಿದ್ದೆ. ಅಷ್ಟೊತ್ತಿಗೆ ಗೆಳೆಯನೊಬ್ಬನ ಫೋನ್ ಬಂತು.
“ಹೇಗಿದೆ ಮಾರಾಯ ಮಳೆ” ಅಂತ ಕೇಳಿದ.
“ನೀರ್ ನೀರ್ ಮಳೆ ಮಾರ್ರೆ, ನೀರುದೋಸೆ ಮಾತ್ರ ಮಾಡ್ಲಿಕ್ಕೆ ಆಗುದಿಲ್ಲ ಇದ್ರಲ್ಲಿ” ಅಂತಂದೆ.
ಅವ ನಗ್ತಾ, “ಹೌದೌದು.. ಮಳೆ, ನೀರಿನ ಹಲವಾರು ರೂಪಗಳಲ್ಲಿ ಒಂದು” ಅಂತ ಫಿಲಸಾಫಿಕಲ್ ಆಗಿ ಮಾತಾಡಿದ.
ನಂಗೂ ಸ್ವಲ್ಪ ಫಿಲಾಸಫಿ ಬಂತು ನೋಡಿ :-
“ಮನೆಗಳು, ರಸ್ತೆಗಳು ಮತ್ತು ಮರಗಳ ನಡುವೆ ಬೀಳುವ ನಮ್ಮೂರಿನ ಮಳೆ ತುಂಬಾ ಚಂದ. ಮನೆಗಳು ಸ್ವಲ್ಪ ಕಡಿಮೆಯಿದ್ದು, ಮರಗಳು ಜಾಸ್ತಿ ಇರ್ತಿದ್ರೆ ಇನ್ನೂ ಚೆನ್ನಾಗಿರ್ತಿತ್ತು. ಮನೆಗಳೇ ಇಲ್ಲದಿರ್ತಿದ್ರೆ, ಮರಗಳು ಮತ್ತು ಮಳೆಯ ಜುಗಲ್ಬುಂದಿ ನೋಡಲು ಕಣ್ಣೆರಡು ಸಾಲ್ತಾ ಇರ್ಲಿಲ್ಲ. ಮನುಷ್ಯರೇ ಇಲ್ಲದಿರುತ್ತಿದ್ದರೆ, ಈ ನೋಟ, ಆಲೋಚನೆಗಳೆಲ್ಲಾ ಇಲ್ಲವಾಗಿ, ಸೌಂಧರ್ಯದ ಹೇರಿಕೆಯಿಲ್ಲದೆ, ಮಳೆ ಮತ್ತು ಮರಗಳು ಅವುಗಳ ಪಾಡಿಗೆ ಆರಾಮಾಗಿ ಇರ್ತಿದ್ವು” - ಹೀಗೆಲ್ಲಾ ಅನಿಸುತ್ತಿದೆಯೆಂದು ಗೆಳೆಯನಿಗೆ ಹೇಳಿದೆ.
ಅವ, “ಕೆಟ್ಟು ನಿಂತಿರುವ ವಾತಾವರಣದಲ್ಲಿ ಹೊತ್ತು ಗೊತ್ತಿಲ್ಲದೆ ಹೊಯ್ಯುವ ಮಳೆಯ ತರವೇ ನಿನ್ನ ಹುಚ್ಚು ಕೂಡಾ” ಅಂತಂದು, ಫೋನ್ ಇಟ್ಟ.
ಮಡಿಲಲ್ಲಿ ಕೂತಿದ್ದ ಬೆಕ್ಕು ಮಳೆ ಅಂದ್ರೇನು? ಅಂತ ಪ್ರಶ್ನಿಸಿತು. ನಾನು ಗೂಗಲ್‌ನ ಮೊರೆಹೋದೆ.
“ವಾತಾವರಣದ ನೀರಿನ ಆವಿಯಿಂದ ಘನೀಕರಿಸಿದ ನಂತರ ಗುರುತ್ವಾಕರ್ಷಣೆಯ ಅಡಿಯಲ್ಲಿ ಬೀಳುವ ನೀರಿನ ಹನಿಯೇ ಮಳೆ. ತಾಪಮಾನದ ಮೂರು ಆಯಾಮದ ವಲಯಗಳಲ್ಲಿ ತೇವಾಂಶ ಚಲಿಸುವುದು ಮತ್ತು ತೇವಾಂಶದ ವ್ಯತಿರಿಕ್ತತೆ ಮಳೆಯ ಉತ್ಪಾದನೆಗೆ ಪ್ರಮುಖ ಕಾರಣ ಎನ್ನಲಾಗುತ್ತದೆ” ಗೂಗಲ್ ನನಗೆ ಮಳೆಯನ್ನು ವಿವರಿಸಿದ್ದು ಹೀಗೆ. ನೀರಿನ ಹಲವಾರು ಅವತಾರಗಳಲ್ಲಿ ಒಂದಾದ ಮಳೆಯ ಬಗೆಗಿನ ಗೂಗಲ್ ವಿವರಣೆ ತುಂಬಾ ನೀರಸ ಅನಿಸಿತು.
“ನಿನ್ನ ರೋಮಗಳ ಹಾಗಿರುವ ಮೋಡಗಳು ನೀರಿನ ಹನಿಗಳಿಂದ ತುಂಬಿದಾಗ ಮಳೆ ಇಳೆಗೆ ಇಳಿಯುತ್ತದೆ. ಕಾರ್ಮೋಡದಿಂದ ಉದುರುವ ಮಳೆ, ಆರೋಗ್ಯಕಾರಿ ದ್ರವ” ಅಂತಂದು ಬೆಕ್ಕಿನ ಮೈ ಸವರಿದೆ. ಮಡಿಲಿನಿಂದ ಎದ್ದ ಬೆಕ್ಕು, ನಿಂಗೇನೂ ಗೊತ್ತಿಲ್ಲ ಎಂಬಂತೆ ಕುಂಡೆ ತಿರುಗಿಸುತ್ತಾ ಅಡುಗೆ ಮನೆ ಕಡೆ ನಡೆಯಿತು. ನನ್ನ ಮನಸ್ಸು ಅದಾಗಲೇ ಮಳೆಯಲ್ಲಿ ನೆನೆಯುತ್ತಾ ಕಳೆದುಹೋಗಿತ್ತು.
ಹುಟ್ಟನ್ನು ಸಂಭ್ರಮಿಸುವ, ಸಾವಿನ ಬಗ್ಗೆ ಭಯ ಪಡುವ ಮನುಷ್ಯರು ತಮ್ಮ ಅನುಕೂಲಕ್ಕಾಗಿ ಪ್ರಕೃತಿಯನ್ನು ನಾಶಪಡಿಸುತ್ತಿರುವುದು ಮತ್ತು ಕೇವಲ ತಮ್ಮ ಅಸ್ತಿತ್ವಕ್ಕಾಗಿ ಪ್ರಕೃತಿ ನಾಶವನ್ನು ತಡೆಗಟ್ಟಲು ಕಿರುಚುತ್ತಿರುವುದು ಎರಡೂ ಗೊಂದಲಮಯ ನನಗೆ. ಏರುತ್ತಲೇ ಇರುವ ಎತ್ತರಕ್ಕೇರುವ ಅಮಲು, ಹಬ್ಬುತ್ತಲೇ ಇರುವ ಸಮೂಹ ಸನ್ನಿಗಳಲ್ಲಿ ಕಳೆದು ಹೋಗುವ ಖಾಯಿಲೆಗಳಿರುವ ಜನಗಳ ನಡುವೆ ನನಗೆ ನಾನೇ ಗೊತ್ತಿಲ್ಲದೆ ನಂಬಿಸಿಕೊಂಡಿರುವ ಸುಳ್ಳುಗಳ ಬಲೆಯೊಳಗಿಂದ ಹೊರಬರುವ ಚಡಪಡಿಕೆಯೂ ಖುಷಿ ನನಗೆ. ಅಂಬರದ ತಣ್ಣನೆ ಹನಿಗಳು ಸೋಕಿ ಅರಳುವ ಮಣ್ಣಿನ ಘಮದ ಮೋಹಿತ ನಾನು.
ವಿವಿಧ ಭಾವಗಳನ್ನುಕ್ಕಿಸೋ ಮಳೆ
“ಪಡಿಪಾಟಲುಗಳ ಬದುಕು ಮತ್ತು ವಿವಿಧ ಭಾವಗಳನುಕ್ಕಿಸೋ ಮಳೆ” ಎರಡೂ ಮನುಷ್ಯನ ಪ್ರೀತಿ ಮತ್ತು ಅಸಹಾಯಕತೆಯನ್ನು ಒರೆಗೆ ಹಚ್ಚೋವಂತವು. ಕಾಳು ನೆನೆಹಾಕಲು ನೀರಿಲ್ಲದ ಮನೆಗಳೂ, ಮಳೆಯಲ್ಲಿ ನೆನೆದು, ನೆನೆದ ಮಳೆಯನ್ನೇ ಒಳಗಿಳಿಸಿಕೊಂಡು ನರಳುವ ಮನಗಳು ಒಂದನ್ನೊಂದು ಸ್ಪರ್ಶಿಸುವಂತಾಗುವುದು ಯಾವಾಗಲೋ..? ಮನುಷ್ಯರು ಸೃಷ್ಟಿಸಿರುವ ಅಸಮಾನತೆಯ ಸಂದಿಗ್ಧತೆಗಳು ಒಬ್ಬರ ಬದುಕು, ಭಾವನೆಗಳನ್ನು ದಿನದ ಅನ್ನದಲ್ಲಿ ಹುಡುಕುವಂತೆ ಮಾಡಿದರೆ, ಸಂತೃಪ್ತಿಯಿಲ್ಲದ ಹುಡುಕಾಟದಲ್ಲಿ ನಿರತರಾಗಿರುವವರದು ಬೇರೆಯದೇ ಕಥೆ.
ಚಿಕ್ಕಂದಿನಲ್ಲಿ ಪ್ರೈಮರಿ ಶಾಲೆಯಲ್ಲಿದ್ದಾಗಿನ ಮಳೆಗಾಲ. ‘ಹವಾಯಿ’ ಸ್ಲಿಪ್ಪರ್ ಹಾಕಿಕೊಂಡು, ಸರಕಾರಿ ಶಾಲೆಯ ಸಮವಸ್ತ್ರದ ಭಾಗವಾಗಿದ್ದ ಬಿಳಿ ಅಂಗಿಯ ಬೆನ್ನತುಂಬಾ ರಂಗೋಲಿ ಥರ ಕೆಸರು ಎರಚಿಕೊಂಡು ನಡೆದಾಡುತ್ತಿದ್ದುದು ಮೋಜಾಗಿತ್ತು. ಅದೇ ಹೈಸ್ಕೂಲಿಗೆ ಬರುವ ಹೊತ್ತಿಗೆ ಆಸೆ ಹುಟ್ಟಿಸುತ್ತಿದ್ದ ಶ್ರೀಮಂತರ ಮಕ್ಕಳ ತರೇವಾರಿ ಚಪ್ಪಲಿಗಳ ನಡುವೆ ಕೆಸರು ಎರಚಿದ ಅದೇ ಅಂಗಿಯನ್ನು ಮತ್ತೆ ಮರುದಿನ ಹಾಕಲು ಮುಜುಗರವಾಗುತ್ತಿತ್ತು. ’ಸ್ವಿಚ್ಚು ಕೊಡೆ'ಗಳ ನಡುವೆ ‘ಒತ್ತಿ ಬಿಡಿಸುವ’ ನಮ್ಮ ಕೊಡೆಗಳು ತರಿಸುತ್ತಿದ್ದ ಬೇಸರ, ಕ್ರಿಕೆಟ್ ಆಟಕ್ಕೆ ಯಾವಾಗೆಂದರೆ ಆವಾಗ ಅಡ್ಡಿಪಡಿಸುತ್ತಾ, ಊಟಕ್ಕೂ ಆಟಕ್ಕೂ ಬಿಡುವ ಸಮಯಕ್ಕೆ ಸರಿಯಾಗಿ ಸುರಿಯುವ ಮಳೆಯ ಮೇಲೆ ಮುನಿಸಾಗಿದ್ದ ಕಾಲಘಟ್ಟ. ಬಾಯಿ ರುಚಿ ಮತ್ತು ಆಟದ ಮೈದಾನವೇ ಸ್ವರ್ಗವೆಂದೆಣಿಸುತ್ತಿದ್ದ ವಯಸ್ಸಿನ ಮೇಲೆರಗುವ ಮಳೆಯೊಂದಿಗೆ ಮುನಿಸಾದರೂ, ಸೊಗಸಾಗಿತ್ತು. ಮೈದಾನ, ಗದ್ದೆಗಳು, ರಸ್ತೆಗಳು, ಹಳ್ಳಗಳು, ಆಕಾಶ, ಕೆಸರು ಇವೆಲ್ಲವೂ ನಮ್ಮ ಸಂಗಾತಿಗಳಾಗಿದ್ದವು. ಅಂದು ತೋಡಿನಲ್ಲಿ ಸಾಗುತ್ತಿದ್ದ ಪೇಪರ್ ದೋಣಿಗಳು, ಇಂದು ಕಾಂಕ್ರೀಟ್ ಮೋರಿಯಲ್ಲಿ ಸಿಲುಕಿಕೊಂಡಿವೆ.
ಕಾಸರಗೋಡಿನ ಅಜ್ಜಿ ಮನೆಗೆ ಮಳೆಗಾಲದ ರಜೆಯಲ್ಲಿ ಹೋಗೋ ಸಮಯಕ್ಕೆ ಕೆಲವೊಮ್ಮೆ ದಾರಿ ಮಧ್ಯೆ ಇದ್ದ ಸಂಕ ಮಳೆಯನ್ನಪಿಕೊಂಡು ಮುಳುಗಿ ಹೋಗಿರುತ್ತಿತ್ತು. ಬಸ್ಸಿನ ಓಟ ಅಷ್ಟಕ್ಕೇ ಖತಮ್. ಮತ್ತೆ ಬಾಳೆ-ಅಡಿಕೆ ತೋಟ, ಗದ್ದೆ, ಒತ್ತಾಗಿದ್ದ ಮನೆಗಳನ್ನೆಲ್ಲಾ ಸುತ್ತಿ ಬಳಸಿ ತೋಡಿನ ಬದಿಯ ಹಾದಿ ಹಾಯ್ದು, ಮನೆ ಸೇರುವ ಹೊತ್ತಿಗೆ ಹಾಕಿದ್ದ ಹೊಸ ಡ್ರೆಸ್ಸು ಒಂದು ಲೆವಲಾಗಿರುತ್ತು. ಆದರೂ, ನಮ್ಮ ಊರಲ್ಲ್ಯಾವತ್ತೂ ಸಿಗದ ಈ ತರದ ಅನುಭವದ ಮಳೆ ಮನದ ಫ್ರಿಡ್ಜಲ್ಲಿ ಹೆಪ್ಪುಗಟ್ಟಿ ನಿಂತು ತಂಪನೀಯುವಂತಿತ್ತು. ಆವಾಗಲೆಲ್ಲ ಬಾರ ಕಿತ್ತು ಬಿದ್ದ ಚಪ್ಪಲಿ ಹಿಡಿಯಲು ತೋಡಿಗೆ ದುಮುಕಿದ ಹುಡುಗ, ಕೊಡೆ-ಚಪ್ಪಲಿ ಎರಡನ್ನೂ ಕೈಯಲ್ಲಿ ಹಿಡಿದು ನೆನೆಯುತ್ತಲೇ ಹೆಜ್ಜೆಹಾಕೋ ಮುದುಕ, ಕಳೆದುಕೊಂಡ ಬೆಳೆ, ತೊಳೆದೇ ಹೋದ ಗುಡಿಸಲುಗಳು ಇವ್ಯಾವುದರ ಭಯಗಳು ಅರ್ಥವಾಗುತ್ತಿರಲಿಲ್ಲ. ಕಷ್ಟವನ್ನೆಲ್ಲಾ ಎದೆಯಲ್ಲಿ ಹೊತ್ತುಕೊಂಡು ಸೋರೋ ಮನೆ, ಆರೋ ದೀಪಗಳೆಡೆಯಲ್ಲೇ ಪುಟ್ಟ ಪುಟ್ಟ ಖುಷಿಯುಣಿಸಿ ಬೆಳೆಸಿದ ಅಪ್ಪ ಈವಾಗಷ್ಟೆ ಅರ್ಥವಾಗುತ್ತಿದ್ದಾನೆ.
ಮಳೆಯ ಮೋಡಿಗೆ ಸಿಲುಕಿ
ಮಳೆ ಬರುವಾಗಲಷ್ಟೇ ನೆನಪಾಗುವ ಕೊಡೆಗಳಂತೆ, ಮಳೆಗಾಲದಲ್ಲಷ್ಟೇ ಬಿಡಿಸಿಕೊಳ್ಳುವ ನೆನಪುಗಳು ಹಲವು. ಮಳೆ ಹನಿಗಳಲ್ಲಿ ಮೂಡುವ ಅವೆಷ್ಟೋ ಪ್ರೇಮ ಕಥೆಗಳ ನೆನಪು ಮಳೆಗಾಲದಲ್ಲಿ ಮರುಕಳಿಸುತ್ತದೆ. “ಪ್ಯಾರ್ ಹುವಾ ಇಕ್ ರಾರ್ ಹುವಾ” ಎಂದು ರಾಜ್ ಕಪೂರ್ ಮತ್ತು ನರ್ಗೀಸ್ ಮಳೆಯಲ್ಲಿ ನೆನೆಯುತ್ತಾ ಹಾಡುತ್ತಿದ್ದರೇ, ಅವರ ಅನುರಾಗದ ಹನಿಗಳು ನಮ್ಮನ್ನೂ ನೆನೆಯಿಸುವುದಿಲ್ಲವೇ!. ಮಳೆಗಾಲ ಮನಸ್ಸಿಗೆ ಮೋಡ ಕವಿಸಿ ಕವನ ಬರೆಯಿಸುತ್ತದೆ. ಆದ್ದರಿಂದಲೇ ಅಲ್ಲವೇ, ‘ಅನಂತ ಮೂರ್ತಿಯವರು’ “ ಮತ್ತೆ ಮಳೆ ಹೊಯ್ಯುತಿದೆ, ಎಲ್ಲ ನೆನಪಾಗುತಿದೆ” ಕವನ ಬರೆದದ್ದು.
ಇಂತಹ ಮಳೆ ಬೆಳೆದಂತೆಲ್ಲಾ ಹೊಳೆಯೇ ಆಗಿ ನನ್ನೊಳಗೆ ಹರಿಯುತ್ತಿತ್ತು. ಬೆಂಗಳೂರಿಗೆ ಬಂದ ಹೊಸತರಲ್ಲಿ ಆದ ಅನುಭವಗಳು ನಗರದ ಒಳ ಹರಿವುಗಳನ್ನು ತೋರಿಸಿಕೊಟ್ಟಿತ್ತು. ಕಲಾಸಿಪಾಳ್ಯದ ಗಲ್ಲಿಗಳಲ್ಲಿನ ಕೊಚ್ಚೆ, ಮಳೆ ಬಂದರೆ ಅಸ್ತವ್ಯಸ್ತವಾಗುವ ರಸ್ತೆ, ಹೊಟ್ಟೆ, ಪಾದಗಳು ಚಲಿಸುತ್ತಿದ್ದವು. ಬದುಕನ್ನು ಬಿಕರಿಗಿಟ್ಟು, ಬದುಕನ್ನು ಕಟ್ಟಿ ಜೀವಿಸುವ ಸಾಮಾನ್ಯ ಮನುಷ್ಯರನ್ನು, ನಿತ್ಯದ ಕೆಲಸವೆಂಬಂತೆ ಕಣ್ಣೆವೆಯಿಕ್ಕದೆ ನೋಡುತ್ತಿದ್ದೆ. ಅಂತವೇ ಗಲ್ಲಿಗಳಲ್ಲಿ ಸರ್ವಶ್ರೇಷ್ಠ ಸಿನಿಮಾವೇನೋ ಅನ್ನೋ ಥರ “ಮುಂಗಾರು ಮಳೆ” ಯನ್ನು ಗುನುಗುತ್ತಾ ನಡೆಯುತ್ತಿದ್ದಾಗ, ಬೆಂಗಳೂರು ಮಳೆಯ ಇನ್ನೊಂದು ಮಗ್ಗಲನ್ನು ತೋರಿಸಿಕೊಡುತ್ತಿತ್ತು. ಮತ್ತೊಂದು ದಿಕ್ಕಿನಲ್ಲಿ ಮತ್ತೊಂದು ಕಾಲದಲ್ಲಿ ಅವಳ ಜೊತೆ ನೆನೆಯಲಾಗದ ಕನಸುಗಳನ್ನು ಬದುಕುತ್ತಿರುವಾಗ ನಿನ್ನೆ, ಇಂದು, ನೆನಪು, ಕನಸುಗಳು ಕಲಸುಮೇಲೋಗರವಾಗಿವೆ.
ಮೋಡ ಬಿತ್ತನೆ
ಜನರ ಬವಣೆಗಳು ಕಿವಿಗೆ ಬಿದ್ದಿದೆ ಎಂಬಂತೆ ನಾಟಕವಾಡುತ್ತವೆ ಸರಕಾರಗಳು. ಮೋಡ ಬಿತ್ತನೆ ಮಾಡಿ, ಮಳೆ ಕೊಯ್ಲು ಮಾಡಲು ಶ್ರಮಿಸುತ್ತಾರೆ ರಾಜಕಾರಣಿಗಳು. ಮನುಷ್ಯರ ಹುಚ್ಚಾಟಗಳಿಗೆ ಶಿಕ್ಷೆಯೆಂಬಂತೆ, ಅನವರತ ಬದಲಾಗುವ ವಾತಾವರಣ ತಂತ್ರಜ್ಞಾನದ ಮಾತು ಕೇಳುವುದಿಲ್ಲ. ಉಳಿದ ಎಲ್ಲವನ್ನೂ ಕಡೆಗಣಿಸಿ, ಮನುಷ್ಯರ ಬಾಳ್ವೆಗೆ ತಕ್ಕಂತೆ ಮಾತ್ರ ಹಾಕುವ ಯೋಜನೆಗಳನ್ನು ಪ್ರಕೃತಿಯಾದರೂ ಯಾಕೆ ಬೆಂಬಲಿಸಬೇಕು? ಹಾಗಂತಲೇ, ಎಲ್ಲಿನದೋ ಮೋಡ, ಇನ್ನೆಲ್ಲಿಯೋ ಮಳೆಯಾಗಿ ಸುರಿದು, ಹೊಳೆಯುಕ್ಕಿ ಮನೆ ಮುಳುಗುತ್ತದೆ. ಮನೆಗಳು ಮುಳುಗದೆ ಹಾಯಾಗಿರುವ ನಾವು 'ಎಲ್ಲೋ ಮಳೆಯಾಗಿದೆಯೆಂದು, ತಂಗಾಳಿಯು ಹೇಳುತಿದೆ' ಪ್ರೇಮಗೀತೆ ಹಾಡಿ ಸಮಾಧಾನ ಪಟ್ಟುಕೊಳ್ಳುತ್ತೇವೆ.
ಅಲ್ಲೆಲ್ಲೋ ನೆರೆ ಬಂದು ಊರಿಗೂರೇ ಸಮಾಧಿಯಾದರೂ, ಹತ್ತಿರದಲ್ಲೇ ಅಂಗಡಿ ಮುಂಗಟ್ಟುಗಳು ಮುಳುಗಡೆಯಾದರೂ, ನಮ್ಮ ಮನೆಯ ಸೋರುವ ಹೆಂಚಿನ ಮುತ್ತ ಹನಿಗೆ ಪಾತ್ರೆಗಳು ಹೊಳೆಯುತ್ತಿದ್ದರೂ, ಮಳೆಯ ಮೇಲಿನ ‘ಮೋಹ’ ಮಾಯಲೇ ಇಲ್ಲ. ಕಣ್ಣ ಹನಿ ಹಿಂಗಿ ಬೆವರಾಗುತ್ತಿದ್ದ ಅಪ್ಪ ಕೂಡ ಈಗೀಗ ಮಳೆಯಂತೆಯೇ ಅನಿಸುತ್ತಾನೆ. ಮಳೆಯಲ್ಲಿ ನೆನೆದವರಿಗೆ ಜ್ವರ ಬರಲೇ ಬೇಕೆಂದೇನಿಲ್ಲವಾದರೂ, ಚಳಿ ಹಿಡಿಸುವ ಹುಚ್ಚು ಮಳೆಯು ಕಿಡಿಯೊಂದ ಹೆತ್ತು ಉರಿಯಗೊಡುವುದು. ಒಲವೋ..? ಹಸಿವೋ..? ನೆನೆದವರು ಹನಿಯಲೇ ಬೇಕು.. ಹನಿದದ್ದು ಹರಿಯಲೇ ಬೇಕು. ಹರಿದೆಡೆಯಲ್ಲೆಲ್ಲ ನಾಶವಾಗುತ್ತಲೇ ಚಿಗುರೊಡೆಯಬೇಕು.
ನೀರಾಗಲಾಗದೇ..
“It does not rain enough on rainy days”
ಸಿನಿಮಾವನ್ನು ಅದರ ಆಳಕ್ಕಿಳಿದು ಕಾವ್ಯವೊಂದರ ತಿರುಳಿನಂತೆ ಕಟ್ಟಿಕೊಡುವ ನಿರ್ದೇಶಕ ಇರಾನಿನ ‘ಅಬ್ಬಾಸ್ ಕಿಯರಸ್ತೋಮಿ’. ಮೇಲಿನ ಕವಿತೆಯ ಮೂರೇ ಸಾಲುಗಳಲ್ಲಿ ಆತ ಕಟ್ಟಿಕೊಟ್ಟ ಚಿತ್ರಣವನ್ನು ನೆನೆಯುತ್ತಾ, ಇಂಗದ ದಾಹದೊಂದಿಗೆ ಆಕಾಶ ನೋಡಿ ನಾಲಗೆ ಹೊರ ಚಾಚುತ್ತೇನೆ. ಮೈಮೇಲೆ ಬೀಳುವ ನೀರಿನೊಂದಿಗೆ ನಾನು ನೀರಾಗಲು ಪ್ರಯತ್ನಿಸಿ ಸೋಲುವಾಗ ಬುದ್ದನ ಕಥೆ ನೆನಪಾಗುತ್ತದೆ.
ತಂದೆಯ ಊರು ಮತ್ತು ತಾಯಿಯ ಊರಿನ ನಡುವೆ ನೀರಿಗಾಗಿ ಯುದ್ದ ನಡೆದಾಗ, ಆ ಯುದ್ಧದಲ್ಲಿ ಭಾಗವಹಿಸಲು ಸಿದ್ಧಾರ್ಥನಿಗೆ ಕರೆ ಬರುತ್ತದೆ. ಆದರೆ ಗೌತಮನಿಗೆ ರೋಹಿಣಿ ನದಿ ನೀರು ವಿವಾದ, ವಿವಾದವಾಗಿ ಕಾಣಿಸುವುದಿಲ್ಲ. ಆತ ನೀರಿನ ಪರವಾಗಿ ನಿಂತು ಬುದ್ಧನಾಗುವ ಪಯಣಕ್ಕೆ ಹೊರಡುತ್ತಾನೆ. ನೀರಾಗಲಾಗದ ನಾವಿನ್ನೂ ಯುದ್ಧಗಳಿಂದ ಹೊರಬಂದಿಲ್ಲ. ಶತಮಾನಗಳಿಂದ ಮಳೆಯಾಗುತ್ತಲೇ ಇದೆಯಾದರೂ ಇಳೆಯ ಮೇಲೆ, ಚೂರೇ ಚೂರು ಮಳೆಯಾಗಲಿ ಎಂದು ಕಾಯುವ ಚಡಪಡಿಕೆಯಿನ್ನೂ ನಿಂತಿಲ್ಲ. ಬರಗಾಲ , ಜಲಪ್ರಳಯಗಳಿಗೆ ಬಲು ದೊಡ್ಡ ಇತಿಹಾಸ ಮತ್ತು ಭವಿಷ್ಯಗಳಿದ್ದರೂ, ಸಣ್ಣ ಒರತೆಯಲ್ಲಿ ಮುಖ ಹುದುಗಿಸುವ ಹಂಬಲವಿನ್ನೂ ವರ್ತಮಾನವಾಗಿಲ್ಲ. ಕಾವೇರುವ ನದಿ ಚರ್ಚೆಗಳು ನನ್ನನ್ನು ವಿಮುಖನಾಗಿಸುತ್ತದೆ. ಹಾಗಾಗುವುದು ಹರಿಯಲಾಗದ ಕಾರಣಕ್ಕಲ್ಲ, ಅಣೆಕಟ್ಟುಗಳನ್ನು ಒಡೆಯಾಲಾಗದ್ದಕ್ಕೂ ಅಲ್ಲ. ಜನಗಳು ತುಂಬಿ ಹೊರ ಚೆಲ್ಲಿರುವ ನದಿ ನೀರಿನ ಅನಾಥ ಪ್ರಜ್ಞೆ ನನ್ನದು..
Writer, Poet & Automobile enthusiast
0 Followers
0 Following